Wednesday, June 30, 2010

ಅವಳೊಬ್ಬಳಿದ್ದಳು...

ಅವಳೊಬ್ಬಳಿದ್ದಳು, ತನ್ನವನ ದೃಷ್ಟಿಯನ್ನು ಸಂಧಿಸಲು ಹರ ಸಾಹಸ ಮಾಡಿ ಸೋಲುತ್ತಿದ್ದ ಹುಡುಗಿ. ಅವನಿದಿರು ಅವಳ ರೆಪ್ಪೆಗಳು ಯಾವ ಪರಿಯಾಗಿ ಲಜ್ಜೆಯಿಂದ ಭಾರಗೊಳ್ಳುತಿದ್ದವೆಂದರೆ ಆ ಭಾರಕ್ಕೆ ಅವಳ ಶಿರ ಬಾಗುತ್ತಿತ್ತು !

 ಇನ್ನೊಬ್ಬಳು... ತನ್ನವನ ಕಣ್ಣುಗಳಲ್ಲಿ ತಮ್ಮ ಪ್ರೀತಿಯ ಪಳೆಯುಳಿಕೆಗಳನ್ನು ಹುಡುಕಿ ಸೋತಾಕೆಯ ಶಿರ ಬಾಗುವುದು ಬಿಡಿ, ಕಣ್ರೆಪ್ಪೆ ಒಂದಾಗುವುದು ಸಹ  ಮರೆತಂತಿದ್ದವು..

ಮೊತ್ತಬ್ಬಳಿದ್ದಳು, ತನ್ನವನು ಮತ್ತೊಬ್ಬನಾಗಿ  ಮಾತಾಡುತ್ತಾ ಕುಳಿತ ಸಮಯ ಕಣ್ಣಲ್ಲಿ ನಿರ್ಲಿಪ್ತತೆಯ ನಟಿಸಿ, ಮನದಲ್ಲಿ ರೋಧಿಸುತ್ತ ತುಟಿಯಲ್ಲಿ ನಗುವರಳಿಸಿ ಕುಳಿತಾಕೆ...

ಮಗದೊಬ್ಬಳು... `ಹೋಗುತ್ತೇನೆ' ಎಂದವನನ್ನು ತಡೆಯದೆ `ಸರಿ' ಎಂದು ಕಳಿಸಿ ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು,  ಕಣ್ಣಾಲಿಯಲಿ ತೇಲಿಸುತ್ತ  ಪ್ರೀತಿಯ ಶವ...