Friday, April 2, 2010

Thanks BK.:-)


'ಹೊಟ್ಟೆ ತುಂಬಿದವನಿಗೆ ಹುಗ್ಗಿ ಮುಳ್ಳು' ಅನ್ನುವ ಗಾದೆಮಾತೊಂದಿದೆ ಅಲ್ಲವೇ? ಮಾತು ನಮ್ಮಲ್ಲಿ ಎಷ್ಟೊಂದು ಜನರಿಗೆ ಅನ್ವಯಿಸುತ್ತದೆ ಅನ್ನುವುದನ್ನು ನಾವುಗಳೇ ಕಂಡುಕೊಳ್ಳಬೇಕು. ಗಾದೆಮಾತು ವಿಶಾಲ ಅರ್ಥ ಹೊಂದಿದೆ ಅನ್ನುವುದು ಹೌದಾದರೂ ಸಧ್ಯಕ್ಕೆ ನಾನು ಇದನ್ನು ಕೇವಲ ಹೊಟ್ಟೆಯ ಮಟ್ಟಿಗೆ ಮಾತ್ರ ಸೀಮಿತಗೊಳಿಸಿ ನನ್ನಲ್ಲಿದ್ದ ಗೊಂದಲ ಅಥವಾ ಡೋಲಾಯಮಾನ ಮನಸ್ಥಿತಿಯನ್ನು ತಮಗರಿಯದಂತೆಯೇ ಹೋಗಲಾಡಿಸಿ ನನ್ನನ್ನು ನಿರಾಳವಾಗಿಸಿದ ವ್ಯಕ್ತಿಯೊಬ್ಬರಿಗೆ ಲೇಖನದ ಮೂಲಕ ಕೃತಜ್ಞತೆ ಹೇಳಲು ಇಷ್ಟಪಡುತ್ತೇನೆ. ಆದರೆ ಅವರಿಗೆ ಕನ್ನಡ ಓದಲು, ಬರೆಯಲು ಬರುವುದು ದೂರದ ಮಾತಾಯ್ತು, ಕೇಳಿ ಅರ್ಥವಾಗೋದು ಕೆಲವೇ ಕೆಲವು (ಖಡಾಖಂಡಿತವಾಗಿ ಕೈ ಬೆರಳೆಣಿಕೆಯಷ್ಟು ) ಶಬ್ದಗಳು ಮಾತ್ರ!!... Thank you soooo much BK!.:-)


ಹೌದು ಅವರ ಆಪ್ತರೆಲ್ಲರೂ ಅವರನ್ನು ಕರೆಯುವುದು BK ಅಂತಲೇ! ಬಾಲಕೃಷ್ಣ ಶಹ ಅನ್ನುವುದು ಅವರ ಪೂರ್ಣ ಹೆಸರು. ಮೂವತ್ತೆರಡರ ಹರೆಯದ, ಹೆಸರಾಂತ ಕಂಪನಿಯೊಂದರಲ್ಲಿ ಆರಂಕಿಯ ವೇತನ ಪಡೆಯುವ CA ಅವರು. ತುಂಬಾ ಸೌಮ್ಯ ಮತ್ತು ಅಷ್ಟೇ ಖಂಡಿತವಾದಿ. ಮುಂಬೈಯಲ್ಲಿ ವಾಸ.
ಸರಿ ಏನಾಯ್ತಪ್ಪಾ ಅಂದ್ರೆ ನಾವು ಇಲ್ಲಿಗೆ ಅಂದರೆ ಬೆಂಗಳೂರಿಗೆ ಶಿಫ್ಟ್ ಆದ ಹೊಸತರಲ್ಲಿ ಮುಂಬೈಗೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋಗೋದು ಅಂದರೆ ನಾನು ರೆಕ್ಕೆ ಇಲ್ಲದೆ ಹಾರಿ ಹೋಗುತ್ತೇನೆ. ಕಾರಣ, ನನಗೊಂದು ವ್ಯಕ್ತಿತ್ವ ಇದೆ ಅಂತ ತೋರಿಸಿಕೊಟ್ಟಿದ್ದೆ ಮುಂಬೈ ಮತ್ತು ಅಲ್ಲಿಯ ನನ್ನ ಆತ್ಮೀಯ ಕನ್ನಡಿಗರು. ಅಲ್ಲಿಯ ಜನರ ನಿಸ್ವಾರ್ಥ ಒಲುಮೆಗೆ ಸೋತ ನನ್ನ ಮನಕ್ಕೆ ಒಂದು ಸಣ್ಣ ನೆಪ ಸಾಕು ಮುಂಬೈ ಕಡೆ ಪಯಣ ಬೆಳೆಸಲು. ಇಂಥದ್ದೇ ಒಂದು ಕಾರಣಭರಿತ ನೆಪದೊಂದಿಗೆ ಹೊರಟೆ ಮುಂಬೈಗೆ..:)ಮಾರನೆಯ ದಿನ ರಾತ್ರಿ ಊಟಕ್ಕೆ ಅಂತ ಬಿಕೆ ಮತ್ತು ಪಲ್ಲವಿ(ಬಿಕೆ ಅವರ ಹೆಂಡತಿ) ಅವರಿಂದ ಆತ್ಮೀಯ ಆಹ್ವಾನ! ಪಲ್ಲವಿ, ಅವಿನಾಶ್ ಅವರ ತಂಗಿ.ತುಂಬಾ ಚಟುವಟಿಕೆಯಿಂದಿರುವ ಸರಳ ಮನಸಿನ ಹುಡುಗಿ.ನಾವೆಲ್ಲಾ ಹೋಟೆಲ್ ತಲುಪಿ ಅವರವರ ಇಷ್ಟದ ಪದಾರ್ಥಗಳನ್ನು ತರಿಸಿಕೊಂಡು ದಂಪತಿಗಳ ಒತ್ತಾಯಕ್ಕೆ ಕಟ್ಟು ಬಿದ್ದು "ಯಾರಾದರು ಹೊತ್ತೊಯ್ದು ಮನೆ ತಲುಪಿಸಿದರೆ ಪುಣ್ಯ ಬರುತ್ತೆ" ಅನ್ನುವಷ್ಟು ತಿಂದದ್ದಾಯ್ತು. ಆದರೂ ಟೇಬಲ್ ಮೇಲೆ ಇನ್ನೂ ಕನಿಷ್ಠ ಇಬ್ಬರಿಗಾದರೂ ಆಗುವಷ್ಟು ಊಟ ಮೀಗಿದೆ!
ನನಗೋ
ಪೇಚಾಟ, "ಛೆ! ಎಷ್ಟೊಂದು ಊಟ ಉಳಿದು ಹೋಯ್ತು! ಮನೇಲಾಗಿದ್ರೆ ಎತ್ತಿಟ್ಟು ಬೆಳಗಿನ ತಿಂಡಿ ಅಂತಲೋ ಇಲ್ಲ ಕೆಲಸದವಳಿಗಂತಲೋ ಕೊಟ್ಟು ಹಾಳಾಗದಂತೆ ನೋಡಿಕೊಳ್ಳಬಹುದಿತ್ತು. ಆದ್ರೆ ಇದು ಹೋಟೆಲ್ಲು, ಏನೂ ಮಾಡೋಕಾಗೋಲ್ಲ, ನನ್ನಿಂದಾಗಿ ಪಾಪ, ಬಿಕೆ-ಪಲ್ಲವಿ ದಂಪತಿಗಳ ಅಷ್ಟು ದುಡ್ಡೂ ಹಾಳು..." ಇದನ್ನು ಅವಿಗೆ ಹೇಳೋಣ ಅಂತ ಅವರತ್ತ ತಿರುಗುವಷ್ಟರಲ್ಲಿ ಬಿಕೆ ಅಲ್ಲಿದ್ದ ಹೋಟೆಲ್ ಮಾಣಿಯನ್ನು ಕರೆದು ಉಳಿದಿದ್ದ ಊಟವನ್ನೆಲ್ಲ ಪ್ಯಾಕ್ ಮಾಡಿ ಕೊಡಲು ಹೇಳಿದರು. ಆಶ್ಚರ್ಯದಿಂದ ಅವರತ್ತ ನೋಡಿದೆ. ಅದನ್ನು ಗಮನಿಸಿದ ಪಲ್ಲವಿ," ಇದನ್ನ ತೊಗೊಂಡ್ಹೋಗಿ ಬಿಕೆ ದಾರಿಯೋಳಗ್ ಕೂತಿರೋ ಬಡವ್ರಿಗೆ ಕೊಡ್ತಾನ, ಅವ್ನಿಗೆ ಅನ್ನ ಕೆಡಸೂದು ಅಂದ್ರ ಒಟ್ಟs ಸೇರಂಗಿಲ್ಲ. ಹಂಗಂತ ತಿನ್ಲಿಕ್ಕೆ,ಉಣ್ಲಿಕ್ಕೆ ಯಾವತ್ತೂ ಕಮ್ಮಿ ಮಾಡಂಗಿಲ್ಲ." ಅಂತ ಹೇಳಿ ಅಷ್ಟು ದಿನ ನನ್ನೊಳಗಿದ್ದ ದ್ವಂದ್ವ (ಒಣ ಅಭಿಮಾನ ಮತ್ತು ಆಹಾರ ಸುಮ್ಮನೆ ಹಾಳಾಗ್ತಿದೆಯಲ್ಲ ಅನ್ನೊ ಕಳವಳ )ಕ್ಕೆ ಮುಕ್ತಿ ಕೊಟ್ಟಳು.
ಉಳಿದ
ಪದಾರ್ಥಗಳ
ಪಾರ್ಸಲ್ ನ್ನು ಯಾವ ಮುಜುಗರವೂ ಇಲ್ಲದೆ ಇಸಿದುಕೊಂಡು ಕಾರ್ ಹತ್ತಿದ ಬಿಕೆ, ಒಂದೆಡೆ ಕಾರ್ ನಿಲ್ಲಿಸಿ ಸ್ವಲ್ಪ ದೂರ ನಡೆದು ಅಲ್ಲಿದ್ದ ಜನರಿಗೆ ಅದನ್ನು ಕೊಟ್ಟು, ಮತ್ತೆ ಡ್ರೈವ್ ಮಾಡತೊಡಗಿದರು, ಉಳಿದ ಅನ್ನವನ್ನು ಯಾರೋ ಒಬ್ಬರಿಗೆ ದಾನ ಮಾಡಿದೆ ಅನ್ನುವ ಯಾವ ಹಮ್ಮು ಬಿಮ್ಮು ಇಲ್ಲದೆ.

"ಹೌದಲ್ವಾ? ನಮ್ಮ ಒಣ ಪ್ರತಿಷ್ಥೆಗೆ ಹೋಟೆಲ್ ನಲ್ಲಿ ತರಿಸಿ ಉಳಿದ ಪದಾರ್ಥವನ್ನು ಸುಮ್ಮನೆ ಹಾಳು ಮಾಡುತ್ತೇವೆ. ಹೋಟೆಲಿನವರೂ ಸಹ ನಾವು ತರಿಸಿದ ಪದಾರ್ಥಗಳನ್ನು ನಾವು ಮುಟ್ಟಿರದಿದ್ದರೂ ಅದನ್ನು ಸೀದಾ ಮುಸುರೆ ಬಳಿದ ಬೆಸಿನ್ನಿನಲ್ಲಿ ಹಾಕಿ ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುತ್ತಾರೆ. ಅವರಿಗಾದರೆ 'ಬೇರೆಯವರಿಗೆ ಕೊಟ್ಟಿದ್ದನ್ನೇ ಮರಳಿ ನಮಗೆ ಕೊಡುತ್ತಿರುವಿ!' ಎಂದು ತಮ್ಮ ಗ್ರಾಹಕರು ಜಗಳವಾಡಿ, ಮತ್ತೆ ತಮ್ಮ ಹೋಟೆಲ್ಲಿಗೆ ಬರದಿರುವ ಆತಂಕವಿರುತ್ತದೆ. ಆದರೆ ನಮಗ್ಯಾವ ಆತಂಕ?! ಅದೂ ನಾವೇ ತರಿಸಿದ ಇಷ್ಟದ ಪದಾರ್ಥಗಳನ್ನು ನಾವು ನಮ್ಮೊಂದಿಗೆ ಮನೆಗೆ ತರಲು ಅಷ್ಟೊಂದು ಮುಜುಗರ ಪಡುವುದೇಕೆ? ಬೇಕಿದ್ದರೆ ಅದನ್ನೇ ಬೆಳಗಿನ ತಿಂಡಿಗೆ ಉಪಯೋಗಿಸಿದ, ಇಲ್ಲವಾದಲ್ಲಿ ಕೆಲಸದವರಿಗೋ ಅಥವಾ ದಾರಿ ಪಕ್ಕದಲ್ಲಿ ಕಾಣ ಸಿಗುವ ಹಸಿದವರಿಗೋ ಕೊಟ್ಟರೆ ಸಾರ್ಥವಾಗುತ್ತದೆ." ಸತ್ಯ ಅರಿವಾದದ್ದೆ ಒಂಥರದ ನಿರಾಳತೆ ಅನುಭವಕ್ಕೆ ಬಂತು. ಜೊತೆಗೆ ಮುಂದೆ ನಾನೂ ಹೀಗೆ ಮಾಡುತ್ತೇನೆ ಅನ್ನುವ ವಿಚಿತ್ರ ಪುಳಕ! ಅದನ್ನು ಅವಿ ಹತ್ತಿರ ಹೇಳಿಕೊಂಡು ಮತ್ತೆ ಮತ್ತೆ ಅರಿಯದ ಪುಳಕ ಅನುಭವಿಸಿದೆ.

ನಿಮಗಿದು ವಿಪರೀತ ಅನಿಸಬಹುದೇನೋ, ಆದರೆ ಅಂದು ನನಗೆ ದೊರೆತ ಪಾಠ ಪ್ರಿಯವಾದುದಾಗಿತ್ತು.
ನನಗೆ ಎಷ್ಟೋ ಸಲ ಹೀಗೆ ಹೋಟೆಲ್ಲಿನಲ್ಲಿ ಹೆಚ್ಚು ಮಾಡಿ ಉಳಿಸಿ ಬರುವ ಆಹಾರದ ಕುರಿತು ಹಾಳಾಗುತ್ತದೆ ಅನ್ನುವ ಹಳಹಳಿ ಇರುತ್ತಿತ್ತಾದರೂ ಅದಕ್ಕೂ ಹೆಚ್ಚಿಗೆ ಅದನ್ನು ಪ್ಯಾಕ್ ಮಾಡಿ ಕೊಡಿ ಎಂದರೆ 'ಸುತ್ತ ಕುಳಿತ ಜನ ಮತ್ತು ಹೋಟೆಲಿನವರು ಏನೆಂದುಕೊಂಡಾರು!' ಅನ್ನುವ ಒಣ ಅಹಂಭಾವ ಬೆರೆತ ಮುಜುಗರವಿರುತ್ತಿತ್ತು. ಅದನ್ನೆಲ್ಲ ಕಡೆಗಣಿಸಿ ಉಳಿದ ಆದರೆ ಎಂಜಲಲ್ಲದ ಅನ್ನದ ಸದುಪಯೋಗ ಮಾಡುವದನ್ನು ಮಾತಿನ ಅಬ್ಬರದಲ್ಲಿ ಹೇಳದೆ ಆಚರಣೆಯಲ್ಲಿ ಮನದಟ್ಟು ಮಾಡಿಕೊಟ್ಟ ಬಿಕೆ ಗೆ ಮತ್ತೊಮ್ಮೆ ನನ್ನ ಮನಃಪೂರ್ವಕ ಸೆಲ್ಯೂಟ್ ! :-)

26 comments:

ಸೀತಾರಾಮ. ಕೆ. / SITARAM.K said...

ಒಳ್ಳೇಯ ಅಭ್ಯಾಸ. ಈ ತರದ ಹಲವಾರು ಜನರನ್ನೌ ನಾನು ನೋಡಿದ್ದೆನೆ. ಕೆಲವು ಸಲ ನಾನು ಅನುಕರಿಸಿದ್ದೆನೆ. ಆದರೇ ನನ್ನ ಹೆಚ್ಚಿನ ಹೋಟೆಲ್ ಊಟಗಳು ವ್ಯವಹಾರ ಸ೦ಭ೦ಧದಲ್ಲಿರುವದರಿ೦ದ ಇದರ ಆಚರಣೆ ಸಾಧ್ಯವಾಗುವದಿಲ್ಲ. ಇನ್ನು ಪ್ರಯತ್ನಿಸಬೇಕು.

sunaath said...

Great BK!

V.R.BHAT said...

ಪ್ರತಿಷ್ಠೆಯ ದ್ಯೋತಕವಾಗಿ ಪ್ಲೇಟಿನಲ್ಲಿ ಸ್ವಲ್ಪವೇ ತಿಂದು ಮಿಕ್ಕುಳಿದದ್ದನ್ನೆಲ್ಲ ಹಾಗೇ ಬಿಡೋದು ನಮ್ಮ ನಗರವಾಸಿಗಳ ನಿತ್ಯ ಪರಿಕ್ರಮ, ಪ್ಲೇಟ್ನಲ್ಲಿ ಏನೂ ಬಿಡಲಿಲ್ಲ ಎಂದರೆ ಎದುರಿಗಿದ್ದವರು ತಮ್ಮನ್ನು ನೋಡಿ 'ಹೊಟ್ಟೆತೊಳೆದುಕೊಂಡೇ ಬಂದಿದ್ದರು' ಎಂದುಕೊಂಡಾರು ಎಂದೂ ನಮಗೆಲ್ಲ ಭಾವನೆ, ಈ ಫಾಲ್ಸ್ ಪ್ರೆಸ್ಟೀಜ್ ನಡುವೆ ಕೆಲವರು ನಿಜವಾಗಿಯೂ ದೊಡ್ಡತನವನ್ನು ತಮ್ಮ ಆಚರಣೆಯಿಂದ ತೋರಿಸುತ್ತಾರೆ, ಇದಕ್ಕೆ ನಿಮ್ಮ ಮೇಲಿನ ಕಥೆ ಕೂಡ ಸೇರ್ಪಡೆ.

Jayalaxmi said...

ಪರವಾಗಿಲ್ಲ ಸೀತಾರಾಮ್ ಸರ್, ಊರಿಗೆ ಬಂದಾಗ ಪರಿವಾರದೊಟ್ಟಿಗೆ ಹೊರಗೆ ಊಟಕ್ಕೆ ಹೋದಾಗಲಾದರೂ ಆಚರಣೆಗೆ ತರಬಹುದು ಅಲ್ಲವೆ?

Jayalaxmi said...

ಹೌದು ಸುನಾಥ್ ಕಾಕಾ, BK is great!:-)

Jayalaxmi said...

ನೀವು ಹೇಳೋದು ನಿಜ ಭಟ್ ಅವರೆ. ಅವತ್ತು ಬಿಕೆ ಅವರ ಸಹಜತೆ ಕಂಡು ಮನಸು ಮಾಡಿದ್ರೆ ಇದೆಲ್ಲ ಎಷ್ಟು ಸುಲಭ ಅಲ್ಲವಾ! ಅನಿಸಿ, ಆಗಲಿಂದಲೇ ನಾನೂ ಮಿಕ್ಕುಳಿದ ಊಟವನ್ನು ಮನೆಗೆ ಪಾರ್ಸಲ್ ತರೋದನ್ನ ಶುರು ಮಾಡಿದ್ದು.ಈಗ ಆ ಕುರಿತು ಮನಸು ನಿರಾಳ ನಿರಾಳ.:-)

AntharangadaMaathugalu said...

ಹೌದು ಜಯಲಕ್ಷ್ಮೀಯವರೆ... ಈ ವಿಧಾನವನ್ನು ನಾವೂ ಕೂಡ ಅನುಸರಿಸುತ್ತೇವೆ. ಎಷ್ಟೋ ಸಲ ಏನೂ ಮಿಕ್ಕದಾಗ, ಹೊಸದಾಗಿ ಹೇಳಿ ಪಾರ್ಸೆಲ್ ಮಾಡಿಸಿಕೊಂಡು ಬಂದು ಕೂಡ ಕೊಟ್ಟಿದ್ದಾರೆ ನನ್ನವರು.... ಚೆಲ್ಲುವುದಕ್ಕಿಂತ ಖಂಡಿತಾ ಒಳ್ಳೆಯ ಅಭ್ಯಾಸ. BKರವರಿಗೆ ನಮ್ಮ ಕಡೆಯಿಂದಲೂ ಒಂದು ಧನ್ಯವಾದ......

Avinash Kamath said...

ಜಯಲಕ್ಷ್ಮಿಯವರೇ
ಚೆನ್ನಾಗಿದೆ ಲೇಖನ. ಬಿಕೆಯಿಂದ ನಾನು ಕಲಿತದ್ದು ಕೂಡ ತುಂಬ ಇದೆ. ನನ್ನ ಭಾವ ಅಂತ ಈ ಮಾತು ಹೇಳ್ತಾ ಇಲ್ಲ, ಆದ್ರೆ ಜೀವನದ ಹಲವು ಮಗ್ಗಲುಗಳನ್ನು ನನಗೆ ಪರಿಚಯಿಸಿದವರೇ ಅವರು. ವಿವಿಧ ಪರಿಸ್ಥಿತಿಗಳನ್ನು ಯಾವ ರೀತಿ ಎದುರಿಸಬಹುದು ಎಂಬುದನ್ನೂ ನಾನು ಅವರಿಂದ ಕಲಿತದ್ದಿದೆ. ಅಂಥದ್ದೊಂದು ದೊಡ್ಡ ಹುದ್ದೆಯಲ್ಲಿದ್ದರೂ ಮಗುವಿನಂಥ ಮನಸ್ಸು ಅವರದು. ಇದು ತುಂಬ rare quality ಅಲ್ವಾ?

ಈ ಲೇಖನ ಬಿಕೆ ಅವರಿಗೆ ತೋರಿಸಿದೆ. ತುಂಬ ಖುಷಿ ಪಟ್ಟರು. ಅವರ ಪರವಾಗಿಯೂ ನಿಮಗೊಂದು ಥ್ಯಾಂಕ್ಸು :-)

Ittigecement said...

ಷಹ ಅವರಿಗೆ ನಮನಗಳು...

ನೋಡಲಿಕ್ಕೆ ಸಣ್ಣ ವಿಷಯ...
ಆದರೆ..
ಇಲ್ಲಿ ಅಭಿಮಾನ, ಪ್ರತಿಷ್ಠೆ ದೊಡ್ಡದಾಗಿ ಬಿಡುತ್ತದೆ..
ಹೊಟೆಲಿನಲ್ಲಿ ಹೆಚ್ಚಾದ ತಿಂಡಿಯನ್ನು ಮನೆಗೆ ತರುವದು ಸಹಜವಾಗಿ ನಮ್ಮಲ್ಲಿ ರೂಢಿಯಾಗ ಬೇಕು..

ನಾವೇ ಹಣ ಕೊಟ್ಟಿದ್ದರಿಂದ ಇಲ್ಲಿ ಸಂಕೋಚಪಡಬೇಕಾದ ಪ್ರಮೆಯವೇ ಬರುವದಿಲ್ಲ..

ಆದರೆ ಕೆಲವು ಹೊಟೆಲುಗಳಲ್ಲಿ ಉಳಿದ ತಿಂಡಿಯನ್ನು ಪಾರ್ಸೆಲ್ ಕಟ್ಟಿಕೊಡಿ ಅಂದಾಗ ಅನಾದರದಿಂದ ನೋಡುವದು ಇದೆಯಂತೆ..
(ನನ್ನ ಗೆಳೆಯರ ಅನುಭವ ಇದು )

ಒಂದು ಒಳ್ಳೆಯ ಲೇಖನ... ಬಿಕೆ ಯವರ ಇನ್ನಷ್ಟು ಪರಿಚಯ ಮಾಡಿಕೊಡಿ...

ಧನ್ಯವಾದಗಳು...

Jayalaxmi said...

ವ್ಹಾ!ನೀವೂ ಹೀಗೆಯೆ ಮಾಡುತ್ತೀರೆಂದು ತಿಳಿದು ತುಂಬಾ ಸಂತೋಷವಾಯ್ತು ಶಾಮಲಾ ಅವರೆ. ನಿಮ್ಮವರ ಉದಾರತೆ ಮೆಚ್ಚುವಂಥದ್ದು.

Jayalaxmi said...

ಬಿಕೆಯವರಿಗೆ ಲೇಖನ ತೋರಿಸಿದ್ದಕ್ಕೆ ಥ್ಯಾಂಕ್ಸ್ ಅವಿನಾಶ್ ಅವರೆ.ಸಲ್ಲಬೇಕಾದವರಿಗೆ ಕೃತಜ್ಞತೆ ಸಲ್ಲಿದೆ ಅಂತಾಯ್ತು.ಮನಸ ತುಂಬಾ ಕೊಳಕು ಯೋಜನೆಗಳನ್ನು ತುಂಬಿಕೊಂಡು ಎದುರಿಗೆ ಸಭ್ಯರ ಹಾಗೆ ನಡೆದುಕೊಳ್ಳುವವರ ಎದುರು ಬಿಕೆಯವರ ಮಗು ಮನಸು ದೇವರನ್ನು ನೆನಪಿಸುತ್ತದೆ. ನಮ್ಮ ಪಲ್ಲವಿ ಪುಣ್ಯ ಮಾಡಿದ್ದಾಳೆ, ಬಿಕೆಯವರನ್ನು ಬಾಳ ಸಂಗಾತಿಯಾಗಿ ಪಡೆಯಲು. ಬಿಕೆ ಸಹ ಅಷ್ಟೆ, ಪಲ್ಲವಿ ಬಿಕೆಯವರಿಗೆ ಅನುರೂಪದ ಸಂಗಾತಿ. ದೇವರು ಈ ದಂಪತಿಗಳನ್ನು ಸದಾ ಸಂತಸದಿಂದಿಡಲಿ.

Jayalaxmi said...

ಬಿಕೆ(ಷಹ,ಶಹ or ಶಾ...Shah)ಒಬ್ಬ ದೈವಭಕ್ತರು ಸಹ ಪ್ರಕಾಶ್. ಯಾರ ಮನಸೂ ನೋಯಿಸಬಾರದು ಅನ್ನುವ ಮನಸುಳ್ಳವರು, at the same time ತಮಗೆ ಇಷ್ಟವಿಲ್ಲದುದನ್ನು ಮೌನವಾಗೇ ಧಿಕ್ಕರಿಸಿ ಹೊರಡುವಂಥ ವ್ಯಕ್ತಿ. ಅಬ್ಬರವಿಲ್ಲ, ಆದರೆ ಚಟುವಟಿಕೆಗೇನೂ ಕಮ್ಮಿ ಇಲ್ಲ. ಹಗಲು ರಾತ್ರಿ ಎನ್ನದೆ ಕೆಲಸ ಮಾಡ್ತಾರೆ,ಹಾಗೇ ಹೆಂಡತಿ-ಮಗಳೊಂದಿಗೆ ರಜೆಯನ್ನು ಹೇಗೆ ಮಜವಾಗಿಸಿಕೊಳ್ಳಬೇಕು ಅನ್ನೋದೂ ಗೊತ್ತು ಇವರಿಗೆ.:-)ಒಂದು ರಾಶಿ ಜನ ಸ್ನೇಹಿತರಿದ್ದಾರೆ.ಅವರೆಲ್ಲ ಪಲ್ಲವಿ(ಅವರ ಹೆಂಡತಿ)ಗೂ ಸ್ನೇಹಿತರಾಗಿರೋದ್ರಿಂದ ಎಲ್ಲಿ ಹೋದ್ರೂ ಒಟ್ಟಿಗೇ ಇರ್ತಾರೆ. ಆಫೀಸ್ ಕೆಲಸವನ್ನು ಮನೆಗೆ ತಂದದ್ದನ್ನು ನಾನು ಇದುವರೆಗು ಕಂಡಿಲ್ಲ.ತನ್ನ ಬಳಗ,ಭಾಷೆ, ಸಂಸ್ಕೃತಿ ಎಂದರೆ ಪ್ರಾಣ ಇವರಿಗೆ.
ಇದಿಷ್ಟು ಬಿಕೆ ನನ್ನರಿವಿಗೆ ನಿಲುಕಿದ್ದು. ಇನ್ನುಳಿದಿದ್ದು ಓವರ್ ಟು ಅವಿನಾಶ್ ಕಾಮತ್! :-)

akshata said...

ನಿಜ ರಿ ಜಯಾ, ಇದೊಂದು ಒಳ್ಳೆಯ ಅಭ್ಯಾಸ, ಈ ಅಭ್ಯಾಸ ನನಗೆ ಮದುವೆಯ ಮುಂಚಿನಿಂದಲೂ ಇದೆ, ಪುಣ್ಯಕ್ಕೆ ಪ್ರಸಾದ್ ಅವರಿಗೂ ಇದೇ ಅಭ್ಯಾಸವಿರುವುದರಿಂದ ಹೋಟೇಲ್‌ನಲ್ಲಿ ತಿಂದು ಉಳಿದರೂ ಅನ್ನ ವೇಸ್ಟ ಆಗೋದಿಲ್ಲ.
ಅಕ್ಷತ.

ಸಾಗರದಾಚೆಯ ಇಂಚರ said...

ನಿಜಕ್ಕೂ ಅವರದು ದೊಡ್ಡ ವ್ಯಕ್ತಿತ್ವ
ಗ್ರೇಟ್

Jayalaxmi said...

ನಿಜ ಗುರು ಅವರೆ. ಪ್ರತಿಕ್ರಿಯೆಗೆ ಧನ್ಯವಾದಗಳು.

Jayalaxmi said...

ಹೇಯ್ ಅಕ್ಷತಾ, ನನಗಿದು ಹೊಸ ಸುದ್ದಿ!!!great ರೀ ನೀವಿಬ್ರು!!

Sowmya Rame Gowda said...

madem I liked ur blog

Badarinath Palavalli said...

ಓದಿ ತುಂಬಾ ಹಸಿವಾಗ್ತಾ ಇದೆ.

ಹೇಗಿದೀರಿ ಮೇಡಂ?

Pl. visit my Kanada Poety Blog:
www.badari-poems.blogspot.com

- Badarinath Palavalli
ಕಸ್ತೂರಿ ಟಿವಿ

ಜಲನಯನ said...

Naaanu Haakidda Comment Kaantillavallaa....DEVAAA...
ella maayavo...Jayakka Ella maayavo..

ದಿನಕರ ಮೊಗೇರ said...

gr8 BK....... gr8 BK...

Jayalaxmi said...

ಬದರಿ ಸರ್, ಹಸಿವಾದ್ರೆ ಮನೆಯೂಟಕ್ಕಿಂತ ಸ್ವಾದಿಷ್ಟ ಇನ್ನೊಂದಿಲ್ಲ, ಸೆಟ್ ಊಟಕ್ಕಿಂತ ಅನಿವಾರ್ಯ ಇನ್ನೊಂದಿಲ್ಲ ಅಲ್ಲವಾ? :-)

Jayalaxmi said...

ಆಝಾದ್ ಭಾಯ್, ಇದು ಗೂಗಲ್‍ನ ಕಣ್ಣುಮುಚ್ಚಾಲೆ ಆಟವಂತೆ!! ಈ ಆಟದಲ್ಲಿ ನಿಮ್ಮ ಕಮೆಂಟ್ ಅಡಗಿಕೊಳ್ಳಲು ಹೋಗಿ ಎಲ್ಲೋ ಕಳೆದೇ ಹೋಗಿದೆ!!! :-(

Jayalaxmi said...

ನಿಜ ದಿನಕರ್ ಅವರೆ, He is Grt!! :)

ಗಿರೀಶ ರಾಜನಾಳ said...

ನಾನಂತೂ ಯಾರ್ ಬಗ್ಗೇನೂ ತಲೆ ಕೆಡಿಸಿಕೊಳ್ಳದೆ ಪಾರ್ಸಲ್ ಕಟ್ಟಿಸಿಬಿಡುತ್ತೀನಿ.

SATISH N GOWDA said...

ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ

ಸತೀಶ್ ನ ಗೌಡ

www.nannavalaloka.blogspot.com

Umesh Balikai said...

ಜಯಲಕ್ಷ್ಮೀ,

ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ... ಇಲ್ಲಿರುವ ಕವನಗಳನ್ನು ಮತ್ತು ಲೇಖನಗಳನ್ನು ಓದುತ್ತಾ ಹೋದಂತೆ ಸಮಯದ ಪರಿವೆಯೇ ಇಲ್ಲವಾಗಿತ್ತು. ಕವನಗಳು ಚೆನ್ನಾಗಿವೆ. ಹಾಗೆಯೇ ಈ ಲೇಖನ ಸಹ. ಚಿಕ್ಕದೊಂದು ಆದರೆ ತುಂಬಾ ಒಳ್ಳೆಯ ಕೆಲಸವನ್ನು ನಾವು ಪ್ರತಿಷ್ಟೆಯ ವಿಷಯವಾಗಿಸಿ ಹಾಳು ಮಾಡುತ್ತೇವೆ. ನಮ್ಮಂಥವರ ಮಧ್ಯೆ BK ತರ ಕೃತಿಯಲ್ಲಿ ತೋರಿಸುವವರು ತುಂಬಾ ವಿರಳ. ಅವರಿಗೂ ವಂದನೆಗಳು.

ಚಂದದ ಬರಹ..ಧನ್ಯವಾದಗಳು.