Tuesday, May 15, 2012

ಪ್ರೊ.ಸಿ ಎನ್ ರಾಮಚಂದ್ರನ್ ಮತ್ತು ‘ನೀಲ ಕಡಲ ಬಾನು’

ಎರಡು ತಿಂಗಳ ಹಿಂದೆ ಕನ್ನಡದ ಹಿರಿಯ ವಿದ್ವಾಂಸರೂ, ಖ್ಯಾತ ವಿಮರ್ಶಕರೂ ಆದ ಪ್ರೊ.ಸಿ ಎನ್ ರಾಮಚಂದ್ರನ್ ಸರ್ ಅವರಿಗೆ ನನ್ನ ಕವನ ಸಂಕಲನ ‘ನೀಲ ಕಡಲ ಬಾನು’ವಿನ ಸ್ಕ್ಯಾನ್ ಮಾಡಿದ (ಪುಸ್ತಕ ಪ್ರತಿಗಳು ಖಾಲಿಯಾದ ಕಾರಣ) ಪುಟಗಳನ್ನು ಹೆದರುತ್ತಲೇ ಮೇಲ್ ಮಾಡಿ, ಅವರ ಪ್ರತಿಕ್ರಿಯೆ ಕೋರಿದ್ದೆ. ಒಂದು ವಾರದಲ್ಲಿ ಉತ್ತರಿಸುವೆನೆಂದು ಹೇಳಿದ CNR ಸರ್ ಕಡೆಯಿಂದ, ತಿಂಗಳಾದರೂ ಉತ್ತರ ಬರದುದನು ಕಂಡು, "ಜಯಲಕ್ಷ್ಮೀ, ಮುಗೀತು ಕಣೆ, ಇಷ್ಟೇ ನಿನ್ನ ಕವನಗಳ ಹೈಸಿಯತ್ ತಿಳ್ಕೊ" ಎಂದು ಸಪ್ಪೆ ಮುಖ ಮಾಡಿಕೊಂಡಿದ್ದಾಗ ಅವಿ ಹೇಳಿದ್ರು, "ಅರೇ, ಹಾಗ್ಯಾಕ್ ಅನ್ಕೋತೀರಿ? ಒಂದ್ಸಲ ಸರ‍್ಗೆ ಮೇಲ್ ಮಾಡಿ ಕೇಳಿ ನೋಡಿ, ಕೆಲಸದ ನಡುವೆ ಬರೆಯಲಿಕ್ಕಾಗಿರ್ಲಿಕ್ಕಿಲ್ಲ, ಮರೆತಿರಬಹುದು."

ಮತ್ತೆ ಸರ‍್ಗೆ ಅಳುಕುತ್ತಲೇ ಮೇಲ್ ಮಾಡಿದೆ. ತಕ್ಷಣ ಉತ್ತರ ಬಂತು ಆ ಕಡೆಯಿಂದ, "ನಿಮ್ಮ ಕವನ ಸಂಕಲನವನ್ನು ಇಲ್ಲಿಯವರೆಗೆ ಓದದಿರಲು ಕಾರಣ ಕೇವಲ ಕೆಲಸದ ಒತ್ತಡ ಹಾಗೂ ಮರೆವು, ಅಷ್ಟೇ.   ದಯವಿಟ್ಟು ಬೇಸರಿಸಬೇಡಿ.  ಮುಂದಿನ ವಾರದೊಳಗೆ ಖಂಡಿತಾ ನನ್ನ ಪ್ರತಿಕ್ರಿಯೆಯನ್ನು ತಿಳಿಸುತ್ತೇನೆ." 

ನಿಜಕ್ಕೂ ವಾರದ ಒಳಗೆ ಸರ್ ಕಡೆಯಿಂದ ನನ್ನ ಕವನ ಸಂಕಲನಕ್ಕೆ ಪ್ರತಿಕ್ರಿಯೆ (ವಿಮರ್ಶೆ) ಬಂತು. ನಾನು ಧನ್ಯಳಾದ ಕ್ಷಣವದು! ಅನಂತ ಧನ್ಯವಾದಗಳು ಸರ್!
ಪ್ರೊ. ಸಿ ಎನ್ ರಾಮಚಂದ್ರನ್ ಅವರ ಅನುಮತಿಯೊಂದಿಗೆ ಅವರು ಬರೆದ ವಿಮರ್ಶಾತ್ಮಕ ಪತ್ರವನ್ನು  ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.

ಶ್ರೀಮತಿ ಜಯಲಕ್ಷ್ಮಿ  ಪಾಟೀಲ್ ಅವರಿಗೆ:
ನಮಸ್ಕಾರ.  ನಿಮ್ಮ ನೀಲ ಕಡಲ ಬಾನು ಕವನಸಂಕಲನವನ್ನು ಈಗ ಸಂಪೂರ್ಣವಾಗಿ ಓದಿ (ಕೆಲವು ಕವನಗಳನ್ನು ಒಂದೆರಡು ಬಾರಿ ಓದಿ) ಈ ಪತ್ರವನ್ನು ಬರೆಯುತ್ತಿದ್ದೇನೆ.  ಸಾಕಷ್ಟು ಸಮಯ-ಸಹನೆಗಳನ್ನು ಅಪೇಕ್ಷಿಸುವ  ಸ್ಕ್ಯಾನಿಂಗ್ ಮಾಡಿ ನೀವು ಇಡೀ ಸಂಕಲನವನ್ನು ನನಗೆ ಕಳುಹಿಸಿ, ತುಂಬಾ ಸಮಯವಾಯಿತು (ಎರಡು ತಿಂಗಳು?).  ದಯವಿಟ್ಟು ಕ್ಷಮಿಸಿ, ಬೇಜಾರು ತಿಳಿಯಬೇಡಿ.

     ಮೊದಲಿಗೆ, ನಿಮ್ಮ ಕವನಗಳ ಬಗ್ಗೆ ಒಟ್ಟಾರೆಯಾಗಿ ಒಂದೆರಡು ಮಾತುಗಳನ್ನು ಹೇಳಬೇಕಾದರೆ, ನಿಮ್ಮ ಕವನಗಳ ಮೂಲ ಸ್ತ್ರೀಸಂವೇದನೆ, ಆದರೆ ಸ್ತ್ರೀವಾದವಲ್ಲ.  ಎಂದರೆ, ಒಂದು ವ್ಯವಸ್ಥೆಯನ್ನು ಮತ್ತು ಅದರ ಮಿತಿಗಳನ್ನು ಒಪ್ಪಿಕೊಂಡೂ ಆ ವ್ಯವಸ್ಥೆಯಲ್ಲಿ ನರಳುವವರ ಪಿಸುಮಾತುಗಳನ್ನು ಹಾಗೂ ನಿಟ್ಟುಸಿರನ್ನೂ ನಿಮ್ಮ ಕವನಗಳು ದಾಖಲಿಸುತ್ತವೆ.  ನಿಮ್ಮದೇ ಒಂದು ಕವನ ತೋರಿಸುವಂತೆ, ಸೀತೆ ಎಂದೂ ಸಿಡಿಯುವುದಿಲ್ಲ, ತನ್ನ ಮೌನವನ್ನು ಮುರಿಯುವುದಿಲ್ಲ; ಅಕಸ್ಮಾತ್ ಅವಳು ಮೌನ ಮುರಿದಿದ್ದರೆ ಈ ಸಂಕಲನದ ಅನೇಕ ಕವನಗಳನ್ನು ಅವಳು ಬರೆಯಬಹುದಿತ್ತು ಎಂದು ತೋರುತ್ತದೆ.  ಈ ಸಂಕಲನದ ಹೆಚ್ಚಿನ ಕವನಗಳು ಸ್ತ್ರೀತ್ವದ ಎಲ್ಲಾ ಸಂಕೀರ್ಣ ಭಾವನೆಗಳನ್ನು, ಬಯಕೆಗಳನ್ನು, ದುಃಖ-ವಿಷಾದಗಳನ್ನೂ ಯಶಸ್ವಿಯಾಗಿ ಅಭಿವ್ಯಕ್ತಿಗೊಳಿಸುತ್ತವೆ.

     ಈಗ, ಬಿಡಿ ಕವನಗಳಿಗೆ ಬಂದರೆ, 'ಆಸೆ', 'ತಾಯಿ ಮತ್ತು ಮಗಳಿಗೆ', 'ಅರಿಕೆ', 'ಇನಿಯ', 'ನಾನು VS ನೀನು', 'ಬಿಂಬ', 'ನದಿ-ದಡ', 'ಅವ್ರ್ ಬಿಟ್ ಇವ್ರ್ಯಾರು...', 'ಆಶಯ',  . . . . ,  ಇತ್ಯಾದಿ ಕವನಗಳು ಒಂದಲ್ಲಾ ಒಂದು ಕಾರಣಕ್ಕೆ ನನಗೆ ಇಷ್ಟವಾದುವು.  ಇಲ್ಲಿಯೂ ಒಂದು ಸಾಧಾರಣೀಕೃತ ಹೇಳಿಕೆಯನ್ನು ಕೊಡಬಹುದಾದರೆ, ನೈಸರ್ಗಿಕ ಸಂಗತಿಗಳು ರೂಪಕಗಳಾಗಿ ಬರುವ ಸರಿ ಸುಮಾರು ಎಲ್ಲಾ ಕವನಗಳು ಯಶಸ್ವಿಯಾಗಿವೆ, ಹೊಸ ಅನುಭವವನ್ನು ಕೊಡುತ್ತವೆ.

     ಉದಾಹರಣೆಗೆ: 'ಹಕ್ಕಿ' ಎಂಬ ಕವನ ಮೊದಲಿಗೆ ಹಕ್ಕಿಗಿಲ್ಲದಿರುವ ನೆಲೆಯನ್ನು ದಾಖಲಿಸಿದರೂ, ನೆಲೆಯಿಲ್ಲದೆಯೇ ಹಾರಾಡುತ್ತಾ 'ನಗುತ್ತಿದೆ' ಎಂದು ಹೇಳಿದಾಗ, ಅದು 'ಜಂಗಮ ಬದುಕಿನ, ಅದಮ್ಯ ಆಕಾಂಕ್ಷೆಗಳ, ಮತ್ತು ಅಕ್ಕನು ಪಡೆದಂತಹ ಸ್ವಾತಂತ್ರ್ಯದ' ಅದ್ಭುತ ರೂಪಕವಾಗುತ್ತದೆ; ಹಾಗೆಯೇ,  'ಆಸೆ'  ಬೆಳೆಯುವುದರ ಬಗ್ಗೆ, ಅಸ್ಮಿತೆಯನ್ನು ಕಳೆದುಕೊಳ್ಳುವ ಬಗ್ಗೆ ಇರುವ ಕಾತುರ-ಭೀತಿ ಇತ್ಯಾದಿ ಭಾವನೆಗಳನ್ನು ಸಂವಹಿಸಲು ಬೇರು-ಎಲೆಗಳನ್ನು ರೂಪಕಗಳಾಗಿ ಯಶಸ್ವಿಯಾಗಿ ದುಡಿಸಿಕೊಳ್ಳುತ್ತದೆ. ಈ ವರ್ಗದ ಕವನಗಳಲ್ಲಿ ನನಗೆ  ತುಂಬಾ ಇಷ್ಟವಾದ ಎರಡು ಕವನಗಳೆಂದರೆ 'ನಾನು vs ನೀನು' ಮತ್ತು 'ವಿಲಾಸಿ'.  ಮೊದಲನೆಯ ಕವನ  ಸ್ತ್ರೀ-ಪುರುಷರಿಗೆ ನದಿ ಮತ್ತು ಸಮುದ್ರಗಳನ್ನು ರೂಪಕಗಳಾಗಿ ಬಳಸುತ್ತಾ, ನೂರಾರು ಅಣೆಕಟ್ಟುಗಳನ್ನು ದಾಟಿ ಸಮುದ್ರದ ಬಳಿ ಓಡಿಯೋಡಿ ಬರುವ ನದಿಯ ಆರ್ತ ಯಾಚನೆಯನ್ನು" ಒಂಟಿ, ವಿರಹಿ ನದಿ ನಾನು / ನೀನೋ ಸಮುದ್ರ" ಎಂದು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.  ಸ್ತ್ರೀ-ಪುರುಷ ಸಂಬಂಧವನ್ನು ಕುರಿತ ಎರಡನೆಯ ಕವನವೂ ಚಂದ್ರನನ್ನು ವಿಲಾಸಿಯಂತೆ ಕಂಡು, ಅವನನ್ನು "ಗೊತ್ತಾಯಿತೆ ಒದ್ದೆ ಮನಸ್ಸಿನ ಒದ್ದಾಟ" ಎಂದು ಕೇಳುತ್ತದೆ.  ಈ ಸಾಲು (ಇಡೀ ಕವನ) ಹಿಂದಿನ ಕವನದಂತೆ ತುಂಬಾ ಭಾವಪೂರ್ಣವಾಗಿ ಸಫಲವಾಗಿದೆ.

     ಇತರ ಯಶಸ್ವಿ ಕವನಗಳೆಂದರೆ: ಕಾವ್ಯ ಸೃಷ್ಟಿ ಹಾಗೂ ಜೀವ ಸೃಷ್ಟಿ ಇವೆರಡನ್ನು ಒಂದೇ ನೆಲೆಯಲ್ಲಿ ಕಾಣುತ್ತಾ ಆ ಪ್ರಕ್ರಿಯೆಯ ಸಂಭ್ರಮವನ್ನು ಸಫಲವಾಗಿ ದಾಖಲಿಸುವ ''ಆಶಯ'',  ಭೂಮಿಯ ಮಗಳಾದರೂ ತಾಯಿಯಂತೆ ಎಂದೂ ಸಿಡಿಯದ ಸೀತೆಯನ್ನು ಪ್ರಶ್ನಿಸುವ 'ತಾಯಿ ಮತ್ತು ಮಗಳಿಗೆ', ಇತ್ಯಾದಿ.  ಆದರೆ, ನನ್ನ ದೃಷ್ಟಿಯಲ್ಲಿ, ಇಡೀ ಸಂಕಲನದ ಅತ್ಯುತ್ತಮ ಕವನವೆಂದರೆ ''ಅವ್ರ್ ಬಿಟ್ಟು ಇವರ್ಯಾರು''.  ಸರ್ವಸಂಗ ಪರಿತ್ಯಾಗಿಗಳಾದ ಬುದ್ಧ, ಬಸವ, ಮಹಾದೇವಿ ಇವರೊಡನೆ ಇಂದಿನ ವ್ಯಕ್ತಿಗಳನ್ನು ಹೋಲಿಸುತ್ತಾ, ಕವನ '. . . ಪ್ರಾಸಕ್ಕೆ ಜೋತು/ಬಿದ್ದು ಬದುಕುವ ನಾವು/ ಆದೇವೆ ಬಸವ ಬುದ್ಧ/ ಮಹಾದೇವಿಯರಂತೆ ಅಮರ?' ಎಂದು ವಿಷಾದಿಸುತ್ತದೆ.  ಇಲ್ಲಿ 'ಪ್ರಾಸ' ಪದ ಕವನಗಳಲ್ಲಿ ಬರುವ ಸಮಾನ ಪದಗಳನ್ನೂ, ಹಾಗೆಯೇ 'ಜೊತೆ'/ಜೋಡಿ ಇತ್ಯಾದಿ ಮಾನವ ಸಂಬಂಧಗಳನ್ನೂ ಧ್ವನಿಸುತ್ತದೆ (ಎರಡು ಪದಗಳಿಲ್ಲದೆ ಪ್ರಾಸವಾಗುವುದಿಲ್ಲವಲ್ಲ).  ಎಂದರೆ, ಈ ಸಾಲುಗಳು ಒಂಟಿಯಾಗಿರಲು ಸಾಧ್ಯವಾಗದೆ, ಜೊತೆ, ಇಹ-ಪರ, ಪ್ರೀತಿ-ಪ್ರೇಮ, ಇತ್ಯಾದಿ 'ಪ್ರಾಸಕ್ಕೆ ಜೋತು ಬಿದ್ದಿರುವ' ನಮ್ಮಂತಹ ಸಾಧಾರಣ ಮನುಷ್ಯರನ್ನೂ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ.  ಇದೊಂದು ಬಹಳ ಒಳ್ಳೆಯ ಕವನ.  ಇದೇ ಆಶಯವನ್ನು ವಸ್ತುವಾಗುಳ್ಳ ಮತ್ತೊಂದು ಸಫಲ ಕವನವೆಂದರೆ "ನನ್ನೊಳು ನೀ": ನಿರೂಪಕಿ ತನ್ನ ಹಾಗೂ ಅಕ್ಕನ ನಡುವೆ ಅನೇಕ ಸಮಾನತೆಗಳನ್ನು ಗುರುತಿಸಿದರೂ (ಮೇಲೆ ಹೇಳಿದಂತೆ ಪ್ರಾಸಕ್ಕೆ ಜೋತು ಬಿದ್ದಿರುವ ಕಾರಣದಿಂದ) ಆ ಪ್ರೀತಿ ...  ದೊರಕಿತೆ/ ನಿನಗೆ ದೊರೆತಂತೆ ಎಂದು ವಿಷಾದಿಸುತ್ತಾಳೆ.

     ಈ ಸಂಕಲನದಲ್ಲಿರುವ ಅನೇಕ ಕಿರುಕವನಗಳು ಸಾಕಷ್ಟು ಸಫಲವಾಗಿವೆ: ಬಾಯಿ ಮುಚ್ಚಿದ್ದರೂ ಎಲ್ಲವನ್ನೂ ಹೇಳುವ ವಾಚಾಳಿ ಕಣ್ಣು ('ವಾಚಾಳಿ'), ಇತರರಲ್ಲಿ ವಂಚನೆಯನ್ನು ಕಾಣುವ  ಆದರೆ  ಕನ್ನಡಿಯ ಮುಂದೆ ನಿಂತಾಗ 'ನಾನೂ ಕೂಡಾ' ಎಂದರಿಯುವ ನಿರೂಪಕಿ ('. . . . .'), ಇತ್ಯಾದಿ.
    ಮತ್ತೆ, ಕೆಲ ಸಂದರ್ಭಗಳಲ್ಲಿ ನೀವು ಮಾಡುವ ಪದ-ವಿಭಜನೆಯೂ ಅರ್ಥಪೂರ್ಣವಾಗಿದೆ: ನಾನೇ ಅಪರಿಚಿತೆ/ ಯಂತೆ . . .   . . . ಅರಿತು ನಡೆದಾಕೆ/ ಗೂ . . .  ಇತ್ಯಾದಿ.

     ಸಾಮಾನ್ಯವಾಗಿ, ಎಲ್ಲಾ ಪ್ರಥಮ ಸಂಕಲನಗಳ ಕವನಗಳಲ್ಲಿ ಕಂಡುಬರುವ ಕೆಲವು ಮಿತಿಗಳು ನಿಮ್ಮ ಸಂಕಲನದಲ್ಲಿಯೂ ಇವೆ: 'ಮಾತು-ಮೌನ', 'ಉರುಳು-೨', 'ಸಮುದ್ರ', 'ವಿರಹ', 'ತಾವು' ಇತ್ಯಾದಿ ಕವನಗಳು ಕೇವಲ ಪದಚಾತುರ್ಯವನ್ನು ಆಧರಿಸಿ, Clever ಎಂಬಂತೆ ಕಾಣುತ್ತವೆ; ಕೆಲವು ಕವನಗಳು ತಮ್ಮ ಅತಿ ಸ್ಪಷ್ಟತೆ (ಅಥವಾ ಬಿಡಿಸಿ ಹೇಳುವ) ಮಿತಿಯಿಂದ ಸೋಲುತ್ತವೆ; ಇಂತಹ ಸಂದರ್ಭಗಳಲ್ಲಿ ನೀವೇ ಹೇಳುವಂತೆ 'ಸರಳತೆಯೇ ಸರಪಳಿಯಾಗುತ್ತದೆ' : ಉದಾ.: ಅಹಲ್ಯೆ ಎಂದು ಮೊದಲು ಹೇಳಿದನಂತರ 'ಶಿಲೆಯಾಗುತ್ತಿದ್ದೇನೆ' ಎನ್ನುವುದು ಅನವಶ್ಯಕ ('ಚಿಗುರು'); ಬಿಳಿಯ ಬಣ್ಣವನ್ನು ಹೇಳಿದನಂತರ, ಮತ್ತೆ ಅದರ ಸಾಂಕೇತಿಕತೆಯನ್ನು 'ನಿರ್ಮಲತೆಗೆ ಸಂಕೇತವಾಗುವ' ಎಂದು ಬಿಡಿಸಿ ಹೇಳುವುದು ಬೇಕಿಲ್ಲ; ಇತ್ಯಾದಿ.

     ಒಟ್ಟಿನಲ್ಲಿ ಹೇಳುವುದಾದರೆ, ನಿಮ್ಮ ಈ ಕವನ ಸಂಕಲನ 'ಮೊದಲ' ಸಂಕಲನದಂತೆ ಕಾಣುವುದಿಲ್ಲ; ಅರ್ಥಪೂರ್ಣ ಪದವಿನ್ಯಾಸ ಹಾಗೂ ಸೂಕ್ಷ್ಮ ಭಾವನೆಗಳ/ಚಿಂತನೆಗಳ ಸಫಲ ಅಭಿವ್ಯಕ್ತಿ ಇತ್ಯಾದಿಗಳಿಂದ ಕೂಡಿರುವ ಅನೇಕ ಪ್ರಬುದ್ಧ ಕವನಗಳು ಇದರಲ್ಲಿವೆ.  ಸಭೆ-ಸಮಾರಂಭಗಳಲ್ಲಿ ಜಾಣತನದ ಕಿರು ಕವನಗಳನ್ನು/ಚುಟುಕುಗಳನ್ನು ಓದಿ, ಚಪ್ಪಾಳೆ ಗಿಟ್ಟಿಸುವ ಆಸೆಯನ್ನು ಮೀರಿ,  ಮಹತ್ವಾಕಾಂಕ್ಷೆಯ ಹಕ್ಕಿಯಂತೆ ನೀಲ ಕಡಲನ್ನು ಹಾರಲು ಪ್ರಯತ್ನಿಸಿದರೆ, ಅನೇಕ ಶ್ರೇಷ್ಠ ಕವನಗಳನ್ನು ರಚಿಸಬಲ್ಲಿರಿ ಎಂಬುದು ಈ ಸಂಕಲನದಿಂದ ಸ್ಪಷ್ಟವಾಗುತ್ತದೆ.  

   ಈ ಮೂಲಕ ನಿಮ್ಮ ಕವನಗಳನ್ನು ಓದುವ, ಓದಿ ಸಂತೋಷಿಸುವ ಅವಕಾಶವನ್ನು ಕೊಟ್ಟ ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಿ ಈ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ.
                                                       ರಾಮಚಂದ್ರನ್