Friday, July 8, 2016

ನಿರ್ವಾತದ ಗಾಳಿ

ಇದ್ದಕ್ಕಿದ್ದಂತೆ ಮೆಟ್ಟಿಕೊಳ್ಳುತ್ತದೆ ನಿರ್ವಾತದ ಗಾಳಿ
ಶ್ಯೂನ್ಯದೆಡೆಗೆ ಸಾಗುವ ದಾರಿಯಲ್ಲಿ ಆಗಾಗ
ಎದುರಗುವ ಮೈಲುಗಲ್ಲಿನಂತೆ ಧುತ್ತೆಂದು 
ಪ್ರತ್ಯಕ್ಷಗೊಂಡು ದಾಟಿ ಮುಂದೆ ಸಾಗಿ ಇನ್ನೆಲ್ಲೋ
ಕಳೆದುಹೋಗುವವರೆಗೂ ಕಾಡುತ್ತಲೇ ಇರುತ್ತದೆ
ಏನನ್ನು ಸೂಚಿಸುತ್ತದೆ?
ಸವೆದ ದಾರಿಯನೋ ಸವಿಸಬೇಕಾದುದನ್ನೋ?
ಬದುಕಿನ ಫಲವ ಪ್ರತಿಫಲಿಸಲೆಂದೇ ಸಪಾಟಾಗಿ ಕನ್ನಡಿಯಂತೆ
ನಿಂತ ಅಸಂಖ್ಯ ಸಂಖ್ಯೆ ಬರೆಯದ ಮೈಲುಗಲ್ಲುಗಳು
ಬಿಂಬಗಲ್ಲಿನಲ್ಲಿ ಶ್ಯೂನ್ಯ ಬಿಂಬ!
ನಕ್ಕು ನಗಿಸಿ ಅತ್ತು ಅಳಿಸಿ ಸುಖವನರಸಿ ಆಲಂಗಿಸಿದ್ದು
ಪದಗಳ ಪೋಣಿಸಿ ಧರಿಸಿದ್ದು ಅನ್ಯರ ಮೆರೆಸಿದ್ದು ಮೆರೆದಿದ್ದು
ಅಲ್ಲಲ್ಲಿ ಧ್ವಜನೆಟ್ಟು ಮಟ್ಟ ಹಾಕಲು ಬಂದವರ ಮೆಟ್ಟಿ ನಿಂತೆನೆಂದು ಅಟ್ಟ ಹತ್ತಿದ್ದು
ಸುಟ್ಟು ಹೋದವೇ ಹಿಂದೆ ಹಿಂದೆಯೇ ಹೆಜ್ಜೆ ಸಾಗಿದಂತೆ ಮುಂದೆ ಮುಂದೆ!
ಇದುವೇನೇ ಶ್ಯೂನ್ಯ ಸಂಪಾದನೆ? ಮತ್ತೆ
ಎತ್ತ ಸಾಗಲೆಂದು ಈ ಎದುರಿಗಿರುವ ದಾರಿ? ಇನ್ನೆಷ್ಟು ಹರದಾರಿ...?


-ಜಯಲಕ್ಷ್ಮೀ ಪಾಟೀಲ್