Sunday, July 19, 2009

ನಿರಾಕರಿಸದಿರಿ ದೊರೆ

ಕೇಳಿದೆ ನೇಕಾರನಿಗೆ ಬೇಕಿದೆ
ಅಪರೂಪದ ಸೀರೆಯೊಂದು
ತಯಾರಿಸಿಕೊಡು ನನಗೆಂದು
ಕೇಳಿದ ನೇಕಾರಣ್ಣ
ಯಾವ ಬಣ್ಣ
ಹೆಣ್ಣೇ ಯಾವ ನೂಲು
ಎಂಥಾ ಸೆರಗು
ಹೇಗಿರಬೇಕು ಒಡಲು
ಮೊದಲು ಭಾಷೆ ಕೊಡು
ಹೇಳುವೆ ಸೀರೆಯ ಸೆರಗು ಬೆಡಗು
ದಿಟ್ಟಿಸಿದ ನೇಕಾರಣ್ಣ
ಮನ ಬಗೆಯುವಂತೆ
ಒಪ್ಪಿ ಭಾಷೆಯಿತ್ತ
ಎಲ್ಲ ಬಲ್ಲೆನೆಂಬಂತೆ
ನೂಲು ಹತ್ತಿಯದಿರಲಿ
ಪ್ರೀತಿಯ ತೆರದಿ ಮೃದು
ಎಲ್ಲಾ ಕಾಲಕ್ಕೂ ಸಲ್ಲುವುದು
ಬಣ್ಣವಿರಲಿ ಪಂಚರಂಗಿ
ಜ್ಞಾನ, ಶ್ರಮ, ಸಾಧನೆ,
ಯಶಸ್ಸು, ಸಮ್ಮಾನ
ಸಮವಾಗಿ ಮೇಳೈಸಿರಲಿ
ನೇಯಬೇಕು ನೋಡು
ಸೆರಗ ತುಂಬಾ
ಮಲ್ಲಿಗೆಯ ಪರಿಮಳದ ನಗುವ
ಅಂಚೂ ಅಷ್ಟೆ ಹಬ್ಬಬೇಕದು
ನೆಮ್ಮದಿಯ ಬಳ್ಳಿಯಾಗಿ
ಜನ ಬೆರಗುಗೊಳ್ಳಬೇಕು
ಇನ್ನು ಒಡಲು ಮಾರಾಯಾ
ಔದಾರ್ಯ, ಮಮತೆ,
ಸ್ನೇಹವೆಂಬ ಮುತ್ತು
ರತ್ನ, ಹವಳಗಳ ಕುಸೂರಿಯಾಗಬೇಕು
ನೋಡಿದವರು ರೆಪ್ಪೆ ಮೀಟುಕಿಸುವುದು
ಮರೆಯುವ ಹಾಗಿರಬೇಕು...
ವಿವರ ಆಲಿಸಿದ ನೇಕಾರ
ಕೇಳಿದ ಒಂದು ಪ್ರಶ್ನೆ
ಹೆಣ್ಣೇ ನಿನಗಾಗಿ ಸೀರೆ
ನೇಯುವಿನೇನೋ ಸರಿ
ಆದರೆ...
ಪ್ರೀತಿ, ನಗು, ಔದಾರ್ಯ
ಇತ್ಯಾದಿಗಳನ್ನೆಲ್ಲ ಎಲ್ಲಿಂದ ಹುಡುಕಿ ತರಲೆ?
ಅದು ಅಂಥ ಕಷ್ಟವಲ್ಲ ನೇಕಾರಣ್ಣ
ಹೋಗು ನನ್ನವರ ಹತ್ತಿರ
ಅವರು ಇವೆಲ್ಲದರ ಆಗರ
ಕೇಳಿದರೆ ಕೊಡದಿರಲಾರರು
ಉಪಚರಿಸದೆ ನಿನ್ನ ಕಳಿಸಲಾರರು
ಮೆರೆಯಬೇಕಿದೆ ಅಪರೂಪದ ಸೀರೆಯುಟ್ಟು
ಜಗದೇಕ ಸುಂದರಿ ಎಂದು ಜಂಭ ಪಟ್ಟು
ಇಷ್ಟರಲ್ಲೆ ಬರಬಹುದು ನೇಕಾರ
ಮನೆಯ ಬಾಗಿಲಿಗೆ
ಕೊಡಲಾರೆನೆಂದು ನಿರಾಕರಿಸದಿರಿ ದೊರೆ
ಬೇಡಿ ಬಂದವರಿಗೆ...

Thursday, July 16, 2009

ಕನಸು ಎಚ್ಚರಿಸುತ್ತಿದೆ..

-->
"ಹೆಲೊ ಪುಟ್ಟಾ, ಹೆಲೊ, ಹೆಲೊ...ಹಲೋ.... ಮಲಗಿದೀಯಾ..? ಹ್ಹಾಹ್ಹಾಹ್ಹಾ ನಿದ್ದೆಯಲ್ಲಿರುವ ನಿನ್ನೆದೆ ಬಡಿತ ಈ ಫೋನಲ್ಲೂ ಎಷ್ಟು ಸ್ಪಷ್ಟವಾಗಿ ಕೇಳ್ತಿದೆ ನೋಡು! ಸರಿ ಮಲಗು ಮಗು, ಎದ್ದ ನಂತರ ಫೋನ್ ಮಾಡು, ಸರೀನಾ?" ಅವನ ಈ ಮುದ್ದಿನ ಸುಖವನ್ನು ಅನುಭವಿಸುತ್ತಲೇ ನಿದ್ದೆಯಾಳಕ್ಕಿಳಿದಳು ಆಕೆ. ಅತ್ತೆ ಮಹಡಿ ಮೇಲೆ ಏನೋ ಕೆಲಸದಲ್ಲಿದ್ದಾರೆ, ಮಹಡಿಯ ಬಾಲ್ಕನಿ ತುಂಬಾ ಸಾಮಾನು ಹರಡಿವೆ. ಅಷ್ಟರಲ್ಲಿ ಮತ್ತೆ ಫೋನು. " ಈ ಅಮ್ಮಂಗೆ ಸ್ವಲ್ಪಾನೂ ಬುದ್ದಿ ಇಲ್ಲ ನೋಡು, ಈಗ್ಯಾಕೆ ಆ ಶ್ಯಾಮಲನ್ನ ಮನೆಗೆ ಕರೀಬೇಕಿತ್ತು? ಮೊದಲೇ ಇಕ್ಕಟ್ಟಿನ ಮನೆ, ಯಾರಾದರು ಬಂದರೆ ಅವರ ಕೈ ಕಾಲಿಗೆ ಸಾಮಾನು ತಾಗ್ತವೆ, ಅಲ್ಲದೆ..." ಹೀಗೆ ಅವನು ಪರದಾಡುತ್ತಿರುವಾಗಲೇ ಆಕೆ ನಕ್ಕು, "ಯಾಕೆ ಟೆನ್ಶನ್ ಮಾಡ್ಕೊಳ್ತೀರಿ? ನಾನಿಲ್ವಾ? ಮನೆ ಒಪ್ಪ ಮಾಡಿದ್ರೆ ಆಯ್ತಲ್ಲಾ. ಡೋಂಟ್ ವರಿ." ಎಂದು ಅವನು ಮಾತು ಮುಂದುವರೆಸಲು ಅವಕಾಶ ಕೊಡದೆ ಫೋನ್ ಕಟ್ ಮಾಡಿ, ಅಲ್ಲಿ ಇದ್ದ ಬಟ್ಟೆ, ಮೆಟ್ಟಿಲ ಮೇಲಿದ್ದ ಮೊರವನ್ನು ಎತ್ತಿಕೊಂಡು ಮಹಡಿ ಮೇಲೆ ಹೊರಟವಳು ಒಂದು ಕ್ಷಣ ಅವಕ್ಕಾಗಿ ನಿಂತಳು. ಅತ್ತೆ ೧೦-೧೫ ಮೂಟೆಗಳಷ್ಟು ರಾಶಿ ಧಾನ್ಯವನ್ನು(ಅವರೆಕಾಳು) ಎದರು ಹಾಕಿಕೊಂಡು ಅದನ್ನು ಮೊರದಲ್ಲಿ ತುಂಬಿ ಹೊರಗೆ ಒಣಗಿಸಲೆಂದು ಒಬ್ಬಳ ಕೈಯಲ್ಲಿ ಕೊಡುತ್ತಿದ್ದಾರೆ,ಅವರ ಸಹಾಯಕ್ಕೆಂದು ಇನ್ನೊಂದು ಮೊರದಲ್ಲಿ ಸಿಪ್ಪೆ ಬಿಡಿಸಿದ ಅವರೆಕಾಳನ್ನು ತುಂಬಿಕೊಂಡು ಅವರೆದುರು ನಿಂತಿದ್ದಾಳೆ ಶ್ಯಾಮಲ! ಇವಳಿಗೋ ಎಲ್ಲವೂ ಗೋಜಲು ಗೋಜಲು. ಈ ಶ್ಯಾಮಲ ಬಂದಿದ್ದ್ಯಾವಾಗ? ಮತ್ತೆ ಆಕೆ ಅತ್ತೆಗೆ ನನ್ನ ಜಾಗದಲ್ಲಿ ನಿಂತು ಸಹಾಯ ಮಾಡುತ್ತಿದ್ದಾಳಲ್ಲ ಯಾಕೆ? ವಿಚಿತ್ರ ತಳಮಳವೊಂದು ಮನವನಾವರಿಸಿದಂತಾಗಿ ಓಡು ಹೆಜ್ಜೆಯಲ್ಲಿ ಅತ್ತೆಯ ಹತ್ತಿರ ಹೋಗಿ, " ಅಮ್ಮ ಇದೇನು ಮಾಡ್ತಿದೀರಿ? ಅದೂ ಈ ಹೊತ್ತಲ್ಲಿ? ನನಗೆ ಹೇಳಿದ್ದರೆ..." ಇವಳ ಮಾತಿಗೆ ಅಷ್ಟಾಗಿ ಗಮನ ಕೊಡದವರಂತೆ ಅತ್ತೆ ಶ್ಯಾಮಲ ಕೈಯಿಂದ ಮೊರ ಇಸಿದುಕೊಂಡು ತಮ್ಮ ಕೆಲಸ ಮುಂದುವರೆಸಿದರು. ನಿಸ್ಸಾಹಾಯಕತೆಯಿಂದ ಆಕೆಗೆ ನಿಃಶ್ಯಕ್ತಿ ಆವರಿಸಿದಂತಾಗಿ ಕುಸಿದು ಕೂರಲೂ ಆಗದೆ ಸುತ್ತಲೂ ದೃಷ್ಟಿ ಹರಿಸಿದವಳಿಗೆ ಅಚ್ಚರಿ! ನಮ್ಮ ಮನೆಯಲ್ಲಿ ಇಷ್ಟು ದೊಡ್ಡ ಅಂಗಳ ಎಲ್ಲಿಂದ ,ಯಾವಾಗ ಬಂತು?! ಇಷ್ಟೊಂದು ಧಾನ್ಯ ಯಾರು ಕೊಟ್ಟವರು? ನಾನು ಅತ್ತೆಯ ಜೊತೆ ಮಹಡಿ ಮೇಲಿರದೆ ಕೆಳಗೆ ಸೆಪರೇಟ್ ಆಗಿ ರೂಮೊಂದರಲ್ಲಿ ಯಾಕಿದ್ದೇನೆ? ನಮ್ಮ ಮನೆ ಪುಟ್ಟದಲ್ಲವಾ? ಮಹಡಿ ಕೂಡಾ ಇಲ್ಲ,  ನಾವಿರೋದು ಮೂರನೆಯ ಫ್ಲೋರ್^ನ ಪುಟ್ಟ ಫ್ಲಾಟಿನಲ್ಲಿ....
ಹೀಗೆ ಯೋಚಿಸುತ್ತಿದ್ದಂತೆ ಎಚ್ಚರವಾಯ್ತವಳಿಗೆ. ಮೈ ಎಲ್ಲಾ ಸಣ್ಣಗೆ ನಡುಕ. ಹಾಗಿದ್ದರೆ ಇಷ್ಟೊತ್ತು ತಾನು ಕಂಡದ್ದು ಕನಸು! ಕನಸೆಂದು ಅರಿವಾದಾಗಲೂ ಅಲ್ಲಿನ ದೃಶ್ಯವನ್ನು ಒಪ್ಪಿಕೊಳ್ಳಲು ಮನಸು ತಯಾರಿಲ್ಲ. "ವಿಚಿತ್ರ" ಎಂದು ಮುಗುಳು ನಗುತ್ತಾ ಎದ್ದು ದಿಂಬನ್ನು ಅವಚಿಕೊಂಡು ಕುಳಿತವಳಿಗೆ ಮದುವೆಯಾದ ಹೊಸತರಲ್ಲಿನ ಘಟನೆಯೊಂದು ನೆನಪಾಯ್ತು.
ಆಕೆ ಅವನವಳಾಗಿ ಈ ಮನೆಗೆ ಬಂದು ೩-೪ ದಿನಗಳಾಗಿದ್ದವು. ಆಕೆಯ ಗೆಳತಿಗೆ ಅತ್ತೆಯೊಂದಿಗಿನ ತನ್ನ ಹೊಂದಾಣಿಕೆಯ ಬಗ್ಗೆ ಫೋನಿನಲ್ಲಿ ವಿವರಿಸಿದ್ದಳು. ಈಕೆ ಹೊಂದಿಕೊಂಡಳು ಅನ್ನುವುದಕ್ಕಿಂತ ಅತ್ತೆಯೇ ಈಕೆಯನ್ನು ಮಗಳಂತೆ ಭಾವಿಸಿ ಆದರ ತೋರಿದ್ದರು. ಅತ್ತೆಯ ಒಲುಮೆಗೆ ಆಕೆಯ ಮನದಲ್ಲಿ ಎತ್ತರದ ಸ್ಥಾನವಿತ್ತು. ಅವರ ಆತ್ಮೀಯತೆ ಆಪ್ಯಾಯಮಾನ ಆಕೆಗೆ. ಈ ೩-೪ದಿನಗಳಲ್ಲಿ ಅವರಿಬ್ಬರೂ ಎಷ್ಟು ಚೆನ್ನಾಗಿ ಹೊಂದಿಕೊಂಡರೆಂದರೆ ಆಕೆ ತನ್ನ ಮಿತಿಯಲ್ಲಿಯೇ ಅತ್ತೆಗೆ ಇಷ್ಟವಾದ ಹಾಡುಗಳನ್ನೆಲ್ಲ ಸಂಕೋಚ ತೊರೆದು ಹಾಡಿದ್ದಳು. ಈ ವಿಷಯವನ್ನು ಗೆಳತಿಗೆ ತಿಳಿಸಿದಾಗ ಅವಳಿಗೂ ಇವರ ಮನೆಯ ಆತ್ಮೀಯ ವಾತಾವರಣವನ್ನೊಮ್ಮೆ ನೋಡಬೇಕೆಂಬ ಹಂಬಲವಾಗಿ ತಾನು ಬರುತ್ತಿರುವುದಾಗಿ ತಿಳಿಸಿದಳು. ಸಂಭ್ರಮದಿಂದ ಗೆಳತಿ ಬರುತ್ತಿರುವ ವಿಷಯವನ್ನು ಹೇಳಲು ಅತ್ತೆಯತ್ತ ತಿರುಗಿದರೆ ಅವರ ಮುಖದಲ್ಲಿ ಮುಜುಗರ ಎದ್ದು ಕಾಣುತ್ತಿತ್ತು. ತನ್ನವನ ಕಡೆನೋಡಿದರೆ ಅವನದೂ ಅಂಥದೇ ಮುಖಭಾವ! ಗೆಳತಿಯ ಸಿರಿತನದ ಮುಂದೆ ನಮ್ಮ ಮನೆ ಪುಟ್ಟದೆನಿಸುತ್ತದೆ ಅನ್ನುವ ಸಂಕೋಚ ಅವರಿಬ್ಬರಿಗೂ.ಆದರೆ ಗೆಳತಿ ಎಂಥ ಸರಳ ಸ್ವಭಾವದವಳು ಎನ್ನುವುದನ್ನು ಈಕೆ ಬಲ್ಲಳು. ತಾಯಿ ಮಗನ ಮುಜುಗರದ ಕಾರಣ ಹಲವು ದಿನಗಳ ನಂತರ ಗೊತ್ತಾಗಿತ್ತು.ಆದರೆ ಈಗ ಆಕೆಗೆ ಗೆಳತಿಯನ್ನು ಕರೆದು ತಪ್ಪು ಮಾಡಿದಿನೇನೋ ಅನಿಸಿ ಅಳುಕುತ್ತಾ, "ಬೇಡವಾ ಗೆಳತಿಯನ್ನು ಕರೆಯುವುದು?" ಕೇಳಿದಳು ಅವನನ್ನು. "ಬರಲಿ ಆದರೆ ರಾತ್ರಿ ಉಳಿಯುವುದು ಬೇಡ" ಎಂದವನನ್ನು ಯಾಕೆ ಎಂದುಕೇಳಲು ಧೈರ್ಯ ಬಾರದೆ ಸುಮ್ಮನಾದವಳು ಮನೆಯನ್ನು ಒಪ್ಪಗೊಳಿಸುವ ಕಾರ್ಯದಲ್ಲಿ ತೊಡಗಿದಳು. ಆಕೆಯ ಅತ್ತೆಗೆ ಮಂಡಿ ನೋವು. ಕೂರಲು ಏಳಲು ಕಷ್ಟ. ಜೊತೆಗೆ ಜೀವನದ ಕಹಿ ಅನುಭವದಿಂದಾಗಿ ಒಂಥರದ ನಿರಾಸಕ್ತಿ ಮನೆ ಮಾಡಿತ್ತು ಅವರಲ್ಲಿ. ಅದು ಮನೆಯ ಓರಣದ ಮೇಲೆ ಅಲ್ಪ ಸ್ವಲ್ಪ ಪರಿಣಾಮ ಬೀರಿತ್ತು. ಹಾಗಂತ ಮನೆ ಗಲೀಜು ಅಂತ ಅರ್ಥವಲ್ಲ. ಅದೂ ಅಲ್ಲದೆ ಅವರ ಏಕಮಾತ್ರ ಸುಪುತ್ರ, ಈಕೆಯ ಅವನು ಪಕ್ಕಾ ಭಾರತೀಯ ಗಂಡಸು ಮನೆಗೆಲಸದ ವಿಷಯದಲ್ಲಿ. ಈ ವಿಷಯದಲ್ಲಿ ಮಾತ್ರ ಅವನಿಂದ ಯಾವ ಸಹಾಯವನ್ನೂ ಅಪೇಕ್ಷಿಸಲಾಗದು. ಹೀಗಾಗಿ ಈಗ ಗೆಳತಿಯ ಬರುವಿನ ಕಾರಣವನ್ನಿಟ್ಟುಕೊಂಡು ಆಕೆ ಮನೆಯನ್ನು ಸ್ವಚ್ಚ ಮಾಡುತ್ತಿದ್ದರೆ ಅತ್ತೆಗೆ ಸಂಕೋಚ. "ಬೇಡ ಯಾಕೆ ಕಷ್ಟಪಡ್ತೀಯ"ಅಂತ ಅವರು ಅಕ್ಕೆರೆಯಿಂದ ಹೇಳಿದರಾದರೂ ಈಕೆಗೆ ‘ತನ್ನ ಮನೆ’ ಅನ್ನುವ ಒಲುಮೆ. ಅವರನ್ನು ಸಮಾಧಾನಿಸಿ, ಮನೆ ಓರಣಗೊಳಿಸಿ ಒಪ್ಪ ಮಾಡಿದವಳನ್ನು ಅತ್ತೆ ಉಪಚರಿಸಿದ್ದರು. ವಾತ್ಸಲ್ಯದ ಹೊಳೆ ಹರಿಸಿದ್ದರು. ಆದರೆ ಇವತ್ತಿನ ಕನಸು ಮಾತ್ರ....
ಬಾಗಿಲಿನ ಕರೆಗಂಟೆಯ ಶಬ್ಧವಾಯ್ತು. ಇದು ಅವನು ಮನೆಗೆ ಬರುವ ಸಮಯ. ಮುಖದಲ್ಲಿ ನಗು ಧರಿಸಿ ಬಾಗಿಲಿನತ್ತ ನಡೆದಳು ಆಕೆ.

Tuesday, July 14, 2009

ಪುಟಾಣಿ ಪಾರ್ಟಿ ಟ್ರೇಲರ್ !

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಹಿಂದೆ ನಾನು ರಾಮಚಂದ್ರ ಪಿ ಎನ್ ಅವರ ನಿರ್ದೇಶನದ, ನಾನು ಅಭಿನಯಿಸಿದ ಮಕ್ಕಳ ಚಿತ್ರ 'ಪುಟಾಣಿ ಪಾರ್ಟಿ' ಯ ಬಗ್ಗೆ ಲೇಖನವೊಂದನ್ನು ಬರೆದಿದ್ದೆ. ಈಗ ಅದರ ಟ್ರೇಲರ್ ನಿಮಗೆಲ್ಲ ನೋಡಿಸುವ ಆಸೆ ನನಗೆ.

http://www.youtube.com/watch?v=_bqhIeWo988


ಬಹುಶಃ ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೇನೋ.. ನಿಮ್ಮಂತೆ ನಾನೂ ಕಾತರಳಾಗಿದೀನಿ ಚಿತ್ರವನ್ನು ಥೇಟರ್^ನಲ್ಲಿ ನೋಡೋಕೆ. ಸಧ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳೋಣ.