Friday, April 2, 2010

Thanks BK.:-)


'ಹೊಟ್ಟೆ ತುಂಬಿದವನಿಗೆ ಹುಗ್ಗಿ ಮುಳ್ಳು' ಅನ್ನುವ ಗಾದೆಮಾತೊಂದಿದೆ ಅಲ್ಲವೇ? ಮಾತು ನಮ್ಮಲ್ಲಿ ಎಷ್ಟೊಂದು ಜನರಿಗೆ ಅನ್ವಯಿಸುತ್ತದೆ ಅನ್ನುವುದನ್ನು ನಾವುಗಳೇ ಕಂಡುಕೊಳ್ಳಬೇಕು. ಗಾದೆಮಾತು ವಿಶಾಲ ಅರ್ಥ ಹೊಂದಿದೆ ಅನ್ನುವುದು ಹೌದಾದರೂ ಸಧ್ಯಕ್ಕೆ ನಾನು ಇದನ್ನು ಕೇವಲ ಹೊಟ್ಟೆಯ ಮಟ್ಟಿಗೆ ಮಾತ್ರ ಸೀಮಿತಗೊಳಿಸಿ ನನ್ನಲ್ಲಿದ್ದ ಗೊಂದಲ ಅಥವಾ ಡೋಲಾಯಮಾನ ಮನಸ್ಥಿತಿಯನ್ನು ತಮಗರಿಯದಂತೆಯೇ ಹೋಗಲಾಡಿಸಿ ನನ್ನನ್ನು ನಿರಾಳವಾಗಿಸಿದ ವ್ಯಕ್ತಿಯೊಬ್ಬರಿಗೆ ಲೇಖನದ ಮೂಲಕ ಕೃತಜ್ಞತೆ ಹೇಳಲು ಇಷ್ಟಪಡುತ್ತೇನೆ. ಆದರೆ ಅವರಿಗೆ ಕನ್ನಡ ಓದಲು, ಬರೆಯಲು ಬರುವುದು ದೂರದ ಮಾತಾಯ್ತು, ಕೇಳಿ ಅರ್ಥವಾಗೋದು ಕೆಲವೇ ಕೆಲವು (ಖಡಾಖಂಡಿತವಾಗಿ ಕೈ ಬೆರಳೆಣಿಕೆಯಷ್ಟು ) ಶಬ್ದಗಳು ಮಾತ್ರ!!... Thank you soooo much BK!.:-)


ಹೌದು ಅವರ ಆಪ್ತರೆಲ್ಲರೂ ಅವರನ್ನು ಕರೆಯುವುದು BK ಅಂತಲೇ! ಬಾಲಕೃಷ್ಣ ಶಹ ಅನ್ನುವುದು ಅವರ ಪೂರ್ಣ ಹೆಸರು. ಮೂವತ್ತೆರಡರ ಹರೆಯದ, ಹೆಸರಾಂತ ಕಂಪನಿಯೊಂದರಲ್ಲಿ ಆರಂಕಿಯ ವೇತನ ಪಡೆಯುವ CA ಅವರು. ತುಂಬಾ ಸೌಮ್ಯ ಮತ್ತು ಅಷ್ಟೇ ಖಂಡಿತವಾದಿ. ಮುಂಬೈಯಲ್ಲಿ ವಾಸ.
ಸರಿ ಏನಾಯ್ತಪ್ಪಾ ಅಂದ್ರೆ ನಾವು ಇಲ್ಲಿಗೆ ಅಂದರೆ ಬೆಂಗಳೂರಿಗೆ ಶಿಫ್ಟ್ ಆದ ಹೊಸತರಲ್ಲಿ ಮುಂಬೈಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋಗೋದು ಅಂದರೆ ನಾನು ರೆಕ್ಕೆ ಇಲ್ಲದೆ ಹಾರಿ ಹೋಗುತ್ತೇನೆ. ಕಾರಣ, ನನಗೊಂದು ವ್ಯಕ್ತಿತ್ವ ಇದೆ ಅಂತ ತೋರಿಸಿಕೊಟ್ಟಿದ್ದೆ ಮುಂಬೈ ಮತ್ತು ಅಲ್ಲಿಯ ನನ್ನ ಆತ್ಮೀಯ ಕನ್ನಡಿಗರು. ಅಲ್ಲಿಯ ಜನರ ನಿಸ್ವಾರ್ಥ ಒಲುಮೆಗೆ ಸೋತ ನನ್ನ ಮನಕ್ಕೆ ಒಂದು ಸಣ್ಣ ನೆಪ ಸಾಕು ಮುಂಬೈ ಕಡೆ ಪಯಣ ಬೆಳೆಸಲು. ಇಂಥದ್ದೇ ಒಂದು ಕಾರಣಭರಿತ ನೆಪದೊಂದಿಗೆ ಹೊರಟೆ ಮುಂಬೈಗೆ..:)ಮಾರನೆಯ ದಿನ ರಾತ್ರಿ ಊಟಕ್ಕೆ ಅಂತ ಬಿಕೆ ಮತ್ತು ಪಲ್ಲವಿ(ಬಿಕೆ ಅವರ ಹೆಂಡತಿ) ಅವರಿಂದ ಆತ್ಮೀಯ ಆಹ್ವಾನ! ಪಲ್ಲವಿ, ಅವಿನಾಶ್ ಅವರ ತಂಗಿ.ತುಂಬಾ ಚಟುವಟಿಕೆಯಿಂದಿರುವ ಸರಳ ಮನಸಿನ ಹುಡುಗಿ.ನಾವೆಲ್ಲಾ ಹೋಟೆಲ್ ತಲುಪಿ ಅವರವರ ಇಷ್ಟದ ಪದಾರ್ಥಗಳನ್ನು ತರಿಸಿಕೊಂಡು ದಂಪತಿಗಳ ಒತ್ತಾಯಕ್ಕೆ ಕಟ್ಟು ಬಿದ್ದು "ಯಾರಾದರು ಹೊತ್ತೊಯ್ದು ಮನೆ ತಲುಪಿಸಿದರೆ ಪುಣ್ಯ ಬರುತ್ತೆ" ಅನ್ನುವಷ್ಟು ತಿಂದದ್ದಾಯ್ತು. ಆದರೂ ಟೇಬಲ್ ಮೇಲೆ ಇನ್ನೂ ಕನಿಷ್ಠ ಇಬ್ಬರಿಗಾದರೂ ಆಗುವಷ್ಟು ಊಟ ಮೀಗಿದೆ!
ನನಗೋ
ಪೇಚಾಟ, "ಛೆ! ಎಷ್ಟೊಂದು ಊಟ ಉಳಿದು ಹೋಯ್ತು! ಮನೇಲಾಗಿದ್ರೆ ಎತ್ತಿಟ್ಟು ಬೆಳಗಿನ ತಿಂಡಿ ಅಂತಲೋ ಇಲ್ಲ ಕೆಲಸದವಳಿಗಂತಲೋ ಕೊಟ್ಟು ಹಾಳಾಗದಂತೆ ನೋಡಿಕೊಳ್ಳಬಹುದಿತ್ತು. ಆದ್ರೆ ಇದು ಹೋಟೆಲ್ಲು, ಏನೂ ಮಾಡೋಕಾಗೋಲ್ಲ, ನನ್ನಿಂದಾಗಿ ಪಾಪ, ಬಿಕೆ-ಪಲ್ಲವಿ ದಂಪತಿಗಳ ಅಷ್ಟು ದುಡ್ಡೂ ಹಾಳು..." ಇದನ್ನು ಅವಿಗೆ ಹೇಳೋಣ ಅಂತ ಅವರತ್ತ ತಿರುಗುವಷ್ಟರಲ್ಲಿ ಬಿಕೆ ಅಲ್ಲಿದ್ದ ಹೋಟೆಲ್ ಮಾಣಿಯನ್ನು ಕರೆದು ಉಳಿದಿದ್ದ ಊಟವನ್ನೆಲ್ಲ ಪ್ಯಾಕ್ ಮಾಡಿ ಕೊಡಲು ಹೇಳಿದರು. ಆಶ್ಚರ್ಯದಿಂದ ಅವರತ್ತ ನೋಡಿದೆ. ಅದನ್ನು ಗಮನಿಸಿದ ಪಲ್ಲವಿ," ಇದನ್ನ ತೊಗೊಂಡ್ಹೋಗಿ ಬಿಕೆ ದಾರಿಯೋಳಗ್ ಕೂತಿರೋ ಬಡವ್ರಿಗೆ ಕೊಡ್ತಾನ, ಅವ್ನಿಗೆ ಅನ್ನ ಕೆಡಸೂದು ಅಂದ್ರ ಒಟ್ಟs ಸೇರಂಗಿಲ್ಲ. ಹಂಗಂತ ತಿನ್ಲಿಕ್ಕೆ,ಉಣ್ಲಿಕ್ಕೆ ಯಾವತ್ತೂ ಕಮ್ಮಿ ಮಾಡಂಗಿಲ್ಲ." ಅಂತ ಹೇಳಿ ಅಷ್ಟು ದಿನ ನನ್ನೊಳಗಿದ್ದ ದ್ವಂದ್ವ (ಒಣ ಅಭಿಮಾನ ಮತ್ತು ಆಹಾರ ಸುಮ್ಮನೆ ಹಾಳಾಗ್ತಿದೆಯಲ್ಲ ಅನ್ನೊ ಕಳವಳ )ಕ್ಕೆ ಮುಕ್ತಿ ಕೊಟ್ಟಳು.
ಉಳಿದ
ಪದಾರ್ಥಗಳ
ಪಾರ್ಸಲ್ ನ್ನು ಯಾವ ಮುಜುಗರವೂ ಇಲ್ಲದೆ ಇಸಿದುಕೊಂಡು ಕಾರ್ ಹತ್ತಿದ ಬಿಕೆ, ಒಂದೆಡೆ ಕಾರ್ ನಿಲ್ಲಿಸಿ ಸ್ವಲ್ಪ ದೂರ ನಡೆದು ಅಲ್ಲಿದ್ದ ಜನರಿಗೆ ಅದನ್ನು ಕೊಟ್ಟು, ಮತ್ತೆ ಡ್ರೈವ್ ಮಾಡತೊಡಗಿದರು, ಉಳಿದ ಅನ್ನವನ್ನು ಯಾರೋ ಒಬ್ಬರಿಗೆ ದಾನ ಮಾಡಿದೆ ಅನ್ನುವ ಯಾವ ಹಮ್ಮು ಬಿಮ್ಮು ಇಲ್ಲದೆ.

"ಹೌದಲ್ವಾ? ನಮ್ಮ ಒಣ ಪ್ರತಿಷ್ಥೆಗೆ ಹೋಟೆಲ್ ನಲ್ಲಿ ತರಿಸಿ ಉಳಿದ ಪದಾರ್ಥವನ್ನು ಸುಮ್ಮನೆ ಹಾಳು ಮಾಡುತ್ತೇವೆ. ಹೋಟೆಲಿನವರೂ ಸಹ ನಾವು ತರಿಸಿದ ಪದಾರ್ಥಗಳನ್ನು ನಾವು ಮುಟ್ಟಿರದಿದ್ದರೂ ಅದನ್ನು ಸೀದಾ ಮುಸುರೆ ಬಳಿದ ಬೆಸಿನ್ನಿನಲ್ಲಿ ಹಾಕಿ ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುತ್ತಾರೆ. ಅವರಿಗಾದರೆ 'ಬೇರೆಯವರಿಗೆ ಕೊಟ್ಟಿದ್ದನ್ನೇ ಮರಳಿ ನಮಗೆ ಕೊಡುತ್ತಿರುವಿ!' ಎಂದು ತಮ್ಮ ಗ್ರಾಹಕರು ಜಗಳವಾಡಿ, ಮತ್ತೆ ತಮ್ಮ ಹೋಟೆಲ್ಲಿಗೆ ಬರದಿರುವ ಆತಂಕವಿರುತ್ತದೆ. ಆದರೆ ನಮಗ್ಯಾವ ಆತಂಕ?! ಅದೂ ನಾವೇ ತರಿಸಿದ ಇಷ್ಟದ ಪದಾರ್ಥಗಳನ್ನು ನಾವು ನಮ್ಮೊಂದಿಗೆ ಮನೆಗೆ ತರಲು ಅಷ್ಟೊಂದು ಮುಜುಗರ ಪಡುವುದೇಕೆ? ಬೇಕಿದ್ದರೆ ಅದನ್ನೇ ಬೆಳಗಿನ ತಿಂಡಿಗೆ ಉಪಯೋಗಿಸಿದ, ಇಲ್ಲವಾದಲ್ಲಿ ಕೆಲಸದವರಿಗೋ ಅಥವಾ ದಾರಿ ಪಕ್ಕದಲ್ಲಿ ಕಾಣ ಸಿಗುವ ಹಸಿದವರಿಗೋ ಕೊಟ್ಟರೆ ಸಾರ್ಥವಾಗುತ್ತದೆ." ಸತ್ಯ ಅರಿವಾದದ್ದೆ ಒಂಥರದ ನಿರಾಳತೆ ಅನುಭವಕ್ಕೆ ಬಂತು. ಜೊತೆಗೆ ಮುಂದೆ ನಾನೂ ಹೀಗೆ ಮಾಡುತ್ತೇನೆ ಅನ್ನುವ ವಿಚಿತ್ರ ಪುಳಕ! ಅದನ್ನು ಅವಿ ಹತ್ತಿರ ಹೇಳಿಕೊಂಡು ಮತ್ತೆ ಮತ್ತೆ ಅರಿಯದ ಪುಳಕ ಅನುಭವಿಸಿದೆ.

ನಿಮಗಿದು ವಿಪರೀತ ಅನಿಸಬಹುದೇನೋ, ಆದರೆ ಅಂದು ನನಗೆ ದೊರೆತ ಪಾಠ ಪ್ರಿಯವಾದುದಾಗಿತ್ತು.
ನನಗೆ ಎಷ್ಟೋ ಸಲ ಹೀಗೆ ಹೋಟೆಲ್ಲಿನಲ್ಲಿ ಹೆಚ್ಚು ಮಾಡಿ ಉಳಿಸಿ ಬರುವ ಆಹಾರದ ಕುರಿತು ಹಾಳಾಗುತ್ತದೆ ಅನ್ನುವ ಹಳಹಳಿ ಇರುತ್ತಿತ್ತಾದರೂ ಅದಕ್ಕೂ ಹೆಚ್ಚಿಗೆ ಅದನ್ನು ಪ್ಯಾಕ್ ಮಾಡಿ ಕೊಡಿ ಎಂದರೆ 'ಸುತ್ತ ಕುಳಿತ ಜನ ಮತ್ತು ಹೋಟೆಲಿನವರು ಏನೆಂದುಕೊಂಡಾರು!' ಅನ್ನುವ ಒಣ ಅಹಂಭಾವ ಬೆರೆತ ಮುಜುಗರವಿರುತ್ತಿತ್ತು. ಅದನ್ನೆಲ್ಲ ಕಡೆಗಣಿಸಿ ಉಳಿದ ಆದರೆ ಎಂಜಲಲ್ಲದ ಅನ್ನದ ಸದುಪಯೋಗ ಮಾಡುವದನ್ನು ಮಾತಿನ ಅಬ್ಬರದಲ್ಲಿ ಹೇಳದೆ ಆಚರಣೆಯಲ್ಲಿ ಮನದಟ್ಟು ಮಾಡಿಕೊಟ್ಟ ಬಿಕೆ ಗೆ ಮತ್ತೊಮ್ಮೆ ನನ್ನ ಮನಃಪೂರ್ವಕ ಸೆಲ್ಯೂಟ್ ! :-)