Friday, December 12, 2014

ಅವನ ಅವಳು

ಅವಳನ್ನು ಒಳಮನೆಯಿಂದ ನಡುಮನೆಗೆ
ನಡುಮನೆಯಿಂದ ಪಡಸಾಲೆಗೆ,
ಒಳಾಂಗಣಕೆ, ಅಲ್ಲಿಂದ ಬಾಗಿಲಿಗೆ 
ಬಾಗಿಲಿನಾಚೆಗೆ ತಂದು ನಿಲ್ಲಿಸಿದವನು 
ಒಳಮನೆಯಡೆ ಮಾತನಾಡುತ್ತಿದ್ದ 
ಅವಳೆಡೆಗೇ ಮುಖ ಮಾಡಿ 
ಅವನ ಮಾತಿಗೆ ಒಳಮನೆಯಿಂದ 
ಯಾರದೋ ನಗು ಮಾತು 
ಹುಸಿಮುನಿಸು... ನೆನಪಾದಾಗೊಮ್ಮೆ 
ಅವಳನ್ನು ನೋಡಿ ನಕ್ಕರೆ ಅವನು 
ಅವಳ ಹೃದಯವರಳಿ ಮಾತು 
ಘಮಿಸುವ ಮುಂಚೆಯೇ ಮತ್ತೆ 
ಅವನದು ಒಳಮನೆಯೊಂದಿಗೆ ಮಾತು...
ಈಗ ಮತ್ತಿನ್ಯಾರದೋ ದನಿ...
ಬಾಗಿಲಾಚೆ ನಿಂತು ಕಾದವಳು 
ನಿಲ್ಲಲಾಗದೆ ಬಳಲಿ, ಕೂರಲು ಆಸರೆಗೆ 
ಬಾಗಿಲ ತೋಳನ್ನು ಮುಟ್ಟಿದರೂ 
ಸಾಕು ರೇಗುತಿದ್ದ ಅವನು
ಅಲ್ಲಿಂದ ಕದಲಲೂ ಬಿಡಲಿಲ್ಲ ಕನಲುತಿದ್ದ 
ಅವನನ್ನು ಬಿಟ್ಟಿರಲಾಗದ 
ಅವಳದು ಬಾಗಿಲಾಚೆಗೆ ಒಂಟಿ ಕಾಲಿನ ತಪ್ಪಸ್ಸು 
ಮತ್ತೆ ಒಳಮನೆಯಲಿ ಮಾತು, 
ನಗೆ, ಮುನಿಸು... 
ಅವನ ಮುಖ ಮಾತ್ರ ಅವಳೆಡೇಗೇ! 
ನಿಂತೂ ನಿಂತೂ ಬಳಲಿ 
ಬಸವಳಿದ ಅವಳು ಕೊನೆಗೆ ಸೋತು 
ಕಾಲೆಳೆಯುತ್ತಾ ನಡೆಯತೊಡಗಿದಳು 
ಉತ್ತರ ದಿಕ್ಕಿಗೆ ಮುಖ ಮಾಡಿ... 
ದೂರದಿಂದ ಇವರನ್ನು ಗಮನಿಸುತ್ತಿದ್ದ 
ಜಗತ್ತು ಅವಳನ್ನು ದೂರತೊಡಗಿತ್ತು.
    
                                   -ಜಯಲಕ್ಷ್ಮೀ ಪಾಟೀಲ್ (೦೨-೦೨-೨೦೧೩)

Thursday, November 20, 2014

ನಿರೀಕ್ಷೆ



ಮನದ ಸುಂಟರಗಾಳಿ ಮೇಲೆದ್ದು
ಕಣ್ಣ ಹೊಕ್ಕ ಕಸವ ಕಳೆಯುವಲ್ಲಿ
ನನ್ನ ತಿತ್ತಿ ದಣಿಯಿತು
ಊದಲು ಉಸಿರು ತುಂಬಿ
ತುಂಬಿ ಓಹ್ ಏದುಸಿರು
ಕಸರು ಉಳಿದ ಕಣ್ಣುಗಳಿಗೆ
ಪಾರದರ್ಶಕ ಮನದಲೂ ಹುನ್ನಾರ!
ಬಿಂಬಗಳು ಒಂದಕ್ಕೆರಡಾಗಿ
ಎರಡು ಒಂದಾಗಿ...
ಕಾಯುತ್ತಾ ಕುಳಿತಿದ್ದೇನೆ ಸುಮ್ಮನೆ,
ಹುನ್ನಾರ ತುಂಬಿದ ಕಣ್ಣುಗಳಲಿ
ಪ್ರತಿಫಲಿಸಬೇಕಾದ ನಿಚ್ಚಳತೆಗಾಗಿ


                                              - ಜಯಲಕ್ಷ್ಮೀ ಪಾಟೀಲ್

Sunday, November 16, 2014

ಗುಂಡು ಬೆಂಡು

ತಮ್ಮ ಸಂಬಂಧದ ಕುರಿತು ಅವನು ಸದಾ ಅನೈತಿಕತೆಯ ಎಚ್ಚರದಲ್ಲಿ ತೇಲುತ್ತಿದ್ದ. 
ಅವಳು ಪವಿತ್ರತೆಯ ಧನ್ಯತೆಯಲಿ ಮುಳುಗಿರುತ್ತಿದ್ದಳು. 
ನಿಯಮದಂತೆ ಎಚ್ಚರದಿಂದದ್ದವನು ಎದ್ದು ನಡೆದ. 
ಮುಳುಗಿದವಳು ಒಬ್ಬಂಟಿಯಾಗಿ, ಉಸಿರಿಗಾಗಿ ಪರದಾಡುತ್ತಿದ್ದಳು. 
ತೇಲಲಿ ಅದು ಗುಂಡು, ಮುಳುಗಲಿ ಅದು ಬೆಂಡು... 
- ಜಯಲಕ್ಷ್ಮೀ ಪಾಟೀಲ್


ಗೋಡೆ

ಅಲ್ಲೊಂದು ಗೋಡೆ ಎದ್ದು ನಿಂತಿತ್ತು.
ಆಕೆಗೆ ಗೋಡೆ ಎಂಬ ಗೊಡವೆಯೇ ಬೇಡವಾಗಿತ್ತು.
ಆದರೂ ನಿಧಾನವಾಗಿ ಗೋಡೆ ತಲೆ ಎತ್ತಲು ಶುರು ಮಾಡಿತು.
ಆತ ಒಂದೊಂದೇ ಇಟ್ಟಿಗೆ ಪೇರಿಸತೊಡಗಿದ್ದ.
ಆಕೆ ಅಸ್ತವ್ಯಸ್ಥಗೊಳ್ಳತೊಡಗಿದಳು.
ಪೇರಿಸಿದ ಇಟ್ಟಿಗೆಗಳನ್ನು ಕಿತ್ತಿ ತೆಗೆದಿಡಲು ನೋಡಿದಳು.
ಅವ ಪೇರಿಸುವುದನ್ನು ನಿಲ್ಲಿಸಲಿಲ್ಲ.
ಗೋಡೆ ಏಳಗೊಡಬಾರದೆಂಬ ಅವಳ ಎಲ್ಲ ಪ್ರಯತ್ನಗಳೂ ವಿಫಲವಾಗಿ, ಸಾಲಾಗಿ ಇಟ್ಟಿಗೆಗಳ ಸಂಖ್ಯೆ ಹೆಚ್ಚಾಗತೊಡಗಿತು.
ಸರಿ, ಅವನು ಹತ್ತು ಇಟ್ಟಿಗೆ ಪೇರಿಸಿದರೆ ಇವಳೂ ಸಹನೆಗೆಟ್ಟು ಅದಕ್ಕೆ ಒಂದೊಂದು ಇಟ್ಟಿಗೆ ಜೋಡಿಸತೊಡಗಿದಳು.
ಅತ್ತ ಹತ್ತಾದರೆ ಇತ್ತ ಒಂದು. 
ಅಂತೂ ಇಬ್ಬರೂ ಸೇರಿ ತಮ್ಮಿಬ್ಬರ ನಡುವೆ ಗೋಡೆ ಕಟ್ಟಿಕೊಂಡೇಬಿಟ್ಟರು. 
ಇಬ್ಬರಿಗೂ ಗಾರೆ ಕೆಲಸ ಗೊತ್ತಿಲ್ಲ. 
ಗೋಡೆ ನಡುವೆ ಬಿಟ್ಟುಕೊಂಡ ಕಿಂಡಿಗಳ ಸಂದಿಯಿಂದ ಎರಡೂ ಬದಿಯ ಲೋಕದರ್ಶನ ಅವರವರಿಗೆ ದಕ್ಕಿದಷ್ಟು ಈಗ.


-      ಜಯಲಕ್ಷ್ಮೀ ಪಾಟೀಲ್.

Wednesday, October 8, 2014

ಬದುಕಿದು ಬಲು ಸಂಕೀರ್ಣ



ಬೇಡವೆಂದಾದಲ್ಲಿ ಬರೆದುದ ಅಳಿಸಲಾಗದು

ಶೆಟವಿಯ ಸ್ಪುಟ ಲೇಖಿಯದು ಬದಲಾಗದು

ನೆನಪುಗಳ ಜಾತ್ರೆಯಲಿ ನಗುವ ಮಗು ಕಳೆದು ಹೋಗಬಾರದು

ನೆನಪುಗಳ ಕೊಳವದು ಕೋಳವಾಗಬಾರದು

*

ಮೈ ಕೊರೆಸಿಕೊಂಡು ಪೊಳ್ಳಾದ ಬಿದಿರು ಹಾಡಾಗುವುದು

ಕಣಕಣಗಳೂ ಕೂಡಿ ಬೆಳೆದ ಕಲ್ಲಿನ ಪಾಡು ಹೇಳತೀರದು

ಕಣ್ಣೀರ ಕಡಲಲ್ಲಿ ರಾತ್ರಿಯಿಡೀ ಪಯಣ

ಸಂಭ್ರಮದ ಸಾಗರಕ್ಕೂ ಹರುಷದ ಜಾಗರಣ

ನನ್ನಿಷ್ಟದಿ ಬದುಕೇನೆಂದರೆ ಬದುಕಿದು ಬಲು ಸಂಕೀರ್ಣ

*

ಮಾತಿನರಮನೆಯಲಿ ಗೆಳೆಯರ ಬಳಗ

ಮುರಿದು ನರಳುವ ಮನಸಿಗೂ ಮಾತೇ ಖಡ್ಗ

ಕಡಿದ ನೂಲು ಕೂಡದಿರೆ

ಜರಿ ಜರಿ ಜೊತೆಯಾಗದಿರೆ

ಎಲ್ಲಿದೆ ಶಲ್ಯ ಎಲ್ಲಿಯ ಸೀರೆ

ಬೆಸೆದ ಸಂಬಂಧವ ಬಿಸುಟು ನಡೆದರೆ

ಒಂಟಿ ಪಯಣ ಬಲು ಹೊರೆ

ಅಳುವು ಅಳಿಲಿಗೊಂದು ಹೆಗಲು

ಹರುಷಕದುವೇ ಅಗಾಧ ಮುಗಿಲು

ಚಾಬೂಕಿನ ಚುರುಕಿಗೆ

ಶರವೇಗ ನನ್ನ ಬದುಕಿಗೆ

ಬಿಲ್ಲಿನಿಂದ ದೂರಾದ ಬಾಣದಂತೆ

ಕಳಚಿಕೊಂಡು ಬದುಕಲಾರೆ

ಸವಿ ನಂಟಿನ ಬೆಸುಗೆ

- ಜಯಲಕ್ಷ್ಮೀ ಪಾಟೀಲ್ (JP)

(ಹಿಂದಿಯಲ್ಲಿರುವ ವಿಡಿಯೊ ಒಂದರ ಸಾಲುಗಳ ಆಧಾರದ ಮೇಲೆ ಬರೆದುದಿದು. 
‘ಶಬ್ದಗುಚ್ಛ’ ಅಂತ ನಮ್ಮದೊಂದು ಸ್ನೇಹ ಬಳಗವಿದೆ. ಅಲ್ಲಿ ಮನೋಹರ್ ನಾಯಕ್ ಮೇಸ್ಟ್ರು ನಮಗೆ ಪ್ರತೀ ಭಾನುವಾರ GMS transcreation (GMS - Good morning sunday) ಹೆಸರಲ್ಲಿ ಇಂಗ್ಲೀಷಿನ ಬ್ರೆಡ್‍ನ ಇನ್ನೂ ಕೆಲವೊಮ್ಮೆ ಹಿಂದಿಯ ರೋಟಿಯನ್ನು ಕನ್ನಡದ ರೊಟ್ಟಿ ಮಾಡಲು ಹೇಳ್ತಾರೆ. ಸರಳವಾಗಿ ಹೇಳಬೇಕು ಅಂದ್ರೆ, ಒಂದಿಷ್ಟು ವಿಚಾರಗಳನ್ನು ಇಂಗ್ಲೀಷಿನಲ್ಲಿ ಬರೆದು ಅವುಗಳನ್ನು ಕನ್ನಡದ ಸೊಗಡಿಗಿಳಿಸಲು ಹೇಳ್ತಾರೆ. ಹಾಗಾಗಿಯೇ ಅದು translation ಆಗಿರದೆ transcreation ಆಗುತ್ತದೆ. ಅಂಥದ್ದೇ ಒಂದು ರೂಪಾಂತರವಿದು.  )

Wednesday, August 20, 2014

ಸ್ಥಿತೆ!

ಬದುಕಬೇಕು ಎಂದುಕೊಂಡರೂ
ಮಿಡಿಯುತ್ತಿಲ್ಲ ಈ ಹೃದಯ
ಸತ್ತಿದ್ದೇನೆ ಬಲ್ಲೆ ನಾ
ಅದಕ್ಕೇ ನೋವು ನಲಿವಿನ
ಜಾಗದಲ್ಲೀಗ ನಿರ್ಲಿಪ್ತತೆ
ಈಗಲೂ
ಸುಮ್ಮ ಸುಮ್ಮನೆ ಅಬ್ಬರಿಸುತ್ತೇನೆ
ತುಟಿಕಚ್ಚಿ ಉಮ್ಮಳಿಸುತ್ತೇನೆ
ಕೇಕೆ ಹಾಕಿ ನಗುತ್ತೇನೆ
ಎಲ್ಲವೂ ಸಮಾಧಿಯ ಮೇಲೆ
ಮೊರೆವ ಗಾಳಿ ಅಷ್ಟೆ
ಒಳಗೆ ಹಿಮ ಮೌನ.

Saturday, May 3, 2014

ಮರಳುಗಾಡಿದು...

ಕ್ಷಿತಿಜಕ್ಕಂಟಿದ ನೆಂಟನೇ
ಜೊತೆ ಸಾಗುವ ತುಸು ದೂರ
ವಿಶ್ರಮಿಸಿಕೊ ನೀನೂ ಅರೆಘಳಿಗೆ
ಒಂಟೊಂಟಿಯಾಗೇ ಜೊತೆಗಿರುವೆವು
ಏರಿಳಿತ ಎಲ್ಲಿಲ್ಲ ಹೇಳು
ಬದುಕಿದು ಮರಳುಗಾಡೆಂದಾದರೆ
ಬರಡೆಂದರ್ಥವಲ್ಲವೇ ಅಲ್ಲ
ಅಗೋ ಅಲ್ಲಿ ಜೀವ ಸೆಲೆ!
ಹತ್ತಿರದಲ್ಲೇ ಬದುಕ ಉಸಿರಾದ
ಪೊದೆ ಪೊದೆ ಹಸಿರು!
ತುಸು ಹೊತ್ತು ಬಿಸಿಯೇರಿ
ಬುಸುಗುಡುವ ಈ ಉಸುಕು
ನೀನೀರಿಗಿಳಿಯೇ ಝಳ ಜಾರಿ
ತಂಪಾಗಿ ಸುಖದ ಸುಪ್ಪತ್ತಿಗೆ
ಅರಿವಿರುವ ಜೀವ ಸೂತ್ರ
ಸಡಲಿಸಿದರೂ ದಿಕ್ಕಾಪಾಲಾಗದು
ವಿಶ್ರಮಿಸಿಕೊ ನೀನೂ ಅರೆಘಳಿಗೆ
ಜೊತೆ ಸಾಗುವ ತುಸು ದೂರ
ಕ್ಷಿತಿಜಕ್ಕಂಟಿದ ನೆಂಟನೆ

Tuesday, April 29, 2014

ಕೇಳವ್ವ ಕೋಲು ಕೋಲೆ...

ಹುಟ್ಟಿದ ದಿನದಂದು
ಚುಕ್ಕಿ ಚಂದ್ರಮರು ಬಂದು
ಚಿತ್ತಾರ ಬಿಡಿಸೂತ ಮುಗಿಲಿನಲಿ
ಹರಸ್ಯಾರು ಕೇಡಿಲ್ಲದವಗೆ
ಕೇಳವ್ವಾ ಕೋಲು ಕೋಲೆ

ಕರಿಯಾನೆಗೆ ಹೆದರಿ 
ದೊಡ್ಡ ದನಿಗೆ ಹೆದರಿ 
ಮೂಡಿ ಮರೆಯಾಗೂವ 
ಚಾಬೂಕಿಗೆ ಹೆದರಿ 
ಅವ್ವನ ಉಡಿಯೊಳಗೆ 
ಅಡಗಿಕೊಳ್ಳುವ ಪುಟ್ಟ 
ಪೋರನಿವನ್ಯಾರೆ 
ಹೇಳವ್ವಾ ಕೋಲು ಕೋಲೆ

ರನ್ನs ಕಸಿಯಂಗಿ 
ಚಿನ್ನs ರುಂಬಾಲು 
ಮಾಣಿಕ್ಯದ ತಿಲಕವ 
ಧರಿಸಿ ಮೆರೆಯೂತ ಬಂದ 
ದೊರೆಯೀವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನೀಲಿಯರಮನೆಯಿಂದ 
ಮೇಲೆಬಂದವನ್ಯಾರೆ 
ಕೆಂಪುಕೇಸರಿ ಅಂಗಿ 
ತೊಟ್ಟ ಫಿರಂಗಿ 
ಚುರುಕು ನಗೆಯ ಚೋರ 
ಚಲುವನಿವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನಗುಮುಖದ ಚೆಲುವ 
ಮೂಲೋಕ ಅಲೆವ 
ಒಂದೊಂದೂ ಲೋಕದಲೂ 
ಬಣ್ಣ ಬದಲಿಸುವ 
ಆಟದವ ಇವನ್ಯಾರೆ 
ಹೇಳವ್ವಾ ಕೋಲು ಕೋಲೆ 

ಹತ್ತೂರು ಕರೆದರೂ 
ಓಗೊಡದ ಹಮ್ಮೀರ 
ನಾ ಬಂದು 'ಬಂಗಾರ
ಎಂದು ಕರೆದರೂ ಸಾಕು 
ಎದ್ದು ನಗುವ ಮಾರ 
ಹರಡ್ಯಾನೆ ಹೂನಗುವ 
ಕೇಳವ್ವಾ ಕೋಲು ಕೋಲೆ

ಹೀಗೊಂದು ಸಾವು

ಅವಳ ಸಾವಾಗಿತ್ತು.
ಅವಳಿಂದ ಉಪಕಾರ, ಉಪಚಾರ ಹೊಂದಿದವರಲ್ಲಿ ಅನೇಕರು
ಸಾವಿನ ಮನೆಯಲ್ಲಿ ನೆರೆದು, ತಾವುಗಳು ಇದಕ್ಕಾಗಿ ಬಿಟ್ಟೆದ್ದು ಬಂದ ಕೆಲಸಗಳ ಕುರಿತ ಮಾತಲ್ಲಿ,
ಕೊನೆಯ ದಿನಗಳಲ್ಲಿ ಅವಳು ಅನುಭವಿಸಿದ ನರಕವನ್ನು ಸಹಿಸಿದ ಅವಳ ಗಂಡನ ಗುಣಗಾನದಲ್ಲಿ ತೊಡಗಿದ್ದರು.
ಮತ್ತೆ ಶವ ಅನಾಥಪ್ರಜ್ಞೆಯಿಂದ ನರಳತೊಡಗಿತು...

- ಜಯಲಕ್ಷ್ಮೀ ಪಾಟೀಲ್.













Wednesday, March 5, 2014

ನಿನ ಗುಣವ ನಮಗುಣಿಸು

ಬುದ್ದಿವಂತಿಕೆಯಾ ಮಾತು
ಬತ್ತಿ ಹೋದವು ನೋಡೆ
ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ
ಗಂಗವ್ವ ನಿನ್ನ ಸ್ವಚ್ಛಸೆಲೆಯ ಮುಂದೆ
ಮಂದೆಗಳು ನಾವು ಕಲಬೆರಿಕೆಯಾ ಮಂದಿ

ಬಣ್ಣಬಣ್ಣದಾ ಮಾತು
ಬಾಡಿ ಹೋದವು ನೋಡೆ
ವನತಾಯಿ ನಿನ್ನ ಸಿರಿಯ ಮುಂದೆ
ವನತಾಯಿ ನಿನ್ನ ಸಿರಿಯ ಮುಂದೆ
ಭೂತಗಳು ನಾವು ಬದುಕಿದ್ದ ಮಂದಿ

ಸೋಜಿಗದಾ ಮಾತು
ಸೊರಗಿ ಹೋದವು ನೋಡೆ
ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ
ಎಟುಕದೆತ್ತರದಲ್ಲಿದ್ದೂ ಬಾಗಿರುವ ನಿನ ಮುಂದೆ
ಗಗನಮ್ಮ, ಕುಬ್ಜರು ನಾವು ಕೊಬ್ಬಿದಾ ಮಂದಿ

ಹಸಿರುಟ್ಟು ನಿಂತವಳೆ
ಬಸಿರ್ಹೊತ್ತು ನಿಂತವಳೆ
ನೋವುಂಡು ನಲಿವ ಹೆತ್ತವಳೆ
ನೋವುಂಡು ನಲಿವ ಹೆತ್ತವಳೆ
ನಿನ ಗುಣವ ನಮಗುಣಿಸಿ ಹರಸೆಂಬೆ ತಾಯೆ.

                                             - ಜಯಲಕ್ಷ್ಮೀ ಪಾಟೀಲ್.


Monday, January 20, 2014

ಕನಸುಗಣ್ಣಿನವರು

ಕನಸ ಹೊತ್ತು
ಕಾಯುತ್ತಾ ನಿಂತಿದ್ದಾರೆ
ಕೊಳ್ಳುವ ಕನಸಲ್ಲ
ಬಳ್ಳ ಹಿಡಿದರೆ ಅಳತೆಗೆ ಸಿಕ್ಕುವುದಿಲ್ಲ
ಬೀಳುವ ಕನಸಲ್ಲ
ಕಣ್ಣ ತೆರೆ ಸರಿಯೆ ಕರಗುವುದಿಲ್ಲ
ಅಬ್ಬರದ ಕನಸಲ್ಲ
ಬಿರುಗಾಳಿಗೆ ಸಿಕ್ಕಂತೆ ಸಾಗಬೇಕಿಲ್ಲ
ಕನಸದು ಗೊಬ್ಬರವೂ ಅಲ್ಲ
ಎದುರಾದುದನು ಕಂಡು
ಹಿಂದೆ ಸರಿಯಬೇಕಿಲ್ಲ
ಕನಸ ಹೊತ್ತು
ಕಾಯುತ್ತಾ ನಿಂತಿದ್ದಾರೆ
ಬೆರಗಿನ ಅರಳುಗಣ್ಣುಗಳಿಗೆ
ಎಟಕುತ್ತಿಲ್ಲ ವಾಸ್ತವ
ಬಣ್ಣ ಬಣ್ಣದ ಕನಸು
ಕಿಟಕಿ ಸರಳುಗಳ ಹಿಂದಿನಿಂದಲೇ
ಮುಗಿಲೆತ್ತರಕ್ಕೇರ ಬಯಸಿದರೂ
ಸೂತ್ರ ಹಿಡಿದ ಪುಟ್ಟ
ಕೈಗಳ ಸುತ್ತಿಕೊಂಡಿದೆ
ಬಂದಿಖಾನೆಯಲ್ಲಿರುವ ಹೆತ್ತವರ
ಕೇಡಿನ  ಅದೃಶ್ಯ ಬೇಡಿ
                                 - ಜಯಲಕ್ಷ್ಮೀ ಪಾಟೀಲ್.

ಚಿತ್ರಕೃಪೆ: ಗೂಗಲ್