'Children's film society' ನಿರ್ಮಾಣದ 'ಪುಟಾಣಿ ಪಾರ್ಟಿ' ನಾನು ಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತು ಸಮರ್ಥ ನಿರ್ದೇಶಕರು. ಈ ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರು ಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದ ನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನು ಹೊರಹೊಮ್ಮಿಸಿದ ವ್ಯಕ್ತಿ ಅವರು. ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತು ತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಆ ಎಲ್ಲ ಮಕ್ಕಳು ೫ನೆ ತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. ಮೊದಲು ಅವರಿಗೆ ಚಿತ್ರ ಕತೆಯನ್ನು ಮತ್ತು ಅವರವರ ಪಾತ್ರಗಳನ್ನು ವಿವರಿಸಿ,ಮೂರು ದಿನ ಸತತವಾಗಿ ಮಕ್ಕಳಿಗೆ ಹೇಗೆ ಅಭಿನಯಿಸಬೇಕು ಮತ್ತು ಯಾಕೆ ಹಾಗೆ ಅಭಿನಯಿಸಬೇಕು ಅನ್ನುವುದನ್ನು ಹೇಳಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಎಷ್ಟು ಚೆನ್ನಾಗಿ ರಾಮ್ ಸರ್ ತಯಾರು ಮಾಡಿದ್ದರೆಂದರೆ ಕ್ಯಾಮೆರಾದ ಪರಿಚಯವಿದ್ದ ನಾನು ಮತ್ತು ಭವಾನಿ ಕೆಲವೊಮ್ಮೆ ಗೊಂದಲಗೊಳ್ಳುತ್ತಿದ್ದೆವಾದರೂ ಈ ಮಕ್ಕಳು ಮಾತ್ರ ಅಂಗಳದಲ್ಲಿ ಲಗೋರಿ ಆಡಿದಷ್ಟೇ ಸಹಜವಾಗಿ ಅಭಿನಯಿಸಿಬಿಡುತ್ತಿದ್ದರು!! ರಂಜಿತಾ ಜಾಧವ್, ಶರತ್,ಗುರುದತ್ತ,ಪವನ,ದೀಪಕ್, ಮಮತಾ,ಮನೋಜ್ ಮುಂತಾದ ಮಕ್ಕಳನ್ನು ಮೊದಲ ಸಲ ನೋಡಿದಾಗ ಅವರುಗಳ ಖದರು ಕಂಡು "ಇದೇನಪ್ಪಾ ಈ ಮಕ್ಕಳ ಜೊತೆ ನಾನು ೮-೧೦ ದಿನ ಕಳೆಯಬಲ್ಲೇನಾ?!" ಅನಿಸಿತ್ತು. ಆದರೆ ದಿನ ಕಳೆದಂತೆಲ್ಲ ಈ ಮಕ್ಕಳು ಎಷ್ಟು ಹತ್ತಿರದವರಾದರೆಂದರೆ ಇತ್ತೀಚೆಗೆ ನಾನು ಡಬ್ಬಿಂಗ್ಗಿಗೆ ಅಂತ ಧಾರವಾಡಕ್ಕೆ ಹೋದಾಗ ಎಲ್ಲರೂ ಸಂಜೆ ಬಂದು ನನ್ನೊಡನೆ ಎರಡು ಗಂಟೆಗಳ ಕಾಲ ಹರಟೆ ಹೊಡೆಯುತ್ತಾ ಕುಳಿತರು.ನಾನೇ "ಹೊತ್ತಾಗುತ್ತೆ ಹೋಗ್ರೋ ಇನ್ನ ಮನೆಗೆ" ಅಂತ ಬಲವಂತ ಮಾಡಿ ಕಳಿಸಬೇಕಾಯಿತು(ಆಗ ಅವರಿಗೆಲ್ಲ ಪರೀಕ್ಷೆಯ ಸಮಯ ಬೇರೆ!!)
ರಂಜಿತಾ ಧಾರವಾಡದ ಒಂದು ಅಪ್ಪಟ ಪ್ರತಿಭೆ. ಈ ಹುಡುಗಿಗೆ ಎಂಥಾ ಆತ್ಮವಿಶ್ವಾಸ ಮತ್ತು ಅಭಿನಯದ ತುಡಿತವೆಂದರೆ ಇಡೀ ಯುನಿಟ್ಟೆ ( ಚಿತ್ರ ತಂಡ ) ಬೆರಗಾಗುತ್ತಿತ್ತು ಈಕೆ ಅಭಿನಯಿಸುವಾಗ. ರಂಜಿತಾ ಈ ಚಿತ್ರದಲ್ಲಿ ನನ್ನ ಮಗಳ ಪಾತ್ರ(ಗೀತಾ) ನಿರ್ವಹಿಸಿದ್ದಾಳೆ. ಒಂದು ಶಾಟ್.. ರಂಜಿತಾ ಸಭಿಕರೆದುರು ನಿಂತು ಊರಲ್ಲಿಯ ಅನಾನುಕೂಲತೆಗಳಿಂದಾಗಿ ಮಕ್ಕಳಿಗಾಗುತ್ತಿರುವ ತೊಂದರೆಗಳನ್ನು ವಿವರಿಸುತ್ತಿರುತ್ತಾಳೆ. ಮೈಲುದ್ದದ ಸಂಭಾಷಣೆ ಅದು. ಸರಾಗವಾಗಿ,ಭಾವಪೂರ್ಣತೆಯಿಂದ ಎಂಥಾ ಅದ್ಭುತವಾಗಿ ಅಭಿನಯಿಸುತ್ತಿದ್ದಾಳೆ ಎಂದು ನಾವೆಲ್ಲ ಬಿಟ್ಟ ಕಣ್ಣಿಂದ ನೋಡುತ್ತಿರುವಾಗಲೇ " ಕಟ್" ಅನ್ನುವ ರಾಮ್ ಸರ್ ಅವರ ಸಿಟ್ಟಿನ ಧ್ವನಿ ಕೇಳಿ ಬೆಚ್ಚಿಬಿದ್ದೆವು! ಅಲ್ಲಿವರೆಗೂ ರಾಮ್ ಸರ್ ಸಿಟ್ಟಲ್ಲಿದ್ದುದನ್ನ ನಾನು ಕಂಡೆ ಇರಲಿಲ್ಲ.. ಅವರ ಆ ಕೋಪಕ್ಕೆ ಕಾರಣ ಅಷ್ಟು ಅದ್ಭುತವಾಗಿ ಅಭಿನಯಿಸುತ್ತಿದ್ದ ರಂಜಿತಾಳ ಬಗಲಲ್ಲಿ ಇರಬೇಕಾದ ಚೀಲವೊಂದು ಸಹಾಯಕ ನಿರ್ದೇಶಕರ ಮರೆವಿನಿಂದಾಗಿ ಮಿಸ್ ಆದುದು. ಮತ್ತೆ ಆ ಮಗು ಅಷ್ಟುದ್ದದ ಡೈಲಾಗ್ ಅನ್ನು ಅಷ್ಟೆ ತನ್ಮಯತೆಯಿಂದ ಹೇಳಬಲ್ಲುದಾ? ಅನ್ನುವ ಆತಂಕ ಆ ಸಿಟ್ಟಿಗೆ ಕಾರಣ . ಆದರೆ ರಂಜಿತಾ ಮೊದಲಿನಷ್ಟೇ ತನ್ಮಯತೆಯಿಂದ ಮತ್ತೆ ಅಭಿನಯಿಸಿದಳು!
ಏಳನೇ ಕ್ಲಾಸ್ನಲ್ಲಿ ಓದುತ್ತಿರುವ ಶರತ್ ಒಳ್ಳೆ ನುರಿತ ನಟನೇನೋ ಎನ್ನುವಷ್ಟು ಆತ್ಮವಿಶ್ವಾಸದಿಂದ ಅಭಿನಯಿಸಿದ ಹುಡುಗ. ಗುರುದತ್ತ, ಪವನ, ದೀಪಕ್, ಮನೋಜ್ ಮತ್ತು ಮಮತಾ ಕೂಡಾ ಅಷ್ಟೆ , ಒಳ್ಳೆಯ ನಟರು, ವಿನಯವನ್ನು ಮೈಗೂಡಿಸಿಕೊಂಡ ಮಕ್ಕಳು.
ಈ ಚಲನಚಿತ್ರ ಕನ್ನಡದ್ದಾದರೂ ನಟವರ್ಗ ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಚಿತ್ರ ತಂಡದ ಉಳಿದೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದವರು ಎನ್ನುವುದು ವಿಶೇಷತೆ. ೧೮ ದಿನಗಳ ಕಾಲ ಧಾರವಾಡದಲ್ಲಿ ಮಿನಿ ಭಾರತ ನೆಲೆಯೂರಿತ್ತು!! :-)
ತಿಂಗಳೋಪ್ಪತ್ತಿನಲ್ಲಿ ಈ ಚಿತ್ರದ ಬಿಡುಗಡೆಯ ನಿರೀಕ್ಷೆ ಇದೆ. ಈ ಚಿತ್ರ ನಿರ್ಮಾಣದ ವೇಳೆಯ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮತ್ತೆ ಬರೆಯುತ್ತೇನೆ..