Wednesday, June 1, 2016

ಮನೆಯೇ ಮೊದಲ ಪಾಠಶಾಲೆ...

ಜನದನಿ ಇಂಥ ಅನೇಕ ಕಿರುಚಿತ್ರಗಳನ್ನು ಮಾಡುವ ಯೋಜನೆಯನ್ನು ಹಾಕಿಕೊಂಡಿದೆಯಲ್ಲದೇ ಈಗಾಗಲೇ ತಯಾರಿಸಿದ ಇನ್ನೂ ಎರಡು ಕಿರುಚಿತ್ರಗಳು ಮತ್ತು ನಾಲ್ಕಾರು ಕತೆಗಳು ಕೈಯಲ್ಲಿವೆ.

ಈ ಚಿತ್ರಗಳಲ್ಲಿ ಬರುವ ಅಪ್ರಾಪ್ತ ವಯಸ್ಸಿನ ಮಕ್ಕಳ ಪಾತ್ರಧಾರಿಗಳಿಗೆ ಈ ವಿಷಯದ ಕುರಿತು ಯಾವುದೇ ಅನಗತ್ಯ ಕುತೂಹಲ ಮೂಡದಂತೆ, ಅವರ ಮುಗ್ಧತೆ ಹಾಳಾಗದಂತೆ ಸಂಪೂರ್ಣ ಎಚ್ಚರವಹಿಸಿಯೇ ಚಿತ್ರೀಕರಿಸುತ್ತೇವೆ. ಮಕ್ಕಳ ಮುಗ್ಧತೆ ಹಾಳಾಗದಂತೆ ಎಚ್ಚರವಹಿಸುವುದು ಜನದನಿಯ ಪ್ರಮುಖ ಆಶಯಗಳಲ್ಲಿ ಒಂದಾದ್ದರಿಂದ ನಮ್ಮೆಲ್ಲರಲ್ಲೂ ಈ ಕುರಿತು ಸಂಪೂರ್ಣ ಎಚ್ಚರಿಕೆ ಇರುತ್ತದೆ ಸದಾ. ಇದೇ ಕಾರಣದಿಂದಾಗಿ ಈ ಚಿತ್ರದಲ್ಲಿ ಅಭಿನಯಿಸಿದ ಹುಡುಗನ ಪಾತ್ರಧಾರಿ ಓಂ (ಓಂಕಾರೇಶ ಪಾಟೀಲ್, ನನ್ನ ತಂಗಿಯ ಮಗ)ಗೆ ಈ ಚಿತ್ರವನ್ನು ನಾವುಗಳು ತೋರಿಸಿಲ್ಲ.

ಎಲ್ಲರೂ ತಮ್ಮ ತಮ್ಮ ಮನೆಯ ಮಕ್ಕಳ ಕುರಿತು, ಅವರ ನಿಷ್ಕಲ್ಮಶ ಮನಸಿನ ಕುರಿತು ಕಾಳಜಿವಹಿಸುವುದು ಅತ್ಯವಶ್ಯಕ. ತಪ್ಪಿಯೂ ಪೋರ್ನ್ ಪೋಸ್ಟರುಗಳು, ವಿಡಿಯೋಗಳು, ವೆಬ್‍ಸೈಟ್‍ಗಳು ಮಕ್ಕಳ ಕಣ್ಣಿಗೆ ಬೀಳದಿರಲಿ.

ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ; ಮಕ್ಕಳು ಕಂಪ್ಯೂಟರ್ ಬಳಸುವುದು ಅನಿವಾರ್ಯವಾದಾಗ ಅವರುಗಳ ಜೊತೆಗೆ ನೀವೂ ಕುಳಿತುಕೊಳ್ಳುವುದು. ಮಕ್ಕಳ ಕೈಯಲ್ಲಿ ಇಂಟರ್‍ನೆಟ್ ಸೌಲಭ್ಯವಿರುವ ಮೊಬೈಲುಗಳನ್ನು ಕೊಡದಿರುವುದು. ಮಕ್ಕಳು ತಮಗೆ ಅಂಟಿಕೊಳ್ಳದಿದ್ದರೆ ಸಾಕು, ಫಟಾಫಟ್ ಕೆಲಸ ಮುಗಿಸಿಬಿಡಬಹುದು ಎಂದುಕೊಂಡೋ ಇಲ್ಲವೇ ಕೈಯಲ್ಲಿ ಮೊಬೈಲ್ ಕೊಟ್ಟರೆ ಸಾಕು ಹಠ ಮಾಡದೆ ಸುಮ್ಮನಿರುತ್ತಾರೆ ಎಂದೋ ಇಲ್ಲವೇ ಮೊಬೈಲ್ ಕೊಡದೆ ಹೋದರೆ ಹಠ ಮಾಡುತ್ತಾರೆ ಎಂದೋ ತುಂಬಾ ಜನ ತಂದೆ ತಾಯಿಗಳು ಅವರುಗಳ ಕೈಯಲ್ಲಿ ಮೊಬೈಲ್ ಕೊಡುವುದು ಈ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ದೃಶ್ಯ. ಅಕಸ್ಮಾತ್ ಮಗು ನಿಮ್ಮ ಮೊಬೈಲಿನಲ್ಲಿರುವ ಅಥವಾ ಕಂಪ್ಯೂಟರ್‍ನ ವೆಬ್‍ಸೈಟ್ಸ್, ಯೂಟ್ಯೂಬ್‍ನಲ್ಲಿರುವ ಪೋರ್ನ್ ವಿಡಿಯೊ ನೋಡಿತು ಅಂತಾದರೆ ಆ ಮಗುವಿನಲ್ಲೇಳುವ ಪ್ರಶ್ನೆಗಳು, ಹುಟ್ಟುವ ಕುತೂಹಲ, ತನ್ನ ಮೇಲೇ ಮಾಡಿಕೊಳ್ಳುವ ವಯೋಸಹಜ ಪ್ರಯೋಗಗಳ ಬಗ್ಗೆ ಯೋಚಿಸಿ. ಅದರಿಂದ ಮಗುವಿನ ಮಾನಸಿಕ ಆರೋಗ್ಯ ಹಾಳಾಗುವುದರ ಬಗ್ಗೆ ಯೋಚಿಸಿ. ಮುಂದೆ ಸಮಾಜಕ್ಕೂ ಮೊದಲು ತನಗೇ ತಾನು ಆ ಮಗು ಮುಳುವಾಗಬಹುದಾದನ್ನು ಊಹಿಸಿ! ಯೋಚಿಸಿದರೇ ಎದೆಯಲ್ಲಿ ನಡುಕ ಹುಟ್ಟುತ್ತದೆ! ಇದೆಲ್ಲದರಿಂದ ಹೊರತಾಗಿ ನಿಮ್ಮ ಮನೆಯ ಮಗು ಸುರಕ್ಷಿತವಾಗಿರಬೇಕೆಂದರೆ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಕರವಾಗಿರಬೇಕೆಂದರೆ ಮೊದಲು ಅಂಥ ಚಿತ್ರಗಳನ್ನು ನೋಡುವವರು ನೋಡುವುದನ್ನು ನಿಲ್ಲಿಸಬೇಕು. ಮತ್ತು ಈಗಾಗಲೇ ಹೇಳಿದಂತೆ ಮಗುವನ್ನು ಅವೆಲ್ಲದರಿಂದ ದೂರವಿಡಬೇಕು.