Sunday, August 18, 2013

ಮುನಿಯದಿರು ತಾಯೇ ಕೈ ಮುಗಿವೆ


ಕಾಯ್ವ ಕೈಯೇ ಕೊಲುವುದಾದರೆ
ಮೊರೆಯಿಡುವುದಿನ್ನಾರಿಗೆ ತಾಯೇ
ಭುವಿ ಅಣುಅಣುವನೂ ಪೊರೆವ ಜೀವಜಲವೇ
ನೀ ಹೀಗೆ ಸ್ಪೋಟಿಸಿದ್ದು ಸರಿಯೇ?!
ಸಿಟ್ಟು ತಾಯಿ ಗಂಗೆ ನಿನ್ನಮೇಲೆನೆಗೆ
ಗೊತ್ತು ಬಿಡೆ ನಗಬೇಡ
ನಿನ್ನ ಸಿಟ್ಟಿನೆದುರು ನನ್ನದು
ಸೊಟ್ಟ ಸೌಟಿನಷ್ಟೆಂದು ಬಲ್ಲೆ ನಾ
ನನ್ನ ಸಿಟ್ಟು ನನಗಷ್ಟೇ ಕುತ್ತು
ನಿನ್ನ ಸಿಟ್ಟಿಗೆ ಜಗ ಒಂದೇ ತುತ್ತು!

ಕಲ್ಲು ಕಾಂಕ್ರೀಟಿನ ಗಟ್ಟಿ ಬಂಗಲೆಗಳನೂ
ಕಾಗದದ ದೋಣಿಯಂತೆ ತೇಲಿಸಿ
ಮಕ್ಕಳಾಟವಾದಿದೆಯಲ್ಲ ಆಗ
ನಿಷ್ಪಾಪಿ ಪ್ರಾಣಿಗಳೂ, ಗಿಡಮರಗಳೂ
ತಡಬಡಿಸಿ ನಿನ್ನ ರಭಸದ ಹರಿಗೋಲಾದವು
ಅಪ್ಪ ಅಮ್ಮಂದಿರ ಜೊತೆಗೆ
ಕೂಸುಕಂದಮ್ಮಗಳೂ ತೇಲಿದವು
ಕಾಣಲಿಲ್ಲವೇನೇ ಗಂಗಾಮಾಯಿ!!?

ಶಿಕ್ಷಿಸುವುದು ಎಂದರೆ ಹೀಗೇನೇ ನನ್ನವ್ವ?!
ನಿನ್ನನ್ನೂ ಕಟ್ಟಿಹಾಕಬಲ್ಲೆವು
ನಾವು ಬಯಸಿದಾಗಲೆಲ್ಲ ನೀ ದೊರೆಯದಿರೆ
ಬಗೆಬಗೆದು ಭಗೀರಥನಂತೆ
ನಿನ್ನ ಹುಡುಕಿ ತರಬಲ್ಲೆವು
ನಮ್ಮ ಅನುಕೂಲಕ್ಕೆ ಸ್ವಚ್ಛತೆಗೆ ಮುಕ್ತಿಗೆ
ನಿನ್ನನ್ನು ಕಕ್ಕಸದ ಕೋಣೆಯಾಗಿಸಬಲ್ಲೆವು
ಎಂಬ ನಮ್ಮ ಅಹಮ್ಮಿಗೆ
ನೀ ಕೊಟ್ಟ ಪೆಟ್ಟೇ ಇದು?!

ಮುನಿಯದಿರು ತಾಯೇ ಕೈ ಮುಗಿವೆ
ಕಣ್ಣಗಲಿಸಿ ಹೆದರಿಸು
ಇದ್ದಲ್ಲಿಯೇ ಅಬ್ಬರಿಸು
ಸಣ್ಣಪುಟ್ಟ ಶಿಕ್ಷೆ ಕೊಡು ಸಾಕು
ಈ ಪುಂಡ ಮಕ್ಕಳನ್ನು ಅಂಕೆಯಲ್ಲಿಡಲು
ಹೀಗೆ ಮೇಲೆ ಕೆಳಗೆ ಏಕವಾಗಿ ಸುರಿಹರಿದು
ಮಕ್ಕಳನೇ ಕಾಗದದ ದೋಣಿಯಾಗಿಸಿ
ಆಟವಾಡುವುದು ತರವೇ….?
ಮುನಿಯದಿರು ತಾಯೇ ಕೈ ಮುಗಿವೆ.
                                                -ಜಯಲಕ್ಷ್ಮೀ ಪಾಟೀಲ್.
  
(4th August 2013ರಂದು ಸಾಹಿತಿ ಮತ್ತು ಕಲಾವಿದರ ವೇದಿಕೆ ಆಯೋಜಿಸಿದ್ದ ‘ಪ್ರಕೃತಿ ವರವೋ ಅಥವಾ ಶಾಪವೋ?’ ಕಾರ್ಯಕ್ರಮದಲ್ಲಿ ಓದಿದ ಕವನವಿದು.)