Photo courtesy: Google |
ಅದ್ಯಾವುದೋ ನಾನು ಈವರೆಗೆ ನೋಡಿಯೇ ಇರದ ಪ್ರದೇಶ. ಪ್ರವಾಸಕ್ಕೆ ಬಂದಿದ್ದೇವೆ. ಅಲ್ಲಿ ನೆಲದಿಂದ ಮೂರ್ನಾಲ್ಕು ಫೂಟು ಎತ್ತರದಲ್ಲಿ ಕಟ್ಟಿಗೆಯ ಪಳಿಗಳಿಂದ ನಿರ್ಮಿಸಿದ, ಒಂದಕ್ಕೊಂದು ರೈಲಿನ ಡಬ್ಬಿಗಳಂತೆ ಅಂಟಿಕೊಂಡಿರುವಂಥ ಮನೆಗಳು. ಅಂಥ ಒಂದು ಮನೆಯಲ್ಲಿ ನನ್ನ ಗಂಡ ನಮ್ಮ ಸಾಮಾನುಗಳನ್ನಿರಿಸತೊಡಗಿದ್ದಾರೆ. ಅಂಥಲ್ಲಿ ನಮ್ಮ ವಾಸ್ತವ್ಯ! ಇರುಸುಮುರಿಸುಗೊಂಡು ಚಡಪಡಿಸತೊಡಗಿದೆ ನಾನು. ಇಂಥಲ್ಲಿ ನಾನಿರಲಾರೆ ಎಂದು ಸಿಡಿಮಿಡಿಗೊಳ್ಳುತ್ತಾ ನನ್ನ ಮನೆಯವರ ಮೇಲೆ ಹರಿಹಾಯ್ದೆ. ಇರಲ್ಲ ಅಂದ್ರ ಹೆಂಗ್ ಜಯಾ? ಅಡ್ಜಸ್ಟ್ ಮಾಡ್ಕೋಬೇಕು ಎಂದ ಇವರು ನನ್ನ ಅಹವಾಲನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ತಮ್ಮ ಕಾಯಕ ಮುಂದುವರೆಸಿದರು. ನನಗೋ ಅದನ್ನು ಸಹಿಸಲಾಗುತ್ತಿಲ್ಲ. ಕೂಗಾಡಿ ಅಸಹನೆಯಿಂದ ಅಲ್ಲಿಂದ ದಾಪುಗಾಲು ಹಾಕಿ ಮನೆಯಾಚೆ ಬಂದರೆ, ಅಕ್ಕಪಕ್ಕದಲ್ಲೆಲ್ಲ ಎಂಥೆಂಥವರೋ ಗುಳೆ ಎದ್ದವರಂತೆ ಬಂದು ಉಳಿದ ಮನೆಗಳನ್ನು ಹೊಕ್ಕು ತಮ್ಮ ಜಾಗ ಫಿಕ್ಸ್ ಮಾಡಿಕೊಳ್ತಿದಾರೆ. ನನ್ನ ಗಂಡ ಹೀಗ್ಯಾಕಾಡ್ತಿದಾರೆ? ತೀರ ಇಂಥ ಮನೆಗಳಲ್ಲಿ ಇರುವಂಥ ದುರ್ಗತಿ ನಮಗೇನು? ಇಂಥಲ್ಲಿ ಅದು ಹೇಗ್ ಇರೋಕ್ ಮನಸು ಬರ್ತಿದೆ ಇವ್ರಿಗೆ? ಧುಮುಗುಡುತ್ತಾ ಆ ಮನೆಗಳ ಹಿಂಬದಿಯಲ್ಲಿ ಅಷ್ಟು ದೂರ ನಡೆದೆ. ಕಾಲಡಿಯಲ್ಲಿ ಬರೀ ಮರಳು. ಎದುರಿಗೂ ಅಷ್ಟು ದೂರದವರೆಗೆ ಮರಳ ಹಾಸು. ಅದರ ಮುಂದೆ ಕಂಪೌಂಡ್ ಕಟ್ಟಿದಂತೆ ಒತ್ತೊತ್ತಾಗಿ ಗಿಡಗಂಟಿಗಳ ಪೊದೆಗಳು ಕಾಣಿಸುತ್ತಿವೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಇಬ್ಬರು ಪರಿಚಿತರು ಎದುರಾದರು. ಸಿನಿಮಾ ಮೇಕಿಂಗ್ ಬಗ್ಗೆ ಏನೇನೋ ಮಾತಾಡಿದರು. ನಾನಿದೀನಾ ನಿಮ್ಮ ಸಿನಿಮಾದಲ್ಲಿ ಎಂದು ನಾನು ಕೇಳಿದ ಕೂಡಲೇ ಏನೊಂದೂ ಮಾತಾಡದೆ ಅಲ್ಲಿಂದ ಕಾಲ್ಕಿತ್ತರು. ಈಗ ನನ್ನ ಮನಸು ತುಸು ತಹಬದಿಗೆ ಬಂದಿದೆ. ನಾನು ನನ್ನ ನಡಿಗೆಯನ್ನು ಮುಂದುವರೆಸಿದೆ. ನಾಲ್ಕಾರು ಹೆಜ್ಜೆ ನಡೆದನೋ ಇಲ್ಲವೋ ಇದ್ದಕ್ಕಿದ್ದಂತೆ ಅಲ್ಲೊಂದು ಪ್ರವಾಹ ಉದ್ಭವವಾಗಿ ಉಕ್ಕಿ ನನ್ನೆಡೆಗೆ ಧಾವಿಸಿ ಬರತೊಡಗಿತು!
ಅದೇನೆಂದು ನನ್ನರಿವಿಗೆ ಬರುವಷ್ಟರಲ್ಲಿ ನಾನದರಲ್ಲಿ ಕೊಚ್ಚಿಕೊಂಡು ಅಷ್ಟು ದೂರ ಅಲೆಗಳೊಂದಿಗೆ ಹೋರಾಡುತ್ತಾ, ಹರಿಯುತ್ತ ಮುಂದೆ ಒಂದೆಡೆಗೆ ದಡದಲ್ಲಿ ಸಿಕ್ಕ ಆಸರೆಗಂಟಿಕೊಂಡು ಎದ್ದು ನೋಡುತ್ತೇನೆ, ಒಂದೆಡೆ ಪ್ರವಾಹ ತೊನೆದಾಡುತ್ತಿದ್ದರೆ, ಇನ್ನೊಂದೆಡೆ ನಾನು ನಿಂತಲ್ಲಿ ದಿಬ್ಬವೊಂದರ ಮೇಲೆ ಆದಿವಾಸಿಗಳು ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಕೊಂಡು ಓಡಾಡುತ್ತಿದ್ದಾರೆ! ಇದೇನಿದು ಇವರ್ಯಾರಿಗೂ ಈ ಪ್ರವಾಹದ ಭಯವೇ ಇಲ್ಲವೇ?! ಎಂದು ಅವರಲ್ಲಿ ಕೆಲವರನ್ನು ನಿಲ್ಲಿಸಿ ವಿಚಾರಿಸಿದರೆ ಇದೆಲ್ಲ ಮಾಮೂಲು ನಮಗೆ ಎಂದರು! ಅಯ್ಯೋ ಮತ್ತೆ ಯಾರಾದ್ರು ಇದರಲ್ಲಿ ಹರಿದುಹೋಗಿ ಸತ್ತರೇನು ಗತಿ?! ಎಂದಿದ್ದಕ್ಕೆ, ಆಗ ಯಾರಾದ್ರು ಏನ್ ಮಾಡೋಕಾಗುತ್ತೆ? ನಮ್ಮ ನಮ್ಮ ಹಣೇಲಿದ್ದಂತಾಗುತ್ತೆ. ಅದನ್ನ ತಪ್ಪಿಸೋಕಾಗುತ್ತಾ? ಎನ್ನುವ ನಿರ್ಲಿಪ್ತ ಉತ್ತರ ಕೇಳಿ ದಂಗಾದೆ. ಅಲ್ಲಿಯವರೆಗೆ ಅವರ ಭಾಷೆಯನ್ನು ಕೇಳಿಯೂ ಇರದ ನನಗೆ ಅವರ ಭಾಷೆ ಪೂರ್ತಿ ಅರ್ಥವಾಗುತ್ತಿದೆ ಅನಿಸಿ ಸೋಜಿಗವಾಯ್ತು. ಇದ್ದಕ್ಕಿದ್ದಂತೆ, ಇಂಥ ದೊಡ್ಡ ನೆರೆ ಬಂದು ನಾನು ಕೊಚ್ಚಿಕೊಂಡು ಹೋದರೂ ನಮ್ಮನೆಯವರ್ಯಾರಿಗೂ ನನ್ನ ಬಗ್ಗೆ ಕಾಳಜಿಯೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಅಮೋಲ್ ಬಂದ. ಅಮ್ಮಾ, ಇಲ್ಲೇನ್ ಮಾಡಾಕತ್ತಿ? ಬಾ ಮನಿಗೆ ಹೋಗೂನು. ಎಲ್ಲೆಲ್ಲಿ ಹುಡುಕ್ಯಾಡೂದು ನಿನ್ನ? ಅಂದ. ಮಗನಾದರೂ ನನ್ನ ಬಗ್ಗೆ ಕಾಳಜಿ ವಹಿಸಿದನಲ್ಲ ಅನಿಸಿ ನೆಮ್ಮದಿ ಮನಸಿಗೆ.
ನಡಿ ಅಪ್ಪು ಮೊದ್ಲ ಇಲ್ಲಿಂದ ಹೊಂಡೂನು, ಮತ್ತ ಯಾವಾಗ ಈ ನೀರು ಏರ್ತತೋ ಗೊತ್ತಿಲ್ಲ. ನಿಮ್ಮಪ್ಪಗ ಹೇಳಿದ್ರ ಅವ್ರು ನನ್ನ ಮಾತು ಕೇಳ್ಲಿಲ್ಲ. ಇಲ್ಲಿ ಬಂದು ಮನಿ ಮಾಡ್ಯಾರ. ಮದ್ಲ ಅಲ್ಲಿ ಹೋಗಿ ಜಾಗಾ ಖಾಲಿ ಮಾಡೂನು. ಇಲ್ಲಿಕ್ಕಂದ್ರ ಯಾರೂ ಉಳ್ಯಂಗಿಲ್ಲ, ಎನ್ನುತ್ತಾ ಅವಸರ ಮಾಡಿ ಮಗನನ್ನು ಕರೆದುಕೊಂಡು ನಾವು ಉಳಿದುಕೊಂಡಲ್ಲಿ ಮರಳಿ ಬಂದು ನೋಡುತ್ತೇನೆ, ಅಲ್ಲಿ ನನ್ನ ಅಪ್ಪ, ಅವ್ವ, ತಮ್ಮ, ತಂಗಿಯರ ಸಮಸ್ತ ಕುಟುಂಬವಿದೆ!
ಇವ್ರೆಲ್ಲ ಯಾವಾಗ್ ಬಂದ್ರಿಲ್ಲಿ? ಎಂದು ಅಚ್ಚರಿಗೊಳ್ಳುತ್ತಾ, ಎಲ್ಲರಿಗೂ ಪ್ರವಾಹದ ಬಗ್ಗೆ ಎಚ್ಚರಿಸುತ್ತಾ ಅಲ್ಲಿಂದ ಜಾಗ ಖಾಲಿ ಮಾಡಲು ಹೇಳಿದರೆ ಒಬ್ಬರೂ ನನ್ನ ಮಾತನ್ನು ನಂಬುತ್ತಿಲ್ಲ! ನಿಂದು ಎಲ್ಲಾನೂ ಅತೀನ ಎನ್ನುವ ಉಡಾಫೆ! ಇದ್ದಕ್ಕಿದ್ದಂಗ ಇಷ್ಟೆಲ್ಲಾ ಸಾಮಾನ್ ಹೊತಗೊಂಡು ನಡಿ ಅಂದ್ರ ಹೆಂಗಾಕ್ಕತಿ? ಸುಮ್ನ ತಲಿ ತಿನಬ್ಯಾಡ, ಇಲ್ಲದ್ದು ಏನನರ ಅನ್ಕೋಬ್ಯಾಡ ಎನ್ನುವ ಅಸಡ್ಡೆಯ ಉತ್ತರಗಳೇ ಎಲ್ಲರದು! ಪರಿಪರಿಯಾಗಿ ವಿನಂತಿಸಿ, ಕೂಗಾಡಿ ಹೇಳಿದರೂ ನನ್ನ ಮಾತಿಗೆ ಕ್ಯಾರೇ ಅನ್ನುವುವವರಿಲ್ಲ! ಸೋತು ಆ ಮನೆಯಿಂದ ಹೊರಬಂದು ನಿಸ್ಸಹಾಯಕಳಾಗಿ ನಿಂತೆ. ತಿರುಗಿ ನೋಡಿದರೆ ಬೆನ್ನ ಹಿಂದೆ ಧಾವಿಸಿ ಮುನ್ನುಗ್ಗಲು ಸಜ್ಜಾದ ಪ್ರವಾಹ ಒಂದೊಂದೇ ಹೆಜ್ಜೆ ಎತ್ತಿಡುತ್ತಾ ಅಬ್ಬರಿಸುತ್ತಿದೆ. ಇನ್ನೇನು ಎಲ್ಲರೂ ಜಲಸಮಾಧಿಯಾಗುವುದೇ ಸೈ ಎಂದುಕೊಳ್ಳುತ್ತಿದ್ದಂತೆಯೇ, ಅವ್ವ ಮತ್ತು ಮಂಜುಚಿಕ್ಕಮ್ಮ ಮನೆಯಿಂದಾಚೆ ಬಂದು ನನ್ನನ್ನು ಒಂಥರದ ಅಸಹನೆಯಿಂದ ನೋಡಿ ಅಲ್ಲಿಂದ ಇನ್ನೊಂದೆಡೆಗೆ ನಡೆದರು. ನಾನೇನು ತಪ್ಪು ಮಾಡಿದೆ ಎಂದು ತಿಳಿಯದೆ ಪೆಚ್ಚಾದೆ. ಸ್ವಲ್ಪ ಹೊತ್ತಿನ ನಂತರ ಪುವ್ವಿ ಮತ್ತು ಅದಿತಿ ಮನೆಯಿಂದಾಚೆ ಬಂದರು. ಪುವ್ವಿ, ‘ಎಲ್ಲಾರ ಕೈಯಾಗೂ ಸಾಧ್ಯ ಆದಷ್ಟು ಸಾಮಾನ್ ಕೊಟ್ಟು ಕಳ್ಸೀದೆ ಪಪ್ಪಕ್ಕಾ. ಎಲ್ಲಾರೂ ಏರ್ಪೋರ್ಟ್ ಕಡಿ ಹೋದ್ರು. ಇನ್ನ ಸ್ವಲ್ಪ ಸಾಮಾನು ಉಳದಾವು. ಹಗರದಾವು. ನಾವು ಮೂರು ಮಂದಿ ಅವನ್ನ ತೊಗೊಂಡು ಹೋಗೂನು, ಅಪ್ಪನ್ನ ಬಾಗಲ ಮುಂದ ಸಾಮಾನ್ ಕಾಯಾಕ ಕುಂದ್ರಿಸಿ ಬಂದೀನಿ’, ಎನ್ನುತ್ತಾ ಖುಷಿಯಿಂದ ಹೇಳಿದ್ದನ್ನು ಕೇಳಿ, ಕೊನೆಗೂ ಎಲ್ರೂ ಜಾಗ ಖಾಲಿ ಮಾಡಿದ್ರು ಎನ್ನುವ ನೆಮ್ಮದಿ ನನಗೆ. ಜೊತೆಗೆ ನಮಗಾಗಿ ಹಗುರ ವಸ್ತುಗಳನ್ನ ಉಳಿಸಿಕೊಂಡು ಭಾರವಾದುದೆಲ್ಲ ಅವರ ಕೈಯಲ್ಲಿ ಕಳಿಸಿದಳು ಅನಿಸಿ, ಹಂಗ್ಯಾಕ್ ಮಾಡಿದ್ಲು ಅನ್ನೊ ಪುಟ್ಟ ಕಿರಿಕಿರಿ ಪುವ್ವಿಯ ಬಗ್ಗೆ. ಅಷ್ಟರವರೆಗೆ ಕಬಳಿಸುವಂತೆ ಮುನ್ನುತ್ತಿದ್ದ ಪ್ರವಾಹ ಹಿಂದೆ ಹಿಂದೆ ಸರಿಯತೊಡಗಿತು. ಅಚ್ಚರಿಯ ಬದಲಿಗೆ, ಸಧ್ಯ ಎಲ್ರೂ ಪಾರಾದ್ರು. ಅಕಸ್ಮಾತ್ ಹಿಂದೆ ಸರಿಯೊ ಬದಲು ಬಂದು ಆವರಿಸಿದ್ದರೆ ಆಹುತಿಯಾಗುತ್ತಿದ್ದರು ಅನಿಸಿತು. ನಾನು ಮೆಟ್ಟಿಲೇರಿ ಆ ಸಾಲು ಮನೆಯ ಪ್ಯಾಸೇಜಿನಲ್ಲಿ ನಡೆದು ನಾವುಳಿದುಕೊಂಡಿದ್ದ ಮನೆಯ ಹತ್ತಿರ ಬಂದು ತಿರುಗಿ ನೋಡಿದರೆ, ದೂರದಿಂದ ಇನ್ನೊಂದು ದಿಕ್ಕಿನಿಂದ ಕಪ್ಪು ನೀರಿನ ದಟ್ಟ ಪ್ರವಾಹ ಇತ್ತಲೇ ಧಾವಿಸತೊಡಗಿದ್ದು ಕಾಣಿಸಿತು. ಇದಕ್ಕೆ ನಾನು ಆಹುತಿಯಾಗುವುದು ನಿಶ್ಚಿತ ಅನಿಸಿತು. ಬಾಗಿಲಲ್ಲಿ ಕುಳಿತ ಅಶೋಕ್ ಮಾಮಾನನ್ನು ದಾಟಿಕೊಂಡು ಆ ಮನೆಯೊಳಗೆ ಹೆಜ್ಜೆ ಇಟ್ಟೆ…
ನಮ್ಮ ಈ ಹೊತ್ತಿಗೆಯ ೫ನೇ ಹೊನಲು ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದು ಮಲಗಿದ ರಾತ್ರಿ, ಅಂದ್ರೆ ದಿನಾಂಕ ೧೧ ಫೆಬ್ರವರಿ ೨೦೧೮ರ ರಾತ್ರಿ ನನಗೆ ಬಿದ್ದ ಅಪ್ಪಟ ಹಾಲಿವುಡ್ ಶೈಲಿಯ ಕನಸಿದು!
ನಿದ್ದೇಲಿ ಬೀಳೊ (ಎಚ್ಚರವಾಗುವ!) ಕನಸು ಒಂಥರಾ ನಾವುಗಳೇ ಹೀರೊ ಹೀರೋಯಿನ್ಗಳಾಗಿರುವ unscripted, non edited ಸಿನಿಮಾ ಇದ್ದಂಗೆ! ಘನ ನಿರ್ದೇಶಕರು ಸದಾ ತೆರೆಮರೆಯಲ್ಲಿ. ಟಿಕ್ನಿಕಲ್ ಕ್ರ್ಯೂ ಇರುತ್ತಲ್ಲ ವಾಸ್ತವದಲ್ಲಿ, ತಾಂತ್ರಿಕತೆಯ ಬಗ್ಗೆ ನಿರ್ದೇಶನದ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಜನರ ಪಾಲಿಗೆ, ಹಾಗೆ ಇಲ್ಲಿಯೂ. ನಾವು ನೋಡೊ ಸಿನಿಮಾದಲ್ಲಿ ನಾವೇ ನಾಯಕ ನಾಯಕಿಯರಾಗಿದ್ದ್ರೂ ನಾವು ಹಾಗೆಲ್ಲ ಅಭಿನಯಿಸಿದ್ದ್ಯಾವಾಗ ಅಂತನ್ನೋದು ನೆನಪಿರೋದು ಬಿಡಿ ನಮಗೊಂದೈಡಿಯಾ ಸಹ ಇರೊಲ್ಲ ನಮ್ಮೆದುರು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳಲಿರುವ(ಈ ಡಿಜಿಟಲ್ ಯುಗದಲ್ಲೂ ಸಿನಿಮಾ ಅಂದ್ರೆ ರೀಲ್ ಸುತ್ತೋದು ಅದರ ಸುರುಳಿ ಬಿಚ್ಚಿಕ್ಕೊಳ್ಳುತ್ತಾ ಹೋಗುತ್ತೆ ಅಂತನ್ನೋದೇ ಎಷ್ಟು ಹಿತ ನೀಡುತ್ತೆ ಮನಸಿಗೆ!) ಸಿನಿಮಾದ ಕತೆ ಏನು, ನಮ್ಮ ಪಾತ್ರ ಏನು ಅನ್ನೋದರ ಬಗ್ಗೆ ಕಿಂಚಿತ್ತೂ ಅಂದಾಜಿರಲ್ಲ ನಮಗೆ. ಯಾವ್ಯಾವುದೋ ದೃಶ್ಯಗಳು, ಪರಿಚಿತ ಅಪರಿಚಿತ ಜನ, ಸ್ಥಳಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಹಗಲೊತ್ತಲ್ಲಿ ಅಂದ್ರೆ ಎಚ್ವರದ ಸ್ಥಿತಿಯಲ್ಲಿದ್ದಾಗ ನಮಗರಿವಿಲ್ಲದಂತೆ ಸೀರೆ ಒಂಚೂರು ಅತ್ತಿತ್ತ ಸರಿದು, ಕುಪ್ಪಸವೊ ಹೊಟ್ಟೆಯೊ ಸೊಂಟವೋ ಕಂಡರೆ ಯಾರೂ ನೋಡಿರದಿದ್ದ್ರೆ ಸಾಕು ಎಂದುಕೊಳ್ಳುತ್ತಾ ಸರಕ್ಕನೆ ಸರಿಪಡಿಸಿಕೊಂಡು, ನೆಮ್ಮದಿಯ ಉಸಿರುಬಿಡುವ ನಾವು ಕೆಲವೊಮ್ಮೆ ಕನಸಲ್ಲಿ ಮಾತ್ರ ಯಾವುದೋ ಮದುವೆ, ಸಮಾರಂಭ, ಜಾತ್ರೆ, ಸಂತೆ, ಶಾಲೆ ಕಾಲೇಜಿನಲ್ಲಿ, ಎಲ್ಲೋ ಒಂದೆಡೆ ಮೈತುಂಬಾ ಬಟ್ಟೆ ಧರಿಸಿ ಓಡಾಡಿಕೊಂಡಿದ್ದವರು ಅಚಾನಕ್ ಆಗಿ ಮೈಮೇಲೆ ನೂಲಿನೆಳೆಯೂ ಇಲ್ಲದವರಾಗಿ ದಿಗಂಬರ ಸ್ಥಿತಿಯಲ್ಲಿರುತ್ತೇವೆ! ಅದೇ ಸ್ಥಿತಿಯಲ್ಲಿ ಓಡಾಡುತ್ತಿರುತ್ತೇವೆ, ಮಾತಾಡುತ್ತಿರುತ್ತೇವೆ. ಆ ದೃಶ್ಯ ಕಣ್ಣೆದುರು ಕಾಣುತ್ತಿದ್ದಂತೆಯೆ ಸುಪ್ತ ಮನಸು ಮುಜುಗರ ಲಜ್ಜೆ ಅನುಭವಿಸತೊಡಗುತ್ತದೆ.. ಕನಸಲ್ಲಿ ಮೈಯನ್ನು ಹಿಡಿಯಾಗಿಸುವ ಪ್ರಯತ್ನದಲ್ಲಿ ಮುದ್ದೆಯಾಗಿಸಿಕೊಂಡು ಯಾರೂ ನೋಡದಿರಲಿ ಎಂದು ಹಂಬಲಿಸುತ್ತಾ ಅಡಿಗಿಕೊಳ್ಳಲು ಕತ್ತಲಿನ ಮೂಲೆ ಹುಡುಕತೊಡಗುತ್ತೇವೆ. ಮನಸು ಕನಸಿಗೆ ಜಂಪ್ ಹೊಡೆದು ದೃಶ್ಯವನ್ನು ಸರಿಪಡಿಸಲು ಯತ್ನಿಸುತ್ತಿರುತ್ತದೆ. ಆದರೆ ಕನಸು ಮಣಿಯುವುದಿಲ್ಲ. ಧರಿಸಲು ಹುಡುಕುವ ಬಟ್ಟೆ ಕೈಗೆ ಸಿಗದಂತೆ ಪರದಾಡಿಸುತ್ತಲೇ ಇರುತ್ತದೆ. ಎಷ್ಟೇ ಕಾಣಬಾರದೆಂದು ಅಡಗಿ ಕುಳಿತರೂ ಜನ ಹುಡುಕ್ಕೊಂಡು ಬಂದು ಮಾತಾಡಿಸ್ತಾರೆ as if ನಾವು ಬಟ್ಟೆ ಧರಿಸದೆ ಇದ್ದುದು ಅವರ ಗಮನಕ್ಕೇ ಬಂದಿಲ್ಲವೆಂಬಂತೆ. ನಾವು ಅವರಲ್ಲಿ ಬಟ್ಟೆಗಾಗಿ ಅಂಗಲಾಚುತ್ತೇವೆ. ತರುತ್ತೇನೆಂದು ಹೋದವರು ನಾಪತ್ತೆಯಾಗಿಬಿಡುತ್ತಾರೆ. ಹಳವಂಡ ಶುರುವಾಗುತ್ತದೆ. ಆ ಕಸಿವಿಸಿ ತಾಳಲಾಗದೆ ಎಚ್ಚರವಾಗಿಬಿಡುತ್ತದೆ ಇಲ್ಲವೆ ದೃಶ್ಯ ಬದಲಾಗುತ್ತದೆ. ಲೆಕ್ಕವಿಲ್ಲದಷ್ಟು ಸಲ ಈ ಹಿಂಸೆಯನ್ನ ನಾನು ಅನುಭವಿಸಿದೀನಿ, ಕನಸಿನ ಡೈರೆಕ್ಟರ್ನ ಕಿತಾಪತಿಯಿಂದಾಗಿ.
ಇನ್ನೂ ಕೆಲವೊಮ್ಮೆ ಮಲಗಿದ್ದಾಗಲೇ ಮಗ್ಗಲು ಬದಲಿಸುತ್ತಿದ್ದೇನೆ ಎನಿಸಿ, ಹಾಗೆ ಮಾಡಲು ಹೋದಂತಾಗಿ ಇಲ್ಲವೆ ಮಂಚದ ತುದಿಗೆ ಮಲಗಿದ್ದೇನೆಂಬಂತೆ ಭಾಸವಾಗಿ, ದಬಕ್ ಅಂತ ಬಿದ್ದಂತೆ ಕನಸಾಗಿ, ಟುಣುಕ್ ಅಂತ ಎದೆ ಹಾರಿ ಮೈ ಅದುರಿ ಎಚ್ಚರವಾಗಿಬಿಡುತ್ತೆ.
ಕನಸಲ್ಲಿ ಯಾರಿಗೋ ಏನೋ ಹೇಳಬೇಕಿರುತ್ತೆ ಇಲ್ಲವೆ ಕೊಡಬೇಕಿರುತ್ತೆ, ಮಲಗಿರುತ್ತೇನೆ. ಅಲ್ಲಿರುವವರ ಮಾತುಗಳೆಲ್ಲ ಕೇಳುತ್ತಲೇ ಇರುತ್ತವೆ. ಪ್ರತಿಕ್ರಿಸಲು ನಿದ್ದೆಯಿಂದ ಎಚ್ಚರಗೊಳ್ಳಲು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತೇನೆ ಆದರೆ ಕಣ್ಣು ಬಿಡಲೇ ಆಗದೆ ಒದ್ದಾಡುತ್ತಿರುತ್ತೇನೆ. ಬಹುಶಃ ಅದರಂಥಾ ಹಿಂಸೆ ಮತ್ತೊಂದಿಲ್ಲ. ಬರೀ ಮಾನಸಿಕ ಹಿಂಸೆ ಮಾತ್ರವಲ್ಲ ದೇಹವೂ ಹಿಂಸೆಪಡುತ್ತಿರುವ ಅನುಭವ. ಕನಸಿನ ಈ ಭಯಾನಕ ಹಿಡಿತದಿಂದ ಪಾರಾದ ಮರುಕ್ಷಣ ಎಚ್ಚರಾಗಿ ದೊರೆಯೊ ನಿರಾಳತೆ ಇದೆಯಲ್ಲ ಅದನ್ನ ಅನುಭವಿಸಿದೋರೇ ಬಲ್ಲರು.
ವಿಜ್ಞಾನಿಗಳು/ಸಂಶೋಧಕರು ಕನಸನ್ನು ಬೆನ್ನಟ್ಟಿ, ಅದರ ಸ್ಪಷ್ಟ ಹಿನ್ನೆಲೆಯನ್ನು, ನೆಲೆಯನ್ನು ಕಂಡುಕೊಳ್ಳಬಯಸಿ ಈ ಕಾರಣಕ್ಕಾಗಿ, ಆ ಕಾರಣಕ್ಕಾಗಿಯೇ ಎಂದು ಬರೆದ ಪ್ರಬಂಧಗಳನ್ನು, ಆಗಾಗ ಅಲ್ಲೊಂದು ಇಲ್ಲೊಂದು ಪತ್ರಿಕೆಗಳಲ್ಲಿ ಎಲ್ಲರೂ ಒಮ್ಮೆಯಲ್ಲ ಒಮ್ಮೆ ಓದಿಯೇ ಇರುತ್ತೇವೆ. ಹಗಲಿನಲ್ಲಿಯ ನಮ್ಮ ಆಲೋಚನೆಗಳು, ಅವುಗಳ ಮಂಥನ ಕನಸಾಗಿ ರಾತ್ರಿ ನಿದ್ದೆಯಲ್ಲಿ ಮುಚ್ಚಿದ ಕಣ್ಣ ಪರದೆಯ ಮೇಲೆ ಬರುತ್ತವೆ ಎಂದು ಕೆಲವರೆಂದರೆ, ಇನ್ನೂ ಕೆಲವರು ನಮ್ಮ ಸುಪ್ತಮನದ ಆಸೆಗಳು ಕನಸಾಗಿ ಕಾಡುತ್ತವೆ ಎನ್ನುತ್ತಾರೆ. ಇನ್ನ್ಯಾರೋ, ಇಂಥದೇ ಕಾರಣದ ಹಿನ್ನೆಲೆಯಲ್ಲಿ ಕನಸುಗಳು ಬೀಳುತ್ತವೆ ಅನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಬರೆದುದನ್ನೂ ಎಲ್ಲೋ ಓದಿದ ನೆನಪು ನನಗೆ..
ಪ್ರತೀ ಜೀವಿಯ ಕಣ್ಣರೆಪ್ಪೆಯಡಿಯೇ ವಾಸವಾಗಿರುವ ಕನಸಿನ ಸಾಮಾರ್ಜ್ಯ ವಿಜ್ಞಾನಿಗಳಿಗೆ ನಿಲುಕದ ಲೋಕವಾದ ಪ್ರಕೃತಿ ವಿಸ್ಮಯಗಳಲ್ಲಿ ಒಂದಾಗಿರಬಹುದೇ? ಅಥವಾ ಈ ಕುರಿತು ಅಂದರೆ ಸಂಶೋಧನೆಯ ನಿಶ್ಚಿತ ಫಲಿತಾಂಶ ದೊರೆತಾಗಿದೆ ಎಂದಾದಲ್ಲಿ, ಆ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಸಾಧ್ಯತೆಯೂ ಇದೆ..
ರಾತ್ರಿ ನಮ್ಮ ಬುದ್ದಿಯ ಕೈ ಮೀರಿ ಬೀಳುವ ಕನಸುಗಳು ಎಷ್ಟೋ ಬಾರಿ ನಮ್ಮ ಭವಿಷ್ಯದ ಮುನ್ಸೂಚನೆಯಾಗಿರುತ್ತವೆ.ಇಲ್ಲವೇ ನಮಗೆ ಸಂಬಂಧಪಟ್ಟವರ ಬದುಕಲ್ಲಿ ಆಗಷ್ಟೇ ನಡೆದ, ನಮ್ಮ ಕಿವಿಗೂ ಬಿದ್ದಿರದ ಘಟನೆಯೊಂದು ಸಾಂಕೇತಿಕವಾಗಿಯೋ ಇಲ್ಲವೇ ಸ್ಪಷ್ಟ ರೂಪದಲ್ಲೋ ಕನಸಲ್ಲಿ ಕಾಣಿಸಿಕೊಂಡು, ಎಚ್ಚರವಾಗಿ ಆ ಬಗ್ಗೆ ನಮ್ಮವರಲ್ಲಿ ವಿಚಾರಿಸಿದಾಗ ಹಾಗೊಂದು ಘಟನೆ ನಡೆದಿರುವುದೋ ಇಲ್ಲಾ ಆ ವಿಷಯದ (ಕನಸಲ್ಲಿ ಕಂಡ) ಕುರಿತು ಚರ್ಚೆಯಾಗಿರುವುದೋ ತಿಳಿದು ಬರುವುದೂ ಇದೆ. ಮತ್ತು ನನಗೀ ಅನುಭವ ಸುಮಾರು ಸಲ ಆಗಿದೆ!
ಹಾಗಂತ ಹೇಳಿ ಎಲ್ಲ ಕನಸಗಳೂ ನಿಜವಾಗುತ್ತವೆ ಅಂತೇನು ಇಲ್ಲ. ಕೆಲವು ಕನಸುಗಳು ಬೆಳಗಾಗುವಷ್ಟರಲ್ಲಿ ಮರೆತುಹೋಗಿರುತ್ತವೆ. ಮತ್ತೆ ಕೆಲವು ಸುಖಾಸುಮ್ಮನೆ ನಮ್ಮನ್ನು ಬೆಚ್ಚಿಬೀಳಿಸಿ, ಮುಂದೆ ಹಗಲಲ್ಲೂ ಕೆಲವು ದಿನ ಕಾಡಿ, ಮನಸಿಂದ ಮರೆಯಾದರೆ, ಇನ್ನೂ ಕೆಲವು ನಿದ್ದೆಯಲ್ಲಿ ಬೆಚ್ಚನೆ ಭಾವವೊದಗಿಸಿ, ಮುದ ನೀಡಿ, ಮರುದಿನವೂ ಆ ಲಹರಿಯಲ್ಲೇ ಇರುವಂತೆ ಮಾಡುತ್ತವೆ. ಅಂಥದ್ದೊಂದು ಕನಸು ನಿನ್ನೆ ರಾತ್ರಿ ನನಗೆ ಬಿತ್ತು. :)
ಅವನೊಬ್ಬ ಚೆಲುವ. ಅವನನ್ನು ಕಂಡರೆ ಎಲ್ಲ ಹೆಣ್ಣುಮಕ್ಕಳಿಗೂ ಇಷ್ಟವಂತೆ. ಕೆಲವರು ಅವನಿಗೆ ಹತ್ತಿರವಾದವರೂ ಇದ್ದಾರೆನ್ನುವುದು ಕನಸಲ್ಲಿ ಕಾಣುತ್ತಿದೆ. ಅವನೂ ಅವರೊಂದಿಗೆ ಸರಸವಾಗಿಯೇ ಇದ್ದಾನೆ. ಆ ಚಲುವನಿಗೆ ನನ್ನಲ್ಲಿ ಆಕರ್ಷಣೆ. ಅದು ನನ್ನ ಅರಿವಿಗೆ ಬರುತ್ತಲಿದೆ. ಹಾಗೆ ಅವನೊಳಗಿನ ಆ ಭಾವ ನನಗೂ ಇಷ್ಟವೆಂಬಂತೆ, ಅವನ ಪ್ರತಿ ನನ್ನ ಮುಖದಲ್ಲಿ ಒಂದು ಸಮ್ಮತಿಯ ನಗೆಯಿದೆ. ಆದರೆ ಪ್ರಕಟವಾಗಿ ಮುಗುಮ್ಮಾಗಿದೀನಿ. ಅವನು ನನ್ನನ್ನು ಒಲಿಸಿಕೊಳ್ಳಲು ನನ್ನ ಹಿಂದೆ ಬಿದ್ದಿದ್ದಾನೆ. ನನಗದು ಅರಿವಿಗೆ ಬಂದರೂ ತಿಳಿಯದವಳಂತೆ ಓಡಾಡುತ್ತಿದ್ದೇನೆ. ನಾನು ಹೋದಲೆಲ್ಲ ಅವನು ಅದ್ಯಾವುದೋ ಮಾಯದಲ್ಲಿ, ಯಾವುದೋ ನೆಪದೊಂದಿಗೆ ಹಾಜರ್. ಅದೆಲ್ಲೋ ಯಾರದೋ ಮನೆಗೆ ಹೋದರೆ ಅಲ್ಲಿ, ನಮ್ಮನೆಯ (ಹಳ್ಳಿಮನೆಯಂತೆ ಅದು) ಪಡಸಾಲೆಯಲ್ಲಿ, ಕಟ್ಟೆಯ ಮೇಲೆ ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಂಡು ಅಲ್ಲಿ ತಾನೇನೋ ಕೆಲಸ ಮಾಡುತ್ತಿರುವವನಂತೆ ಓಡಾಡುತ್ತ ಎದುರಾಗಿ, ಒಂದು ಚೆಂದನೆ ಬೆಚ್ಚನೆಯ ನಗೆ ನಕ್ಕು, ನನ್ನೆದೆ ಬಡಿತ ಏರಿಸಿ ಅಲ್ಲಿಂದ ಹೊರಟುಬಿಡುತ್ತಾನೆ.
ಒಮ್ಮೆ ಕೆಲಸವೊಂದರ ನಿಮಿತ್ತ ನಾನು ನಡೆದು ಹೋಗುತ್ತಿರುವಾಗ, ನಡುದಾರಿಯಲ್ಲಿ ಸಿಗುತ್ತಾನೆ. ನನ್ನೊಂದಿಗೆ ಮಾತಾಡುತ್ತಾ ಜೊತೆಗೆ ಹೆಜ್ಜೆ ಹಾಕಿದವನೊಂದಿಗೆ ಅದ್ಯಾರ ಕುರಿತೋ ಮಾತಾಡುತ್ತಿದ್ದೇನೆ ನಾನು. ನಾವು ಒಂದಿಷ್ಟು ದೂರ ನಡೆಯುತ್ತಲೂ ಅವನ ಗೆಳತಿಯರಲ್ಲಿ ಒಬ್ಬಳು, ಎದುರಿನ ಅರ್ಧಗೋಡೆಯ ಮೇಲೆ ಕುಳಿತವಳು, ಅವನನ್ನು ಕಾಣುತ್ತಲೇ ಹೇಯ್ ಅನ್ನುತ್ತಾಳೆ. ಅವನು ನನಗೆ ಬೈ ಹೇಳಿ ಲಗುಬಗೆಯಿಂದ ಅವಳತ್ತ ನಡೆಯುತ್ತಾನೆ. ಆಕೆ ಏನ್ ಮಾತಾಡ್ತಿದ್ದ್ರಿ ನೀವಿಬ್ರೂ? ಅನ್ನುತ್ತಾಳೆ. ಇವನು ನಾವು ಮಾತಾಡಿದ್ದನ್ನು ಹೇಳದೆ, ಇನ್ನೇನೊ ಬೇರೆ ಬೇರೆಯದನ್ನೆ ಕತೆಕಟ್ಟಿ ಹೇಳುತ್ತಿರುವುದು ಕಿವಿಗೆ ಬೀಳುತ್ತದೆ. ಕಳ್ಳ ಎಂದು ಮುಗುಳ್ನಗುತ್ತಾ ಮುಂದೆ ಸಾಗುತ್ತೇನೆ ನಾನು.
ಮುಂದೆ ನಡೆದ ನಾನು ಅದೊಂದು ಅಂಗಳದಲ್ಲಿದ್ದೇನೆ. ಗುಡಿಯ ಆವರಣದೊಳಗೊಂದು ಪ್ರಾಂಗಣವಿರುತ್ತದಲ್ಲ ಆ ಥರದ್ದು. ಆದರೆ ಅಲ್ಲಿ ಗುಡಿ ಇಲ್ಲ. ದೊಡ್ದ ಪ್ರಾಂಗಣ ಮಾತ್ರವಿದೆ. ಅಲ್ಲಿ ಒಂದು ಎಡ ಮೂಲೆಯಿಂದ ಆರಂಭಿಸಿ ಒಂದಿಷ್ಟು ಪುಟ್ಟ ಪುಟ್ಟ ಹಣತೆಯಲ್ಲಿ ದೀಪಗಳನ್ನಂಟಿಸುವಲ್ಲಿ ಮಗ್ನಳಾಗಿ ಹಿಂದೆ ಹಿಂದೆ ಸರಿಯುತ್ತಿದ್ದೇನೆ. ಈಗಿನ್ನೂ ಪ್ರಾರಂಭ. ಇನ್ನೂ ಅದೆಷ್ಟೋ ದೀಪಗಳನ್ನಂಟಿಸಬೇಕಿದೆ. ತುಂಬಾ ಹೊತ್ತಿನ ಕೆಲಸವಿದು, ಬೇಗ ಮುಗಿಯುವುದಿಲ್ಲ ಅಂದುಕೊಳ್ಳುತ್ತಿದ್ದೇನೆ. ನಾನಿನ್ನೂ ಒಂದಿಷ್ಟು ದೀಪಗಳನ್ನು ಬೆಳಗಿಸಿದ್ದೆನ್ನಷ್ಟೇ, ನನ್ನ ಹಿಂದೆಲ್ಲ ಬೆಳಕು ಹರಡಿಕೊಂಡಂತಾಗಿ ತಿರುಗಿ ನೋಡಿದರೆ, ಅವನು ಅದ್ಯಾವ ಮಾಯೆಯಿಂದಲೋ ನನ್ನ ಹಿಂದೆಯೇ ಬಂದು ಅದಾಗಲೇ ಆ ಪ್ರಾಂಗಣದ ತುಂಬಾ ದೀಪಗಳನ್ನು ಹಚ್ಚಿಟ್ಟಿದ್ದಾನೆ. ನನ್ನ ಸುತ್ತಲೂ ದೀಪಾವಳಿ! ಅವನು ಈ ದೀಪಗಳೆನ್ನೆಲ್ಲ ಹಚ್ಚಿದ್ದು ನನಗಾಗಿ! ನನ್ನೊಳಗಿನ ಸಂತಸ ಮತ್ತು ಅವನೆಡೆಗಿನ ಪ್ರೀತಿ ಆ ದೀಪಗಳ ಬೆಳಕಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಅವನಿಗೆ. ಖುಷಿಯಿಂದ ನಗುತ್ತಾನೆ ಅವನು. ಲಜ್ಜೆಯಿಂದ ನನ್ನ ಕಣ್ರೆಪ್ಪೆಗಳು ಅಗಲಿರಲಾರೆವು ಎಂಬಂತೆ ಬೆಸೆದುಕೊಳ್ಳುತ್ತವೆ. ಹೊಂಬಿಸಿಲಿಗಿಂತಲೂ ಹದವಾದ ಆ ಪ್ರಭಾವಳಿಯ ನಡುವೆ ನಾನು ಮತ್ತು ಅವನು! ಮತ್ತೆ ದೀಪಗಳನ್ನಂಟಿಸಲು ತೊಡಗುತ್ತೇವೆ ಇಬ್ಬರೂ. ಬೆಳಗಾದ ಸೂಚನೆ ಎಂಬಂತೆ ನನಗೆ ಎಚ್ಚರವಾಯ್ತು.
- ಜಯಲಕ್ಷ್ಮಿ ಪಾಟೀಲ್