ನಿನ್ನೆ ಅಂದರೆ 31st dec 2011ರಂದು ಸಂಜೆ ಕೆಲವು ಆತ್ಮೀಯರೊಡನೆ ನಮ್ಮನೆ ‘ಮುಗುಳ್ನಗೆ’
ಸಂಗೀತಗಂಗೆ ಯಲ್ಲಿ ಮಿಂದು ಪಾವನವಾದ ದಿನ.ನಿನ್ನೆ ಸಂಜೆಯ ಸಂಗೀತದ ಗುಂಗು ಶಾಶ್ವತವಾಗಿ ಜೊತೆಯಲ್ಲುಳಿಯುವಂತೆ ಗಂಗೆಯನ್ನು ಅಕ್ಷರಕಳಶದಲ್ಲಿ ತುಂಬಿಕೊಟ್ಟವರು ಸ್ನೇಹಿರತಾದ ರಮೇಶ್ ಗುರುರಾಜ್ ಅವರು. ಅವರಿಗೆ ಕೃತಜ್ಞತೆಯಿಂದ ಕೈ ಮುಗಿದು ನಿಮ್ಮೊಂದಿಗೆ ಅವರ ಸಂಗೀತಾಕ್ಷರಗಳನ್ನು ಜೊತೆಗೆ ಕೆಲವು ಸಂಭ್ರಮದ ಕ್ಷಣಗಳ ಫೋಟೊಗಳನ್ನೂ ಹಂಚಿಕೊಳ್ಳುತ್ತಿರುವೆ.
ಸಂಗೀತದಲ್ಲಿ ತನ್ಮಯರಾದ ಆತ್ಮೀಯರು |
ಶ್ರೀದೇವಿ ಕಳಸದ್ |
ವರ್ಷದ ಕೊನೆಯ ಸಂಗೀತದ ಕುಳಿರ್ಗಾಳಿ.... ಮುಗುಳ್ನಗೆ... ಗಾಯನ,
ಸಿತಾರ್ ವಾದನ, ತಬಲಾ ವಾದನ.
by Ramesh Gururajarao on Sunday, January 1, 2012.
ವರ್ಷದ ಕೊನೆಗೆ ನಿಶಬ್ದವಿರಬಹುದು ಅನ್ನಿಸಿತ್ತು... ನಿಜದಲ್ಲಿ, ವರ್ಷದ ಕೊನೆಗೆ ಮನಸ್ಸಿನಲ್ಲಿ ಶಾಂತಿಯ ನಿಶಬ್ಧ ಇತ್ತು.. ಇದಕ್ಕೆ ಕಾರಣ ಗೆಳೆಯರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಮನೆಯವರು... ಸಂಗೀತದ ರಸಾನುಭವದಲ್ಲಿ ಮುಳುಗಿದ ಮೇಲೆ ಭವದ ಬಂಧನ ದಾಟಿ ಹೋದ ಲೆಕ್ಕ.... ನನ್ನ ಆ ದಾಟಿಗೆ ಅವರ ಕುಟುಂಬ ಕಾರಣವಾಯ್ತು...
ಮತ್ತೊಬ್ಬ ಗೆಳೆಯರಾದ ಶ್ರೀದೇವಿ ಕಳಸದ ಅವರ ಗಾಯನ, ಸಂಜೀವ್ ಕೊರ್ತಿ ಅವರ ಸಿತಾರ್ ವಾದನ, ಮುತ್ತು ಕುಮಾರ್ ಅವರ ತಬಲಾ ವಾದನ ಮತ್ತು ರೇಖಾ ಸವಡಿ ಅವರ ಸುಗಮ ಸಂಗೀತ ಗಾಯನ..... ಇದಿಷ್ಟು, ಈ ವರ್ಷದ ಕೊನೆಯ ದಿನ ಸಂಗೀತಮಯವಾಗಲು ಕಾರಣ...
ಸಂಜೆಯ ಮೊದಲ ಬಣ್ಣಗಳ ಗುಚ್ಛ ಸಿಕ್ಕಿದ್ದು ಮುತ್ತುಕುಮಾರ್ ಅವರ ತಬಲಾ ವಾದನದೊಂದಿಗೆ.... ಅಲ್ಲಾಹ್ ರಖಾ ಮತ್ತು ಜಾಕೀರ್ ಹುಸೇನ್ ಅವರಂಥ ದಿಗ್ಗಜರ ಶಿಷ್ಯತ್ವದಲ್ಲಿ ಬೆಳೆದ ಮುತ್ತುಕುಮಾರ್ ಕಟ್ಟಿಕೊಟ್ಟ ತಾಳಪ್ರಪಂಚ ಅದ್ಭುತ.
ತೀನ್ ತಾಲ್ ನುಡಿಸುವುದರೊಂದಿಗೆ ಪ್ರಾರಂಭವಾದ ಈ ಮೆಹೆಫಿಲ್ ಅದ್ಭುತವಾಗಿ ರಂಗೇರಿತು.. ಯಾರೋ, ಉಸ್ತಾದ್ ಅಲ್ಲಾಹ್ ರಖಾ ಅವರನ್ನು ಕೇಳಿದ್ದರಂತೆ, "ನೀವೇಕೆ ಯಾವಾಗಲೂ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೀನ್ ತಾಲ್ ನುಡಿಸುತ್ತೀರಾ ?" ಅದಕ್ಕೆ ಉಸ್ತಾದರ ಉತ್ತರ "ಈ ಜನ್ಮದಲ್ಲಿ ತೀನ್ ತಾಲ್ ಕಲಿಯುವ ಪ್ರಯತ್ನ ಪಟ್ಟಿದ್ದೇನೆ. ನೋಡೋಣ, ಮುಂದಿನ ಜನ್ಮ ಇದ್ದರೇ, ಮತ್ತೊಂದು ತಾಳ ಕಲಿತು ನುಡಿಸುವ ಯತ್ನ ಮಾಡುತ್ತೇನೆ" ಅಷ್ಟು ವಿಸ್ತಾರವಾದ ತಾಳ ೧೬ ಮಾತ್ರೆಗಳ ಈ ತೀನ್ ತಾಲ್ ನುಡಿಸಿದ ಮುತ್ತುಕುಮಾರ್, ಜೊತೆಗೆ, ಲೆಹೆರಾಗೆ ಉಪಯೋಗಿಸಿದ್ದು ಐಪಾಡ್. ಸಾಂಪ್ರದಾಯಿಕ ತಬಲಾ ವಾದನಕ್ಕೆ ಸಾಥ್ ನೀಡಿದ್ದು ಇತ್ತೀಚಿನ ತಂತ್ರಜ್ಞಾನ... ವಿಶಿಷ್ಟ ಎನಿಸಿತು.
ಅವರ ಗುರುಗಳೇ ರಚಿಸಿದ ಅದ್ಭುತ ಬಂದಿಶ್ ಗಳು ತಬಲಾ ವಾದನಕ್ಕೆ ಕಳೆ ಕೊಟ್ಟಿತು. ದೆಹಲಿ ಘರಾನಾದ ವೈಶಿಷ್ಟ್ಯ ಎನಿಸಿದ, ಆದರೆ ಎಲ್ಲಾ ಘರಾನಗಳಲ್ಲೂ ನುಡಿಸುವ "ಕಾಯದಾ" ಚೆನ್ನಾಗಿತ್ತು. ವಿಭಿನ್ನ ರೀತಿಯ ತಾಳ ಮಾದರಿಗಳನ್ನು ಒಟ್ಟಿಗೆ ಸೇರಿಸಿ, ಲಯಕ್ಕೆ ವ್ಯತ್ಯಾಸ ಬಾರದಂತೆ ನುಡಿಸುವ ಈ "ಕಾಯದಾ" ಸ್ವಲ್ಪ ಕಠಿಣವಾದದ್ದೆ. ಆದರೆ ಅದನ್ನು ಮುತ್ತುಕುಮಾರ್ ನಡೆಸಿಕೊಂಡು ಹೋದ ರೀತಿ, ಅವರ ಸುಧೀರ್ಘ ರಿಯಾಜ್ ಬಗ್ಗೆ ಸಾಕ್ಷಿ ನುಡಿದಿತ್ತು.
ಇದಾದ ನಂತರ ರೇಖಾ ಸವಡಿ ವಿಭಿನ್ನವೆನಿಸುವ ಗೀತೆಗಳನ್ನು ಹಾಡಿದರು.. ರೇಖಾ ಅವರಿಗೆ ಸ್ವಲ್ಪ ಹೆದರಿಕೆ ಇತ್ತಾದರೂ ಹಾರ್ಮೋನಿಯಂ ಸಾಥಿ ಶ್ರೀದೇವಿ ಕಳಸದ, ರೇಖಾ ಅವರಿಗೆ ಉತ್ಸಾಹ ತುಂಬಿದರು. ಕೆ ಎಸ್ ನ ಅವರ "ದೀಪವು ನಿನ್ನದೇ ಗಾಳಿಯು ನಿನ್ನದೇ" ಗೀತೆಯೊಂದನ್ನು ಬಿಟ್ಟರೆ ಮಿಕ್ಕ ಗೀತೆಗಳು ಅಪರೂಪದ್ದಾಗಿದ್ದವು. ಹೀಗಾಗಿ ರೇಖಾ ಅವರ ಗಾಯನ ವಿಶಿಷ್ಟವೆನ್ನಿಸಿತು. "ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ" ಕೃತಿಯಲ್ಲಿ ಶಬ್ದಗಳ ಜೋಡಣೆ ಸೊಗಸಾಗಿತ್ತು. ನಂತರ ಬಸವಣ್ಣನವರ ವಚನ " ಎನ್ನ ವಾಮಕ್ಷೇಮ ನಿಮ್ಮದಯ್ಯ". ಸಂಪೂರ್ಣ ಶರಣಾಗತಿಯ ಭಾವ ಸ್ಪಷ್ಟವಾಗಿ ಅವರ ಹಾಡಿನ ಶೈಲಿಯಲ್ಲಿ ಸಿಕ್ಕಿತ್ತು. ಎಲ್ಲರೂ ಹಾಡುವ ಹಾಡು ಬೇಂದ್ರೆಯವರ "ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ" ಹಾಡು ತುಂಬಾ ವಿಭಿನ್ನ ಟಚ್ ಪಡೆದುಕೊಂಡಿದ್ದು ರೇಖಾ ಅವರ ಪ್ರಸ್ತುತಿಯಲ್ಲಿ. ಸಾಲುಗಳು ಮೆಲಕು ಹಾಕುವಂಥವು. ಸಾಲು ಸಾಲಿನಲ್ಲೂ ಪ್ರೇಮದಾಟ, ತುಂಟಾಟ ತುಂಬಿ ಹರಿದಿದ್ದು ಈ ರಚನೆಯ ವೈಶಿಷ್ಟ್ಯ. ಪುರಂದರ ದಾಸರ ರಚನೆ "ಬರಿದೇ ಹೋಯ್ತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೇನೋ ರಂಗಾ" ಕೂಡ ಚೆನಾಗಿ ಮೂಡಿಬಂತು.
ಇದಾದ ನಂತರ ಹರಿದದ್ದು ಶುದ್ಧ ಸಂಗೀತ ರಸಗಂಗೆ. ನಮ್ಮ ಕರ್ನಾಟಕದವರೇ ಆದ ಕಲಾವಿದ ಸಂಜೀವ್ ಕೊರ್ತಿ ಸಿತಾರ್ ವಾದ್ಯವನ್ನು ಮಾತಾಡಿಸಿದ ರೀತಿ ಅದ್ಭುತ ಅದ್ಭುತ. ಮೊದಲನೆಯದಾಗಿ ಚಾರುಕೇಶಿಯ ರಾಗದ ಪ್ರಸ್ತುತಿ ವಿಲಂಬಿತ್ ಝಾಪ್ ತಾಲ್ ನಲ್ಲಿ ಮತ್ತು ಧ್ರುತ್ ತೀನ್ ತಾಲ್ ನಲ್ಲಿ.ಆಲಾಪದಲ್ಲಿ ರಾಗದ ಲಕ್ಷಣಗಳನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟ ಸಂಜೀವ್, ಮೈ ಝುಂ ಎನಿಸುವ ಮೀಂಡ್ ಗಳನ್ನೂ ಕೂಡ ಕೊಟ್ಟರು. ಸ್ವರಗಳ ನಡುವಿನ ನಡಿಗೆ, ಚಲನ್ ಗಳು ಪಕಡ್ ಗಳು ತುಂಬಾ ವಿಶಿಷ್ಟವಾಗಿದ್ದವು. ಧ್ರುತ್ ಭಾಗದಲ್ಲಿ ಸ್ವರಸಂಚಾರ, ಒಂದರ ಹಿಂದೊಂದು ಬಣ್ಣದ ಕಾರಂಜಿಗಳು ಪುಟಿದೇಳುವ ಅನುಭವ ಕೊಟ್ಟರೆ, ಸಿತಾರ್ ಮತ್ತು ತಬಲಾ ನಡುವಿನ ಸಂಭಾಷಣೆ, ನದಿಯ ಓಟದ ಅನುಭವ ಕೊಟ್ಟಿತು. (ಹಾಗೆ ಸುಮ್ಮನೆ : ಚಾರುಕೇಶಿ ರಾಗದಲ್ಲಿ ಸಾಕಷ್ಟು ಹಿಂದಿ ಸಿನೆಮಾ ಹಾಡುಗಳಿವೆ. ಉದಾಹರಣೆಗೆ ಲತಾ ಮಂಗೇಶ್ಕರ್ ಹಾಡಿರುವ "ಬೆದರ್ದಿ ಬಾಲಮಾ ತುಜ್ ಕೋ ಮೇರಾ ಮನ್ ಯಾದ್ ಕರತಾ ಹೈ", ಅಥವಾ ಮುಕೇಶ್ ಮತ್ತು ಲತಾ ಹಾಡಿರುವ "ಕಿಸಿ ರಾಹ್ ಪೆ, ಕಿಸಿ ಮೋಡ್ ಪರ್" ನನಪು ಮಾಡಿಕೊಳ್ಳಿ. ರಾಗದ ಚಿತ್ರ ನಿಮ್ಮ ಮನದಲ್ಲಿ ಮೂಡಬಹುದು). ನಂತರ ಮೂಡಿಬಂದ ಮಿಶ್ರ ಶಿವರಂಜನಿ ರಾಗ ಚಿತ್ರಿಸಿದ ಮಿಶ್ರ ಬಣ್ಣಗಳು ತುಂಬಾ ಅಪರೂಪದ ಅನುಭವ ಕೊಟ್ಟಿದ್ದು ನಿಜ.
ಶ್ರೀದೇವಿ ಕಳಸದ, ಸಾಕಷ್ಟು ದಿಗ್ಗಜರ ಮಾರ್ಗದರ್ಶನದಲ್ಲಿ ಅರಳಿದ ಅಪ್ಪಟ ಕನ್ನಡ ಪ್ರತಿಭೆ. ಬರವಣಿಗೆಯ ಜೊತೆ ಜೊತೆಯಲ್ಲೇ ಸಂಗೀತ ಕೂಡ ಅವರಿಗೆ ಪ್ರಿಯವಾದದ್ದು. ಸಂಜೆಯಲ್ಲಿ ಹಾಡುವ ರಾಗಗಳಲ್ಲಿ ಬಹುಷಃ ಅತ್ಯಂತ ಜನಪ್ರಿಯ ರಾಗವಾದ ಯಮನ್ ನಲ್ಲಿ ಒಂದು ಬಡಾ ಖ್ಯಾಲ್ ಮತ್ತು ಒಂದು ಛೋಟಾ ಖ್ಯಾಲ್ ಮೂಲಕ ಬಣ್ಣಗಳ ಹರಿವಿನ ಅನುಭವ ಕಟ್ಟಿ ಕೊಟ್ಟರು. (ಮೂಲತಃ ಈ ಪದ ಖಯಾಲ್ ಎಂಬ ಪದದಿಂದ ಈ ರೀತಿ ರೂಪಾಂತರವಾಗಿದೆ. ಖಯಾಲ್ ಎಂದರೆ ಇಲ್ಲಿ, ಒಂದು ಕ್ರಿಯಾಶೀಲ ಯೋಚನೆ. ಇದರಲ್ಲಿ ಎರಡು ಬಗೆ ಒಂದು ಬಡಾ ಖ್ಯಾಲ್ ಮತ್ತೊಂದು ಛೋಟಾ ಖ್ಯಾಲ್ . ಬಡಾ ಖ್ಯಾಲ್ ಒಂದು ಧ್ಯಾನದಂತೆ ಭಾಸವಾದರೆ, ಛೋಟಾ ಖ್ಯಾಲ್ ಪಾದರಸದಂತೆ ಹರಿದು ಹೋಗುವ ಅನುಭವ ಕಟ್ಟಿಕೊಡುತ್ತದೆ). ಎರಡೂ ಖ್ಯಾಲ್ ಗಳಲ್ಲಿ ರೊಮ್ಯಾಂಟಿಕ್ ಭಾವ ಅದ್ಭುತವಾಗಿ ಮೂಡಿ ಬಂತು.
ನಂತರ ಶ್ರೀದೇವಿ ಹಾಡಿದ್ದು ಚೆನ್ನವೀರ ಕಣವಿಯವರ "ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ" ಕವನ. ನನಗೆ ತುಂಬಾ ಕಾಡಿದ ಸಾಲು "ಕಣ್ಣು ಕಟ್ಟಿ ಬೆನ್ನು ತಟ್ಟಿ ಓಡಿಸುವನು ಕಾಲ".. ಯಾವತ್ತಿಗೂ ನೆನಪಿನಲ್ಲಿ ಇಡಬೇಕಾದ ಸಾಲುಗಳು.
ಬೇಂದ್ರೆ ಅಜ್ಜ ಪಂಢರಾಪುರದ ವಿಠಲನ ಬಗ್ಗೆ ಬರೆದ "ಟೊಂಕದ ಮೇಲೆ ಕೈ ಇಟ್ಟಾನ, ಭಕ್ತಿ ಸುಂಕ ಬೇಡತಾನ, ಡೊಂಕ ಇಲ್ಲಾ , ಬಿಂಕ ಇಲ್ಲಾ ಅಭಂಗ ಪದದವನ" ಹಾಡಿನ ಬಗ್ಗೆ ಹೇಳುವುದಕ್ಕಿಂತ ಅದನ್ನು ಶ್ರೀದೇವಿಯವರ ದನಿಯಲ್ಲೇ ಕೇಳಿ ಆನಂದ ಪಡಬೇಕು.
ಕೃಷ್ಣನ ಕುರಿತ ವಿರಹ ಭಾವದ "ದೇಖೆ ಬಿನ ನಾಹಿ ಚೈನಾ ತೋರಿ ಸೂರತಿಯಾ ಓ ಶಾಮ್ ರೇ" ಗೀತೆ ಸರಳವಾಗಿತ್ತು ಆದರೆ ಅಷ್ಟೇ ವೈವಿಧ್ಯಮಯವಾಗಿತ್ತು.
ಪುನಃ ಬೇಂದ್ರೆಯವರ ಮಾಯಕಿನ್ನರಿ ಪದ್ಯ "ಮರುಳು ಮಾಡಕ ಹೋಗಿ ಮರುಳುಸಿದ್ಧನ ನಾರಿ ಮರುಳಾಗ್ಯಾಳಾ ಜಂಗಮಯ್ಯಗ"...ಸೂಪರ್ ಸೂಪರ್..
ಎಲ್ಲಾ ಸಂಗೀತ ಕಾರ್ಯಕ್ರಮಗಳು ಮುಕ್ತಾಯ ಆಗುವುದು ಸಾಮಾನ್ಯವಾಗಿ ಭೈರವಿ ರಾಗದಲ್ಲಿ. ಶ್ರೀದೇವಿ ಹಾಡಿದ್ದು ಇದೇ ರಾಗದ ಅಕ್ಕನ ವಚನ "ಕಾಯವು ಕಳೆದರೆ ಕಂಡಿದರೆನಯ್ಯ"
ಕ್ಯಾಲೆಂಡರ್ ವರ್ಷದ ಕೊನೆಗೆ ಬಣ್ಣ ಬಣ್ಣಗಳ ಪ್ರಪಂಚವನ್ನೇ ತೆರೆದಿಟ್ಟು, ಮನದ ದುಗುಡಗಳನ್ನು ಮರೆ ಮಾಡಿ, ಹೊಸ ಬದಲಾವಣೆಗೆ ಉತ್ಸಾಹ ತುಂಬಿದ್ದು ಈ ಸಂಗೀತ ಸಂಜೆ.
ಇದನ್ನು ಸಾಧ್ಯವಾಗಿಸಿದ ಗೆಳೆಯರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಪತಿ. ಆದರ, ಅಭಿಮಾನ, ಗೆಳೆತನದ ಬುತ್ತಿ ಜೊತೆ ಹಿತವಾದ ಭೋಜನ ನಿಜಕ್ಕೂ ಸುಖಕರ.. ಅನ್ನದಾತ ಸುಖೀಭವ,
ಹಾಗೆಯೇ ಸಂಗೀತದ ಸುಧೆ ಉಣಿಸಿದ ಗೆಳೆಯರಿಗೆ ಶಿರ ಬಾಗಿ ಪ್ರಣಾಮಗಳು.
ಸಂಜೀವ್ ಕೊರ್ತಿ |
ರೇಖಾ ಸವಡಿ |
ಸಂಜೀವ ಕೊರ್ತಿಯವರ ಸಿತಾರ ವಾದನದಲ್ಲಿ ಶಿವರಂಜಿನಿ ರಾಗದ ಒಂದು ಝಲಕ್.
x