Thursday, March 9, 2017

ಮೈಲಿಗೆ

"ಈ ಜನ್ಮದಲ್ಲಿ ಒಂದೇ ಒಂದು ಬಾರಿಯಾದ್ರೂ ಸ್ವಲ್ಪ ಹೊತ್ತು ಸುಮ್ನೆ ನಿಮ್ಮ ಕೈ ಹಿಡ್ಕೊಂಡು ಕೂತ್ಕೋಬೇಕು ನಾನು. ನಿಮ್ಮೂರಿಗೆ ಬಂದಾಗ ಅದಕ್ಕೆ ಅವಕಾಶ ಮಾಡಿಕೊಡ್ತೀರಾ ಪ್ಲೀಸ್? ಪ್ಲೀಸ್..."

ಮರಳಿ ತನ್ನೂರಿಗೆ ಹೋಗುತ್ತಿದ್ದವಳನ್ನು ಆ ಹತ್ತು ದಿನದಲ್ಲಿ ಇಪ್ಪತ್ತು ಬಾರಿ ಕೇಳಿದ್ದ ಅವನು ಆರ್ದ್ರತೆ ತುಂಬಿದ ಕಣ್ಣು ದನಿಯಲ್ಲಿ. ಆಕೆ ಮುಗುಳ್ನಗುತ್ತಾ ಸುಮ್ಮನಾಗುತ್ತಿದ್ದಳು, ಕೆಲವೊಮ್ಮೆ ಮೆಲ್ಲಗೆ ಹೂಂ ಎನ್ನುತ್ತಿದ್ದಳು.

ಆಕೆ ಊರಿಗೆ ಹೋಗುವ ದಿನ ಕಳಿಸಲು ಬಂದವನು ಕೇಳಿದ, "ನೆನಪಿದೆಯಲ್ವಾ?" ಮತ್ತದೇ ಕೋರಿಕೆಯ ಕಣ್ಣು.

ಮುಂದೆ ತಾವು ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ಅನ್ನುವ ಕಳವಳಕ್ಕೀಡಾಗಿ, ಅವನ ಕೋರಿಕೆ ಈಡೇರದೇ ಹೋದರೆ... ಎನಿಸಿ, ಬಸ್ ಬಿಡುವ ಮೊದಲು, "ಹೋಗ್ಬರ್ತೀನಿ" ಎನ್ನುತ್ತಾ ಅವನೆದುರು ನಿಧಾನ ಕೈ ಚಾಚಿದಳು ಸಂಕೋಚವನ್ನು ಅದುಮಿಟ್ಟುಕೊಂಡು.

ಚಾಚಿದ ಕೈ ಸೇರಿದ ಅವನ ಅಂಗೈಯನ್ನು ಮೃದುವಾಗಿ ಒತ್ತಿ, ‘ಇಗೋ, ನಿಮ್ಮಾಸೆ ನೆರವೇರಿಸಿದೆ’ ಎನ್ನುವಂತೆ ನಸುನಗುತ್ತಾ ಅವನತ್ತ ನೋಡಿದಳು ಪ್ರೀತಿಯಿಂದ.

ಅವನ ಮುಖದಲ್ಲಿ ಅಸಹ್ಯದ ಝಳ ಕಂಡು ಕೆನ್ನೆಗೆ ಬಾರಿಸಿಕೊಂಡ ಆಘಾತ! ಥಟ್ಟನೆ ಕೈ ಎಳೆದುಕೊಂಡವಳು, ಮುಖದಲ್ಲಿ ಇಂಗ ಹೊರಟ ನಗೆಯನ್ನು ಬಲವಂತವಾಗಿ ಎಳೆದು ನಿಲ್ಲಿಸಿಕೊಂಡಳು. ಬಸ್ ಚಲಿಸಿ ಅವನು ಕಣ್ಣಿಂದ ದೂರಾಗುತ್ತಿದ್ದಂತೆ ಹಿಡಿದಿಟ್ಟ ಕಣ್ಣೀರು ನಗೆಯನ್ನಳಿಸಿತು.

ಅವನ ತಪ್ಪು ಕಲ್ಪನೆಯಿಂದಾಗಿ ನಿರ್ಮಲ ಪ್ರೀತಿಯೊಂದು ವಿನಾಕಾರಣ ಮೈಲಿಗೆಯ ಪಟ್ಟಿಯಲ್ಲಿ ಸೇರಿಹೋಯಿತು...


- ಜಯಲಕ್ಷ್ಮೀ ಪಾಟೀಲ್