Thursday, November 25, 2010

ಮಾದಿಯದು ಕಥೆಯನ್ನಲೇ...


ಹೊರಗೆ ಜಿಟಿ ಜಿಟಿ ಜಿನುಗುವ ಮಳೆ ಹನಿಗೆ ಮೈಯೊಡ್ಡಿ ನಿಂತಿರುವ ಗಾಳಿ ಕೈ ಚಾಚಿ ಅಡುಗೆ ಮನೆಯಲ್ಲಿ ಕಿಟಕಿಯ ಮುಖಾಂತರ ನನ್ನ ಮೈಯನ್ನು ಸೋಕಿ ಪುಳಕಗೊಳಿಸುತ್ತಿರುವಂತೆ, ಮನದಾಳದಲ್ಲಿ ಅಸಂಗತ ಚಿತ್ರವೊಂದು ಪೂರ್ಣರೂಪ ತಾಳಿ ಹೊರಬರಲು ಹವಣಿಸುತ್ತಿತ್ತು. ಹೆರಿಗೆ ನೋವಿನಂತೆ ನನ್ನನ್ನು ಪೀಡಿಸುತ್ತಿತ್ತು. ಕೇಳಿದ ಘಟನೆಗಳೆಲ್ಲ ಅರ್ಥವಿಲ್ಲದ ಕಥಾರೂಪ ತಾಳುತ್ತಿರುವಂತೆಯೇ ಮತ್ತೆ ಅಸ್ಪಷ್ಟ ರೇಖೆಯೊಂದೇ ಉಳಿದು ಬಿಡುತ್ತಿತ್ತು. ಇತ್ತ ಹೊರಗಿನಿಂದ ಬರುವ ಗಾಳಿ ಹಾಗು ಗ್ಯಾಸ್ ಸ್ಟೌವ್‍ನಿಂದ ಹೊರ ಹೊಮ್ಮುವ ಈ ಬಿಸಿ, ಇವೆರೆಡೂ ವಿಚಿತ್ರ ಅನುಭವವನ್ನು ನೀಡುತ್ತಿರುವಂತೆ ಹೊರಗಿನಿಂದ, "ವೈನಿ, ಲಗೂನ ಬಾ ಇಲ್ಲಿ, ಇಗಾ ಮಾದಿ ಹೊಂಟಾಳ." ಕಿಟಕಿಗೆ ಮುಖವಿಟ್ಟು ರಸ್ತೆ ನೋಡುತ್ತಾ ಪಡಸಾಲೆಯಿಂದ ಶೈಲಾ ಕೂಗಿದಾಗ, ರೊಟ್ಟಿ ಮಾಡಿ ಮುಗಿಸಿ ಕೈ ತೊಳೆಯುತ್ತಿದ್ದವಳು ಬೇಗ ಬೇಗನೆ ನೆರಿಗೆ ಸರಿಸಿ ಲಂಗಕ್ಕೆ ಕೈ ಒರೆಸಿಕೊಂಡವಳೆ ಧಾವಿಸಿದೆ.

         ಶೈಲಾಳ ಮಗ್ಗುಲಿಗೆ ನಿಂತು ಹೊರ ನೋಡಿದಾಗ ಎಣ್ಣೆ ಹಚ್ಚಿ ಎರಡು ಜಡೆ ಹಾಕಿ, ಪರಕಾರ-ಜಂಪರ್ ತೊಟ್ಟ ಹುಡುಗಿಯೊಬ್ಬಳು ಜಿಟುಗು ಮಳೆಯ ಖುಷಿಯನ್ನು ಅನುಭವಿಸುವವಳಂತೆ ನಗೆ ಹರಡಿದ ಮುಖ ಮೇಲೆ ಮಾಡುತ್ತಾ ಮತ್ತೆ ಕೆಳಗೆ ಮಾಡುತ್ತಾ ಹೋಗುತ್ತಿರುವುದು ಕಾಣಿಸಿತು. ಮಳೆಯ ಕಾರಣ ರಸ್ತೆಯಲ್ಲಿ ಬೇರೆ ಮನುಷ್ಯರ ಸುಳಿವಿಲ್ಲ. ನಮ್ಮೂರಿಗೆ ಮಳೆ ಬಲು ಅಪರೂಪದ ಅತಿಥಿ. ಅದರ ಬರುವಿಗಾಗಿ ಕಾತರದಿಂದ ಕಾಯುವ ನಮ್ಮೂರ ಜನ, ಮಳೆ ಬಂದಾಗ ಸಮಾಧಾನದ ಉಸಿರಿನೊಂದಿಗೆ ಸ್ವಾಗತಿಸುತ್ತಾರೆಯೇ ವಿನಃ ಮಳೆಯಲ್ಲಿ ಮಿಂದು ಮುದಗೊಳ್ಳುವುದಿಲ್ಲ, ಸಂಭ್ರಮಿಸುವುದಿಲ್ಲ. ಹಾಗೆ ಮೀಯಲು ಹೋಗುವವರನ್ನು ನೆಗಡಿ, ಕೆಮ್ಮಿನ ಗುಮ್ಮನನ್ನು ತೋರಿಸಿ ಹೆದರಿಸಿಯೋ ಇಲ್ಲವೆ "ನೋಡಿದವರು ಏನೆಂದಾರು!" (ಈ ಮಾತು ನಮ್ಮಲ್ಲಿ ಹುಡುಗಿ ಹೆಜ್ಜೆ ಎತ್ತಿಟ್ಟಾಗೊಮ್ಮೆ ಕೇಳಿ ಬರುತ್ತದೆ.) ಎನ್ನುತ್ತಲೋ ಹೆದರಿಸಿ ಮನೆಯಲ್ಲೆ ಇರುವ ಹಾಗೆ ನೋಡಿಕೊಳ್ಳುತ್ತಾರೆ. ಹಾಗೆ ಮಳೆಯ ಸುಖದಿಂದ ಊರಲ್ಲಿ ವಂಚಿತಳಾದ ನಾನು ಮುಂಬೈಗೆ ಬಂದ ಮೇಲೆ, ಅಲ್ಲಿನ ಮಳೆ ಧೋ ಎಂದು ಬರುತ್ತಲೇ ತಕ್ಷಣ ನಿಂತು ಕಕ್ಕಾಬಿಕ್ಕಿಯಾಗಿಸಿ(ಹೊಸಬರಿಗೆ), ಮರುಕ್ಷಣ ಹುಯ್ಯುವ ಮಳೆಯಲ್ಲಿ ಮನಸಾ ಮಿಂದು ಖುಷಿಪಟ್ಟಿದ್ದೆನೆ. ಈಗ ರಸ್ತೆಯಲ್ಲಿ ಮಳೆಯನ್ನು ಸುಖಿಸುತ್ತಾ ನಡೆಯುತ್ತಿದ್ದ ಹುಡುಗಿಯನ್ನು ನೋಡಿದ ಮೇಲೆ ನಾನ್ಯಾಕೆ ಇವಳಂತೆ ಬಿಂದಾಸಾಗಿ ಊರ ಮಳೆಯ ಸುಖವನ್ನು ಅನುಭವಿಸಲಿಲ್ಲ ಎಂದು ಅನಿಸುತ್ತಿದ್ದಂತೆ ’ಮಾದಿ’ಯ ನೆನಪಾಗಿ ಅನುಮಾನಿಸುತ್ತಾ ಕೇಳಿದೆ, "ಶೈಲಾ, ಮಾದಿ ಹೊಂಟಾಳಂದಿ.... ಎಲ್ಲಿ? ಚ್ಯಾಷ್ಟಿ ಮಾಡಾಕ ಹತ್ತೀಯೇನು?"

"ಅಯ್ಯ ವೈನಿ ಇಕೀನ ಮಾದಿ" ಎಂದು ಶೈಲಾ ಮತ್ತದೆ ಹುಡುಗಿಯನ್ನು ತೋರಿಸಿದಾಗ ಕಕಮಕಗೊಂಡೆ. ನನ್ನ ಕಲ್ಪನೆಯಲ್ಲಿದ್ದ ಮಾದಿಗೂ ಇವಳಿಗೂ ಯಾವುದೇ ಹೋಲಿಕೆಯಿಲ್ಲ. ಅವಳೋ ಗಲೀಜು ಗಲೀಜು. ಅಸ್ತ್ಯವ್ಯಸ್ತ ಅರಿವೆ, ಕೆದರಿದ ತಲೆ, ಮೂಗಲ್ಲಿ ಮೆತ್ತಿಕೊಂಡ ಸುಂಬಳ, ಕಟ ಬಾಯಲ್ಲಿ ಸಣ್ಣಗೆ ಒಸರುವ ಜೊಲ್ಲು, ಪಕ್ಕಕ್ಕೆ ಹಾದು ಹೋದರೆ ವಾಯಿಕ್ ಎನ್ನುವ ವಾಸನೆಯುಕ್ತ ಹುಡುಗಿ. ಈಗ ಕಣ್ಣಾರೆ ಕಾಣುತ್ತಿರುವುದು ನೀಟು ನೀಟಾಗಿರುವ ಅಷ್ಟೇನು ಚಂದಾಗಿರದವಳು. ‘ವಾಯಿಕ್’ ವಾಸನೆ ತೊರೆದಂತಾಗಿ ಹೇಳಿದೆ, 

" ಶೈಲಾ, ಅಕ್ಕಿನ್ನ ಮನೀಗಿ ಕರಿಯಲಾ," ನಾನು ಮಾದಿಯನ್ನು ಕರೆ ಎನ್ನುವುದಕ್ಕೆ ಕಾದಿದ್ದವಳಂತೆ,

  "ಏss ಮಾದಿ ಇಗಾ ಒಂತಟಕ, ಕುಂತು ಹೋಗಾಕಂತಿ ಬಾ ಇಲ್ಲಿ," ಎಂಬ ಶೈಲಾಳ ಧ್ವನಿಗೆ ತಿರುಗಿ ನೋಡಿದ ಮಾದಿ ನಮ್ಮನೆ ಕಡೆ ಹೆಜ್ಜೆ ಹಾಕಿದಳು. ಅವಳು ಬರುತ್ತಿರುವುದನ್ನು ನೋಡಿದ ನನಗೆ ಕಾರಣವಿಲ್ಲದ ಸಂಭ್ರಮ. "ಒಳಗs ಕರಿ" ಎಂದಿದ್ದಕ್ಕೆ ಶೈಲಾ, " ಬ್ಯಾಡ ವೈನಿ, ಅಕ್ಕಿನ್ನ ಅಲ್ಲೇ ಕಟ್ಟಿ ಮ್ಯಾಲ ಕುಂದ್ರೂಸೂನು. ಖೋಡಿ ಯಾ ಟೈಮಿನಾಗ ಹೆಂಗ್ ಇರ್ತೈತೊ ಹೇಳಾಕ ಬರಂಗಿಲ್ಲ" ಎನ್ನುತ್ತಾ ಹೊರಗೆ ಹೆಜ್ಜೆ ಹಾಕಿದವಳನ್ನು ಹಿಂಬಾಲಿಸಿದೆ.

   ಮನೆ ಮುಂದಿನ ಛಾವಣಿಯಿಂದಾಗಿ ಮಳೆ ಹನಿ ಬೀಳದೆ ಇದ್ದ ಕಡೆ ಎಡ ಕಟ್ಟೆಯ ಮೇಲೆ ನಾನು, ಬಲ ಕಟ್ಟೆಗೆ ಶೈಲಾ ಕುಳಿತುಕೊಳ್ಳುವಷ್ಟರಲ್ಲಿ ಗೇಟನ್ನು ದಾಟಿ ಸೀದಾ ಬಂದು ನನ್ನ ಪಕ್ಕದಲ್ಲೇ ಮಾದಿ ಕುಳಿತಾಗ ನನಗೊ ಎಂಥದೋ ಪುಳಕ. "ಯಯಯಕ್ಕಾ ನೀ ಚ್‍ಚ್‍ಚಾ ಮಾಡ್ತೀನಿ ಅಂದ್ರ ಅ‍ಅ‍ಅಟ್ಟ, ನಾ ಕುಂದರತೀನಿ, ಇ‍ಇಲ್ಲಾಂದ್ರ ಹೋ ಹೋ ಹೊ ಹೋಕ್ಕೀನಿ", ಶೈಲಾಳನ್ನು ಉದ್ದೇಶಿಸಿ ಎಂದಳು ಮಾದಿ. ವಯಸ್ಸು ಇಪ್ಪತ್ತಾರರ ಆಸುಪಾಸಿರಬಹುದು. ಮೇಲೆ ಎತ್ತಿದಷ್ಟೇ ಬೇಗ ಕೆಳಗೆ, ಪಕ್ಕಕ್ಕೆ ವಾಲುವ ತಲೆ (ಮಳೆಯನ್ನು ಸುಖಿಸುತ್ತಿದ್ದಾಳೆ ಎನ್ನುವ ನನ್ನ ಭ್ರಮೆ ಕಳಚಿ ಬಿತ್ತು), ಬೆನ್ನ ಮೇಲೆ ಚೀಲ ಹೊತ್ತಂತ ನಡಿಗೆ, ತಟ್ಟಿಸಿ ಬರುವ ಮಾತುಗಳಿಂದ ಅವಳ ಮಾನಸಿಕ ಸ್ಥಿತಿಯನ್ನು ಯಾರೂ ಗುರುತಿಸಬಹುದೆನಿಸಿತು ನನಗೆ. ಹಾಗಾದರೆ ನಾನವಳನ್ನು ನೋಡಿದ ತಕ್ಷಣ ಗುರುತಿಸದ ಕಾರಣ..... ನನ್ನ ಕಲ್ಪನೆಯ ಮಾದಿಯ ಹೋಲಿಕೆ ಇಲ್ಲದುದರಿಂದಿರಬೇಕು. ಅವಳನ್ನು ಮಾತಾಡಿಸಬೇಕು ಅನ್ನುವ ತವಕದಲ್ಲಿ ನಾನು, "ಚಾ ಹೌದಿಲ್ಲೊ, ನಾ ಮಾಡಿಕೊಡ್ತೀನಿ ಕುಂದ್ರು. ಅಂಧಂಗ ಮಳ್ಯಾಗ ಎಲ್ಲಿಗಿ ಹೋಗಿದ್ದಿ ಮಾದೇವಿ?" ಅಂದೆ.
ಯಾಕೊ ಮಾದಿ ಎನ್ನಲು ಮನಸ್ಸೇ ಬರುತ್ತಿಲ್ಲ. ಮನೆಯಲ್ಲಿ ಅವಳ ವಿಷಯ ಬಂದಾಗಲೆಲ್ಲ, ನೆನಪಿಸಿ ನಗುವಾಗಲೆಲ್ಲ ಮಾದಿ ಎಂದೇ ಅನ್ನುತ್ತಿದ್ದವಳಿಗೆ ಅವಳನ್ನು ಪ್ರತ್ಯಕ್ಷ ನೋಡಿದ ಮೇಲೆ ಹಾಗನ್ನಲು ಮನಸೊಪ್ಪುತ್ತಿಲ್ಲ. ಮನದ ಚಿತ್ರದ ಮಾದಿ ಬದಿಗೆ ಸರಿದಿದ್ದಳು. ಅಪರಿಚಿತೆ ತನ್ನನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ಕಂಡ ಮಾದಿ, ಯಾರೀಕೆ? ಎನ್ನುವಂತೆ ಗೋಣು ಹಾಕಿ ಶೈಲಾಳೆಡೆ ನೋಡಿದಾಗ ಅವಳಿಗೆ ನನ್ನನ್ನು ಪರಿಚಯಿಸುವವಳಂತೆ ಶೈಲಾ, "ನಮ್ಮ ವೈನಿ, ನಿನ್ನೀನ ಬಾಂಬೆಯಿಂದ ಬಂದಾ..." ಶೈಲಾಳ ಮಾತು ಪೂರ್ತಿಯಾಗುವ ಮುಂಚೆಯೇ ಮಾದಿ ನನ್ನ ಪಕ್ಕದಿಂದ ಸಟಕ್ಕನೆ ಎದ್ದು ನನ್ನ ನಾದಿನಿಯ ಪಕ್ಕ ಕುಳಿತಾಗಿತ್ತು.
"ಅಯ್ಯ ಸುಸುಡ್ಲಿ... ಮಮಮದ್ಲ ಯಾಕ ಹೇ ಹೇಳ್ಲಿಲ್ಲ್ಯಕ್ಕ!" ಎನ್ನುತ್ತಾ ತಿರಸ್ಕಾರ ತುಂಬಿದ ನೋಟದಿಂದ ನನ್ನನ್ನು ನೋಡಿದಾಗ, ಕಾರಣ ಗೊತ್ತಾಗದಿದ್ದರೂ ಅವಮಾನವಾದಂತೆನಿಸಿತು.
ನನ್ನ ಮುಖ ಕಂದಿದ್ದನ್ನು ಗಮನಿಸಿದ ಶೈಲಾ ರೇಗಿ, "ಯಾಕಲೆ ಹೊಲಸಿ, ಹಂಗ್ಯಾಕ ಮಾಡ್ತಿ? ಸೊಕ್ಕ ಬಂದೈತೇನು? ನಮ್ಮ ವೈನಿ ಹೆಂಗ್ ಕಾಣಸ್ತಾಳ ನಿನಗ?" ಬೈದಾಗ, 
"ಸುಸುಮ್ನಿರೆಕ್ಕಾ ನೀನೀನೀನಿನಗೇನ್ ಗೊಗೊತ್ತೈತಿ. ವೈನಿಗೋಳು ಎಂದsರ ಚಚೊಲೊ ಇರ್ತಾರೇನ? ಬಬಬಬಬರೇ ನಾನಾನಾದಿನ್ದೇರು ಸಸಸಾಯ್ಲಿ ಅಂತ ಬಗಸ್ತಾರ." ಪರಪರ ತೊಡೆ ಕೆರೆಯುತ್ತಾ ಮೊದಲೇ ಸಣ್ಣಗಿರುವ ಕಣ್ಣನ್ನು ಇನ್ನೂ ಸಣ್ಣ ಮಾಡಿ, ಮುಖ ಕಿವುಚಿ ಉತ್ತರಿಸಿದ ಮಾದಿಯ ಮನದಲ್ಲಿ ಇಡೀ ಅತ್ತಿಗೆ ಅನ್ನುವ ಸಂಬಂಧದ ಮೇಲೆ ಅಪನಂಬಿಕೆ ಮನೆ ಮಾಡಿದೆಯೆ? ಯಾಕೆ...?

"ಏss ಪ್ಯಾಲಿ, ನಿಮ್ಮ ವೈನಿಗತೆ ಅಲ್ಲ ನಮ್ಮ ವೈನಿ. ಭಾಳ ಚೊಲೊ ಅದಾರ. ನಿಮ್ಮ ವೈನಿಯೊಬ್ಬಾಕಿ ಸುಮಾರ್ ಅದಾಳ ಅಂದ್ರ ಎಲ್ಲಾರೂ ಹಂಗ ಇರ್ತಾರೇನ? ಇನ್ನೊಮ್ಮೆ ನಮ್ಮ  ವೈನಿಗೆ ಏನರ ಅಂದಿ ಅಂದ್ರ ಗೆಬ್ಬಿಗಿ ಕೊಡ್ತೀನಿ."

ನನ್ನ ಮೇಲಿನ ಪ್ರೀತಿಯಿಂದ ಶೈಲಾ ಕೆನ್ನೆಗೆ ಹೊಡಿತೀನಿ ಅಂದದ್ದು ಮಾದಿಗೆ ಅವಮಾನವಾದಂತೆನಿಸಿ, "ಹಹಹಂಗಾರ ನಾ ನಾ ಹೋಕ್ಕೀನಿ ಬಿಡು. ನೀ ನೀ ನೀ ಬರೇ ಹಿಂಗ ಮಾಮಾಡ್ತಿ. ಚಚಾ ಕೊಡ್ತೀನಿ ಅಂತ ಕರದು ಬರೇ ಬಬಬೈತಿ." ಕಣ್ಣಲ್ಲಿ ನೀರು ತುಂಬಿಕೊಂಡು ಮಾದಿ ಹೇಳಿದಾಗ ಅವಳು ಇಷ್ಟು ಬೇಗ ಹೋಗುವುದು ನನಗೆ ಬೇಡವಾಗಿತ್ತಾದ್ದರಿಂದ, 
"ಇಗಾ ಮಾದೇವಿ, ನೀ ಕುಂದ್ರು, ನಾ ಈಗ ಚಾ ಮಾಡಿ ತರ್ತೀನಿ ಹೋಗಬ್ಯಾಡ" ಎಂದವಳೆ,  ಶೈಲಾ "ವೈನಿ ಈಗನಕಾ ಬ್ಯಾಡ ಬಾ ಇಲ್ಲಿ" ಎನ್ನುತ್ತಿದ್ದರೂ ಮಾದಿಯ ಆಸೆ ಪೂರೈಸಲು ಅಡುಗೆ ಮನೆಗೆ ನಡೆದೆ. ಒಲೆಯ ಮೇಲೆ ಚಹಾಕ್ಕಿಟ್ಟು ನಿಂತವಳಿಗೆ ಮಾದಿಯ ಬಗ್ಗೆ ಕೇಳಿದ ವಿಚಾರಗಳು ನೆನಪಾದವು.

ನಾಲ್ಕೈದು ವರ್ಷಗಳ ಹಿಂದಿನ ಮಾತು. ಒಮ್ಮೆ ನನ್ನ ತಮ್ಮ, ಮತ್ತವನ ಗೆಳೆಯರು ಜೋರಾಗಿ ಮಾತಾಡುತ್ತಾ ಉಕ್ಕಿ ಬರುವ ನಗೆಯಿಂದಾಗಿ ಮಾತುಗಳನ್ನು ತುಂಡಾಗಿಸುತ್ತಾ ಮನೆಯೊಳಗೆ ಬಂದರು. ಅವರ ನಗು, ಅರ್ಧರ್ಧ ಮಾತುಗಳು ಮನೆಯವರೆಲ್ಲ ಪಡಸಾಲಿಗೆ ಬಂದು ಸೇರುವಂತೆ ಮಾಡಿದವು. ನಮಗೋ ಅವರ ನಗು, ಮಾತು ಯಾವುದೂ ಅರ್ಥವಾಗುತ್ತಿಲ್ಲ. ಮಧ್ಯ ಮಧ್ಯ ‘ಮಾದಿ,’ ‘ಯ್ಯಪ್ಪಾ!!!’, ‘ಅಮೀರ್ ಖಾನ್’ ಮುಂತಾದ ಶಬ್ದಗಳು.
ಕುತೂಹಲ ತಡೆಯಲಾಗದೆ ಅವ್ವ, "ಯಾಕ್ರೊ ಏನಾತು? ಇಷ್ಟ್ಯಾಕ ನಗಾಕ್ ಹತ್ತೀರಿ?" ಎಂದು ಕೇಳಿದಾಗ ತಮ್ಮನ ಗೆಳೆಯರೊಲ್ಲೊಬ್ಬ, "ಆಂಟೀರಿ, ನಿಮ್ಮ ಸೊಸಿ ಮನೀಗ್ ಬರ್ತಾಳ, ಮನಿ ತುಂಬಸ್ಕೋರಿ..... ಯಪ್ಪೋ" ಎಂದವನೇ ಮತ್ತೆ ಹೊಟ್ಟೆ ಹಿಡಿದುಕೊಂಡು ಕ್ಕೊಕ್ಕೊಕ್ಕೊಕ್ಕ ನಗತೊಡಗಿದ. ಅವ್ವಗ ಈಗೂ ಅರ್ಥ ಆಗಿಲ್ಲ.
ಇನ್ನೊಬ್ಬ ನನ್ನನ್ನು ಉದ್ದೇಶಿಸಿ, "ಅಕ್ಕಾ ಇವತ್ತ ಕ್ಲಾಸ್ ಮುಗಿಸಿ ಬರಬೇಕಾದ್ರ ಏನಾತಂದ್ರ..." ಮತ್ತೆ ನಗು.

ಕುತೂಹಲ ಹತ್ತಿಕ್ಕಲಾಗದೆ ನಾನು ಗದರಿಸುವಂತೆ ನುಡಿದೆ. " ನೋಡ್ರೊ ನಗೂದರ ಒಂದ್ ಮಾಡ್ರಿ, ಇಲ್ಲಾ ಹೇಳೂದರ ಒಂದ್ ಮಾಡ್ರಿ. ಅದು ಬಿಟ್ಟು ಹಿಹ್ಹಿಹ್ಹಿಹ್ಹಿ ಅನ್ನಂಗಿದ್ರ ನಾ ಒಳಗ್ ಹೋಕ್ಕೀನಿ. ಅಲ್ಲಾs ಇನ್ನೂ ಸೆಕೆಂಡ್ ಪಿಯೂಸಿನ ಮುಗದಿಲ್ಲ, ನಿಮಗ ಲಗ್ನಾ ಬ್ಯಾರೆ ಮಾಡಬೇಕ! ಏನೋ ಅಪ್ಪು ಇದು, ಓದೂದು ಬಿಟ್ಟು ಏsನ್ ನಡಸೀರಿ?"

ನಾನು ಮದುವೆ ವಿಚಾರ ಸೀರಿಯಸ್ಸಾಗಿ ತೆಗೆದುಕೊಂಡಿದ್ದೇನೆಂದು ಭಾವಿಸಿದ ತಮ್ಮ ಅಪ್ಪು, "ಏಯಪ್ಪೊ ನೀ ಖರೆ ಅಂತ ತಿಳ್ಕೊಂಡಿಯೇನ ಮತ್ತ, ಸುಮ್ನ ಚ್ಯಾಷ್ಟಿ ಮಾಡ್ತಾರ್ ಅವ್ರು... ಏsss ನಿಮ್ಮೌರ್ರ, ಸುಮ್ನಿರ್ರೋಲೆ, ನಮ್ಮನ್ಯಾಗ ಖರೇನ ಅಂತ ತಿಳಕೋತಾರ ಮಕ್ಳ್ಯಾ" ಅಂದ. ತಮ್ಮನ ಮಾತಿನಿಂದ ನಗು ನಿಲ್ಲಿಸಿದರಾದರೂ ಆಗಾಗ ಖಿಸಕ್ ಖಿಸಕ್ ನಡೆದೇ ಇತ್ತು. ಒಟ್ಟು ಅವರ ನಗುವಿನ ಮರ್ಮ ಏನೆಂದರೆ, ಇವರೆಲ್ಲಾ ಕ್ಲಾಸ್ ಮುಗಿಸಿ ಬರುವಾಗ ಎದುರಾದವಳು ಮಾದಿ. ಅಶಿಕ್ಷಿತ, ಅರೆಹುಚ್ಚಿನ ಹುಡುಗಿ.  ಅವಳ ‘ಪರಿಚಯ’ ನಮ್ಮೂರಿಗೆ ಇಂಜಿನಿಯರಿಂಗ್ ಓದಲು ಬಂದ ಬಿಹಾರಿ ಉಡಾಳ ಹುಡುಗರಿಗೆ ಚೆನ್ನಾಗಿ ಗೊತ್ತು. ಬಹುಶಃ ಮಾದಿ - ಮನೆಯವರಿಗೆಲ್ಲ ದಿನದ ಸಾವು. ಸ್ವಲ್ಪ ಸಮಯ ಮನೆ, ಮನ ತಣ್ಣಗಿರಲು ಅವಳನ್ನು ಆಚೆ ಅಟ್ಟುತ್ತಿದ್ದರೊ ಅಥವಾ ಇವಳೇ ಹೊರಗೋಡಿ ಬರುತ್ತಿದ್ದಳೊ ಗೊತ್ತಿಲ್ಲ. ಹಾಗೆ ಮನೆ ಹೊರಗೆ ಬಂದವಳ ಸವಾರಿ ಮನ ಬಂದತ್ತ. 
ಹೀಗೆಯೆ ಒಂದು ಸಲ ಮಾದಿಯ ಸವಾರಿ ಇಂಜಿನಿಯರಿಂಗ್ ಹುಡುಗರ ಹಾಸ್ಟೇಲಿನತ್ತ ತೇಲಿತು. ಅಚಾನಕ್ ಆಗಿ ಗೊತ್ತಿರದ ಹುಡುಗಿಯೊಬ್ಬಳು, ಹಾಸ್ಟೇಲಿನ ಆವರಣ ಪ್ರವೇಶಿಸಿದ್ದನ್ನು ಕಂಡ ಗುಂಪು ಕುತೂಹಲಗೊಂಡಿತಾದರೂ, ಆಕೆ ಅರೆಹುಚ್ಚಿ ಎಂದು ತಿಳಿಯುತ್ತಲೆ ತನ್ನ ಕಪಿಚೇಷ್ಟೆ ಪ್ರಾರಂಭಿಸಿತು. ಮೊದಮೊದಲು ಬರೀ ಮಾತಿಗೆ ಸೀಮಿತವಾಗಿದ್ದ ಈ ಚೇಷ್ಟೆ ಬರಬರುತ್ತಾ ವಿಕೃತ ಬಿಹಾರಿ ಹುಡುಗರು ಅವಳಿಗೆ ಚಿತ್ರ ತೋರಿಸುವ, ತಿನ್ನಲು ಕೊಡುವ, ಚಹಾ ಕೊಡಿಸುವ  ನೆಪದಿಂದ ಅವಳನ್ನು ತಮ್ಮ ರೂಮಿಗೆ ಕರೆದುಕೊಂಡು ಹೋಗುವ ಮಟ್ಟಕ್ಕೆ ಬಂತು. ಹೊರ ಬಂದಾಗ ಮಾದಿಯ ಮೈಮೇಲೆ ಹಲ್ಲಿನ ಗುರುತು, ಸಿಗರೇಟಿನ ಬೆಂಕಿ ತುದಿ ತಾಗಿಸಿದ ಗಾಯ ಜನರಿಗೆ ಗೋಚರಿಸತೊಡಗಿದವು. ‘ನಮಗ್ಯಾಕ್ ಇಲ್ಲದ ಉಸಾಬರಿ’ ಎಂದು ನೋಡಿಯೂ  ಸುಮ್ಮನಿದ್ದ ಉಳಿದ ಹುಡುಗರು ಒಮ್ಮೆ ಬಿಹಾರಿ ಹುಡುಗನೊಬ್ಬನ ರೂಮಿನಲ್ಲಿ ಮಾದಿ ವಿಕಾರವಾಗಿ ಕಿರುಚಿದ್ದು ಕೇಳಿ ಸಹಿಸಲಾಗದೆ, ಮಾದಿಯನ್ನು ಅಲ್ಲಿಂದ ಬಿಡಿಸಿ ಮನೆಗೆ ತಲುಪಿಸಿದವರು ಆ ಹುಡುಗನನ್ನು ಚೆನ್ನಾಗಿ ಥಳಿಸಿದ್ದರು. ಮಾದಿಯ ಮನೆಯವರಿಗೆ ಅವಳನ್ನು ಹಾಸ್ಟೇಲಿನೆಡೆಗೆ ಬಿಡದಂತೆ ತಾಕೀತು ಕೂಡಾ ಮಾಡಿ ಬಂದರು. ಆದರೆ ಆಗಿನಿಂದ ಅರೆಹುಚ್ಚಿನ ಮಾದಿಗೆ ‘ಹುಚ್ಚಿ’ಯ ಪಟ್ಟ ಗಟ್ಟಿಯಾಯ್ತು.
 
ಮಾದಿಯನ್ನು ಕಂಡ ಅಪ್ಪೂನ ಗುಂಪಿಗೆ ಅವಳನ್ನು ಮಾತಾಡಿಸಬೇಕೆನಿಸಿತು. ಇವರೊಲ್ಲೊಬ್ಬ ಕರೆದ "ಏss ಮಾದಿ, ಬಾ ಇಲ್ಲೆ’.
"ಯಾಕೊs ನನಗ ಮಾದಿ ಅಂತಿ?"


"ಮತ್ತ ನಿನಗ ಏನನಬೇಕೊ?"
 
"ಮಾಧುರಿ ದಿಕ್ಷಿತ್ ಅಂತ ಕರದ್ರಟ್ಟ ನಾ ಬರಾಕಿ" ಹೋsss ಎಂದಿತು ಗುಂಪು.
ನಗುತ್ತಿರುವವರನ್ನು ಕಂಡು ಮಾದಿ ತಾನೂ ನಗತೊಡಗಿದಳು.

  "ಏ ಏ ಏ ಮಾಧುರಿ ದಿಕ್ಷಿತ್, ಮತ್ತ ಒಂದ್ ಹಾಡ ಹಾಡಲಾ", ಹುಡುಗರ ಕೋರಿಕೆ ಈಡೇರಿಸುವವಳಂತೆ, "ಮುಝೆ ನೀಂದನ ಆಯೆ... ಚಾಯೆ ಜರಾ ಢೂಂಡಕೆ ಲಾಯೆ" ಹಾಡಿನ ಪಲ್ಲವಿ ಮುಗಿಸುವಷ್ಟರಲ್ಲಿ ಮಾದಿಯ ಕಣ್ಣಿಗೆ ಬಿದ್ದವನು ನನ್ನ ತಮ್ಮ ಅಪ್ಪು. ಅವನ ಗುಂಪಿನಲ್ಲಿ ಎಲ್ಲರಿಗಿಂತ ಚಿಕಣಾ(ಸ್ಮಾರ್ಟ್) ಅಪ್ಪೂನೆ. ಅವನ ಕೈ ಹಿಡಿದವಳೆ, "ಏ ನನ್ನ ಅಮೀರ್ ಖಾನ, ನೀನೂ ಹಾಡಬಾರೊ" ಎಂದಾಗ ಅನಿರೀಕ್ಷಿತ ಧಾಳಿಗೆ ತಬ್ಬಿಬ್ಬಾದ ಅಪ್ಪು  ಕೊಸರಿಕೊಳ್ಳುತ್ತಾ, "ಏ ಹೋಗ್ ಹೋಗ್ ನೀ. ಹೋಗ್ ಇಲ್ಲಿಂದ, ಹೋಕ್ಕೀಯಾ ಇಲ್ಲಾ ಕೊಡ್ಲ್ಯಾ ಎರ್ಡೇಟ! ಹೋಗ ನೀ" ಎಂದು ಅವಳನ್ನು ಅಲ್ಲಿಂದ ಒತ್ತಾಯದಿಂದ ಸಾಗ ಹಾಕಿದವನನ್ನು ಗೆಳೆಯರು, ‘ಮಾಧುರಿ, ಅಮೀರ್ ಖಾನ್, ಅಮೀರ್ ಖಾನ್, ಮಾಧುರಿ ದಿಕ್ಷಿತ್’ ಎಂದು ಚುಡಾಯಿಸುತ್ತಾ ಮನೆಗೆ ಬಂದಿದ್ದರು.

ಅವರೆಲ್ಲ ಹೇಳುವುದನ್ನು ಕೇಳಿ ನಾವೆಲ್ಲ ನಕ್ಕೆವಾದರೂ ಕೊನೆಗೆ ಅವ್ವ ಹೇಳಿದ್ದು "ಇನ್ನೊಮ್ಮೆ ಹಂಗ ಆ ಹುಡಗೀನ ಕಾಡಸಬ್ಯಾಡ್ರಪಾ, ಯಾರ ಮನಿ ಕೂಸೊ ಏನೊ ಪಾಪ. ನಮಗ ದೇವ್ರು ಎಲ್ಲಾ ಚಂದ ಕೊಟ್ಟಾನಂತ ಇಷ್ಟ ಮೆರೀತೀವಿ. ನಮ್ಮನಿಗೊಳೊಳಗ ಯಾರಾದ್ರೂ ಹಂಗ ಇದ್ದಿದ್ರ ಏನ್ ಮಾಡ್ತಿದ್ರ್ಯಾಗ?" ತಟ್ಟನೆ ನಗು ಮಾತುಗಳೆಲ್ಲ ಗುಡಿಸಿ ಹಾಕಿದಂತಾಯ್ತು ಮನೆ.

ಕುದಿದ ಚಹಾಕ್ಕೆ ಹಾಲು ಬೆರೆಸಿ ಮೂರು ಕಪ್ಪುಗಳೊಡನೆ ಹೊರ ಬಂದಾಗ ಮಾದಿಯ ಮುಖವರಳಿತು. ಶೈಲಾ, "ತಡಿ ವೈನಿ" ಎಂದವಳು ಕಪ್ಪುಗಳನ್ನು ಮರಳಿ ಅಡುಗೆ ಮನೆಯಲ್ಲಿಟ್ಟು ಬಂದಳು.

"ಯಾಕ ಶೈಲಾ, ಹಂಗ್ಯಾಕ್ ಮಾಡ್ತಿ, ಪಾಪ ಚಾ ಬೇಕು ಅಂತಾಳ ಕೊಡಲ್ಲಾ" ಎಂದ ನನಗೆ, 
" ನಿನಗ ಗೊತ್ತಿಲ್ಲಬೆ, ಅಕಿಗಿ ಈಗ ಚಹಾ ಕೊಟ್ಟ್ರ ಕುಡದಾಕೀನ ಹೋಗೆ ಬಿಡ್ತಾಳ. ಅಕಿ ಯಾಕ ಅಗಳೆ ನಿನಗ ಹಂಗ ಮಾಡಿದ್ಲು ಹೇಳಸ್ತೀನಿ ಬಾ", ಮೆಲ್ಲನೆ ಉತ್ತರಿಸಿದ ಶೈಲಾಳನ್ನು ಕೇಳಿದೆ. "ಶೈಲಾ, ಅಕಿ ಮಾತಾಡೂದ್ ನೋಡಿದ್ರ ಹುಚ್ಚಿ ಅನಸೂsದ ಇಲ್ಲಲ! ನಾ ಇಷ್ಟ ದಿನ ಕೇಳಿದ್ದs ಬ್ಯಾರೆ, ಈಗ ನೋಡೂದ ಬ್ಯಾರೆ."


"ನೀ ಆಗ ಕೇಳಿದ್ದೂ ಖರೆ, ಈಗ ನೋಡೂದು ಖರೆ. ತಲಿ ಸ್ವಲ್ಪ ಸುದ್ದ ಇದ್ದಾಗ ಹಿಂಗ ಸರಳ ಇರ್ತಾಳ. ಇಲ್ಲಾಂದ್ರ ಐತಲ್ಲ ಅಲಾಬ್ ಮೆರೂಣ್ಗಿ!" ನಕ್ಕ ಶೈಲಾ ಹೋಗಿ ಮಾದಿ ಹತ್ತಿರ ಕುಳಿತುಕೊಂಡಳು.


"ಯಕ್ಕಾ, ನೀ ಎ‍ಎ‍ಎಟ್ಟ ಬೆರಕೆದಿಯವಾ, ಅ‍ಅಕಿ ಚಚಾ ಕೊಡ್ತೀನಿ ಅಂದ್ರ ಮಮಮತ್ತ ಒಯ್ದ ಒಳಗಿಟ್ಟ ಬಬಂದ್ಯಾಕ?" ಮಾದಿ ನನ್ನನ್ನು ಅಕಿ ಎಂದದ್ದು ಶೈಲಾಳಿಗೆ ಸಿಟ್ಟು ತರಿಸಿತು. "ನೋಡು ಅಕಿ ಇಕಿ ಅಂತ ಬಾಯ್ ಹರಿಬಿಟ್ಟೆಂದ್ರ ಹಲ್ಲ ಉದರ್ಸಿ ಬಿಡ್ತೀನಿ. ನೆಟ್ಟಗ ವೈನಿ ಅನ್ನಾಕ ಬರೂದಿಲ್ಲ? ನಮ್ಮ ವೈನಿ ನಿನ್ನ ಅಮೀರಖಾನನ ಅಕ್ಕ ಅನ್ನೂದರ ಗೊತ್ತೈತೇನು?" ಶುರುವಿನಲ್ಲಿ ಸಿಟ್ಟು ಮಾಡಿಕೊಂಡವಳು ಕೊನೆಗೆ ನಗುತ್ತ ಹೇಳಿದಳು ಶೈಲಾ.


ಒಂದೆರೆಡು ನಿಮಿಷ ನನ್ನನ್ನೇ ನಿಟ್ಟಿಸಿದ ಮಾದಿ,’ಖರೆ!?’ ಎಂದು ಶೈಲಾಳನ್ನು ಕೇಳಿದಾಗ, "ಹೂಂ, ನಾ ಯಾಕ್ ಸುಳ್ಳ ಹೇಳ್ಳಿ? ಬೇಕಾದ್ರ ವೈನಿನ್ನ ಕೇಳು." ನನ್ನ ತಮ್ಮ ಇನ್ನೂ ಅಮೀರ್ ಖಾನನಾಗೇ ಅವಳ ಮನಸಲ್ಲುಳಿದದ್ದು ಗೊತ್ತಾಗಿ ಯಾಕೊ ನನ್ನ ಕಣ್ಣಲ್ಲಿ ನೀರು ಜಿನುಗಿ, "ಹೌದು ಖರೆ" ಎಂಬಂತೆ ತಲೆಯಾಡಿಸಿದೆ.


ಅವತ್ತು ಅವ್ವ ಆಡಿದ ಮಾತು ಅಪ್ಪೂನ ಗೆಳೆಯರಿಗೆಷ್ಟು ನಾಟಿತೊ ಗೊತ್ತಿಲ್ಲ. ಆದರೆ ಅಪ್ಪು ಮಾತ್ರ ಮಾದಿಯ ವಿಷಯದಲ್ಲಷ್ಟೆ ಅಲ್ಲ ಅಂತಹ ಯಾರಾದರೂ ಸರಿ ಅವರೆಡೆಗೆ ಸಹಾನುಭೂತಿಯನ್ನು ಬೆಳೆಸಿಕೊಂಡ. ಮಾದಿಯನ್ನು ಬೇರೆ ಹುಡುಗರು ರೇಗಿಸುವಾಗಲೆಲ್ಲ ಅವಳನ್ನು ಅಲ್ಲಿಂದ ಪಾರು ಮಾಡಲು ಪ್ರಯತ್ನಿಸುತ್ತಿದ್ದ. ಆದರೆ ಎಲ್ಲ ಹುಡುಗರ ಬಾಯಲ್ಲೂ ಆ ಮಾದಿಯ ಅಮೀರ್ ಖಾನನಾದ. ಮಾದಿ ಸಿಕ್ಕಾಗಲೆಲ್ಲ, ‘ಏ ಮಾಧುರಿ ಅಗಾ ನಿನ್ನ ಅಮೀರ್ ಖಾನ್ ಬಂದ ನೋಡು, ಹೊಂಟಾನ್ನೋಡು’ ಎನ್ನುವುದು, ಅಪ್ಪೂಗೆ, ‘ಅಪ್ಪ್ಯಾ ಎಲ್ಲ್ಯೋ ನಿನ್ನ ಮಾಧುರಿ ದಿಕ್ಷಿತ್?’ ಎಂದು ಚುಡಾಯಿಸುವುದು ನಡೆಯಿತು. ಅಪ್ಪುವೇನೊ ಅದನ್ನು ಹಗೂರಾಗಿ ತೆಗೆದುಕೊಂಡು ನಕ್ಕು ಸುಮ್ಮನಾಗುತ್ತಿದ್ದ. ಆದರೆ ಅಪ್ಪು ಮಾದಿಯ ಮನದಲ್ಲಿ ಇನ್ನೂ ಅವಳ ಅಮೀರಖಾನನಾಗಿಯೇ ಸ್ಥಾಪಿತಗೊಂಡದ್ದು.............


ಮತ್ತೊಮ್ಮೆ, ಮಾದಿಯನ್ನು ಕರೆದು ರೇಗಿಸಿ ತಮಾಷೆ ನೋಡುತ್ತಿದ್ದ ಗುಂಪಲ್ಲಿ ಒಬ್ಬ ಗೊಣ್ಣೆ ಸುರಿಸುತ್ತಿದ್ದ ಅವಳನ್ನು ನೋಡಿ. "ಮಾದಿ, ಪರಕಾರ ಎತ್ತಿ ಮೂಗ ಒರಸ್ಕೊ.ಹೊಲಸ ಸುಂಬಳಾ ಸುರಸ್ಕೋತ ನಿಂದರ್ತಿಯಲ್ಲ, ಎತ್ತ ಪರಕಾರ." ಎಂದು ಎರಡರ್ಥ ತುಂಬಿದ ಧ್ವನಿಯಲ್ಲಿ ಹೇಳಿದಾಗ ಮಾದಿ, "ಮಮಮದಲ ನೀ ನಿನ್ನ ಚಚಚ್ಚಣ್ಣದ್ಲೆ ಮೂಗ ಒರಸ್ಕೊಂಡು ತೋ ತೋರ್ಸು, ಆ ಮ್ಯಾಲೆ ನಾನಾ ಪ ಪ ಪರಕಾರ್ಲೆ ಒ‍ಒ‍ಒ‌ಒರಸ್ಕೋತೀನಿ ಕುರಸಾಲ್ಯಾನ ತಂದು." ಎಂದವಳೆ ಮುಂಗೈಯಿಂದ ಮೊಣಕೈವರೆಗೆ ಮೂಗು ತಿಕ್ಕಿ, ತುಟಿಯ ಮೇಲಿನದನ್ನು ಕೈಗಂಟಿಸಿಕೊಂಡು ಅದನ್ನು ಲಂಗಕ್ಕೆ  ಉಜ್ಜಿಕೊಳ್ಳುತ್ತಾ ನಡೆದುಬಿಟ್ಟಳಂತೆ. ಅದನ್ನೆಲ್ಲ ನೋಡುತ್ತಿದ್ದ ಅಪ್ಪು ಅವಳನ್ನು ರೇಗಿಸಿದ ಹುಡುಗನಿಗೆ ತಿಳಿ ಹೇಳಲು ಹೋಗಿ ಅನಿಸಿಕೊಳ್ಳಬಾರದ್ದನ್ನು ಅನಿಸಿಕೊಂಡು ಜೋಲು ಮುಖ ಮಾಡಿಕೊಂಡು ಮನೆಗೆ ಬಂದವನು, "ಇವರವ್ವನ, ಈ ಇಂಜಿನಿಯರಿಂಗ್ ಕಾಲೇಜನಾಗ ಬಿಹಾರಿ ಹುಡುಗೂರು ಅದಾರಲ್ಲ ತುಡಗ ಸೂಳೇಮಕ್ಳು, ಅವ್ರಿಗೆ ಅಕ್ಕ ತಂಗೇರಿಲ್ಲಂತ ಕಾಣಸ್ತೈತಿ. ಥೂ!.. ಪಾಪ ಆ ಮಾದಿನ್ನ......" ಮಾತನ್ನು ಅಲ್ಲಿಗೇ ನಿಲ್ಲಿಸಿ ಸುಮ್ಮನಾದವ ಮತ್ತೆಂದೂ ಮಾದಿಯ ಪರವಹಿಸಿ ಮಾತಾಡಲೇ ಇಲ್ಲ. 
ನನ್ನ ಮದುವೆಯಾಗಿ ಗಂಡನೊಟ್ಟಿಗೆ ಮುಂಬೈಯಲ್ಲಿ ವಾಸವಾದರೂ ಆಗಾಗ ಊರಿಗೆ ಬಂದಾಗ ಮಾದಿ ಹಿಂಗಂದ್ಲಂತ, ಮಾದಿ ಹಂಗ ಮಾಡಿದ್ಲಂತ ಅನ್ನೊ ಸುದ್ದಿಗಳು ಆಯಾ ದಿನದ ಮಾತಿಗೆ ಸಾಮಾನುಗಳಾಗುತ್ತಿದ್ದವು. ನಾವ್ಯಾರೂ(ಮನೆಯ ಹೆಣ್ಣುಮಕ್ಕಳು) ನೋಡಿರದ ಮಾದಿಯನ್ನು ತುಂಬಾ ಪರಿಚಯದವಳೆಂಬಂತೆ ಚರ್ಚಿಸುತ್ತಿದ್ದೆವು. ಥೇಟ್ ಸಿನಿಮಾದ ನಾಯಕ, ನಾಯಕಿಯ ಬಗ್ಗೆ ಮಾತಾಡಿಕೊಳ್ಳುವಂತೆ. ಯಾರಾದರೂ ಮನೆಯಲ್ಲಿ ಮಂಗನಂತಾಡಿದಾಗ, "ಹಂಗ್ಯಾಕ ಮಾಡ್ತಿ, ಮಾದ್ಯಾಗಿಯಲ್ಲ" ಎನ್ನುವಷ್ಟರ ಮಟ್ಟಿಗೆ ಮಾದಿ ಸಹಜವಾಗಿ ಹೋದಳು ನಮ್ಮಲ್ಲಿ. ನಮ್ಮಲ್ಲಿಯೇ ಏನು ಹೆಚ್ಚು ಕಡಿಮೆ ಊರ ಎಲ್ಲರ ಮನೆಯಲ್ಲೂ.


   ನಾನು ಅಪ್ಪೂನ  ಅಂದರೆ ಮಾದಿಯ ಅಮೀರಖಾನನ  ಅಕ್ಕ ಅನ್ನುವುದು (ನನ್ನ ಮತ್ತು ಅಪ್ಪೂನ ಹೋಲಿಕೆಯಿಂದಗಿರಬಹುದು) ನಂಬಿದ ಮಾದಿ ನನ್ನೊಡನೆ ಮೆದುವಾದಳು. 
"ಮಮಮದಲ ಹೇಳಬೇಕಾಗಿತ್ತೆಕ್ಕ. ನಾ ನನಮ್ಮ ವೈನಿ ಅದಾಳಲ್ಲ ಹಹಹಂಗ ನಿಮ್ಮ ವೈನಿ ಸಕ ಅದಾಳಂತ ಮಾಮಾಡಿದ್ದೆ." ಸಣ್ಣಗೆ ಗೊಣಗಿದವಳಿಗೆ ಶೈಲಾ, " ಹೌದ್ದರೆ ಗಡಿಯ!! ಅಲ್ಲಾ ಆಗಳೆ ನಮ್ಮ ವೈನಿ ಅಂದ ಕೂಡ್ಲೆ ಕೆಟ್ಟಾಕಿ ಅಂದಾಕಿ ಈಗ ನಿನ್ನ ಅಮೀರಖಾನನ ಅಕ್ಕ ಅಂದೇಟಿಗೆ ಚೊಲೊ ಆದ್ಲಲ್ಲ ನಮ್ಮ ವೈನಿ." ತಮಾಷೆ ಮಾಡಿದಳು.


"ಹೊ ಹೊ ಹೊ ಹೋಗವಾಯಕ್ಕಾ ನೀ.." ಉಬ್ಬು ಹಲ್ಲಿನಡಿ ನಾಚಿಕೆಯಡಗಿಸುವ ಪ್ರಯತ್ನದಲ್ಲಿದ್ದ ಮಾದಿಯನ್ನು ನೋಡಿ ಯಾರೋ ಬ್ಲೇಡನ್ನು ಸಣ್ಣಗೆ ಮೈ ಮೇಲೆ ಎಳೆದಂತೆನಿಸಿ ಅಳು ಬರುವ ಹಾಗಾಯಿತು ನನಗೆ. ಹುಚ್ಚು ಕಳೆಯಿರುವ ಮೊಗದಲ್ಲಿ ಸಹಜ ಲಜ್ಜೆಯ ಬಣ್ಣ! ಲೋಕದ ಹಂಗು ತನಗಿಲ್ಲ ಎಂಬಂತಾಡುವ ಇವರಲ್ಲೂ ನಮ್ಮಂತಹುದೇ ಎಲ್ಲ ಭಾವ! ಆದರೆ ಎಲ್ಲದರಿಂದ ವಂಚಿತ ಜೀವ.


"ವೈನಿ ಅಂದ್ರ ನಿನಗ್ಯಾಕ ಅಷ್ಟು ಸಿಟ್ಟು?" ಮೆಲ್ಲಗೆ ಕೇಳಿದೆ. ಮಾದಿಯ ಬದಲಾಗಿ ಶೈಲಾ ವಿವರಿಸಿದಳು. ಅದರ ಒಟ್ಟು ಸಾರಾಂಶ ಇಷ್ಟು. ಮಾದಿಯ ಅಣ್ಣನದು ವಕೀಲಿ ವೃತ್ತಿ. ಅವನ ಓದು ಮುಗಿಯುವಷ್ಟರಲ್ಲಿ ತಂದೆ ತೀರಿ ಹೋದದ್ದರಿಂದ ಮನೆ ಜವಾಬ್ದಾರಿ ಅವನ ಹೆಗಲೇರಿತು. ಮಾದಿಯ ಅರೆಹುಚ್ಚು ವಂಶಾವಳಿಯದಿರಬಹುದು, ಇಲ್ಲವೆ ಅಂಥವಳಿರುವ ಮನೆಗೆ ಹೆಣ್ಣು ಕೊಟ್ಟರೆ ತಮ್ಮ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಗಳಿಂದ ಮಾದಿಯ ಅಣ್ಣನಿಗೆ ಹೆಣ್ಣು ಸಿಗುವುದು ದುಸ್ತರವಾಯಿತು. ಮಾದಿಯ ಅಕ್ಕ ಮಾದಿಯನ್ನು ತನ್ನ ಮನೆಯಲ್ಲಿರಿಸಿಕೊಂಡು, ಅವಳ ವಿಷಯ ಹೆಣ್ಣು ಕೊಡುವವರಿಗೆ ಗೊತ್ತಾಗದಂತೆ ಎಚ್ಚರವಹಿಸಿ ಒಂದೆಡೆ ಸಂಬಂಧ ಕುದುರಿಸಿ ತಮ್ಮನ ಮದುವೆ ಮಾಡಿದಳು. ಶ್ರೀಮಂತ ಮನೆತನದ, ಪದವಿಧರೆ  ಹುಡುಗಿ ಮದುವೆಯಾಗಿ ಗಂಡನ ಮನೆಯಲ್ಲಿ ನಡೆಯತೊಡಗಿದ ಮೇಲೆ, ಮಾದಿಯನ್ನು ಹಿಡಿಯುವುದು ತನ್ನಿಂದ ಅಸಾಧ್ಯ ಎಂದು ಹೇಳಿ ತಮ್ಮನಿಗೆ ಮಾದಿಯನ್ನು ಒಪ್ಪಿಸಿ ಹೋಗಿದ್ದಳು ಮಾದಿಯ ಅಕ್ಕ. ಮೊದ ಮೊದಲು ಕರುಣೆಯಿಂದ, ಸಹನೆಯಿಂದಲೇ ನೋಡಿಕೊಂಡ ಮಾದಿಯ ಅತ್ತಿಗೆ ಮಾದಿ ಕೆರಳಿದಾಗ ಅರಚುವುದು, ಕೈಯಲ್ಲಿ ಸಿಕ್ಕಿದ್ದನ್ನೆ ತೆಗೆದುಕೊಂಡು ಹೊಡೆಯುವುದು, ನಡುಮನೆಯಲ್ಲೆ ಲಂಗ ಒದ್ದೆ ಮಾಡಿಕೊಳ್ಳುವುದನ್ನು ಸಹಿಸಲಾಗದೆ ಹಗ್ಗದಿಂದ ಬಿಗಿದು ಕೋಣೆಯಲ್ಲಿ ಕೂಡಿ ಹಾಕುವುದು, ಪೆಟ್ಟು ತಿಂದ ನೋವಿನಲ್ಲಿ ನಾಲ್ಕು ಬಾರಿಸುವುದು, ಸಿಟ್ಟಿನಿಂದ ಬಯ್ಯುವುದು ಮಾಡತೊಡಗಿದಳು. ಎಲ್ಲವನ್ನೂ ಸುಮ್ಮನೆ ಸಹಿಸಲು ಅವಳೇನು ಕಲ್ಲೆ? ಆದರೆ ಮಾದಿಗೆ ಹೊಟ್ಟೆ ಬಟ್ಟೆಗೆ ಎಂದೂ ಕಡಿಮೆ ಮಾಡಿದವಳಲ್ಲ. ಬಿಸಿಬಿಸಿ ಚಹಾ ಕುಡಿಯುವಾಗ ಮೈಮೇಲೆ ಚಲ್ಲಿಕೊಂಡ ಪ್ರಸಂಗಗಳಿಂದಾಗಿ ಚಹಾ ಕೊಡುವುದನ್ನು ಮಾತ್ರ ನಿಲ್ಲಿಸಿದ ಅತ್ತಿಗೆ ಮಾದಿಗೆ ರಾಕ್ಷಸಿಯಂತೆ ಕಾಣತೊಡಗಿದಳು. ಜೊತೆಗೆ ಹೊಡೆತ, ಬಡೆತ, ಜಗಳ ಎಲ್ಲ ಸೇರಿ ವೈನಿ ಜಾತಿಯನ್ನೆ ಮಾದಿ ದ್ವೇಷಿಸುವಂತಾಗಿ ಹೋಗಿತ್ತು.
"ಹಂಗಾರ ಇಕಿಗಿ ಜಳಕ, ತಲಿ ಬಾಚೂದು ಯಾರ ಮಾಡ್ತಾರ? ಇವರವ್ವೇನು?" ಕೇಳಿದೆ. 
"ಇಲ್ಲ, ಇವ್ರ ವೈನೀನ ಎಲ್ಲಾ ಮಾಡೂದು. ಇವ್ರವ್ವ ಇಕಿ ಹುಟ್ಟಿದಾಗs ಸತ್ತೋದ್ಲಂತ. ಆದ್ರ ಇದಕ್ಕs ಸೊಕ್ಕ ಭಾಳ. ತಲಿ ಸುದ್ದ ಇದ್ರ ಸುಮ್ನ ಕುಂತು ಎಲ್ಲಾ ಮಾಡಸ್ಕೊಂಡು ಹಿಂಗ ಹಸsನಾಗಿ ಇರ್ತೈತಿ. ಇಲ್ಲಾಂದ್ರ ಮಗ್ಗಲಕ ಕುಂದ್ರಾಕ ಆಗೂದಿಲ್ಲ ಅಷ್ಟ ಹೊಲಸ ಇರ್ತೈತಿ ಖೋಡಿ". ಶೈಲಾಳ ಮಾತಲ್ಲಿ ಆಪಾದನೆಯೊಂದಿಗೆ ಆಪ್ತತೆಯೂ ಬೆರೆತಂತೆನಿಸಿತು ನನಗೆ. ನನ್ನ ಹುಟ್ಟೂರು,ಕೊಟ್ಟೂರು ಒಂದೇ ಆಗಿದ್ದರಿಂದ ಮಾದಿ ಅಲ್ಲೂ ಗೊತ್ತು, ಇಲ್ಲೂ ಗೊತ್ತು.. ಆದರೆ ನನ್ನ ಗಂಡನ ಮನೆಗೆ ಮಾದಿಯ ಮನೆ ಹತ್ತಿರವಾದ್ದರಿಂದ ಮಾದಿ ಇಲ್ಲಿ ಎಲ್ಲರಿಗೂ ಮುಖತಃ ಪರಿಚಿತೆ.


 "ಯ ಯಯಕ್ಕಾ, ಚಾ ಕೊ ಕೊಡ್ತಿಯಾ ಇಲ್ಲೊ ಹೇಳು", ಮೂಗರಳಿಸುತ್ತಾ ಕೇಳಿದ ಮಾದಿಯನ್ನು ನೋಡಿದ ನನಗೆ ಅವಳ ಹುಚ್ಚು ಕೆರಳ ಹತ್ತಿದೆಯೊ ಎಂಬ ಅನುಮಾನ.

"ನೀ ಒಂದ ಹಾಡ ಹಾಡು. ಅಂದ್ರ ಕೊಡ್ತೀನಿ." ಶೈಲಾ ಹೇಳಿದಾಗ, "ನೀ ನೀ ನೀ ಚ್ಚಾ ತಂದು ಇಲ್ಲಿಡು ಅಂತಂತಂದ್ರsನ ನಾ ಹಾಡಾಕಿ. ಇಲ್ಲಿಕ್ಕಂದ್ರ ನಾ ಒಲ್ಲೆ" ಎಂಬ ಶರತ್ತಿಟ್ಟಳು ಮಾದಿ. ಶೈಲಾ ಚಹಾ ತಂದಾಗ, " ಯಾಯಿರೆ ಯಾಯಿರೆ ಜೋರ್ ಲಗಾಕೆ ನಾಚೇರೆ...." ಸ್ವಲ್ಪ ಹೊತ್ತು ಗೊಗ್ಗರ  ಧ್ವನಿಯಲ್ಲಿ ಹಾಡಿದಂತೆ ಮಾಡಿದವಳು ಗಬಕ್ಕನೆ ಚಹಾದ ಕಪ್ಪನ್ನು ತೆಗೆದುಕೊಂಡು ಕುಡಿಯತೊಡಗಿದಳು. ಸೊರ್ರ್ರssss ಎಂಬ ಅವಳ ಚಹಾ ಕುಡಿಯುವಿಕೆ ನೋಡಿ ನಾನು ಮುಖ ಸಿಂಡರಿಸಿದರೆ, ಶೈಲಾ, "ಹಂಗ್ಯಾಕ ಎಮ್ಮಿ ಮುಸರಿ ಕುಡಧಂಗ ಕುಡೀತಿಯಲೇ" ಎಂದು ನಗ ತೊಡಗಿದಳು. ಅದು ಬೇರೆ ಯಾರಿಗೋ ಹೇಳಿದ್ದು ಎಂಬಂತೆ ಚಹಾ ಆಸ್ವಾದಿಸತೊಡಗಿದ್ದಳು ಮಾದಿ.


ಆಗ ತಾನೇ ಕಾಲೇಜಿನಿಂದ ಬಂದ ನನ್ನ ಸಣ್ಣ ನಾದಿನಿ ಆರತಿ, ‘ಹಾಯ್ ಮಾದಿ’ ಎಂದಾಗ ಅವಕಾಶ ಸಿಕ್ಕಿದರೆ ಎಲ್ಲರೂ ಒಂದು ಕೈ ತಮಾಷೆ ನೋಡೋಣ ಎನ್ನುವವರೆ ಎಂದು ಮಾದಿಯ ಬಗ್ಗೆ ಕರುಣೆ ಒಸರುತ್ತಿದ್ದಾಗಲೆ, "ಹಾಯ್ ಆರ್ತೆಕ್ಕಾ ಹೌ ಹಾರಿ?" ಮಾದಿಯ ಉತ್ತರ ಕೇಳಿ ನಿಂತವರ ಕಾಲಬುಡದ ಚಾಪೆಯನ್ನು ಕಸಕ್ಕನೆ ಎಳೆದುಕೊಂಡಂತಾಗಿ, ನಂತರ ನಕ್ಕೂ ನಕ್ಕೂ ಸುಸ್ತಾಯಿತು. ‘HOW ARE YOU' ಅವಳ ಬಾಯಲ್ಲಿ ‘ಹೌಹಾರಿ’ಯಾಗಿ ನಾನೂ ಕ್ಷಣ ಹೊತ್ತು ಹೌಹಾರಿದ್ದು. ಇವಳಿಗೆ ಈ ಪರಿ ಇಂಗ್ಲೀಷ್ ಕಲಿಸಿದ ಪುಣ್ಯಾತ್ಮರ್ಯಾರೊ ಕರೆದು ಸತ್ಕಾರ ಮಾಡಬೇಕೆಂಬ ಕುಬುದ್ದಿ ಮಿಸುಗಿತು. ಹಿಂದೇನೆ ಇಂಗ್ಲೀಷ್ ಕಲಿತ ಮೂಲ ಹೊಳೆದು.......


"ಬಬಬರ್ತಿನಕ್ಕಾ, ನಿನಿನಿನಗ ಚಚೊಲೋ ಗಂಡ ಸಿಗಲಿ", ಶೈಲಾಳನ್ನು ಹಾರೈಸಿ ಹೊರಡಲನುವಾದ ಮಾದಿಗೆ, "ಮತ್ತ ನಿನ್ನ ಮದವಿ ಯಾವಾಗ ಮಾದಿ?" ಆರತಿ ಕೆಣಕಿದಾಗ, ಒಂದು ಕ್ಷಣ ನನ್ನನ್ನು ದಿಟ್ಟಿಸಿದವಳು, ನಾನು ಸುಮ್ಮನೆ ಅವಳನ್ನು ನಿಟ್ಟಿಸುವುದು ನೋಡಿ ಸ್ವಲ್ಪ ಸುಮ್ಮನಿದ್ದು ಇದ್ದಕ್ಕಿದ್ದಂತೆ, "ಮಮದವಿ ಅಂತ ಮದವಿ. ಇವಕ್ಕ ಬ್ಯಾಬ್ಯಾಬ್ಯಾರೆ ಕೆಲಸಿಲ್ಲ. ಮಮಮಮದವಿ ಅಂತ ಮದವಿ! ಹಾಟ್ಯಾಗೋಳು ಮದವ್ಯಾಗಂದ್ರ......." ಗೊಣಗುತ್ತಾ ಜೀಕುವ ನಡಿಗೆಯಲ್ಲಿ ದಾರಿ ಹಿಡಿದಳು. ಅವಳು ‘ಹಾಟ್ಯಾಗೋಳು’ ಅಂದದ್ದು ಇಂಜಿನಿಯರಿಂಗ್ ಸ್ಟೂಡಂಟ್ಸಿಗಿರಬಹುದೆ ಎಂದು ಯೋಚಿಸುತ್ತಾ ಅವಳು ತನಗೆ ತಾನೇ ಮಾತಾಡಿಕೊಳ್ಳುತ್ತ ಹೋಗುವುದನ್ನೆ ನೋಡುತ್ತಾ ನಿಂತೆ. ಆದರೂ ಮದುವೆ ಅಂದ ತಕ್ಷಣ ಮಾದಿ ನನ್ನನ್ನೇ ದಿಟ್ಟಿಸಿದ್ದ್ಯಾಕೆ? ಆ ದಿಟ್ಟಿಯಲ್ಲಿ ಏನಿತ್ತು?


ಊರಿನಿಂದ ಹೊರಟು ಮುಂಬೈಗೆ ರೈಲು ಹಿಡಿಯುವಾಗ ನನ್ನ ತಲೆ ತುಂಬಾ ನವ್ಯ ಧಾಟಿಯ ಚಿತ್ರವೊಂದು ಮೈತಳೆದು ನನ್ನನ್ನೇ ಆವರಿಸತೊಡಗಿ, ಮಾದಿಯ ಮನಸ್ಸಿನಲ್ಲಿರುವುದಾದರೂ ಏನು? ಈ ರೀತಿ ಹುಚ್ಚು ಕೆರಳುವ ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಶೈಲಾಳ ಮದುವೆಗೆಂದು ಊರಿಗೆ ಹೋಗುವ ತನಕ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಆಘಾತವನ್ನುಂಟು ಮಾಡುವ ಸತ್ಯ ಸಂಗತಿ ನನ್ನೆದುರಿಗಿತ್ತು.


ಮಾದಿಯಿಂದಾಗಿ ಸರಸಕ್ಕೂ ಆಸ್ಪದವಿಲ್ಲದೆ ಅವಕಾಶಕ್ಕಾಗಿ ಹೊಂಚು ಹಾಕುವಂತಾಗಿದ್ದ ಮಾದಿಯ ಅಣ್ಣ, ಅತ್ತಿಗೆ ಅದೊಂದು ದಿನ ಮಾದಿ ಒಳಕೋಣೆಯಲ್ಲಿ ನಿದ್ರಿಸುತ್ತಿದ್ದುದನ್ನು ಕಂಡವರು ಖುಷಿಯಿಂದ ರಮಿಸತೊಡಗಿದ್ದರು. ನಿದ್ರೆಯ ಮಧ್ಯ ಎಚ್ಚರಗೊಂಡ ಮಾದಿ ಕೋಣೆಯಿಂದ ಆಚೆ ಬಂದವಳು ಅಣ್ಣ ಅತ್ತಿಗೆ ಒಟ್ಟಿಗಿರುವುದನ್ನು ಕಂಡು ಉದ್ರೇಕಗೊಂಡು, ಕೆರಳಿ ಅರೆಯುವ ಕಲ್ಲನ್ನು ತೆಗೆದುಕೊಂಡು ಅವಡುಗಚ್ಚಿ "ನಾ ಕೇಳಿದ್ರ ಹೊಡೀತಿ, ಖೋಲ್ಯಾಗ ಕೂಡಿ ಹಾಕ್ತಿ. ಈ ರಂಡಿಗಾದ್ರ....." ಎನ್ನುತ್ತಾ ಅವರಿಬ್ಬರ ಮೇಲೆ ಮುಗಿಬಿದ್ದು, ಮೊದಲು ತನ್ನಣ್ಣನ ತಲೆಗೆ ಜೋರಾಗಿ ಹೊಡೆದು ಅವ ಮೂರ್ಛೆ ಬಂದು ನೆಲಕ್ಕೆ ಬೀಳುತ್ತಲೇ ಅದರರಿವಿರದಂತೆ ಅತ್ತಿಗೆಯ ಮೇಲೆರಗಿ ಅವಳ ತಲೆಗೂದಲು ಹಿಡಿದು, ನೆಲಕ್ಕಾನಿಸಿ ಕಲ್ಲಿನಿಂದ ಕುಟ್ಟಿ, ಕುಟ್ಟಿ. ಕುಟ್ಟಿ......


ಅವಳಣ್ಣ ಆಸ್ಪತ್ರೆಯಲ್ಲೀಗ ಚೇತರಿಸಿಕೊಳ್ಳುತ್ತಿದ್ದಾನಂತೆ. ಮಾದಿ ಈಗ ಧಾರವಾಡದ ಹುಚ್ಚಾಸ್ಪತ್ರೆಯಲ್ಲಿ. ಅವಳೀಗ ನಗುವುದಿಲ್ಲ, ಅಳುವುದಿಲ್ಲ, ಮಾತಾಡುವುದಿಲ್ಲ, ಕಿರುಚುವುದಿಲ್ಲ. ಮಾಧುರಿ ದಿಕ್ಷಿತ್ ಎಂದರೆ ಓಗೊಡುವುದೂ ಇಲ್ಲ.
************************************************************************************

(2004ರಲ್ಲಿ ಮುಂಬಯಿ ಕನ್ನಡ ಲೇಖಕಿಯರ ಬಳಗ ‘ಸೃಜನಾ’ದಿಂದ ಹೊರ ಬಂದ ಕಥಾ ಸಂಕಲನ ‘ಕಥೆ ಹೇಳೇ...’ಯಲ್ಲಿ ಪ್ರಕಟಗೊಂಡ,ನಾನು ಬರೆದ ಕತೆ ಇದು.)