‘ಎದ್ದೇಳು ಬೆಳಗಾಯ್ತು’ ಧ್ವನಿ ಬಂದಾಗ ನಾನು ಬೆಚ್ಚಿ ಎದ್ದೆ. ಸಮಯ ನೋಡಿಕೊಂಡರೆ ಆಗಿನ್ನೂ ೫ ಘಂಟೆ! ಇದನ್ನು ಬೆಳಗೆನ್ನುತ್ತಾರಾ? ಇದೇನು ಆತುರ ಇವರಿಗೆಲ್ಲ? ಇಷ್ಟು ಬೇಗ ಎದ್ದು ಮಾಡೋದಿಕ್ಕೆ ಏನು ಕೆಲಸವಿದೆ? ‘ಎದ್ದು ಸಿದ್ಧಳಾಗು’ ಧ್ವನಿಯಲ್ಲಿ ಆಜ್ಞೆಯಿತ್ತು. ಪಕ್ಕದಲ್ಲಿ ಹೊಸ ಬಟ್ಟೆ! ನನ್ನ ಮೆಚ್ಚಿನ ಬಣ್ಣದ್ದು. ಇವತ್ತು ಏನು ವಿಶೇಷವೋ ಅಂದುಕೊಂಡೆ. ಹೊಸ ಬಟ್ಟೆ ನೋಡಿ ಸಂಭ್ರಮ ಬಂದಿತ್ತು ನನಗೆ.
ಹಬೆಹಬೆಯಾಡುವ ನೀರು. ಜೊತೆಯಲ್ಲಿದ್ದವರೇ ಸ್ನಾನಕ್ಕೆ ಎಲ್ಲ ಸಿದ್ಧ ಪಡಿಸಿದ್ದರು. ಎಲ್ಲ ಉತ್ಕೃಷ್ಟ ಸಾಮಗ್ರಿಗಳು. ಆ ಸೋಪು ಅದೆಷ್ಟು ಪರಿಮಳವಿತ್ತು! ಹರಳೆಣ್ಣೆ ಹಚ್ಚಿ ಮೈಯ ನರ ನರವೆಲ್ಲ ಸಡಿಲಾಗುವ ಹಾಗೆ ನೀವಿದರು. ತಲೆಯಿಂದ ಪಾದದ ಬೆರಳಿನವರೆಗೆ ಎಲ್ಲವನ್ನೂ ಅವರ ವಶಕ್ಕೆ ಒಪ್ಪಿಸಿ ಕೂತೆ. ನನಗೆ ಆತುರದಲ್ಲಿ ಮೈಮೇಲೆ ನಾಲ್ಕು ಚೊಂಬು ನೀರು ಸುರಿದುಕೊಂಡು ಅದನ್ನೇ ಸ್ನಾನವೆಂದುಕೊಳ್ಳುವ ಅಭ್ಯಾಸವಾಗಿತ್ತು. ಈ ಪರಿಯ ಸೊಗಸು ಸ್ನಾನದಲ್ಲೂ?! ಬದುಕಿನ ಸಣ್ಣ ಸಣ್ಣ ಸಂಗತಿಗಳೂ ಇಷ್ಟು ಸಂತೋಷ ಕೊಡಲು ಸಾಧ್ಯವೇ? ನಡೆ ನಡೆದು ದಣಿದಿತ್ತಲ್ಲ ಪಾದ ಅದನ್ನು ಹಿತವಾಗಿ ಒತ್ತಿದರು .. ಆಯಾಸವೆಲ್ಲ ಪರಿಹಾರವೆನ್ನಿಸುವ ಹಾಗೆ … ನಡೆದ ಸುಸ್ತೆಲ್ಲಾ ಬರೀ ಭ್ರಮೆಯೇನೋ ಅನ್ನಿಸುವ ಹಾಗೆ. ಕಣ್ಣು ಕೂಡಾ ಅದೆಷ್ಟು ದಣಿದಿತ್ತು ಎಡಬಿಡದೆ ಹಾದಿ ನೋಡಿ ನೋಡಿ ನಡೆದು. ಅದಕ್ಕೆಲ್ಲ ಹರಳೆಣ್ಣೆಯ ಚುಕ್ಕೆಯಿಟ್ಟಾಗ ತಂಪು ತಂಪು. ಮಂಜಿನ ಪರದೆಯೊಂದು ನೋಟವನ್ನು ಒಂದಿಷ್ಟು ಮಂಜು ಮಾಡಿದ್ದರೂ ಅದೇನೋ ಹಿತ. ಆ ಚಿಗರೆ ಪುಡಿ ಬೆರೆತ ಸೀಗೆಯ ಘಮ ಮತ್ತೇರಿಸಿತು. ಅದೆಂಥ ಅಭ್ಯಂಜನ! ಇಡೀ ಜನ್ಮದಲ್ಲಿ ನಾನು ಅನುಭವಿಸಿಯೇ ಇರಲಿಲ್ಲ ಆ ಥರದ ಸ್ನಾನದ ಸೊಗಸನ್ನು. ನಾನು ಏನೂ ಮಾಡಬೇಕಾದ್ದೇ ಇರಲಿಲ್ಲ. ಸುಮ್ಮನೆ ಕುಳಿತರಾಯಿತು. ಅವರದೇ ಎಲ್ಲ ಕೆಲಸವೂ. ಗುಲಾಬಿಯ ಎಸಳು ತೇಲುತ್ತಿದ್ದ ನೀರು ನನ್ನ ಮೇಲೆ ಧಾರೆಯಾಗಿ ಸುರಿಯಿತು. ತಲೆಯ ಕೂದಲ ಎಳೆ ಎಳೆಯೂ ಮಿಂದು ತೃಪ್ತಿ ಪಡೆಯಿತು. ಬಿದ್ದ ಬಿಸಿ ಬಿಸಿ ನೀರಿಗೆ ದೇಹ, ಮನಸ್ಸು ಒಟ್ಟಿಗೇ ಸಡಿಲಾದವು. ಆ ಥರದ್ದೊಂದು ಅನುಭೂತಿ ಇದುವರೆಗೆ ಎಂದೂ ಆಗಿರಲೇ ಇಲ್ಲ.
ಇಡೀ ದೇಹವೇ ನನ್ನ ನಿಯಂತ್ರಣದಲ್ಲಿ ಇಲ್ಲವೇನೋ ಅನ್ನೋ ಹಾಗೆ ಆಯಿತು. ಅಷ್ಟು ಹಗುರ .. ಗರಿಯ ಹಾಗೆ. ಹೆಜ್ಜೆಗಳು ತಪ್ಪಿ ಎಲ್ಲೆಲ್ಲೋ ಇಡುತ್ತಿದ್ದೆ .. ಮೊದಲ ಬಾರಿ ನಡೆಯಲು ಕಲಿತ ಮಗುವಿನ ಹಾಗೆ. ಇಂಥ ಸುಖಕ್ಕೆ ಕಾರಣವಾದವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ನೋಡಿದೆ.
ಅಲ್ಲಿಂದ ಮುಂದೆ ಹಬೆಯಾಡುವ ಸಾಂಬ್ರಾಣಿ ಧೂಪ ನನ್ನ ದೇಹಕ್ಕೆಲ್ಲ. ಇನ್ನೇನು ಬೇಕಿತ್ತು ಸ್ವರ್ಗಕ್ಕೆ ಕಿಚ್ಚು ಹಚ್ಚಲು? ಮೈಯೆಲ್ಲ ಪರಿಮಳ .. ಮತ್ತೇರಿಸುವ ಪರಿಮಳ! ಬದುಕೇ ಇಷ್ಟು ಮಾತ್ರ ಸುಖವನ್ನು ನನ್ನದಾಗಿಸಿದೆಯಲ್ಲ ಕಡೆಗೂ ಅಂತ ಸಂಭ್ರಮಿಸಿದೆ.
ಹೊಸ ಬಟ್ಟೆ ಇಟ್ಟಿದ್ದನ್ನು ಮುಂಚೆಯೇ ನೋಡಿ ಮೆಚ್ಚಿದ್ದೆನಲ್ಲ ಅದನ್ನು ತೊಡಿಸಿದರು. ಮೈಗೆ ಅಪ್ಪಿ ಕೂತ ಹೊಸ ಬಟ್ಟೆಯನ್ನು ಮನಸಲ್ಲೇ ಮೋಹಿಸಿದೆ. ನನಗೆ ಚೆಂದ ಕಾಣುತ್ತಿದೆಯೇ ಅಂತ ಕುತೂಹಲ ನನಗೆ. ಅವರನ್ನು ಕೇಳಲು ಸಂಕೋಚ. ಇರಲಿ ಬಿಡು ನನಗೆ ಇಷ್ಟವಾದ ಮೇಲೆ ಮತ್ತೇನು ಕೇಳುವುದು ಅಂತ ಸುಮ್ಮನಾದೆ. ನಂತರವೂ ಅಲಂಕಾರ ನಿಲ್ಲಲಿಲ್ಲ. ಕೈ ಕಾಲು ಪಾದಕ್ಕೆ ಎಂತೆಂಥದ್ದೋ ಲೇಪನ ಮಾಡಿದರು. ನವಿಲುಗರಿಯಂತಾಯ್ತು ದೇಹವೆಲ್ಲ! ಮುಖಕ್ಕೆ ಕೂಡಾ ಅದೇನೇನು ಲೇಪಿಸಿದರು! ಹೊಸ ಹುಟ್ಟು ಬಂದ ಹಾಗೆ ಭಾವನೆ ಮನಸಿನಲ್ಲೆಲ್ಲ …
ಕನ್ನಡಿ ತನ್ನಿ ಅನ್ನೋಣ ಅಂತ ಮನಸ್ಸು. ಹೇಗಿದ್ದ ನಾನು ಈಗ ಹೇಗಿದ್ದೇನೆ ಅಂತ ನೋಡಿಕೊಳ್ಳುವ ತವಕ ಮನಸಿನಲ್ಲಿ. ಕೇಳಲಾ, ಬೇಡವಾ ಅನ್ನುವ ದ್ವಂದ್ವದಲ್ಲಿದ್ದೆ ಇನ್ನೂ.
’ಸಮಯ ಮೀರುತ್ತಿದೆ .. ಎಲ್ಲ ಆಯಿತಾ? ನೇಣುಗಂಬಕ್ಕೆ ಏರಿಸಲು ಹೆಚ್ಚು ಸಮಯವಿಲ್ಲ …’ ಪಕ್ಕದಲ್ಲೊಂದು ಗದರು ಧ್ವನಿ …
ಆಗ ಅರಿವಾಯಿತು ನನಗೆ .. ನಾನು ಬಂದಿಖಾನೆಯಲ್ಲಿದ್ದೆ!!! ಅಲ್ಲಿಯವರೆಗಿನ ನನ್ನ ಸುಖದ ಅಭ್ಯಂಜನ ನೇಣುಗಂಬಕ್ಕೆ ಏರುವ ಮುಂಚಿನ ನನ್ನದೇ ಕಡೆಯ ಆಸೆಯಾಗಿತ್ತು!
ಬಂದೀಖಾನೆಯೆಂಬುದನ್ನೂ ಮರೆತು ಇಷ್ಟೆಲ್ಲ ಸಂಭ್ರಮದಲ್ಲಿ ಮೈಮರೆಯುವುದು ನನಗೆ ಹೇಗೆ ಸಾಧ್ಯವಾಯಿತು? ಸಾವಿನ ಭಯ ಕಾಡಲಿಲ್ಲ ಯಾಕೆ? ಬದುಕು ಮುಗಿಯುತ್ತಿದೆ ಅಂತ ಕೂಡಾ ಮರೆಸುವಂಥ ಸುಖ ಪಡೆಯುವುದು ನನಗೆ ಹೇಗೆ ಸಾಧ್ಯವಾಯಿತು? ಇದೇ ಬದುಕು ಅಂತ ಮೋಹಿತಳಾದೆನಲ್ಲ ಅದು ಹೇಗೆ ಸಾಧ್ಯ? ಸಾವಿನ ಭಯವನ್ನೂ ಮೀರಿದ ಜೀವನ ಪ್ರೀತಿ ನನ್ನಲ್ಲಿ ಇದ್ದುದರಿಂದಲೇ?
ಇಷ್ಟೆಲ್ಲ ಯೋಚಿಸುವಷ್ಟರಲ್ಲಿ ನನ್ನನ್ನು ನೇಣುಗಂಬಕ್ಕೆ ಕರೆದುಕೊಂಡು ಹೊರಟಾಗಿತ್ತು. ಆಗ .. ಆಗ ನಾನು ಸುಷುಪ್ತಿಯಿಂದ ಹೊರಬಂದೆ. ಇದು ಬದುಕಲ್ಲ .. ಸಾವು ಅನ್ನುವ ಅರಿವು ನುಗ್ಗಿ ಬಂತು. ಕೈಗಳನ್ನು ಕಟ್ಟಿದ್ದರು. ಅವರು ಹೆಜ್ಜೆಯಿಡುವಂತೆ ನನ್ನನ್ನು ನಿರ್ದೇಶಿಸುತ್ತಿದ್ದರು. ನಾನು ಎಲ್ಲಿ ಹೆಜ್ಜೆ ಇಡುತ್ತಿದ್ದೇನೆ ಅಂತಲೂ ಗೊತ್ತಿಲ್ಲದೆ ಸುಮ್ಮನೆ ಹೆಜ್ಜೆ ಹಾಕುತ್ತಿದ್ದೆ. ಹೌದು .. ಸಾವಿನ ಕಡೆಗೆ ಹೆಜ್ಜೆ ಇಟ್ಟು ಹೊರಟವಳಿಗೆ ದಾರಿಯ ಏರು-ತಗ್ಗುಗಳು, ಪೊದೆ ಕಂಟಿಗಳು ಏನು ಮಾಡುತ್ತವೆ ಹೇಳು? ಬಂದೀಖಾನೆಯೆಂದ ಮೇಲೆ ಸ್ವಲ್ಪ ಮಟ್ಟದ ದಾರಿಯಂತೂ ಇರಲೇ ಬೇಕಲ್ಲ? ಅವರು ನಡೆಸಿದರು .. ನಾನು ನಡೆದೆ. ದಾರಿ ಅನಂತವಾದ ಹಾಗೆ ಅನ್ನಿಸುತ್ತಿತ್ತು. ಸುಮ್ಮನೆ ನಡೆಯುತ್ತಲೇ ಇದ್ದರೆ ಹೇಗೆ? ನಡೆದು ನಡೆದೇ ಸುಸ್ತಾಗಿ ಸತ್ತರೆ ಎಷ್ಟೋ ವಾಸಿ ಅಲ್ಲವೇ? ಹೀಗೆ ಒಂದಿಷ್ಟು ಅಡಿಗಳ ದೂರದಲ್ಲಿ ನನ್ನ ಸಾವು ಕಾದು ನಿಂತಿದೆ ಅನ್ನುವ ಆ ಭೀಕರತೆಗಿಂತ ನಡೆಯುತ್ತ ಇರುವುದು ಮತ್ತು ಹಾಗೇ ಸತ್ತು ಹೋಗುವುದು ಸುಖಕರ ಅಲ್ಲವೇ?
ಇದೆಲ್ಲ ನನ್ನ ಅನಿಸಿಕೆ ಮಾತ್ರ …ಬದುಕು ನನ್ನಂತ ಕೋಳಿಯನ್ನು ಕೇಳಿ ಖಾರ ಅರೆಯಲು ಕೂತುಕೊಳ್ಳುವುದಿಲ್ಲ …
ನೇಣುಗಂಬ ಸಮೀಪಿಸಿತು. ಮುಖಕ್ಕೆ ಕಪ್ಪು ಕವಚ ಹಾಕಿದರು. ಜಗತ್ತು ಪೂರ್ತಿ ಕತ್ತಲಾಯಿತು. ಎಲ್ಲ ಮುಗಿಯಿತಲ್ಲವಾ? ಸಾವು ಬಂದಾಗ ನನಗೆ ಗೊತ್ತಾಗುತ್ತದಾ? ಅಥವಾ ಅರಿವಾಗುವ ಮುನ್ನವೇ ಪ್ರಾಣ ಹೋಗುತ್ತದಾ? ಆದರೆ ಈ ರೀತಿ ಹೇಳಿ ಸಾಯಿಸುವ ಬದಲು ಸುಮ್ಮನೆ ಇಷ್ಟು ವಿಷವನ್ನು ನಿದ್ರೆಯಲ್ಲೆ ಹಾಕಿದ್ದರೆ ವಾಸಿ ಇತ್ತು. ನನಗೇ ಗೊತ್ತಿಲ್ಲದೇ ಹೋಗಿ ಆಗಿರುತ್ತಿತ್ತು. ಸಾವಿನ ನಿರೀಕ್ಷೆ ಎಷ್ಟು ಅಸಹನೀಯ. ಕ್ರೌರ್ಯದ ಪರಮಾವಧಿ …
ಕಾಲುಗಳು ಬಲಹೀನವಾದವು… ಸಾವಿನ ಭಯದಿಂದ. ಕೈ ಕಾಲು ತಣ್ಣಗಾದವು. ನಾನೀಗ ಬದುಕಿದ್ದೇನಾ? ಅಥವಾ ಸತ್ತು ಆಗಿದೆಯಾ? ಯಾರು ಹೇಳಬೇಕು? ಗಲ್ಲಿಗೇರಿಸುವವನೊಬ್ಬನೇ ಅಲ್ಲಿ ಉಳಿದಿದ್ದು. ಅವನನ್ನು ಮಾತನಾಡಿಸಲು ಭಯವಾಯಿತು. ಸುಮ್ಮನುಳಿದೆ ನಿರೀಕ್ಷೆಯಲ್ಲಿ, ಭಯದಲ್ಲಿ.
ಕ್ಷಣಗಳು ಯುಗವಾಗುವುದು ಬರೀ ವಿರಹದಲ್ಲಿ ಮಾತ್ರವಲ್ಲ .. ಸಾವಿನ ಸನಿಹದಲ್ಲೂ. ಇವನು ಹಗ್ಗ ಜಗ್ಗಿಬಿಡಬಾರದೇ? ಮತ್ತೇಕೆ ಕಾಯುತ್ತಿದ್ದಾನೆ?
ಅಲ್ಲೆಲ್ಲೋ ಹೆಜ್ಜೆಗಳ ಗುರುತು ಕ್ಷೀಣವಾಗಿ ಕೇಳಿಸುತ್ತಿದ್ದುದು ಬರಬರುತ್ತಾ ಹತ್ತಿರವಾಯಿತು. ಬಂದವನು ‘ಇವಳು ಅಪರಾಧಿಯಲ್ಲವಂತ ಇದೀಗ ತಿಳಿಯಿತು. ಬಿಡುಗಡೆಯ ಆಜ್ಞೆ ಬಂದಿದೆ’ ಎಂದ!
ಹಾಕಿದ್ದ ಮುಸುಕು ತೆಗೆದರು. ಕತ್ತಲಿಗ್ಗೆ ಒಗ್ಗಿದ್ದ ಮತ್ತು ಸಾವಿನ ಲೋಕಕ್ಕೆ ನುಗ್ಗಿದ್ದ ಮನಸ್ಸಿಗೆ ಬೆಳಕು ಹಿಂಸೆಯಾಯಿತು. ಕಣ್ಣು ಮುಚ್ಚಿದೆ. ಕ್ಷಣಗಳ ಹಿಂದೆ ಇದ್ದ ಬದುಕುವ ಆಸೆ ಈಗ ಬದುಕುತ್ತೇನೆ ಅಂತ ತಿಳಿದ ಮೇಲೆ ಸತ್ತುಹೋಗಿತ್ತು. ‘ನಾನು ನಿರಪರಾಧಿಯಂತ ಹೇಳಿ ಈಗ ಕೈ ತೊಳೆದುಕೊಂಡಿರಲ್ಲ .. ಇಷ್ಟು ದಿನದ ನನ್ನ ನೋವಿಗೆ ಏನು ಬೆಲೆ ಕಟ್ಟುತ್ತೀರಾ?’ ಅಂತ ಕಿರುಚ ಬೇಕೆನ್ನಿಸಿತು. ಕಾಲೆಳೆದುಕೊಂಡು ಹಿಂದೆ ಬಂದೆ. ಮತ್ತೆ ಅಪರಾಧಿಯಂತ ಯಾವಾಗ ತೀರ್ಮಾನಿಸುತ್ತಾರೋ? ನನ್ನ ಕೊನೆ ಘಳಿಗೆ ಬಂದಿದೆ ಎಂದು ಮತ್ತೆ ಯಾವಾಗ ಹೇಳಿ ಬಿಡುತ್ತಾರೋ ಅನ್ನುವ ಭಯ ಆವರಿಸಿತು. ಇದಕ್ಕಿಂತ ಈಗಲೇ ನೇಣುಗಂಬಕ್ಕೆ ಏರಿಸಿದ್ದರೆ ಒಳ್ಳೆಯದಿತ್ತು ಅನ್ನುವ ಹುಚ್ಚು ಯೋಚನೆ. ಕೊನೆ ಘಳಿಗೆಯಲ್ಲಿ ನನ್ನ ಪರವಾದ ಸಾಕ್ಷ್ಯಾಧಾರಗಳು ಮತ್ತೆ ವಿರುದ್ಧವೂ ಆಗಬಹುದಾದ ಎಲ್ಲ ಸಾಧ್ಯತೆಗಳಿವೆ ತಾನೇ? ಅಂದ ಮೇಲೆ ಮತ್ತೆ ಯಾವಾಗ ಈ ಸಾವಿನ ಯಾತ್ರೆ ಶುರುವಾಗುತ್ತದೊ ಅನ್ನುವ ಅಗೋಚರ ಭಯ.
ಅವತ್ತು ಬಿಡುಗಡೆಯಾಗಿ ಬಂದೆ.
ಆದರೆ ನನ್ನ ಅನಿಸಿಕೆ ಸತ್ಯವೇ ಆಗಿತ್ತು. ನನ್ನ ವಿರುದ್ಧ ಮತ್ತಿಷ್ಟು ದೂರುಗಳು, ಮತ್ತಿಷ್ಟು ಸಾಕ್ಷ್ಯಾಧಾರಗಳ ಸಾಲು ಸರತಿ ನಿಂತಿದ್ದವು. ‘ಈ ಸಲಕ್ಕೂ ನನ್ನ ಬಿಡುಗಡೆಯಾಗುವುದಾ?’ ಅನ್ನುವ ದೂರದ ಆಸೆ ಈ ಸಲ. ಇದಕ್ಕಾಗಿಯೇ ನಾನು ಮೊದಲ ಸಲವೇ ಸತ್ತು ಹೋಗಬೇಕಿತ್ತು ಅಂತ ಹೇಳಿದ್ದು. ಆಗ ಭರವಸೆಯೇ ಇರಲಿಲ್ಲ. ಈಗ ನೋಡಿ ಮತ್ತೆ ಭರವಸೆಯ ಹಣತೆಯ ಮಂಕು ಬೆಳಕು. ಮತ್ತೆ ಆ ನಿರೀಕ್ಷೆ, ಮತ್ತೆ ಆ ನಿರಾಸೆ. ಎಲ್ಲ ಸಹಿಸಬಲ್ಲೆನೆ ನಾನು?
ಸವಾಲು, ಪಾಟಿಸವಾಲುಗಳ ಸರಮಾಲೆ. ನಾನು ಸುಸ್ತಾಗಿದ್ದೆ. ಕೋಪದಿಂದ ಕಿರುಚಾಡಿದೆ, ಅಸಹಾಯಕತೆಯಿಂದ ಕಣ್ಣೀರಾದೆ, ಯಾವುದಕ್ಕೂ ಬೆಲೆಯಿಲ್ಲ ಇಲ್ಲಿ. ಹೇಳಿ ಕೇಳಿ ಇದು ಬಂದೀಖಾನೆ. ಯಾರಿಗೆ ಕರುಣೆ ಇರಬೇಕು ಇಲ್ಲಿ? ನನ್ನ ಸಣ್ಣ ತಪ್ಪುಗಳೆಲ್ಲ ಬೆಟ್ಟದಾಕಾರ ಬೆಳೆದವು. ನಾನು ಕುಬ್ಜಳಾಗುತ್ತಾ ಹೋದೆ. ನನ್ನ ಅಪರಾಧ ಮತ್ತೆ ಸಾಬೀತಾಯಿತು. ಸಣ್ಣ ತಪ್ಪು ಮಾಡಿದ್ದು ಹೌದಾದರೂ ನೇಣುಗಂಬಕ್ಕೆ ಏರುವಂತದ್ದಂತೂ ಅಲ್ಲ. ಕಾಲಿಗೆ ಒಂದು ಸಣ್ಣ ಸಂಕೋಲೆ ಹಾಕಿದ್ದರೆ ಸಾಕಿತ್ತು .. ಓಡಿಹೋಗದ ಹಾಗೆ. ಅದು ಬಿಟ್ಟು ಮತ್ತೆ ನೇಣುಗಂಬ!
ಈ ಸಲ ನನ್ನ ಕೊನೆಯಾಸೆ ಏನು ಅಂತ ಕೇಳಿದಾಗ ನಾನು ಏನೂ ಹೇಳಲೇ ಇಲ್ಲ. ಯಾರಿಗೆ ಬೇಕು ಆ ಸುಳ್ಳು ಸಾಂತ್ವನ? ಸಾವು ಕಾದಿದೆ ಎಂದು ಈ ಸಲ ಖಚಿತವಾಗಿತ್ತು. ಕೊನೆಯಾಸೆಯಂತೆ! ಎಂಥದ್ದೂ ಬೇಡ .. ಈ ಸಲವಾದರೂ ನನ್ನ ಗಲ್ಲಿಗೇರಿಸಿ ಅದೇ ನನ್ನ ಕೊನೆಯಾಸೆ ಅಂತ ಹೇಳಿದೆ. ಎಲ್ಲ ಮುಗಿದುಹೋಗಲಿ ಒಂದೇ ಸಲಕ್ಕೆ … ಮತ್ತೆ ಮತ್ತೆ ಎದುರಾಗೋ ಈ ಭಯ ನನ್ನನ್ನು ತಿನ್ನುತ್ತದೆ. ಆದರೆ ಬದುಕಬೇಕು ಅಂದಾಗ ಹೇಗೆ ಬದುಕಲು ಕೂಡಾ ಬಿಡುವುದಿಲ್ಲವೋ ಹಾಗೆ ಸಾವು ಬರಲಿ ಅಂದಾಗ ಸಾಯಿಸುವುದೂ ಇಲ್ಲ. ಮತ್ತೇನು ಸಾಕ್ಷಿ ದೊರಕುತ್ತದೋ .. ಮತ್ತೆ ನನ್ನನ್ನು ಬಂಧಮುಕ್ತಳಾಗಿಸುತ್ತಾರೊ ಏನೋ. ಅಬ್ಬಾ ಇದೆಂಥ ವಿಷಚಕ್ರ.
ಈ ಬಾರಿ ಎಲ್ಲ ಸ್ವಲ್ಪ ಅಭ್ಯಾಸವಾಗಿತ್ತು. ಢವಗುಟ್ಟುವ ಎದೆಯೊಡನೆ ಮರಣದಂಡನೆಗೆ ಸಿದ್ಧಳಾದೆ. ಮೊದಲ ಬಾರಿ ಇದ್ದ ಆತಂಕದಲ್ಲಿ ಬಹುಪಾಲು ಈಗ ಕಡಿಮೆಯಾಗಿತ್ತು. ಆದರೂ ಸಾವು ಅದೆಂಥ ಕ್ರೂರಿ. ಬದುಕಿನ ಯಾವುದನ್ನೂ ಪ್ರೀತಿಸದ ಹಾಗೆ ಪಾಠ ಕಲಿಸಿಬಿಡುತ್ತದೆ. ಮೊದಲ ಸಲ ಬಂದೀಖಾನೆ ಅಂತಲೂ ಗೊತ್ತಾಗದ ಹಾಗೆ ಅಭ್ಯಂಜನ ಸುಖ ಅನುಭವಿಸಿದ್ದೆನಲ್ಲ ಈಗ ಅದು ಅಸಾಧ್ಯವಾಗಿತ್ತು. ಮರಗಟ್ಟಿದ ಅನುಭವ. ಬಿಸಿ ಕಾಲನ್ನು ಸುಟ್ಟರೆ ಮಂಜು ತಣ್ಣಗಿದ್ದರೂ ಕೂಡಾ ಒಳಗೊಳಗೆ ಕಾಲನ್ನು ಕೊಳೆಸುತ್ತದೆ. ಬಂಧನ-ಬಿಡುಗಡೆ ಎಲ್ಲವೂ ಅಷ್ಟೇ …
ಅದೇ ಕರಿ ಮುಸುಕು, ಅದೇ ಅನಂತಯಾತ್ರೆ ಮತ್ತು ಯಾತನೆ. ನಾನು ಮತ್ತೊಮ್ಮೆ ಅಲ್ಲಿ ನಿಂತಿದ್ದೆ. ಚರಿತ್ರೆಯ ಪುನರಾವರ್ತನೆ !! ಹೆಜ್ಜೆ ಗುರುತು ಕೇಳಿಸಿತು ಈಗ ಕೂಡಾ. ಅದು ಸತ್ಯವೋ ಅಥವಾ ನನ್ನ ಭ್ರಮೆಯೋ? ಅತಿಯಾದ ಆಶಾವಾದಿತನ ಅಲ್ಲವಾ ಇದು? ಆದರೆ .. ಆದರೆ … ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಕೇಳಿದ ಹೆಜ್ಜೆ ಗುರುತು ನನ್ನ ಭ್ರಮೆಯಾಗಿರಲಿಲ್ಲ. ಮತ್ತೆ ನನ್ನ ಬಿಡುಗಡೆಯಾಗಿತ್ತು. ನಾನು ನಿರಪರಾಧಿಯಂತ ಕಡೇ ಘಳಿಗೆಯಲ್ಲಿ ಗೊತ್ತಾಯಿತಂತೆ.
ಈ ಸಲ ಮುಖದ ಮುಸುಕು ತೆಗೆದ ಕೂಡಲೇ ಗಂಟಲು ಸರಿ ಮಾಡಿಕೊಂಡು ‘ಥೂ’ ಅಂತ ಕ್ಯಾಕರಿಸಿ ಉಗಿದೆ ನಿರ್ಲಕ್ಷ್ಯದಿಂದ. ನನಗೆ ಮೊದಲೇ ಗೊತ್ತಿತ್ತು ಬಿಡು ಅಂತ ಅವರಿಗೆ ತಿಳಿಸಿ ಹೇಳುವ ನನ್ನ ವಿಧಾನ ಇದು. ಮೊದಲ ಸಲ ಕಾಲೆಳೆದು ನಡೆದ ನನಗೆ ಈಗ ಏನೂ ಅನ್ನಿಸಲೇ ಇಲ್ಲ. ಬದುಕು ಎಲ್ಲವನ್ನೂ ಕಲಿಸಿತ್ತು .. ಬದುಕುವುದನ್ನು ಕೂಡಾ, ಸಾವನ್ನು ಎದುರಿಸುವುದನ್ನು ಕೂಡಾ.
ಎರಡು ಸಲ ಸಾವನ್ನು ಅತೀ ಹತ್ತಿರದಿಂದ ನೋಡಿ ಬಂದ ಮೇಲೆ ನಾನು ಬೇರೆಯದೇ ವ್ಯಕ್ತಿಯಾದೆ. ಗಟ್ಟಿಯಾದ ವ್ಯಕ್ತಿಯಾದೆ. ಸಾವು ಈಗ ನನ್ನನ್ನು ಹೆದರಿಸುತ್ತಿರಲಿಲ್ಲ. ಅದರೆಡೆಗೆ ನನ್ನದೊಂದು ದಿವ್ಯನಿರ್ಲಕ್ಷ್ಯ. ‘ಅದೇನು ಕಿತ್ಕೊಳ್ತೀಯೋ ಕಿತ್ಕೋ ಹೋಗು’ ಅನ್ನುವ ಉದ್ಧಟತನ ಈಗ ನನ್ನಲ್ಲಿ.
ನಾನೀಗ ಅಪರಾಧಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದೆ. ಏನೇ ಅಪರಾಧವಾದರೂ, ಸಣ್ಣ ಪುಟ್ಟ ತಪ್ಪಾದರೂ ಇವಳಿಂದಲೇ ಅಂತ ಬಂಧಿಸುವಷ್ಟು ಕುಖ್ಯಾತಳಾದೆ. ಬಾಗಿಲು ತಟ್ಟಿದರೆ ಸಾಕು ನಾನು ಬಂಧನಕ್ಕೆ ಸಿದ್ಧಳಾಗಿ ಏಳುತ್ತಿದ್ದೆ. ಯಾರೂ ಕೇಳದೇ ಕೂಡಾ ನಾನೇ ಕೈ ಒಡ್ಡುತ್ತಿದ್ದೆ ಕೋಳ ಹಾಕಿಸಿಕೊಂಡು ಹೊರಡಲು.
ಇನ್ನು ಹೆಚ್ಚು ಹೇಳಿ ನಿಮಗೆ ಬೇಸರ ಮಾಡೋದಿಲ್ಲ ನಾನು.
ಅದಾದ ಮೇಲೆ ಏನಾಯಿತು ಗೊತ್ತಾ? ನನ್ನ ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಸಾವಿನ ಹತ್ತಿರಕ್ಕೆ ಹೋಗಿ ಬರುವುದು ಒಂದು ದಿನಚರಿಯೇ ಆಗಿಹೋಯಿತು. ಅದೆಷ್ಟು ಸಲದ ಬಂಧನವೋ, ಅದೆಷ್ಟು ಕ್ಷಣಿಕ ಬಿಡುಗಡೆಯೋ. ಈಗ ಬಿಡುಗಡೆಯಾದೆ ಅನ್ನಿಸಿದರೂ ಮೊದಲಿನ ಹಾಗೆ ಸಂತೋಷವೂ ಇಲ್ಲ. ಸಾವಿನ ಗುಮ್ಮ ನನ್ನನ್ನು ಈಗ ಹೆದರಿಸುತ್ತಲೇ ಇರಲಿಲ್ಲ. ನಾನು ಸಾವನ್ನೇ ಗೆದ್ದಿದ್ದೆನೇ? ಊಟಕ್ಕೆ ಕರೆದಾಗ ಹೋಗಿ ಕೂರುವ ಹಾಗೆ, ನಿದ್ದೆ ಬಂದಾಗ ಮಲಗುವ ಹಾಗೆ ನೇಣುಗಂಬಕ್ಕೆ ಹೋಗಿ ಹಿಂತಿರುಗುವುದೂ ಅಭ್ಯಾಸವಾಗಿ ಹೋಯಿತು. ನನ್ನ ಆಪ್ತರಲ್ಲಿ ‘ನಾಳೆ ನನ್ನ ಗಲ್ಲು ಕಣಪ್ಪಾ’ ಅಂದರೆ ಅವರು ಕೂಡಾ ‘ನಾಡಿದ್ದು ನಮ್ಮನೇಲೇ ಊಟ .. ಬಿಡುಗಡೆಯಾಗಿ ಬಂದುಬಿಡು .. ಒಟ್ಟಿಗೆ ಊಟ ಮಾಡೋಣ’ ಅಂತ ಹಾಸ್ಯ ಮಾಡುತ್ತಿದ್ದರು!
ನಾನೀಗ ಸಾವನ್ನು ಗೆದ್ದ ಚಿರಂಜೀವಿ. ಅದೆಲ್ಲ ಕಲಿಸಿದ್ದು ನೀವು. ನಿಮಗೆ ನನ್ನದೊಂದು ನಮನ. ಸಾವನ್ನು ಕೂಡಾ ನಗೆಯಲ್ಲಿ ಸ್ವಾಗತಿಸುವ ಮನಃಸ್ಥಿತಿ ಬೆಳೆಸಿದ ನಿಮಗೆ ನನ್ನ ಕೃತಜ್ಞತೆಗಳು ಅಂತ ಹೇಳಬೇಕೆನ್ನಿಸಿದರೂ ನಾನು ಹೇಳುವುದಿಲ್ಲ. ಯಾಕೆಂದರೆ ನೀವು ನನ್ನ ಉದ್ಧಾರ ಮಾಡುವುದಕ್ಕೆ, ಬುದ್ಧಳಾಗಿಸುವುದಕ್ಕೆ ಹೊರಟು ಕಲಿಸಿದ್ದಲ್ಲ ಇದು. ನಿಮಗೆ ತಪ್ಪನ್ನು ತಪ್ಪಿನಂತೆ ನೋಡುವುದು ಗೊತ್ತಿರಲಿಲ್ಲ. ಅಪರಾಧದಂತೆ ನೋಡಿಯಷ್ಟೇ ಗೊತ್ತು. ನೀವು ಸುಮ್ಮನೇ ಪೆಟ್ಟು ಕೊಡುತ್ತಾ ಹೋದಿರಿ .. ಅದು ನಿಮಗೇ ಗೊತ್ತಿಲ್ಲದ ಹಾಗೆ ಅದು ಶಿಲ್ಪದ ರೂಪ ತಳೆಯಿತು ಅಷ್ಟೇ! ಅಷ್ಟಕ್ಕೆ ನೀವು ಶಿಲ್ಪಿಯಾಗುವುದಿಲ್ಲ … ನೆನಪಿರಲಿ!!
ಬದುಕೆಂಬ ಬಂದೀಖಾನೆಯಲ್ಲಿ ನಾನು ನಿರಂತರ ಬಂಧಿ. ಯಾರಿಗೂ ಅನಿವಾರ್ಯವಾಗದ ನನ್ನನ್ನು ಸ್ವಾಭಾವಿಕವಾಗೇ ಎಲ್ಲರೂ ಅಪರಾಧಿಯಾಗಿಸುತ್ತಲೇ ಹೋದರು. ನಾನು ಎಂದೂ ಸಂತಳಾಗಿರಲಿಲ್ಲ. ನನ್ನಲ್ಲೂ ಎಲ್ಲ ದೌರ್ಬಲ್ಯಗಳಿದ್ದವು .. ನಿಮ್ಮೆಲ್ಲರಲ್ಲೂ ಇರುವ ಹಾಗೆ. ಆದರೆ ನಾನು ಯಾರ ಬದುಕಿನ ಅವಿಭಾಜ್ಯ ಅಂಗವೂ ಆಗಿರಲಿಲ್ಲ. ಹಾಗಾಗಿ ಎಲ್ಲ ತಪ್ಪುಗಳನ್ನೂ ನನ್ನದಾಗಿಸಿದಿರಿ ನೀವು. ಅದಕ್ಕೂ ನನ್ನ ತಕರಾರಿರಲಿಲ್ಲ. ಎಲ್ಲ ಅಪರಾಧಗಳನ್ನು ಒಪ್ಪಿಕೊಂಡರಾದರೂ ನನ್ನನ್ನು ನಿಮ್ಮ ಬದುಕಿನ ಅನಿವಾರ್ಯ ಅಂದುಕೊಳ್ಳುತ್ತೀರೇನೋ ಅನ್ನುವ ಸುಪ್ತ ಆಸೆ ಮನಸ್ಸಿನ ಆಳದಲ್ಲಿ. ನಿಮಗೆ ಬೇಕೆಂದಾಗ ನನ್ನನ್ನು ಒಪ್ಪಿದಿರಿ, ಬೇಡವೆಂದಾಗ ಇದ್ದೇ ಇತ್ತಲ್ಲ .. ಸಿದ್ಧವಾಗಿ ನಿಂತಿದ್ದ ನೇಣುಗಂಬ. ನನ್ನೊಳಗಿನ ನಾನು ಬದುಕಿದ್ದೇನಾ, ಸತ್ತಿದ್ದೀನಾ ಅಂತ ಕೂಡಾ ಯೋಚಿಸದೇ ನನ್ನ ಗುರಿಯಾಗಿಸುತ್ತಾ ಹೋದಿರಿ. ನನ್ನನ್ನು ನನ್ನ ದೌರ್ಬಲ್ಯಗಳೊಡನೆ ಸ್ವೀಕರಿಸುವ, ನನ್ನ ಅಪರಾಧಗಳೊಡನೆ ಒಪ್ಪಿಕೊಳ್ಳುವಂಥವರು ನೀವಾಗಿರಲಿಲ್ಲ. ಜಗತ್ತಿನ ನಿಮ್ಮ ದೃಷ್ಟಿಯಲ್ಲಿ ಬಿದ್ದಿದ್ದ ನನ್ನೊಳಗೆ ತಡವರಿಸುತ್ತ ನಡೆವ ಒಂದು ಮಗುವಿತ್ತು. ತಪ್ಪು ತಪ್ಪಾಗಿ ಹೆಜ್ಜೆಯಿಡುವ ಪುಟ್ಟ ಮಗು. ಅತ್ತು ನಿಮ್ಮ ಪ್ರೀತಿ ಸೆಳೆವ ಹುನ್ನಾರದಲ್ಲಿರುವ ಪುಟ್ಟ ಮಗು. ಸಾವಿನ ಸಮ್ಮುಖದಲ್ಲಿ ಕೂಡಾ ಅಭ್ಯಂಜನವನ್ನು ಆಸ್ವಾದಿಸುವಂಥ ಒಂದು ಬೆಪ್ಪು ಮಗು. ಬದುಕು ಆಗ ತಾನೇ ಶುರುವಾಗಿತ್ತಲ್ಲ … ಯಾವುದನ್ನ, ಯಾರನ್ನ ಹೇಗೆ ಸರಿಯಾಗಿ ಬಳಸಿಕೊಳ್ಳಬೇಕು ಅನ್ನುವುದನ್ನು ಅರಿಯದ ಮೊದ್ದು ಮಗು. ರಾಶಿ ಆಟಿಗೆ ಸುರಿದಿರಿ. ಬಾಚಿಕೊಳ್ಳುವ ಭರದಲ್ಲಿ ಪಕ್ಕದಲ್ಲಿದ್ದವರಿಗೆ ನೋವಾಯಿತಾ ಅಂತ ಕೂಡಾ ಅರ್ಥ ಮಾಡಿಕೊಳ್ಳದ ಮೂಢ ಮಗು. ನನ್ನನ್ನು ನೀವು ಕ್ಷಮಿಸಬೇಕಿತ್ತು .. ಆ ದೊಡ್ಡತನ ನಿಮ್ಮಲ್ಲಿ ಇರಲಿಲ್ಲ.
ಬದುಕಲು ಬಿಡದ ನೀವು ನನ್ನ ಸಾಯಲೂ ಬಿಡಲಿಲ್ಲ… ಹಾಗಾಗಿ ಇಗೋ ಈಗ ನಿಮ್ಮೆಲ್ಲರೆಡೆಗೆ ನನ್ನದೊಂದು ತಿರಸ್ಕಾರ!
ಈಗ ನಿಮಗೆ ಆಘಾತ ಕೊಡುವಂತ ಸತ್ಯವೊಂದನ್ನು ಹೇಳಿಯೇಬಿಡುತ್ತೇನೆ .. ಮೊದಲ ಸಲ ನೇಣುಗಂಬಕ್ಕೆ ಏರಿಸಲು ಹೊರಟಾಗಲೇ ನಾನು ಹೃದಯ ಸ್ಥಂಭನವಾಗಿ ಸತ್ತಿದ್ದೆ! ಮತ್ತೆ ಮತ್ತೆ ನೀವು ಕರೆದುಕೊಂಡು ಹೋಗಿದ್ದು, ಬಿಡುಗಡೆ ಮಾಡಿದ್ದು ಎಲ್ಲ ಜೀವವಿಲ್ಲದ ನನ್ನನ್ನು ಮಾತ್ರ. ಅಲ್ಲಿ ನಾನಿದ್ದೆ ಅಂತ ತಿಳಿದು ನೀವು ಶಿಕ್ಷೆ, ಅಪರಾಧ ಅಂತೆಲ್ಲ ಹಾರಾಡುತ್ತಿದ್ದಿರಲ್ಲ … ನಿಮ್ಮ ಮೂರ್ಖತನ ಮತ್ತು ಭ್ರಮೆ ನೋಡಿ ನಗುತ್ತಿತ್ತು ಪಂಜರದೊಳಗಿಲ್ಲದ ನಾನೆಂಬ ಪಕ್ಷಿ!
ಭಾರತಿ ಬರೆದ ಕಥೆ: ಸಾವು « ಅವಧಿ / avadhi