Sunday, November 16, 2014

ಗೋಡೆ

ಅಲ್ಲೊಂದು ಗೋಡೆ ಎದ್ದು ನಿಂತಿತ್ತು.
ಆಕೆಗೆ ಗೋಡೆ ಎಂಬ ಗೊಡವೆಯೇ ಬೇಡವಾಗಿತ್ತು.
ಆದರೂ ನಿಧಾನವಾಗಿ ಗೋಡೆ ತಲೆ ಎತ್ತಲು ಶುರು ಮಾಡಿತು.
ಆತ ಒಂದೊಂದೇ ಇಟ್ಟಿಗೆ ಪೇರಿಸತೊಡಗಿದ್ದ.
ಆಕೆ ಅಸ್ತವ್ಯಸ್ಥಗೊಳ್ಳತೊಡಗಿದಳು.
ಪೇರಿಸಿದ ಇಟ್ಟಿಗೆಗಳನ್ನು ಕಿತ್ತಿ ತೆಗೆದಿಡಲು ನೋಡಿದಳು.
ಅವ ಪೇರಿಸುವುದನ್ನು ನಿಲ್ಲಿಸಲಿಲ್ಲ.
ಗೋಡೆ ಏಳಗೊಡಬಾರದೆಂಬ ಅವಳ ಎಲ್ಲ ಪ್ರಯತ್ನಗಳೂ ವಿಫಲವಾಗಿ, ಸಾಲಾಗಿ ಇಟ್ಟಿಗೆಗಳ ಸಂಖ್ಯೆ ಹೆಚ್ಚಾಗತೊಡಗಿತು.
ಸರಿ, ಅವನು ಹತ್ತು ಇಟ್ಟಿಗೆ ಪೇರಿಸಿದರೆ ಇವಳೂ ಸಹನೆಗೆಟ್ಟು ಅದಕ್ಕೆ ಒಂದೊಂದು ಇಟ್ಟಿಗೆ ಜೋಡಿಸತೊಡಗಿದಳು.
ಅತ್ತ ಹತ್ತಾದರೆ ಇತ್ತ ಒಂದು. 
ಅಂತೂ ಇಬ್ಬರೂ ಸೇರಿ ತಮ್ಮಿಬ್ಬರ ನಡುವೆ ಗೋಡೆ ಕಟ್ಟಿಕೊಂಡೇಬಿಟ್ಟರು. 
ಇಬ್ಬರಿಗೂ ಗಾರೆ ಕೆಲಸ ಗೊತ್ತಿಲ್ಲ. 
ಗೋಡೆ ನಡುವೆ ಬಿಟ್ಟುಕೊಂಡ ಕಿಂಡಿಗಳ ಸಂದಿಯಿಂದ ಎರಡೂ ಬದಿಯ ಲೋಕದರ್ಶನ ಅವರವರಿಗೆ ದಕ್ಕಿದಷ್ಟು ಈಗ.


-      ಜಯಲಕ್ಷ್ಮೀ ಪಾಟೀಲ್.

6 comments:

Srikanth Manjunath said...

ಬೇಡ ಎನ್ನುವ ತಡೆಗೋಡೆಗಳು ಕೆಲವೊಮ್ಮೆ ಪರ್ಪಂಚ ದರ್ಶನಕ್ಕೆ ಅನುವು ಮಾಡಿಕೊಡುತ್ತದೆ
ಬೇಕು ಬೇಕು ಎನ್ನುವ ಸಂಧಿಗಳು ವಿಶ್ವ ದರ್ಶನಕ್ಕೆ ದಾರಿ ಮಾಡಿಕೊಡುತ್ತದೆ
ಒಂದು ಭೂತಕಾಲ ಒಂದು ವರ್ತಮಾನ.. ಭವಿಷ್ಯ ಗೋಡೆ ಮತ್ತು ಸಂಧಿಗಳ ಮಧ್ಯೆ ಮಾಸಗಳು ಉರುಳುತ್ತವೆ

ಒಂದು ಆನೆಯನ್ನು ಮುಟ್ಟಿ ನೋಡಿದ ಹಾಗೆ.. ಪ್ರತಿ ಬಾರಿಯೂ ಒಂದು ಬಗೆಯಲ್ಲಿ ಪ್ರತಿಧ್ವನಿಸುತ್ತದೆ ಈ ಕಥಾ ಸಾರಾಂಶ

ಸೂಪರ್ ಮೇಡಂ

Jayalaxmi said...

ತುಂಬಾ ಥ್ಯಾಂಕ್ಸ್ ಶ್ರೀಕಾಂತ್. :)

Badarinath Palavalli said...

ಕೆಲ ಗೋಡೆಗಳು ಕೋಟೆಗಿಂತಲೂ ದಪ್ಪ ಮತ್ತು ಕುಂಡಿ ರಹಿತ! ಗೋಡೆ ಎಷ್ಟು ಎತ್ತರವೆಂದರೆ ಆ ಕಡೆ ಗಾಳಿಯೂ ಈ ಕಡೆ ಸುಳಿಯಲಾರದು!

Jayalaxmi said...

ನಿಜ ಬದರಿ...

ಮನಸಿನಮನೆಯವನು said...

ಮನಮನಗಳ ನಡುವೆ ನಾವೇ ಕಟ್ಟಿಕೊಂಡ ಗೋಡೆ-ಸಂಬಂಧದ ಸೇತುವೆ. . ಏನೇ ಮಾಡಿದರೂ ಉದುರದೇ ಅದುರದೆ ದೃಢವಾಗಿ ನಿಂತ ಗೋಡೆ-ಆತ್ಮಸ್ತೈರ್ಯ.

Jayalaxmi said...

ಹೌದು ಗುರುಪ್ರಸಾದ್.