Monday, July 6, 2015

ಕೆ.ಎಸ್.ನರಸಿಂಹಸ್ವಾಮಿಯವರ ಕವನ ಮಾತು ಬೇಸರವಾಗಿದೆ (ಉಂಗುರ ಕವನ ಸಂಕಲನದಿಂದ)




ಸಂವಹನಕ್ಕೆಂದು ಮಾತು ಕಲಿತ ಮಾನವ. ಮಾತು ಮಧುರವೆನಿಸಿತು, ಮಾತು ಕೃತಿಗೆ ಅನುಕೂಲವಾಯ್ತು, ಮಾತು ಅಕ್ಷರಕ್ಕೆ ಮೂಲವಾಯ್ತು, ಮಾತು ಹಾಡಾಯಿತು, ಮಾತು ಆಯಾ ನಾಡಿನ ನಾಡಿಯಾಯ್ತು!
ಮುಂದುವರೆದು ಮಾತು ಹೊಟ್ಟೆಯ ಪಾಡಾಯ್ತು, ಮಾತು ವಾದವಾಯ್ತು, ವಾಗ್ವಾದವಾಯ್ತು, ವಿತಂಡವಾದವಾಯ್ತು, ಕಂಡಕಂಡವರನ್ನು ಕಾಡಿಗೆ ಅಟ್ಟುವ ಖಡ್ಗವಾಯ್ತು, ಅಬ್ಬರವಾಯ್ತು, ಗೊಬ್ಬರವಾಯ್ತು... ಮಾತಿಗೆ ಹಂಬಲಿಸಿದ ಮಾನವ ತಿರುಗಿ ಮೌನವನು ಹಂಬಲಿಸುವಂತಾಯ್ತು!
ಮಾತಿನ ಟೊಳ್ಳುತನದ ಕುರಿತು, ಮೌನದ ಘನತೆಯ ಕುರಿತು ಮಾತಿನಲ್ಲೇ ಹೇಳಬೇಕಾದ ಆಭಾಸದ ಘಳಿಗೆ ಇದು. ಕೆ.ಎಸ್.ಎನ್ ಅವರಿಗೇ ಇದು ಅನಿವಾರ್ಯವಾದ ಹೊತ್ತಿನಲ್ಲಿ ನಾ ಹೇಗೆ ಅದಕೆ ಹೊರಗಾಗಬಲ್ಲೆ ಎನ್ನುವ ವಾಸ್ತವ ಎದುರಿಗಿದೆ. ೧೯೪೯ರಲ್ಲಿ ಬಿಡುಗಡೆಯಾದ ಕೆ ಎಸ್ ನರಸಿಂಹಸ್ವಾಮಿಯವರ ಕವನ ಸಂಕಲನ ‘ಉಂಗುರ’ದಲ್ಲಿನ ‘ಮಾತು ಬೇಸರವಾಗಿದೆ’ ಎನ್ನುವ ಈ ಕವನ ಮೌನವನ್ನು ಹಂಬಲಿಸುತ್ತದೆ. ಆ ಮೂಲಕ ಜಗತ್ತಿನ ಸೋಗಲಾಡಿತನವನ್ನು, ಶಬ್ದ ಡಾಂಭಿಕತೆಯನ್ನು, ಶಬ್ದ ಮಾಲಿನ್ಯವನ್ನು ಧಿಕ್ಕರಿಸುತ್ತದೆ!
ಈ ಕವಿತೆ ತಾನಾಗಿಯೇ ಎಲ್ಲವನ್ನೂ ವಿಶದಪಡಿಸುವುದರಿಂದ ಇಲ್ಲಿ ಯಾವುದನ್ನೇ ಆಗಲಿ ಹೆಚ್ಚು ಬಿಡಿಸಿ ಹೇಳುವ ಅವಶ್ಯಕತೆ ಕಾಣುವುದಿಲ್ಲ. ಆದರೂ ಕವಿತೆ ಎನ್ನುವುದು ದಕ್ಕಿದವರಿಗೆ ದಕ್ಕಿದಷ್ಟು,
ಮೊದಲನೆಯ ಸಾಲಿನಲ್ಲೇ ‘ಸಾಕು, ಬಿಡಿ, ಇದನಿಂದಿಲ್ಲಿಗೆ ಮಾತು ಬೇಸರವಾಗಿದೆ’ ಎನ್ನುವಲ್ಲಿ  ಅದೆಷ್ಟು ಅಸಹನೆ ಇದೆಯಂದರೆ, ಅದು ಬರವಣಿಗೆಯಲ್ಲಿನ ಟೊಳ್ಳುತನದ ಬಗ್ಗೆ ಹೇಳುವಾಗ (ಗೋರಿಯಾಗಿವೆ ಗದ್ಯಪದ್ಯಗಳೆಲ್ಲ ಬಳಲುವ ಮಾತಿಗೆ), ತಮ್ಮ ಸ್ವಾರ್ಥಕ್ಕೆ ದೊಡ್ದವರ ಹೆಸರುಗಳನು ಬಳಸಿ ಘೋಷಣೆ ಕೂಗುವ ಮಂದಿಯ ಕಪಟತನದ ಬಗ್ಗೆ ಹೇಳುವಾಗ (ಕದ್ದು ಬಾಳಿದರೇನು? ಗೆದ್ದೇ ಹೊದ್ದು ನಡೆಯುವ ಹಗರಣ! / ಬುದ್ದಗಾಂಧಿಗಳಂಕಿತ ಬರಿ ಮೆರವಣಿಗೆ-ನಿಷ್ಕಾರಣ!), ತನಗೆಲ್ಲವೂ ಗೊತ್ತು, ತಾನೆಲ್ಲವನ್ನೂ ಬಲ್ಲೆ ಎಂಬ ಡಾಂಭಿಕತನದ ಕುರಿತು ಹೇಳುವಾಗ (ಸೇತು ಮೊದಲಾ ಹಿಮಗಿರಿಯೇ ಕೊನೆ ಮಾತುಗಾರರ ಆವುಟ), ಉಪಕರಿಸಿದ್ದು ಉಗುರಗಲವಾದರೂ ಅದರ ಕುರಿತು ಊರಗಲ ಮಾತನಾಡುವ ಮೂಲಕ ಒಣ ಪ್ರತಿಷ್ಠೆಯನ್ನು ಮೆರೆವ ಜನರ ಬಗ್ಗೆ ಹೇಳುವಾಗ (ಕ್ಷಾಮಜೀವಿಯ ಬಾಯ ಬಿಲ್ಲಿನ ಬಾಣತಂತ್ರಗಳಿಲ್ಲಿವೆ), ಈ ಸಾಲು ಹಿನ್ನೆಲೆಯಲ್ಲಿ ಅನುರುಣಿಸುತ್ತಲೇ ಇರುತ್ತದೆ.
ಈ ಜಗದಲ್ಲಿ ಎಲ್ಲವೂ ಅಬ್ಬರವೇ! ಎದೆಯಲ್ಲಿ ಹುಟ್ಟಿ, ಮಿಡಿತವಾಗಿ, ತುಡಿತವಾಗಿ ನರನಾಡಿಗಳಲ್ಲಿ ಜುಳುಜುಳು ಹರಿದು, ಕಣ್ಣಿನನುಸಂಧಾನದಲ್ಲಿ, ಮೆಲು ಮಾತುಗಳಲ್ಲಿ, ಹಿತಸ್ಪರ್ಶದಲ್ಲಿ ಧನ್ಯತೆಯ ಪರಾಕಾಷ್ಟೆ ತಲುಪಬೇಕಾದ ಹೂವಿನಂಥಾ ನಾಜೂಕು ಒಲವು, ಮಡುಗಟ್ಟಿದ ನೋವು ಎಲ್ಲವೂ ಮಾತಿನ ಅಬ್ಬರಕೆ ಸಿಕ್ಕು ತಮ್ಮ ಸ್ನಿಗ್ಧತೆ, ಘನತೆಯನ್ನು ಕಳೆದುಕೊಳ್ಳುತ್ತಿರುವ ನೋವು ಕವಿಯನ್ನು ಕಾಡುತ್ತದೆ. ಹೀಗಾಗಿ ಒಲವು ನೋವುಗಳೆರೆಡೂ ವ್ಯಕ್ತವಾಗುವುದಕ್ಕಿಂತ ಮೌನವೇ ಲೇಸೆಂದು ಹೇಳುತ್ತಿವೆ ಎನ್ನುವಲ್ಲಿ ಮೌನ ಬಯಸುವ ಕವಿ ಇಲ್ಲಿ ಮೌನಕ್ಕೆ ವಿಶಾದದ ಛಾಯೆ ಆವರಿಸಿದ್ದನ್ನು ಸೂಚಿಸುತ್ತಾರೆ.
ಮಾತಿನ ಗದ್ದಲಕ್ಕೆ ಮೌನ ನಾಡು ತೊರೆದು ಕಾಡಿನಲ್ಲಿ ನೆಲೆಸಿದೆ ಎನ್ನುವುದನ್ನು ಅದೆಷ್ಟು ಚಂದದಲ್ಲಿ ಹೇಳಿದ್ದಾರೆಂದರೆ ಮನದಲ್ಲಿ ಒಂದು ಆರ್ದ್ರ ಭಾವ ಮೂಡಿ, ಋಷಿಮುನಿಗಳ ಮಂತ್ರಘೋಷಗಳ ಜೊತೆಗಿನ ರಮ್ಯ ಮೌನ ಮತ್ತು ನಂತರದ ದೀರ್ಘ ತಪಸ್ಸಿನ ದಿವ್ಯ ಮೌನ ಎರಡೂ ಓದಿನ ಮುಖಾಂತರ ಅನುಭೂತಿಗೆ ಎಟಕುತ್ತವೆ! ಈ ಅನುಭೂತಿಯ ಅಸಲು ಲಭ್ಯತೆ ವನ್ಯ ಮೃಗಗಳಿಗೆ ಮತ್ತು ಅಲ್ಲಿಯ ಗಿಡ, ಮರ ಬಳ್ಳಿಗಳಿಗೆ! ನಾವು ಮತ್ತದೇ ಮಾತಿನರಮನೆಯ ಗೋಡೆಗಳಿಗೆ ಡಿಕ್ಕಿ ಹೊಡೆಯುತ್ತಾ, ಅದರ ಸದ್ದಿನ ಅಬ್ಬರಕ್ಕೆ ಬೆನ್ನು ತಟ್ಟಿಕೊಳ್ಳುತ್ತಾ, ಕಿವಿ ಮುಚ್ಚಿಕೊಳ್ಳುತ್ತಾ ನಾಡಿನ ನಾಗರಿಕರೆಂಬ ಹಮ್ಮಿನೊಡನೆಯೇ, ಹಳ್ಳಿಗರೆಂಬ ಹುಂಬತನದೊಡನೆಯೇ ಮೌನದ ತಾಣಕ್ಕಾಗಿ, ಅಲ್ಲಿ ಕಾಣಬಹುದಾದ ದೇವರೆಂಬ ಅದ್ಭುತ ಜ್ಞಾನ ಮತ್ತು ಧನ್ಯತೆಯ ಪ್ರತ್ಯಕ್ಷತೆಗಾಗಿ ಹಂಬಲಿಸುತ್ತಾ ಬದುಕುತ್ತೇವೆ.
‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ಮೌನದ ಆಸ್ವಾದನೆಯೂ ಸಹ! ಮಾತಿನ ಮಿತಿ ಅರಿಯದ ನಾವು ಮೌನದ ಸವಿಯನ್ನು ಸವಿಯುವುದನ್ನು ಮರೆತಂತಾಗಿದ್ದೇವೆ. ಅಥವಾ ಮೌನದ ದಿವ್ಯತೆ ಎಲ್ಲರಿಗೂ ದಕ್ಕುವಂಥದ್ದಲ್ಲವೇನೋ... ಅಥವಾ ಮಾತು ತುಂಬಾ ಸಸ್ತಾದಲ್ಲಿ ದೊರೆಯುವಂತೆ ಮೌನ ದೊರೆಯದು ಅನ್ನುವ ಕಾರಣಕ್ಕೂ ಇರಬಹುದು ಮಾತು ಹೆಚ್ಚು ಹೆಚ್ಚು ಬಳಕೆಯಾಗಿ ಸವಕಲಾಗಿರುವುದು! ಬಡವ ಹಸಿವಿನಿಂದ ಬಳಲಿ ಬಸವಳಿದ ಹೊತ್ತಲ್ಲಿ, ಬಡತನವನ್ನು ಮಾತಿನಲ್ಲಿ ವೈಭವೀಕರಿಸುವ ಮನುಷ್ಯನ ಪೊಳ್ಳುತನ ಹಸಿವನ್ನು ನೀಗಿಸಲಾರದು! ಇನ್ನೊಬ್ಬರನ್ನು ಮೋಸಗೊಳಿಸಲು, ಇನ್ನೊಬ್ಬರೆದುರಿಗೆ ಕೊಚ್ಚಿಕೊಳ್ಳಲು, ಇನ್ನೊಬ್ಬರ ಬದುಕ ಆಡಿಕೊಳ್ಳಲು, ಬಳಕೆಯಾಗುವ ಮಾತೆಂಬ ಈ ಸಸ್ತಾ ಸಾಮಾನು, ಮನಗಳ, ಮನೆ ಮನೆಗಳ, ದೇಶ ದೇಶಗಳ ನೆಮ್ಮದಿಯನ್ನೇ ಹಾಳು ಮಾಡಿಬಿಡಬಲ್ಲಂಥ ಅಕ್ಷರಗಳಲ್ಲೂ ಸುಲಭ ಲಭ್ಯ ನೀಚ ಅಸ್ತ್ರ! ಬಹುಶಃ ‘ಅರಿವೇ ಅರಿ’ ಎನ್ನುವ ಘನ ಅರ್ಥದ ನುಡಿಗಟ್ಟು ಸಸ್ತಾ ಆಗಿದ್ದೂ ಮನುಷ್ಯನಿಗೆ ಮಾತಿನ ಚಟದ ವಿಷಯಕ್ಕೆ ಮಾತ್ರವೇ ಅನಿಸುತ್ತದೆ!
‘ಮಾತು ಬಲ್ಲವ’ ಎನ್ನುವ ಮಾತಿಗೆ ಅದೆಷ್ಟೊಂದು ತೂಕ!! ಹಾಗೆ ಮಾತು ಬಲ್ಲವರ ಮಾತುಗಳು, ಕೃತಿಯ ಹಿನ್ನೆಲೆಯಲ್ಲಿರುತ್ತವೆ, ಕೃತಿಯಾಗುತ್ತವೆ, ಕರ್ತೃವಾಗುತ್ತವೆ! ನಮ್ಮ ನಾಡಿನವರದೇ ಉದಾಹರಣೆಯಾಗಿ ಬುದ್ದ ಬಸವ ಗಾಂಧಿಜೀ ಇದ್ದಾರೆ! ನುಡಿದಂತೆ ನಡೆದವರು, ನುಡಿದು ಪ್ರತ್ಯೇಕ ಮುತ್ತಿನಹಾರವಾದವರು. ಈ ಮುತ್ತಿನಹಾರವಾಗಲು ಸೂತ್ರವಾದುದು ಮೌನ! ಗಾಂಧೀಜಿಯವರಿಗೆ ಬುದ್ದನಿಗೆ ಮಾತಿಗಿರುವ ಮೌಲ್ಯ ಗೊತ್ತಿತ್ತು. ಮೌನದ ಮಹತ್ವ ಗೊತ್ತಿತ್ತು. ಹೀಗಾಗಿಯೇ ಅವರುಗಳು ಮೌನದ ಆಶ್ರಯದಲ್ಲಿ ಮಾತನ್ನು ತೂಕದಿಂದ ಬಳಿಸಿದವರು. ಸಮಾಜದ ಸುಧಾರಣೆಗೆ ಕಾರಣರಾದರು. ಅರಿತು ನುಡಿವ, ನುಡಿದಂತೆ ನಡೆವ ಗುಣ ಪರ್ವತದೆತ್ತರಕ್ಕೇರಿಸುತ್ತದೆ ವ್ಯಕ್ತಿತ್ವವನ್ನು. ಅದಕ್ಕೆಂದೇ ಕೆ.ಎಸ್.ಎನ್ ಅವರು ಈ ಕವನದಲ್ಲಿ ಹೇಳಿರುವುದು, ‘ಬಾನಗಲ ಕಣ್ದೆರೆದು ನೋಡಿರಿ, ಇದ್ದನಿಲ್ಲಿ ಮಹಾತ್ಮನು/ಮೌನ ಪರ್ವತ ಮುಡಿಯೊ ತಪ್ಪಲೊ ಕೃತಿಯ ನಂದನವನಗಳು!’
ಕೆ.ಎಸ್.ನರಸಿಂಹಸ್ವಾಮಿಗಳ ಈ ಕವನದಲ್ಲೂ ಮಲ್ಲಿಗೆ ಘಮಘಮಿಸಿದೆ ಮೌನದ ಘಮಲಾಗಿ. ಕವಿ ಮನಸಿನ ರಮ್ಯತೆಯ ಕುರುಹಾಗಿ. ಮೌನವನ್ನ ಕವಿ ಅದೆಷ್ಟು ಚಂದದಿಂದ ಉದಾಹರಿಸುತ್ತಾರೆಂದರೆ, ಪಾದ ಪೂರ್ತಿ ಒತ್ತಿ ಊರಿ ನಡೆದರೆ ಎಲ್ಲಿ ನಿಶ್ಯಬ್ದಕ್ಕೆ ಭಂಗ ಬರುವುದೋ ಎಂಬ ಎಚ್ಚರಿಕೆಯಿಂದ ಹಿಂಬಡ ಎತ್ತಿ, ಪಾದದ ಮುಂಭಾಗವನ್ನಾಧರಿಸಿ ಮೆಲ್ಲ ಮೆಲ್ಲ ನಡೆವಾಗ ಮೂಡುವ ಚಂದ್ರನಾಕಾರದ ಗುರುತಿನಂತೆ, ಅಂದರೆ ಚಂದಿರನ ಇರುವಿನ ಮೂಲಕ ಅವನು ಹೊಮ್ಮಿಸುವ ಬೆಳಕ ಹಿತದಂತೆ ಮೌನವಿದ್ದು, ಅದಕ್ಕೆ ಸಾಥಿಯಾಗಿ ಕೇಳಿಯೂ ಕೇಳಿಸದಂಥ ಗಾಳಿಯ ಗೆಜ್ಜೆಯಂಥ ಮಧುರ ಸದ್ದಿನಂತೆ ಮಾತು ಭಾಸವಾದಾಗ ಮನದಲ್ಲಿ ಮೂಡುವ ಭಾವ, ಸದ್ದು ಮಾಡದೆ ಪರಿಮಳ ಹರಡುವ ಮಲ್ಲಿಗೆಯ ಘಮ ತಿತ್ತಿ ತುಂಬಿ ಧನ್ಯತೆಯನ್ನನುಭವಿಸಿದಂತೆ, ಮಾತು ಮೌನಗಳೆರೆಡೂ ಮಧುರ ಮಧುರ.
ಸದ್ದೇ ಮಾಡದೆ, ಪ್ರಕಟಗೊಳ್ಳದೆ, ನೆಲ ಮುಗಿಲು ಏಕವಾಗಿ ತನ್ನಿರುವನ್ನು ಎಲ್ಲೆಲ್ಲೂ ಕಾಣಿಸುತ್ತಾ, ನಮ್ಮನ್ನೆಲ್ಲ ಕಾಯುವ ಪರಮಾತ್ಮನೆಂಬ ಅಗೋಚರ ಶಕ್ತಿಯ ಸಶಕ್ತವಾದ ಮೌನ ಭಾಷೆಯ ಮುಂದೆ ನಮ್ಮ ಬಡಬಡ ಬಡಬಡಿಸುವ ಮಾತುಗಳು ತೊದಲುನುಡಿಗಳಾಗಿ ಹಾಸ್ಯಾಸ್ಪದಕ್ಕೊಳಗಾಗುತ್ತವೆ ಎನ್ನುತ್ತಾರೆ ಕೆ.ಎಸ್.ಎನ್! ನಮ್ಮನ್ನು ಇದೆಲ್ಲದರಿಂದ ತಪ್ಪಿಸಿ ಗುರುವಾಗಿ ಕಾಯಬೇಕಾದುದೂ ಆ ಪರಮಾತ್ಮನೆಂಬ ಮಹಾತ್ಮನೇ! ಅವ ಕಾಯಬೇಕೆಂದರೆ ಮೊದಲು ಈ ಕಾಯದೊಳಗಿನ ಮನಸು ಮಾಗಬೇಕು, ನಾವು ಅವನಿಗೆ ಶರಣಾಗಬೇಕು. ಆಗಲೇ ಮೌನದ ಸಿದ್ಧಿ! ಮೌನವೆಂದರೆ ತುಟಿ ಹೊಲೆದುಕೊಂಡಿರುವುದಲ್ಲ, ಮೌನವೆಂದರೆ ಹಿಂಸಿಸುವ ಅಸ್ತ್ರವಲ್ಲ. ಮೌನವೆಂದರೆ ಮಾತಿನೊಳಣ ಧ್ಯಾನ! ಮೌನವೆಂದರೆ ಮಂತ್ರಘೋಷಗಳ ನಡುವೆಯೂ ದಕ್ಕುವಂಥ ಸುಮ್ಮಾನ. ಮೌನ ಬಯಸುವ ಈ ಕವನ ಶುರುವಾಗಿದ್ದು ಸಾಮಾನ್ಯ ಮನುಜನ ಸಾಮಾನ್ಯ ನಡತೆಯಿಂದ. ಸಾಗುತ್ತಾ ಹಂತಹಂತವಾಗಿ ತಲುಪಿದ್ದು ಮಾತ್ರ ಎತ್ತರದ ಆಧ್ಯಾತ್ಮದ ಶಿಖರ! ಇನ್ನೂ ನಾನು ಮಾತಾಡ ಹೋದರೆ ಎತ್ತರದಲ್ಲಿನ ತಪಸ್ಸು ಭಂಗಗೊಂಡೀತು! ವಿರಮಿಸುವೆ...
-      ಜಯಲಕ್ಷ್ಮೀ ಪಾಟೀಲ್.

                                                                                    03-01-2015

(ಕೆ ಎಸ್ ನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ  ಕವಿ ರಾಜೇಂದ್ರ ಪ್ರಸಾದ್ ಬರೆಸಿದ ಲೇಖನವಿದು)