Friday, September 23, 2011

ಆಕೆ ಎಲ್ಲಿರುವಳೋ ಈಗ...

(ವಿ ಸೂ : ಈ ಬರಹ ಇಂದು (23rd sept '2011)ರಂದು ‘ವಿಜಯ ನೆಕ್ಸ್ಟ್’ ಪತ್ರಿಕೆಯಲ್ಲಿ ‘ಅವಳ ಡೈರಿ’ ಅಂಕಣದಲ್ಲಿ ಪ್ರಕಟಗೊಂಡ ನನ್ನ ಬರಹದ ವಿಸ್ತಾರ ರೂಪ. ಸ್ಥಳದ ಮಿತಿಯ ಅನಿವಾರ್ಯತೆಯಿಂದಾಗಿ ಪತ್ರಿಕೆಯಲ್ಲಿ ಕೆಲವು ಸಾಲುಗಳು ಕಡಿತಗೊಂಡಿವೆ. ) 


           ನೀವು ಎಂದಾದರೂ ಶಾಪಗ್ರಸ್ತ ದೇವತೆ, ಅಪ್ಸರೆ ಅಥವಾ ರಾಜಕುಮಾರಿಯನ್ನು ಕಂಡಿದ್ದೀರಾ? ಬಹುಶಃ ಇರಲಿಕ್ಕಿಲ್ಲ. ಮಕ್ಕಳ ಸ್ಕೂಲು ಬಿಡುವ ಹೊತ್ತು. ಸ್ವಲ್ಪ ತಡವಾದರೂ ಮುಂಬೈಯಲ್ಲಿರುವ ದಹಿಸರ್‌ನ ಆ ಬ್ಯೂಸಿ ಹೈವೇ ರೋಡಲ್ಲಿ ಮಕ್ಕಳನ್ನು ಇಳಿಸಿ ನಿರ್ದಯಿ ಸ್ಕೂಲ್‌ಬಸ್ಸು ಹೊರಟು ಬಿಡುತ್ತದೆ. ನಾನು ಸಮಯಕ್ಕೆ ಸರಿಯಾಗಿ ಅಲ್ಲಿರದಿದ್ದರೆ ನನ್ನ ಪುಟ್ಟ ಮಕ್ಕಳು ಕಂಗಾಲಾಗಿ ಸ್ಕೂಲ್ ಬ್ಯಾಗಿನ ಜೊತೆ ಬೆದರುಗಣ್ಣು ಹೊತ್ತು ದಿಕ್ಕಿಲ್ಲದವರಂತೆ ನಿಂತು ಬಿಡುತ್ತವೆ. ಹಾಗಾಗಬಾರದೆಂದೇ ಬಸ್ಸು ಬರುವ ಮುಂಚೆಯೇ ಅಲ್ಲಿದ್ದುಬಿಡುತ್ತಿದ್ದೆ ನಾನು. ಹಾಗೆ ಬಂದಾಗ ಅವಳು ಕಂಡಿದ್ದಳು ನನಗೆ. ಅವಳು; ದೇವತೆಯ ಕಳೆ, ಅಪ್ಸರೆಯ ರೂಪ, ರಾಜಕುಮಾರಿಯ ಆರೋಗ್ಯವನ್ನು ಹೊತ್ತ ಆಕೆ. ಆ ದೇವರು ಅದೆಷ್ಟು ವರ್ಷ, ಯುಗಗಳನ್ನೇ ತೆಗೆದುಕೊಂಡಿದ್ದನೋ ಅಂಥ ಸೂಕ್ಷ್ಮ ನಿರ್ಮಿತಿಗೆ! ಸೂಕ್ಷ್ಮ ಕಲೆಗೆ ಸೂಕ್ಷ್ಮ ಮನಸನ್ನೂ ಕೊಟ್ಟು ತನ್ನ ಅಪರೂಪದ ಕಲಾಕೃತಿಯನ್ನು ತಾನೇ ಹಾಳು ಮಾಡಿಬಿಟ್ಟಿದ್ದ!!

                     ಹೌದು ತನ್ನ ಅಪರೂಪದ ಕಲಾಕೃತಿಯನ್ನು ತಾನೇ ಹಾಳು ಮಾಡಿಬಿಟ್ಟಿದ್ದ ಆ ದೇವರು. ಅಂಥಾ ಚೆಂದದ ಚಿತ್ತಾರ ಹುಚ್ಚಿಯ ರೂಪದಲ್ಲಿ ಆ ಬಸ್ ಸ್ಟಾಪಿನಲ್ಲಿ ನಿಂತಿತ್ತು... ಅವಳು ನನಗೆ ಕಂಡ ಕ್ಷಣ ಕಾಲುಗಳು ನಿಂತಲ್ಲಿಯೇ ಕೀಲಿಸಿಬಿಟ್ಟಿದ್ದವು. ಎಲ್ಲಿಗೆ ಹೋಗಬೇಕೆಂದು ತೋಚದವಳಂತೆ ಆಕೆ ನಿಂತಿದ್ದಳು ಅಲ್ಲಿ. ೨೪ರ ಆಸುಪಾಸಿನ ಹರೆಯ. ಗೋದಿಬಣ್ಣಕ್ಕಿಂತ ತುಸು ಹೆಚ್ಚಿನ ಬಿಳ್ಳಗಿನ ಮೈ ಬಣ್ಣ. ಅವಳನ್ನು ನೋಡದೆ ಮುಂದೆ ಹೋಗುವುದು ಸಾಧ್ಯವೇ ಇಲ್ಲ ಎನಿಸುವಂಥ ಸೌಂದರ್ಯದ ಖನಿ ಅವಳು. ಹರಿದ ಬಟ್ಟೆಯಲ್ಲಿ ಅವಳ ಅಂಗಾಂಗಳು ಅಲ್ಲಲ್ಲಿ ಬಟ್ಟೆಗೇ ತೇಪೆ ಹಾಕಿದಂತೆ ನಿಚ್ಚಳವಾಗಿ ಒಡೆದು ಕಾಣುತ್ತಿದ್ದವು, ಉಬ್ಬಿದ ಹೊಟ್ಟೆಯ ಸಮೇತ. ಅವಳ ಹೊಟ್ಟೆಯ ಕಡೆ ನನ್ನ ದೃಷ್ಟಿ ಹಾಯುತ್ತಿದ್ದಂತೆ ಅನುಕಂಪ ಅಸಹಾಯಕತೆಯಾಗಿ, ಅಳು, ಆಕ್ರೋಶ ಒಟ್ಟೊಟ್ಟಿಗೆ ಮೈಯಿಡೀ ವ್ಯಾಪಿಸಿದರೂ ನಾನು ನಾಲ್ಕು ಜನರೆದುರು ಅಳಲಾರೆ, ಆಕ್ರೋಶ ತೋರ್ಪಡಿಸಲಾರೆ. ಯಾಕೆಂದರೆ ನಾನು ಅವಳಲ್ಲ. ಅವಳಿಗಿರುವ ಸ್ವಾತಂತ್ರ ನನಗಿಲ್ಲ. ಅವಳಂತೆ ನಾನು ಅವಧೂತ ಸ್ಥಿತಿಗೆ ತಳ್ಳಲ್ಪಟ್ಟವಳಲ್ಲ. ಪ್ರಜ್ಞಾವಂತ ನಾಗರಿಕಳು ನಾನು...

              ದಿಗ್ಭ್ರಮೆಗೊಂಡ ಮನಸು ಅವಳ ಈ ಸ್ಥಿತಿಗೆ ಕಾರಣಗಳನ್ನು ಕಲ್ಪಿಸತೊಡಗಿತ್ತು. ನೋಡಲು ಶ್ರೀಮಂತ ಮನೆತನದ ಕಳೆಯಿರುವ ಹುಡುಗಿ. ಆರೋಗ್ಯ ಸಪುಷ್ಠ! ಇಷ್ಟು ಚೆಂದದ ಹುಡುಗಿಗೆ ಮದುವೆಯಾಗಿದೆಯಾ? ಇಲ್ಲವಾ? ಪ್ರೀತಿಸಿದವನನ್ನು ಮದುವೆಯಾಗಲು ಅಪ್ಪ ಅಮ್ಮ ಒಪ್ಪಲಿಲ್ಲವಾ? ಅವನನ್ನು ಮರೆಯಲಾಗದೆ ಹೀಗಾದಳಾ? ಇಲ್ಲಾ ಅಂವ ಕೈ ಕೊಟ್ಟನಾ? ಈ ಬಸಿರು ಮೂಡಿಸಿ ಕೈಕೊಟ್ಟಿದ್ದೋ ಇಲ್ಲಾ ಅಂವ ಕೈ ಕೊಟ್ಟು ಈಕೆ ಹುಚ್ಚಿಯಾದ ಮೇಲೆ ಈ... ಛೇ!! ಏನೆಲ್ಲ ಕ್ರೂರ ಆಲೋಚನೆಗಳು. ಅದೂ ಹರೆಯದ ಹುಡುಗಿ ಅಂದ ತಕ್ಷಣ ಪ್ರೀತಿ ಪ್ರೇಮ ಕೈ ಕೊಡುವುದರ ಹೊರತಾಗಿ ಮನಸು ಬೇರೇನೂ ಯೋಚಿಸುವುದೇ ಇಲ್ಲ! ಅದೆಷ್ಟು ಸುಲಭದಲ್ಲಿ ಇನ್ನೊಬ್ಬರ ಕುರಿತು ಊಹೆಯ ಹೆಣಿಗೆ ಶುರುವಾಗಿಬಿಡುತ್ತದೆ ಮನದಲ್ಲಿ! ಥತ್! ನನ್ನನ್ನು ನಾನು ಹೀಗೆ ಬೈದುಕೊಳ್ಳುತ್ತಿರುವಾಗಲೇ ನನ್ನ ಕೊನೆಯ ಆಲೋಚನೆಯು ದೃಶ್ಯರೂಪದಲ್ಲಿ ನಿಧಾನವಾಗಿ ಮೂಡಿಬರುತ್ತಿದೆಯೇನೋ ಎಂಬಂತೆ ಒಂದಿಬ್ಬರು ಗಂಡಸರು ಅಸಹ್ಯವಾಗಿ ಅವಳನ್ನು ನೋಡುತ್ತಾ (ಇಂದಿಗೂ ಅವರುಗಳ ಆ ಹೊಲಸು ನೋಟ ಈಗಷ್ಟೇ ನೋಡಿರುವೆನೇನೋ ಎಂಬಷ್ಟು ನಿಚ್ಚಳ ಸ್ಮೃತಿಪಟಲದಲ್ಲಿ) ಅವಳ ಹತ್ತಿರ ಸುಳಿದಾಡತೊಡಗಿದರು. ನನಗೆ ಭಯ ಶುರುವಾಯಿತು. ಅವರು ಅವಳಿಗೇನಾದರೂ ಮಾಡಿದರೆ ಅವಳ ಗತಿ ಏನು? ಮೊದಲೇ ಹುಡುಗಿ ಬಸುರಿ ಬೇರೆ (೫-೬ ತಿಂಗಳು ತುಂಬಿರಬಹುದೇನೊ)... ನಾಯಿಗಳನ್ನು ಕಲ್ಲೆಸೆದು ದೂರ ಓಡಿಸುವಂತೆ ಆ ಗಂಡಸರಿಗೆ ಕಲ್ಲೆಸೆಯಬೇಕೆನಿಸಿತು ನನಗೆ. ಆದರೆ ನಾನು ಹಾಗೆ ಮಾಡಲಾರೆ! ನೋಡಿದವರು ಏನಂದಾರು? ಸುಮ್ಮನೆ ಅವಡುಗಚ್ಚಿಕೊಂಡು ನಿಂತಿದ್ದೆ ನಡೆಯುತ್ತಿರುವುದನ್ನು ಗಮನಿಸುತ್ತ.
         ತನ್ನೆಡೆ ಸುಳಿದಾಡುತ್ತಿರುವವರನ್ನು ಕಂಡ ಅವಳ ಕಣ್ಣುಗಳು ಹೊಳೆದವು. ಥೇಟ್ ಹರೆಯದ ಹುಡುಗಿಯೊಬ್ಬಳು ತನ್ನನ್ನು ಮೆಚ್ಚುಗೆಯಿಂದ ನೋಡುತ್ತಿರುವ ನೋಟದ ಅರಿವಾಗಿ ಒಳಗೊಳಗೇ ಸಂಭ್ರಮಿಸುವ ಪರಿಯಲ್ಲಿ. ಬಾಪ್ರೆ! ಅದೆಷ್ಟು ಚೆಂದ ಕಾಣುತ್ತಿದ್ದಾಳೆ ಈಗ! ನಿಜಕ್ಕೂ ಈಕೆ ಹುಚ್ಚಿಯೇ? ಅಥವಾ ಯಾವುದೋ ಸಿನಿಮಾದ ಶೂಟಿಂಗಿಗೆಂದು ವೇಷ ಹಾಕಿದ ನಾಯಕಿಯೆ? ಅದೆಂಥಾ ಹೊಳಪು ಅವಳ ಕಣ್ಣಲ್ಲಿ! ಇನ್ನಷ್ಟು ಉತ್ತೇಜಿತಗೊಂಡ ಒಬ್ಬ ಅವಳ ಹತ್ತಿರ ಹೋಗುತ್ತಿದ್ದಂತೆ ಆಕೆಯ ಮುಖದಲ್ಲಿ ಗಲಿಬಿಲಿ, ಭಯ. ಅರೆಕ್ಷಣವೂ ಅಲ್ಲಿ ನಿಲ್ಲದೆ ಅಲ್ಲಿಂದ ದಾಪುಗಾಲಿಡುತ್ತಾ ನಡೆದುಬಿಟ್ಟಳು ಅವಳು. ಅವಳ ದಾಪು ನಡಿಗೆಗೆ ಬಸಿರು ಕುಲುಕಿದರೆ ಗತಿ ಏನು ಎಂದು ಭಯವಾಗತೊಡಗಿತು ನನಗೆ. ತನ್ನ ಅಸಹ್ಯ ನಗುವನ್ನು ಇನ್ನಷ್ಟು ಅಸಹ್ಯವೆನಿಸುವ ಹಾಗೆ ಆ ಗಂಡಸು ಅಲ್ಲಿ ನಿಂತಿದ್ದವರನ್ನೆಲ್ಲ ತಪ್ಪಿಸಿಕೊಂಡಳು ಎಂಬಂತೆ ನೋಡಿ ನಗುತ್ತಾ ಬೇರೆ ದಿಕ್ಕಿಲ್ಲಿ ನಡೆದು ಹೋದ. ಮಕ್ಕಳನ್ನು ಕರೆದುಕೊಂಡು ಕಾಲೆಳೆಯುತ್ತಾ ಮನೆಗೆ ಬಂದೆ ನಾನು...

        ಮರುದಿನವೂ ಅವಳು ಕಾಣಿಸಿಕೊಂಡಳು ಅದೇ ಬಸ್‌ಸ್ಟಾಪಿನಲ್ಲಿ. ಹಿಂದಿನ ದಿನವಿಡೀ ನನ್ನ ಆಲೋಚನೆಯಾಗಿದ್ದ ಅವಳು ಮತ್ತೆ ಕಂಡಿದ್ದನ್ನು ನೋಡಿ ಮನದಲ್ಲಿ ನಿರ್ಧರಿಸಿದೆ, ಕನಿಷ್ಟಪಕ್ಷ ಯಾವುದಾದರೂ ಹುಚ್ಚಾಸ್ಪತ್ರೆಗಾದರೂ ಅವಳನ್ನು ಸೇರಿಸಬೇಕು, ಅಷ್ಟರ ಮಟ್ಟಿಗೆ ಆಕೆ ಸೇಫ್ ಎಂದು. ಮನೆಗೆ ಬಂದು ನಾಲ್ಕೈದು ಜನ ಪರಿಚಿತರಿಗೆ ಫೋನು ಮಾಡಿ ವಿಚಾರಿಸಿದೆ ಆಸ್ಪತ್ರೆಗಳ ಕುರಿತು. ಕವಿಮಿತ್ರ ಗೋಪಾಲ್ ತ್ರಾಸಿ, ಅದು ಅಷ್ಟು ಸುಲಭವಲ್ಲ, ಅವಳಿಗೆ ನಿಜಕ್ಕೂ ಹುಚ್ಚು ಹಿಡಿದಿದೆ ಎಂಬ ಪುರಾವೆಪತ್ರ ತೋರಿಸಿದರೆ ಮಾತ್ರ ಅಲ್ಲಿ ಅಡ್ಮಿಟ್ ಮಾಡಿಕೊಳ್ತಾರೆ. ಇಲ್ಲದಿದ್ದಲ್ಲಿ ಇಲ್ಲ ಎಂದರು. ಮತ್ತೇನು ಮಾಡೋದು? ಅಂದೆ ನಾನು. ಇರಿ ಅಡ್ವೋಕೇಟ್ ಮಿತ್ರರೊಬ್ಬರಿದ್ದಾರೆ ವಿಚಾರ್ಸಿ ನಿಮಗೆ ತಿಳಿಸ್ತೀನಿ ಎಂದು ಫೋನಿಟ್ಟರು ಆತ. ಎಲ್ಲ ಪ್ರೊಸೀಜರ್ ಮುಗಿಯುವಷ್ಟರಲ್ಲಿ ಆಕೆಗೆ ಯಾರಾದರೂ ಏನಾದರೂ ಮಾಡಿಬಿಟ್ಟರೆ? ಅಥವಾ ಯಾವುದಾದರೂ ವಾಹನದಡಿ... ಬೇಡ ಹಾಗಾಗಬಾರದು, ಆಸ್ಪತ್ರೆಗೆ ಸೇರಿಸುವವರೆಗೆ ಕರೆತಂದು ನಮ್ಮನೇಲೇ ಇರಿಸಿಕೊಂಡರಾಯಿತು ಎಂದುಕೊಂಡೆ. ಅಳೆದೂ ತೂಗಿ ಪತಿಯ ಮುಂದೆ ನನ್ನ ವಿಚಾರವನ್ನು ಹೇಳಿದೆ. ಗಂಡ ನನ್ನ ಮಾತು ಕೇಳಿ, ಹುಚ್ಚಿ ಸುಮ್ನಿರು ಎಂದು ನಕ್ಕು ಕೆಲಸಕ್ಕೆ ನಡೆದರು. ಇವರನ್ನು ಅತ್ತುಕರೆದಾದರೂ ಮುಂದೆ ಒಪ್ಪಿಸಿದರಾಯಿತು, ಅವಳನ್ನು ಮನೆಗೆ ಕರೆತರುವುದೇ ಸೈ ಎಂದುಕೊಂಡು ಬಸ್‌ಸ್ಟಾಪಿಗೆ ಬಂದರೆ... ಹೌದು ನೀವು ಊಹಿಸುತ್ತಿರುವುದು ಸರಿಯಾಗಿದೆ, ಕೇಳಲು ಅಥವಾ ಓದಲು ನಾಟಕೀಯ ಅಂತ್ಯವೆನಿಸಿದರೂ ಅದೇ ಸತ್ಯ. ಅಂದು ಮತ್ತು ಮುಂದೆ ಆಕೆ ನಮ್ಮ ದಹಿಸರ್‌ನ ರಾವಲ್‌ಪಾಡಾ ಬಸ್‌ಸ್ಟಾಪಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.


http://www.vijayanextepaper.com/svww_zoomart.php?Artname=20110923a_008101003&ileft=50&itop=1126&zoomRatio=130&AN=20110923a_008101003

Friday, July 29, 2011

ಚುಟುಕು-ಚುಟುಕು

‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ IAS ಆಫೀಸರ್ (ನನ್ನ ಸೊಸೆಯ) ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ ಸುಷ್ಮಾ ಭಾರಧ್ವಜ (‘ಚುಕ್ಕಿ’ ಎನ್ನುವುದು ಇವರ ಪೆನ್ ನೇಮ್), ಎರಡು ತಿಂಗಳ ಹಿಂದೆ ಒಂದು ಸುಂದರವಾದ ಚುಟುಕನ್ನು ಬರೆದು (fwd sms ಅಲ್ಲ) SMS ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾನೊಂದು ಚುಟುಕು ಬರೆದು ಅವರಿಗೆ ರವಾನಿಸಿದ್ದೆ. ಇಂದು ಬೇಡದ SMS ಗಳನ್ನೆಲ್ಲ ಡಿಲೀಟ್ ಮಾಡುತ್ತಿರುವಾಗ ಆ ಎರಡು ಚುಟುಕುಗಳು ಕಣ್ಣಿಗೆ ಬಿದ್ದವು. ಚೆಂದ ಅನಿಸಿದವು. ಅವನ್ನಿಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.

ಸುಷ್ಮಾ ಭಾರಧ್ವಜರ ಚುಟುಕು.

ಕಪ್ಪು ಮುಸುಕಿನೊಳಗೆ
ಬಣ್ಣಬಣ್ಣದ ಕನಸು
ದಣಿವರಿಯದ ಭರವಸೆ
ಯ ರೆಕ್ಕೆಗಳನೇರಿ
ಎತ್ತೆತ್ತಲೋ ಹರಿದು
ಎತ್ತರೆತ್ತರ ಹಾರಿ
ಬಾನ ಚುಂಬಿಸಿ
ಬಣ್ಣದುಂಗುರವನೇ ನೀಡೆ
ಸೂರ್ಯನಪರಂಜಿಗೆ
ಕನಸಿನ ಬಣ್ಣದ ರತ್ನ
ಬೆಳಗಾಯಿತು
ಬಣ್ಣದ ಬೆಳಕಾಯಿತು!

ಪ್ರತಿಯಾಗಿ ನಾ ಬರೆದ ಚುಟುಕು

ಕಣ್ರೆಪ್ಪೆಯಡಿ ಹುಟ್ಟಿದ
ಕನಸು ರೆಪ್ಪೆಯನೇ
ರೆಕ್ಕೆಯಾಗಿಸಿಕೊಂಡು
ಪಟಪಟನೆ ಬಡಿದು ರೆಕ್ಕೆ
ಮುಗಿಲೇರಿ ನನಸಾದ ಕ್ಷಣ
ಮತ್ತೊಂದು
ಕನಸಿನ ಬಸಿರು
ಕಣ್ಣಾಲಿಯಲಿ...

Friday, July 22, 2011

ದೌಡು

ನಿನ್ನ ಜೊತೆ ಜೊತೆಯಲ್ಲಿ ಹೆಜ್ಜೆ ಹಾಕುವಾಗ ಅದೇನೊ ಹುರುಪು,ನೆಮ್ಮದಿ, ಸಂತಸ.
ನಡೆಯುತ್ತಾ ನಡೆಯುತ್ತಾ ನಿನ್ನ ಹೆಜ್ಜೆಗಳು ವೇಗವಾಗತೊಡಗುತ್ತವೆ.
ನನಗದು ಗೊತ್ತಾಗುವಷ್ಟರಲ್ಲಿ ಮಾರು ಮಾರು ದೂರದಲ್ಲಿರುವ ನಿನ್ನ ಸಮಕ್ಕೆ ಇನ್ನ್ಯಾರದೊ ಜೋಡಿ ಪಾದಗಳು! ಅಚ್ಚರಿಗೊಳ್ಳುತ್ತೇನೆ, ನಾನ್ಯಾಕೆ, ಹೇಗೆ ಇಷ್ಟು ಹಿಂದುಳಿದೆ?
ಅಥವಾ ನೀನು ಅಷ್ಟು ವೇಗವಾಗಿ ಮುಂದೆ ಸಾಗಿದ್ದೇಕೆ...?
ನಿನ್ನ ಜೊತೆ ನಡೆಯುತ್ತಿದ್ದ ಆ ಜೋಡಿ ಪಾದಗಳೀಗ ಬೇರೆ ದಾರಿ ಹಿಡಿದಿವೆ,
ನಿನ್ನ ನಡಿಗೆಯ ವೇಗ ತಗ್ಗಿ ಹಿಂದಿರುಗಿ ನೋಡುತ್ತಿ.
ನಿನ್ನ ಸಮಕ್ಕೆ ನಡೆಯಲು ಓಡುನಡಿಗೆಯಲ್ಲಿರುವ ನಾನು ಏದುಸಿರು ಬಿಡುತ್ತಾ "ಯಾಕೆ ಅಂಥ ವೇಗ?! ಯಾರದು ಜೊತೆಯಲಿ?", ಉತ್ತರಿಸದೆ ನೀನು, ಪ್ರಶ್ನೆ ಕೇಳಿದ್ದಕ್ಕೆ ರೇಗುತ್ತಿ!!
ಮತ್ತೆ ನಗುತ್ತಾ ನಿನ್ನ ಜೊತೆ  ನಾಲ್ಕಾರು ಹೆಜ್ಜೆ ಹಾಕಿದೆನೊ ಇಲ್ಲವೊ ಮತ್ತೆ ನಿನ್ನ ನಡಿಗೆಯ ವೇಗ ಹೆಚ್ಚಾಗುತ್ತದೆ....
--