ಅಗಿಯು ಗಿಡವಾಗಬೇಕು ಹೂ ಹಣ್ಣು ಬಿಡಬೇಕು
ಅಗೆಯುತ್ತಿರುತ್ತೇನೆ ಪಾತಿಯನ್ನು ಹಸನು ಮಾಡಲು
ಕಸದ ಜೊತೆ ಇನ್ನೊಂದು ಸಸಿ ಮೊಳೆತರಲ್ಲಿ
ಮತ್ತೊಂದು ಪಾತಿಯಲ್ಲಿಟ್ಟದನು ಪೊರೆದೇನು
ನೆಟ್ಟ ಸಸಿಯೇ ಕಾಣದಂತೆ ಕಸ ಆವರಿಸೆ
ಸುತ್ತಲೂ ತರಿಯದೆ ಪೊರೆದೇನು ಹೇಗೆ
ಕಸ ತೆಗೆವ ಭರದಲ್ಲಿ ಬೇರಿಗೆ ಕುರಪಿಯ ಅಲುಗು
ಜೀವರಸ ಜಿನುಗಿ ಕಣ್ಣ ಹನಿಯಾಗಿ ಮಣ್ಣು ಹಸಿಯಾಗಿ
ಧಕ್ಕೆಯ ದುಃಖ ಕೇವಲ ಅಗಿಯದ್ದಲ್ಲ ಅಗೆದ ಜೀವದ್ದೂ
ಕುರಪಿ ಹಿಡಿದ ಕೈಗೆ ಸಣ್ಣಗೆ ನಡುಕ
ಇಲ್ಲ ನಿನ್ನ ನೋಯಿಸಲಲ್ಲ ಈ ಆಯುಧ
ಇಲ್ಲಿ ಸಲ್ಲದ್ದನ್ನು ನಿವಾರಿಸಲು ಈ ಯುದ್ಧ
ಕೊಸರು ಕಳೆದು ಪೊರೆಯು ಹರಿದು ಕೊನರಬೇಕು ಗೆಳೆತನ
ಬೆಳೆದ ಗಿಡದಿ ಬಿಡುವ ಹೂ ಘಮಿಸೆ ಹಣ್ಣು ಹಂಚಿ ಉಣ್ಣುವುದೇ ಜೀವನ
-ಜಯಲಕ್ಷ್ಮೀ ಪಾಟೀಲ್
No comments:
Post a Comment