Wednesday, September 21, 2016

ಗೋಪಾಲ್ ವಾಜಪೇಯಿ ಕಾಕಾ...

ವಾಜಪೇಯಿ ಕಾಕಾ...
ನಾ ನಿಮ್ಮನ್ನ ಮದ್ಲೆ ಸರ್ತಿ ಭೆಟ್ಟಿ ಆಗಿದ್ದು ಯಾವಾಗ ಅಂತ ನೆನಪ ಆಗವಲ್ತು... :( ನಿಮ್ಮನ್ನ ಕಾಕಾ ಅಂತ ನಾನs ಮೊದಲ ಕರ್ದಾಕಿ. ಆಮ್ಯಾಲೆ ಎಲ್ಲಾರಿಗೂ ಇಲ್ಲಿ ನೀವು ಕಾಕಾ ಆದ್ರಿ. ಇನ್ನ ಕೆಲವು ಮಂದಿಗೆ ಮಾಮಾ ಆದ್ರಿ, ದೊಡ್ಡಪ್ಪ ಆದ್ರಿ, ಅಜ್ಜಾರಾದ್ರಿ, ಗೋ ವಾ ಸರ್ ಅಂತೂ ಸುರೂನಿಂದ ಇದ್ದ್ರಿ.

ಅವತ್ತ ನೆನಪೈತಿ ನಿಮಗ? ಸುನಿಲನ ಹುಟ್ಟಿದ ಹಬ್ಬಾ ಅಂತ ಅಂವಾ ನಮ್ಮೆಲ್ಲಾರ್ನೂ ಕರ್ದಿದ್ದ. ಮರದಿನಾನs ನಮ್ಮನ್ಯಾಗ ‘ಸಂಗೀತ ಸಂಜಿ’ ಇತ್ತು. ಬರ್ರಿ ಕಾಕಾ ಮನಿಗೆ ಅಂದೆ ನಾ. "ಒಬ್ಬಾಂವಗ ಮನಿ ಹುಡುಕ್ಕೊಂಡು ಬರೂದು ಆಗುದಿಲ್ಲ ಜಯಕ್ಕಾ, ಯಾರರ ಜೋಡ ಆದ್ರ ಬರ್ತೀನಿ" ಅಂದ್ರಿ. ನಿಮ್ ಬಾಜೂಕ ನವೀನ್ ಸಾಗರ್ ಕುಂತಿದ್ದ್ರು. ಅವ್ರಿಗೆ ಕೇಳ್ಕೊಂಡೆ. ನವೀನ್ ಹೂಂ ಅಂದೋರು ಅದೇನಾತೋ ಬರ್ಲಿಲ್ಲ, ಆದ್ರ ನೀವು ಬಂದ್ರಿ ಮಗನ್ನ ಕರ್ಕೊಂಡು. ಎಷ್ಟು ಖುಷಿ ಆತಂತೀರಿ ಅವತ್ತ! ಬಂದ್ರಿ, ಭಾರಿ ಖುಷೀಲೆ ಹಾಡಾ ಕೇಳಿದ್ರಿ. ರಮೇಶ್ ಗುರುರಾಜ್ ಸರ್ ರಂಗಗೀತೆ ಹಾಡಿದಾಗಂತೂ ನಿಮ್ಮಾರಿ ನೋಡುವಂಗಿತ್ತು! ಕೂಸಿಗೆ ಜಾತ್ರ್ಯಾಗ ಕಳ್ಕೊಂಡ ಅವ್ವ ಸಿಕ್ಕಷ್ಟು ಖುಷಿ ಇತ್ತು ನಿಮ್ಮ ಮಾರಿ ಮ್ಯಾಲೆ. ಕಣ್ಣಿಗೆ ಕಟ್ಟಿದಂಗೈತಿ ಅವತ್ತಿನ ನಿಮ್ಮ ಖುಷಿ. ಈಗ ಹಿಂಗ ನಾ ಮಾರಿ ಇಳಬಿಟಗೊಂಡು ಕುಂಡ್ರುವಂಗ ನೀವು ಮಾಡಿದ್ದು ನಿಮಗರ ಬರೊಬ್ಬರಿ ಅನಸ್ತೈತಿ?...

ನಿಮ್ಮ ‘ನಂದ ಭೂಪತಿ’ ಪುಸ್ತಕ ಹೊಳ್ಳಿ ಮತ್ತೊಮ್ಮೆ ಬಿಡುಗಡೆ ಆತಲ್ಲ ಅವತ್ತ, ಅದs ಸುಧಾ ಚಿದಾನಂದ ಗೌಡ ಮತ್ತ ಅವ್ರ ಮನಿಯವ್ರುದೂ ಪುಸ್ತಕ್‍ಗೋಳೂ ಬಿಡುಗಡೆ ಆದ್ವೂ, ಅವತ್ತ ನಾ ಮಂಗ್ಯಾನಂಥಾಕಿ ಭರ್ತಿ ಸಭಾದಾಗ, ಕುಂವಿ ಅವ್ರು ಹಿಂಗಂದ್ರು ಅಂತ ಯಾರೋ ಅಂದ ಮಾತಿಗೆ ಸಿಟ್ಟಾಗಿ, ಹಂಗೆಂಗಂದ್ರು ಅವ್ರು? ಅನಬಾರ್ದಿತ್ತು, ಹಂಗ ಹಿಂಗ ಅಂತ ಮೈಕ್ ಮುಂದ ನಿಂತು ಒದರ್ಯಾಡಿದೆ. ಹಂಗ ಮಾತಾಡ್ತಾ ಮಾತಾಡ್ತಾ ನಿಮ್ ಕಡೆ ನೋಡ್ದೆ. ನೀವು ಸಾಕ್ ಬಿಡಬೆ ಇನ್ನ ಅಂತ ಸೊನ್ನಿ ಮಾಡಿ ನನ್ನ ಗಪ್ಪ್ ಮಾಡಿದ್ದಲ್ದ, ಅಲ್ಲಿ ನಾ ಹಂಗ ವಿರೋಧಿಸಿ ಮಾತಾಡಿದ್ದಕ್ಕ ಸಿಟ್ಟಾದ ಒಂದಿಬ್ಬರನ್ನ ನನ್ನ ಪರ ನಿಂತು ಸುಮ್ಮ ಮಾಡಿದ್ರಿ. ಆಮ್ಯಾಕ ನಿಮಗ ನನ್ನಿಂದ ನಾಕ್ ಮಂದ್ಯಾಗ ಖಜೀಲ್ಯಾತು ಅನಿಸಿ, ಸಭಾ ಮುಗದ ಮ್ಯಾಲೆ, "ಕಾಕಾ, ನಾ ತಡಕೊಳ್ಳಾಕಾಗದ ಹೆಚ್ಚಿಗ್ ಮಾತಾಡ್ದೆ. ನನ್ನಿಂದ ನೀವು.."
"ಏನಾತ್ ತೊಗೊ ಜಯಕ್ಕಾ. ಆಕ್ಕಿರ್ತಾವು ಹಿಂಗ. ಅದನ್ನ ತಲಿಯೊಳಗ ಇಟಕೊಂಡು ಕುಂಡರ್ಬ್ಯಾಡ್ರಿ. ಹೋಗ್ಲಿ ಬಿಡ್ರಿ" ಅಂತ ಉಲ್ಟಾ ನನ್ನನ್ನs ಸಮಾಧಾನ ಮಾಡಿ ಸರಾಸರಾ ಅಲ್ಲಿಂದ ನಡದುಹೋದ್ರಿ. ಮತ್ತ ಬೇಕಾದಷ್ಟ ಸಲ ಸಿಕ್ಕ್ರಿ, ನಕ್ಕೋತ ಮಾತಾಡಿಸಿದ್ರಿ. ಆದ್ರ ಈಗ ಹಿಂಗ್ಯಾಕ ಹೊಡಮಳ್ಳಿ ಬರಾಕ ದಾರಿಲ್ಲದ ಊರಿಗೆ ನಡದ್ರಿ...?

ಅವತ್ತ ಮದ್ಯಾನ ಅನಸ್ತೈತಿ, ಫೋನ್ ಮಾಡಿದ್ರಿ. "ಜಯಕ್ಕಾ, ನನ್ನ ‘ಸಂತ್ಯಾಗ ನಿಂತಾನ ಕಬೀರ’ ನಾಟ್ಕಾ ರೀಡಿಂಗ್ ಮಾಡಿದ್ರ ಹೆಂಗ?" ಅಂದ್ರಿ. ನಾ ಗಬಗ್ನ ಒಪಗೊಂಡೆ. ಇಬ್ರೂ ಸೇರೇ ಒಂದಿಷ್ಟು ಮಂದಿ ಉತ್ತರ ಕರ್ನಾಟಕದ ಕಲಾವಿದರನ್ನ ಕೇಳಿದ್ವ್ಯಾದ್ರೂ ನೀವು ಕೇಳಿದಾಗ ಒಪಗೊಂಡು ಬಂದೋರ ಹೆಚ್ಚು. ನಮ್ಮನ್ಯಾಗs ರೀಡಿಂಗ್ ಆತು. ಮಂಜುಳಾ ಬಬಲಾದಿ, ಶ್ರೀಪತಿ ಮಂಜನಬೈಲು, ಧನಂಜಯ್ ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ದಿಲಾವರ್, ರಾಜು ಕುಲಕರ್ಣಿ, ನೀವು, ನಾನು, ಮತ್ತ್ಯಾರಿದ್ದ್ರು...? ಮರತಿನ್ರಿ ಕಾಕಾ, ನೆನಪಾಗವಲ್ತು.. ರಾಜು ಕುಲಕರ್ಣಿ ಅವರಂತೂ ಹೊಸ್ಪೇಟಿಯಿಂದ ಬಂದಿದ್ದ್ರು. ನಾವೆಲ್ಲಾರು ನಾಟ್ಕಾ ವಾಚನಾ ಮಾಡಿದ್ವಿ, ಒಂದಿಷ್ಟು ಮಂದಿ ಹಚಗೊಂಡೋರು ಬಂದು ಕೇಳಿ ಭಲೆ ಅಂದ್ರು. ಮತ್ತೊಂದು ಖುಷಿ ನನ್ನ ಉಡ್ಯಾಗ ಹಾಕಿದ್ರಿ ನೀವು ಅವತ್ತ. ಇವತ್ತ್ಯಾಕ ಹಿಂಗ ಮಾಡಿದ್ರಿ...?

ಮಗನ ಮದವಿ ಮಾಡಿ, ನಮ್ಮನ್ನೆಲ್ಲಾ ಮನಿಗೆ ಕರ್ಶಿ ಊಟಾ ಹಾಕಿಶಿದ್ರಿ. ಫೋನ್ ಮಾಡೀದಾಗೆಲ್ಲಾ ನಕ್ಕೋತ ಮಾತಾಡಿದ್ದ್ರಿ, ಒಮ್ಮೆ ಫೋನ್ ಮಾಡಿದ್ದಾಗ ನಿಮಗ ಆರಾಮ್ ತಪ್ಪಿತ್ತು. ಸುಸ್ತ್ ಆಗಿದ್ದ್ರೂ ಬ್ಯಾಸರಾ ಮಾಡ್ಕೊಂಡಾಳು ಅಂತ ಭಿಡೇಕ್ ಬಿದ್ದು ನೀವು ದಣದ ದನ್ಯಾಗ ಮಾತಾಡೂದು ಕೇಳಿ ನಾನs ‘ರೆಸ್ಟ್ ಮಾಡ್ರಿ ಕಾಕಾ ನಾ ಮತ್ತ ಮಾತಾಡ್ತೀನಿ.’ ಅಂತ ಫೋನ್ ಇಟ್ಟಾಕಿ ಮತ್ತ ನಿಮಗ ಫೋನ್ ಮಾಡೂದು ಆಗಲಿಲ್ಲ...

ಧನಂಜಯ್ ಹೇಳಿದ್ರು ಅವತ್ತ, ನೀವು ‘ಬಚ್ಚಾಸಾನಿ’ ನಾಟ್ಕಾ ಬರ್ದು, ಧನಂಜಯ್ ನಿರ್ದೇಶನ ಮಾಡಿ, ನಾನು ಮತ್ತ ಹನುಮಕ್ಕ ಇಬ್ರೂ ಒಂದs ಪಾತ್ರಾನ ಬ್ಯಾರೆ ಬ್ಯಾರೆ ಶೋ ಮಾಡೂದು ಅಂತ. ಅವತ್ತ ಖುಷೀಲೆ ಕುಣಕೋತ ಹೂಂ ಅಂದಿದ್ದೆ. ಯಾಕೊ ತಡಾ ಆಗಾಕತ್ತೈತಲ್ಲಾ ಅಂತ ಅನಿಸಿ ನಿಮ್ಮನ್ನ ಕೇಳಿದ್ರ, "ಧಾರವಾಡದ ಮಂದಿ ಬಗ್ಗೆ ಒಂದಿಷ್ಟು ಬರ್ಯಾಕತ್ತೀನಿ. ಅದನ್ನಿಷ್ಟು ಮುಗಿಶಿಬಿಟ್ಟ್ನೆಪಾ ಅಂದ್ರ ನೆಕ್ಸ್ಟ್ ‘ಬಚ್ಚಾ ಸಾನಿ’ನs. ಮಾಡೂನಂತ ಮಾಡೂನಂತ." ಅಂತಂದ್ರಿ. ಹಂಗಂದೋರು ಹಿಂಗ ಎದ್ದ ಹ್ವಾದ್ರ ಏನ್ ಮಾಡೂನ್ ಹೇಳ್ರಿ ನಾವು...? :(

ಬದುಕು ಭಾಳ ದಣಿಶೇತ್ರಿ ಕಾಕಾ ನಿಮ್ಮನ್ನ, ಹೊಡತದ ಮ್ಯಾಲೆ ಹೊಡತಾ ಕೊಟ್ಟೂ ಸೋತಿದ್ದು ಅದs ಈಗ! ನೀವು ಗೆದ್ದ್ರಿ ಕಾಕಾ, ನೀವು ಗೆದ್ದ್ರಿ...


(ಜೂನ್ ೧, ೧೯೫೧- ಸೆಪ್ಟೆಂಬರ್ ೨೦, ೨೦೧೬)