Wednesday, September 23, 2009

"ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ..."


'ಪುಟಾಣಿ ಪಾರ್ಟಿ' ಚಿತ್ರದ ಶೂಟಿಂಗ್ ಗೆ ಅಂತ ಹೋದಾಗ ಅಲ್ಲಿಯ ಒಂದು ಘಟನೆ ನನ್ನಲ್ಲಿಯ ಒಬ್ಬ ಹೇಡಿಯನ್ನು, ನನ್ನ ನಿಸ್ಸಹಾಯಕತೆಯನ್ನು ನನಗೆ ಪರಿಚಯಿಸಿ ನನ್ನ ಬಗ್ಗೆ ನನಗೇ ಬೇಜಾರು ಮೂಡುವಂತೆ ಮಾಡಿತು. ಜೊತೆಗೆ ಏನಾದರು ಒಳ್ಳೆಯದನ್ನು ಮಾಡುವುದು ಕೂಡಾ ಅಂದುಕೊಂಡಷ್ಟು ಸುಲಭವಲ್ಲ ಅನ್ನುವದನ್ನು ಮನದಟ್ಟು ಮಾಡಿಕೊಟ್ಟ ಪ್ರಸಂಗ ಅದು...

ಅಂದು ದಿನಾಂಕ ೧೩-೧೨-೨೦೦೮, ಸುಮಾರು ಮದ್ಯಾಹ್ನದ ೧೨ ಗಂಟೆಯ ಹೊತ್ತು. ಕಲಕೇರಿ ಅನ್ನುವ ಪುಟ್ಟ ಗ್ರಾಮದಲ್ಲಿ ಅಂದಿನ ನಮ್ಮ ಶೂಟಿಂಗ್ ಇತ್ತು. ನನಗಿನ್ನೂ ಟೈಮ್ ಇತ್ತಾದ್ದರಿಂದ ಓದುವುದೂ ಬೇಜಾರಾಗಿ, ಕುಳಿತ ಕೋಣೆಯಿಂದ ಸುಮ್ಮನೆ ಹೊರಗೆ ದೃಷ್ಟಿ ಹಾಯಿಸಿದೆ. ಎದುರಿಗೆ ಊರ ಜನರಿಂದ ಬಸ್ ಸ್ಟ್ಯಾಂಡ್ ಎಂದು ಕರೆಸಿಕೊಳ್ಳುವ, ಒಂದು ದೊಡ್ಡ ಆಲದ ಮರ, ಪಂಚಾಯಿತಿ ಆಫೀಸ್ ಮತ್ತು ನಾಲ್ಕಾರು ಸಣ್ಣ ಸಣ್ಣ ಟೀ, ಬೀಡಾ ಅಂಗಡಿಗಳಿರುವ, ಒಂದು ಬಸ್ಸು ಬಂದರೆ ಇನ್ನೊಂದು ಬಸ್ಸು ಸ್ವಲ್ಪ ದೂರವೇ ನಿಂತು ಮೊದಲಿನ ಬಸ್ಸು ಹೋದ ನಂತರವೇ ಪ್ರದೇಶವನ್ನು ಪ್ರವೇಶಿಸಬಹುದಾದಂತಹ ಜಾಗ ಕಾಣಿಸುತ್ತಿತ್ತುಅಲ್ಲಿಯ ಒಂದು ಬೀಡಾದ ಖೊಕಾ ( ಕಟ್ಟಿಗೆಯ ಫಳಿಗಳಿಂದ ಮಾಡಿದ )ಅಂಗಡಿಯ ಪಕ್ಕ ಹೆಂಗಸೊಬ್ಬಳು ಮೈ ಮೇಲಿನ ಸೀರೆಯ ಸೆರಗನ್ನು ಕೈಯ್ಯಾರೆ ಬಿಸುಟು, ಕುಪ್ಪಸದ ಗಂಟನ್ನು ಬಿಚ್ಚಿ ಮತ್ತೆ ಹಾಕಿಕೊಳ್ಳುವುದು, ಕೂದಲು ಕೆದರಿ ತಲೆ ತೊಳೆದುಕೊಳ್ಳುವವಳಂತೆ ಕೂದಲನ್ನು ಮುಂದೆ ಹಾಕಿಕೊಂಡು ಮತ್ತೆ ಹಿಂದಕ್ಕೆಳೆದುಕೊಂಡು ಸೆರಗನ್ನು ಹೊದ್ದುಕೊಳ್ಳುವುದು ಕಾಣಿಸಿತು!ನನ್ನೊಳಗಿನ ಹೆಣ್ಣು ಕ್ಷಣಕ್ಕೆ ಅನುಭವಿಸಿದ ಲಜ್ಜೆ, ಅವಮಾನ ಮರು ಕ್ಷಣ ಮಾಯವಾಗಿ ವಾಸ್ತವವನ್ನು ನೆನಪಿಸಿ ಹೆಣ್ಣುಮಗಳೆಡೆಗೆ ಮರುಕವೊಂದು ಮೂಡಿತು. ಅಲ್ಲೇ ಆಟ ಆಡುತ್ತಿದ್ದ ಹುಡುಗನೊಬ್ಬನನ್ನು ಕರೆದು ಅವಳ ಬಗ್ಗೆ ವಿಚಾರಿಸಿದೆ.

" ಅಕೀರ್ಯಾ? ಅಕಿ ಹೆಸರು ಬಸವ್ವ ಅಂತರಿ, ಅಕಿಗೆ ಹುಚ್ಚ ಹಿಡದೈತ್ರಿ, ಅದಕ ಅವ್ರ ಮನ್ಯಾಗ ಅಕಿನ್ನ ಸೇರ್ಸೂದಿಲ್ರೀ. ಇಲ್ಲೇ ಬಸ್ ಸ್ಟ್ಯಾಂಡ್ ನ್ಯಾಗ ಇರ್ತಾಳ್ರೀ " ಅಂದ.

"ಅಕಿನ್ನ ಇಲ್ಲಿ ಕರ್ಕೊಂಡ್ ಬರ್ತೀ? " ಆಗೋಲ್ಲ ಅನ್ನುವ ಉತ್ತರವನ್ನು ನಿರೀಕ್ಷಿಸುತ್ತಲೇ ಕೇಳಿದೆ.

ಅದಕ್ಕೆ ವಿರುದ್ಧವಾಗಿ ಹುಡುಗ ಹೂಂ ಎಂದವನೇ "ಬುರ್ರ್ ಬುರ್ರ್ ಬುರ್ರ್" ಎಂದು ತನ್ನ ಕಲ್ಪನಾ ವಾಹನ ಸವಾರಿ ಮಾಡಿ ಅವಳನ್ನು ಕರೆ ತಂದ.

" ಯಾಕ? ಯಾರ ಕರೀತಾರ?" ಅನ್ನುತ್ತಲೇ ಬಂದ ಬಸವ್ವಳಿಗೆ ನನ್ನೆಡೆ " ಇವರು " ಎಂಬಂತೆ ಕೈ ಮಾಡಿ ಹೊರಟ ಹುಡುಗನನ್ನು ಕೇಳಿದೆ.

" ನಿನಗ ಹೆದ್ರಕಿ ಆಗ್ಲಿಲ್ಲ ಅಕಿನ್ನ ಕರ್ಕೊಂಡ್ ಬರಾಕ?"

" ಇಲ್ರೀ ಅಕಿ ಸಣ್ಣ ಹುಡುಗೂರ್ಗಿ ಏನೂ ಮಾಡಂಗಿಲ್ಲರೀ, ಉಲ್ಟಾ ಜೀವ ಮಾಡ್ತಾಳ್ರೀ , ಭಾಳ ಛೊಲೊ ಅದಾಳ್ರೀ " ಅಂದವನೇ ತನ್ನ ಕಲ್ಪನಾ ವಾಹನವನ್ನೇರಿ ಜಾಗ ಖಾಲಿ ಮಾಡಿದ.

ನಾನು ಬಸವ್ವಳೆಡೆಗೆ ತಿರುಗಿ ಕೇಳಿದೆ. "ಏನಾರ ತಿಂತೀ ಏನ್ ಬಸವ್ವ?" 

" ಏನಂದ್ರೀ?" ನಾನು ಅವಳೊಡನೆ ಮಸ್ತಿ ಮಾಡ್ತಿದೀನಿ ಅನಿಸಿರಬೇಕು ಅವಳಿಗೆ. ಆದ್ದರಿಂದ ಒಂದು ನಿರ್ಲಕ್ಷ್ಯದೊಂದಿಗೆನೆ ಕೇಳಿದವಳು ಪಟ್ಟನೆ ವಿಚಿತ್ರ ಉನ್ಮಾದದಿಂದ ಕಣ್ಣರಳಿಸಿ ನನ್ನನ್ನು ಹೆದರಿಸುವಂತೆ ನೋಡಿದಳು.

ನೋಟಕ್ಕೆ ಸಣ್ಣಗೆ ನನ್ನ ಹೃದಯ ನಡುಗಿದ್ದು ಸುಳ್ಳಲ್ಲ. ಆದರೂ ಅವಳು ಹೆದರಿಸಿದ್ದು ಗಮನಿಸಿಯೇ ಇಲ್ಲವೆಂಬಂತೆ ಆತ್ಮೀಯ ದನಿಯಲ್ಲಿ ಮತ್ತೆ ಕೇಳಿದೆ.

"ಏನಾರ ತಿನ್ನಾಕ ಕೊಡಸ್ಲಿ?'

"ನೀವು ನನಗ ತಿನ್ನಾಕ ಕೊಡಸ್ತೀರಿ? ಯಾಕ್ರೀ?"

ಅವಳ ಮಾತಿಗೆ ಏನು ಹೇಳಬೇಕೋ ತಿಳಿಯದೆ " ಅಲ್ಲ, ನಿನಗ ಹಶೀವ್ಯಾಗಿದ್ರ ಅಂತ ಕೇಳ್ದೆ.." ಅಂದೆ.
ನಾನು ಹೆದರದೆ,ಅವಳನ್ನು ಛೇಡಿಸದೆ, ಸರಳವಾಗಿ ಮಾತಾಡಿಸಿದ್ದು ಅವಳಿಗೆ ನನ್ನಲ್ಲಿ ಭರವಸೆ ಮೂಡುವಂತೆ ಮಾಡಿರಬೇಕು. ಮೃದು ದನಿಯಲ್ಲಿ ಕೇಳಿದಳು.

" ಏನ್ ಕೊಡಸ್ತೀರಿ? "

" ಏನ್ ಬೇಕು ನಿನಗ ? "

"ನನಗ ಮಂಡಕ್ಕಿ ಮತ್ತ ಚಾ ಬೇಕ್ರಿ. ಕೊಡಸ್ತೀರಿ? "

ನಾನು ತಕ್ಷಣ "ಹೂಂ" ಅಂದೆ. ಕಾರಣ ನಾ ಕುಳಿತ ಕೋಣೆಯ ಪಕ್ಕದಲ್ಲೇ ಟೀ, ಮಂಡಕ್ಕಿ, ಭಜಿ ಸಿಗುವಂಥ ಸಣ್ಣ ಅಂಗಡಿಯೊಂದಿತ್ತು. ಅವಳೇನಾದರೂ ಊಟ ಕೇಳಿದ್ದರೆ ಇತ್ತು ನನ್ನ ಫಜೀತಿ! ಸಧ್ಯ ಅವಳ ಕೋರಿಕೆ ನನ್ನ ನಿಲುಕಿಗಿತ್ತಾದ್ದರಿಂದ ಕುಳಿತಲ್ಲಿಂದಲೇ ಅಂಗಡಿಯವರಿಗೆ ಮಂಡಕ್ಕಿ, ಟೀ ತರಲು ಹೇಳಿದೆ.ಅಷ್ಟರಲ್ಲಿ ತನ್ನ ಶಾಟ್ ಮುಗಿಸಿ ಗೆಳತಿ ಭವಾನಿ ನಾವು ಕುಳಿತಲ್ಲಿಗೆ ಬಂದವಳು ಕಣ್ಣಲ್ಲೇ ಪ್ರಶ್ನಿಸಿದಳು " ಏನ್ ನಡೀತಿದೆ ಇಲ್ಲಿ? " ಎಂಬಂತೆ. ನಂತರ ಬಸವ್ವಳ ಬಗ್ಗೆ ಅವಳಿಗೂ ಕುತೂಹಲ ಉಂಟಾಗಿರಬೇಕು, ಕುಳಿತುಕೊಂಡಳು. ಟೀ ಅಂಗಡಿಯಿಂದ ಮಂಡಕ್ಕಿ ತಂದು ಕೊಟ್ಟರು, ಹಾಲಿಲ್ಲ ಆದ್ದರಿಂದ ಟೀ ಇಲ್ಲ ಎನ್ನುವ ಸಮಾಚಾರದೊಡನೆ. ನಾನು ಬಸವ್ವಳಿಗೆ ಮಂಡಕ್ಕಿ ತಿನ್ನಲು ಹೇಳಿದೆ. ಆಗ...

"ನೀವೂ ತೊಗೋರಿ" ಬಸವ್ವ ನಮ್ಮನ್ನು ಆಗ್ರಹಿಸಿದಳು!!

ಅಚ್ಚರಿಯೊಡನೆ ಅವಳ ಸೌಜನ್ಯ 'ಇವಳು ನಿಜಕ್ಕೂ ಹುಚ್ಚಿಯಾ!?' ಎಂದು ಯೋಚಿಸುವಂತೆ ಮಾಡಿತು ನನ್ನನ್ನ. ನಾನು ಅವಳ ಎದುರಿಗೆ ಪೇಪರ್ನಲ್ಲಿ ಹಾಕಿಟ್ಟ ಮಂಡಕ್ಕಿಯಲ್ಲಿ ಮುಷ್ಟಿಯಷ್ಟು ತೆಗೆದುಕೊಂಡೆ. ಭವಾನಿ ಸುಮ್ಮನೆ ಕುಳಿತಿದ್ದಳು. ಬಹುಶಃ ಭವಾನಿ ಸಂಕೋಚ ಪಡುತ್ತಿದ್ದಾಳೆ ಎನಿಸಿರಬೇಕು ಬಸವ್ವಗೆ

"ನೀವೂ ತಿನ್ರೆಲಾ, ತೊಗೋರಿ" ಎನ್ನುತ್ತಾ ಮುಟಗಿ( ಮುಷ್ಟಿ) ತುಂಬಿ ಭವಾನಿಗೆ ಕೊಡ ಹೋದಳು. ಭಾವಾನಿ ಹಿಂಜರಿಯುತ್ತಿದ್ದುದನ್ನು ಕಂಡು

" ಬಸವ್ವಾ, ನಾ ಕೊಡ್ತೆನಿ ಬಿಡು ಅವ್ರಿಗೆ. ನೀ ತಿನ್ನು" ಎಂದೆ.

"ಯಾಕ್ರೀ ನಂ ಕೈಯಾಗಿಂದ ಅವ್ರು ತಿನ್ನಲ್ಲೆನ್ರಿ? ನಾವು ಲಿಂಗಾಯತರ್ರಿ, ಸಣ್ಣ ಮಂದಿ ಅಲ್ಲ ತೊಗೋರಿ! " ಇವಳು ಹುಚ್ಚಿ ಅನ್ನೋದು ಮತ್ತೆ ಅನುಮಾನವಾಗತೊಡಗಿತು ನನಗೆ.

"ಇಲ್ಲ ಬಸವ್ವಾಅವ್ರು ಈಗರ ನಾಷ್ಟಾ ಮಾಡ್ಯಾರ, ಅದಕ ಒಲ್ಲ್ಯಾ ಅನ್ನಾಕತ್ಯಾರ ಅಷ್ಟ, ನೀ ತಿನ್ನು ". 

ನಂಬಿಕೆ ಬರದ ಮುಖಭಾವದೊಡನೆ ಬಸವ್ವ ಮಂಡಕ್ಕಿ ತಿನ್ನುತ್ತಲೇ ಮಾತನಾಡಲು ಶುರು ಮಾಡಿದಳು.

"ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ..."

ಮೈ ಮರೆತು ಕೂತವರ ಹಿಂದಿನಿಂದ ಬಂದು 'ಅವ್ಕ್!' ಅಂದವರ್ಯಾರು ಎಂದು ಬೆಚ್ಚಿ, ಬೆರಗಿನಿಂದ ನೋಡುವಂತೆ ಅವಳನ್ನು ನೋಡಿದೆ. ದೊಡ್ಡ ವಿದ್ವಾಂಸರು, ಸಾಹಿತಿಗಳು ಉಪಮೆಯವಾಗಿ ಇಂಥ ಪದಗಳನ್ನು ಬಳಸಿ ಮತ್ತು ಇಂಥ ಅದ್ಭುತ ಉಪಮೆಯ ಹೊಳೆದಿದ್ದಕ್ಕಾಗಿ ತಮ್ಮೆ ಬಗ್ಗೆ ತಾವೇ ಹೆಮ್ಮೆಪಡುವ ಸಂಗತಿ ನೆನಪಾಗಿ ಬಸವ್ವನೊಡನೆ ಹೋಲಿಸಿತು ಮನ. ಒಬ್ಬ 'ಹುಚ್ಚಿ' ಎನ್ನುವ ಬಿರುದು ಹೊತ್ತ (ಕೆಲವೊಮ್ಮೆ ಎಂಥಾ ಕ್ರೌರ್ಯ ತುಂಬಿದ ಪದವಲ್ಲವಾ ಇದು!! ಎನಿಸುತ್ತದೆ) ಹಳ್ಳಿಯ ಹೆಣ್ಣುಮಗಳೊಬ್ಬಳ ಬಾಯಲ್ಲಿ ಸರಳವಾಗಿ ಬಂದ ಮಾತು!!
"ಏನ್ ಹಂಗಂದ್ರ?" ಕೇಳಿದೆ ನಾನು.

"ಮತ್ತ ಅಕಿ ಅದಾಳಲ್ರೀ ಅಕಿ ಮನ್ಯಾಗ ಇರು ಅಂದಳ್ರೀ, ತಲಿ ಬಾಚೂದು.. ಜಳಕಕ್ಕ ಬಿಸ್ನೀರ್ ಕಾಯ್ಸಿ ಕೊಡ್ತಾಳ್ರೀ...ಅಡಿಗೀನೂ ಚೊಲೊನ ಮಾಡ್ತಾಳ ಬಿಡ್ರಿ..."

ಅವಳ ಮಾತಿನ ತಲೆ ಬುಡ ಏನೂ ತಿಳೀತಾ ಇಲ್ಲ ನನಗೆ. ಈಗ ಅವಳದು ಅಸ್ವಸ್ಥ ಮನಸು ಅನಿಸಿತು .
ಕೇಳಿದೆ," ಅಕಿ ಅಂದ್ರ ಯಾರು ? ಯಾರಿಗೆ ಬಿಸ್ನೀರ್ ಕಾಯ್ಸಿ ಕೊಡೂದು...? ನಿನಗ?"

ಹೂತು ಹೋದ ಧ್ವನಿಯಲ್ಲಿ ಹೇಳಿದಳು "ನನಗಲ್ರೀ, ನನ್ನ ಗಂಡಗ್ರಿ..."

ಅನುಮಾನಗೊಂಡು ಕೇಳಿದೆ ಮತ್ತೆ " ಯಾರ್ ಅಕಿ? "

"ಅಕೀರ್ಯಾ ಅಕಿನ್ ಹೆಸ್ರು ..... ಅಂತ್ರಿ "(ಕ್ಷಮಿಸಿ, ಬಸವ್ವ ಹೇಳಿದ ಹೆಣ್ಣಿನ ಹೆಸರನ್ನು ಮರೆತಿದ್ದೇನೆ.ಬೇರೆ ಹೆಸರು ಬಳಸಲು ಇಷ್ಟವಿಲ್ಲ)" ನಿನಗೆನಾಗ್ಬೇಕು? "

"ಅಕಿ ನನ್ನ 'ಸವತಿ'ರಿ..." ಮಾತು ಹೇಳುವಾಗ ಕ್ಷೀಣವಾದ ಬಸವ್ವನ ದನಿ ಇನ್ನೂ ಮಾರ್ದನಿಸುತ್ತಲೇ ಇದೆ. ಅವಳ ಕಣ್ಣಲ್ಲಿಯ ನೋವು...

ಅವಳ ಹುಚ್ಚಿಗೆ ಕಾರಣ ಇನ್ನೊಬ್ಬಾಕೆ! ಅವಳಿಂದಾಗಿ ಇವಳಿಗೆ ದುರ್ದೆಶೆ. ನಾನು ಕಂಡು ಕೇಳರಿಯದ ಹೆಣ್ಣಿನ ಬಗ್ಗೆ ಜಿಗುಪ್ಸೆ ಮೂಡಿತು.

"ಅಕಿ ಹೊರಗ ಹಾಕಿದ್ಲ ನಿನ್ನ? "

" ಅಲ್ರೀ ಅಕಿ ಅಲ್ರಿ, ನನ್ನ ಮಕ್ಕಳು ನನ್ನ ತಂದು ಇಲ್ಲಿ ನಿಂದರ್ಶ್ಯಾರಿ."

ಇನ್ನೂ ಇನ್ನೊಬ್ಬ ಹೆಣ್ಣಿನ ಬಗ್ಗೆ ಬೇಸರಗೊಂಡಿದ್ದ ನನ್ನ ಮನಸ್ಸು ಬಸವ್ವನ ಮಾತುಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಜೊತೆಗೆ ಹೆತ್ತ ಮಕ್ಕಳೇ ತಾಯಿಯನ್ನು...

ಬಸವ್ವ ಮತ್ತೆ ಉನ್ಮಾದಗೊಂಡಿದ್ದಳು. ಸೆರಗನ್ನು ಎದೆಯ ಮೇಲಿಂದ ಹಿರಿದೆಳೆದು ಕುಪ್ಪಸದ.. " ಬಸವ್ವಾ! ಏನ್ ಮಾಡಾಕತ್ತಿ? ಹಾಕ್ಕೋ ಸೆರಗ್ ಮೈಮ್ಯಾಲೆ " ಅನುನಯದದೊಂದಿಗೆ ಒಂದು ಸಣ್ಣ ಗದರಿಕೆಯೂ ಇತ್ತು ನನ್ನ ಧ್ವನಿಯಲ್ಲಿ. ನನ್ನ ಮುಖವನ್ನು ನಿಟ್ಟಿಸಿದ ಬಸವ್ವ,
"ಇಲ್ರಿ ನಾ ಎಲ್ಲೆ ಹಂಗ ಮಾಡೀನ್ರಿ..." ಎನ್ನುತ್ತಾ ಮತ್ತೆ ಸೆರಗನ್ನು ಹೊದ್ದುಕೊಂಡಳು. ಕದ್ದು ಮಣ್ಣು ತಿನ್ನುತಿದ್ದ ಮಗುವೊಂದು ಅಮ್ಮನ ಕೈಯಲ್ಲಿ ಸಿಕ್ಕಿಬಿದ್ದ ರೀತಿಯಲ್ಲಿ. ಅವಳು ನನ್ನ ಮಾತು ಕೇಳಿದ್ದು, ನನ್ನನ್ನು ಅವಳ ಮನಸು ಒಪ್ಪಿಕೊಂಡಿದೆ ಎಂಬ ಭಾವ, ನನ್ನಲ್ಲಿ ಧೈರ್ಯ ಮೂಡಿಸಿತು.

" ಹಂಗೆಲ್ಲ ನಡಬಾಜಾರನ್ಯಾಗ ಮಾಡಬಾರದು ಬಸವ್ವ,ಎಷ್ಟ ಮಂದಿ ಇರ್ತಾರ ಇಲ್ಲಿ, ಎಲ್ಲಾರೂ ನಿನ್ನ ನೋಡಿ ನಗಂಗಿಲ್ಲ? ಇನ್ ಮುಂದ ಹಂಗೆಲ್ಲ ಮಾಡಬ್ಯಾಡ ತಿಳೀತ? " ಮಾತಾಡಾಡುತ್ತಲೇ ನನ್ನ ಮಾತುಗಳು ನನಗೇ ಬಾಲಿಶ ಅನಿಸತೊಡಗಿದವು

"ಎಷ್ಟ್ ಮಕ್ಕಳು ನಿನಗ? "

" ನನಗ ಇಬ್ಬ್ರು ಗಂಡಮಕ್ಕಳದಾರ್ರಿ. " 

" ಏನ್ ಮಾಡ್ತಾರ? "

ಉತ್ತರವಿಲ್ಲ. ಬದಲಿಗೆ ಫಿರ್ಯಾದಿ ಹೇಳುವವಳಂತೆ ಅಳು ದನಿಯಲ್ಲಿ " ಅಂವಾ ನನಗ ಭಾಳ ಹೊಡೀತಾನ್ರಿ " ಅಂದಳು.

" ಯಾರು ಮಗಾನ? "

"ಅಲ್ರೀ ನನ್ ಗಂಡ್ ರಿ. " ಇದನ್ನು ಹೇಳುವಾಗ ಅವಳ ಮುಖದಲ್ಲಿ ತಿರಸ್ಕಾರ ಭಾವ. ನಾನು ಭವಾನಿ ಮುಖ ಮುಖ ನೋಡಿಕೊಂಡೆವು. ನಮ್ಮಿಬ್ಬರಿಗೂ ಅನಿಸಿದ್ದು ಎರಡನೆಯ ಹೆಂಡತಿ ಮಾತು ಕೇಳಿ ಅವಳ ಗಂಡ ಅವಳನ್ನು ಹಿಂಸಿಸಿದ್ದಾನೆ ಅಂತ.

ಭವಾನಿ ಅದನ್ನು ಕೇಳಿಯೂ ಆಯಿತು. " ಯಾಕೆ? ನಿನ್ ಗಂಡ ಇನ್ನೊಬ್ಬಳ ಮಾತು ಕೇಳಿ ನಿನ್ನ ಹೊಡೀತಾನಾ ? ಅವ್ಳು ಹೇಳಿ ಕೊಡ್ತಾಳಾ ?

" ಇಲ್ರಿ, ಅಕಿ ಚೊಲೋ ಅದಾಳ್ರಿ, ಇವ್ನ ಹೊಡೀತಾನ್ರಿ ನನಗ"

" ಯಾಕಂತೆ? ಏನ್ ರೋಗ ಅವ್ನಿಗೆ? " ಭವಾನಿ ಕೈಲಿ ಬಸವ್ವನ ಗಂಡ ಆಗ ಸಿಕ್ಕಿದಿದ್ರೆ ಅನುಮಾನ ಇಲ್ಲದೆ ನಾಲ್ಕು ತಟ್ಟಿಬಿಟ್ಟಿರೋಳು ಅವನ್ನ! ಅವನ ಪುಣ್ಯ, ಭವಾನಿ ಮತ್ತೆ ಶಾಟ್ ಗೆ ಅಂತ ಹೋದ ಮೇಲೆ ಬಂದ ಮಹಾನುಭಾವ.




*
ಅಂದು ಶೂಟಿಂಗ್ ಮುಗಿಸಿ ಧಾರವಾಡಕ್ಕೆ ಬರ್ತಾ ಮೆದುಳಿನ ಪದರು ಪದರಿನಲ್ಲೂ ಬಸವ್ವ...
ಅವಳ ಗಂಡ ಅನಿಸಿಕೊಂಡ ಪಾಪಿ, ಮುಂದೆ ಸ್ವಲ್ಪ ಹೊತ್ತಿನಲ್ಲೇ ಉಣ್ಣೆಗಾಗಿ ತಾನು ಬೆಳೆಸುತ್ತಿದ್ದ ಎರಡು ಕುರಿಗಳನ್ನು ಹೊಡೆದುಕೊಂಡು ನಾವು ಕುಳಿತ ಜಾಗದ ಮುಂದಿನಿಂದ ಹಾಯ್ದು ಹೋದ. ಅಷ್ಟರಲ್ಲಿ ಬಸವ್ವ ಎದ್ದು ಹೋಗಿ ಸ್ವಲ್ಪ ದೂರದಲ್ಲಿ ಮತ್ತೆ ಎಥಾಃ ಪ್ರಕಾರ ತಲೆತೊಳೆದುಕೊಳ್ಳುವುದರಲ್ಲಿ ಮಗ್ನಳಾಗಿದ್ದಳು! ಅವಳ ಗಂಡ ಅವಳ್ಯಾರೋ ಗೊತ್ತೇ ಇಲ್ಲ ಎಂಬಂತೆ, ತೀರ ಅಪರಿಚಿತನಂತೆ ಹೋದದ್ದು ನನಗೆ ಆಶ್ಚರ್ಯ ತರಿಸಿತ್ತು. ಆದರೆ ಬಸವ್ವ ತಲೆ ತೊಳೆಯುವುದನ್ನು ಬಿಟ್ಟು ಅವನನ್ನೇ ದುರುಗುಟ್ಟುತ್ತಿದ್ದಳು! ನಿಮಿಷಗಳ ನಂತರ ಮತ್ತೆ ಮಾಮೂಲಿನ ಕಾಯಕ...

ಅಲ್ಲಿಯ ಜನರನ್ನು ವಿಚಾರಿಸಿದೆ, ಬಸವ್ವನ ಗಂಡ ಫಾರೆಸ್ಟ್ ಡಿಪಾರ್ಟ್^ಮೆಂಟ್^ನಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಾನೆ. ರಿಟೈರ್^ಮೆಂಟ್ ಆಗಲು ಇನ್ನೂ ತುಂಬಾ ವರ್ಷ ಬೇಕು. ಅವನು ನಿಜಕ್ಕೂ ತುಂಬಾ ಕ್ರೂರಿಯಾಗಿದ್ದ. ಒಂದೊಮ್ಮೆ ಉತ್ತಮ ಸ್ಥಿತಿಯಲ್ಲಿದ್ದ ಬಸವ್ವ ತನ್ನ ನಡತೆಯಿಂದಾಗಿ ಊರ ಜನರಿಂದ ಭೇಷ್ ಅನಿಸಿಕೊಂಡಾಕೆ. ಆದರೆ ಸಣ್ಣಪುಟ್ಟದಕ್ಕೂ ಬೇಗ ಮನಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದಳು. ನಾಲ್ಕು(?) ಮಕ್ಕಳು ಬಸವ್ವಗೆ. ಎರಡು ಗಂಡು, ಎರಡು ಹೆಣ್ಣಾ? ನನಗೆ ಈಗ ಸರಿ ನೆನಪಿಲ್ಲ... ಗಂಡನ ದೌರ್ಜನ್ಯ ಸಹಿಸಿ ಬಾಳುವೆ ಮಾಡುತ್ತಿದ್ದ ಬಸವ್ವನ ಸೂಕ್ಷ್ಮತೆ ಅವಳ ಗಂಡನಿಗೆ ಬೋರು ಹೊಡೆಸಿತಂತೆ, ಅದಕ್ಕೆ ಅವನು ಇನ್ನೊಂದು ಮದುವೆ ಮಾಡಿಕೊಂಡು ಹೆಂಡತಿಯನ್ನು ಮನೆಗೆ ಕರೆತಂದ! ಮೊದಲೇ ಸೂಕ್ಷ್ಮ ಮನಸಿನ ಬಸವ್ವಳಿಗೆ ಈಗ ಆದ ಆಘಾತವನ್ನು ಊಹಿಸಿ ನೀವು. ಅತ್ತಳು, ಗೋಗರೆದಳು, ಕಾಲಿಗೆ ಬಿದ್ದಳು, ಅವಳ ಆರ್ತತೆಗೆ ಕರಗಬೇಕಾಗಿದ್ದ ಹೃದಯ ಇನ್ನೂ ಕಲ್ಲಾಗಿ ಹೊಡೆತ ಬಡೆತ ಇನ್ನೂ ಹೆಚ್ಚಾಯಿತು. ಒಮ್ಮೆ ಕೊಲ್ಲಲೂ ಪ್ರಯತ್ನಿಸಿದನಂತೆ ಪುಣ್ಯಾತ್ಮ! ಮಾತನ್ನು ಅಲ್ಲಿಯ ಜನ ಹೆದರುತ್ತಲೇ ಪಿಸುದನಿಯಲ್ಲಿ ಹೇಳಿದ್ದು ಅವರಿಗೂ ಅವನ ಬಗ್ಗೆ ಇದ್ದ ಭಯವನ್ನು ನಿಚ್ಚಳ ಪಡಿಸುತ್ತಿತ್ತು. ಬಸವ್ವ ಹೊಡೆತ ತಿನ್ನುವಾಗಲೆಲ್ಲ ಅದನ್ನು ನೋಡಲಾಗದೆ ಇನ್ನೊಂದು ಹೆಣ್ಣು, ಬಸವ್ವನ ಸವತಿ ಎನಿಸಿಕೊಂಡಾಕೆ ಬಿಡಿಸಿಕೊಳ್ಳಲು ಹೋಗಿ ತಾನೂ ಪೆಟ್ಟು ತಿನ್ನುತ್ತಿದ್ದಳಂತೆ! ತನ್ನ ಗಂಡನಿಗೆ ತಿಳಿಯದಂತೆ ಬಸವ್ವಗೆ ಊಟ ಕೊಡುತ್ತಿದ್ದಳಂತೆ. ಹೀಗಾಗಿಯೇ ಬಸವ್ವಗೆ ಅವಳನ್ನು ಕಂಡರೆ ದ್ವೇಷವಿಲ್ಲಯಾರಿಗಾದರು ದ್ವೇಷ ಇರಬೇಕಾದರೂ ಯಾಕೆ ಅಲ್ಲವೆ? ಅಂದರೆ ನನ್ನ ಮಾತಿನ ಅರ್ಥ ಸಂಗಾತಿ ತನ್ನ ಜೊತೆಯನ್ನು ಬಿಟ್ಟು ತಾನಾಗಿ ಇನ್ನೊಂದು ದಾರಿ ನೋಡಿಕೊಂಡಾಗ ನಿಜವಾಗಿ ಶಪಿಸಬೇಕಾದುದು ದಾರಿಗೋ? ಸಂಗಾತಿಗೋ? ತಪ್ಪು ಅಥವಾ ಜೊತೆಯನ್ನು ತೊರೆದುದು ದಾರಿಯಲ್ಲ ಅಲ್ಲವೇ?

ಮಕ್ಕಳು ಬೆಳೆದಂತೆಲ್ಲ ಸದಾ ಅಳುವ, ಅಪ್ಪನನ್ನು ಗೋಗರೆದು ಬೇಡುವ ಅಮ್ಮ ಬೇಡವಾದಳು. ಅವಳು ಮನೆಯಲ್ಲಿದ್ದರೆ ತಮಗೆ ಯಾರೂ ಹೆಣ್ಣು ಕೊಡರು ಎಂದು ಆಕೆಯನ್ನು ಮನೆಯಿಂದ ಆಚೆ ನೂಕಿದರು. ವರುಷಗಳಿಂದ ಗಂಡನ ದೌರ್ಜನ್ಯ ಸಹಿಸಿ ಇನ್ನೂ ಬದುಕಿಗಾಗಿ ಹಂಬಲಿಸುತ್ತಿದ್ದ ಬಸವ್ವ ಆಘಾತವನ್ನು ಸಹಿಸಲಾಗದೆ ಅವಧೂತಳಾದಳು!!! (ಕ್ಷಮಿಸಿ ಅವಧೂತದ ಅರ್ಥವನ್ನು ಬಲ್ಲೆ ನಾನು. ಆ ಪದವನ್ನು ನಾನಿಲ್ಲಿ ವ್ಯಂಗ್ಯವಾಗಿ ಹೇಳಿದುದು.)

ಒಬ್ಬ ಮಗನಿಗೆ ಮದುವೆಯಾಗಿದೆ. ಇನ್ನೊಬ್ಬ ಟ್ರಕ್ ಕ್ಲೀನರ್ ಆಗಿ ಊರು ಅಲೆಯುತ್ತಾನೆ. ಅವನಿಗೂ ತಾಯಿ ಮನೆಯಲ್ಲಿರುವುದು ಸಮ್ಮತವಿಲ್ಲ. ಊರ ಜನರೇ ಬಸವ್ವಗೆ ಊಟ, ಉಡುಗೆ ಕೊಡುವುದರ ಮೂಲಕ ಅವಳನ್ನು ಪೊರೆಯುತ್ತಿದ್ದಾರೆ. ರಾತ್ರಿ ಮಲಗಲು ತಮ್ಮ ಮನೆಯಂಗಳದಲ್ಲಿ ಜಾಗ ಕೊಡುತ್ತಾರೆ.

*

ಹೋಟೆಲ್ಲಿನ ರೂಮು ಸೇರಿ ಅಳು ತಡೆಯಲಾಗದೆ ಗಟ್ಟಿಯಾಗಿ ಅತ್ತುಬಿಟ್ಟೆ. ನಂತರ ಬಸವಳನ್ನು ನನ್ನ ಜೊತೆ ಕರೆ ತಂದರೆ ಹೇಗೆ ಅನ್ನುವ ವಿಚಾರ ಬಂದು ಮನಸಲ್ಲಿ ಗಟ್ಟಿಗೊಳ್ಳತೊಡಗಿತು. ರಾತ್ರಿ ಹನ್ನೊಂದು ಗಂಟೆಗೆ ಮನೆಗೆ (ಬೆಂಗಳೂರು) ಫೋನಾಯಿಸಿದೆ. ಬಸವಳನ್ನು ಕರೆ ತರುವ ವಿಷಯದ ಕುರಿತು ಮಾತಾಡಿದೆ.ಪಾಪ, ಪಾಟೀಲರು ನಿದ್ದೆಯಲ್ಲಿದ್ದರು. "ನಾಳೆ ಇದರ ಬಗ್ಗೆ ಮಾತಾಡೋಣ ಈಗ ಮಲಗು" ಎಂದು ಸಮಾಧಾನಿಸಲು ನೋಡಿದರು.
ನನ್ನಿಂದಾಗುತ್ತಿಲ್ಲ
... ಆದರೂ ಜವಾಬ್ದಾರಿ ಅನ್ನೋದು ಸಣ್ಣ ಮಾತಲ್ಲ ಅನ್ನೋ ಅರಿವು ಇತ್ತಾದ್ದರಿಂದ ಜೊತೆಗೆ ಇದು ಇಂಥ ವಿಷಯವನ್ನು ಮಾತಾಡೊ ಹೊತ್ತಲ್ಲ ಅಂತನಿಸಿ ಫೋನಿಟ್ಟೆ. ಸಮಾಧಾನವಿಲ್ಲ..
ಅವಿಗೆ ಫೋನಾಯಿಸಿ ವಿಷಯ ತಿಳಿಸಿದೆ." ಬೇಡ, ಬೇಕಿದ್ದರೆ ಅಲ್ಲೇ ನಿಮ್ಮ ಕೈಲಾದ ಸಹಾಯ ಮಾಡಿ.ನೀವಂದುಕೊಂಡಷ್ಟು ಸುಲಭದ ಕೆಲಸವಲ್ಲ ಅದು" ಎಂದರು. ಅವಿ ಎಷ್ಟು ಭಾವುಕರೋ ಅಷ್ಟೆ ವಾಸ್ತವ ವಾದಿ ಕೂಡಾ. ಹೀಗಾಗಿಯೇ ಅವರ ಸಲಹೆ ನನಗೆ ಅಮೂಲ್ಯ."ನೋಡೋಣ " ಎಂದೇನಾದರೂ ಮನಸು ಒಪ್ಪುತ್ತಿಲ್ಲ.
ಪಾಪ ಭವಾನಿ ಸಹ ತಿಳಿಸಿ ಹೇಳಲು ಪ್ರಯತ್ನಿಸಿ ಕೊನೆಗೆ, "ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸೋದನ್ನ ಕಲ್ತ್ಕೋ, ಅತೀ ಆಡಬೇಡ " ಎಂದು ಗದರಿಸಿ ಮುಸುಗೆಳೆದುಕೊಂಡಳು.

ಯಾವೊಂದು
ನಿರ್ಧಾರಕ್ಕೆ ಬರಲಾಗದೆ ಹೊರಳಾಡಿ ಕೊನೆಗೆ ಬೆಳಗಿನ ಶೂಟಿಂಗಿಗೆ ಕಣ್ಣು ಊದಿಕೊಳ್ಳದಿರಲಿ ಎಂದು ಪ್ರ್ಯಾಕ್ಟಿಕಲಿ (!!) ಯೋಚಿಸಿ ನಿದ್ದೆಗೆ ಪ್ರಯತ್ನಿಸಿದವಳು ಮುಂದೆ ಯಾವಾಗಲೋ ನಿದ್ರಾದೇವಿಯ ಮಡಿಲನ್ನು ಅವಚಿ ಮಲಗಿದ್ದೆ.

ಮಾರನೆಯ ದಿನವೂ ಬಸವ್ವ ಇದ್ದ ಊರಲ್ಲೇ ಶೂಟಿಂಗ್ ಇತ್ತು. ಅವಳನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಆದರೆ ಮನಸು ಅವಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. 'ಊರಿಗೆ ಕರೆದುಕೊಂಡು ಬಂದು 'ನಿಮ್ಹಾನ್ಸ್' ಗೆ ಸೇರಿಸಿ, ಡಾ. ಸಿ.ಆರ್. ಚಂದ್ರಶೇಖರ್ ಅವರಲ್ಲಿ ಚಿಕಿತ್ಸೆ ಕೊಡಿಸಿ, ಅವಳು ಸರಿ ಹೋದ ನಂತರ ಮನೆಗೆ ಕರೆತರುವುದು.' ಎಂದು ಒಮ್ಮೆ ಯೋಚಿಸಿದರೆ ಮತ್ತೊಮ್ಮೆ, 'ಇಲ್ಲ ಅವಳನ್ನು ಅಲ್ಲೇ ಪಕ್ಕದ ಧಾರವಾಡದ ಆಸ್ಪತ್ರೆಗೆ ಸೇರಿಸಿದರಾಯ್ತು, ಸರಿ ಹೋದ ಮೇಲೆ ಅವಳು ತನ್ನ ಬಳಗನ್ನು ಸೇರಿಕೊಳ್ಳುವುದೇ ಲೇಸು, ಅರಿಯದ ನಮ್ಮೊಡನೆ ಅವಳು ಹೊಂದಿಕೊಳ್ಳಲಾರಳೆನೋ' ಅನಿಸಿತು. ವಿಚಿತ್ರವೆಂದರೆ ಮದ್ಯಾಹ್ನ ಕಳೆಯುವಷ್ಟರಲ್ಲಿ ಬಸವ್ವ ನನಗೂ ಊರಿನವರಿಗಾದಷ್ಟೇ ಮಾಮೂಲಾಗಿ ಹೋಗಿದ್ದಳೆನ್ನುವುದು!!
ಆದರೆ ಜೊತೆಗೆ ಕರೆ ತಂದು ಚಿಕಿತ್ಸೆ ಕೊಡಿಸುವ ವಿಚಾರ ಮಾತ್ರ ಸಡಿಲುಗೊಳ್ಳಲಿಲ್ಲ. ಅಂದು ಸಂಜೆ ಮತ್ತೆ ಗಂಡನಿಗೆ ಫೋನು ಮಾಡಿ ಕೇಳಿದೆ.ಸಮಾಧಾನವಾಗಿ ಎಲ್ಲವನ್ನೂ ಕೇಳಿದ ಅವರು, "ಕರೆ ತರುವುದಾದರೆ ನನ್ನದೇನೂ ಅಭ್ಯಂತರವಿಲ್ಲ" ಅಂದರು.

ಮನದಲ್ಲೇ ಅವರ ಔದಾರ್ಯಕ್ಕೆ ನಮಿಸಿದೆ. ಮನಸು ಅರ್ಧ ಹಗೂರವಾಯಿತು. ಮುಂದೆರಡು ದಿನ ಅವಳನ್ನು ಹೇಗೆ ಕರೆದುಕೊಂಡು ಬರುವುದು ಅನ್ನುವುದರ ಬಗ್ಗೆ ತಲೆ ಕೆಡಿಸಿ ಕೊಂಡಂತೆಲ್ಲ ವಾಸ್ತವ ಹೆದರಿಸತೊಡಗಿತು ನನ್ನನ್ನು. ಅವಳು ಸರಿ ಹೋಗುವ ಬಗ್ಗೆ, ಆಸ್ಪತ್ರೆಯಲ್ಲಿ ಅವಳ ಕಡೆ ವಿಶೇಷ ನಿಗಾ ಇಡುವುದರ ಬಗ್ಗೆ, ಸರಿ ಹೋದದ್ದೇ ಆದರೆ ನಂತರ ಅವಳ ಜೀವನದ ಬಗ್ಗೆ...

' ಹೌದು, ಅವಳು ಸರಿ ಹೋದದ್ದೇ ಆದರೆ ಅವಳಿಗೆ ಎಲ್ಲವೂ ಮತ್ತೆ ನೆನಪಿಗೆ ಬರುತ್ತೆ. ತನ್ನ ಬದಕು ಮೊಟಕಾದುದರ ಅರಿವು ಮೂಡಿದಾಗ, ಛಿದ್ರವಾದ ತನ್ನ ಬಾಳ ಕನಸು ಮತ್ತೆ ಚೂರು ಚೂರಾದ ಸ್ಥಿತಿಯಲ್ಲಿಯೇ ಎದುರಾದಾಗ, ಇಷ್ಟು ದಿನ ತಾನು ಹುಚ್ಚಿಯ ಪಟ್ಟ ಹೊತ್ತುದದರ ಬಗ್ಗೆ ಗೊತ್ತಾದಾಗ, ಜನ ಮೊದಲಿನಂತೆ ತನ್ನೊಡನೆ ಸಹಜವಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಪ್ರಜ್ಞೆ ಚುಚ್ಚತೊಡಗಿದಲ್ಲಿ ಆಕೆ ಹಿಂಸೆಗೊಳಗೊಳ್ಳುವ ಪ್ರಕ್ರಿಯೆಯೇ ಭೀಕರ!! ಅದರ ಬದಲು ಅವಳ ಈಗಿನ ಸ್ಥಿತಿಯೇ ಉತ್ತಮ. ಕನಿಷ್ಠ ಈಗ ಸಮಾಜದ ಕಟ್ಟುಪಾಡುಗಳ ಹಂಗು ತೊರೆದು ತನ್ನದೇ ಪ್ರಪಂಚದಲ್ಲಿದ್ದಾಳೆ , ಅದು ನೋವಿನಿಂದ ನಿರ್ಮಾಣಗೊಂಡ ಲೋಕವಾದರೂ ಅಲ್ಲವಳೇ ಒಡತಿ, ಅವಳಿಗವಳೇ ಸವತಿ, ಪತಿ, ಸತಿ, ಸುತ...'

ಏನೇನೋ ನೂರೆಂಟು ಯೋಚನೆಗಳು.. ಮೊದಲು ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದ ಮನಸೇ ಈಗ ಸಡಿಲಗೊಳ್ಳುತ್ತಾ ನಿರ್ಣಯಕ್ಕೆ ಬರಲಾಗದೆ ಹೊಯ್ದಾಡತೊಡಗಿತು. ಕೊನೆಗೆ ಅವಳಿದ್ದ ಸ್ಥಿತಿಯಲ್ಲಿರುವುದೇ ಉತ್ತಮ, ಈಗ ಕನಿಕರ ತೋರಿಯಾದರು ಜನ ಅವಳನ್ನು ಪೋಷಿಸುತ್ತಿದ್ದಾರೆ, ಸರಿ ಹೋದರೆ ಅವರೂ ಅವಳ ಪಾಲಿಗೆ ಇಲ್ಲವಾಗುತ್ತಾರೆ ಎನಿಸಿ ಬಸವ್ವಳನ್ನು ಮನದಲ್ಲುಳಿಸಿಕೊಂಡು ಶೂಟಿಂಗ್ ಮುಗಿದ ಮೇಲೆ ಮರಳಿ ಮನೆಗೆ ಬಂದೆ....ತಿಂಗಳೆರಡು ಕಳೆದ ಮೇಲೆ ಅನಿಸತೊಡಗಿದ್ದು, ಕಾಡತೊಡಗಿದ್ದು ನಿಜವಾಗಲೂ ನಾನು ಅವಳ ಒಳಿತನ್ನು ಬಯಸಿ ಬಿಟ್ಟು ಬಂದೆನಾ...? ಅಥವಾ ಜವಾಬ್ದಾರಿ ಹೊರಲಾಗದ ಹೇಡಿತನದಿಂದಲೋ...?

37 comments:

umesh desai said...

ಮೇಡಂ ಏನು ಹೇಳಬೇಕೋ ಗೊತ್ತಾಗವಲ್ತು. ಸಹಾಯ ಮಾಡಬೇಕು ಆದ್ರ ಎದುರಿಗಿರೋ ಆಸಾಮಿ ಹೆಂಗ ತಗೋತಾನ ಗೊತ್ತಿಲ್ಲದ
ಸಂಧಿಗ್ಧ ಸ್ಥಿತಿ ಒಮ್ಮೊಮ್ಮೆ ಇರ್ತದ. ನಿಮ್ಮ ಕೇಸಿನ್ಯಾಗು ಅದ ಹಾಡು. ಈ ಹುಚ್ರು ಅಂತ ಕರಿಸಿಕೊಳ್ಳೋ ಜನರ ಜತಿ ಹೆಂಗ ನಿಭಾಯಿಸಬೇಕು ಕೆಲವೊಮ್ಮೆ ಗೊತ್ತಾಗುವುದಿಲ್ಲ.

ನಾ ಆಶಾ ಭೊಸಲೆ ಬಗ್ಗೆ ಈ ಸರೆ ಬರದೇನಿ ಓದಲಿಕ್ಕೆ ಬರ್ರಿ...usdesai.blogspot.com

Ittigecement said...

ಜಯಲಕ್ಷ್ಮೀಯವರೆ...

ಬಹಳ ಸೊಗಸಾಗಿ ಬರೆದಿದ್ದೀರಿ...
ನಿಮ್ಮ ಭಾಷೆಯ ಸೊಗಡು ನಿಮ್ಮ ಲೇಖನಕ್ಕೊಂದು ಮೆರಗು...
ಭಾಷೆಯ ಸೊಗಡನ್ನು ಸಮರ್ಥವಾಗಿ ಬಳಸಿಕೊಂಡಿದ್ದೀರಿ...

ನೀವು ಮಾತುಗಳನ್ನು ಬಣ್ಣದಲ್ಲಿ ಬರೆದಿರುವದು ಇಷ್ಟವಾಯಿತು...

ಇನ್ನು ಹುಚ್ಚಿಯ ವಿಚಾರವನ್ನು ಮನಮುಟ್ಟುವಂತೆ ಬರೆದಿದ್ದೀರಿ...
ಮುಂದೆ ಓದಲು ಉತ್ಸುಕನಾಗಿದ್ದೇನೆ...

ಅಭಿನಂದನೆಗಳು...

sunaath said...

ಜಯಲಕ್ಷ್ಮಿಯವರ,
ಸರಳವಾಗಿ ಹೇಳುತ್ತಿರುವ ಈ ಅನುಭವದಲ್ಲಿ ಮರುಕ ಅದ ನೋಡ್ರಿ. ಆಕಿ ಬಗ್ಗೆ ಕರುಣಾ ತೋರಿಸಿದ ನಿಮ್ಮ ಹೃದಯ ದೊಡ್ಡದು.

minchulli said...

ಅಕ್ಕಯ್ಯ, ಕಣ್ಣ ಕಂಬನಿ ಮುತ್ತು ಹೆಪ್ಪುಗಟ್ಟಿಹುದು ...

ಜಲನಯನ said...

ಜಯಕ್ಕಾರೇ, ಹೇಂಗಿದ್ದಿರ್ಬೇಕ್ರಿ ಆಕಿ ಮನ್ಸು ಆ ಸಮಯ್ದಾಗ..?? ಸವ್ತೀನ ಬಿಟ್ ಗಂಡನ್ನ್ ಬಯ್ಯಾಖತ್ಯಾಳ ಅಂದ್ರ್ ಯಾ ಪಾಟೀ ನೊಂದಿರ್ಬೇಕ್ರಿ ಜೀವ...??
ನನ್ಗ ನಿಮ್ಮ್ ಭಾಷೀ ಭಾಳ ಹಿಡಿಸ್ತ್ರೀ..ಹಹಹ...ನಿಮ್ಮ ಕಥೆಯ ಮುಂದಿನ ಭಾಗಕ್ಕೆ ಕಾಯುತ್ತೇನೆ.

Avinash Kamath said...

ಜಯಲಕ್ಷ್ಮಿಯವರೆ,

ಈ ಘಟನೆಯನ್ನು ಮರೆತೇಬಿಟ್ಟಿದ್ದೆ. ನಿಮ್ಮ ಲೇಖನ ಓದಿದಾಗ ನೆನಪಾಯ್ತು. ಆ ದಿನ ನೀವು ಫೋನ್ ಮಾಡಿದಾಗ ನಿಮ್ಮ ದನಿಯಲ್ಲಿದ್ದ ಕಳಕಳಿ ಹಾಗೂ ವೇದನೆ ನೆನಪಾದವು. ಇನ್ನೊಬ್ಬರಿಗೆ ಚೂರು ಸಹಾಯದ ಅಗತ್ಯವಿದೆ ಎಂದು ಕಂಡರೂ ತಕ್ಷಣ ಸಹಾಯ ಮಾಡಲು ಧಾವಿಸುವುದು ನಿಮ್ಮ ದೊಡ್ಡ ಗುಣ.

ಮನುಷ್ಯನ ಸ್ವಾರ್ಥ ಅತ್ಯಂತ ಭಯಂಕರ ಅಲ್ವಾ. ಹೆತ್ತ ಅಮ್ಮ ಮನೇಲಿದ್ದರೆ ನಾಳೆ ನಮಗೆ ಯಾರೂ ಹೆಣ್ಣು ಕೊಡಲಿಕ್ಕಿಲ್ಲ ಎಂದು ಹೆದರಿ ಅಮ್ಮನನ್ನು ಮನೆಯಿಂದಾಚೆ ದೂಡುವಂತಹ ಪುರುಷರೂ ಇದ್ದಾರೆ ಅಂದ್ರೆ ಮನುಷ್ಯತ್ವದ ಮೇಲಿನ ನಂಬಿಕೆ ಉಳಿಯೋದಾದ್ರೂ ಹೇಗೆ? ಆದರೆ ಊರಿನ ಜನರೇ ಆಕೆಗೆ ಎರಡು ಹೊತ್ತಿನ ಅನ್ನ ನೀಡಿ ಸಲಹುತ್ತಿದ್ದಾರೆ ಎಂದಾಗ ಇನ್ನೂ ಚೂರು ಮಾನವತೆ ಉಳಿದುಕೊಂಡಿದೆ ಎನಿಸುತ್ತೆ. ಅಂದು ನೀವು ಫೋನ್ ಮಾಡಿದಾಗ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದು ಸೂಕ್ತವಾಗಲಿಕ್ಕಿಲ್ಲ ಎಂದು ನಾನು ಹೇಳಿದ್ದು ತಪ್ಪಾಯ್ತೆ ಅನಿಸ್ತಾ ಇದೆ. ಒಬ್ಬ ಮಹಿಳೆಯ ಬಾಳಿನಲ್ಲಿ ಬರಬಹುದಾಗಿದ್ದ ಬೆಳಕನ್ನು ನಾನು ತಡೆಹಿಡಿದಹಾಗಾಯ್ತೆ? ಇರಲಿಕ್ಕಿಲ್ಲ.

ಹಕ್ಕಿಗಳು ಆಕಾಶದಲ್ಲಿಯೇ ಹಾರುತ್ತಿರಲಿ.

ಲೇಖನ ತುಂಬ ಸೊಗಸಾಗಿ ಮೂಡಿ ಬಂದಿದೆ, ಆಸ್ ಯೂಶುವಲ್. ನೀವು ಚೆನ್ನಾಗಿ ಬರೆಯುವುದರಲ್ಲಿ ಆಶ್ಚರ್ಯವಿಲ್ಲ.. ಚೆನ್ನಾಗಿ ಬರೆಯದಿದ್ದರೇನೇ ಆಶ್ಚರ್ಯ ಅನ್ನುವಂಥ ಸ್ಟಾಂಡರ್ಡ್ ಗೆ ಬಂದಿದ್ದೀರಿ.. ಅಭಿನಂದನೆಗಳು!! ಆಲ್ ದಿ ಬೆಸ್ಟ್!!

Rohit Ramachandraiah said...

ಮೇಡಂ ಲೇಖನ ಓದಿ ಮನ್ಸಿಗೆ ತುಂಬಾ ಬೇಜಾರಾಯ್ತು....

ಚಿಕ್ಕವರಿದ್ದಾಗ, ನಮ್ಮ ತಾಯಿಯವರ ಊರಿನಲ್ಲಿ ನಡೆಯುತ್ತಿದ್ದ ಘಟನೆಯೊಂದು ನೆನಪಾಯ್ತು....
ಹತ್ತಿರದ ಊರಿನ ಒಬ್ಬಾಕೆ, ಅರೆ ಮರುಳಿನಿಂದ ಊರೂರು ಅಲೆಯುತ್ತಿದ್ದಳು. ಆಕೆ ನಮ್ಮೂರಿಗೂ ಬಂದಾಗ ಹುಡುಗರೆಲ್ಲಾ ಆಕೆಯನ್ನು ಛೇಡಿಸ್ತಿದ್ದಿದ್ದು, ಆ ಗುಂಪಿನಲ್ಲಿ ನಾನೂ ಆ ಗುಂಪಿನಲ್ಲಿ ಇರುತ್ತಿದ್ದುದು ನೆನಪಾಗಿ ನಾಚ್ಕೆ ಆಯ್ತು.... ಕೆಲ ತಿಂಗಳುಗಳ ಹಿಂದೆ ಅವಳ ನೆನಪಾಗಿ, ನಮ್ಮ ಅಜ್ಜಿಯವರನ್ನು ವಿಚಾರಿಸಿದಾಗ, ಆಕೆ ಎಲ್ಲಿಗೋ ಹೋಗಿ ಬಿಟ್ಟಳೆಂದೂ, ಅವರ ಮನೆಯವರು ಎಷ್ಟು ಹುಡುಕಿಸಿದರೂ ಪತ್ತೆಯಾಗಲಿಲ್ಲವೆಂದೂ ಹೇಳಿದರು....

ಆಕೆಯದ್ದೂ ಇಂತಹದ್ದೇನಾದ್ರು ನೋವಿನ ಕತೆಯಿದ್ದಿರಬೇಕು....

ಅವಿ, ಹೇಳ್ದಾಂಗ ಭಾಳ ಲೈವ್ಲಿಯಾಗಿರ್ತಾವ ಮತ್ತ.... ತಮ್ ರೈಟಿಂಗ್ಸ್....

Jayalaxmi said...

ನಿಮ್ಮ ಪ್ರತಿಕ್ರಿಯಾಗ ಥ್ಯಾಂಕ್ಸ್ ರಿ ಉಮೇಶ್ ಸರ್.

Jayalaxmi said...

ಮೆಚ್ಚುಗೆಗೆ ನನ್ನಿ ಪ್ರಕಾಶ್ ಅವರೆ. ಈ ಘಟನೆಯನ್ನು ಲೆಖನಕ್ಕಿಳಿಸಿದುದು ಬಸವ್ವನ ವಿಚಾರವಾಗಿ ಮನದ ಭಾರವನ್ನು ಇಳಿಸಿಕೊಳ್ಳಲು. ಆದರೆ ಸಧ್ಯವಾಗಿಲ್ಲವೇನೊ ಅನಿಸುತ್ತಿದೆ. ಇಲ್ಲಿ ಅವಳ ಪ್ರತಿ ಮಾತನ್ನು ಹಿಡಿದಿಡಲಾಗಿಲ್ಲ.. ನನ್ನ ಅಗಾಧ ಮರೆವನ್ನು ಪ್ರದರ್ಶಿಸುವಲ್ಲಿ ಈ ಲೇಖನ ಯಶಸ್ವಿಯಾಗಿದೆ!!

Jayalaxmi said...

ಎಷ್ಟ ಚಂದ್ ಬರದ್ರೂ, ಬ್ಯಾರೆ ಹೆಂಗ ಮಾತಾಡಿದ್ರೂ ಮನಿ ಮಾತಿನ ಆಪ್ತತಾನ ಬ್ಯಾರೆ ಅಲ್ಲೇನ್ರಿ ಸುನಾಥ್ ಸರ್..:) ನೀವು ಲೇಖನಾ ಓದಿದ್ದು ನನಗ ಖುಷಿ ಆತು.

Jayalaxmi said...

ಶಮಾ, ನಿನ್ನಂಥ ಸೂಕ್ಷ್ಮ ಮನಸಿನ ಹುಡುಗಿಗೆ ಕಣ್ಣೀರು ಬರೋಕೆ ಎಷ್ಟೊತ್ತು ಬೇಕು ಹೇಳು? :) ನನ್ನ ಜಾಗದಲ್ಲಿ ಅವತ್ತು ನೀನಿದ್ದಿದ್ರೆ ವರ್ಷವಿಡೀ ಅಳ್ತಿದ್ಯೋ ಏನೊ...

Jayalaxmi said...

ನಿಜ ಅವಿನಾಶ್, ’ಹಕ್ಕಿಗಳು ಆಕಾಶದಲ್ಲಿಯೇ ಹಾರುತ್ತಿರಲಿ’. ಕೆಲವೊಮ್ಮೆ ಅನಿಸುತ್ತೆ ಆಗುವುದನ್ನೂ ಯಾರೂ, ಯಾರ ಮಾತೂ ತಪ್ಪಿಸಲಾಗುವುದಿಲ್ಲವೇನೋ ಅಂತ. ಅಲ್ಲದೆ ಕೊನೆಗೆ ಒಂದು ನಿರ್ಧಾರಕ್ಕೆ ಬರಬೇಕಾದುದು, ಬಂದುದು ನಾನು ತಾನೆ? ಸೊ ಅಂದು ನೀವು ಹೇಳಿದ್ದರಲ್ಲಿ ಯಾವ ತಪ್ಪೂ ಇರಲೇ ಇಲ್ಲ. ನಿಮ್ಮ ಅಭಿಮಾನದ ಮೆಚ್ಚುಗೆ ಈ ಹೆಗಲಿಗೆ ಸ್ವಲ್ಪ ಜಾಸ್ತಿಯಾಯಿತೆ? :) ನನ್ನಿ.

Jayalaxmi said...

ನಿಜ ಆಜಾದ್ ಭಾಯ್, ಆಕೆ ಅವಳ ಸವತಿಯನ್ನು ಆ ಸ್ಥಿತಿಯಲ್ಲೂ ಬಯ್ಯದಿದ್ದುದನ್ನು ಕಂಡು ನನಗೂ ಆಶ್ಚರ್ಯವಾಗಿತ್ತು. ಮಾಮೂಲಿಯಾಗಿ ಪ್ರಪಂಚದಲ್ಲಿ ಹೀಗೆ ಸಂಗಾತಿಯಿಂದ ಅನ್ಯಾಯಕ್ಕೊಳಗಾದ ವ್ಯಕ್ತಿಗಳು ಹಮೇಶಾ ದೂರುವುದು ಆ ಇನ್ನೊಂದು ವ್ಯಕ್ತಿಯನ್ನೇ ಹೊರತು, ಸ್ವಾರ್ಥಕ್ಕಾಗಿ ತನ್ನನ್ನು ದೂರ ಮಾಡಿದ ಸಂಗಾತಿಯನ್ನಲ್ಲ!! ಎಲ್ಲೋ ಕೆಲವರು ಮಾತ್ರ ’ಆ ಇನ್ನೊಂದು ವ್ಯಕ್ತಿ ಹೇಗೇ ಇರಲಿ, ತಾನಾಗಿ ಆ ಇನ್ನೊಂದು ವ್ಯಕ್ತಿಯಲ್ಲಿಗೆ ಹೋಗುವುದು, ಹೋಗದಿರುವುದು ಸಂಗಾತಿಯ ಕೈಯಲ್ಲಿದೆ, ಆದ್ದರಿಂದ ತಪ್ಪು ಆ ಇನ್ನೊಂದು ವ್ಯಕ್ತಿಯದ್ದಲ್ಲ’ ಎಂದು ಯೋಚಿಸುತ್ತಾರೆ. ಅಂಥವರಲ್ಲಿ ಬಸವ್ವ ಸಹ ಒಬ್ಬಳು. ನಿಮಗೆ ನಮ್ಮೂರ ಭಾಷೆ ಇಷ್ಟವಾದುದು ನೀವು ಬಿಜಾಪುರದಲ್ಲಿ ಇದ್ದು ಬಂದುದಕೆ ಸಾಕ್ಷಿಯಾಯಿತು. :) (ನಿಮ್ಮ ಪ್ರೊಫೈಲ್‍ನಲ್ಲಿ ಓದಿದ್ದೆ ನೀವು ಕೆಲ ಕಾಲ ಬಿಜಾಪುರದಲ್ಲಿದುದಾಗಿ). ಮೆಚ್ಚುಗೆಗೆ ನನ್ನಿ.

Jayalaxmi said...

ನನ್ನಿ ರೋಹಿತ್..:)
ನೀವು ಬಿಡಿ ಸಣ್ಣವರಾಗಿದ್ದಾಗಿನ, ಅರಿಯದೆ ಮಾಡಿದ ತಪ್ಪಿನ ಬಗ್ಗೆ ಇಂದು ಆಟ್‍ಲಿಸ್ಟ್ ಬೇಜಾರು ಪಟ್ಟುಕೊಳ್ಳುತ್ತಿದ್ದೀರಿ. ನಾನು ಮುಂಬೈನಲ್ಲಿದ್ದಾಗ ಒಬ್ಬ ತುಂಬು ಹರೆಯದ ಜೊತೆಗೆ ಅಘಾಧ ಸೌಂದರ್ಯವತಿಯಾಗಿದ್ದ ಹೆಣ್ಣೊಬ್ಬಳು ನಾವಿದ್ದ ಏರಿಯಾದ ಬಸ್‍ಸ್ಟ್ಯಾಂಡಿನಲ್ಲಿ ಹರಕು ಬಟ್ಟೆಯಲ್ಲಿ ಸುತ್ತುತ್ತಿದ್ದಾಗ ಅವಳನ್ನು ನಾಯಿಯಂತೆ ಜೊಲ್ಲು ಸುರಿಸುತ್ತಾ ನುಂಗುವಂತೆ ನೋಡುತ್ತಿದ್ದ ಗಂಡಸರನ್ನು, ’ಅವಳು ತಲೆ ಕೆಟ್ಟವಳು’ ಅನ್ನುವ ಕಾರಣಕ್ಕೆ ತಮ್ಮ ಮುದ್ದು ಮಕ್ಕಳಿಗೆ ಏನಾರ ಮಾಡಿಯಾಳು ಅನ್ನೊ ಕಾಳಜಿಯಿಂದ ಮಕ್ಕಳನ್ನು ಹತ್ತಿರ ಎಳೆದುಕೊಂಡು ಅವಳನ್ನು ತಿರಸ್ಕಾರದ ದೃಷ್ಟಿಯಲ್ಲಿ ನೋಡುತ್ತಿದ್ದ ಹೆಂಗಸರನ್ನು ಕಂಡು ಅಸಹ್ಯವೆನಿಸಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಲು ಏನು ಮಾಡಬೇಕು, ಯಾರಲ್ಲಿಗೆ ಹೋಗಬೇಕು ಅಂತ ನಾನು ಸ್ನೇಹಿತರಲ್ಲಿ ವಿಚಾರಿಸಿಕೊಳ್ಳಲು ೨-೩ ದಿನ ಬೇಕಾದವು. ಅಷ್ಟರಲ್ಲಿ ಆಕೆ ಎಲ್ಲಿ ಹೋದಳೋ ಗೊತ್ತೇ ಆಗಲಿಲ್ಲ...

sughosh s nigale said...

ಮೇಡಂ ಭಾಳ ಛಲೋ ಬರ್ದೀರಿ. ನಾ ಸಣ್ಣಾವ್ ಇದ್ದಾಗ ಬೆಳಗಾವಿಯೊಳಗ ಹಿಂಗ ಹುಚ್ಚ ಅನ್ನಿಸಿಕೊಂಡು ಭಾಳ ದಯನೀಯ ಬದಕ ನಡಸ್ತಿದ್ದಾವ್ರನ್ನ ನೋಡನಿ...ನಿಮ್ಮ ಲೇಖನ ಓದಿದ ಮ್ಯಾಲ್ ಎಲ್ಲಾ ಮತ್ತ ನೆನಪಿಗ ಬಂತು. ಸುಘೋಷ್ ಎಸ್. ನಿಗಳೆ.

Jayalaxmi said...

ಹೌದ್ರಿ ಸುಘೋಷ್, ಪ್ರತಿ ಊರಾಗ ಒಂದಿಬ್ರಾದ್ರೂ ಇದ್ದ ಇರ್ತಾರ ಇಂಥವ್ರು.. ಲೇಖನ ಇಷ್ಟಪಟ್ಟಿದ್ದಕ್ಕ ನನ್ನಿ.

Anonymous said...

ನಾವೊಂದು ಬೇಲಿಯೊಳಗೆ ಇರಬೇಕಾದ ಅನಿವಾರ್ಯತೆಯಿಂದಾಗಿ ಎಷ್ಟೋ ಬಾರಿ ಸಹಾಯ ಮಾಡಲು ಹಿಂದೇಟು ಹಾಕಬೇಕಾದ ಪ್ರಸಂಗ ಎದುರಾಗುತ್ತೆ.. ಆಗೆಲ್ಲ ಶಾರದಾದೇವಿ ಮದರ್ ತೆರೇಸಾ ಅಂಥವರು ಮನದಲ್ಲಿ ಸುಳಿಯುತ್ತಾರೆ ....

Ahalya said...

ಹ್ಮ್ ಮ್ .

Ramchandra PN said...

ಅಂತರಾಳದ ಮಾತುಗಳಿವು... ನನ್ನ ಅನಿಸಿಕೆ - ನಮ್ಮ integrity ಯನ್ನು ನಾವೇ ಪ್ರಷ್ಣೆ ಮಾಡಿಕೊಳ್ಳುವುದು ಹೇಡಿತನವಲ್ಲ,ಅದು ಜವಾಬ್ದಾರಿ!

ಆದರೆ ಶೂಟಿಂಗ್ ಟೈಮಿನಲ್ಲಿ ಇಂಥಾ ಬ್ಯಾಕ್ ಸ್ಟೋರಿಗಳೂ ನಡೆದಿವೆ ಅಂತ ನನಗೆ ಗೊತ್ತೇ ಇರಲಿಲ್ಲ. ಆ ಟೈಮಿನಲ್ಲಿ ಏನಂದ್ರೂ ನನ್ನ ತಲೆಯೊಳಗೆ ಶಾಟು, ಪೀಟು, ಶೆಡ್ಯುಲು, ಬಜೆಟ್ಟು ಅಂತಲೇ ಇತ್ತು.

Jayalaxmi said...

ಅಯ್ಯೊ ಆಗ ನೀವಿರ್ತಿದ್ದ ಟೆನ್‍ಶನ್‍ನಲ್ಲಿ ನಾನೇನಾದ್ರು ಇದ್ದಿರ್ತಿದ್ರೆ ಬೇರೆ ಕಡೆ ಗಮನ ಹೋಗಲಿ,ಶೂಟಿಂಗ್ ಮಾಡೋಕೆ ಜನ ಉಳಕೊಂಡಿದ್ರೆ ಸಾಕಿರ್ತಿತ್ತು. ಆ ಪರಿ ಎಲ್ಲರ ಮೇಲೂ ಸಿಡಸಿಡಾ ಅಂದುಬಿಡ್ತಿದ್ದೆ ಸರ್! ಹಾಹಾಹಾಹಾಹಾ.. ನಿಮ್ಮ ಸಹನೆ ದೊಡ್ಡದು. ಜೊತೆಗೆ ನೀವು ಕೆಲಸ ತೆಗೆಸುವ ರೀತಿ ತುಂಬಾ ಮೆಚ್ಚುಗೆಯಾಯ್ತು, ನಾನು ಭವಾನಿ ಅದರ ಬಗ್ಗೇನೇ ಎಷ್ಟೋ ದಿನ ಮಾತಾಡ್ಕೊಂಡಿದೀವಿ.

Anand Sharma said...

ಮ೦ಗಳತ್ತೆ,

ಆಕೆನ ನೀವು ಕರೆದುಕೊ೦ಡು ಬರಲಾಗದ್ದಕೆ ಬೇಜಾರು ಮಾಡಿಕೊಳ್ಳ ಬೇಡಿ. ಒ೦ದು ಜೀವಾನ, ಅದು ಗಿಡನೇ ಆಗಲಿ ಮನುಷ್ಯ್ನೇ ಆಗಲಿ ಅದರ ಜಾಗದಿ೦ದ ಬೇರೆ ಕಡೆ ತ೦ದರೆ ಬೇರು ಬಿಡೊದು ಕಷ್ಟ. ಹಾಗೇನೆ ಆಕೆನ ನೀವು ಬೆ೦ಗಳೂರಿಗೆ ಕರೆತ೦ದಿದ್ದರೆ ಆಕೆಗೆ ಹೊ೦ದಿಕೊಳ್ಳೋದು ಕಷ್ಟ ಆಗುತ್ತಿತ್ತು.
ನಾನು ಕೂಡ ಆಕೆ ಅ೦ತಹವರನ್ನ ಕ೦ಡಿದ್ದಿನಿ ಆದರೆ ಏನು ಮಾಡಲಾಗದೆ ಸುಮ್ಮನಾಗಿದ್ದೇನೆ. ನಾವು ಅ೦ತಹವರ ಬಗ್ಗೆ ಎನಾದರು ಮಾಡಬೇಕು ಅ೦ತ ಅನ್ನಿಸ್ಸುತ್ತೆ. ನೀವು ಎನು ಹೇಳುತ್ತೀರ ಮ೦ಗಳತ್ತೆ?

Laxman (ಲಕ್ಷ್ಮಣ ಬಿರಾದಾರ) said...

ಜಯಲಕ್ಷ್ಮಿಯವರೆ,
ನೀವು ಬರೆದ ಲೇಖನ ಚೆನ್ನಾಗಿತ್ತು. ನಿಮ್ಮ busy ಕೇಲಸದ ನಡುವೆಯೂ ಇಷ್ಟೆಲ್ಲಾ ನೀವು ಕೇಳಿದಿರಾ?
ಆ ಹೆಣ್ಣುಮಗಳ ಕಡೆಗೆ ಇದ್ದ ಪ್ರೀತಿ, ಕಳಕಳಿ,ಮನೆಗೆ ಕರೆ ತರಲು ಪ್ರಯತ್ನಿಸಿದ್ದು ಓದಿ ಹೆಮ್ಮೆ ಎನಿಸಿತು.

""ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ...""
ಈ ವಾಕ್ಯಗಳನ್ನು ಕೇಳಿ ನನಗೆ ಮಾತೆ ಬಾರದೆ ಹೊಯಿತು.
ಕೆಲವೋಮ್ಮೆ ತಪ್ಪು ಯಾರದು ಅನ್ನುವದಕ್ಕಿಂತ ಈ ಪರಿಸ್ಥಿತಿ ಆ ತಾಯಿಗೆ ಬಂದಿದ್ದಕ್ಕೆ ಬೇಜಾರಾಗುತ್ತದೆ

parwatisingari said...

basavi avala kalpana lokadalle, sukhi, vastvya noyisuthade.

Jayalaxmi said...

ನಿಜ ಆನಂದ್ ಶರ್ಮ ಅವರೆ,ಅಂಥವರಿಗೆ ಏನಾದರೂ ಸಹಾಯ ಮಾಡಬೇಕು, ಅದಕ್ಕೊಂದು ದಾರಿ ಹುಡುಕಬೇಕು. ಅಂತಹ ದಾರಿ ಇದ್ದರೆ ಬಲ್ಲವರು ದಯವಿಟ್ಟು ತಿಳಿಸುವಿರಾ?

Jayalaxmi said...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ ಲಕ್ಷ್ಮಣ್ ಬಿರಾದಾರ್ ಅವರೆ. ನನ್ನ ಆಲೋಚನೆ ಆಲೋಚನೆ ಮಟ್ಟದಲ್ಲೇ ಉಳಿದುಕೊಂಡಿದ್ದಕ್ಕೆ ಬೇಸರವಿದೆ.ಕೈಲಾದ ಮಟ್ಟಿಗೆ ಹಣದ ಸಹಾಯ ಮಾಡೋದು ಸುಲಭ. ಆದರೆ ಹೀಗೆ ವೈಯಕ್ತಿಕವಾಗಿ ಸಹಾಯ ಮಾದಲು ಹೊರಟಾಗ ಏನೇನೆಲ್ಲ ಅಡೆತಡೆಗಳು!ಅಡೆತಡೆಗಳಿಗೆ ಕಾರಣಗಳೂ ಹಲವಾರಿರುತ್ತವೆ ಅಥವಾ ಅವೆಲ್ಲ ಕುಂಟುನೆಪಗಳೆ..?

Jayalaxmi said...

ಪಾರ್ವತಿಯವರೆ ಅವಳು ಬಸವಿ ಅಲ್ಲ ಬಸವ್ವ! ಬಸವಿ ಅಂತ ಹೆಸರಿರೊಲ್ಲ.ಬಸವಿಗೆ ಬೇರೆ ಅರ್ಥಾನೇ ಉಂಟು. ಒಂದೊಂದ್ ಸಲ ಹಾಗನಿಸುತ್ತೆ ಅವರ ಪಾಡಿಗೆ ಅವರು ತಮ್ಮ ಕಲ್ಪನಾಲೋಕದಲ್ಲಿದ್ದುಬಿಡಲಿ ಅಂತ. ಆದರೆ ಆ ಲೋಕ ಹೇಗಿರುತ್ತೋ...

ಬಿಸಿಲ ಹನಿ said...

ಜಯಲಕ್ಶ್ಮಿ ಮೇಡಂ,
ನಿಮ್ಮ ಸಹಮತಕ್ಕೆ ವಂದನೆಗಳು. ಆದರೆ ಇದೆ ಕಾಮೆಂಟನ್ನು ಬ್ಲಾಗರ್ಸ್ ತಾಣದಲ್ಲಿ ಆರಂಭವಾದ ನನ್ನ ಚರ್ಚೆಯ ಫೋರಂನಲ್ಲಿ ಹಾಕಿ. ಆಗ ಎಲ್ಲರೂ ಓದಿಯಾದರು ಎಚ್ಚೆತ್ತುಕೊಳ್ಳಲಿ. ಹಾಗೂ ಮೋಹನ್ ಅವರು ಮುಂದಾಳತ್ವವನ್ನು ವಹಿಸಿಕೊಂಡಾರು.

ಸೀತಾರಾಮ. ಕೆ. / SITARAM.K said...

ಮನಸ್ಸಿನ ದ್ವ೦ದ್ವಗಳು ಮತ್ತು ಪರಿಸ್ಥಿತಿಯ ವಿಷಣ್ಣತೆಯನ್ನು ಆಪ್ತವಾಗಿ ಉತ್ತರ ಕರ್ನಾಟಕದ ಬೆಲ್ಲದ ಬಾಷೆಯಲ್ಲಿ ಚೆನ್ನಾಗಿ ನವಿರು ನಿರೂಪಿಸಿದ್ದಿರಾ.

ಸೀತಾರಾಮ. ಕೆ. / SITARAM.K said...
This comment has been removed by a blog administrator.
Jayalaxmi said...

ನನ್ನಿ ಸೀತಾರಾಮ್ ಸರ್.ನನ್ನ ಬ್ಲಾಗ್‍ಗೆ ನಿಮ್ಮ ಭೇಟಿ ಖುಷಿ ತಂದಿತು.:)

Chamaraj Savadi said...

ಇಂಥ ತುಂಬ ಜನರು ನಮ್ಮ ಸುತ್ತಮುತ್ತ ಇದ್ದಾರೆ. ಆದರೆ, ತನ್ನ ಓಟದಲ್ಲಿ ತಲ್ಲೀನವಾದ ನಾಗರಿಕ ಜಗತ್ರಿಗೆ ಅತ್ತ ಗಮನಿಸುವ ವ್ಯವಧಾನವಿಲ್ಲ. ಇಂಥವರನ್ನು ಕಂಡಾಗೆಲ್ಲ ವಿಷಾದವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಕ್ರೌರ್ಯ ತೀರಾ ವಿಚಿತ್ರವಾದದ್ದು. ನನ್ನ ಹಳ್ಳಿಯಲ್ಲಿ ಇಂಥ ಹಲವಾರು ವ್ಯಕ್ತಿಗಳನ್ನು ನೋಡುತ್ತ ಬೆಳೆದವನು ನಾನು. ಒಂದಿಬ್ಬರು ಆತ್ಮಹತ್ಯೆ ಕೂಡಾ ಮಾಡಿಕೊಂಡರು. ಬುದ್ಧಿವಂತರೇ ಬದುಕಲು ಹೋರಾಡಬೇಕಾದ ಜಗತ್ತಿನಲ್ಲಿ, ಇಂಥವರ ಪಾಡು ನಿಜಕ್ಕೂ ಕಷ್ಟಕರ.

ಮರೆತ ಅಧ್ಯಾಯವೊಂದನ್ನು ಮತ್ತೆ ನೆನಪಿಸಿದಿರಿ ನೀವು.

akshata said...

hai, enu hElali? adbhuta lekhana, akeyannu karetandu aaraike maadalaagalillavalla anta bEjaaru bEDa pratiyobbarigU avaradE aada limits haagU anivaryategaLiruttave, adakke nIvU horatalla, iMtahavarigaagi EnaadarU maadabahudaa? anta nivu kelidiralla, nanaganisutte ivarigagi olleya mahilaa aashramagali ive, aadare aliyu saakashtu bhrashtaacraa naDeyuvudarinda hedarike aagutte ashte. naanu enu maadakke aaglilla anta yaake oddadtidiraa? nivu aakege mndakki tnnisi avala aa hottina hasivannu nigislillave? namminda aadashte maadabeku ri heccu tale kedisikollabedi,
akshata.

Jayalaxmi said...

ನಿಮ್ಮ ಅಭಿಪ್ರಾಯಕ್ಕೆ ವಂದನೆ ಚಾಮರಾಜ್ ಅವರೆ.ನಿಮ್ಮ ಮಾತು ನಿಜ.

Jayalaxmi said...

"ಪ್ರತಿಯೊಬ್ಬರಿಗೂ ಅವರದೇ ಆದ ಲಿಮಿಟ್ಸ್ ಮತ್ತು ಅನಿವಾರ್ಯತೆಗಳಿರುತ್ತವೆ" ಅನ್ನುವ ನಿಮ್ಮ ಮಾತು ನಿಜವಾದರೂ ಆ ಲಿಮಿಟ್ಸ್ ಹಾಕಿಕೊಳ್ಳೋರು ನಾವೇ ಅಲ್ಲವಾ ಅಕ್ಷತಾ? ಇಂಥ ವಿಷಯಗಳಲ್ಲಿ ನಮ್ಮ ಪರಿಮಿತಿಯ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದಲ್ಲವೆ? ನಿಮ್ಮ ಕಾಳಜಿ ಮತ್ತು ಮೆಚ್ಚುಗೆಗೆ ಪ್ರೀತಿಯ ನನ್ನಿ.

Anonymous said...

Jyalakshmi, I remember a mad woman near my house who got pregnant and gave birth on the streets and would walk around soaked in blood during menstrual periods. I always saw children throwing stones at her and harassing her, I wondered who made her pregnant and what happened to the child, for a long time I saw her growing from a young mad girl to an older woman who took care of her child by begging in the streets...could she have been mad?.

Jayalaxmi said...

Preetiya Anonymous, antha heNNugaLannu athavaa antha yaarannE aagali kanDaaga 'naaveshTu surakshita mattu nemmadiyinda iddEvallave? thank god!!' antannisade iradu. aadare beediyalli heege anaatha bhaavadinda, anaatharaagi suttuvavarigondu vyavasthe aadare oLitu.. .
nimma bhETigaagi nanni.

Veena Shivanna said...

Nice write up. onthara fiction annistu nange. Ending bere irli antha aase paDthaa idde aadre.
Mostly Woman rehabilitation centres anthella irattalla avrigaadru vishya tilsidre mostly avru bandu aakena sariyaada chikthse hodsi amele avaLige irokke jaaga kaige kelsa kodsthidru. oDanaaDi anno samsthe ide mysoorinalli avru ee kelsa maadthaare. next time basavvannanthavru sikkidre, avarige heLi, viLaasa kodi.
monne train nalli obba hudga tanna shirt bichchi kasa varstaa idda, amele janaranna duddu keLthaa idda.nanna friend avnanna keLidlu - school ge hogalveno antha , baa nanjothe ninge olle schoolige seristheeni antha, avanu kaige sigde paraari aada..! maaDo prayathna upayoga anthu aaytu aaga. maruka paDodu sumaar jana maaDo kelsa, next step kaigoLLodu swalpa jana ashte. neevu maruka paTTu, next step togondideera, bahaLa santhosha.. lingaytru andre avrige maTada bagge gottirbekalla? ellilla andru siddagange nalli antha estO nirgathikarige ooTa, nele ella sikkide.
my two cents.