Monday, February 22, 2010

ಮಾಣಿ

ಚಿತ್ರದಲ್ಲಿ ಗಾಬರಿಗೊಂಡು ನಿಂತ ವ್ಯಕ್ತಿಯೇ ಜಗದೀಶ್ ರೈ.


ನಾವು ನಾಗರೀಕರೆಂದು ಕರೆಸಿಕೊಳ್ಳುವವರು ಎಂಥಾ ದಪ್ಪ ಚರ್ಮದವರು ಎಂದು ನನಗರಿವಾದುದು ಏಳೆಂಟು ವರ್ಷಗಳ ಹಿಂದೆ. ನಾನು, ನನ್ನ ಪ್ರಪಂಚ ಎನ್ನುವ ಲಿಮಿಟ್ಟಿನಲ್ಲೇ ತುಂಬಾ ಜನ ದಿನ ಕಳೀತಾ ಇರ್ತೀವಿ. ಕ್ಷಣವೋ, ದಿನವೋ ನಮ್ಮ ಬದುಕಿನಲ್ಲಿ ಬಂದು ಹೋಗುವ ಆದರೆ ಮುಖ್ಯವೆನಿಸದ ಎಷ್ಟೋ ಜನರಿರುತ್ತಾರೆ. ಅವರು ನಮಗೆ ಮುಖ್ಯವಲ್ಲ ಅನ್ನುವ ಕಾರಣಕ್ಕಾಗಿಯೇ ನಾವು ಅವರ ಬಗ್ಗೆ ನಿಷ್ಕಾಳಜಿಯಿಂದ ಇರುತ್ತೇವೆ. ಇದು ಮಾನವ ಸಹಜ ಬುದ್ದಿ. ಬೇಕು ಅಂತಲೇ ಏನು ಮಾಡುವುದಲ್ಲ ಅನ್ನುವುದೂ ನಿಜವೇ ಆದರೂ ಒಂಚೂರು ಅಲರ್ಟ್ ಆಗಿದ್ದರೆ ಆ ಕ್ಷಣ, ಗಂಟೆ, ದಿನದ ಲೆಕ್ಕದ ವ್ಯಕ್ತಿಗಳೊಡನೆ ಇನ್ನೂ ಹೆಚ್ಚು ಸೌಹಾರ್ದತೆಯೊಂದಿಗೆ ವ್ಯವಹರಿಸಬಹುದೇನೋ.. ಅದರಿಂದ ವ್ಯಕ್ತಿ ಗೌರವಕ್ಕೂ ಒಂದು ಗೌರವ. ಇದರ ಕುರಿತು ನನ್ನಲ್ಲಿ ಜಾಗೃತಿ ಉಂಟು ಮಾಡಿದ್ದು ಸ್ನೇಹಿತ ಜಗದೀಶ್ ರೈ ಅವರು. ಇದು ಏಳೆಂಟು ವರ್ಷಗಳ ಹಿಂದಿನ ಮಾತು.

ಆಗಿನ್ನೂ ಮುಂಬೈನಲ್ಲೆ ಇದ್ದೆ ನಾನು. 'ಜಗಜ್ಯೋತಿ ಕಲಾವೃಂದ' ತಂಡದ, 'ಒಸರ್' ಹೆಸರಿನ ತುಳು ನಾಟಕದ ರಿಹರ್ಸಲ್ ನಡೀತಾ ಇತ್ತು. ಇದು ನಾನು ಅಭಿನಯಿಸಿದ ಏಕೈಕ ತುಳು ನಾಟಕ. ತುಳು ಬರದ ನಾನು ಈ ನಾಟಕದಲ್ಲಿ ಅಭಿನಯಿಸಲು ಒಪ್ಪಿದ್ದು ನಾನು ನಿರ್ವಹಿಸವ ಪಾತ್ರ ಮೂಕಿ ಮತ್ತು ಆ ನಾಟಕದ ಜೀವಾಳ ಅನ್ನುವ ಕಾರಣಕ್ಕಾಗಿ.:-) ಅಲ್ಲದೆ ಈ ನಾಟಕವನ್ನು ಕನ್ನಡದಲ್ಲಿ ಮುಂಚೆ ಇದೇ ತಂಡದಲ್ಲಿ ಅಭಿನಯಿಸಿದ್ದೆನಾದ್ದರಿಂದ ಬಾರದ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಕಷ್ಟವಿರಲಿಲ್ಲ. ನಮ್ಮ ಹೆಚ್ಚಿನ ರಿಹರ್ಸಲ್ಸ್ಎಲ್ಲಾ ನಡೆಯುತ್ತಿದುದು ಮಾತುಂಗಾದ ಕರ್ನಾಟಕ ಸಂಘದ ಕಿರು ಸಭಾ ಗೃಹದಲ್ಲಿ . ಸಂಘದ ಹತ್ತಿರದಲ್ಲಿ 'ಗಂಗಾ ವಿಹಾರ' ಎನ್ನುವ ಉಪಹಾರ ಗೃಹವೊಂದಿದೆ. ಕಲಾವಿದರಿಂದಲೇ ಅದು ನಡೆಯುತ್ತದೇನೋ ಅನ್ನುವಷ್ಟು ಅಲ್ಲಿನ ಎಲ್ಲ ಕಲಾವಿದರಿಗೂ ಗಂಗಾ ವಿಹಾರ ಪರಿಚಿತ. ಇಡೀ ದಿನ ರಿಹರ್ಸಲ್ ಹಮ್ಮಿಕೊಂಡ ದಿನ ನಮ್ಮೆಲ್ಲರ ಊಟ ಅಲ್ಲೇ ಆಗುತ್ತಿತ್ತು.

ಅಂದೂ ಸಹ ರಿಹರ್ಸಲ್^ನ ಮಧ್ಯಂತರದಲ್ಲಿ ಊಟಕ್ಕೆಂದು ನಾವೆಲ್ಲಾ 'ಒಸರ್'ನಾಟಕದ ತಂಡದವರು ಗಂಗಾ ವಿಹಾರದೆಡೆ ಹೆಜ್ಜೆ ಹಾಕಿದೆವು. ಟೇಬಲ್ ಗಾಗಿ ಸ್ವಲ್ಪ ಹೊತ್ತು ಹೊರಗೆ ಕಾದು, ಎರಡು-ಮೂರು ಟೇಬಲ್ ಖಾಲಿಯಾದದ್ದೇ ರೇಸ್^ಗೆ ಬಿದ್ದವರಂತೆ ಹೋಗಿ ಟೇಬಲ್^ಗಳನ್ನು ಆಕ್ರಮಿಸಿ ಸ್ಥಾಪಿತಗೊಂಡಿದ್ದೂ ಆಯ್ತು, ಊಟ ತರಿಸಿ ಉಂಡಿದ್ದೂ ಆಯ್ತು. ಕೈ ತೊಳೆಯಲು ಎದ್ದು ಸಿಂಕ್ ಹತ್ತಿರ ಹೋಗಬೇಕು, ನನಗೋ ತಿಂದದ್ದು ಹೆಚ್ಚಾಗಿ ಎದ್ದು ಸಿಂಕ್ ಹತ್ತಿರ ಹೋಗಲು ಆಲಸಿತನ. ನೀರಿನ ಗ್ಲಾಸ್ ತೊಗೊಂಡು ತಟ್ಟೆಯಲ್ಲೇ ಕೈ ತೊಳೆಯಲು ಹೊರಟವಳನ್ನು ಜಗದೀಶ್ ತಡೆದು, "ಎದ್ದು ಹೋಗಿ ಸಿಂಕಿನಲ್ಲಿ ಕೈ ತೊಳೆಯಿರಿ" ಎಂದರು ನಯವಾಗಿ.

ನನ್ನೊಳಗಿನ ಆಲಸಿತನ ನನ್ನನ್ನು ಕುರ್ಚಿಯಿಂದ ಏಳಗೊಡುತ್ತಿಲ್ಲ." ಅಯ್ಯೋ ಬೇಜಾರು ಜಗದೀಶ್, ಅಲ್ಲಿವರೆಗೂ ಎದ್ದು ಯಾರ್ಹೋಗ್ತಾರೆ.." ಎನ್ನುತ್ತಾ ತಟ್ಟೆಯಲ್ಲೇ ಕೈ ತೊಳೆಯಲು ಮುಂದಾದವಳನ್ನು ತಡೆದು ಸಿಂಕ್^ನಲ್ಲಿ ಕೈ ತೊಳೆವಂತೆ ಮತ್ತೆ ಹೇಳಿದರು ಜಗದೀಶ್.

ನಾನು " ಇವತ್ತೊಂದಿನ ತಟ್ಟೆಯಲ್ಲೇ ಕೈ ತೊಳ್ಕೊತೀನಿ ಬಿಡಿ ಜಗದೀಶ್, ಏನಾಗೋಲ್ಲ" ಎಂದೆ. ನಾನು ತಟ್ಟೆಯಲ್ಲಿಕೈ ತೊಳೆಯೋದನ್ನ ನೋಡಿ ಅಲ್ಲಿನ ಮ್ಯಾನೇಜರ್ ಬೈಯ್ಯಬಹುದು ಎನ್ನುವ ಕಾಳಜಿಗೆ ಜಗದೀಶ್ ಹಾಗಂತಿದಾರೆ ಅಂತಲೇ ನನ್ನ ಎಣಿಕೆ.

"ಹೇಳಿದ್ದು ಕೇಳಿಸಲಿಲ್ಲವಾ? ಎದ್ದು ಹೋಗಿ ಸಿಂಕಿನಲ್ಲಿ ಕೈ ತೊಳೆದು ಬನ್ನಿ." ಈ ಸಲ ಜಗ್ಗಿ ದನಿ ಗಡುಸಾಗಿತ್ತು. ನನಗೋ ಆಶ್ಚರ್ಯದ ಜೊತೆ ಅವಮಾನ ಕಾಡತೊಡಗಿತು. ಯಾಕೆಂದರೆ ಇಲ್ಲಿಯವರೆಗೆ ಯಾರೂ ನನ್ನನ್ನು ಹೀಗೆ ಗಡಸು ದನಿಯಲ್ಲಿ ಮಾತನಾಡಿಸಿರಲಿಲ್ಲ, ತುಂಬಾ ಸಭ್ಯ ವರ್ತನೆಯ ಜನರಿರುವ ಟೀಮ್ ಅದು. ಅಲ್ಲದೆ ಈ ಜಗದೀಶ್ ಅನ್ನುವ ವ್ಯಕ್ತಿ ಸದಾ ನಗುತ್ತಾ ನಗಿಸುತ್ತಾ ಇದ್ದಂಥವರು. ಅಂಥವರ ಗಡಸು ದನಿಯನ್ನು ನಾನು ನಿರೀಕ್ಷಿಸಿರಲೇಯಿಲ್ಲ. ಗಂಗಾ ವಿಹಾರದಲ್ಲಿ ಗಂಗೊದ್ಭವ ನನ್ನ ಕಣ್ಣಲ್ಲಿ!

ಅದರತ್ತ ಗಮನ ಕೊಡದ ಜಗದೀಶ್ " ಅಷ್ಟು ದೂರದಿಂದ ನೀವು ಊಟ ಮಾಡಲು ಇಲ್ಲಿಯವರೆಗೆ ಬರುತ್ತೀರಿ, ಊಟ ಮಾಡಿದ ಮೇಲೆ ನಿಮಗೆ ಹತ್ತಿರದಲ್ಲೇ ಇರುವ ಸಿಂಕ್ ಹತ್ತಿರ ಹೋಗಿ ಕೈ ತೊಳೆಯಲು ಏನು ಕಷ್ಟ? ನಿಮ್ಮಿಂದಾಗಿ ಪಾಪ ಆ ತಟ್ಟೆ ಎತ್ತುವ ಮಾಣಿಗಳು ಇಡೀ ದಿನ ವಾಸನೆಯ ಬಟ್ಟೆಯಲ್ಲಿ ದಿನ ಕಳೆಯಬೇಕು. ಯಾಕೆ ಅವರೇನು ಕರ್ಮ ಮಾಡಿದ್ದು?"

'ಇಡೀ ದಿನ ವಾಸನೆಯ ಬಟ್ಟೆ?' ಅರ್ಥವಾಗುತ್ತಿಲ್ಲ ಎನ್ನುವ ನೋಟದೊಂದಿಗೆ ಜಗ್ಗಿ ಕಡೆ ನೋಡಿದೆ. ಧುಮ್ಮಿಕ್ಕಲು ಕಾತರಿಸುತ್ತಿದ್ದ ಗಂಗಾ ಮಾತೆ ಇದ್ದಕ್ಕಿಂದಂತೆ ತನ್ನ ವೇಗಕ್ಕೆ ಕಡಿವಾಣ ಹಾಕಿದ್ದಳು ನನಗರಿವಿಲ್ಲದಂತೆ.

"ನೀವು ತಟ್ಟೆಯಲ್ಲಿ ಕೈ ತೊಳೆದು ಎದ್ದು ನಡೆಯುತ್ತೀರಿ ನಿಮ್ಮ ಮನೆಗೆ. ಆ ಪಾಪದ ಜನ, ತಟ್ಟೆ ಎತ್ತುವವರು ಅದನ್ನೆಲ್ಲ ತೆಗೆದುಕೊಂಡು ಹೋಗುವಾಗ ನೀವು ಕೈ ತೊಳೆದ ನೀರು ಅವರ ಮೈ ಮೇಲೆಲ್ಲಾ ಬೀಳುತ್ತದೆ. ಅವರಿಗೇನು ಬದಲಿಸಲು ಮತ್ತೊಂದು ಬಟ್ಟೆ ಇರುತ್ತದಾ? ಇಲ್ಲ, ಅದೇ ಒದ್ದೆ ಮತ್ತು ವಾಸನೆಯ ಬಟ್ಟೆಯಲ್ಲೇ ಇಡೀ ದಿನ ಕಳೆಯಬೇಕು ಅವರು. ಅದೇ ಬಟ್ಟೆಯಲ್ಲಿ ನಿಮ್ಮಟೇಬಲ್ ಮೇಲಿನ ಗ್ಲಾಸು, ತಟ್ಟೆ ತೆಗೆಯಲು ಬಂದಾಗ ಮುಖ ಸಿಂಡರಿಸುತ್ತೀರಿ, ನೀವು ಹೊಸ ಬಟ್ಟೆ ತೊಟ್ಟ ಜನ. ಕೊಳಕು ಅಂತ ಬೈದುಕೊಳ್ಳುತ್ತೀರಿ. ಅವರ ಕಷ್ಟ ನಿಮಗರ್ಥವಾಗುತ್ತದಾ ? ಇಲ್ಲ, ನಿಮಗ್ಯಾಕೆ, ಹೇಗೆ ಅರ್ಥ ಆಗಬೇಕು ಹೇಳಿ? ಆ ಜನರೆಲ್ಲಾ ರಾತ್ರಿ ಹನ್ನೆರಡರವರೆಗೆ ಕೆಲಸ ಮಾಡಿ ಮತ್ತೆ ನಾಲ್ಕಕ್ಕೆ ಎದ್ದು ಕೆಲಸಕ್ಕೆ ನಿಲ್ಲಬೇಕು. ಏಳುವುದು ಹತ್ತು ನಿಮಿಷ ತಡ ಆದಲ್ಲಿ ಅವನ ಮೇಲಿನವ ಕುಂಡೆಯ ಮೇಲೆ ಒದ್ದು ಅವನನ್ನು ಎಬ್ಬಿಸುತ್ತಾನೆ. ಒಂದು ಗಂಟೆಯೊಳಗೆ ತನ್ನ ಸ್ನಾನ , ಬಟ್ಟೆ ತೊಳೆದು ಕೊಳ್ಳುವುದು, ಓದುವ ಮಕ್ಕಳಾದರೆ ಸಮಯ ಸಿಕ್ಕಲ್ಲಿ ಓದಿಕೊಳ್ಳುವುದು ಎಲ್ಲಾ ಆಗಬೇಕು. ಅವರಲ್ಲಿ ಇರುವುದು ತನ್ನ ಯಜಮಾನ ವರ್ಷಕ್ಕೆ ಕೊಡುವ ಒಂದು ಜೊತೆ ಯುನಿಫಾರ್ಮ್ ಮಾತ್ರ. ಅದರಲ್ಲೇ ಇಡೀ ವರ್ಷ ಕಳೆಯಬೇಕು ಅವರು. "

ಉದ್ವೇಗಗೊಂಡಿದ್ದರು ಜಗದೀಶ್. ಹೊಸ ಲೋಕವೊಂದು ಹೀಗೆ ಅಚಾನಕ್ಕಾಗಿ ನನ್ನಿದಿರು ತೆರೆದುಕೊಂಡಿದ್ದರಿಂದ ನನ್ನ ತಪ್ಪಿನ ಅರಿವಿನೊಂದಿಗೆ ಜಗದೀಶರ ಉದ್ವೇಗದ ಕಾರಣ ಸಹ ಹೊಳೆಯಿತು. ನನಗೆ, ಜಗದೀಶ್ ಊರಿಂದ ಇಲ್ಲಿಗೆ (ಮುಂಬೈ) ಬಂದು ಹೋಟೆಲ್ ಮಾಣಿಯಾಗಿ ಕೆಲಸ ಮಾಡುತ್ತಾ ರಾತ್ರಿ ಶಾಲೆಯಲ್ಲಿ ಓದಿದ್ದು ಗೊತ್ತಿತ್ತು. ಹೀಗೆ ಊರಿಂದ (ಹೆಚ್ಚಾಗಿ ಮಂಗಳೂರು-ಉಡುಪಿ ಕಡೆಯಿಂದ) ಮುಂಬೈಗೆ ಬಂದು ಕಲಿಯುವ ಆಸೆಯನ್ನು ಹತ್ತಿಕ್ಕಲಾಗದೆ, ಕೆಲವೊಮ್ಮೆ ಮುಂಬೈನ ಹಿರಿಯ ಕನ್ನಡಿಗರ ಒತ್ತಾಯಕ್ಕೆ ರಾತ್ರಿಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಎಷ್ಟೋ ಕನ್ನಡಿಗರಿದ್ದಾರೆ ಮುಂಬೈನಲ್ಲಿ. ಈಗ ವಿಪ್ರೊ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ರೈ ಸಹ ಅಂಥವರಲ್ಲಿ ಒಬ್ಬರು. ನನಗೆ ಹೀಗೆ ರಾತ್ರಿ ಶಾಲೆಯಲ್ಲಿ ಓದಿ ಬೆಳೆದವರ ಬಗ್ಗೆ 'ಪೇಪರ್ ^ನಲ್ಲಿಯ ಹೆಡ್ ಲೈನ್ ' ಥರದ ಮಾಹಿತಿ ಇತ್ತೇ ವಿನಃ ಹೆಡ್ ಲೈನ್ ಕೆಳಗಿನ ವಿವರ ಓದುವ ಗೋಜಿಗೆ ಹೋಗಿರಲೇ ಇಲ್ಲ!
Sorry ಕೇಳಿದೆ ನನ್ನ ನಡುವಳಿಕೆಗಾಗಿ ಜಗದೀಶರಲ್ಲಿ.

"sorry ಕೇಳುವುದು ಬೇಡ, ಆದರೆ ಇನ್ನು ಮುಂದೆ ಹೋಟೆಲಿನಲ್ಲಿ ತಟ್ಟೆಯಲ್ಲಿ ಕೈ ತೊಳೆಯದಿದ್ದರೆ ಆಯಿತು." ಎಂದಿನ ತಮ್ಮ ಸಹಜ ನಗುವಿನೊಂದಿಗೆ ಹೇಳಿದರು ಜಗದೀಶ್ ರೈ ಎನ್ನುವ Ex-ಹೋಟೆಲ್ ಮಾಣಿ ಮತ್ತು ಈಗಿನ ವಿಪ್ರೊ ಗ್ರೂಪ್ ನಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ನಿರ್ಮಲ ಮನದ ಸ್ನೇಹಿತ .:-)