Saturday, April 16, 2016

ಕಟ್ಟೇಯ ಒಡೆಯುತ...



ನುಡಿ ಕಟ್ಟೆ ನಿನ್ನ ನಡೆ ಕಟ್ಟೆ
ನಿನ್ನ ಕನಸುಗಳಿಗೆ ಇಲ್ಲ ಮಾರುಕಟ್ಟೆ
ಹೆಣ್ಣೆ ನಿನ್ನ ಕನಸುಗಳಿಗೆ ಇಲ್ಲ ಮಾರುಕಟ್ಟೆ ||ಪ||


ಹೂವೆ ಅಂದರು ನಿನ್ನ ಹಲ್ಲುಬಿಟ್ಟೆ ನೀನು
ಹೆಡೆಮುರುಗಿ ಕಟ್ಟಿದಾಗ ಕಣ್ಕಣ್ಣ ಬಿಟ್ಟೆ
ಹೆಣ್ಣೆ ಹೆಡೆಮುರುಗಿ ಕಟ್ಟಿದಾಗ ಕಣ್ಕಣ್ಣ ಬಿಟ್ಟೆ ||೧||


ಹೊನ್ನು ಅಂದರು ನಿನ್ನ ಹಿಗ್ಗಿಬಿಟ್ಟೆ ನೀನು
ಹೊಸ್ತಿsಲ ಸೆರೆ ಕಂಡು ಗೋಳಿಟ್ಟೆ
ಹೆಣ್ಣೆ ಹೊಸ್ತಿsಲ ಸೆರೆ ಕಂಡು ಗೋಳಿಟ್ಟೆ ||೨||


ಸಿರಿದೇವಿ ಅಂದಾಗ ಜಂಭಪಟ್ಟೆ ನೀನು
ಕೈಯಲ್ಲಿ ಕಾಸಿಲ್ದೆ ಕಂಗೆಟ್ಟೆ
ಹೆಣ್ಣೆ ಕೈಯಲ್ಲಿ ಕಾಸಿಲ್ದೆ ಕಂಗೆಟ್ಟೆ ||೩||


ಸರಸೊತಿ ಅಂದಾಗ ಸೋತುಬಿಟ್ಟೆ ನಿನ್ನ
ಶಾಲೆsಗೆ ಕಳುಹಲಿಲ್ಲ ಬರಗೆಟ್ಟೆ
ಹೆಣ್ಣೆ ಶಾಲೆsಗೆ ಕಳುಹಲಿಲ್ಲ ಬರಗೆಟ್ಟೆ ||೪||


ತಾಯೇ ಅಂದಾಗ ನೀನು ತೇಲಿಬಿಟ್ಟೆ ನಿನ್ನ
ತಟ್ಟಿ ತುಳಿದಾಗಲೆಲ್ಲ ತಾಳಿ ಕೆಟ್ಟೆ
ಹೆಣ್ಣೆ ತಟ್ಟಿ ತುಳಿದಾಗಲೆಲ್ಲ ತಾಳಿ ಕೆಟ್ಟೆ ||೫||


ಸಹನೇಯ ಪಟ್ಟಕ್ಕೆ ತಲೆಕೊಟ್ಟೆ ನೀನು
ಸಹಗಮನ ಸತಿಯಾಗಿ ಸುಟ್ಟು ಸತ್ತೆ
ಹೆಣ್ಣೆ ಸಹಗಮನ ಸತಿಯಾಗಿ ಸುಟ್ಟು ಸತ್ತೆ ||೬||


ಹೂವಾಗು ಹೊನ್ನಾಗು ಸಿರಿದೇವಿಯೆ ತಾಯಿ
ಕನ್ನಡಿ ಹರಳಾಗು ಸರಸೊತಿಯೆ
ಮನದ ಕನ್ನಡಿ ಹರಳಾಗು ಸರಸೊತಿಯೆ ||೭||


ಕಟ್ಟೇಯ ಒಡೆಯುತ ಬದುಕ ಕಟ್ಟೆ ನೀನು
ನುಡಿಯಾಗಿ ನಡೆಯಾಗಿ ಜಗವ ಕಟ್ಟೆ
ದಿಟ್ಟ ನುಡಿಯಾಗಿ ನಡೆಯಾಗಿ ಜಗವ ಕಟ್ಟೆ ||೮||


-ಜಯಲಕ್ಷ್ಮೀ ಪಾಟೀಲ್

ಚಿತ್ರಕಾರ: ಧೃವ್ ಸೂರಿ, ಗೂಗಲ್‍ನಿಂದ


No comments: