ರೇಶ್ಮೆಯ ನುಣುಪು
ಈ ಸಂಬಂಧಕ್ಕೆ..
ನಾಜೂಕು ಮಾಡಬೇಕು
ಜಾರಿಬೀಳದಂತೆ ಜೋಪಾನವಾಗಿರಬೇಕು
ಅಮೂಲ್ಯ ರೇಶಿಮೆ ಹೊದ್ದಿದ್ದೇನೆ
ಸುಕ್ಕಾಗದಂತೆ, ಕೊಳೆಯಾಗದಂತೆ
ನೋಡಿಕೊಳ್ಳುವ ಆತಂಕದೊಡನೆ
ಸಂಭ್ರಮಿಸುತ್ತಿದ್ದೇನೆ
ರೇಶಿಮೆ ತೊಟ್ಟ ಸುಖವನ್ನು,
ಇಷ್ಟರಲ್ಲೇ ಕಳಚಿ
ಕಪಾಟಿನಲ್ಲಿ ಭದ್ರವಾಗಿಡಬೇಕು
ಮುಚ್ಚಿ ಅನ್ನುವ ವಾಸ್ತವಕ್ಕೆ
ಬೆನ್ನು ಹಾಕಿ..
Wednesday, June 17, 2009
Wednesday, June 10, 2009
ಪುಟಾಣಿ ಪಾರ್ಟಿ.




'Children's film society' ನಿರ್ಮಾಣದ 'ಪುಟಾಣಿ ಪಾರ್ಟಿ' ನಾನು ಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತು ಸಮರ್ಥ ನಿರ್ದೇಶಕರು. ಈ ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರು ಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದ ನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನು ಹೊರಹೊಮ್ಮಿಸಿದ ವ್ಯಕ್ತಿ ಅವರು. ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತು ತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಆ ಎಲ್ಲ ಮಕ್ಕಳು ೫ನೆ ತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. ಮೊದಲು ಅವರಿಗೆ ಚಿತ್ರ ಕತೆಯನ್ನು ಮತ್ತು ಅವರವರ ಪಾತ್ರಗಳನ್ನು ವಿವರಿಸಿ,ಮೂರು ದಿನ ಸತತವಾಗಿ ಮಕ್ಕಳಿಗೆ ಹೇಗೆ ಅಭಿನಯಿಸಬೇಕು ಮತ್ತು ಯಾಕೆ ಹಾಗೆ ಅಭಿನಯಿಸಬೇಕು ಅನ್ನುವುದನ್ನು ಹೇಳಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಎಷ್ಟು ಚೆನ್ನಾಗಿ ರಾಮ್ ಸರ್ ತಯಾರು ಮಾಡಿದ್ದರೆಂದರೆ ಕ್ಯಾಮೆರಾದ ಪರಿಚಯವಿದ್ದ ನಾನು ಮತ್ತು ಭವಾನಿ ಕೆಲವೊಮ್ಮೆ ಗೊಂದಲಗೊಳ್ಳುತ್ತಿದ್ದೆವಾದರೂ ಈ ಮಕ್ಕಳು ಮಾತ್ರ ಅಂಗಳದಲ್ಲಿ ಲಗೋರಿ ಆಡಿದಷ್ಟೇ ಸಹಜವಾಗಿ ಅಭಿನಯಿಸಿಬಿಡುತ್ತಿದ್ದರು!! ರಂಜಿತಾ ಜಾಧವ್, ಶರತ್,ಗುರುದತ್ತ,ಪವನ,ದೀಪಕ್, ಮಮತಾ,ಮನೋಜ್ ಮುಂತಾದ ಮಕ್ಕಳನ್ನು ಮೊದಲ ಸಲ ನೋಡಿದಾಗ ಅವರುಗಳ ಖದರು ಕಂಡು "ಇದೇನಪ್ಪಾ ಈ ಮಕ್ಕಳ ಜೊತೆ ನಾನು ೮-೧೦ ದಿನ ಕಳೆಯಬಲ್ಲೇನಾ?!" ಅನಿಸಿತ್ತು. ಆದರೆ ದಿನ ಕಳೆದಂತೆಲ್ಲ ಈ ಮಕ್ಕಳು ಎಷ್ಟು ಹತ್ತಿರದವರಾದರೆಂದರೆ ಇತ್ತೀಚೆಗೆ ನಾನು ಡಬ್ಬಿಂಗ್ಗಿಗೆ ಅಂತ ಧಾರವಾಡಕ್ಕೆ ಹೋದಾಗ ಎಲ್ಲರೂ ಸಂಜೆ ಬಂದು ನನ್ನೊಡನೆ ಎರಡು ಗಂಟೆಗಳ ಕಾಲ ಹರಟೆ ಹೊಡೆಯುತ್ತಾ ಕುಳಿತರು.ನಾನೇ "ಹೊತ್ತಾಗುತ್ತೆ ಹೋಗ್ರೋ ಇನ್ನ ಮನೆಗೆ" ಅಂತ ಬಲವಂತ ಮಾಡಿ ಕಳಿಸಬೇಕಾಯಿತು(ಆಗ ಅವರಿಗೆಲ್ಲ ಪರೀಕ್ಷೆಯ ಸಮಯ ಬೇರೆ!!)
ರಂಜಿತಾ ಧಾರವಾಡದ ಒಂದು ಅಪ್ಪಟ ಪ್ರತಿಭೆ. ಈ ಹುಡುಗಿಗೆ ಎಂಥಾ ಆತ್ಮವಿಶ್ವಾಸ ಮತ್ತು ಅಭಿನಯದ ತುಡಿತವೆಂದರೆ ಇಡೀ ಯುನಿಟ್ಟೆ ( ಚಿತ್ರ ತಂಡ ) ಬೆರಗಾಗುತ್ತಿತ್ತು ಈಕೆ ಅಭಿನಯಿಸುವಾಗ. ರಂಜಿತಾ ಈ ಚಿತ್ರದಲ್ಲಿ ನನ್ನ ಮಗಳ ಪಾತ್ರ(ಗೀತಾ) ನಿರ್ವಹಿಸಿದ್ದಾಳೆ. ಒಂದು ಶಾಟ್.. ರಂಜಿತಾ ಸಭಿಕರೆದುರು ನಿಂತು ಊರಲ್ಲಿಯ ಅನಾನುಕೂಲತೆಗಳಿಂದಾಗಿ ಮಕ್ಕಳಿಗಾಗುತ್ತಿರುವ ತೊಂದರೆಗಳನ್ನು ವಿವರಿಸುತ್ತಿರುತ್ತಾಳೆ. ಮೈಲುದ್ದದ ಸಂಭಾಷಣೆ ಅದು. ಸರಾಗವಾಗಿ,ಭಾವಪೂರ್ಣತೆಯಿಂದ ಎಂಥಾ ಅದ್ಭುತವಾಗಿ ಅಭಿನಯಿಸುತ್ತಿದ್ದಾಳೆ ಎಂದು ನಾವೆಲ್ಲ ಬಿಟ್ಟ ಕಣ್ಣಿಂದ ನೋಡುತ್ತಿರುವಾಗಲೇ " ಕಟ್" ಅನ್ನುವ ರಾಮ್ ಸರ್ ಅವರ ಸಿಟ್ಟಿನ ಧ್ವನಿ ಕೇಳಿ ಬೆಚ್ಚಿಬಿದ್ದೆವು! ಅಲ್ಲಿವರೆಗೂ ರಾಮ್ ಸರ್ ಸಿಟ್ಟಲ್ಲಿದ್ದುದನ್ನ ನಾನು ಕಂಡೆ ಇರಲಿಲ್ಲ.. ಅವರ ಆ ಕೋಪಕ್ಕೆ ಕಾರಣ ಅಷ್ಟು ಅದ್ಭುತವಾಗಿ ಅಭಿನಯಿಸುತ್ತಿದ್ದ ರಂಜಿತಾಳ ಬಗಲಲ್ಲಿ ಇರಬೇಕಾದ ಚೀಲವೊಂದು ಸಹಾಯಕ ನಿರ್ದೇಶಕರ ಮರೆವಿನಿಂದಾಗಿ ಮಿಸ್ ಆದುದು. ಮತ್ತೆ ಆ ಮಗು ಅಷ್ಟುದ್ದದ ಡೈಲಾಗ್ ಅನ್ನು ಅಷ್ಟೆ ತನ್ಮಯತೆಯಿಂದ ಹೇಳಬಲ್ಲುದಾ? ಅನ್ನುವ ಆತಂಕ ಆ ಸಿಟ್ಟಿಗೆ ಕಾರಣ . ಆದರೆ ರಂಜಿತಾ ಮೊದಲಿನಷ್ಟೇ ತನ್ಮಯತೆಯಿಂದ ಮತ್ತೆ ಅಭಿನಯಿಸಿದಳು!
ಏಳನೇ ಕ್ಲಾಸ್ನಲ್ಲಿ ಓದುತ್ತಿರುವ ಶರತ್ ಒಳ್ಳೆ ನುರಿತ ನಟನೇನೋ ಎನ್ನುವಷ್ಟು ಆತ್ಮವಿಶ್ವಾಸದಿಂದ ಅಭಿನಯಿಸಿದ ಹುಡುಗ. ಗುರುದತ್ತ, ಪವನ, ದೀಪಕ್, ಮನೋಜ್ ಮತ್ತು ಮಮತಾ ಕೂಡಾ ಅಷ್ಟೆ , ಒಳ್ಳೆಯ ನಟರು, ವಿನಯವನ್ನು ಮೈಗೂಡಿಸಿಕೊಂಡ ಮಕ್ಕಳು.
ಈ ಚಲನಚಿತ್ರ ಕನ್ನಡದ್ದಾದರೂ ನಟವರ್ಗ ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಚಿತ್ರ ತಂಡದ ಉಳಿದೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದವರು ಎನ್ನುವುದು ವಿಶೇಷತೆ. ೧೮ ದಿನಗಳ ಕಾಲ ಧಾರವಾಡದಲ್ಲಿ ಮಿನಿ ಭಾರತ ನೆಲೆಯೂರಿತ್ತು!! :-)
ತಿಂಗಳೋಪ್ಪತ್ತಿನಲ್ಲಿ ಈ ಚಿತ್ರದ ಬಿಡುಗಡೆಯ ನಿರೀಕ್ಷೆ ಇದೆ. ಈ ಚಿತ್ರ ನಿರ್ಮಾಣದ ವೇಳೆಯ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮತ್ತೆ ಬರೆಯುತ್ತೇನೆ..
Tuesday, May 19, 2009
ಮಗಳಿಗೊಂದು ಬಹಿರಂಗ ಪತ್ರ.

ಗೊಂಬೆ,
ನಾನು ಹೀಗೆ ನಿನಗೆ ಬರಹದ ಮೂಲಕ ಹೇಳುತ್ತಿರುವುದು ಹೊಸದಲ್ಲವಾದ್ದರಿಂದ ನಿನಗೆ ಯಾವ ಆಶ್ಚರ್ಯವೂ ಆಗದೆಂದು ಗೊತ್ತು ನನಗೆ. ನಾವಿಬ್ಬರೂ ಕೆಲವು ವಿಷಯಗಳನ್ನ ಪರಸ್ಪರ ನೇರವಾಗಿ ಹೇಳಿದರೆ ಎಲ್ಲಿ ಆಭಾಸ ಆಗುತ್ತೋ ಅನ್ನೋ ಕಾರಣಕ್ಕೆ ಆಗಾಗ ಹೀಗೆ ಬರೆದು ಹೇಳ್ಕೊಳ್ತೇವೆ ಆಲ್ವಾ? ಆದರೆ ನಾನು ಹೀಗೆ ಬಹಿರಂಗವಾಗಿ ಎಲ್ಲರೂ ಓದುವಂತೆ ಬರೆದಿರುವುದನ್ನು ಕಂಡು ಮುಜುಗರವಾಗ್ತಿದೆಯಾ? ನಾನು ಹೀಗೆ ಬರೆಯೋಕೆ ಕಾರಣ ಇದೆ ಕಂದ. ಓದುತ್ತಾ ಹೋಗು ನಿನಗೆ ಅರ್ಥ ಆಗುತ್ತೆ..
ಇಷ್ಟು ದಿನ ಈ ನಿನ್ನ ಅಮ್ಮ ಪೂರ್ತಿ ಅಲ್ಲದಿದ್ದರೂ ಹೆಚ್ಚಿನಂಶ ನಿನ್ನ ಕುರಿತು ನೆಮ್ಮದಿಯಿಂದಾನೆ ಇದ್ದಳು. ಕಾರಣ ನೀನು ಈವರೆಗೆ ಇದ್ದ ವಾತಾವರಣ. ಸ್ಕೂಲು,ಹೈಸ್ಕೂಲು ಮನೆ ಮುಂದಿನ ತೋಟವಿದ್ದಂತೆ, ಅಲ್ಲಿ ಅನಾಹುತ ಅಪಘಾತಗಳ ಸಂಭವ ಇಲ್ಲ ಅಥವಾ ಕಮ್ಮಿ ಅನ್ನೊ ನಿರಾಳತೆ. ಆದರೆ ಇನ್ನು ಮುಂದೆ ನೀನು ಕಾಲೇಜು ಮೆಟ್ಟಿಲು ತುಳಿಯುವಾಕೆ. ಅಲ್ಲಿಗೆ ಮಗು, ಮನೆಯಂಗಳದ ತೋಟ ದಾಟಿ ನಗರದ ಕಾಡಿನೊಳಗೆ ಕಾಲಿಡುತ್ತಿದ್ದೀಯಾ, ಜೋಪಾನ ಅಲ್ಲಿ ಜೀವನಕ್ಕಾಧಾರವಾದ ಅನೇಕ ಥರದ ಹಣ್ಣು , ಹಂಪಲು, ವನಸ್ಪತಿಗಳಿವೆಯಾದರೂ ಕಾಡು ಮೃಗಗಳೂ ಬೇಟೆಗೆ ಹೊಂಚಿ ಕುಳಿತಿರುತ್ತವೆ.. ನಾನು ಹೇಳುತ್ತಿರುವ ಧಾಟಿ ಸ್ವಲ್ಪ ಕ್ಲೀಷೆ ಆಗ್ತಿದೆಯಲ್ವಾ? ಇರು ಸರಳವಾಗಿ ಹೇಳೋ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ನೀನೀಗ ನಿನಗೆ ಹೊಸದು ಎನಿಸುವ ಪ್ರಪಂಚಕ್ಕೆ ಕಾಲಿಡ್ತಿದೀಯಾ. ನಿನ್ನ ಸಂಭ್ರಮ, ದುಗುಡ ಎರಡೂ ಅರ್ಥ ಆಗ್ತವೆ ನನಗೆ. ನಾನೂ ಹಿಂದೆ ನಿನ್ನ ಈ ಸ್ಥಿತಿಯನ್ನು ದಾಟಿ ಬಂದವಳೇ ಅಲ್ಲವೇ? ಸಂಭ್ರಮ ಸಹಜ ಹಾಗೆಯೇ ದುಗುಡವೂ. ಭಯ ಬೇಡ ಪುಟ್ಟಾ ನಿನ್ನ ಜೊತೆ ನಾನಿದೀನಿ , ನಿನ್ನ ಅಪ್ಪಾಜಿ ಇದಾರೆ ನಿನ್ನ ಪುಟ್ಟ ಭಾವ ಜೀವದಾಸರೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಲು. ಆದರೆ ಎಲ್ಲವನ್ನೂ ನಾವೇ ಮಾಡಲಾಗುವುದಿಲ್ಲ ಆಲ್ಲವೆ? ನಿನ್ನನ್ನು, ನಿನ್ನತನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಈಗ ಸಂಪೂರ್ಣ ನಿನ್ನದೇ. ನೀನು ತಿಳಿದಷ್ಟು ಈ ಲೋಕ ಸರಳವಾಗಿಲ್ಲ, ಸುಂದರವೂ ಅಲ್ಲ. ನಾನು ಹೀಗೆ ಹೇಳ್ತಿದೀನಿ ಅಂದ ಮಾತ್ರಕ್ಕೆ ಭಯಾನಕವೂ ಆಗಿಲ್ಲ ಬಿಡು. ಪಿಯುಸಿಯಲ್ಲಿ ನಿನ್ನ ಜೋತೆಗಿರೋರೆಲ್ಲ ನಿನ್ನ ಹಾಗೇನೇ ಒಂದು ಆತಂಕ ಹೊತ್ತೇ ಮೊದಲ ದಿನ ಕ್ಲಾಸಿಗೆ ಹೆಜ್ಜೆ ಇಟ್ಟಿರ್ತಾರೆ. ಮೊದಲಿದ್ದ ಸ್ನೇಹಿತರಿಲ್ಲ ಇಲ್ಲಿ. ಎಲ್ಲರೂ ಎಲ್ಲರಿಗೂ ಹೊಸಬರೇ. ಹೀಗಾಗಿ ಮೊದಲಿನ ವಾತಾವರಣ ಮರೆತು ಹೊಸದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಾಗಬಹುದೇನೋ. ಭಯ ಬೇಡ, ಸ್ನೇಹಮಯಿ ನೀನು, ಬೇಗ ಹೊಸ ಸ್ನೇಹಿತರು ಸಿಗುತ್ತಾರೆ ಬಿಡು. ಆದರೆ ನಕ್ಕು ಮಾತಾಡಿಸಿದವರೆಲ್ಲ ಸ್ನೇಹಿತರಾಗಿಬಿಡೋದಿಲ್ಲ ನೆನಪಿರಲಿ. ಓದು ಈಗ ನಿನಗೆ ಮುಖ್ಯವಾಗಬೇಕು. ಹಾಗಂತ ನಿನ್ನ ನೆಚ್ಚಿನ ಹವ್ಯಾಸಕ್ಕೇನು ನಾನು ಅಡ್ಡಿ ಮಾಡೋಲ್ಲ ಭಯ ಬೇಡ. ಆದರೆ ನಿಮ್ಮಗಳ ಭವಿಷ್ಯ ರೂಪಗೊಳ್ಳ ತೊಡಗುವುದೇ ಈ ಹಂತದಲ್ಲಿ. ನಿಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕಾದ ಜವಾಬ್ದಾರಿಯೂ ನಿಮ್ಮದೇ. ನಾವು ತಂದೆ ತಾಯಿಗಳು ನಿಮ್ಮಗಳ ಸದ್ವಿಚಾರಗಳಿಗೆ, ಒಂದು ಹಂತದವರೆಗಿನ ಆರ್ಥಿಕ ನೆರವಿಗೆ, ಒಳ್ಳೆಯ ಭಾವನೆಗಳಿಗೆ ಆಸರೆಯಾಗಿ ನಿಲ್ಲಬಲ್ಲೆವೆ ಹೊರತು ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಬೇಡ ನಮ್ಮಿಂದ. ಅಮ್ಮನ ಈ ಮಾತು ಕಠೋರ ಅನಿಸ್ತಿದೆಯಾ ಗೊಂಬೆ? ಇಲ್ಲ ಪುಟ್ಟಾ ಇದೇ ವಾಸ್ತವ. ಈಗಲೇ ನಿನಗೆ ಮತ್ತು ಅಮ್ಮೂಗೆ ವಿಚಾರ ಗೊತ್ತಿದ್ದರೆ ಮುಂದೆ ಭ್ರಮೆಯಲ್ಲಿ ಬದುಕಲಾರಿರಿ.
ಏನ್ ಗೊತ್ತಾ? ಇನ್ನು ಮುಂದೆ ನಿನ್ನ ಜೊತೆ ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ ವರ್ತಿಸಬಹುದು. ಸಿಟ್ಟಿಗೆಳಬೇಡ ನನ್ನ ಮಾತು ಪೂರ್ತಿ ಕೇಳು ಮೊದಲು. ಇಲ್ಲೀವರೆಗೆ ಯಾವತ್ತೂ ನಿನ್ನ ಮತ್ತು ಅಮೋಲನ್ನ ಬೇರೆಯಾಗಿ ನೋಡಿಕೊಂಡಿಲ್ಲ. ಹಾಗಂತ ಅವನು ಹೆಚ್ಚು ನೀನು ಕಡಿಮೆ ಅನ್ನೊ ಭಾವನೆಯಲ್ಲ. ನನಗೆ ನೀವಿಬ್ಬರೂ ಒಂದೇ..
ಆದರೆ ಈಗ ನಿನಗೆ ಅಂತಲೇ ಕೆಲವು ಮಾತುಗಳನ್ನ ಹೇಳಬೇಕಿದೆ, ನಿನಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತೋ ಅರಿಯೆ. ಆದರೂ ನಿನಗೆ ತಿಳಿಯುವಂತೆ ಹೇಳುವ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ಈ ಸೃಷ್ಟಿಯಲ್ಲಿ ಹೆಣ್ಣು ಗಂಡುಗಳ ದೇಹ ರಚನೆಯಲ್ಲಿ ಅಗಾಧ ವ್ಯತ್ಯಾಸಗಳಿವೆ. ಆದ್ದರಿಂದಲೇ ಗಂಡು ಮತ್ತು ಹೆಣ್ಣು ಅಂತ ಗುರುತಿಸಲು ಸಾಧ್ಯವಾಗೋದು. ''ಇದೇನು ಅಮ್ಮಾ ಹೀಗೆ ಸಿಲ್ಲಿ ಸಿಲ್ಲಿ ಆಗಿ ಮಾತಾಡ್ತಿದಾಳೆ " ಅನಿಸ್ತಿದೆಯಾ? ಇರು ಒಮ್ಮೆ ನನ್ನ ಮಾತು ಮುಗಿಸಿಬಿಡ್ತೀನಿ, ನಂತರ ನಿನ್ನ ಕಮೆಂಟ್ಸ್ ಎಲ್ಲಾ ಸರೀನಾ? ಈ ದೇಹ ರಚನೆ ಬರೀ ಮನುಷ್ಯರಿಗೆ ಮಾತ್ರ ಸೀಮಿತ ಅಲ್ಲ ಅಂತ ಗೊತ್ತು ತಾನೆ? ನಾವು ಹೆಣ್ಣುಮಕ್ಕಳು ಗಂಡಸರ ಸಮಾನರು ಅಂತೆಲ್ಲ ಕೂಗಾಡೊ ಹುಡುಗಿಯರನ್ನ, ಹೆಂಗಸರನ್ನ ಕಂಡು ಒಮ್ಮೊಮ್ಮೆ ಕನಿಕರ ವಾಗುತ್ತೆ. ಯಾಕೆ ಗೊತ್ತಾ? ಅರೆ! ಸಮಾನತೆಗೆ ಯಾರು ಹೋರಾಡಬೇಕು ಹೇಳು? ತಮಗಿಂತ ಇದಿರಿನವರು ಮೇಲ್ ಮಟ್ಟದಲ್ಲಿದಾರೆ ಅಂದು ಕೊಳ್ಳೋರು. ಹೆಣ್ಣು ಗಂಡು ಸಮಾನರಾಗೇ ಇರುವಾಗ ಮೇಲು ಕೀಳು ಅನ್ನೋ ಭಾವನೆ ಯಾಕೆ ಅಲ್ಲವಾ? ಪ್ರಕೃತಿ ಇಬ್ಬರಿಗೂ ಒಂದೊಂದು ಥರದ ಶಕ್ತಿ ಕೊಟ್ಟಿದೆ. ಅದು ಸದುಪಯೋಗ ಅಥವಾ ದುರುಪಯೋಗ ಪಡಿಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ ಅಲ್ಲವೇ? ಆದರೂ ನಾವು ಅಮ್ಮಂದಿರು ನೀವು ಹುಡುಗಿಯರನ್ನ ಹೆಚ್ಚು ಶಿಸ್ತಿನಿಂದ ಅಥವಾ ಒಂದು ಲಿಮಿಟ್ಟಿನಲ್ಲಿರಿ ಎನ್ನುವಂತೆ ಬೆಳೆಸುತ್ತೇವೆ. ಇದರರ್ಥ ಹುಡುಗ ಹೆಚ್ಚು, ಹುಡುಗಿ ಕಮ್ಮಿ ಅಂತ ಅಲ್ಲ ಅದರ ಅರ್ಥ. ಯಾಕೆ ಹಾಗೆ ವರ್ತಿಸ್ತೀವಿ ಗೊತ್ತಾ? ಆ ಪ್ರಕೃತಿ ನಮಗಿತ್ತ ವರ ಶಾಪವಾಗದಿರಲಿ ಅಂತ. ಅರ್ಥ ಆಗ್ಲಿಲ್ಲ ಅಲ್ಲಾ? ಇಷ್ಟು ದಿನ ಈ ಕುರಿತು ನಿನ್ನೊಡನೆ ಇಂಥ ಮಾತುಗಳನ್ನು ಆಡಿದ್ದರೆ ತಾನೆ ನಿನಗೆ ಅರ್ಥ ಆಗೋದು? ಮೊದಲ ಬಾರಿ ನಿನ್ನೊಂದಿಗೆ ಈ ವಿಷಯ ಮಾತಾಡ್ತಿದೀನಿ. ಸೊ ಎಷ್ಟರ ಮಟ್ಟಿಗೆ ನಿನಗೆ ತಿಳಿಯುವಂತೆ ಹೇಳ್ತಿನೋ...
ನೀನು ಎಷ್ಟೋ ಕತೆಗಳನ್ನ ಓದಿದೀಯಾ, ಧಾರಾವಾಹಿ ಮತ್ತು ಸಿನಿಮಾಗಳನ್ನ ನೋಡ್ತೀಯಾ ಎಲ್ಲ ಕಡೆ ಹೆಚ್ಚಾಗಿ ಏನು ಹೇಳ್ತಾರೆ ಹೇಳು? ಸಮಾಜ ಹೆಣ್ಣು ಗಂಡುಗಳಲ್ಲಿ ಬೇಧ ಭಾವವನ್ನ ತೋರಿಸುತ್ತೆ, ಹೆಣ್ಣನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ, ಅವಳನ್ನು ಹಿಂಸಿಸಲಾಗುತ್ತೆ ಮುಂತಾಗಿ ಅಲ್ಲವೇ? ಹೌದು ಅದೆಲ್ಲ ನಡೀತಿರೋದು ತಕ್ಕ ಮಟ್ಟಿಗೆ ನಿಜಾನೆ. ಅದಕ್ಕೆ ಕಾರಣ ನಮ್ಮ ಅಂಧಾನುಕರಣೆ ಅಥವಾ ಹೆಣ್ಣಿಗೆ ಅನುಕೂಲಕರವಾದ ನಿಯಮವನ್ನ ವಿಪರೀತಗೊಳಿಸಿ ಅದನ್ನು ಮೂಢ ನಂಬಿಕೆಯನ್ನಾಗಿಸಿ ಅವಳ ಮೇಲೆ ದಬ್ಬಾಳಿಕೆ ಮಾಡುವುದು. ಹೇಗೆ ಸ್ವಚ್ಚಂದ ಬದುಕು ತಪ್ಪೋ ಹಾಗೇ ಈ ಥರದ ದಬ್ಬಾಳಿಕೆ ಅಥವಾ ಸಂಕೋಲೆಯ ಬದುಕೂ ತಪ್ಪೇ..
ಈ ಸೃಷ್ಟಿಯಲ್ಲಿ ಮನುಷ್ಯ ಪ್ರಜ್ಞಾವಂತನಾಗುತ್ತಾ ಬಂದತೆಲ್ಲ ಒಂದು ಸುಂದರ ಬದುಕಿಗಾಗಿ ಕೆಲವು ನಿಯಮಗಳನ್ನ ಹಾಕಿಕೊಂಡ. ಅವೆಲ್ಲ ಅನುಕೂಲಕರ ನಿಯಮಗಳೇ. ಗಂಡು ದೈಹಿಕವಾಗಿ ಹೆಣ್ಣಿಗಿಂತ ಸದೃಢನಾಗಿರುವುದರಿಂದ ಮನೆಯಾಚೆಗಿನ ಕೆಲಸಗಳನ್ನ ಆತ ಮಾಡಬೇಕು (ಆಗೆಲ್ಲ ಈಗಿನಂತೆ ಯಾವ ಉಪಕರಣ ಸಾಧನಗಳೂ ಮನುಷ್ಯನ ಅನುಕೂಲಕ್ಕೆ ಇರ್ಲಿಲ್ವಲ್ಲ ರಾಜಾ, ಇವೆಲ್ಲಾ ಇತ್ತೀಚಿನ ಸಂಶೋಧನೆಗಳು ಅಲ್ಲವೇ?). ಹೆಣ್ಣು ದೈಹಿಕವಾಗಿ ಬಲವಲ್ಲದ ಕಾರಣ ಆಕೆ ಮನೆಯಲ್ಲಿನ ಕೆಲಸಗಳನ್ನ ಮಾಡಬೇಕು ಅನ್ನೋದು ಒಂದು ಒಪ್ಪಂದ ಅಥವಾ ನಿಯಮವಾಗಿ ರೂಪುಗೊಂಡಿತು. ಇದು ಇಬ್ಬರಿಗೂ ಅನುಕೂಲಕರ ನಿಯಮ ಅಲ್ಲವೇ? (ಹಾಗೆಂದ ಮಾತ್ರಕ್ಕೆ ಹೆಣ್ಣು ಹೊರಗೆ ದುಡಿಯಲೇ ಬಾರದು ಎಂಬ ನಿಯಮವೇನೂ ಇಲ್ಲ ) ಹಾಗೆಯೇ ಸೃಷ್ಟಿ ಕಾರ್ಯದ ಅಥವಾ ಮಕ್ಕಳನ್ನು ಹೇರುವ ಜವಾಬ್ದಾರಿಯನ್ನ ಆ ಪ್ರಕೃತಿಯೇ ಹೆಣ್ಣಿಗೆ ವಹಿಸಿದ್ದು. ಗಂಡಿಗೆ ಬಸಿರಾಗುವ ಅವಕಾಶವೇ ಇಲ್ಲ. ಹೀಗಾಗಿ ಮುಟ್ಟು , ಬಸಿರು, ಬಾಣಂತನ ಈ ಎಲ್ಲವುಗಳಿಂದ ಹೆಣ್ಣಿನ ದೇಹ ಸೂಕ್ಷ್ಮವಾಗುವುದು ಅಲ್ಲವೇ? ಇವುಗಳಿಂದಾಗುವ ತೊಂದರೆಯನ್ನ, ನೋವನ್ನ ಹೆಣ್ಣೇ ಅನುಭವಿಸಬೇಕು. ಅದಕ್ಕೆಂದೇ ಮುಟ್ಟು ಆರಂಭವಾದಾಗಿನಿಂದ ಹೆಣ್ಣುಮಕ್ಕಳನ್ನ ಅಮ್ಮಂದಿರು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಹುಡುಗನಿಗಿಂತ ಹುಡುಗಿಯ ಮೇಲೆ ಹೆಚ್ಚು ಕಟ್ಟಳೆಗಳನ್ನು ಹೇರುವುದು. ಈ ಕಟ್ಟಳೆಗಳ ಹಿಂದಿರುವುದು ಕಾಳಜಿ ಕಂದ, ಅನುಮಾನವಲ್ಲ, ಅಪನಂಬಿಕೆಯಲ್ಲ. ಈ ಕಾಳಜಿಯೇ ವಿಪರೀತವಾಗಿ ಕಾನೂನು ಎಂಬಂತೆ ಹೆಣ್ಣು ಎಂದರೆ ಹೀಗೇ ಇರಬೇಕು ಅನ್ನುವ ನಿಯಮವಾಗಿಬಿಟ್ಟಿತು ನೋಡು! ಗಂಡು ಹೆಣ್ಣಿನ ಸಮಾಗಮದಿಂದ ಗಂಡಿಗೆ ದೈಹಿಕವಾಗಿ ಯಾವ ವ್ಯತ್ಯಾಸವೂ ಆಗದು. ಆದ್ದರಿಂದಲೇ ಆತ ಸುಲಭವಾಗಿ ತಪ್ಪು ಮಾಡಿಯೂ ತಪ್ಪಿಸಿಕೊಂಡು ಬಿಡಬಲ್ಲ, ಅಥವಾ ಅದು ತಾನಲ್ಲ ಎಂದು ನಿರಾಕರಿಸಿಬಿಡಬಲ್ಲ . (ಈಗಿನ ವಿಜ್ಞಾನದ ಸಹಾಯದಿಂದಾಗಿ ತಪ್ಪಿಸಿಕೊಳ್ಳುವುದು ಮೊದಲಿನಷ್ಟು ಸುಲಭವಲ್ಲ ಬಿಡು ಆದರೆ ಎಲ್ಲ ನಿರ್ಧಾರವಾಗೊವಷ್ಟರಲ್ಲಿ ಆ ಗಂಡಿನ ಕೊಡುಗೆಗೆ ಸ್ಕೂಲಿಗೆ ಹೋಗೋ ವಯಸ್ಸಾಗಿರುತ್ತೆ! ) ಆದರೆ ಹೆಣ್ಣು...? ಅಮ್ಮ ಅಂದರೆ ಈ ಎಲ್ಲ ಮಜಲುಗಳನ್ನು ದಾಟಿ ಬಂದವಳಲ್ಲವೇ? ಅದಕ್ಕೆ ಪುಟ್ಟಾ ನೀವುಗಳು ಮುಂದೆ ನೋವುಣ್ಣದಿರಲಿ ಅಂತ ಅಮ್ಮ ಸ್ವಲ್ಪ ಸ್ಟ್ರಿಕ್ಟ್ ಆಗ್ತಾಳೆ, ಎಲ್ಲಿಗೆ ಹೊರಟೆ ಅಂತ ಕೇಳ್ತಾಳೆ, ಯಾಕೆ ಅಂತ ಕೇಳ್ತಾಳೆ, ಬೇಡ ಅಂತ ಹೇಳ್ತಾಳೆ. ಕೆಲವೊಮ್ಮೆ ಖಡಾಖಂಡಿತವಾಗಿ ಮಗಳ ಕೆಲವು ಕೋರಿಕೆಗಳನ್ನ ನಿರಾಕರಿಸಿಬಿಡ್ತಾಳೆ.
ಆಗೆಲ್ಲ ಕೋಪಿಸ್ಕೋಬೇಡ ಬಂಗಾರ, ನಿನ್ನ ಅಮ್ಮನ ಈ ಎಲ್ಲ ಮಾತುಗಳ, ನಿರಾಕರಣೆಗಳ ಹಿಂದೆ ನಿನ್ನೆಡೆಗಿನ ಅಪಾರ ಪ್ರೀತಿ ಮತ್ತು ಮಗಳು ನೋವುಣ್ಣದಿರಲಿ ಅನ್ನುವ ಕಾಳಜಿ ಇರುತ್ತೆ. ನನ್ನ ಮಗಳು ನೀನು. ನಿನ್ನಲ್ಲಿ ನಾ ಕೊಟ್ಟ ಸಂಸ್ಕಾರ ಇದೆ, ರಕ್ತಗತವಾಗಿ ಬಂದ ಸಂಯಮ ಇದೆ ಅನ್ನುವುದೇ ದೊಡ್ಡ ಧೈರ್ಯ ನನಗೆ. ನೀನು ವಿವೇಚನೆಯುಳ್ಳ ಹುಡುಗಿ ಅಂತ ಗೊತ್ತು ನನಗೆ. ನಿನ್ನನ್ನು ಅನುಮಾನಿಸಲಾರೆ ನಾನು, ಅಪನಂಬಿಕೆಯಿಂದ ನಿನ್ನನು ನೋಡುವುದಿಲ್ಲ. ಹುಡುಗರೊಡನೆ ಯಾಕೆ ಮಾತು ಅಂತ ಅನ್ನುವುದಿಲ್ಲ. ಹಾಗಂತ ಅತಿಶಯದ ವರ್ತನೆಯನ್ನು ಸಹಿಸಲಾರೆ. . ಜೋಪಾನ ಕಂದ ಈ ನಾಗರೀಕ ಕಾಡಿನಲ್ಲಿ ಹಸುವೇಷದ ಹಂದಿಗಳಿವೆ, ಕೋಗಿಲೆಯ ಕಂಠದ ಹದ್ದುಗಳಿವೆ. ಯಾರನ್ನೂ ತಕ್ಷಣಕ್ಕೆ ನಂಬದಿರು. ಹಾಗಂತ ಎಲ್ಲವನ್ನೂ ಅನುಮಾನದಿಂದಲೇ ನೋಡಬೇಕಿಲ್ಲ. ದೇವರು ಕೊಟ್ಟ ವಿವೆಚನೆಯನ್ನ ನಿನ್ನ ಭಾವೋದ್ವೇಗಕ್ಕೆ ಬಲಿ ಕೊಡದಿರು. ಇಂದಿನಿಂದ ನಾ ನಿನ್ನ ಸ್ನೇಹಿತೆ ಕೂಡಾ. ನಿನ್ನ ಅಮ್ಮ ಸದಾ ನಿನ್ನೊಂದಿಗಿದ್ದಾಳೆ ಕೂಸೆ. ಜಗ ಹೊಗಳುವ ಮಗಳಾಗು.
Monday, February 2, 2009
ಮೂಡಲ ಮನೆಯ ಮುತ್ತಿನ...
ಅದು ಮುಳುಗಡೆ ಪ್ರದೇಶದಿಂದ ಬಂದ ವಲಸಿಗರಿಗೆಂದೇ ನಿರ್ಮಾಣಗೊಂಡ ಪುಟ್ಟ ಊರು ಕಲಕೇರಿ. ಕರ್ನಾಟಕದ ಧಾರವಾಡಕ್ಕೆ ಹತ್ತಿರ. ಊರಿನ ಪ್ರವೇಶದಲ್ಲೊಂದು ಕೆರೆಯಿದೆ. ಆಹಾ! ಎಂಥಾ ಅದ್ಭುತ ರಮಣೀಯ ತಾಣವೆಂದರೆ ಆ ಕೆರೆ ಇದಿರು ನಿಂತರೆ ಅಲ್ಲಿಂದ ಹೊರಡಲು ಮನಸೇ ಬಾರದು.. ೨೦೦೮ ಡಿಸೆಂಬರ್ನಲ್ಲಿ ಖ್ಯಾತ ನಿರ್ದೇಶಕ ರಾಮಚಂದ್ರ ಪಿ ಎನ್ ಅವರ 'ಪುಟಾಣಿ ಪಾರ್ಟಿ' ಎನ್ನುವ ಹೆಸರಿನ ಮಕ್ಕಳ ಚಿತ್ರದ ಶೂಟಿಂಗ್ಗೆಂದು ೧೫ ದಿನ ಅಲ್ಲಿ ನನ್ನ ಓಡಾಟ. ಪ್ರತಿ ದಿನ ಚೆಲುವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಂಡು ಅನುಭವಿಸುವ ಸೌಭಾಗ್ಯ. ಆ ಕೆರೆ ದಾಟುವಷ್ಟು ಹೊತ್ತು ಸಾದ್ಯವಾದಷ್ಟುಅದನ್ನು ಕಣ್ಣಲ್ಲಿ ತುಂಬಿಕೊಂಡುಬಿಡುವ ಹಸಿದ ಬಡವನ ಆಸೆಬುರುಕುತನ!! :) ಕಣ್ಣಲ್ಲಿ, ಮನಸಲ್ಲಿ ತುಂಬಿಕೊಂಡಿದ್ದು ಸಾಲದು ಎನಿಸಿ ನೀವೆಲ್ಲರೂ ನೆನಪಾಗಿ ನಿಮ್ಮೆಲ್ಲರಿಗೂ ಬೇಕಲ್ಲವಾ ಅಂದುಕೊಂಡು ನನ್ನ ಮೊಬೈಲಿನಲ್ಲಿ ಆ ಕೆರೆಯ ಸೊಬಗನ್ನು ಹೊತ್ತು (ಕದ್ದು!!) ತಂದಿದ್ದೇನೆ. ಜೊತೆಗೆ ಸುಮಧುರ ಹಾಡಿನ ಘಮವನ್ನೂ ಸೇರಿಸಿ ನಿಮ್ಮೆದುರಿಗಿಡುತ್ತಿದ್ದೇನೆ!!
ಹೇಗಿದೆ ತಿಳಿಸಿ.. :)
ಹೇಗಿದೆ ತಿಳಿಸಿ.. :)
Monday, January 19, 2009
ನಿರ್ವಾಣ
ಕಳೆದುಕೊಂಡಿದ್ದೇನೆ ನಿಜ ಚಹರೆ
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳು
ಯಾರ್ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು
ತೊಟ್ಟ ಒಳ ಉಡುಪಿನ ಬಣ್ಣ ಅವರವರಿಗಷ್ಟೆ ಗೊತ್ತಿರುವಂತೆ
ಓರಣಗೊಳಿಸುತ್ತಾ ಆಸೆಯಾಗುತ್ತದೆ
ನನ್ನ ಅಸಲು ಚಹರೆಯನ್ನೊಮ್ಮೆ ನೋಡಲು
ಇದಾ? ಇದಲ್ಲ, ಇದೂ ಅಲ್ಲ, ಅದಿರಬಹುದಾ?
ಮತ್ತದೋ ಅದೂ? ಅಲ್ಲ..
ಹಾಂ! ಸಿಕ್ಕಿತು ಇದೋ ಇದು
ಅಸಲುಚಹರೆಯಂತೇ ಕಾಣು...
ಇಲ್ಲ ಇದರಲ್ಲಿ ಸಾಮ್ಯತೆಗಳಿವೆ ಅಷ್ಟೆ...
ಕೊನರುತ್ತಿದೆ ಸಣ್ಣಗೆ ಕಳವಳವೊಂದು..
ಕಳೆದುಕೊಂಡಿರಿವುದೇನು ಅನ್ನುವುದರ ಅರಿವಾಗುತ್ತಲೇ ಚಡಪಡಿಕೆ
ಹೆಚ್ಚುತ್ತಿದೆ.. ಸ್ವಂತಿಕೆಗಾಗಿ, ನನ್ನತನಕ್ಕಾಗಿ, ಹಂಬಲಿಸತೊಡಗುತ್ತೇನೆ
ಮತ್ತೆ ಹುಡುಕಾಟ..ಹುಡುಕಾಟದ ಭರದಲ್ಲಿ ಓರಣಗೊಳಿಸಿದ
ಮುಖಗಳೆಲ್ಲ ಒಟ್ಟು ಕಲೆತು ಎಲ್ಲಾ ಗೊಜಲುಗೊಜಲು
ಆಯಾಸವಾಗುತ್ತಿದೆ, ಮೈಗೊ..? ಮನಸಿಗೊ..?
ಮನಸಿಗಾದರೆ ಯಾವ ಮುಖದ ಮನಸಿಗೆ ??
ಮಡಿಲೊಂದು ನನ್ನನ್ನು ಪ್ರೀತಿಯಿಂದ ಕರೆಯುತ್ತಿದೆ
ಬಾ ವಿಶ್ರಮಿಸು ಕ್ಷಣ ಹೊತ್ತು
ಧಾವಿಸುತ್ತೇನೆ ಆ ಪ್ರೀತಿಯ ಮಡಿಲಿನೆಡೆಗೆ ಮುಖ ನೋಡದೆ
ನೋಡಿದ್ದೇ ಆದರೆ ಮತ್ಯಾವುದೋ ಮುಖವಾಡ ಧರಿಸಿಬಿಟ್ಟೇನು ಎಂಬ ಭಯ
ಮಡಿಲಿನಲ್ಲಿ ಮಗುವಾಗುತ್ತೇನೆ, ನಿಧಾನಕ್ಕೆ ನನಗೆ ನಾನು ಸಿಕ್ಕಂತಾಗಿ
ನೆಮ್ಮದಿಯ ನಿದ್ರೆಗೆ ಜಾರುತ್ತೇನೆ ಇನ್ನಿಲ್ಲದಂತೆ ಭದ್ರವಾಗಿ ಅವಚಿಕೊಂಡು ಮಡಿಲನ್ನು...
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳು
ಯಾರ್ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು
ತೊಟ್ಟ ಒಳ ಉಡುಪಿನ ಬಣ್ಣ ಅವರವರಿಗಷ್ಟೆ ಗೊತ್ತಿರುವಂತೆ
ಓರಣಗೊಳಿಸುತ್ತಾ ಆಸೆಯಾಗುತ್ತದೆ
ನನ್ನ ಅಸಲು ಚಹರೆಯನ್ನೊಮ್ಮೆ ನೋಡಲು
ಇದಾ? ಇದಲ್ಲ, ಇದೂ ಅಲ್ಲ, ಅದಿರಬಹುದಾ?
ಮತ್ತದೋ ಅದೂ? ಅಲ್ಲ..
ಹಾಂ! ಸಿಕ್ಕಿತು ಇದೋ ಇದು
ಅಸಲುಚಹರೆಯಂತೇ ಕಾಣು...
ಇಲ್ಲ ಇದರಲ್ಲಿ ಸಾಮ್ಯತೆಗಳಿವೆ ಅಷ್ಟೆ...
ಕೊನರುತ್ತಿದೆ ಸಣ್ಣಗೆ ಕಳವಳವೊಂದು..
ಕಳೆದುಕೊಂಡಿರಿವುದೇನು ಅನ್ನುವುದರ ಅರಿವಾಗುತ್ತಲೇ ಚಡಪಡಿಕೆ
ಹೆಚ್ಚುತ್ತಿದೆ.. ಸ್ವಂತಿಕೆಗಾಗಿ, ನನ್ನತನಕ್ಕಾಗಿ, ಹಂಬಲಿಸತೊಡಗುತ್ತೇನೆ
ಮತ್ತೆ ಹುಡುಕಾಟ..ಹುಡುಕಾಟದ ಭರದಲ್ಲಿ ಓರಣಗೊಳಿಸಿದ
ಮುಖಗಳೆಲ್ಲ ಒಟ್ಟು ಕಲೆತು ಎಲ್ಲಾ ಗೊಜಲುಗೊಜಲು
ಆಯಾಸವಾಗುತ್ತಿದೆ, ಮೈಗೊ..? ಮನಸಿಗೊ..?
ಮನಸಿಗಾದರೆ ಯಾವ ಮುಖದ ಮನಸಿಗೆ ??
ಮಡಿಲೊಂದು ನನ್ನನ್ನು ಪ್ರೀತಿಯಿಂದ ಕರೆಯುತ್ತಿದೆ
ಬಾ ವಿಶ್ರಮಿಸು ಕ್ಷಣ ಹೊತ್ತು
ಧಾವಿಸುತ್ತೇನೆ ಆ ಪ್ರೀತಿಯ ಮಡಿಲಿನೆಡೆಗೆ ಮುಖ ನೋಡದೆ
ನೋಡಿದ್ದೇ ಆದರೆ ಮತ್ಯಾವುದೋ ಮುಖವಾಡ ಧರಿಸಿಬಿಟ್ಟೇನು ಎಂಬ ಭಯ
ಮಡಿಲಿನಲ್ಲಿ ಮಗುವಾಗುತ್ತೇನೆ, ನಿಧಾನಕ್ಕೆ ನನಗೆ ನಾನು ಸಿಕ್ಕಂತಾಗಿ
ನೆಮ್ಮದಿಯ ನಿದ್ರೆಗೆ ಜಾರುತ್ತೇನೆ ಇನ್ನಿಲ್ಲದಂತೆ ಭದ್ರವಾಗಿ ಅವಚಿಕೊಂಡು ಮಡಿಲನ್ನು...
Monday, January 5, 2009
ಕನಸ ರೆಕ್ಕೆಗೆ ವಾಸ್ತವದ ಪುಕ್ಕ...

ನಿನ್ನೆಯ ದಿನ ನನ್ನ ಪಾಲಿನ ಅವಿಸ್ಮರಣೀಯ ದಿನ. ಇವತ್ತು ಕುಳಿತು ಯೋಚಿಸಿದರೆ ಕನಸೇನೋ ಅನಿಸುತಿದೆ.. ನನ್ನ ಬಾಳಲ್ಲಿ ಇಂಥದ್ದೊಂದು ದಿನ ಬಂದೀತೆಂದು ಎಣಿಸಿರಲೂ ಇಲ್ಲ ನಾನು!! ಕಂಡ ಕನಸುಗಳೆಲ್ಲ ನನಸಾಗಲು ಸಾಧ್ಯವೇ? ಸಾಧ್ಯವೇ?? ಸಾಧ್ಯವಿಲ್ಲ ಅನ್ನುವ ನಿರ್ಣಯಕ್ಕೆ ಬಂದು ಆಗಲೇ ಹಲವಾರು ವರ್ಷಗಳಾಗಿವೆ ಅನ್ನುವಷ್ಟರಲ್ಲೇ "ಯಾಕೆ ಸಾಧ್ಯವಿಲ್ಲ ಸಾಧ್ಯ !!" ಅನ್ನುವಂತಿತ್ತು ನಿನ್ನೆಯ ದಿನ. ಆದರೆ ನಾ ಕಂಡ ಕನಸಿಗೂ ಮೀರಿದ ವಾಸ್ತವ ಘಟಿಸಿದ್ದು ನನ್ನ ನಿನ್ನೆಯ ದಿನವನ್ನು ಅವಿಸ್ಮರಣೀಯವಾಗಿಸಿತು. ನನ್ನ ಕನಸೋ ಕೇವಲ ಒಂದು ದರ್ಶನ ಭಾಗ್ಯಕ್ಕೆ ಸೀಮಿತವಾಗಿತ್ತು. ಅದು ಬಾಲ್ಯದಿಂದಲೂ ಕಂಡ ಕನಸು.೧೨-೧೩ ವರ್ಷದ ಹುಡುಗಿಯೊಬ್ಬಳು ಕಾಣುತ್ತಿದ್ದ ಕನಸದು. ಅಲ್ಲಿ ಕೇವಲ ಕನಸಿತ್ತು, ಛಲವಿರಲಿಲ್ಲ. ಕನಸು ನನಸಾಗಲಿ ಅನ್ನೋ ಬಯಕೆ ಇತ್ತು, ಬಯಕೆಗೆ ಬಲವಿರಲಿಲ್ಲ. ಆ ಕನಸು ಸಾಮಾನ್ಯರೆಲ್ಲರೂ ಕಾಣುವಂಥ ಕನಸಾಗಿತ್ತು, ಅಪರೂಪದ ಕನಸಾಗಿರಲಿಲ್ಲ. ಅದು... ಕನ್ನಡದ ಮೇರು ನಟ ವಿಷ್ಣುವರ್ಧನ್ ಮತ್ತು ಭಾರತಿ ಅವರನ್ನು ಪರದೆಯಾಚೆಗೆ,ಸನಿಹದಿಂದ ನೋಡಬೇಕೆನ್ನುವ ಕನಸು! "ಹೇಗೆ ನೋಡುವುದು?.. ಅದೇನು ಸುಲಭ ಸಾಧ್ಯವೇ? ಅಸಾಧ್ಯದ ಮಾತು! ಬೆಂಗಳೂರಿನಲ್ಲಿರುವವರು ಅವರು! ಬೆಂಗಳೂರೆಂದರೆ ಸಾಮಾನ್ಯವಾಯಿತೆ? ಅಷ್ಟು ದೊಡ್ಡ ಊರಲ್ಲಿ ಅವರನ್ನು ಹುಡುಕುವುದು ಹೇಗೆ? ಅರೆ! ವಿಷ್ಣುವರ್ಧನ್ ಅಂಥ ದೊಡ್ಡ ಹೀರೊ ಮನೆ ಯಾರಿಗೆ ಗೊತ್ತಿರೋಲ್ಲ? ಯಾರನ್ನಾದರು ಕೇಳಿದ್ರಾಯ್ತು ವಿಷ್ಣುವರ್ಧನ್ ಅವರ ಮನೆಯನ್ನು ತೋರಿಸಿಯೇ ತೋರಿಸ್ತಾರೆ. ಅವರ ಮನೆ ಗೇಟ್ ಹತ್ರ ನಿಂತ್ರಾಯ್ತು ಅವರಿಬ್ಬರೂ ಆಚೆ ಹೋಗುವಾಗ ಕಾಣಿಸಿಯೇ ಕಾಣಿಸ್ತಾರೆ! ಆದ್ರೆ... ಅವ್ರು ಕಾರಲ್ಲಿ ಕುಳಿತು ಕಾರಿನ ವಿಂಡೋ ಗ್ಲಾಸ್ ಹಾಕಿದ್ದರೆ ಕಾಣ್ಸೋದಿಲ್ವಲ್ಲ, ಏನ್ ಮಾಡೋದು?... ಹಾಂ!! ಅವರ ಮನೇಲಿ ಕೆಲಸದವಳಾಗಿ ಸೇರ್ಕೊಂಡು ಬಿಡೋದು!! ಆಗ ಅವರನ್ನ ನಿತ್ಯ ನೋಡಬಹುದು, ಮಾತಾಡಬಹುದು!!" ಹೀಗೆ ನನ್ನ ಹಗಲುಗನಸು ರೆಕ್ಕೆ ಕಟ್ಟಿಕೊಂಡು ಹಾರಲು ಅನುವಾಗುತ್ತಿರುವಾಗಲೇ, "ಹಂಗಿದ್ರ ಮನ್ಯಾಗಿರೋ ಮೂರೂ ಮಂದಿ ಕೆಲಸದವ್ರನ್ನ ಬಿಡಿಸಿಬಿಡ್ತೀವಿ, ಇನ್ ಮ್ಯಾಲೆ ಮನಿ ಕೆಲ್ಸಾ ಎಲ್ಲಾ ನೀನ ಮಾಡು " ಅಂತ ಎಲ್ಲಿ ಅಪ್ಪ ಅಮ್ಮ ಅಂದುಬಿಡ್ತಾರೋ ಅನಿಸಿ ಹೆದರಿಕೆಯಾಗಿ ರೆಕ್ಕೆಗಳು ಹಾರಲು ಬಳಕೆಯಾಗದೆ ನನ್ನ ಕನಸಿಗೆ ಬೆಚ್ಚನೆಯ ಹೊದಿಕೆಯಾಗುತ್ತಿದ್ದವು. ನಿಧಾನವಾಗಿ ಕನಸಿಗೂ ವಾಸ್ತವಕ್ಕೂ ಇರುವ ವ್ಯತ್ಯಾಸ ಗೊತ್ತಾದರೂ, ರೆಕ್ಕೆಯೋಳಗಿನ ಬೆಚ್ಚನೆಯ ಕನಸು ಮುದ ನೀಡುತ್ತಿತ್ತು.
ನಿನ್ನೆಯ ದಿನ.. ಸ್ವತಃ ವಿಷ್ಣುವರ್ಧನ್ ಮತ್ತು ಭಾರತಿ ದಂಪತಿಗಳು ನಮ್ಮನ್ನೆಲ್ಲ ತಮ್ಮ ಮನೆಗೆ ಆಹ್ವಾನಿಸಿದ್ದರು! ನಮ್ಮನ್ನೆಲ್ಲ ಅಂದರೆ 'ಮುಕ್ತ ಮುಕ್ತ' ತಂಡದ ಎಲ್ಲ ಕಲಾವಿದರನ್ನು. ಒಂದು ತಿಂಗಳ ಹಿಂದೆ 'ಮುಕ್ತ ಮುಕ್ತ' ಧಾರಾವಾಹಿಯ ನಿರ್ದೇಶಕರಾದ ಶ್ರೀ. ಟಿ ಎನ್ ಸೀತಾರಾಂ ಅವರು ವಿಷ್ಣುವರ್ಧನ್ ಅವರನ್ನು ಭೇಟಿಯಾದಾಗ ವಿಷ್ಣುವರ್ಧನ್ ಅವರು ತಾವು ತಪ್ಪದೆ ಈ ಧಾರಾವಾಹಿಯನ್ನು ನೋಡುತ್ತಿರುವುದಾಗಿ ಹೇಳಿದರಂತೆ. ಜೊತೆಗೆ 'ಮಂಗಳತ್ತೆ' ಪಾತ್ರ ಇಷ್ಟವಾಗುತ್ತೆ, ಚೆನ್ನಾಗಿ ಮಾಡ್ತಾರಾಕೆ ಅಂದ್ರಂತೆ. ಆ 'ಮಂಗಳತ್ತೆ' ಪಾತ್ರಧಾರಿ ನಾನು!! ಕೇಳಿ ನನಗೆ ಹೇಗಾಗಿರಬೇಡ ನೀವೇ ಹೇಳಿ? ಅವತ್ತು ರಾತ್ರಿ ನಿದ್ದೆ ಮಂಗಮಾಯ! ಹಳೆ ಕನಸಿನ ರೆಕ್ಕೆಗೆ ಮತ್ತೆ ಜೀವ..
'ಸುದ್ಧ'(ತುಳು) ದಂತಹ ಅಪರೂಪದ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿದ ಶ್ರೀ.ರಾಮಚಂದ್ರ ಪಿ ಎನ್ ಆವರ ಇನ್ನೊಂದು ಕಲಾತ್ಮಕ ಚಿತ್ರದ (ಮಕ್ಕಳ ಚಿತ್ರ) ಶೂಟಿಂಗ್ ಮುಗಿಸಿ ಧಾರವಾಡದಿಂದ ಮರಳಿ ಬಂದವಳಿಗೆ ಗೊತ್ತಾದುದು ನನ್ನ ಕನಸಿನ ರೆಕ್ಕೆಗೆ ವಾಸ್ತವದ ಪುಕ್ಕ! ವಿಷ್ಣು ಸರ್ ನಮಗೆಲ್ಲ ಪಾರ್ಟಿ ಕೊಡ್ತಿದಾರೆ!!
ನಿನ್ನೆ ಸಂಜೆ ವಿಷ್ಣುವರ್ಧನ್ ಆವರ ಮನೆಗೆ ಹೋಗಲು ಬುದ್ದಿ ಸಂಭ್ರಮ ಪಡುತ್ತಿತ್ತಾದರೂ ಮನಸಿಗೆ ಎಂಥದೋ ಮುಜುಗರ.. ಅಂಥ ದೊಡ್ದವರೆದುರಿಗೆ ಹೋಗಿ ನಿಲ್ಲುವುದು ಅಂದರೆ ಸಂಕೋಚ.. ನನ್ನ ಜೊತೆಯಲ್ಲಿರುವ ಕೆಲವರದೂ ನನ್ನಂತದೆ ಮನಸ್ಥಿತಿ!! ಹೋದೆವು. ಖುದ್ದು ವಿಷ್ಣು ಸರ್ ಬಂದು ನಮ್ಮನ್ನೆಲ್ಲ ಸ್ವಾಗತಿಸಿದರು. ನಮ್ಮ ನಿರ್ದೇಶಕರಾದ ಟಿ ಎನ್ ಸೀತಾರಾಂ ಸರ್ ನಮ್ಮನ್ನೆಲ್ಲಾ ಪರಿಚಯಿಸಿದರು. ನಾಲ್ಕು ಹೆಜ್ಜೆ ಮುಂದೆ ಬರುವಷ್ಟರಲ್ಲಿ ಭಾರತಿಯವರು ಬಂದು ನಮ್ಮನ್ನೆಲ್ಲಾ ಇದಿರುಗೊಂಡರು. ಮನಸು ಸಂಭ್ರಮದ ಸಾಗರ. ನಾನು ಅವರಿಬ್ಬರನ್ನು ಮುಖಃತ ಭೆಟ್ಟಿಯಾಗುತ್ತಿದ್ದೇನೆ !! ಮತ್ತು ಅವರಿಬ್ಬರೂ ತುಂಬು ಆತ್ಮೀಯತೆಯಿಂದ ನನ್ನನ್ನು ಮಾತನಾಡಿಸುತ್ತಿದ್ದಾರೆ!!! ಹುರ್ರೇ!!ನನ್ನ ಕನಸು ನನಸಾಗಿಬಿಟ್ಟಿತು!! ದಂಪತಿಗಳಿಬ್ಬರೂ ನನ್ನ ನಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವಿಷ್ಣು ಸರ್ ಹೇಳಿದ ಮಾತೊಂದು ಸದಾ ವಾಸ್ತವವನ್ನು ನೆನಪಿಸುತ್ತಾ ನನ್ನ ಜೊತೆಗಿರುತ್ತದೆ. ನನ್ನ ಪಾತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಮೇಲೆ ಅವರು ಹೇಳಿದ ಮಾತಿದು, "ನಾನು ಹೊಗಳ್ತಿರೋದು ವ್ಯಕ್ತಿಯನ್ನಲ್ಲ, ನಟನೆಯನ್ನು." ಈ ಒಂದು ಮಾತು ಸಾಕಲ್ಲವೇ ಅಹಂಕಾರ ಬರದಂತೆ, ಮನುಷ್ಯನನ್ನು ಸಹಜವಾಗಿರುವಂತೆ ನೋಡಿಕೊಳ್ಳಲು?
ಹೇಳಲು ಇನ್ನೂ ಎಷ್ಟೊಂದು ಇದೆಯಾದರೂ ಭಾವನೆಗಳಿದಿರು ಭಾಷೆ ಸೋಲುತ್ತಿರುವ ಅನುಭವವಾಗುತ್ತಿದೆ ಏನು ಮಾಡಲಿ...
ತಮ್ಮ ಧಾರಾವಾಹಿಯಲ್ಲಿ 'ಮಂಗಳತ್ತೆ' ಯಂಥ ಗಟ್ಟಿ ಪಾತ್ರ ಕೊಟ್ಟು ನನ್ನ ಈ ಸುದಿನಕ್ಕೆ ಕಾರಣರಾದ ಸೀತಾರಾಂ ಸರ್ ಗೆ ತಲೆ ಬಾಗುವೆ..ನಾನು ಮಂಗಳತ್ತೆಯಾಗಿ ಪಾತ್ರ ಪ್ರವೇಶ ಮಾಡುವಲ್ಲಿ ಎಪಿಸೋಡ್ ಡೈರೆಕ್ಟರ್ ವಿನೋದ್ ಧೋ0ಡಾಳೆ ಅವರ ಸಹಕಾರ ಸಹನೆ ದೊಡ್ಡದು.
ಬಡ ಕಾರ್ಮಿಕನಿಗೆ ದೀಪಾವಳಿಯ ಸಂಭ್ರಮಕ್ಕೆ ಬೋನಸ್ ಅನ್ನೋ ಹಾಗೆ ನನ್ನ ಮೆಚ್ಚಿನ ನಾಯಕ ನಟರಾದ ಅನಂತ್ ನಾಗ್, ರಮೇಶ್ ಅರವಿಂದ್ ಬಂದಿದ್ದರು. ಬಿ ಸರೋಜಾದೇವಿ, 'ಎಡಕಲ್ಲು ಗುಡ್ಡದ ಮೇಲೆ'ಖ್ಯಾತಿಯ ಚಂದ್ರಶೇಖರ್ ಮತ್ತು ಶಿವರಾಂ, ಗಾಯತ್ರಿ ಅನಂತ್ ನಾಗ್, ಸುಂದರ್ ರಾಜ್,ನಿರ್ಮಾಪಕ ಕರಿ ಸುಬ್ಬು,ರಮೇಶ್ ಭಟ್,ನಾಗತಿಹಳ್ಳಿ,ಅನಿರುದ್ದ್... ಆ ಆತ್ಮೀಯ ವಾತಾವರಣ, ಅದ್ಭುತವಾದ ಊಟ, ದಿವ್ಯವಾದ ವಾದ್ಯ ಸಂಗೀತ(live), ಕುಣಿತ, ಆಹಾ!
Saturday, June 14, 2008
ರಾಧೆ ಎಲ್ಲಿ ? ತಿಳಿದವರು ಹೇಳುವಿರಾ?...
ರಾಧಾ- ಮಾಧವರ ಪ್ರೀತಿ ಅಮರ, ಮಧುರ . ಯಾರಿಗೆ ಗೊತ್ತಿಲ್ಲ ಹೇಳಿ? ನನ್ನನ್ನು ಕಾಡುವ ಪ್ರಶ್ನೆ ಅಂದರೆ ಈ ಕೃಷ್ಣನ ಹೆಸರಿನೊಂದಿಗೆ ಅಂಟಿಕೊಂಡ ರಾಧೆ, ಕೃಷ್ಣ ಅವಳನ್ನು ತೊರೆದು ಹೋದ ನಂತರ ಏನಾದಳು?.... ಅವನ ನೆನಪಲ್ಲೇ ಕೊರಗುತ್ತಾ ಒಂಟಿಯಾಗಿದ್ದಾಳೆ?... ಅವಳೂ ಊರು ತೊರೆದಳೆ?... ಮರಳಿ ತನ್ನ ಗಂಡನೊಂದಿಗೆ ಸಂಸಾರ ನಡೆಸಿದಳೆ?....ಅಥವಾ ......... ಇಲ್ಲವಾದಳೆ?!
ಏನಾದಳು ರಾಧೆ ? ಅಷ್ಟೆಲ್ಲ ರಾಧಾ - ಮಾಧವರ ಪವಿತ್ರ ಅಮರ ಪ್ರೀತಿಯನ್ನು ವರ್ಣಿಸಿ ಬರೆದ ಕವಿ ನಂತರ ಯಾಕೆ ಮೌನವಾದ ರಾಧೆಯ ವಿಷಯದಲ್ಲಿ? ಏನಾದಳು ರಾಧೆ? ದಯವಿಟ್ಟು ಅವಳ ಕುರಿತು ಹೆಚ್ಚಿಗೆ ತಿಳಿದಿದ್ದರೆ ನನಗೆ ತಿಳಿಸುವಿರಾ?
ಸಾಕೆ ರಾಧೆಗೆ ಕೃಷ್ಣನ ಹೆಸರಿನೊಟ್ಟಿಗೆ ಅವಳ ಹೆಸರು ಸೇರಿಸಿ ಕರೆದರೆ? ಬೇಡವೆ ಅವನ ಪ್ರೀತಿ ಬದುಕಿಡೀ? ಸಹಿಸುವಳೆ ರಾಧೆ ತನ್ನ ಹೊರತು ಬೇರೆಯವರನ್ನು ಕೃಷ್ಣ ಪ್ರೀತಿಸುವುದನ್ನು ? ಏನಾದಳು ರಾಧೆ? ...
ಶತಶತಮಾನದಿಂದ ಪರ ಪುರುಷ,ಪರ ಸ್ತ್ರೀ ಯನ್ನು ಪ್ರೀತಿಸುವುದು ಅಥವಾ ಮೊಹಿಸುವುದು ಭಾರತೀಯ ಸಂಪ್ರದಾಯದಲ್ಲಿ ನಿಷಿದ್ಧ ಎನ್ನುವಂತೆ ಬಿಂಬಿಸಿಕೊಂಡು ಬರಲಾಗಿದೆಯಲ್ಲವೇ? ಹಾಗಿದ್ದ ಮೇಲೆ ರಾಧಾ ಮಾಧವರ ಪ್ರೀತಿಯನ್ನು ನಮ್ಮ ಭಾರತಿಯ ಸಂಪ್ರದಾಯ ಇಷ್ಟು ಸುಲಭವಾಗಿ ಸ್ವೀಕರಿಸಿದ್ದು ಹೇಗೆ? ಯಾಕಾಗಿ?... ಚರ್ಚಿಸೋಣವೇ? ದಯವಿಟ್ಟು.
ಮತ್ತೊಮ್ಮೆ ಕೇಳುವೆ ರಾಧೆ ಎಲ್ಲಿ? ...
ಏನಾದಳು ರಾಧೆ ? ಅಷ್ಟೆಲ್ಲ ರಾಧಾ - ಮಾಧವರ ಪವಿತ್ರ ಅಮರ ಪ್ರೀತಿಯನ್ನು ವರ್ಣಿಸಿ ಬರೆದ ಕವಿ ನಂತರ ಯಾಕೆ ಮೌನವಾದ ರಾಧೆಯ ವಿಷಯದಲ್ಲಿ? ಏನಾದಳು ರಾಧೆ? ದಯವಿಟ್ಟು ಅವಳ ಕುರಿತು ಹೆಚ್ಚಿಗೆ ತಿಳಿದಿದ್ದರೆ ನನಗೆ ತಿಳಿಸುವಿರಾ?
ಸಾಕೆ ರಾಧೆಗೆ ಕೃಷ್ಣನ ಹೆಸರಿನೊಟ್ಟಿಗೆ ಅವಳ ಹೆಸರು ಸೇರಿಸಿ ಕರೆದರೆ? ಬೇಡವೆ ಅವನ ಪ್ರೀತಿ ಬದುಕಿಡೀ? ಸಹಿಸುವಳೆ ರಾಧೆ ತನ್ನ ಹೊರತು ಬೇರೆಯವರನ್ನು ಕೃಷ್ಣ ಪ್ರೀತಿಸುವುದನ್ನು ? ಏನಾದಳು ರಾಧೆ? ...
ಶತಶತಮಾನದಿಂದ ಪರ ಪುರುಷ,ಪರ ಸ್ತ್ರೀ ಯನ್ನು ಪ್ರೀತಿಸುವುದು ಅಥವಾ ಮೊಹಿಸುವುದು ಭಾರತೀಯ ಸಂಪ್ರದಾಯದಲ್ಲಿ ನಿಷಿದ್ಧ ಎನ್ನುವಂತೆ ಬಿಂಬಿಸಿಕೊಂಡು ಬರಲಾಗಿದೆಯಲ್ಲವೇ? ಹಾಗಿದ್ದ ಮೇಲೆ ರಾಧಾ ಮಾಧವರ ಪ್ರೀತಿಯನ್ನು ನಮ್ಮ ಭಾರತಿಯ ಸಂಪ್ರದಾಯ ಇಷ್ಟು ಸುಲಭವಾಗಿ ಸ್ವೀಕರಿಸಿದ್ದು ಹೇಗೆ? ಯಾಕಾಗಿ?... ಚರ್ಚಿಸೋಣವೇ? ದಯವಿಟ್ಟು.
ಮತ್ತೊಮ್ಮೆ ಕೇಳುವೆ ರಾಧೆ ಎಲ್ಲಿ? ...
Subscribe to:
Posts (Atom)

