Monday, January 5, 2009

ಕನಸ ರೆಕ್ಕೆಗೆ ವಾಸ್ತವದ ಪುಕ್ಕ...


ನಿನ್ನೆಯ ದಿನ ನ್ನ ಪಾಲಿನ ಅವಿಸ್ಮರಣೀಯ ದಿನ. ಇವತ್ತು ಕುಳಿತು ಯೋಚಿಸಿದರೆ ಕನಸೇನೋ ಅನಿಸುತಿದೆ.. ನನ್ನ ಬಾಳಲ್ಲಿ ಇಂಥದ್ದೊಂದು ದಿನ ಬಂದೀತೆಂದು ಎಣಿಸಿರಲೂ ಇಲ್ಲ ನಾನು!! ಕಂಡ ಕನಸುಗಳೆಲ್ಲ ನನಸಾಗಲು ಸಾಧ್ಯವೇ? ಸಾಧ್ಯವೇ?? ಸಾಧ್ಯವಿಲ್ಲ ಅನ್ನುವ ನಿರ್ಣಯಕ್ಕೆ ಬಂದು ಆಗಲೇ ಹಲವಾರು ವರ್ಷಗಳಾಗಿವೆ ಅನ್ನುವಷ್ಟರಲ್ಲೇ "ಯಾಕೆ ಸಾಧ್ಯವಿಲ್ಲ ಸಾಧ್ಯ !!" ಅನ್ನುವಂತಿತ್ತು ನಿನ್ನೆಯ ದಿನ. ಆದರೆ ನಾ ಕಂಡ ಕನಸಿಗೂ ಮೀರಿದ ವಾಸ್ತವ ಘಟಿಸಿದ್ದು ನನ್ನ ನಿನ್ನೆಯ ದಿನವನ್ನು ಅವಿಸ್ಮರಣೀಯವಾಗಿಸಿತು.
  ನನ್ನ ಕನಸೋ ಕೇವಲ ಒಂದು ದರ್ಶನ ಭಾಗ್ಯಕ್ಕೆ ಸೀಮಿತವಾಗಿತ್ತು. ಅದು ಬಾಲ್ಯದಿಂದಲೂ ಕಂಡ ಕನಸು.೧೨-೧೩ ವರ್ಷದ ಹುಡುಗಿಯೊಬ್ಬಳು ಕಾಣುತ್ತಿದ್ದ ಕನಸದು. ಅಲ್ಲಿ ಕೇವಲ ಕನಸಿತ್ತು, ಛಲವಿರಲಿಲ್ಲ. ಕನಸು ನನಸಾಗಲಿ ಅನ್ನೋ ಬಯಕೆ ಇತ್ತು, ಬಯಕೆಗೆ ಬಲವಿರಲಿಲ್ಲ. ಕನಸು ಸಾಮಾನ್ಯರೆಲ್ಲರೂ ಕಾಣುವಂಥ ಕನಸಾಗಿತ್ತು, ಅಪರೂಪದ ಕನಸಾಗಿರಲಿಲ್ಲ. ಅದು... ಕನ್ನಡದ ಮೇರು ನಟ ವಿಷ್ಣುವರ್ಧನ್ ಮತ್ತು ಭಾರತಿ ಅವರನ್ನು ಪರದೆಯಾಚೆಗೆಸನಿಹದಿಂದ ನೋಡಬೇಕೆನ್ನುವ ಕನಸು
   "ಹೇಗೆ ನೋಡುವುದು?.. ಅದೇನು ಸುಲಭ ಸಾಧ್ಯವೇ?! ಅಸಾಧ್ಯದ ಮಾತು! ಬೆಂಗಳೂರಿನಲ್ಲಿರುವವರು ಅವರು! ಬೆಂಗಳೂರೆಂದರೆ ಸಾಮಾನ್ಯವಾಯಿತೆ? ಅಷ್ಟು ದೊಡ್ಡ ಊರಲ್ಲಿ ಅವರನ್ನು ಹುಡುಕುವುದು ಹೇಗೆ? ಅರೆ! ವಿಷ್ಣುವರ್ಧನ್ ಅಂಥ ದೊಡ್ಡ ಹೀರೊ ಮನೆ ಯಾರಿಗೆ ಗೊತ್ತಿರೊಲ್ಲ? ಯಾರನ್ನಾದರು ಕೇಳಿದ್ರಾಯ್ತು ವಿಷ್ಣುವರ್ಧನ್ ಅವರ ಮನೆಯನ್ನು ತೋರಿಸಿಯೇ ತೋರಿಸ್ತಾರೆ. ಅವರ ಮನೆ ಗೇಟ್ ಹತ್ರ ನಿಂತ್ರಾಯ್ತು ಅವರಿಬ್ಬರೂ ಆಚೆ ಹೋಗುವಾಗ ಕಾಣಿಸಿಯೇ ಕಾಣಿಸ್ತಾರೆ! ಆದ್ರೆ... ಅವ್ರು ಕಾರಲ್ಲಿ ಕುಳಿತು ಕಾರಿನ ವಿಂಡೋ ಗ್ಲಾಸ್ ಹಾಕಿದ್ದರೆ ಕಾಣ್ಸೋದಿಲ್ವಲ್ಲ, ಏನ್ ಮಾಡೋದು?... ಹಾಂ!! ಅವರ ಮನೇಲಿ ಕೆಲಸದವಳಾಗಿ ಸೇರ್ಕೊಂಡು ಬಿಡೋದು!! ಆಗ ಅವರನ್ನ ನಿತ್ಯ ನೋಡಬಹುದು, ಮಾತಾಡಬಹುದು!! " ಹೀಗೆ ನನ್ನ ಹಗಲುಗನಸು ರೆಕ್ಕೆ ಕಟ್ಟಿಕೊಂಡು ಹಾರಲು ಅನುವಾಗುತ್ತಿರುವಾಗಲೇ,
 "ಹಂಗಿದ್ರ ಮನ್ಯಾಗಿರೋ ಮೂರೂ ಮಂದಿ ಕೆಲಸದವ್ರನ್ನ ಬಿಡಿಸಿಬಿಡ್ತೀವಿ, ಇನ್ ಮ್ಯಾಲೆ ಮನಿ ಕೆಲ್ಸಾ ಎಲ್ಲಾ ನೀನ ಮಾಡು " ಅಂತ ಎಲ್ಲಿ ಅಪ್ಪ ಅಮ್ಮ ಅಂದುಬಿಡ್ತಾರೋ ಅನಿಸಿ ಹೆದರಿಕೆಯಾಗಿ ರೆಕ್ಕೆಗಳು ಹಾರಲು ಬಳಕೆಯಾಗದೆ ನನ್ನ ಕನಸಿಗೆ ಬೆಚ್ಚನೆಯ ಹೊದಿಕೆಯಾಗುತ್ತಿದ್ದವು. ನಿಧಾನವಾಗಿ ಕನಸಿಗೂ ವಾಸ್ತವಕ್ಕೂ ಇರುವ ವ್ಯತ್ಯಾಸ ಗೊತ್ತಾದರೂ, ರೆಕ್ಕೆಯೊಳಗಿನ ಬೆಚ್ಚನೆಯ ಕನಸು ಮುದ ನೀಡುತ್ತಿತ್ತು.

ನಿನ್ನೆಯ ದಿನ... ಸ್ವತಃ ವಿಷ್ಣುವರ್ಧನ್ ಮತ್ತು ಭಾರತಿ ದಂಪತಿಗಳು ನಮ್ಮನ್ನೆಲ್ಲ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು! ನಮ್ಮನ್ನೆಲ್ಲ ಅಂದರೆ ‘ಮುಕ್ತ ಮುಕ್ತ’ ತಂಡದ ನಿರ್ದೇಶಕರನ್ನು, ನಿರ್ಮಾಪಕರನ್ನು ಕಲಾವಿದರನ್ನು ಮತ್ತು ತಂತ್ರಜ್ಞರನ್ನು.

ಒಂದು ತಿಂಗಳ ಹಿಂದೆ 'ಮುಕ್ತ ಮುಕ್ತ' ಧಾರಾವಾಹಿಯ ನಿರ್ದೇಶಕರಾದ ಶ್ರೀ. ಟಿ ಎನ್ ಸೀತಾರಾಂ ಸರ್, ವಿಷ್ಣುವರ್ಧನ್ ಅವರನ್ನು ತಮ್ಮ ಮಗನ ಮದುವೆಗೆ ಕರೆಯಲು ಹೋಗಿ ಭೇಟಿಯಾದಾಗ, ವಿಷ್ಣುವರ್ಧನ್ ಅವರು ತಾವು ತಪ್ಪದೆ ಧಾರಾವಾಹಿಯನ್ನು ನೋಡುತ್ತಿರುವುದಾಗಿ ಹೇಳಿದರಂತೆ. ಜೊತೆಗೆ 'ಮಂಗಳತ್ತೆ' ಪಾತ್ರ ತುಂಬಾ ಇಷ್ಟವಾಗುತ್ತೆ, ಚೆನ್ನಾಗಿ ಮಾಡ್ತಾರಾಕೆ, ನಾನಾಕೆಯ ದೊಡ್ಡ ಫ್ಯಾನ್ ಅಂದ್ರಂತೆ. ಅದೂ ಅಲ್ಲದೇ, "ನಿಮ್ಮ ಮಗನ ಮದುವೆಗೆ ಮಂಗಳತ್ತೆ ಬರ್ತಾರೆ ಅಂತಾದ್ರೆ ಮಾತ್ರ ನಾನು ಬರೋದು, ನಾನವರನ್ನು ನೋಡಬೇಕು." ಎಂದು ನಗುತ್ತಾ ಹೇಳಿದರಂತೆ.  ‘ಮಂಗಳತ್ತೆ’ ಪಾತ್ರಧಾರಿ ನಾನು!! 
ಕೇಳಿ ನನಗೆ ಹೇಗಾಗಿರಬೇಡ ನೀವೇ ಹೇಳಿ? ಅವತ್ತು ರಾತ್ರಿ ನಿದ್ದೆ ಮಂಗಮಾಯ! ಹಳೆ ಕನಸಿನ ರೆಕ್ಕೆಗೆ ಮತ್ತೆ ಜೀವ..

'ಸುದ್ಧ'(ತುಳು) ದಂತಹ ಅಪರೂಪದ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿದ ಶ್ರೀ.ರಾಮಚಂದ್ರ ಪಿ ಎನ್ ಆವರ ಇನ್ನೊಂದು ಕಲಾತ್ಮಕ ಚಿತ್ರ, ‘ಪುಟಾಣಿ ಪಾರ್ಟಿ’ಯ ಶೂಟಿಂಗ್ ಇತ್ತಾದ್ದರಿಂದ ನನಗೆ ಸೀತಾರಾಂ ಸರ್ ಅವರ ಮಗನ ಮದುವೆಗೆ ಹೋಗಲಾಗಲಿಲ್ಲ. ಶೂಟಿಂಗ್ ಮುಗಿಸಿ ಧಾರವಾಡದಿಂದ ಮರಳಿ ಬಂದವಳಿಗೆ ಗೊತ್ತಾದುದು ನನ್ನ ಕನಸಿನ ರೆಕ್ಕೆಗೆ ವಾಸ್ತವದ ಪುಕ್ಕ
ವಿಷ್ಣು ಸರ್ ನಮಗೆಲ್ಲ ಪಾರ್ಟಿ ಕೊಡ್ತಿದಾರೆ!! ಮತ್ತು ಆ ಪಾರ್ಟಿ ನನಗಾಗಿ!!!  
ನನಗಾಗಿ ವಿಷ್ಣು ಸರ್ ತಮ್ಮನೇಲಿ ಇಡೀ ತಂಡಕ್ಕೆ ಪಾರ್ಟಿ ಕೊಡ್ತಿದ್ದಾರೆ! ಮೊದ ಮೊದಲು ನಂಬಿರಲಿಲ್ಲ ನಾನು! ತಮಾಷೆ ಮಾಡ್ತಿದಾರೆ ಸೆಟ್ಟಲ್ಲಿ ಎಂದೇ ಭಾವಿಸಿದ್ದೆ. ಸರಳ ಮನಸಿನ, ಸುಳ್ಳು ಹೇಳಲು ಗೊತ್ತಿಲ್ಲದ ಕಿಟ್ಟಿ ಸರ್ ಹೇಳಿದಾಗಲೇ ನಂಬಿಕೆ ಬಂದಿದ್ದು ನನಗೆ!
ನಿನ್ನೆ ಸಂಜೆ ವಿಷ್ಣುವರ್ಧನ್ ಆವರ ಮನೆಗೆ ಹೋಗಲು ಬುದ್ದಿ ಸಂಭ್ರಮ ಪಡುತ್ತಿತ್ತಾದರೂ ಮನಸಿಗೆ ಎಂಥದೋ ಮುಜುಗರ.. ಅಂಥ ದೊಡ್ದವರೆದುರಿಗೆ ಹೋಗಿ ನಿಲ್ಲುವುದು ಅಂದರೆ ಸಂಕೋಚ.. ನನ್ನ ಜೊತೆಯಲ್ಲಿರುವ ಕೆಲವರದೂ ನನ್ನಂತದೆ ಮನಸ್ಥಿತಿ!! ಹೋದೆವು. ಖುದ್ದು ವಿಷ್ಣು ಸರ್ ಬಂದು ನಮ್ಮನ್ನೆಲ್ಲ ಸ್ವಾಗತಿಸಿದರು.  ಟಿ ಎನ್ ಸೀತಾರಾಂ ಸರ್ ನಮ್ಮನ್ನೆಲ್ಲಾ ಪರಿಚಯಿಸಿದರು. ನಾಲ್ಕು ಹೆಜ್ಜೆ ಮುಂದೆ ಬರುವಷ್ಟರಲ್ಲಿ ಭಾರತಿ ಮೇಡಂ ಬಂದು ನಮ್ಮನ್ನೆಲ್ಲಾ ಇದಿರುಗೊಂಡರು. ಮನಸು ಸಂಭ್ರಮದ ಸಾಗರ. ನಾನು ಅವರಿಬ್ಬರನ್ನು ಮುಖಃತ ಭೆಟ್ಟಿಯಾಗುತ್ತಿದ್ದೇನೆ !! ಮತ್ತು ಅವರಿಬ್ಬರೂ ತುಂಬು ಆತ್ಮೀಯತೆಯಿಂದ ನನ್ನನ್ನು ಮಾತನಾಡಿಸುತ್ತಿದ್ದಾರೆ!!! ಹುರ್ರೇ!!ನನ್ನ ಕನಸು ನನಸಾಗಿಬಿಟ್ಟಿತು!! 
ದಂಪತಿಗಳಿಬ್ಬರೂ ನನ್ನ ನಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವಿಷ್ಣು ಸರ್ ಹೇಳಿದ ಮಾತೊಂದು ಸದಾ ವಾಸ್ತವವನ್ನು ನೆನಪಿಸುತ್ತಾ ನನ್ನ ಜೊತೆಗಿರುತ್ತದೆ. ನನ್ನ ಪಾತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಮೇಲೆ ಅವರು ಹೇಳಿದ ಮಾತಿದು, "ನಾನು ಹೊಗಳ್ತಿರೋದು ವ್ಯಕ್ತಿಯನ್ನಲ್ಲ, ನಟನೆಯನ್ನು." ಒಂದು ಮಾತು ಸಾಕಲ್ಲವೇ ಅಹಂಕಾರ ಬರದಂತೆ, ಮನುಷ್ಯನನ್ನು ಸಹಜವಾಗಿರುವಂತೆ ನೋಡಿಕೊಳ್ಳಲು? ನನ್ನದೂ ಅದೇ ನಿಲುವಾದ್ದರಿಂದ ಈ ಮಾತು ತುಂಬಾ ಆಪ್ತವೆನಿಸಿತು.
ಹೇಳಲು ಇನ್ನೂ ಎಷ್ಟೊಂದು ಇದೆಯಾದರೂ ಭಾವನೆಗಳಿದಿರು ಭಾಷೆ ಸೋಲುತ್ತಿರುವ ಅನುಭವವಾಗುತ್ತಿದೆ ಏನು ಮಾಡಲಿ...

 ಪಾರ್ಟಿ ಮುಗಿದ ಮೇಲೆ ಹೋಗಿಬರುವೆನೆಂದು ಭಾರತಿ ಮೇಡಂಗೆ ಹೇಳಿ, ಅಲ್ಲಿಂದ ವಿಷ್ಣು ಸರ್ ಗೆ ಕೃತಜ್ಞತೆ ತಿಳಿಸಲು ಅವರೆದುರು ಹೋಗಿ ನಿಂತೆ. ನಾನಾಗ ಆಡಿದ್ದು ಒಂದೇ ಸಾಲು, ‘ಥ್ಯಾಂಕ್ಸ್ ಫಾರ್ ದಿ ಪಾರ್ಟಿ ಸರ್’. ನಂತರದ ಹತ್ತು ನಿಮಿಷ ವಿಷ್ಣು ಸರ್ ಅವರಿಂದ ಹೊಗಳಿಕೆಯ ಸುರಿಮಳೆ!! ನನಗೋ ತಲೆ ಎತ್ತಲೂ ಆಗದಂಥ ಮುಜುಗರ, ಸಂಕೋಚ. ಆ ಹೊಗಳಿಕೆಗೆ ಯಾವ ಮಟ್ಟಿಗೆ ನಾನು ಹಿಡಿಯಷ್ಟಾಗಿಬಿಟ್ಟೆದ್ದೆ ಎಂದರೆ...... ವಿಷ್ಣುವರ್ಧನ್ ಅವರ ಪಕ್ಕದಲ್ಲಿ ನಿಂತು ಅವರ ಮಾತು ಮತ್ತು ನನ್ನ ಅವಸ್ಥೆಯನ್ನು ಗಮನಿಸುತ್ತಿದ್ದ ಅನಂತ್‍ನಾಗ್ ಅವರ ಮುಖದಲ್ಲೊಂದು, ನನ್ನ ಚಡಪಡಿಕೆ ಅರ್ಥವಾಗಿದೆ ಎನ್ನುವಂಥ ತುಂಟ ನಗೆ. ವಿಷ್ಣುವರ್ಧನ್ ಅವರಿಂದ ಬೀಳ್ಕೊಂಡು ಅವರ ಮನೆಯ ಗೇಟಿನಿಂದ ಆಚೆ ಬಂದಾಗ ಯುಗವೊಂದು ಕಳೆದ ಅನುಭೂತಿ. (ತುಂಬಾ ತಡವಾಗಿ ಇದಿಷ್ಟನ್ನು ಈ ಲೇಖನದಲ್ಲಿ ಅಳವಡಿಸುತ್ತಿರುವೆ. ಅದಕ್ಕೆ ಕಾರಣ, ವಿಷ್ಣುವರ್ಧನ್ ಅವರು ನನ್ನನ್ನು ಅಷ್ಟೋಂದು ಹೊಗಳಿದರು ಎಂದು ಎಲ್ಲರೆದುರು ಹೇಳುವುದು ಏನು ಚೆಂದ?! ಎನ್ನುವ ಸಂಕೋಚ. ಆದರೆ ಹಿರಿಯರೊಬ್ಬರು, `ನಿಮಗಾಗಿ ಬೇಡ, ವಿಷ್ಣುವರ್ಧನ್ ಅವರ ಮನಸಿನ ಹಿರಿತನಕ್ಕಾದರೂ ನೀವಿದನ್ನು ಬರೆಯಲೇಬೇಕು, ಇಲ್ಲವಾದಲ್ಲಿ ಆ ಲೇಖನ ಅಪೂರ್ಣ' ಎಂದು ಗದರಿಸಿ ಹೇಳಿದ್ದರಿಂದ ಇದನ್ನೆಲ್ಲ ಇಂದು ಧೈರ್ಯ ಮಾಡಿ ಬರೆದಿರುವೆ. [19 aug 2013] )

ತಮ್ಮ ಧಾರಾವಾಹಿಯಲ್ಲಿ 'ಮಂಗಳತ್ತೆ' ಯಂಥ ಗಟ್ಟಿ ಪಾತ್ರ ಕೊಟ್ಟು ನನ್ನ ಸುದಿನಕ್ಕೆ ಕಾರಣರಾದ ಸೀತಾರಾಂ ಸರ್ ಗೆ ತಲೆ ಬಾಗುವೆ..ನಾನು ಮಂಗಳತ್ತೆಯಾಗಿ ಪಾತ್ರ ಪ್ರವೇಶ ಮಾಡುವಲ್ಲಿ ಎಪಿಸೋಡ್ ಡೈರೆಕ್ಟರ್ ವಿನೋದ್ ಧೋಂಡಾಳೆ ಅವರ ಸಹಕಾರ ಸಹನೆ ದೊಡ್ಡದು.
ಬಡ ಕಾರ್ಮಿಕನಿಗೆ ದೀಪಾವಳಿಯ ಸಂಭ್ರಮಕ್ಕೆ ಬೋನಸ್ ಅನ್ನೋ ಹಾಗೆ ನನ್ನ ಮೆಚ್ಚಿನ ನಾಯಕ ನಟರಾದ ಅನಂತ್ ನಾಗ್, ರಮೇಶ್ ಅರವಿಂದ್ ಬಂದಿದ್ದರು. ಬಿ ಸರೋಜಾದೇವಿ, 'ಎಡಕಲ್ಲು ಗುಡ್ಡದ ಮೇಲೆ'ಖ್ಯಾತಿಯ ಚಂದ್ರಶೇಖರ್ ಮತ್ತು ಶಿವರಾಂ, ಗಾಯತ್ರಿ ಅನಂತ್ ನಾಗ್, ಸುಂದರ್ ರಾಜ್ನಿರ್ಮಾಪಕ ಕರಿ ಸುಬ್ಬುರಮೇಶ್ ಭಟ್ನಾಗತಿಹಳ್ಳಿ ಚಂದ್ರಶೇಖರ್ಅನಿರುದ್ದ್... ಆತ್ಮೀಯ ವಾತಾವರಣ, ಅದ್ಭುತವಾದ ಊಟ, ದಿವ್ಯವಾದ ವಾದ್ಯ ಸಂಗೀತ(live), ಕುಣಿತ, ಆಹಾ!