Wednesday, April 12, 2017

ಮಳೆ ಮತ್ತು ಮಡ್ಡಿ

ಕಾದ ನೆಲವಿದು ಹಸಿದ ಹೆಬ್ಬುಲಿ
ಬಾಯ್ದೆರದು ನಿಂತಿದೆ ಹಂಗಿನಲಿ
ಖಂಡವಿದೆ ಕೊ ಮಾಂಸವಿದೆ ಕೊ
ಗುಂಡಿಗೆಯ ಬಿಸಿ ರಕ್ತವಿದೆ ಕೊ ಎನುವ
ಕಾಮಧೇನುವ ಗದರಿಸಿ ಸುಮ್ಮನಿರಿಸಿ
ಸುರಿವ ಮುಗಿಲಿಗೆ ಕಾದಿದೆ ಗದ್ದೆ
ಗದ್ದವನೆತ್ತಿ ಹಣೆಗೆ ಕೈಯಿರಿಸಿ ಕಣ್ಣು ಕಿರಿಗೊಳಿಸಿ

ಬಿರುಬಿಸಿಲ ನಾಡಲ್ಲಿ ಹನಿಯೊಡಬೇಕಿದೆ
ಕಣ್ಣಾಲಿಯ ಹನಿ ಕೆನ್ನೆಗಿಳುವ ಮುನ್ನ
ಮೋಡ ಕೊಡವಬೇಕು ಮುತ್ತುಗಳ ಮೈಯದುರಿಸಿ
ನವಿರೇಳಬೇಕು ನವಿಲ ಗರಿ ಗರಿಗರಿಯಾಗಿ
ಹೆಜ್ಜೆಯೂರಿದಲೆಲ್ಲ ಗೆಜ್ಜೆಯಲಂಕಾರದ ಕಂದು ಕನ್ನಡಿ
ಪ್ರತಿಫಲಿಸಿ ಮೋಡ ಹಿಗ್ಗಿ ಮತ್ತೆ ಮೈದುಂಬಬೇಕು
ಮಡ್ಡಿ ಮೆದುವಾಗಿ ಹದವಾಗಿ ಮತ್ತೆ ಹೆಣ್ಣಾಗಬೇಕು

- ಜಯಲಕ್ಷ್ಮೀ ಪಾಟೀಲ್
26 March 2017

2 comments:

sunaath said...

ನಿಮ್ಮ ಆಶಯ ಈಡೇರಲಿ, ಮಳೆ ಧರೆಯನ್ನು ತೊಯ್ಯಿಸಲಿ.

Jayalaxmi said...

ಆಮೇನ್! ಹಸಿರು ಕುಡಿಯೊಡೆಯಲಿ ಎಲ್ಲೆಲ್ಲೂ.