Wednesday, February 13, 2013

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

‘ಈ ಹೊತ್ತಿಗೆ’ ಕಾರ್ಯಕ್ರಮದ ಕುರಿತು ಅವಧಿಯಲ್ಲಿ ಸಖಿ ಸಂಧ್ಯಾರಾಣಿ ಬರೆದ ಲೇಖನ.




ಈ ಹೊತ್ತಿಗೆ

- ಎನ್ ಸಂಧ್ಯಾರಾಣಿ

ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ ಸೇರುವುದು, ಒಂದು ಪುಸ್ತಕದ ಬಗ್ಗೆ ಚರ್ಚಿಸುವುದು. ಈ ಯೋಜನೆ ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು, ಸುಮಾರು ಜನರನ್ನು ಇದು ಸೆಳೆದಿತ್ತು. ಈ ಕ್ಲಬ್ಬಿನ ಸದಸ್ಯತ್ವಕ್ಕೆ ಒಂದೇ ಫೀಸ್ ಎಂದರೆ ಆ ಪುಸ್ತಕದ ಒಂದು ಕಾಪಿ ಸದಸ್ಯರ ಕೈಲಿರಬೇಕು, ಒಂದೇ ಕರಾರೆಂದರೆ ಭಾಗವಹಿಸಿದ್ದವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಲೇ ಬೇಕು! ನಮ್ಮ ಬುಕ್ ಕ್ಲಬ್ ಹೆಸರು ’ಈ ಹೊತ್ತಿಗೆ’. ಅವರು ಮೊದಲ ಸಭೆಗೆ ಸೂಚಿಸಿದ್ದ ಪುಸ್ತಕ ಕೆ ವಿ ಅಯ್ಯರ್ ಅವರ ರೂಪದರ್ಶಿ, ಸೇರುವ ಸ್ಥಳ, ಸಮಯದ ಬಗ್ಗೆ ಅವರು ಒಮ್ಮೆ ಫೇಸ್ ಬುಕ್ಕಿನಲ್ಲಿ ಹಾಕಿದ್ದೆಷ್ಟೋ ಅಷ್ಟೆ, ಆಮೇಲೆ ಅವರು ಅದನ್ನು ಮತ್ತೆ ನೆನಪಿಸಿದಂತೆಯೂ ಕಾಣೆ, ಆದರೂ ನಾವೆಲ್ಲರೂ ತಾರೀಖು ಗುರುತು ಹಾಕಿಕೊಂಡು ಮರೆಯದೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯುವ ಮಕ್ಕಳು ಹಾಲ್ ಟಿಕೆಟ್ ಅನ್ನು ಭದ್ರವಾಗಿಟ್ಟುಕೊಂಡು ಬರುವಂತೆ ಪುಸ್ತಕವನ್ನು ಅವಚಿ ಹಿಡಿದು ಕೊಂಡು ಬಂದಿದ್ದೆವು.
ಸೇರಿದ್ದವರೆಲ್ಲಾ ಫೇಸ್ ಬುಕ್ಕಿನಲ್ಲಿ ಪರಿಚಿತರೆ, ಹಾಗಾಗಿ ಹೇಗೋ ಏನೋ ಮಾತಾಡಿದರಾಯಿತು ಎಂದು ಧೈರ್ಯ ತಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದದ್ದು ಜಯಶ್ರೀ ಮತ್ತು ದಿವಾಕರ್ ದಂಪತಿ, ನಮ್ಮ ಈ ಕೂಟಕ್ಕೆ ಥಟ್ ಅಂತ ಸ್ಟಾರ್ ವ್ಯಾಲ್ಯೂ ಬಂದಂತಾಯ್ತು! ಜೊತೆಗೆ ಎಲ್ಲರಿಗೂ ಇನ್ನಿಲ್ಲದ ಟೆನ್ಶನ್! ಇವರೆದುರಲ್ಲಿ ನಾವು ಮಾತಾಡೋದ?!
ಆದರೆ ಅವರಿಬ್ಬರೂ ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋದಂತೆ, ನಾವು ನಮ್ಮ ಹಿಂಜರಿಕೆ ಬಿಟ್ಟು ಮಾತಾಡಲು ಪ್ರಾರಂಭಿಸಿದೆವು. ಕೆ ವಿ ಅಯ್ಯರ್ ಅವರ ಬಗ್ಗೆ ನಾವು ತಿಳಿಯದ ವಿವರಗಳನ್ನು ದಿವಾಕರ್ ಅವರು ತಿಳಿಸುತ್ತಾ ಹೋದರು. ಆಮೇಲೆ ಒಬ್ಬೊಬ್ಬರಾಗಿ ಪುಸ್ತಕದ ಬಗ್ಗೆ ಮಾತಾಡಿದ್ದು, ಚರ್ಚಿಸಿದ್ದು …..
ಪುಸ್ತಕದ ಪ್ರಸ್ತುತತೆ, ಒಂದು ಪುಸ್ತಕವನ್ನು ವರದಿಯಾಗದಂತೆ ಕಥೆಯಾಗಿ ಹೆಣೆಯುವುದಕ್ಕೆ ಬೇಕಾಗುವ ಚಿಕ್ಕ ಚಿಕ್ಕ ವಿವರಗಳು, ಪುಸ್ತಕ ಬರೆದ ಕಾಲ ಮತ್ತು ಆ ಮೂಲಕ ಪುಸ್ತಕದ ಧ್ವನಿ, ಬದಲಾಗುವ ಕಾಲ ಮತ್ತು ಅದರ ಮೇಲೆ ನಿರ್ಧರಿತವಾಗುವ ಪುಸ್ತಕದ ಭಾಷೆ ಮತ್ತು ಭಾವುಕತೆ, ನೈತಿಕತೆ ಮತ್ತು ಅದರ ಮಾನದಂಡಗಳು…. ಏನೆಲ್ಲಾ ಚರ್ಚೆಯಾದವು ಅಲ್ಲಿ… ಅದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾದೀತು, ಅದನ್ನು ನೀವೆಲ್ಲಾ ಅಲ್ಲಿಗೇ ಬಂದು ಸವಿಯಲಿ ಎನ್ನುವ ಆಸೆಯೊಂದಿಗೆ ಲೇಖನವನ್ನು ನಿಲ್ಲಿಸುತ್ತಿದ್ದೇನೆ.

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

ಫೆಬ್ರುವರಿ ೯ರಂದು ಅವಧಿಯಲ್ಲಿ ಪ್ರಕಟಗೊಂಡ ಬರಹ.


ನಮ್ಮೂರಾಗ ಕನ್ನಡ ತಾಯಿ ನಲಿದ್ಯಾಡಕತ್ತ್ಯಾಳ

ಜಯಲಕ್ಷ್ಮಿ ಪಾಟೀಲ್

ಬಿಳಿಜ್ವಾಳ ರೊಟ್ಟಿ, ಕರಿ ಎಳ್ಳ್ ಹಚ್ಚಿದ ಕಟಗ್ ಸಜ್ಜಿ ರೊಟ್ಟಿ, ಸಜ್ಜಿಗಡಬ, ಎಣ್ಣಿಗಾಯಿ ಬದನಿಕಾಯ್ ಪಲ್ಯಾ, ಪುಂಡಿಪಲ್ಯಾ, ಕಾಳ ಪಲ್ಯಾ, ಶೇಂಗಾದ್ ಹಿಂಡಿ(ಚಟ್ನಿ), ಕಾರೆಳ್ಳ ಚೆಟ್ನಿ, ಮಸರಾ, ಹುಳಿಬಾನ, ಎಳೀ ಸೌತಿಕಾಯಿ, ಗಜ್ಜರಿ, ಉಳ್ಳಾಗಡ್ಡಿ… ಹುಗ್ಗಿ, ಹೂರಣದ ಹೋಳ್ಗಿ, ಸಜ್ಜಕದ ಹೋಳ್ಗಿ, ಶೇಂಗಾದ ಹೋಳ್ಗಿ, ಹೆರಿತುಪ್ಪ, ಆಹಾ! ನಮ್ಮೂರ ಊಟಾನ ಊಟ!
ಹೌದ್ರೀ ನನಗೊತ್ತು, ನೀವೇನ್ ಅನ್ಕೊಳ್ಳಾಕತ್ತೀರಿ ಅಂತ! ಈ ಹೆಣ್ಮಕ್ಕಳಿಗೆ ಅಡಗಿ ಅಂಚಡಿ ಬಿಟ್ಟ್ರ ಬ್ಯಾರೆ ಏನೂ ಹೊಳಿಯೂದ ಇಲ್ಲೇನು!? ಅಂತ ಮಾರಿ ಗಂಟ್ ಹಾಕ್ಕೊಂಡ್ರಿಲ್ಲೋ? ಏನ್ ಮಾಡೂದ್ ಹೇಳ್ರೆಪಾ, ನಾವು ಹೆಣ್ಮಕ್ಳು ಎಷ್ಟ ಕಲ್ತ್ರೂ, ಎಂಥಾ ದೊಡ್ಡ ನೌಕ್ರಿ ಮಾಡಿದ್ರೂ, ದೇಶಾ ಆಳಿದ್ರೂ ನಮ್ಮ ದಿನಾ, ನಮ್ಮಾತು ಎಲ್ಲಾ ಚಾಲೂ ಆಗೂದೂ ಅಡಗಿ ಮನಿಯಿಂದಾನ ಮತ್ತ ಮುಗ್ಯೂದೂ ಅಡಗಿ ಮನಿಯಿಂದಾನ. ಇಲ್ದಿದ್ರ ನಮಗ ಸಮಾಧಾನನ ಇರೂದಿಲ್ಲ, ನನಗೊತ್ತೈತಿ ಬಿಡ್ರಿ ಹೆಣ್ಮಕಳ್ದ್ ಬರೀ ಇದ ಆತು ಅಂತ ಅನ್ಕೋತ ದೊಡ್ಡಸ್ತಿಕಿ ತೋರಸೊ ನಿಮ್ಮ್ ಬಾಯಾಗೂ ಆಗಲೇ ನೀರ್ ಕಡ್ಯಾಕತ್ತಾವು ಅಂತ ನನಗೊತ್ತೈತಿ. ಈಗ ನಮ್ಮೂರಿಗೆ ಬಂದ ನಾಡಿನ ಮಂದೆಲ್ಲಾ ಸಾಹಿತ್ಯದ ಜೋಡ್ ಇದನ್ನೆಲ್ಲಾ ಬಾಡಸ್ಕೊಂಡು ತಿನ್ನಾಕ ಚಾಲೂ ಮಾಡಿರ್ತಾರ ನೋಡ್ರಿ ಬೇಕಾರ. ಇಲ್ಲಾ, ರುಚಿ ಹತ್ತಿತು ಅಂದ್ರಂತೂ ಉಲ್ಟಾ ಈ ಊಟದ ಜೋಡಿ ಸಾಹಿತ್ಯಾನ ಬಾಡಸ್ಕೋತಾರ! ಜವಾರಿ ಊಟ, ಜವಾರಿ ಬಿಸಲು, ಜವಾರಿ ಧೂಳು, ಜವಾರಿ ಮಂದಿ, ಜವಾರಿ ಕನ್ನಡಾ ಮತ್ತ ಜವಾರಿ ಪ್ರೀತಿ! ಹಿಂಗ್ಯಾಕ ಅಂದ್ರೇನು ನೀವು? ಯಾಕಂದ್ರ ನಾವ್ರೀ, ನಾವ್ ಅಂದ್ರ ಯಾರಂತ ತಿಳ್ಕೊಂಡೀರಿ, ಗಂಡುಮೆಟ್ಟಿದ ನಾಡಿನವ್ರು, ಬಿಜಾಪುರದ ಮಂದಿ, ನಾವು ಹಿಂಗರೆಪಾ!
ಇವತ್ತಿನಿಂದ ಮೂರ್ ದಿನ ನಮ್ಮೂರು ಮತ್ತ ರನ್ನನ್ನ ನೆನಸ್ಕೋತೈತಿ, ಜನ್ನನ್ನ ನೆನಸ್ಕೋತೈತಿ, ಕುಮಾರ ವಾಲ್ಮಿಕಿನ್ನ, ಬಸವಣ್ಣನ್ನ, ಹಳಕಟ್ಟಿಯವ್ರು, ಸತ್ಯಕಾಮರು, ಮಧುರಚೆನ್ನರನ್ನ ಇನ್ನೂ ಯಾರ್ಯಾರೆಲ್ಲಾ ತನ್ನ ಅಂಗಳದಾಗ ಆಡ್ಕೋತ ಬೆಳದು ನಾಡಿಗೇ ದೊಡ್ಡೋರಾದ್ರೋ, ಸೂರ್ಯಾ ಚಂದ್ರಮರ್ಹಾಂಗ ಹಗಲೂರಾತ್ರಿ ಬೆಳಗಾಕತ್ತ್ಯಾರೋ ಅವ್ರನ್ನೆಲ್ಲಾ ನೆನಸ್ಕೋತೈತಿ.
ಉಪ್ಪಲಿ ಬುರ್ಜದಾಗಿರೋ ಯೋಳ್ ಮಕ್ಕಳ ತಾಯಿ, ಎದ್ಯಾಗ ಅಕ್ಷರಾ ಬಿತ್ತಿಗೊಂಡ ಊರಿಗೆ ಬಂದ ನಾಡಿನ ಮಂದಿನ್ನ ನೋಡಿ ಖುಷೀಲೇ ಕೇಕೆ ಹಾಕಿ ನಕ್ಕ್ರ, ಗೋಳಗುಮ್ಮಟಾ ಅದನ್ನ ಜಗತ್ತಿನ ಯೋಳೂ ಅಚ್ಚರಿಗೋಳು ಬೆರಗಾಗೂವಂಗ ಒದರಿ ಹೇಳ್ತೈತಿ. ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ. ಇಷ್ಟ್ ವರ್ಷ ಘನಾಗಂಭೀರದಿಂದ ಅಲಾಗಾಡಧಂಗ ಅಡ್ಡಾಗಿದ್ದ ಮುಲ್ಕ ಮೈದಾನದಾಗಿನ ತೋಪಗೋಳು ಎದ್ದನಿಂತು ಹಾರಿ ಹಾರಿ ಮಂದಿನ್ನ ಎದರ್ಗೊಳ್ತಾವು. ಜೋಡಗುಮ್ಮಟ ಜೋಡಿದೀಪಾಗಿ ಆರ್ತಿ ಮಾಡ್ತೈತಿ, ಊರ್ ಧೂಳು ಗುಲಾಲ್ ಆಕ್ಕೈತಿ, ಇಬ್ರಾಹಿಂ ರೋಜಾ ಬಂದೋರು ತುಸುಹೊತ್ತು ಕುಂತು ದಣಿವಾರಸ್ಕೊಳ್ಳೊ ಚಾವಡಿ ಆಕೈತಿ. 777 ಲಿಂಗೂ ಗುಡಿ ವಚನಾ ಹಾಡ್ತೈತಿ, ಸಿದ್ದೇಶ್ವರ ಗುಡ್ಯಾಗಿನ ನಂದಿಕೋಲು ತಾಳ ಹಾಕ್ಕೊಂಡು ಕುಣದ್ಯಾಡ್ತಾವು, ಭೂತನಾಳ ಕೆರಿ ಬಂದೋರ ಹೊಟ್ಟಿ, ನೆತ್ತಿ, ಕಣ್ಣ ತಂಪ ಮಾಡ್ತತೈತಿ…
ಸೈನಿಕ್ ಸ್ಕೂಲಂತೂ ನಾಳೆ ಮದಮಗಳ ಗತೆ ಸಿಂಗಾರ ಬಂಗಾರ ಮಾಡ್ಕೊಂಡು, ಢವಾಢವಾ ಅನ್ನೂ ಎದ್ಯಾಗ ಸಂಭ್ರಮಾ ತುಂಬ್ಕೊಂಡು ತುದಿಗಾಲ ಮ್ಯಾಲೆ ನಿಂತಿದ್ದನ್ನ ನೆನಸ್ಕೊಂಡ್ರನ ನನಗ, ನಾ ಯಾಕಾರ ಊರಿಗೆ ಹೋಗ್ಲಿಲ್ಲ ಅಂತ ಹಳಾಳ್ಯಾಗಾಕತೈತಿ. ಏನ್ ಮಾಡ್ಲಿ ಹೇಳ್ರೀ, ಈ ಸಂಸಾರನ್ನೂದು ಕೆಲವೊಮ್ಮೆ ಕಾಲಿಗ್ ಕಟ್ಟಿದ್ ಗುಂಡಾಗಿ ನಡದೇನಂದ್ರ ನಡಿಗೂಡಂಗಿಲ್ಲ… ಇಲ್ಲೇ ಕುಂತು ಊರಿಂದ ಬರೂ ಸುದ್ದಿಗೆ ಕಾಯೂದ್ ಬಿಟ್ರ ಬ್ಯಾರೆ ದಾರಿಲ್ಲ ನನಗ. ಅವ್ವ, ಚಿಕ್ಕಮ್ಮ ಇಬ್ರೂ ಸಾಹಿತ್ಯ ಸಮ್ಮೇಳನಕ್ಕ ಹೋಕ್ಕೀವಿ ಅಂತಂದಾರ. ಅಪ್ಪಾ ಅನ್ಕಾ ಹೋಗದ ಬಿಡಂಗಿಲ್ಲ. ಅವ್ರ ಕಣ್ಣೀಲೇನ ನಾನೂ ಸಡಗರಾ ನೋಡಿ ಸಮಾಧಾನ ಮಾಡ್ಕೊಂತೀನಿ. ಅಲ್ದ `ಅವಧಿ’ ಸುದ್ದಾ ಎಲ್ಲಾ ಬಾತ್ಮಿ ಒಪ್ಪಸ್ತೀನಿ ಅಂತ ಹೇಳಿದ ಮ್ಯಾಲಂತೂ ನನ್ನ ಜೀವಕ್ಕ ಇನ್ನಷ್ಟು ಸಮಾಧಾನ ಆಗೇತಿ. ಇವತ್ತ ನಮ್ಮೂರು ಮತ್ತ ಗತವೈಭವಕ್ಕ ಮರಳಿದ್ದು ನೋಡಿ ನನಗ ಬಸವಣ್ಣನ ಈ ವಚನ ನೆನಪಾತು.
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.