Thursday, December 27, 2012

ಹೇಳತೇವ ಕೇಳ… « ಅವಧಿ / avadhi

ಹೇಳತೇವ ಕೇಳ… « ಅವಧಿ / avadhi



ಅಂದು ತಡರಾತ್ರಿ, ಫೇಸ್ ಬುಕ್ಕಿನಲ್ಲಿ ಕಿರಿಯ ಗೆಳತಿಯೊಬ್ಬಳು ದೆಹಲಿಯಲ್ಲಿ ನಡೆದ ಸಾಮೂಹಿಕ ಬಲಾತ್ಕಾರದ ಸುದ್ದಿ ಹೇಳಿ ಮನಸ್ಸನ್ನು ಕಲಕಿ ಹಾಕಿದ್ದಳು. ಬೆಳಗ್ಗೆ ಎಲ್ಲಾ ನ್ಯೂಸ್ ಪೇಪರುಗಳಲ್ಲೂ ಅದೇ ’ಸುದ್ದಿ’. ಆದರೆ ಇದು ಕೇವಲ ಸುದ್ದಿಯಾಗಿ ಎರಡು ದಿನಗಳ ಕಾಲ ನ್ಯೂಸ್ ಪೇಪರ್, ಟಿವಿ ಚಾನಲ್ ಗಳಲ್ಲಿ ಚರ್ಚೆಯಾಗಿ, ನೋಡಿ ನೋಡಿ ಮನಸ್ಸು ಜಡ್ಡುಗಟ್ಟಿ, ಚಾನಲ್ ಬದಲಾಯಿಸಿ… ಛೆ ಇದು ಇಷ್ಟೇನಾ? ಇಷ್ಟೇ ಆಗಬಾರದಲ್ಲವಾ…
ಹೀಗೆ ತೊಳಲಾಟದಲ್ಲಿರುವಾಗಲೇ ಫೇಸ್ ಬುಕ್ಕಿನ ಗೆಳತಿ ಜಯಲಕ್ಷ್ಮಿ ಪಾಟೀಲ್ ಏನಾದರೂ ಮಾಡಬೇಕು ಅಂತ ನಿಂತಿದ್ದರು. ಅವರ ಮನಸ್ಸಿನಲ್ಲಿದ್ದಿದ್ದು ಅಪ್ಪಟ ಪ್ರತಿಭಟನೆ.  ಹೀಗೆ ಬಂದದ್ದು ಈ ಸಂಚಿಕೆ.
ಲೇಖನ/ಆಕ್ರೋಶ/ಅನುಭವ/ಅನಿಸಿಕೆ ಬರೆದು ಕಳಿಸಿ ಅಂದಾಗ ನಾವು ಪ್ರತಿಕ್ರಿಯೆಯನ್ನು ನಿರೀಕ್ಷಿದ್ದೆವು ಆದರೆ ಈ ಮಟ್ಟದಲ್ಲಲ್ಲ.. ಎಷ್ಟು ನೋವಿನ ದನಿಗಳು, ಅತ್ಯಾಚಾರಕ್ಕೆ ಎಷ್ಟೆಲ್ಲಾ ವ್ಯಾಖ್ಯೆಗಳು, ವ್ಯಾಖ್ಯಾನಗಳು… ಓದುತ್ತಾ ಓದುತ್ತಾ ಅನ್ನಿಸಿದ್ದು, ’ಅತ್ಯಾಚಾರ ಕೇವಲ ದೈಹಿಕವಲ್ಲ, ಅತ್ಯಾಚಾರ ಕೇವಲ ಲೈಂಗಿಕ ಅತ್ಯಾಚಾರವೂ ಅಲ್ಲ’, ಇಲ್ಲಿರುವುದು ಹೆಣ್ಣು ಅನುಭವಿಸಿದ ಆ ಎಲ್ಲಾ ನೋವಿನ, ಆಕ್ರೋಶದ, ಅಸಹಾಯಕತೆಯ ದನಿ.
ಇಲ್ಲಿ ಈ ದಿನ ಪ್ರಕಟವಾಗಿರುವುದು ೧೨ ಲೇಖನಗಳು ಮಾತ್ರ. ಅದಕ್ಕೆ ಎರಡು ಕಾರಣಗಳಿವೆ, ಒಂದು ಇದು ಒಂದು ದಿನದ ಸುದ್ದಿಯಾಗಬಾರದು, ಈ ದನಿ ಒಂದು ದಿನದ ಕೂಗಾಗಬಾರದು, ಹಾಗಾಗಿ ಇದೇ ಧ್ವನಿಯ ಲೇಖನಗಳನ್ನು ದಿನಕ್ಕೊಂದರಂತೆ ಪ್ರಕಟಿಸಲಾಗುತ್ತದೆ.
ಎರಡನೆಯ ಕಾರಣ ಇವು ಯಾವನ್ನೂ ಕೇವಲ ಲೇಖನಗಳನ್ನಾಗಿ ನೋಡಿ, ಕೆಲವನ್ನು ಆಯ್ದು ಪ್ರಕಟಿಸುವುದು ನಮ್ಮಿಂದ ಸಾಧ್ಯವೇ ಇರಲಿಲ್ಲ. ಇಲ್ಲಿನ ಎಲ್ಲಾ ಧ್ವನಿಗಳೂ ಎಲ್ಲರ ಮನಸ್ಸನ್ನು ಮುಟ್ಟಬೇಕು. ಈಗ ಇದು ನಿಮ್ಮೆಲ್ಲರ ದನಿ.. ಲೇಖನ ಕಳಿಸಿ, ಬೆಂಬಲ ವ್ಯಕ್ತ ಪಡಿಸಿ, ನಮ್ಮ ಧ್ವನಿಗೆ ಧ್ವನಿ ಸೇರಿಸಿದ ಎಲ್ಲರಿಗೂ ನಮ್ಮ ನಮನ.
ಜಯಲಕ್ಷ್ಮೀ ಪಾಟೀಲ್ ಗೆಳತಿ, ಸಖಿ, ಸೋದರಿ. ಆಕೆಯ ವ್ಯಕ್ತಿತ್ವದಲ್ಲೇ ಒಂದು ಸಂವೇದನೆ ಇದೆ, ಮಿಡಿಯುವ ಗುಣ ಇದೆ, ಆಕೆ ಲೇಖಕಿ, ಕವಿ, ರಂಗಭೂಮಿ ಕಲಾವಿದೆ, ಒಂದು ತಂಡ ಕಟ್ಟಿಕೊಂಡು ನಾಟಕ ಮಾಡುತ್ತಾರೆ, ಸದಾ ಜೀವನ್ಮುಖಿ. ಆದರೆ ಆಕೆಯ ವಿಶೇಷತೆ ಇರುವುದು ಆಕೆಯ ಗ್ರಹಿಕೆಯಲ್ಲಿ, ಅದನ್ನು ಮೆಲು ಮಾತಿನಲ್ಲೇ ಮಂಡಿಸಿ ಅದಕ್ಕೊಂದು ತಾರ್ಕಿಕ ನೆಲೆ ಒದಗಿಸಿಕೊಡುವಲ್ಲಿ. ಜಯಲಕ್ಷ್ಮಿ ಪಾಟೀಲ್ ಗೆ ‘ಅವಧಿ’ಯ ಪರವಾಗಿ ಕೃತಜ್ಞತೆಗಳು.
ಎನ್ ಸಂಧ್ಯಾರಾಣಿ
ಸಂಯೋಜಕಿ, ಅವಧಿ

ಅತಿಥಿ ಸಂಪಾದಕರ

ಸಂಪಾದಕೀಯ

-ಜಯಲಕ್ಷ್ಮೀ ಪಾಟೀಲ್

ನಾವೆಲ್ಲರೂ ಈಗಾಗಲೇ ಬಣ್ಣ ಬಣ್ಣದ ಕನ್ನಡಕಗಳನ್ನು ಕೊಂಡಾಗಿದೆ. ದೌರ್ಜನ್ಯ, ದುಷ್ಟತನ, ನೋವುಗಳನ್ನಂತೂ ನಾವು ಈ ಬಣ್ಣಬಣ್ಣದ ಕನ್ನಡಕಗಳನ್ನು ಹಾಕಿಕೊಂಡು ನೋಡಿದಾಗಲೇ ನಮಗೆ ಸಮಾಧಾನ. ಆಯಾ ಸಮಯಕ್ಕೆ ತಕ್ಕಂಥ ರಾಜಕೀಯ ಕನ್ನಡಕ, ಜಾತೀಯತೆಯ ಕನ್ನಡಕ,
ಪ್ರಾಂತೀಯ ಕನ್ನಡಕ, ಭಾಷಾ ಕನ್ನಡಕ, ಹೆಣ್ಣು ಕನ್ನಡಕ, ಗಂಡು ಕನ್ನಡಕಗಳಿಲ್ಲದೆ ನಮಗೆ ಒಂದು ವಿಷಯವನ್ನು ಕೇವಲ ವಿಷಯವನ್ನಾಗಿಯಷ್ಟೇ ನೋಡಲು, ಅದಕ್ಕೆ ಸ್ಪಂದಿಸಲು ಸಾಧ್ಯವೇ ಇಲ್ಲ! ಈ ಕನ್ನಡಕಗಳಿಂದಾಗಿ ವಿಷಯ ಮಸುಕಾಗಿ ಉಳಿದೆಲ್ಲವೂ ಢಾಳಾಗಿ ಕಾಣಲು ಆರಂಭಿಸುತ್ತದೆ. ಹಾಗಾಗಬಾರದಲ್ಲವೇ?
ಮತ್ತೊಮ್ಮೆ ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಬರ್ಬರ ಘಟನೆ ದೇಶದ ಪ್ರತಿಯೊಬ್ಬ `ಮನುಷ್ಯ’ನನ್ನು ಅಲುಗಾಡಿಸಿಬಿಟ್ಟಿದೆ. ಹೆಣ್ಣುಮಕ್ಕಳೆಲ್ಲ ತಾವು ನಿತ್ಯ ಒಂದು ಆತಂಕ ಹೊತ್ತೇ ಬದುಕುವುದನ್ನು, ಮದ್ದಿಲ್ಲದ ಖಾಯಿಲೆಯೊಂದನ್ನು ವಿಧಿಯಿಲ್ಲದೆ ಅನುಭವಿಸಬೇಕಾದವರಂತೆ ರೂಢಿಸಿಕೊಂಡು, ಮೂರೂ ಹೊತ್ತೂ ಅದನ್ನು ಹೆಗಲೇರಿಸಿಕೊಂಡರೆ ಸಹಜ ಬದುಕು ಬದುಕಲು ಆಗದು ಎಂಬ ಸುಪ್ತಪ್ರಜ್ಞೆಯ ಆಜ್ಞೆಯರಿತು ನಗುನಗುತ್ತ ತಮ್ಮ ದಿನನಿತ್ಯದ ಬದುಕಿನ ಗಾಡಿ ಸಾಗಿಸುತ್ತಿರುವಾಗ, ಆಗಾಗ ಮರುಕಳಿಸುವ ಇಂಥ ಹೀನಕೃತ್ಯಗಳು, ನಮ್ಮ ಮೌನದ ಅಕಾರಣ ಸಕಾರಣಗಳನ್ನು ಏಕಕಾಲಕ್ಕೆ ಹಂಗಿಸುತ್ತವೆ! ರೊಚ್ಚಿಗೆಬ್ಬಿಸುತ್ತವೆ! ರೊಚ್ಚುಗೆದ್ದ ಜನ ಇಂಥವುಗಳ ವಿರುದ್ಧ ದನಿ ಎತ್ತಿದರೋ ಇಲ್ಲವೋ, ಮುಂದೆ ಇಂಥವು ಮರುಕಳಿಸದಂತೆ ಏನ್ನನ್ನಾದರೂ ಕ್ರಮ ಕೈಗೊಳ್ಳಲು ಸರಕಾರವನ್ನು, ಕಾನೂನನ್ನು ಕೋರಿ ನಾಲ್ಕು ಹೆಜ್ಜೆ ಮುಂದಿಟ್ಟರೋ ಇಲ್ಲವೋ ಹಿಂದೆಯೇ ಅಂಥ ದನಿಗಳನ್ನು ಮಟ್ಟ ಹಾಕಲು ಸಕಲ ವ್ಯವಸ್ಥೆಯೂ ಆಗಿಬಿಡುತ್ತದೆ.
ಹೋರಾಟಕ್ಕಿಳಿಯುವವರಿಗಿಂತ ಅದನ್ನು ತಡೆಯುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಾಲ್ಕಾರು ದಿನಗಳಲ್ಲಿ ಹೆಚ್ಚೆಂದರೆ ತಿಂಗಳೊಪ್ಪತ್ತಿನಲ್ಲಿ ಹೋರಾಟದ ಸದ್ದಡಗಿಬಿಡುತ್ತದೆ. ಮತ್ತೆ ಯಥಾಸ್ಥಿತಿ… ನಮ್ಮ ದೇಶ ಬದಲಾಗದು ಎಂಬ ಸ್ಲೋಗನ್ನಿನೊಡನೆ ಮತ್ತೆ ನಾವಾಗಿಯೇ ಉಳಿಸಿಕೊಂಡ ಕೊಚ್ಚೆ ಬದುಕಲ್ಲಿ ಗಂಧದ ಪರಿಮಳದ ಹುಡುಕಾಟ, ಚೆಂದದ ಬದುಕಿಗಾಗಿ ವೃಥಾ ತಿಣುಕಾಟ.
ಹಳ್ಳಿ ದಿಲ್ಲಿ, ಬಡವ ಬಲ್ಲಿದ ಎನ್ನುವ ಭೇದವಿಲ್ಲದಂತೆ ಎಲ್ಲೆಡೆಯೂ ಇಂಥ ಅನಾಚಾರಗಳು ಅನಾದಿ ಕಾಲದಿಂದಲೂ ನಡೆಯುತ್ತಲೇ ಇವೆ. ಈ ಖಾಯಿಲೆಗೆ ಮದ್ದು ಹುಡುಕುವ ಬದಲು, ಖಾಯಿಲೆಯನ್ನು ಹೊಡೆದೋಡಿಸುವ ಬದಲು ನಾವು ಮಾಡುತ್ತಾ ಬಂದಿರುವುದೇನೆಂದರೆ ಹೆಣ್ಣು ತಾನು ಸುರಕ್ಷಿತಳಾಗಿರಬೇಕೆಂದರೆ ಎಷ್ಟೆಲ್ಲ ಸಾಧ್ಯವೋ ಅಷ್ಟೂ ಬೇಡಿಗಳನ್ನು ತೊಟ್ಟು ಬದುಕುವುದನ್ನು ಹೇಳಿಕೊಡುವುದು ಮತ್ತು ರೂಢಿಸುವುದು. ಅಂಥ ಸುರಕ್ಷಿತ ಬೇಡಿಗಳ ನಡುವೆಯೂ ಅತ್ಯಾಚಾರಗಳಾಗುತ್ತವೆ, ಲೈಂಗಿಕ ಕಿರುಕುಳ ಅನವರತ ಮುಂದುವರೆಯುತ್ತದೆ.
ಯಾಕೆ ಹೀಗಾಗುತ್ತದೆ? ಯಾಕೆ ಗಂಡಸರೇ ಹೆಚ್ಚಾತೀ ಹೆಚ್ಚಿನ ಪ್ರಮಾಣದಲ್ಲಿ ಇಂಥ ವಿಕೃತಿಗಿಳಿಯುತ್ತಾರೆ? ಅವರ ದೇಹದಲ್ಲಿ ಅಂಥ ಯಾವ ಹಾರ್ಮೋನ್ ಈ ಪರಿಯ ವಿಕೃತಿಗಳನ್ನು ಪ್ರಚೋದಿಸುತ್ತಿರುತ್ತದೆ?! ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ? ನನಗ್ಯಾಕೋ ಇದು ಬರೀ ಮಾನಸಿಕ ಸಮಸ್ಯೆ, ಅವರು ಬೆಳೆದ ವಾತಾವರಣದ ಹಿನ್ನೆಲೆ, ಅನುಭವಿಸಿದ ಅವಮಾನಗಳ ಪ್ರತಿಕಾರ ಮುಂತಾಗಿ ಅನಿಸುವುದಿಲ್ಲ. ಬದಲಿಗೆ ಹಾರ್ಮೋನ್ ಗಳ ಏರುಪೇರಿನ ಜೊತೆಗೆ ಮನಸಿನ ವಿಕಾರವೂ ಸೇರಿ ಅವರುಗಳು ಈ ಪರಿಯ ಹೇಸಿಗಳಾಗುತ್ತಾರೆ ಅನ್ನಿಸುತ್ತದೆ. ಇಂಥ ವಿಕೃತರ ದೆಸೆಯಿಂದಾಗಿ ಸಭ್ಯ ಗಂಡಸರನ್ನೂ ಒಂದು ಅನುಮಾನದ ಕಿರುಗಣ್ಣಿನಿಂದ ಹೆಣ್ಣುಮಕ್ಕಳು ನೋಡುವಂತಾಗಿರುವುದು ವಿಪಯರ್ಾಸವಾದರೂ ತನ್ನ ಸುರಕ್ಷೆಗಾಗಿ ಅದು ಅನಿವಾರ್ಯ ಎಂಬಷ್ಟು ಹೆಣ್ಣು ಅದಕ್ಕೆ ಒಗ್ಗಿ ಹೋಗಿದ್ದಾಳೆ!!
ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಪ್ರಕರಣ ಕಂಡು, ಗಂಡು ಹೆಣ್ಣೆನ್ನದೇ ತಲ್ಲಣಿಸಿದವರ ಪ್ರತಿಕ್ರಿಯೆಗಳು ಇಂದಿನ `ಅವಧಿ’ಯ ಈ ವಿಶೇಷ ಸಂಚಿಕೆಯಲ್ಲಿವೆ. ಈ ಲೇಖನಗಳನ್ನು ಓದಿದಾಗ ಭಾರತದಲ್ಲಿ ಒಂದಲ್ಲ ಒಂದು ರೀತಿಯಿಂದ ಲೈಂಗಿಕ ಕಿರುಕುಳ ಅನುಭವಿಸದ ಹೆಣ್ಣುಮಕ್ಕಳೇ ಇಲ್ಲವೇನೋ ಎನ್ನುವ ಅನಿಸಿಕೆ ಕೇವಲ ಅನಿಸಿಕೆಯಾಗುಳಿಯುವುದಿಲ್ಲ. ತಮಗಾದ ಕಿರುಕುಳವನ್ನು ಮುಕ್ತವಾಗಿ ಹೇಳಿಕೊಂಡರೆ ಎಲ್ಲಿ ಜಗತ್ತು `ನಿನ್ನದೇ ಏನೋ ತಪ್ಪಿರಬೇಕು, ಅದಕ್ಕೇ ನಿನ್ನ ಜೊತೆ ಹೀಗಾಗಿದೆ ಎಂದುಬಿಡುತ್ತದೋ ಎಂಬ ಭಯದಿಂದ ಇಂಥ ಅಸಹ್ಯಗಳನ್ನು ಹೇಳಿಕೊಳ್ಳಲೂ ಹೆದರುವ ಮನಸ್ಥಿತಿಯಿಂದ ಹೆಣ್ಣುಮಕ್ಕಳು ನಿಧಾನಕ್ಕೆ ಬಿಡುಗಡೆ ಹೊಂದುತ್ತಿದ್ದಾರೆ ಎನ್ನುವುದೊಂದು ಸಮಾಧಾನಕರ ವಿಷಯವಾದರೂ ಒಂದು ಅಳುಕಿನೊಂದಿಗೇ ತಮ್ಮ ಅನುಭವಗಳನ್ನು ನಮ್ಮೆದುರು ಹೇಳಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನೂ ಅಲ್ಲಗಳೆಯಲಾಗದು.
ಇಲ್ಲ ಅಳುಕಬೇಕಿಲ್ಲ. ಗಾಯದ ಆಳ ಗೊತ್ತಾಗದೆ ಅದಕ್ಕೆ ಚಿಕಿತ್ಸೆ ದೊರಕುವುದಾದರೂ ಹೇಗೆ? ನೋವು, ನೋವಿನಿಂದಾಗಿ ಹುಟ್ಟಿದ ಆಕ್ರೋಶ ಸತ್ವಯುತವಾಗಿ ಇಂಥ ವಿಕೃತಿಗಳನ್ನು ಸದೆಬಡೆಯುವಲ್ಲಿ ಸಫಲವಾಗಲಿ, ಸಫಲವಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದ ಹೊರತು ಕೇಡಿಗಳ ಮನದಲ್ಲಿ ಭಯ ಹುಟ್ಟದು. ಭಯದಿಂದಲಾದರೂ ಅಪರಾಧಗಳು ಕಡಿಮೆಯಾಗಿ ಮುಂದೊಮ್ಮೆ ಇಲ್ಲವಾಗಬಹುದು. ಇಂಥ ಅಪರಾಧಗಳಿಗೆ ಕಾನೂನಿನಲ್ಲಿ ಶಿಕ್ಷೆ ಇನ್ನೂ ಬಲವಾಗಬೇಕು. ಜನ ಎಚ್ಚೆತ್ತುಕೊಂಡು ಎಲ್ಲೇ ಆಗಲಿ, ಯಾರ ಜೊತೆಯೇ ಆಗಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ಕಂಡು ಬಂದರೂ ಒಟ್ಟಾಗಿ ಅಂಥದ್ದನ್ನು ತಡೆಯಬೇಕು. ಮೊದಲಿಗೆ ಕಿರುಕುಳ ಅನುಭವಿಸುವವರು ತಮ್ಮ ಜೊತೆ ಅನುಚಿತವಾದುದು ನಡೆಯುತ್ತಿರುವಾಗ ಪ್ರತಿಭಟಿಸಬೇಕು, ಸುತ್ತಲಿದ್ದವರ ಗಮನ ಸೆಳೆಯಬೇಕು, ಸಹಾಯ ಕೋರಬೇಕು. ಹಸಿದ ಮಗು ಅಳದೆ ತಾಯಿಯೂ ಹಾಲು ಕೊಡಳಂತೆ. ಅಂಥದ್ದರಲ್ಲಿ ನೊಂದವರೇ ಹಿಂದೆ ಸರಿದು ಕುಳಿತರೆ ಸಮಸ್ಯೆ ಬಗೆ ಹರಿದೀತು ಹೇಗೆ…?

Saturday, November 3, 2012

ಎಲ್ಲಿ, ಥಟ್ ಅಂತ ಹೇಳಿ ನೋಡೋಣ?

ನನಗೆ ಗೊತ್ತು, ಶೀರ್ಷಿಕೆ ನೋಡಿದ ತಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ನಾ. ಸೋಮೇಶ್ವರ ಅವರು ಎದುರಿನವರ ಮತ್ತು ನೋಡುಗರ ಮನದಲ್ಲೂ ಆಸೆ ಹುಟ್ಟುವಂತೆ ಪುಸ್ತಕಗಳನ್ನು ಪೇರಿಸಿಕೊಂಡು, "ಈಗ ಮುಂದಿನ ಪ್ರಶ್ನೆ..." ಎಂದೆನ್ನುವ ದೃಶ್ಯ. ನಾನು ಆ ಕಾರ್ಯಕ್ರಮದ ಕುರಿತು ಹೇಳ ಹೊರಟಿರುವೆನೆ? ಅಥವಾ ಮತ್ತೇನಾದರೂ ಬೇರೆಯದರ ಕುರಿತು ಮಾತಾಡುತ್ತಿರುವೆನೇ? ಎಲ್ಲಿ ಥಟ್ ಅಂತ ಹೇಳಿ ನೋಡೋಣ?!

         ಈ ‘ಥಟ್ ಅಂತ ಹೇಳಿ’ ಅನ್ನುವ ಕಾರ್ಯಕ್ರಮ ಮನದಲ್ಲಿ ಯಾವ ಪರಿ ಅಚ್ಚೊತ್ತಿದೆ ಎಂದರೆ, ಯಾರಾದರೂ ಯಾವುದಕ್ಕೋ, ಎಲ್ಲಿ ಥಟ್ ಅಂತ ಹೇಳಿ ನೋಡೋಣ ಎಂದರೆ, ಮನದಲ್ಲಿ ಅವರು ಕೇಳಿದ ಪ್ರಶ್ನೆಗೆ ಉತ್ತರ ಹೊಳೆಯುವ ಬದಲು ಚಂದನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ದೃಶ್ಯ ಮನದಲ್ಲಿ ಹಾಯ್ದು ಹೋಗುತ್ತದೆ! ನಂತರ ಕೇಳಿದವರ ಪ್ರಶ್ನೆಗೆ ಉತ್ತರ, ಅದೂ ಗೊತ್ತಿದ್ದರೆ!! ಎಲ್ಲರ ಮನೆ ಮಾತಾಗಿರುವ ಈ ಕಾರ್ಯಕ್ರಮ ದಶಮಾನೋತ್ಸವ ಆಚರಿಸಿಕೊಂಡೂ ಆಯ್ತು!

ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರನೇಕರು ಭಾಗವಹಿಸಿದ್ದಾರೆ,

ಅದಕ್ಕೂ ಹೆಚ್ಚಾಗಿ ಶ್ರೀಸಾಮಾನ್ಯ ಎಂದೆನಿಸಿಕೊಳ್ಳುವ ಅನೇಕ ಅಸಾಮಾನ್ಯ ಬುದ್ದಿವಂತರು ಭಾಗವಹಿಸಿದ್ದಾರೆ, ಭಾಗವಹಿಸುತ್ತಿದ್ದಾರೆ.

ಬೆಳಕು ಕಾಣದ, ಮನದಲ್ಲಿ ಚಂದಿರನನ್ನಿರಿಸಿಕೊಂಡು ಬೆಳಗುವ ಅಂಧ ಮಕ್ಕಳು ಭಾಗವಹಿಸಿದ್ದಾರೆ.

   ಹೊರಪ್ರಪಂಚದ ಜೊತೆ, ಪ್ರೀತಿಸುವ ಜೀವಗಳ ಜೊತೆಗಿನ ಸಂಪರ್ಕವನ್ನೇ ಕಳಚಿಕೊಂಡು, ಮತ್ತೆ ಎಲ್ಲ ಮೊದಲಿನಂತೆ ಸಹಜವಾಗಲಿ ಎಂಬ ಹಂಬಲ ಹೊತ್ತ,  ನಾನಾ ಕಾರಣಗಳಿಂದ ತಪ್ಪು ಮಾಡಿ, ಇನ್ನು ಕೆಲವರು ತಪ್ಪು ಮಾಡದೆಯೂ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ, ಅನುಭವಿಸುತ್ತಿರುವ ಕೈದಿಗಳೆಂಬ ಅಳಿಸಲಾಗದ ಹಣೆಪಟ್ಟಿ ಅಂಟಿಸಿಕೊಂಡ ಜನರು ಈ ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದಾರೆ.

ಬುದ್ದಿಗೇಡಿ ಹೆಡ್ಡನಿಂದಲೂ ಬುದ್ದಿಮಾಂದ್ಯರು ಎಂದೆನ್ನಿಸಿಕೊಳ್ಳುವ ವಿಕಲ ಚೇತನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜಾಣ್ಮೆ ತೋರಿದ್ದಾರೆ!

ಹೀಗೆ ಎಲ್ಲ ವರ್ಗದಿಂದ, ಎಲ್ಲೆಲ್ಲಿಂದಲೂ ಬಂದವರನ್ನು ಮಾತಾಡಿಸುತ್ತಾ, ಪ್ರಶ್ನೆಗಳನ್ನು ಕೇಳಿ, ಪುಸ್ತಕ ಕೊಟ್ಟು, ತಪ್ಪು ಉತ್ತರಿಸಿದರೆ ಕೊಟ್ಟ ಪುಸ್ತಕವನ್ನು ಇಸಿದುಕೊಂಡು, ಈ ಸಲದ ಪ್ರಶ್ನೆಗೆ ಕಳೆದುಕೊಂಡ ಪುಸ್ತಕವನ್ನು ಮರಳಿ ಪಡೆಯಲೇಬೇಕೆಂಬ ಆಸೆ ಹುಟ್ಟಿಸುವವರು ನಾ. ಸೋಮೇಶ್ವರ ಅವರಾದರೆ,

 ಕಾರ್ಯಕ್ರಮವನ್ನು ರೂಪಿಸಿ, ಈ ಎಲ್ಲ, ಎಲ್ಲ ಥರದ ಜನರನ್ನು ಸಂಪರ್ಕಿಸಿ, ಅವರನ್ನು ದೂರದರ್ಶನದ ಸ್ಟುಡಿಯೋಗೆ ಕರೆಸಿಕೊಂಡು, ಅವರ ಅನುವುತನುವು ನೋಡಿಕೊಂಡು, ಉಪಚರಿಸುತ್ತಲೇ ಕ್ಯಾಮೆರಾಮೆನ್‍ಗಳಿಗೆ ನಿರ್ದೇಶನ ಕೊಡುತ್ತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರೆವೇರಿ, ಬಂದವರು ನಗುನಗುತ್ತಾ ಪುಸ್ತಕಗಳೊಡನೆ ಮರಳುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುವವರು ಮೃದು ಮಾತಿನ, ನಮ್ಮ ಕನ್ನಡದ ಸೃಜನಶೀಲ ಕವಿ ಆರತಿ ಎಚ್.ಎನ್ ಅವರು. ಹೀಗೆ ಕರೆತಂದು ಬೀಳ್ಕೊಡುವ, ಅದರ ನಡುವೆ ಕಾರ್ಯಕ್ರಮದ ಉಳಿದೆಲ್ಲ ಕೆಲಸವನ್ನು ನೋಡಿಕೊಳ್ಳುವುದು ಈಗ ನಾನು ಹೇಳಿದಷ್ಟು ಸುಲಭದ ಕೆಲಸವಲ್ಲ. ಮತ್ತು  ನಗುನಗುತ್ತಲೇ ನಿಭಾಯಿಸುವುದು ಇನ್ನೂ ಸುಲಭವಲ್ಲ! ಇಂಥ ಜವಾಬ್ದಾರಿಯನ್ನು ನಗುನಗುತ್ತಲೇ ನಿಭಾಯಿಸಿಬಿಡುತ್ತಾರೆ ಆರತಿ!!

ದೂರದರ್ಶನದ ಚಂದನ’ದಲ್ಲಿ ವಾರಕ್ಕೊಮ್ಮೆ ಪ್ರಸಾರಗೊಳ್ಳುವ, ದಶಮಾನೋತ್ಸವ ಆಚರಿಸಿಕೊಂಡು ಹದಿವಯಸ್ಸಿಗೆ ಕಾಲಿಟ್ಟಿರುವ, ಈ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಈ ಸಲದ ಕರ್ನಾಟಕ ರಾಜ್ಯೋತ್ಸವವನ್ನು ಈ ತಿಂಗಳಲ್ಲಿ ಶನಿವಾರ, ಭಾನುವಾರಗಳ ಹೊರತಾಗಿ ಪ್ರತಿದಿನವೂ ಪ್ರಸಾರಗೊಳಿಸುವ ಮೂಲಕ ಆಚರಿಸುತ್ತಿದೆ. ಪ್ರತೀ ಕಂತಿನಲ್ಲಿ ಎಂದಿನಂತೆ ಇಬ್ಬರು ಸ್ಪರ್ಧಾಳುಗಳು ಭಾಗವಹಿಸುತ್ತಾರೆ. ಆದರೆ ಈ ರಾಜ್ಯೋತ್ಸವದ ವಿಶೇಷ ಕಂತುಗಳಲ್ಲಿ ಭಾಗವಹಿಸುತ್ತಿರುವವರು ನಾಡಿನ ಜನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರಿಚಿತರಾದ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿರುವ (ಸಾಧನೆ ಮಾಡಿದ ಎಂದೆನ್ನಲು ನನಗೆ ಧೈರ್ಯ ಸಾಲದು. ಕಾರಣ ಸಾಧನೆ ಮಾಡಿದವರು ಎಂದರೆ ಅವರ ಕತೆ ಮುಗಿದಿದೆ ಅಥವಾ ಅವರ ಕ್ರಿಯಾಶೀಲತೆ ಮುಗಿದಿದೆ ಎಂದರ್ಥ ನನ್ನ ದೃಷ್ಟಿಯಲ್ಲಿ. ಸಾಧನೆ ಎನ್ನುವುದು ಕ್ರಿಯಾಶೀಲರನ್ನು ಒಂದಲ್ಲ ಒಂದು ಬಗೆಯಿಂದ ಸದಾ ಚಲನೆಯಲ್ಲಿಡುವಂಥ ಪ್ರಕ್ರಿಯೆ. ಅದಕ್ಕೇ ಸಾಧನೆಯ ಹಾದಿಯಲ್ಲಿರುವ ಎಂದೆ ನಾನು) ಪರಿಚಿತ ಜನರು.

ಅವರೆಲ್ಲ ಯಾರ್ಯಾರೆಂದು ಹೇಳಿಬಿಡಲೆ?

ಈಗಾಗಲೇ ನೀವುಗಳು ನಿನ್ನೆ ಮತ್ತು ಮೊನ್ನೆ ಡಾ.ಎಮ್. ಮೋಹನ್ ಆಳ್ವಾ, ವಸುಧೇಂದ್ರ ಮತ್ತು ಎಮ್.ಆರ್.ದತ್ತಾತ್ರಿ ಅವರನ್ನು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ನೋಡಿದ್ದೀರಿ.
 ಚಿತ್ರ ಕೃಪೆ:ಗೂಗಲ್
ಇನ್ನು ಬರುವ ಸೋಮವಾರದಿಂದ ಅಂದರೆ,

ನವ್ಹೆಂಬರ್ ೫, ೨೦೧೨ ರಂದು: ಪಿ.ಶೇಷಾದ್ರಿ ಮತ್ತು ಚಿತ್ರಾ ಎಚ್.ಜಿ 

ನವ್ಹೆಂಬರ್ ೬, ೨೦೧೨ ರಂದು: ಸುರೇಶ್ ಆನಗಳ್ಳಿ ಮತ್ತು ಚಿಂತಾಮಣಿ ಕೊಡ್ಲಿಕೆರೆ

ನವ್ಹೆಂಬರ್ ೭, ೨೦೧೨ ರಂದು: ಪದ್ಮರಾಜ ದಂಡವತಿ ಮತ್ತು ಜರಗನಹಳ್ಳಿ ಶಿವಶಂಕರ

ನವ್ಹೆಂಬರ್ ೮, ೨೦೧೨ ರಂದು: ವಸುದೇವ ನಾಡಿಗ್ ಮತ್ತು ಸಬಿತಾ ಬನ್ನಾಡಿ

ನವ್ಹೆಂಬರ್ ೯, ೨೦೧೨ ರಂದು: ಅಂಜಲಿ ರಾಮಣ್ಣ ಮತ್ತು ಶ್ರೀದೇವಿ ಕಳಸದ

ನವ್ಹೆಂಬರ್ ೧೩, ೨೦೧೨ ರಂದು: ವೀರೇಶ್ ಬಳ್ಳಾರಿ ಮತ್ತು ನಾಗಲಕ್ಷ್ಮಿ ವೀರೇಶ್

ನವ್ಹೆಂಬರ್ ೧೪, ೨೦೧೨ ರಂದು: ಹರಿಯಪ್ಪ ಪೇಜಾವರ ಮತ್ತು ಜಯಲಕ್ಷ್ಮೀ ಪಾಟೀಲ್

ನವ್ಹೆಂಬರ್ ೧೫, ೨೦೧೨ ರಂದು: ಪ್ರೊ. ರಾಧಾಕೃಷ್ಣ ಮತ್ತು ಮೌನೇಶ್ ಬಡಿಗೇರ್

ನವ್ಹೆಂಬರ್ ೧೬, ೨೦೧೨ ರಂದು: ಚೇತನಾ ತೀರ್ಥಹಳ್ಳಿ ಮತ್ತು ಡಾ. ಸುಕನ್ಯ

ನವ್ಹೆಂಬರ್ ೨೦, ೨೦೧೨ ರಂದು: ವರ್ಷಾ ಸುರೇಶ್ ಮತ್ತು ಸರ್ಜಾಶಂಕರ್ ಹರಳಿಮಠ

ನವ್ಹೆಂಬರ್ ೨೧, ೨೦೧೨ ರಂದು: ನಂಜುಂಡ ಸ್ವಾಮಿ ತೊಟ್ಟವಾಡಿ ಮತ್ತು ಕಿರಣಪ್ರಸಾದ ರಾಜನಳ್ಳಿ

ನವ್ಹೆಂಬರ್ ೨೨, ೨೦೧೨ ರಂದು: ಎಲ್.ಸಿ. ಸುಮಿತ್ರಾ ಮತ್ತು ನಿಂಗಪ್ಪ ಮುದೇನೂರು

ನವ್ಹೆಂಬರ್ ೨೩, ೨೦೧೨ ರಂದು: ರಮೇಶ ಪಂಡಿತ ಮತ್ತು ಸುನೇತ್ರ ಪಂಡಿತ

ನವ್ಹೆಂಬರ್ ೨೬, ೨೦೧೨ ರಂದು: ವೀರಣ್ಣ ಮಡಿವಾಳರ್ ಮತ್ತು ಕೆ. ಗುರುರಾಜ

ನವ್ಹೆಂಬರ್ ೨೭, ೨೦೧೨ ರಂದು: ಡಾ.ವಿನಯಾ ವಕ್ಕುಂಡ ಮತ್ತು ಡಾ. ಎಮ್.ಡಿ.ವಕ್ಕುಂಡ

ನವ್ಹೆಂಬರ್ ೨೮, ೨೦೧೨ ರಂದು: ಮಂಡ್ಯ ರಮೇಶ್ ಮತ್ತು ಗುಡಿಹಳ್ಳಿ ನಾಗರಾಜ

ನವ್ಹೆಂಬರ್ ೨೯, ೨೦೧೨ ರಂದು: ಶ್ಯಾಮಸುಂದರ.ಎಸ್ ಮತ್ತು ರಮ್ಯಾ ವಶಿಷ್ಠ

ನವ್ಹೆಂಬರ್ ೩೦, ೨೦೧೨ ರಂದು: ಡಾ. ಎಮ್.ಎಸ್.ವಿದ್ಯಾ ಮತ್ತು ಎಸ್.ಕಿಟ್ಟಿ

ಡಿಸೆಂಬರ್ ೩, ೨೦೧೨ ರಂದು: ಕೃಷ್ಣಾ ಶೆಟ್ಟಿ ಮತ್ತು ಅಂಜಲಿ ಶೆಟ್ಟಿ

ಡಿಸೆಂಬರ್ ೪, ೨೦೧೨ ರಂದು: ಡಾ. ತಮಿಳ್ ಸೆಲ್ವಿ ಮತ್ತು ಡಾ. ಕೆ. ಶೆರೀಫಾ 


ಈ ಎಲ್ಲ ಕಂತುಗಳು ಅಂದಂದಿನ ರಾತ್ರಿ ೧೦.೩೦ಕ್ಕೆ ಪ್ರಸಾರಗೊಳ್ಳುತ್ತವೆ ಮತ್ತು ಮರು ಪ್ರಸಾರ ಮರುದಿನ ಬೆಳಗಿನ ೧೧ಕ್ಕೆ.

   

Sunday, October 7, 2012

ಅಗುಳಿ

ಅವರಿಬ್ಬರ ನಡುವಿನ ಜಗಳ ಹೆಚ್ಚಾಗತೊಡಗಿದ್ದವು.
ಅವ ಆಕೆಯನ್ನು  ಒಳ ಕೋಣೆಯಲ್ಲಿ ಕೂಡಿಹಾಕಿ ಹೊರಗಿನಿಂದ ಚಿಲಕ ಹಾಕಿಕೊಂಡು ನಡುಮನೆಯ ಬಾಗಿಲನ್ನೂ ಮುಂದೆ ಮಾಡಿಬಿಟ್ಟ.  
ಒಳಕೋಣೆಯಿಂದ ಕೇಳಿಬರುತಿದ್ದ ಕೋರಿಕೆ, ಚೀರಾಟ, ಅಳು ಕ್ಷೀಣಿಸುತ್ತಾ, ನಿಧಾನವಾಗಿ ಒಳದನಿ ಮೌನವಾಯಿತು.
ವರುಷಗಳುರಳಿದವು...
ಒಂದು ದಿನ ನಡುಮನೆಯ ಬಾಗಿಲು ದೂಡಿ ಬಂದು ನಿಂತು, ಒಳಕೋಣೆಯತ್ತ ನೋಡುತ್ತಾ ಅವ ಹೇಳಿದ. "ಹೊರಗೆ ಬಾ ಸಾಕು."
ಹೊರಗಡೆಯಿಂದ ಚಿಲಕ ಹಾಕಿದ, ಒಳಬದಿಯಿಂದ ಅಗುಳಿಯೇ ಹಾಕಿರದ, ಬಾಗಿಲನ್ನು ನೋಡುತ್ತಾ ಆಕೆ ಅಂದಳು, "ಹೇಗೆ ಬರಲಿ?"
ಕ್ಷಣ ಮೌನ.
ಮತ್ತೆ ನಡುಮನೆಯ ಬಾಗಿಲು ಮುಂದೆ ಮಾಡಿದ ಸದ್ದು... 

Tuesday, May 15, 2012

ಪ್ರೊ.ಸಿ ಎನ್ ರಾಮಚಂದ್ರನ್ ಮತ್ತು ‘ನೀಲ ಕಡಲ ಬಾನು’

ಎರಡು ತಿಂಗಳ ಹಿಂದೆ ಕನ್ನಡದ ಹಿರಿಯ ವಿದ್ವಾಂಸರೂ, ಖ್ಯಾತ ವಿಮರ್ಶಕರೂ ಆದ ಪ್ರೊ.ಸಿ ಎನ್ ರಾಮಚಂದ್ರನ್ ಸರ್ ಅವರಿಗೆ ನನ್ನ ಕವನ ಸಂಕಲನ ‘ನೀಲ ಕಡಲ ಬಾನು’ವಿನ ಸ್ಕ್ಯಾನ್ ಮಾಡಿದ (ಪುಸ್ತಕ ಪ್ರತಿಗಳು ಖಾಲಿಯಾದ ಕಾರಣ) ಪುಟಗಳನ್ನು ಹೆದರುತ್ತಲೇ ಮೇಲ್ ಮಾಡಿ, ಅವರ ಪ್ರತಿಕ್ರಿಯೆ ಕೋರಿದ್ದೆ. ಒಂದು ವಾರದಲ್ಲಿ ಉತ್ತರಿಸುವೆನೆಂದು ಹೇಳಿದ CNR ಸರ್ ಕಡೆಯಿಂದ, ತಿಂಗಳಾದರೂ ಉತ್ತರ ಬರದುದನು ಕಂಡು, "ಜಯಲಕ್ಷ್ಮೀ, ಮುಗೀತು ಕಣೆ, ಇಷ್ಟೇ ನಿನ್ನ ಕವನಗಳ ಹೈಸಿಯತ್ ತಿಳ್ಕೊ" ಎಂದು ಸಪ್ಪೆ ಮುಖ ಮಾಡಿಕೊಂಡಿದ್ದಾಗ ಅವಿ ಹೇಳಿದ್ರು, "ಅರೇ, ಹಾಗ್ಯಾಕ್ ಅನ್ಕೋತೀರಿ? ಒಂದ್ಸಲ ಸರ‍್ಗೆ ಮೇಲ್ ಮಾಡಿ ಕೇಳಿ ನೋಡಿ, ಕೆಲಸದ ನಡುವೆ ಬರೆಯಲಿಕ್ಕಾಗಿರ್ಲಿಕ್ಕಿಲ್ಲ, ಮರೆತಿರಬಹುದು."

ಮತ್ತೆ ಸರ‍್ಗೆ ಅಳುಕುತ್ತಲೇ ಮೇಲ್ ಮಾಡಿದೆ. ತಕ್ಷಣ ಉತ್ತರ ಬಂತು ಆ ಕಡೆಯಿಂದ, "ನಿಮ್ಮ ಕವನ ಸಂಕಲನವನ್ನು ಇಲ್ಲಿಯವರೆಗೆ ಓದದಿರಲು ಕಾರಣ ಕೇವಲ ಕೆಲಸದ ಒತ್ತಡ ಹಾಗೂ ಮರೆವು, ಅಷ್ಟೇ.   ದಯವಿಟ್ಟು ಬೇಸರಿಸಬೇಡಿ.  ಮುಂದಿನ ವಾರದೊಳಗೆ ಖಂಡಿತಾ ನನ್ನ ಪ್ರತಿಕ್ರಿಯೆಯನ್ನು ತಿಳಿಸುತ್ತೇನೆ." 

ನಿಜಕ್ಕೂ ವಾರದ ಒಳಗೆ ಸರ್ ಕಡೆಯಿಂದ ನನ್ನ ಕವನ ಸಂಕಲನಕ್ಕೆ ಪ್ರತಿಕ್ರಿಯೆ (ವಿಮರ್ಶೆ) ಬಂತು. ನಾನು ಧನ್ಯಳಾದ ಕ್ಷಣವದು! ಅನಂತ ಧನ್ಯವಾದಗಳು ಸರ್!
ಪ್ರೊ. ಸಿ ಎನ್ ರಾಮಚಂದ್ರನ್ ಅವರ ಅನುಮತಿಯೊಂದಿಗೆ ಅವರು ಬರೆದ ವಿಮರ್ಶಾತ್ಮಕ ಪತ್ರವನ್ನು  ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.





ಶ್ರೀಮತಿ ಜಯಲಕ್ಷ್ಮಿ  ಪಾಟೀಲ್ ಅವರಿಗೆ:
ನಮಸ್ಕಾರ.  ನಿಮ್ಮ ನೀಲ ಕಡಲ ಬಾನು ಕವನಸಂಕಲನವನ್ನು ಈಗ ಸಂಪೂರ್ಣವಾಗಿ ಓದಿ (ಕೆಲವು ಕವನಗಳನ್ನು ಒಂದೆರಡು ಬಾರಿ ಓದಿ) ಈ ಪತ್ರವನ್ನು ಬರೆಯುತ್ತಿದ್ದೇನೆ.  ಸಾಕಷ್ಟು ಸಮಯ-ಸಹನೆಗಳನ್ನು ಅಪೇಕ್ಷಿಸುವ  ಸ್ಕ್ಯಾನಿಂಗ್ ಮಾಡಿ ನೀವು ಇಡೀ ಸಂಕಲನವನ್ನು ನನಗೆ ಕಳುಹಿಸಿ, ತುಂಬಾ ಸಮಯವಾಯಿತು (ಎರಡು ತಿಂಗಳು?).  ದಯವಿಟ್ಟು ಕ್ಷಮಿಸಿ, ಬೇಜಾರು ತಿಳಿಯಬೇಡಿ.

     ಮೊದಲಿಗೆ, ನಿಮ್ಮ ಕವನಗಳ ಬಗ್ಗೆ ಒಟ್ಟಾರೆಯಾಗಿ ಒಂದೆರಡು ಮಾತುಗಳನ್ನು ಹೇಳಬೇಕಾದರೆ, ನಿಮ್ಮ ಕವನಗಳ ಮೂಲ ಸ್ತ್ರೀಸಂವೇದನೆ, ಆದರೆ ಸ್ತ್ರೀವಾದವಲ್ಲ.  ಎಂದರೆ, ಒಂದು ವ್ಯವಸ್ಥೆಯನ್ನು ಮತ್ತು ಅದರ ಮಿತಿಗಳನ್ನು ಒಪ್ಪಿಕೊಂಡೂ ಆ ವ್ಯವಸ್ಥೆಯಲ್ಲಿ ನರಳುವವರ ಪಿಸುಮಾತುಗಳನ್ನು ಹಾಗೂ ನಿಟ್ಟುಸಿರನ್ನೂ ನಿಮ್ಮ ಕವನಗಳು ದಾಖಲಿಸುತ್ತವೆ.  ನಿಮ್ಮದೇ ಒಂದು ಕವನ ತೋರಿಸುವಂತೆ, ಸೀತೆ ಎಂದೂ ಸಿಡಿಯುವುದಿಲ್ಲ, ತನ್ನ ಮೌನವನ್ನು ಮುರಿಯುವುದಿಲ್ಲ; ಅಕಸ್ಮಾತ್ ಅವಳು ಮೌನ ಮುರಿದಿದ್ದರೆ ಈ ಸಂಕಲನದ ಅನೇಕ ಕವನಗಳನ್ನು ಅವಳು ಬರೆಯಬಹುದಿತ್ತು ಎಂದು ತೋರುತ್ತದೆ.  ಈ ಸಂಕಲನದ ಹೆಚ್ಚಿನ ಕವನಗಳು ಸ್ತ್ರೀತ್ವದ ಎಲ್ಲಾ ಸಂಕೀರ್ಣ ಭಾವನೆಗಳನ್ನು, ಬಯಕೆಗಳನ್ನು, ದುಃಖ-ವಿಷಾದಗಳನ್ನೂ ಯಶಸ್ವಿಯಾಗಿ ಅಭಿವ್ಯಕ್ತಿಗೊಳಿಸುತ್ತವೆ.

     ಈಗ, ಬಿಡಿ ಕವನಗಳಿಗೆ ಬಂದರೆ, 'ಆಸೆ', 'ತಾಯಿ ಮತ್ತು ಮಗಳಿಗೆ', 'ಅರಿಕೆ', 'ಇನಿಯ', 'ನಾನು VS ನೀನು', 'ಬಿಂಬ', 'ನದಿ-ದಡ', 'ಅವ್ರ್ ಬಿಟ್ ಇವ್ರ್ಯಾರು...', 'ಆಶಯ',  . . . . ,  ಇತ್ಯಾದಿ ಕವನಗಳು ಒಂದಲ್ಲಾ ಒಂದು ಕಾರಣಕ್ಕೆ ನನಗೆ ಇಷ್ಟವಾದುವು.  ಇಲ್ಲಿಯೂ ಒಂದು ಸಾಧಾರಣೀಕೃತ ಹೇಳಿಕೆಯನ್ನು ಕೊಡಬಹುದಾದರೆ, ನೈಸರ್ಗಿಕ ಸಂಗತಿಗಳು ರೂಪಕಗಳಾಗಿ ಬರುವ ಸರಿ ಸುಮಾರು ಎಲ್ಲಾ ಕವನಗಳು ಯಶಸ್ವಿಯಾಗಿವೆ, ಹೊಸ ಅನುಭವವನ್ನು ಕೊಡುತ್ತವೆ.

     ಉದಾಹರಣೆಗೆ: 'ಹಕ್ಕಿ' ಎಂಬ ಕವನ ಮೊದಲಿಗೆ ಹಕ್ಕಿಗಿಲ್ಲದಿರುವ ನೆಲೆಯನ್ನು ದಾಖಲಿಸಿದರೂ, ನೆಲೆಯಿಲ್ಲದೆಯೇ ಹಾರಾಡುತ್ತಾ 'ನಗುತ್ತಿದೆ' ಎಂದು ಹೇಳಿದಾಗ, ಅದು 'ಜಂಗಮ ಬದುಕಿನ, ಅದಮ್ಯ ಆಕಾಂಕ್ಷೆಗಳ, ಮತ್ತು ಅಕ್ಕನು ಪಡೆದಂತಹ ಸ್ವಾತಂತ್ರ್ಯದ' ಅದ್ಭುತ ರೂಪಕವಾಗುತ್ತದೆ; ಹಾಗೆಯೇ,  'ಆಸೆ'  ಬೆಳೆಯುವುದರ ಬಗ್ಗೆ, ಅಸ್ಮಿತೆಯನ್ನು ಕಳೆದುಕೊಳ್ಳುವ ಬಗ್ಗೆ ಇರುವ ಕಾತುರ-ಭೀತಿ ಇತ್ಯಾದಿ ಭಾವನೆಗಳನ್ನು ಸಂವಹಿಸಲು ಬೇರು-ಎಲೆಗಳನ್ನು ರೂಪಕಗಳಾಗಿ ಯಶಸ್ವಿಯಾಗಿ ದುಡಿಸಿಕೊಳ್ಳುತ್ತದೆ. ಈ ವರ್ಗದ ಕವನಗಳಲ್ಲಿ ನನಗೆ  ತುಂಬಾ ಇಷ್ಟವಾದ ಎರಡು ಕವನಗಳೆಂದರೆ 'ನಾನು vs ನೀನು' ಮತ್ತು 'ವಿಲಾಸಿ'.  ಮೊದಲನೆಯ ಕವನ  ಸ್ತ್ರೀ-ಪುರುಷರಿಗೆ ನದಿ ಮತ್ತು ಸಮುದ್ರಗಳನ್ನು ರೂಪಕಗಳಾಗಿ ಬಳಸುತ್ತಾ, ನೂರಾರು ಅಣೆಕಟ್ಟುಗಳನ್ನು ದಾಟಿ ಸಮುದ್ರದ ಬಳಿ ಓಡಿಯೋಡಿ ಬರುವ ನದಿಯ ಆರ್ತ ಯಾಚನೆಯನ್ನು" ಒಂಟಿ, ವಿರಹಿ ನದಿ ನಾನು / ನೀನೋ ಸಮುದ್ರ" ಎಂದು ಪರಿಣಾಮಕಾರಿಯಾಗಿ ಧ್ವನಿಸುತ್ತದೆ.  ಸ್ತ್ರೀ-ಪುರುಷ ಸಂಬಂಧವನ್ನು ಕುರಿತ ಎರಡನೆಯ ಕವನವೂ ಚಂದ್ರನನ್ನು ವಿಲಾಸಿಯಂತೆ ಕಂಡು, ಅವನನ್ನು "ಗೊತ್ತಾಯಿತೆ ಒದ್ದೆ ಮನಸ್ಸಿನ ಒದ್ದಾಟ" ಎಂದು ಕೇಳುತ್ತದೆ.  ಈ ಸಾಲು (ಇಡೀ ಕವನ) ಹಿಂದಿನ ಕವನದಂತೆ ತುಂಬಾ ಭಾವಪೂರ್ಣವಾಗಿ ಸಫಲವಾಗಿದೆ.

     ಇತರ ಯಶಸ್ವಿ ಕವನಗಳೆಂದರೆ: ಕಾವ್ಯ ಸೃಷ್ಟಿ ಹಾಗೂ ಜೀವ ಸೃಷ್ಟಿ ಇವೆರಡನ್ನು ಒಂದೇ ನೆಲೆಯಲ್ಲಿ ಕಾಣುತ್ತಾ ಆ ಪ್ರಕ್ರಿಯೆಯ ಸಂಭ್ರಮವನ್ನು ಸಫಲವಾಗಿ ದಾಖಲಿಸುವ ''ಆಶಯ'',  ಭೂಮಿಯ ಮಗಳಾದರೂ ತಾಯಿಯಂತೆ ಎಂದೂ ಸಿಡಿಯದ ಸೀತೆಯನ್ನು ಪ್ರಶ್ನಿಸುವ 'ತಾಯಿ ಮತ್ತು ಮಗಳಿಗೆ', ಇತ್ಯಾದಿ.  ಆದರೆ, ನನ್ನ ದೃಷ್ಟಿಯಲ್ಲಿ, ಇಡೀ ಸಂಕಲನದ ಅತ್ಯುತ್ತಮ ಕವನವೆಂದರೆ ''ಅವ್ರ್ ಬಿಟ್ಟು ಇವರ್ಯಾರು''.  ಸರ್ವಸಂಗ ಪರಿತ್ಯಾಗಿಗಳಾದ ಬುದ್ಧ, ಬಸವ, ಮಹಾದೇವಿ ಇವರೊಡನೆ ಇಂದಿನ ವ್ಯಕ್ತಿಗಳನ್ನು ಹೋಲಿಸುತ್ತಾ, ಕವನ '. . . ಪ್ರಾಸಕ್ಕೆ ಜೋತು/ಬಿದ್ದು ಬದುಕುವ ನಾವು/ ಆದೇವೆ ಬಸವ ಬುದ್ಧ/ ಮಹಾದೇವಿಯರಂತೆ ಅಮರ?' ಎಂದು ವಿಷಾದಿಸುತ್ತದೆ.  ಇಲ್ಲಿ 'ಪ್ರಾಸ' ಪದ ಕವನಗಳಲ್ಲಿ ಬರುವ ಸಮಾನ ಪದಗಳನ್ನೂ, ಹಾಗೆಯೇ 'ಜೊತೆ'/ಜೋಡಿ ಇತ್ಯಾದಿ ಮಾನವ ಸಂಬಂಧಗಳನ್ನೂ ಧ್ವನಿಸುತ್ತದೆ (ಎರಡು ಪದಗಳಿಲ್ಲದೆ ಪ್ರಾಸವಾಗುವುದಿಲ್ಲವಲ್ಲ).  ಎಂದರೆ, ಈ ಸಾಲುಗಳು ಒಂಟಿಯಾಗಿರಲು ಸಾಧ್ಯವಾಗದೆ, ಜೊತೆ, ಇಹ-ಪರ, ಪ್ರೀತಿ-ಪ್ರೇಮ, ಇತ್ಯಾದಿ 'ಪ್ರಾಸಕ್ಕೆ ಜೋತು ಬಿದ್ದಿರುವ' ನಮ್ಮಂತಹ ಸಾಧಾರಣ ಮನುಷ್ಯರನ್ನೂ ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ.  ಇದೊಂದು ಬಹಳ ಒಳ್ಳೆಯ ಕವನ.  ಇದೇ ಆಶಯವನ್ನು ವಸ್ತುವಾಗುಳ್ಳ ಮತ್ತೊಂದು ಸಫಲ ಕವನವೆಂದರೆ "ನನ್ನೊಳು ನೀ": ನಿರೂಪಕಿ ತನ್ನ ಹಾಗೂ ಅಕ್ಕನ ನಡುವೆ ಅನೇಕ ಸಮಾನತೆಗಳನ್ನು ಗುರುತಿಸಿದರೂ (ಮೇಲೆ ಹೇಳಿದಂತೆ ಪ್ರಾಸಕ್ಕೆ ಜೋತು ಬಿದ್ದಿರುವ ಕಾರಣದಿಂದ) ಆ ಪ್ರೀತಿ ...  ದೊರಕಿತೆ/ ನಿನಗೆ ದೊರೆತಂತೆ ಎಂದು ವಿಷಾದಿಸುತ್ತಾಳೆ.

     ಈ ಸಂಕಲನದಲ್ಲಿರುವ ಅನೇಕ ಕಿರುಕವನಗಳು ಸಾಕಷ್ಟು ಸಫಲವಾಗಿವೆ: ಬಾಯಿ ಮುಚ್ಚಿದ್ದರೂ ಎಲ್ಲವನ್ನೂ ಹೇಳುವ ವಾಚಾಳಿ ಕಣ್ಣು ('ವಾಚಾಳಿ'), ಇತರರಲ್ಲಿ ವಂಚನೆಯನ್ನು ಕಾಣುವ  ಆದರೆ  ಕನ್ನಡಿಯ ಮುಂದೆ ನಿಂತಾಗ 'ನಾನೂ ಕೂಡಾ' ಎಂದರಿಯುವ ನಿರೂಪಕಿ ('. . . . .'), ಇತ್ಯಾದಿ.
    ಮತ್ತೆ, ಕೆಲ ಸಂದರ್ಭಗಳಲ್ಲಿ ನೀವು ಮಾಡುವ ಪದ-ವಿಭಜನೆಯೂ ಅರ್ಥಪೂರ್ಣವಾಗಿದೆ: ನಾನೇ ಅಪರಿಚಿತೆ/ ಯಂತೆ . . .   . . . ಅರಿತು ನಡೆದಾಕೆ/ ಗೂ . . .  ಇತ್ಯಾದಿ.

     ಸಾಮಾನ್ಯವಾಗಿ, ಎಲ್ಲಾ ಪ್ರಥಮ ಸಂಕಲನಗಳ ಕವನಗಳಲ್ಲಿ ಕಂಡುಬರುವ ಕೆಲವು ಮಿತಿಗಳು ನಿಮ್ಮ ಸಂಕಲನದಲ್ಲಿಯೂ ಇವೆ: 'ಮಾತು-ಮೌನ', 'ಉರುಳು-೨', 'ಸಮುದ್ರ', 'ವಿರಹ', 'ತಾವು' ಇತ್ಯಾದಿ ಕವನಗಳು ಕೇವಲ ಪದಚಾತುರ್ಯವನ್ನು ಆಧರಿಸಿ, Clever ಎಂಬಂತೆ ಕಾಣುತ್ತವೆ; ಕೆಲವು ಕವನಗಳು ತಮ್ಮ ಅತಿ ಸ್ಪಷ್ಟತೆ (ಅಥವಾ ಬಿಡಿಸಿ ಹೇಳುವ) ಮಿತಿಯಿಂದ ಸೋಲುತ್ತವೆ; ಇಂತಹ ಸಂದರ್ಭಗಳಲ್ಲಿ ನೀವೇ ಹೇಳುವಂತೆ 'ಸರಳತೆಯೇ ಸರಪಳಿಯಾಗುತ್ತದೆ' : ಉದಾ.: ಅಹಲ್ಯೆ ಎಂದು ಮೊದಲು ಹೇಳಿದನಂತರ 'ಶಿಲೆಯಾಗುತ್ತಿದ್ದೇನೆ' ಎನ್ನುವುದು ಅನವಶ್ಯಕ ('ಚಿಗುರು'); ಬಿಳಿಯ ಬಣ್ಣವನ್ನು ಹೇಳಿದನಂತರ, ಮತ್ತೆ ಅದರ ಸಾಂಕೇತಿಕತೆಯನ್ನು 'ನಿರ್ಮಲತೆಗೆ ಸಂಕೇತವಾಗುವ' ಎಂದು ಬಿಡಿಸಿ ಹೇಳುವುದು ಬೇಕಿಲ್ಲ; ಇತ್ಯಾದಿ.

     ಒಟ್ಟಿನಲ್ಲಿ ಹೇಳುವುದಾದರೆ, ನಿಮ್ಮ ಈ ಕವನ ಸಂಕಲನ 'ಮೊದಲ' ಸಂಕಲನದಂತೆ ಕಾಣುವುದಿಲ್ಲ; ಅರ್ಥಪೂರ್ಣ ಪದವಿನ್ಯಾಸ ಹಾಗೂ ಸೂಕ್ಷ್ಮ ಭಾವನೆಗಳ/ಚಿಂತನೆಗಳ ಸಫಲ ಅಭಿವ್ಯಕ್ತಿ ಇತ್ಯಾದಿಗಳಿಂದ ಕೂಡಿರುವ ಅನೇಕ ಪ್ರಬುದ್ಧ ಕವನಗಳು ಇದರಲ್ಲಿವೆ.  ಸಭೆ-ಸಮಾರಂಭಗಳಲ್ಲಿ ಜಾಣತನದ ಕಿರು ಕವನಗಳನ್ನು/ಚುಟುಕುಗಳನ್ನು ಓದಿ, ಚಪ್ಪಾಳೆ ಗಿಟ್ಟಿಸುವ ಆಸೆಯನ್ನು ಮೀರಿ,  ಮಹತ್ವಾಕಾಂಕ್ಷೆಯ ಹಕ್ಕಿಯಂತೆ ನೀಲ ಕಡಲನ್ನು ಹಾರಲು ಪ್ರಯತ್ನಿಸಿದರೆ, ಅನೇಕ ಶ್ರೇಷ್ಠ ಕವನಗಳನ್ನು ರಚಿಸಬಲ್ಲಿರಿ ಎಂಬುದು ಈ ಸಂಕಲನದಿಂದ ಸ್ಪಷ್ಟವಾಗುತ್ತದೆ.  

   ಈ ಮೂಲಕ ನಿಮ್ಮ ಕವನಗಳನ್ನು ಓದುವ, ಓದಿ ಸಂತೋಷಿಸುವ ಅವಕಾಶವನ್ನು ಕೊಟ್ಟ ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಿ ಈ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ.
                                                       ರಾಮಚಂದ್ರನ್  

Monday, March 12, 2012

ತೆರೆ ಬಿನಾ ಜಿಯ ಜಾಯೆನಾ - ಮನಸಿನ ನಸುಕಂಪನ...



ಹೀಗೇ ಒಮ್ಮೆ ಅಂದರೆ 25/09/2010 ರ ಮದ್ಯಾಹ್ನದಂದು ಮಾತು ಮಾತಲ್ಲಿ ಅವಿ (ಅವಿನಾಶ್ ಕಾಮತ್) ನನಗೆ,

"ಹಿಂದಿ ಸಿನಿಮಾ ‘ಘರ್” ಚಿತ್ರದ ’ತೆರೆ ಬಿನಾ ಜಿಯ ಜಾಯೆ ನಾ...’ ಹಾಡಿನ ಮೀಟರ‍್ಗೆ(ಧಾಟಿ) ಕನ್ನಡದಲ್ಲಿ ಈಗ್ಲೇ ಬರೆಯಿರಿ ನೋಡೋಣ, ಇದು ನಿಮಗೆ ನನ್ನ ಚಾಲೇಂಜ್" ಅಂದ್ರು.

"ತಕ್ಷಣ ಅಂದ್ರೆ ಆಗೊಲ್ಲ ಒಂದು ಗಂಟೆನಾದ್ರೂ ಟೈಮ್ ಕೊಡಬೇಕಪ್ಪಾ ನೀವು" ಅಂದೆ.

ಸರಿ ಅಂದ್ರು.

ಅವ್ರು ಲೋಕಲ್ ಟ್ರೇನ್‍ನಲ್ಲಿ ಬಾಂದ್ರಾದಿಂದ ವಸಯ್ ತಲುಪುವಷ್ಟರಲ್ಲಿ (ಸುಮಾರು ೫೦ ನಿಮಿಷ) ನಾನು ಹಾಡು ಬರೆದು ಎರಡು ಸಲ ಹೇಳಿಕೊಂಡೂ ಆಗಿತ್ತು.

ಈಗ ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಧೈರ್ಯ ಮಾಡುತ್ತಿದ್ದೇನೆ. ನೀವೂ ಆ ಧಾಟಿಗೆ ನಾ ಬರೆದದ್ದನ್ನು ಹಾಡಿಕೊಂಡು ಹೇಳಿ ನಿಮಗೇನನಿಸ್ತು ಅಂತ. ಕೆಳಗಡೆ ಯು ಟ್ಯೂಬ್‍ಯಿಂದ ಆ ಹಾಡಿನ ವಿಡಿಯೊ ಹಾಕಿರುವೆ ನಿಮ್ಮ ಅನುಕೂಲಕ್ಕೆ. :)



ಮನಸಿನ ನಸುಕಂಪನ
ಅರಳಿದೆ ನನ್ನ ತನುಮನ
ನಿನ್ನಯ ನೆನಪಲಿ ಅನುದಿನ
ಹರುಷದಿ ಘಮಿಸುವೆ ನಾ...

ನಿನ್ನಯ ನೆನಪಿನ ಪರಿಮಳ ಸೂಸಿ
ಸಂಭ್ರಮಿಸುವೆ ಆ ಗಂಧವ ಪೂಸಿ
ಕಾಯುವೆ ನಾನು ನಿನ್ನಾ ದಾರಿಯ 

ಕಾಯುವೆ ನಾನು...
(ಪ)

ಆಡದೆ ಉಳಿದ ಮಾತುಗಳೆನಿತೊ
ಕಾಡಿಯು ಬಿಡದ ಭಾವಗಳೆನಿತೊ
ನಿನ್ನ ಸನಿಹಕೆ ಹಪಹಪಿಸುತಲೆ
ಚಾತಕವಾಗುವೆ ನಾ...
(ಪ)



Sunday, January 1, 2012

ವರ್ಷದ ಕೊನೆಯ ಸಂಗೀತದ ಕುಳಿರ್ಗಾಳಿ.... ಮುಗುಳ್ನಗೆ... ಗಾಯನ, ಸಿತಾರ್ ವಾದನ, ತಬಲಾ ವಾದನ.

ನಿನ್ನೆ ಅಂದರೆ 31st dec 2011ರಂದು ಸಂಜೆ ಕೆಲವು ಆತ್ಮೀಯರೊಡನೆ ನಮ್ಮನೆ ‘ಮುಗುಳ್ನಗೆ’

ಸಂಗೀತಗಂಗೆ ಯಲ್ಲಿ ಮಿಂದು ಪಾವನವಾದ ದಿನ.ನಿನ್ನೆ ಸಂಜೆಯ ಸಂಗೀತದ ಗುಂಗು ಶಾಶ್ವತವಾಗಿ  ಜೊತೆಯಲ್ಲುಳಿಯುವಂತೆ ಗಂಗೆಯನ್ನು ಅಕ್ಷರಕಳಶದಲ್ಲಿ  ತುಂಬಿಕೊಟ್ಟವರು ಸ್ನೇಹಿರತಾದ ರಮೇಶ್ ಗುರುರಾಜ್ ಅವರು. ಅವರಿಗೆ ಕೃತಜ್ಞತೆಯಿಂದ ಕೈ ಮುಗಿದು ನಿಮ್ಮೊಂದಿಗೆ ಅವರ ಸಂಗೀತಾಕ್ಷರಗಳನ್ನು ಜೊತೆಗೆ ಕೆಲವು ಸಂಭ್ರಮದ ಕ್ಷಣಗಳ ಫೋಟೊಗಳನ್ನೂ ಹಂಚಿಕೊಳ್ಳುತ್ತಿರುವೆ.


ಸಂಗೀತದಲ್ಲಿ ತನ್ಮಯರಾದ ಆತ್ಮೀಯರು






ಮುತ್ತುಕುಮಾರ್ ಮತ್ತು ಸಂಜೀವ್ ಕೊರ್ತಿ








ಶ್ರೀದೇವಿ ಕಳಸದ್


ವರ್ಷದ ಕೊನೆಯ ಸಂಗೀತದ ಕುಳಿರ್ಗಾಳಿ.... ಮುಗುಳ್ನಗೆ... ಗಾಯನ,
 ಸಿತಾರ್ ವಾದನ, ತಬಲಾ ವಾದನ.

by Ramesh Gururajarao on Sunday, January 1, 2012.
ವರ್ಷದ ಕೊನೆಗೆ ನಿಶಬ್ದವಿರಬಹುದು ಅನ್ನಿಸಿತ್ತು... ನಿಜದಲ್ಲಿ, ವರ್ಷದ ಕೊನೆಗೆ ಮನಸ್ಸಿನಲ್ಲಿ ಶಾಂತಿಯ ನಿಶಬ್ಧ ಇತ್ತು.. ಇದಕ್ಕೆ ಕಾರಣ ಗೆಳೆಯರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಮನೆಯವರು... ಸಂಗೀತದ ರಸಾನುಭವದಲ್ಲಿ ಮುಳುಗಿದ ಮೇಲೆ ಭವದ ಬಂಧನ ದಾಟಿ ಹೋದ ಲೆಕ್ಕ.... ನನ್ನ ಆ ದಾಟಿಗೆ ಅವರ ಕುಟುಂಬ ಕಾರಣವಾಯ್ತು...
ಮತ್ತೊಬ್ಬ ಗೆಳೆಯರಾದ ಶ್ರೀದೇವಿ ಕಳಸದ ಅವರ ಗಾಯನ, ಸಂಜೀವ್ ಕೊರ್ತಿ ಅವರ ಸಿತಾರ್ ವಾದನ, ಮುತ್ತು ಕುಮಾರ್ ಅವರ ತಬಲಾ ವಾದನ ಮತ್ತು ರೇಖಾ ಸವಡಿ ಅವರ ಸುಗಮ ಸಂಗೀತ ಗಾಯನ..... ಇದಿಷ್ಟು, ಈ ವರ್ಷದ ಕೊನೆಯ ದಿನ ಸಂಗೀತಮಯವಾಗಲು ಕಾರಣ...
ಸಂಜೆಯ ಮೊದಲ ಬಣ್ಣಗಳ ಗುಚ್ಛ ಸಿಕ್ಕಿದ್ದು ಮುತ್ತುಕುಮಾರ್ ಅವರ ತಬಲಾ ವಾದನದೊಂದಿಗೆ.... ಅಲ್ಲಾಹ್ ರಖಾ ಮತ್ತು ಜಾಕೀರ್ ಹುಸೇನ್ ಅವರಂಥ ದಿಗ್ಗಜರ ಶಿಷ್ಯತ್ವದಲ್ಲಿ ಬೆಳೆದ ಮುತ್ತುಕುಮಾರ್ ಕಟ್ಟಿಕೊಟ್ಟ ತಾಳಪ್ರಪಂಚ ಅದ್ಭುತ.
ತೀನ್ ತಾಲ್ ನುಡಿಸುವುದರೊಂದಿಗೆ ಪ್ರಾರಂಭವಾದ ಈ ಮೆಹೆಫಿಲ್ ಅದ್ಭುತವಾಗಿ ರಂಗೇರಿತು.. ಯಾರೋ, ಉಸ್ತಾದ್ ಅಲ್ಲಾಹ್ ರಖಾ ಅವರನ್ನು ಕೇಳಿದ್ದರಂತೆ, "ನೀವೇಕೆ ಯಾವಾಗಲೂ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೀನ್ ತಾಲ್ ನುಡಿಸುತ್ತೀರಾ ?" ಅದಕ್ಕೆ ಉಸ್ತಾದರ ಉತ್ತರ "ಈ ಜನ್ಮದಲ್ಲಿ ತೀನ್ ತಾಲ್ ಕಲಿಯುವ ಪ್ರಯತ್ನ ಪಟ್ಟಿದ್ದೇನೆ.  ನೋಡೋಣ, ಮುಂದಿನ ಜನ್ಮ ಇದ್ದರೇ, ಮತ್ತೊಂದು ತಾಳ ಕಲಿತು ನುಡಿಸುವ ಯತ್ನ ಮಾಡುತ್ತೇನೆ" ಅಷ್ಟು ವಿಸ್ತಾರವಾದ ತಾಳ ೧೬ ಮಾತ್ರೆಗಳ ಈ ತೀನ್ ತಾಲ್ ನುಡಿಸಿದ ಮುತ್ತುಕುಮಾರ್, ಜೊತೆಗೆ, ಲೆಹೆರಾಗೆ ಉಪಯೋಗಿಸಿದ್ದು ಐಪಾಡ್.  ಸಾಂಪ್ರದಾಯಿಕ ತಬಲಾ ವಾದನಕ್ಕೆ ಸಾಥ್ ನೀಡಿದ್ದು ಇತ್ತೀಚಿನ ತಂತ್ರಜ್ಞಾನ... ವಿಶಿಷ್ಟ ಎನಿಸಿತು.
ಅವರ ಗುರುಗಳೇ ರಚಿಸಿದ ಅದ್ಭುತ ಬಂದಿಶ್ ಗಳು ತಬಲಾ ವಾದನಕ್ಕೆ ಕಳೆ ಕೊಟ್ಟಿತು. ದೆಹಲಿ ಘರಾನಾದ ವೈಶಿಷ್ಟ್ಯ ಎನಿಸಿದ, ಆದರೆ ಎಲ್ಲಾ ಘರಾನಗಳಲ್ಲೂ ನುಡಿಸುವ "ಕಾಯದಾ" ಚೆನ್ನಾಗಿತ್ತು. ವಿಭಿನ್ನ ರೀತಿಯ ತಾಳ ಮಾದರಿಗಳನ್ನು ಒಟ್ಟಿಗೆ ಸೇರಿಸಿ, ಲಯಕ್ಕೆ ವ್ಯತ್ಯಾಸ ಬಾರದಂತೆ ನುಡಿಸುವ ಈ "ಕಾಯದಾ"  ಸ್ವಲ್ಪ ಕಠಿಣವಾದದ್ದೆ.  ಆದರೆ ಅದನ್ನು ಮುತ್ತುಕುಮಾರ್ ನಡೆಸಿಕೊಂಡು ಹೋದ ರೀತಿ, ಅವರ ಸುಧೀರ್ಘ ರಿಯಾಜ್ ಬಗ್ಗೆ ಸಾಕ್ಷಿ ನುಡಿದಿತ್ತು.
ಇದಾದ ನಂತರ ರೇಖಾ ಸವಡಿ ವಿಭಿನ್ನವೆನಿಸುವ ಗೀತೆಗಳನ್ನು ಹಾಡಿದರು.. ರೇಖಾ ಅವರಿಗೆ ಸ್ವಲ್ಪ ಹೆದರಿಕೆ ಇತ್ತಾದರೂ ಹಾರ್ಮೋನಿಯಂ ಸಾಥಿ ಶ್ರೀದೇವಿ ಕಳಸದ, ರೇಖಾ ಅವರಿಗೆ ಉತ್ಸಾಹ ತುಂಬಿದರು.  ಕೆ ಎಸ್ ನ ಅವರ "ದೀಪವು ನಿನ್ನದೇ ಗಾಳಿಯು ನಿನ್ನದೇ" ಗೀತೆಯೊಂದನ್ನು ಬಿಟ್ಟರೆ ಮಿಕ್ಕ ಗೀತೆಗಳು ಅಪರೂಪದ್ದಾಗಿದ್ದವು.  ಹೀಗಾಗಿ ರೇಖಾ ಅವರ ಗಾಯನ ವಿಶಿಷ್ಟವೆನ್ನಿಸಿತು. "ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ" ಕೃತಿಯಲ್ಲಿ ಶಬ್ದಗಳ ಜೋಡಣೆ ಸೊಗಸಾಗಿತ್ತು. ನಂತರ ಬಸವಣ್ಣನವರ ವಚನ              " ಎನ್ನ ವಾಮಕ್ಷೇಮ ನಿಮ್ಮದಯ್ಯ".  ಸಂಪೂರ್ಣ ಶರಣಾಗತಿಯ ಭಾವ ಸ್ಪಷ್ಟವಾಗಿ ಅವರ ಹಾಡಿನ ಶೈಲಿಯಲ್ಲಿ ಸಿಕ್ಕಿತ್ತು. ಎಲ್ಲರೂ ಹಾಡುವ ಹಾಡು ಬೇಂದ್ರೆಯವರ "ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ" ಹಾಡು ತುಂಬಾ ವಿಭಿನ್ನ ಟಚ್ ಪಡೆದುಕೊಂಡಿದ್ದು ರೇಖಾ ಅವರ ಪ್ರಸ್ತುತಿಯಲ್ಲಿ. ಸಾಲುಗಳು ಮೆಲಕು ಹಾಕುವಂಥವು. ಸಾಲು ಸಾಲಿನಲ್ಲೂ ಪ್ರೇಮದಾಟ, ತುಂಟಾಟ ತುಂಬಿ ಹರಿದಿದ್ದು ಈ ರಚನೆಯ ವೈಶಿಷ್ಟ್ಯ. ಪುರಂದರ ದಾಸರ ರಚನೆ "ಬರಿದೇ ಹೋಯ್ತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೇನೋ ರಂಗಾ" ಕೂಡ ಚೆನಾಗಿ ಮೂಡಿಬಂತು.
ಇದಾದ ನಂತರ ಹರಿದದ್ದು ಶುದ್ಧ ಸಂಗೀತ ರಸಗಂಗೆ. ನಮ್ಮ ಕರ್ನಾಟಕದವರೇ ಆದ ಕಲಾವಿದ ಸಂಜೀವ್ ಕೊರ್ತಿ ಸಿತಾರ್ ವಾದ್ಯವನ್ನು ಮಾತಾಡಿಸಿದ ರೀತಿ ಅದ್ಭುತ ಅದ್ಭುತ. ಮೊದಲನೆಯದಾಗಿ ಚಾರುಕೇಶಿಯ ರಾಗದ ಪ್ರಸ್ತುತಿ ವಿಲಂಬಿತ್ ಝಾಪ್ ತಾಲ್ ನಲ್ಲಿ ಮತ್ತು ಧ್ರುತ್ ತೀನ್ ತಾಲ್ ನಲ್ಲಿ.ಆಲಾಪದಲ್ಲಿ ರಾಗದ ಲಕ್ಷಣಗಳನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟ ಸಂಜೀವ್, ಮೈ ಝುಂ ಎನಿಸುವ ಮೀಂಡ್ ಗಳನ್ನೂ ಕೂಡ ಕೊಟ್ಟರು. ಸ್ವರಗಳ ನಡುವಿನ ನಡಿಗೆ, ಚಲನ್ ಗಳು  ಪಕಡ್ ಗಳು ತುಂಬಾ ವಿಶಿಷ್ಟವಾಗಿದ್ದವು. ಧ್ರುತ್ ಭಾಗದಲ್ಲಿ  ಸ್ವರಸಂಚಾರ, ಒಂದರ ಹಿಂದೊಂದು ಬಣ್ಣದ ಕಾರಂಜಿಗಳು ಪುಟಿದೇಳುವ ಅನುಭವ ಕೊಟ್ಟರೆ, ಸಿತಾರ್ ಮತ್ತು ತಬಲಾ ನಡುವಿನ ಸಂಭಾಷಣೆ, ನದಿಯ ಓಟದ ಅನುಭವ ಕೊಟ್ಟಿತು. (ಹಾಗೆ ಸುಮ್ಮನೆ : ಚಾರುಕೇಶಿ ರಾಗದಲ್ಲಿ ಸಾಕಷ್ಟು ಹಿಂದಿ ಸಿನೆಮಾ ಹಾಡುಗಳಿವೆ.  ಉದಾಹರಣೆಗೆ ಲತಾ ಮಂಗೇಶ್ಕರ್ ಹಾಡಿರುವ "ಬೆದರ್ದಿ ಬಾಲಮಾ ತುಜ್ ಕೋ ಮೇರಾ ಮನ್ ಯಾದ್ ಕರತಾ ಹೈ", ಅಥವಾ ಮುಕೇಶ್ ಮತ್ತು ಲತಾ ಹಾಡಿರುವ "ಕಿಸಿ ರಾಹ್ ಪೆ, ಕಿಸಿ ಮೋಡ್ ಪರ್" ನನಪು ಮಾಡಿಕೊಳ್ಳಿ. ರಾಗದ ಚಿತ್ರ ನಿಮ್ಮ ಮನದಲ್ಲಿ ಮೂಡಬಹುದು). ನಂತರ ಮೂಡಿಬಂದ ಮಿಶ್ರ ಶಿವರಂಜನಿ ರಾಗ ಚಿತ್ರಿಸಿದ ಮಿಶ್ರ ಬಣ್ಣಗಳು ತುಂಬಾ ಅಪರೂಪದ ಅನುಭವ ಕೊಟ್ಟಿದ್ದು ನಿಜ.
ಶ್ರೀದೇವಿ ಕಳಸದ, ಸಾಕಷ್ಟು ದಿಗ್ಗಜರ ಮಾರ್ಗದರ್ಶನದಲ್ಲಿ ಅರಳಿದ ಅಪ್ಪಟ ಕನ್ನಡ ಪ್ರತಿಭೆ. ಬರವಣಿಗೆಯ ಜೊತೆ ಜೊತೆಯಲ್ಲೇ ಸಂಗೀತ ಕೂಡ ಅವರಿಗೆ ಪ್ರಿಯವಾದದ್ದು. ಸಂಜೆಯಲ್ಲಿ ಹಾಡುವ ರಾಗಗಳಲ್ಲಿ ಬಹುಷಃ ಅತ್ಯಂತ ಜನಪ್ರಿಯ ರಾಗವಾದ ಯಮನ್ ನಲ್ಲಿ ಒಂದು ಬಡಾ ಖ್ಯಾಲ್ ಮತ್ತು ಒಂದು ಛೋಟಾ ಖ್ಯಾಲ್ ಮೂಲಕ ಬಣ್ಣಗಳ  ಹರಿವಿನ ಅನುಭವ ಕಟ್ಟಿ ಕೊಟ್ಟರು. (ಮೂಲತಃ ಈ ಪದ ಖಯಾಲ್ ಎಂಬ ಪದದಿಂದ ಈ ರೀತಿ ರೂಪಾಂತರವಾಗಿದೆ. ಖಯಾಲ್ ಎಂದರೆ ಇಲ್ಲಿ, ಒಂದು ಕ್ರಿಯಾಶೀಲ ಯೋಚನೆ. ಇದರಲ್ಲಿ ಎರಡು ಬಗೆ ಒಂದು ಬಡಾ ಖ್ಯಾಲ್ ಮತ್ತೊಂದು ಛೋಟಾ ಖ್ಯಾಲ್ . ಬಡಾ ಖ್ಯಾಲ್ ಒಂದು ಧ್ಯಾನದಂತೆ ಭಾಸವಾದರೆ,  ಛೋಟಾ ಖ್ಯಾಲ್ ಪಾದರಸದಂತೆ ಹರಿದು ಹೋಗುವ ಅನುಭವ ಕಟ್ಟಿಕೊಡುತ್ತದೆ). ಎರಡೂ ಖ್ಯಾಲ್ ಗಳಲ್ಲಿ ರೊಮ್ಯಾಂಟಿಕ್ ಭಾವ ಅದ್ಭುತವಾಗಿ ಮೂಡಿ ಬಂತು.
ನಂತರ ಶ್ರೀದೇವಿ ಹಾಡಿದ್ದು ಚೆನ್ನವೀರ ಕಣವಿಯವರ "ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ" ಕವನ. ನನಗೆ ತುಂಬಾ ಕಾಡಿದ ಸಾಲು "ಕಣ್ಣು ಕಟ್ಟಿ ಬೆನ್ನು ತಟ್ಟಿ ಓಡಿಸುವನು ಕಾಲ".. ಯಾವತ್ತಿಗೂ ನೆನಪಿನಲ್ಲಿ ಇಡಬೇಕಾದ ಸಾಲುಗಳು. 
ಬೇಂದ್ರೆ ಅಜ್ಜ ಪಂಢರಾಪುರದ ವಿಠಲನ ಬಗ್ಗೆ ಬರೆದ "ಟೊಂಕದ ಮೇಲೆ ಕೈ ಇಟ್ಟಾನ, ಭಕ್ತಿ ಸುಂಕ ಬೇಡತಾನ, ಡೊಂಕ ಇಲ್ಲಾ , ಬಿಂಕ ಇಲ್ಲಾ ಅಭಂಗ ಪದದವನ" ಹಾಡಿನ ಬಗ್ಗೆ ಹೇಳುವುದಕ್ಕಿಂತ ಅದನ್ನು ಶ್ರೀದೇವಿಯವರ ದನಿಯಲ್ಲೇ ಕೇಳಿ ಆನಂದ ಪಡಬೇಕು.
ಕೃಷ್ಣನ ಕುರಿತ ವಿರಹ ಭಾವದ "ದೇಖೆ ಬಿನ ನಾಹಿ ಚೈನಾ ತೋರಿ ಸೂರತಿಯಾ ಓ ಶಾಮ್ ರೇ" ಗೀತೆ ಸರಳವಾಗಿತ್ತು ಆದರೆ ಅಷ್ಟೇ ವೈವಿಧ್ಯಮಯವಾಗಿತ್ತು.
ಪುನಃ ಬೇಂದ್ರೆಯವರ ಮಾಯಕಿನ್ನರಿ ಪದ್ಯ "ಮರುಳು ಮಾಡಕ ಹೋಗಿ ಮರುಳುಸಿದ್ಧನ ನಾರಿ ಮರುಳಾಗ್ಯಾಳಾ ಜಂಗಮಯ್ಯಗ"...ಸೂಪರ್ ಸೂಪರ್..
ಎಲ್ಲಾ ಸಂಗೀತ ಕಾರ್ಯಕ್ರಮಗಳು ಮುಕ್ತಾಯ ಆಗುವುದು ಸಾಮಾನ್ಯವಾಗಿ ಭೈರವಿ ರಾಗದಲ್ಲಿ. ಶ್ರೀದೇವಿ ಹಾಡಿದ್ದು ಇದೇ ರಾಗದ ಅಕ್ಕನ ವಚನ "ಕಾಯವು ಕಳೆದರೆ ಕಂಡಿದರೆನಯ್ಯ"
ಕ್ಯಾಲೆಂಡರ್ ವರ್ಷದ ಕೊನೆಗೆ ಬಣ್ಣ ಬಣ್ಣಗಳ ಪ್ರಪಂಚವನ್ನೇ ತೆರೆದಿಟ್ಟು, ಮನದ ದುಗುಡಗಳನ್ನು ಮರೆ ಮಾಡಿ, ಹೊಸ ಬದಲಾವಣೆಗೆ ಉತ್ಸಾಹ ತುಂಬಿದ್ದು ಈ ಸಂಗೀತ ಸಂಜೆ.  
ಇದನ್ನು ಸಾಧ್ಯವಾಗಿಸಿದ ಗೆಳೆಯರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಪತಿ. ಆದರ, ಅಭಿಮಾನ, ಗೆಳೆತನದ ಬುತ್ತಿ ಜೊತೆ ಹಿತವಾದ ಭೋಜನ ನಿಜಕ್ಕೂ ಸುಖಕರ.. ಅನ್ನದಾತ ಸುಖೀಭವ, 
ಹಾಗೆಯೇ ಸಂಗೀತದ ಸುಧೆ ಉಣಿಸಿದ ಗೆಳೆಯರಿಗೆ ಶಿರ ಬಾಗಿ ಪ್ರಣಾಮಗಳು.

ಸಂಜೀವ್ ಕೊರ್ತಿ
ರೇಖಾ ಸವಡಿ
http://www.youtube.com/watch?v=VXS7VWL319g
ಸಂಜೀವ ಕೊರ್ತಿಯವರ ಸಿತಾರ ವಾದನದಲ್ಲಿ ಶಿವರಂಜಿನಿ ರಾಗದ ಒಂದು ಝಲಕ್.
x