Monday, June 13, 2016

ಬೆಳೆ



ಅಗಿಯು ಗಿಡವಾಗಬೇಕು ಹೂ ಹಣ್ಣು ಬಿಡಬೇಕು
ಅಗೆಯುತ್ತಿರುತ್ತೇನೆ ಪಾತಿಯನ್ನು ಹಸನು ಮಾಡಲು

ಕಸದ ಜೊತೆ ಇನ್ನೊಂದು ಸಸಿ ಮೊಳೆತರಲ್ಲಿ
ಮತ್ತೊಂದು ಪಾತಿಯಲ್ಲಿಟ್ಟದನು ಪೊರೆದೇನು


ನೆಟ್ಟ ಸಸಿಯೇ ಕಾಣದಂತೆ ಕಸ ಆವರಿಸೆ
ಸುತ್ತಲೂ ತರಿಯದೆ ಪೊರೆದೇನು ಹೇಗೆ

ಕಸ ತೆಗೆವ ಭರದಲ್ಲಿ ಬೇರಿಗೆ ಕುರಪಿಯ ಅಲುಗು
ಜೀವರಸ ಜಿನುಗಿ ಕಣ್ಣ ಹನಿಯಾಗಿ ಮಣ್ಣು ಹಸಿಯಾಗಿ

ಧಕ್ಕೆಯ ದುಃಖ ಕೇವಲ ಅಗಿಯದ್ದಲ್ಲ ಅಗೆದ ಜೀವದ್ದೂ
ಕುರಪಿ ಹಿಡಿದ ಕೈಗೆ ಸಣ್ಣಗೆ ನಡುಕ

ಇಲ್ಲ ನಿನ್ನ ನೋಯಿಸಲಲ್ಲ ಈ ಆಯುಧ
ಇಲ್ಲಿ ಸಲ್ಲದ್ದನ್ನು ನಿವಾರಿಸಲು ಈ ಯುದ್ಧ

ಕೊಸರು ಕಳೆದು ಪೊರೆಯು ಹರಿದು ಕೊನರಬೇಕು ಗೆಳೆತನ
ಬೆಳೆದ ಗಿಡದಿ ಬಿಡುವ ಹೂ ಘಮಿಸೆ ಹಣ್ಣು ಹಂಚಿ ಉಣ್ಣುವುದೇ ಜೀವನ

-ಜಯಲಕ್ಷ್ಮೀ ಪಾಟೀಲ್

Saturday, June 11, 2016

ಪ್ರಜಾವಾಣಿಯಲ್ಲಿ ದಿನಾಂಕ ೧೬-೦೮-೨೦೧೩ ರಂದು ನನ್ನ ಬ್ಲಾಗ್ ಕುರಿತು

http://www.prajavani.net/article/%E0%B2%B9%E0%B3%87%E0%B2%B3%E0%B2%AC%E0%B3%87%E0%B2%95%E0%B3%86%E0%B2%A8%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86-%E0%B2%8F%E0%B2%A8%E0%B3%86%E0%B2%B2%E0%B3%8D%E0%B2%B2%E0%B2%BE

ನಮಸ್ಕಾರ. ಹೌದು ಹೇಳಿಕೋಬೇಕೆನಿಸ್ತಿದೆ, ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು’ – ಹೀಗೆ ತಮ್ಮ ಪರಿಚಯ ಶುರು ಹಚ್ಚಿಕೊಳ್ಳುವ ಜಯಲಕ್ಷ್ಮಿ ಪಾಟೀಲರು ಮೂಲತಃ ಬಿಜಾಪುರದವರು. ಈಗ ಬೆಂಗಳೂರು ವಾಸಿ. ‘ಹೇಳಬೇಕೆನಿಸುತ್ತಿದೆ...’ (antaraala-jayalaxmi.blogspot.in) ಅವರ  ಬ್ಲಾಗ್ ಹೆಸರು.
ಕಿರುತೆರೆಯ ವೀಕ್ಷಕರಿಗೆ ಜಯಲಕ್ಷ್ಮಿ ಪಾಟೀಲರದು ಪರಿಚಿತ ಮುಖ. ಪ್ರಸ್ತುತಈಟೀವಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ
ಟಿ.ಎನ್‌. ಸೀತಾರಾಂ ಅವರಮಹಾಪರ್ವಧಾರಾವಾಹಿಯಲ್ಲಿ ಜಯಲಕ್ಷ್ಮಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಡೆಯಲಾಗದೆ, ಕುರ್ಚಿಯಲ್ಲಿ ಕೂತಿರಬೇಕಾದ ಸ್ಥಿತಿಯಲ್ಲಿಯೂ ಜೀವನೋತ್ಸಾಹ ಕಳೆದುಕೊಳ್ಳದ ಹೆಣ್ಣುಮಗಳ ಪಾತ್ರದಲ್ಲಿ ಅವರು ಸಹೃದಯರಿಗೆ ಇಷ್ಟವಾಗಿದ್ದಾರೆ. ಪಾತ್ರದ ಜೀವಂತಿಕೆ ಅವರ ವ್ಯಕ್ತಿತ್ವಕ್ಕೂ ಹೊಂದುವಂತಹದು. ಓದು, ಬರಹ ಮತ್ತು ಸಂಗೀತ ಎಂದರೆ ಅವರಿಗೆ ತುಂಬಾನೇ ಇಷ್ಟ. ನಟನೆಯಂತೂ ಬದುಕಿನ ಅವಿಭಾಜ್ಯ ಭಾಗ ಎನ್ನುವಷ್ಟು ಆಪ್ತ. ಧಾರಾವಾಹಿಗಳ ಜೊತೆಗೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸುವ ಹಂಬಲ ಅವರದು. ಎಂಥ ಪಾತ್ರದಲ್ಲಿ ಬೇಕಾದರೂ ನಟಿಸಿಯೇನು, ಬದುಕಿನಲ್ಲಿ ಮಾತ್ರ ನಟನೆ ಕಷ್ಟ ಎನ್ನುವುದು ಅವರ ಅನಿಸಿಕೆ.
ಹೇಳಬೇಕೆನಿಸುತ್ತಿದೆ...’ ಜಯಲಕ್ಷ್ಮಿ ಪಾಟೀಲರ ಬಹುಮುಖಿ ಆಸಕ್ತಿಗಳ ಅಭಿವ್ಯಕ್ತಿಯಂತಿದೆ. ತಮ್ಮ ಅನಿಸಿಕೆಗಳು, ವಿಚಾರಗಳು ಹಾಗೂ ಅನುಭವಗಳ ಜೊತೆಗೆ ತಮ್ಮ ಒಡನಾಟಕ್ಕೆ ಬಂದವರ ಬರಹಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಹಾಗಾಗಿಯೇ ಪುಸ್ತಕವೊಂದರ ಮಾತುಕತೆಯ ಜೊತೆಗೆ ಸಂಗೀತ ಕಛೇರಿ ವಿವರಗಳೂ ಬ್ಲಾಗಿನಲ್ಲಿವೆ.  ಕಳೆದ ಬದುಕಿನ ಸಾವಧಾನ ಮತ್ತು ಏರುಗತಿಯ ವರ್ತಮಾನದ ಬದುಕಿನ ಸಾಮ್ಯತೆಗಳು ಮತ್ತು ವೈರುಧ್ಯಗಳನ್ನು ಕಾಣಿಸಲು ಬ್ಲಾಗ್ ಬರಹಗಳು ಹಂಬಲಿಸುವಂತೆ ಕಾಣಿಸುತ್ತವೆ. ಉದಾಹರಣೆಯಾಗಿ ಬರಹವೊಂದರ  ತುಣುಕು ನೋಡಿ
‘‘ಆರು ತಿಂಗಳ ಹಿಂದೆ ಪತಿಯನ್ನು ಕಳಿದುಕೊಂಡಿದ್ದ ೨೭ರ ಹರೆಯದ, ಪುಟ್ಟ ಮಗಳಿರುವ ನನ್ನ ತಂಗಿಗೆ (ಕಾಕಾನ ಮಗಳು) ಮೊದಲಿನಂತೆ ಅವಳು ಉಡುವುದು ತೊಡುವುದು ಮಾಡಲು ನಾವೆಲ್ಲ ಮನವೊಲಿಸುತ್ತಾ ಧೈರ್ಯ ತುಂಬಿ ಅವಳನ್ನು ರೆಡಿ ಮಾಡಿದ್ದೆವು. ಆದರೆ ಎಲ್ಲರಿಗೂ ಕಷ್ಟಕ್ಕೆ ಬಂದಿದ್ದು ಆಯಿಯನ್ನು ಒಪ್ಪಿಸುವ ವಿಷಯದಲ್ಲಿ. ಈಗ ನೋಡಿದರೆ ಎಲ್ಲಾ ಉಲ್ಟಾಪಲ್ಟಾ! ಹಣೆಯ ಕೆಂಪು ಬಿಂದಿ, ಕತ್ತಲ್ಲಿನ ಎರಡೆಳೆ ಸರ, ಕಿವಿಯ ಝುಮುಕಿ, ಮುಡಿಯ ಮಲ್ಲಿಗೆ ಎಲ್ಲವನ್ನು ಗಮನಿಸಿಯೂ ಯಾವುದನ್ನೂ ನಿರಾಕರಿಸಲಿಲ್ಲ ಅವರು! ಆಯಿಯ ಆಧುನಿಕತೆಗೆ ಖುಷಿಯಿಂದ ನಾವೆಲ್ಲ ಮೂಕರಾಗಿದ್ದೆವು. ಆಯಿಯ ಬಗೆಗೆ ನೋವು ಬೆರೆತ ಹೆಮ್ಮೆ ನನ್ನವ್ವನ ಕಣ್ಣಲ್ಲಿ.
ಮನೆಯಲ್ಲಿ ಮದುವೆ ಸಮಾರಂಭ. ಆಯಿ ಎಂದಿನಂತೆ ಎಲ್ಲರಿಗೂ ಕೆಲಸ ಹಂಚಿ ತಾವು ಮೇಲ್ವಿಚಾರಣೆ ಮಾಡುತ್ತಾ ನಿಂತಿದ್ದರು. ಆಕೆ ಯಾವತ್ತೂ ಯಾವ ಶುಭಕಾರ್ಯದಲ್ಲೂ ನೇರ ಭಾಗವಹಿಸಿದವರೇ ಅಲ್ಲ, ಯಾರಿಗಾದರೂ ಕುಂಕುಮವಿಟ್ಟಿದ್ದನ್ನೂ ಕಾಣೆ ನಾನು. ಅಂದೂ ಮತ್ತೊಮ್ಮೆ ಆಯಿ ಹೂವು ಮುಡಿಯಲಿ ಎಂಬ ಆಸೆಯಿಂದ ಮಾರುದ್ದ ಮಾಲೆಯನ್ನು ತೆಗೆದುಕೊಂಡು ಹೋಗಿ ಆಯಿಯ ಎದುರು ಹಿಡಿದೆ. ಸೌಮ್ಯವಾಗಿ ನನ್ನನ್ನು ನೋಡಿ, ‘ನನಗ ಬ್ಯಾಡ, ನೀ ಮುಡ್ಕೊ, ಸಣ್ಣಮಕ್ಕಳು ಮುಡ್ಕೊಂಡ್ರನ ಛಂದಎಂದು ಹೇಳಿ ನನ್ನನ್ನು ಸಾಗಹಾಕಿದರು ಅಲ್ಲಿಂದ. ಆಯಿಗೆ ನನ್ನ ಕಂಡರೆ ಪ್ರೀತಿಯಿಲ್ಲ, ಅದಕ್ಕೇ ನನ್ನ ಕೈಯಿಂದ ಆಕೆ ಹೂವು ಸ್ವೀಕರಿಸುತ್ತಿಲ್ಲ ಎನ್ನುವ ಭಾವನೆಯಿಂದ ಅವ್ವನ ಹತ್ತಿರ ಆಯಿಯನ್ನು ದೂರಿದೆ.
ಆಗ ಅವ್ವ, ‘ಬ್ಯಾಡ, ಆಯಿಗೆ ಇನ್ನೊಮ್ಮೆ ಹಂಗ ಹೂವ್ ಕೊಡಾಕ ಹೋಗಬ್ಯಾಡ, ಅವ್ರು ಮುಡ್ಕೊಳ್ಳಾಂಗಿಲ್ಲ.’ ಅಂದ್ಳು.
ಯಾಕ?’
ಯಾಕಂದ್ರ ಉಡಕಿಯಾದವ್ರು ಹೂವು ಮುಡೀಬಾರ್ದಂತ, ಯಾವ್ದ ಕಾರ್ಯಾದಾಗೂ ಭಾಗವಹಿಸ್ಬಾರ್ದಂತ, ಅದಕ ನಿಮ್ಮ್ ಆಯಿ ಹೂವ್ ಮುಡ್ಕೊಳ್ಳಾಂಗಿಲ್ಲ, ಯಾರಿಗೂ ಕುಂಕುಮಾ ಹಚ್ಚಂಗಿಲ್ಲ, ಆರ್ತಿ ಮಾಡಾಂಗಿಲ್ಲ. ಅದಕೇನಾಕ್ಕತಿ ನೀವು ನನಗ ಕುಂಕುಮಾ ಹಚ್ಚಿ ಆರ್ತಿ ಮಾಡ್ರಿ ಅಂತ ನಾ ಒಮ್ಮಿ ಹೇಳಿದ್ದಕ್ಕ ನನಗ ಬೈದು ಸುಮ್ನಾಗಿಸಿದ್ರುಅಂದಳು ಅವ್ವ.
ಉಡಕಿ ಅಂದರೆ ಮರುಮದುವೆ. ಆಯಿಗೆ ತೊಟ್ಟಿಲಲ್ಲೇ ಅಂದರೆ ಹಸುಗೂಸಾಗಿದ್ದಾಗಲೇ ತಾಳಿಕಟ್ಟಲಾಗಿತ್ತಂತೆ. ಹಾಗೆ ತಾಳಿ ಕಟ್ಟಿದ ಹುಡುಗ ತನ್ನ ಏಳನೇ ವಯಸ್ಸಲ್ಲಿ ಯಾವುದೋ ಖಾಯಿಲೆ ಬಂದು ತೀರಿಕೊಂಡ. ಮುಂದೆ ಆಯಿ ಹನ್ನೊಂದು ವರ್ಷದವಳಿದ್ದಾಗ ಹೆಂಡತಿ ಸತ್ತ ಹದಿನಾರು ವರ್ಷದ ನನ್ನ ಮುತ್ತ್ಯಾರ (ಮುತ್ತ್ಯಾ=ಅಜ್ಜ) ಜೊತೆ ಮದುವೆಯಾಯಿತು. ಹೀಗೆ ಉಡುಕಿಯಾದ ಹೆಣ್ಣು ಹೂ ಮುಡಿಯುವುದು, ಶುಭಕಾರ್ಯದಲ್ಲಿ ಭಾಗವಹಿಸುವುದರ ಹೊರತಾಗಿ ಉಳಿದೆಲ್ಲರಂತೆ ಸಂಸಾರ ಮಾಡಬಹುದು ಎನ್ನುವುದು ಮದುವೆಯ ನಿಯಮವಂತೆ. ಹಾಗಾಗಿ ಮೊಳಕಾಲುದ್ದದ ಕೂದಲು ಅದಕ್ಕೂ ಮಿಗಿಲಾದ ಆಸೆಗಳಿದ್ದರೂ ಆಯಿ ಅದನ್ನೆಲ್ಲ ಹತ್ತಿಕ್ಕಿ ಬಿಗಿ ತುರುಬು ಕಟ್ಟಿ ಬದುಕಿದ್ದರು. ತನ್ನ ಕೈಯಲ್ಲಿ ಸಾಧ್ಯವಾಗದ್ದನ್ನು ಮೊಮ್ಮಗಳಿಂದ ಸಾಧ್ಯ ಮಾಡಿಸಿದರು, ಅವಳನ್ನು ಬೆಂಬಲಿಸುವುದರ ಮೂಲಕ ಕೆಟ್ಟ ಪರಂಪರೆಯೊಂದನ್ನು ನಮ್ಮನೆಯಿಂದ ಒದ್ದೋಡಿಸಿದರು’’.
ಜಯಲಕ್ಷ್ಮಿ ಅವರ ಮೇಲಿನ ಬರಹ ಎರಡು ತಲೆಮಾರುಗಳ ಕಥನಗಳನ್ನು ಅತಿರೇಕವಿಲ್ಲದೆ ಓದುಗರ ಮುಂದಿಡುತ್ತದೆ. ಹೀಗೆ ಬದುಕಿನ ವೈವಿಧ್ಯ ಕಾಣಿಸುವ ಇಂಥ ಬರಹಗಳು ಬ್ಲಾಗ್ನಲ್ಲಿ ಸಾಕಷ್ಟಿವೆ. ಅಂದಹಾಗೆ, ಅವರು ಕವಿತೆಯನ್ನೂ ಬರೆಯಬಲ್ಲರು. ರಚನೆಯೊಂದರ ತುಣುಕು ನೋಡಿ
ಜಾಗತೀಕರಣದ ವ್ಯಾಕರಣ
ಸಸ್ತಾ ಮಾಲಾಗಿ ಏಳು ಸಮುದ್ರದಾಚೆಯ ಭದ್ರ ಕೋಟೆಯೊಳಗಿನ ರಾಜಕುಮಾರಿ
ಕಂಡವರ ಬೆರಳ ತುದಿ ತಾಕಿ ಬೆತ್ತಲೆ
ಬೆಲೆ ಕಳೆದುಕೊಂಡ ಬದುಕೀಗ
ಹಗಲಿನಲ್ಲೇ ಕತ್ತಲೆ
ಬದುಕಿನಲ್ಲಿ ಇರುವ ಬೆರಗು, ಕೊರಗು ಎರಡನ್ನೂ ಜಯಲಕ್ಷ್ಮಿ ಪಾಟೀಲರ ಬ್ಲಾಗು ಸಮಚಿತ್ತದಲ್ಲಿ ದಾಖಲಿಸಲು ಪ್ರಯತ್ನಿಸುತ್ತದೆ. ಜೀವನಪ್ರೀತಿಯ ಬರಹಗಳು ಓದಿನ ರುಚಿ ಹೆಚ್ಚಿಸುವಂತಿವೆ.
-  ಸಾಕ್ಷಿ

Wednesday, June 1, 2016

ಮನೆಯೇ ಮೊದಲ ಪಾಠಶಾಲೆ...

ಜನದನಿ ಇಂಥ ಅನೇಕ ಕಿರುಚಿತ್ರಗಳನ್ನು ಮಾಡುವ ಯೋಜನೆಯನ್ನು ಹಾಕಿಕೊಂಡಿದೆಯಲ್ಲದೇ ಈಗಾಗಲೇ ತಯಾರಿಸಿದ ಇನ್ನೂ ಎರಡು ಕಿರುಚಿತ್ರಗಳು ಮತ್ತು ನಾಲ್ಕಾರು ಕತೆಗಳು ಕೈಯಲ್ಲಿವೆ.

ಈ ಚಿತ್ರಗಳಲ್ಲಿ ಬರುವ ಅಪ್ರಾಪ್ತ ವಯಸ್ಸಿನ ಮಕ್ಕಳ ಪಾತ್ರಧಾರಿಗಳಿಗೆ ಈ ವಿಷಯದ ಕುರಿತು ಯಾವುದೇ ಅನಗತ್ಯ ಕುತೂಹಲ ಮೂಡದಂತೆ, ಅವರ ಮುಗ್ಧತೆ ಹಾಳಾಗದಂತೆ ಸಂಪೂರ್ಣ ಎಚ್ಚರವಹಿಸಿಯೇ ಚಿತ್ರೀಕರಿಸುತ್ತೇವೆ. ಮಕ್ಕಳ ಮುಗ್ಧತೆ ಹಾಳಾಗದಂತೆ ಎಚ್ಚರವಹಿಸುವುದು ಜನದನಿಯ ಪ್ರಮುಖ ಆಶಯಗಳಲ್ಲಿ ಒಂದಾದ್ದರಿಂದ ನಮ್ಮೆಲ್ಲರಲ್ಲೂ ಈ ಕುರಿತು ಸಂಪೂರ್ಣ ಎಚ್ಚರಿಕೆ ಇರುತ್ತದೆ ಸದಾ. ಇದೇ ಕಾರಣದಿಂದಾಗಿ ಈ ಚಿತ್ರದಲ್ಲಿ ಅಭಿನಯಿಸಿದ ಹುಡುಗನ ಪಾತ್ರಧಾರಿ ಓಂ (ಓಂಕಾರೇಶ ಪಾಟೀಲ್, ನನ್ನ ತಂಗಿಯ ಮಗ)ಗೆ ಈ ಚಿತ್ರವನ್ನು ನಾವುಗಳು ತೋರಿಸಿಲ್ಲ.

ಎಲ್ಲರೂ ತಮ್ಮ ತಮ್ಮ ಮನೆಯ ಮಕ್ಕಳ ಕುರಿತು, ಅವರ ನಿಷ್ಕಲ್ಮಶ ಮನಸಿನ ಕುರಿತು ಕಾಳಜಿವಹಿಸುವುದು ಅತ್ಯವಶ್ಯಕ. ತಪ್ಪಿಯೂ ಪೋರ್ನ್ ಪೋಸ್ಟರುಗಳು, ವಿಡಿಯೋಗಳು, ವೆಬ್‍ಸೈಟ್‍ಗಳು ಮಕ್ಕಳ ಕಣ್ಣಿಗೆ ಬೀಳದಿರಲಿ.

ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ; ಮಕ್ಕಳು ಕಂಪ್ಯೂಟರ್ ಬಳಸುವುದು ಅನಿವಾರ್ಯವಾದಾಗ ಅವರುಗಳ ಜೊತೆಗೆ ನೀವೂ ಕುಳಿತುಕೊಳ್ಳುವುದು. ಮಕ್ಕಳ ಕೈಯಲ್ಲಿ ಇಂಟರ್‍ನೆಟ್ ಸೌಲಭ್ಯವಿರುವ ಮೊಬೈಲುಗಳನ್ನು ಕೊಡದಿರುವುದು. ಮಕ್ಕಳು ತಮಗೆ ಅಂಟಿಕೊಳ್ಳದಿದ್ದರೆ ಸಾಕು, ಫಟಾಫಟ್ ಕೆಲಸ ಮುಗಿಸಿಬಿಡಬಹುದು ಎಂದುಕೊಂಡೋ ಇಲ್ಲವೇ ಕೈಯಲ್ಲಿ ಮೊಬೈಲ್ ಕೊಟ್ಟರೆ ಸಾಕು ಹಠ ಮಾಡದೆ ಸುಮ್ಮನಿರುತ್ತಾರೆ ಎಂದೋ ಇಲ್ಲವೇ ಮೊಬೈಲ್ ಕೊಡದೆ ಹೋದರೆ ಹಠ ಮಾಡುತ್ತಾರೆ ಎಂದೋ ತುಂಬಾ ಜನ ತಂದೆ ತಾಯಿಗಳು ಅವರುಗಳ ಕೈಯಲ್ಲಿ ಮೊಬೈಲ್ ಕೊಡುವುದು ಈ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ದೃಶ್ಯ. ಅಕಸ್ಮಾತ್ ಮಗು ನಿಮ್ಮ ಮೊಬೈಲಿನಲ್ಲಿರುವ ಅಥವಾ ಕಂಪ್ಯೂಟರ್‍ನ ವೆಬ್‍ಸೈಟ್ಸ್, ಯೂಟ್ಯೂಬ್‍ನಲ್ಲಿರುವ ಪೋರ್ನ್ ವಿಡಿಯೊ ನೋಡಿತು ಅಂತಾದರೆ ಆ ಮಗುವಿನಲ್ಲೇಳುವ ಪ್ರಶ್ನೆಗಳು, ಹುಟ್ಟುವ ಕುತೂಹಲ, ತನ್ನ ಮೇಲೇ ಮಾಡಿಕೊಳ್ಳುವ ವಯೋಸಹಜ ಪ್ರಯೋಗಗಳ ಬಗ್ಗೆ ಯೋಚಿಸಿ. ಅದರಿಂದ ಮಗುವಿನ ಮಾನಸಿಕ ಆರೋಗ್ಯ ಹಾಳಾಗುವುದರ ಬಗ್ಗೆ ಯೋಚಿಸಿ. ಮುಂದೆ ಸಮಾಜಕ್ಕೂ ಮೊದಲು ತನಗೇ ತಾನು ಆ ಮಗು ಮುಳುವಾಗಬಹುದಾದನ್ನು ಊಹಿಸಿ! ಯೋಚಿಸಿದರೇ ಎದೆಯಲ್ಲಿ ನಡುಕ ಹುಟ್ಟುತ್ತದೆ! ಇದೆಲ್ಲದರಿಂದ ಹೊರತಾಗಿ ನಿಮ್ಮ ಮನೆಯ ಮಗು ಸುರಕ್ಷಿತವಾಗಿರಬೇಕೆಂದರೆ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಕರವಾಗಿರಬೇಕೆಂದರೆ ಮೊದಲು ಅಂಥ ಚಿತ್ರಗಳನ್ನು ನೋಡುವವರು ನೋಡುವುದನ್ನು ನಿಲ್ಲಿಸಬೇಕು. ಮತ್ತು ಈಗಾಗಲೇ ಹೇಳಿದಂತೆ ಮಗುವನ್ನು ಅವೆಲ್ಲದರಿಂದ ದೂರವಿಡಬೇಕು.