ಬರೆಯಬೇಕೆಂದುಕೊಂಡಾಗಲೆಲ್ಲ ಹೀಗೆ
ಬರೆಯ ಹೊರಟಿರುವುದು ಇನ್ನ್ಯಾರೊ
ಬರೆದಾಗಿದೆಯಲ್ಲ ಎಂಬ ಭಾವ ಬಲವಾಗಿ
ಮತ್ತವೇ ಅವೇ ಪದಗಳ ಹೊಸ ರೀತಿಯಲಿ
ಹೊಸೆಯ ಹೊರಟರೆ ಮನಸು ವಿರಾಗಿ
ಹಿಂದಿರುಗಿ ನೋಡಿದಷ್ಟೂ ಹಳವಂಡ
ಎಲ್ಲವೂ ಪುರಾತನ ಆದರೂ ನವನವೀನ
ಪದ ಪದ ಹೊಸೆವ ಕಸರತ್ತು
ಕೆಸರಲ್ಲಿ ಎತ್ತು ಕಾಲೆತ್ತಿ ಇಟ್ಟ ಹಾಗೆ
ಹಳೆ ಬಟ್ಟೆಯ ಚೂರುಗಳ ಸೇರಿಸಿ
ಚಿತ್ತಾರದ ಕೌದಿ ಹೊಲೆದು ಸಂಭ್ರಮಿಸುವ ಹಾಗೆ
ಹೇಳಲು ಸಾಕಷ್ಟಿದೆ ವಿಷಯ ಬುತ್ತಿ
ಗೊತ್ತಿದೆ ತೊಗೊ ಎಂದಾರೆಂಬ ಭೀತಿ
ಹತ್ತರಲ್ಲಿ ಹನ್ನೊಂದಾಗುವ ಮನಸ್ಸಿಲ್ಲ
ಸೋಜಿಗ ಒಮ್ಮೊಮ್ಮೆ ಇಲ್ಲಿ ಎಲ್ಲ
ಹಳತಾದರೂ ಜಗದ ವಿವರಗಳೆಲ್ಲ
ನನ್ನ ಜಗತ್ತಲ್ಲಿ ನವನವೀನ, ಮಹತ್ವಪೂರ್ಣ ಅವೆಲ್ಲ
ಸತ್ತು ಹುಟ್ಟುವ ದಿನದ ಹಾಗೆ