Wednesday, October 30, 2013

ನಾನೀಗ...

ಇಲ್ಲಿಯವರೆಗೆ
ಬಯಸಿದ್ದು ಸಿಕ್ಕೂ ಕೈ ಜಾರಿಯೋ
ಬಯಸಿದ್ದು ಸಿಗದೇ ಹೋಗಿಯೋ
ಯಾವುದು ಏನಂತಾನೇ ಗೊತ್ತಿರದೆ
ಬಯಸದೇ ಇರುವುದೋ
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ

ಇನ್ನಷ್ಟು ಬಾಕಿ ಇದೆ ಜೀವನ
ಮುಟ್ಟು ನಿಂತಿಲ್ಲದ ಹೆಣ್ಣು
ಜೀವಂತವಾಗಿರುವುದರ ಪ್ರತೀಕ
ಈ ಉಸಿರಾಟ
ನಿತ್ಯ ಕಣ್ತೆರೆದು ಬದುಕನ್ನ
ಸಂಧಿಸಲೇಬೇಕಾದ ಅನಿವಾರ್ಯತೆಗೆ
ಗರ್ಭ ಕಟ್ಟುತ್ತದೆ
ಬೇಕೋ ಬೇಡವೋ ಹುಟ್ಟಿ ಬೆಳೆಯುತ್ತದೆ
ಆಸೆ ಸಂತಾನ
ಗರ್ಭಪಾತ ಮಹಾ ಪಾಪ
ತಾನಾಗಿ ಬರುವ ಸಾವಿಗೆ
ಕಾಯಬೇಕು ನವೆನವೆದು
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ...

     -27th Oct 2013

ಶೃತಿ ಲಯ

ಚಿತ್ತ ಹುತ್ತಗಟ್ಟಿ
ಒಳಗಿನ ಭಾವಗಳು ನಲಿದು ನುಲಿದು
ಭುಸುಗುಟ್ಟಿದ ಸದ್ದು
ಕೊಳಲನಾದವಾಗಿ
ಸುದ್ದಿಯಾಯಿತಂದು
ಇಂದು
ಚಿತ್ತಹುತ್ತವ
ಗಾಳಿ ನೇವರಿಸಿದಾಗಲೆಲ್ಲ
ಒಳಗಿನ ನಿರ್ವಾತ ಕಲಕಿ
ಅಪಶೃತಿ
ತುಂತುಂಬಿ ಖಾಲಿಯಾಗುವುದೇ
ಬದುಕಿನ ರೀತಿ!

          - 21st Oct 2013