Thursday, December 27, 2012

ಹೇಳತೇವ ಕೇಳ… « ಅವಧಿ / avadhi

ಹೇಳತೇವ ಕೇಳ… « ಅವಧಿ / avadhi



ಅಂದು ತಡರಾತ್ರಿ, ಫೇಸ್ ಬುಕ್ಕಿನಲ್ಲಿ ಕಿರಿಯ ಗೆಳತಿಯೊಬ್ಬಳು ದೆಹಲಿಯಲ್ಲಿ ನಡೆದ ಸಾಮೂಹಿಕ ಬಲಾತ್ಕಾರದ ಸುದ್ದಿ ಹೇಳಿ ಮನಸ್ಸನ್ನು ಕಲಕಿ ಹಾಕಿದ್ದಳು. ಬೆಳಗ್ಗೆ ಎಲ್ಲಾ ನ್ಯೂಸ್ ಪೇಪರುಗಳಲ್ಲೂ ಅದೇ ’ಸುದ್ದಿ’. ಆದರೆ ಇದು ಕೇವಲ ಸುದ್ದಿಯಾಗಿ ಎರಡು ದಿನಗಳ ಕಾಲ ನ್ಯೂಸ್ ಪೇಪರ್, ಟಿವಿ ಚಾನಲ್ ಗಳಲ್ಲಿ ಚರ್ಚೆಯಾಗಿ, ನೋಡಿ ನೋಡಿ ಮನಸ್ಸು ಜಡ್ಡುಗಟ್ಟಿ, ಚಾನಲ್ ಬದಲಾಯಿಸಿ… ಛೆ ಇದು ಇಷ್ಟೇನಾ? ಇಷ್ಟೇ ಆಗಬಾರದಲ್ಲವಾ…
ಹೀಗೆ ತೊಳಲಾಟದಲ್ಲಿರುವಾಗಲೇ ಫೇಸ್ ಬುಕ್ಕಿನ ಗೆಳತಿ ಜಯಲಕ್ಷ್ಮಿ ಪಾಟೀಲ್ ಏನಾದರೂ ಮಾಡಬೇಕು ಅಂತ ನಿಂತಿದ್ದರು. ಅವರ ಮನಸ್ಸಿನಲ್ಲಿದ್ದಿದ್ದು ಅಪ್ಪಟ ಪ್ರತಿಭಟನೆ.  ಹೀಗೆ ಬಂದದ್ದು ಈ ಸಂಚಿಕೆ.
ಲೇಖನ/ಆಕ್ರೋಶ/ಅನುಭವ/ಅನಿಸಿಕೆ ಬರೆದು ಕಳಿಸಿ ಅಂದಾಗ ನಾವು ಪ್ರತಿಕ್ರಿಯೆಯನ್ನು ನಿರೀಕ್ಷಿದ್ದೆವು ಆದರೆ ಈ ಮಟ್ಟದಲ್ಲಲ್ಲ.. ಎಷ್ಟು ನೋವಿನ ದನಿಗಳು, ಅತ್ಯಾಚಾರಕ್ಕೆ ಎಷ್ಟೆಲ್ಲಾ ವ್ಯಾಖ್ಯೆಗಳು, ವ್ಯಾಖ್ಯಾನಗಳು… ಓದುತ್ತಾ ಓದುತ್ತಾ ಅನ್ನಿಸಿದ್ದು, ’ಅತ್ಯಾಚಾರ ಕೇವಲ ದೈಹಿಕವಲ್ಲ, ಅತ್ಯಾಚಾರ ಕೇವಲ ಲೈಂಗಿಕ ಅತ್ಯಾಚಾರವೂ ಅಲ್ಲ’, ಇಲ್ಲಿರುವುದು ಹೆಣ್ಣು ಅನುಭವಿಸಿದ ಆ ಎಲ್ಲಾ ನೋವಿನ, ಆಕ್ರೋಶದ, ಅಸಹಾಯಕತೆಯ ದನಿ.
ಇಲ್ಲಿ ಈ ದಿನ ಪ್ರಕಟವಾಗಿರುವುದು ೧೨ ಲೇಖನಗಳು ಮಾತ್ರ. ಅದಕ್ಕೆ ಎರಡು ಕಾರಣಗಳಿವೆ, ಒಂದು ಇದು ಒಂದು ದಿನದ ಸುದ್ದಿಯಾಗಬಾರದು, ಈ ದನಿ ಒಂದು ದಿನದ ಕೂಗಾಗಬಾರದು, ಹಾಗಾಗಿ ಇದೇ ಧ್ವನಿಯ ಲೇಖನಗಳನ್ನು ದಿನಕ್ಕೊಂದರಂತೆ ಪ್ರಕಟಿಸಲಾಗುತ್ತದೆ.
ಎರಡನೆಯ ಕಾರಣ ಇವು ಯಾವನ್ನೂ ಕೇವಲ ಲೇಖನಗಳನ್ನಾಗಿ ನೋಡಿ, ಕೆಲವನ್ನು ಆಯ್ದು ಪ್ರಕಟಿಸುವುದು ನಮ್ಮಿಂದ ಸಾಧ್ಯವೇ ಇರಲಿಲ್ಲ. ಇಲ್ಲಿನ ಎಲ್ಲಾ ಧ್ವನಿಗಳೂ ಎಲ್ಲರ ಮನಸ್ಸನ್ನು ಮುಟ್ಟಬೇಕು. ಈಗ ಇದು ನಿಮ್ಮೆಲ್ಲರ ದನಿ.. ಲೇಖನ ಕಳಿಸಿ, ಬೆಂಬಲ ವ್ಯಕ್ತ ಪಡಿಸಿ, ನಮ್ಮ ಧ್ವನಿಗೆ ಧ್ವನಿ ಸೇರಿಸಿದ ಎಲ್ಲರಿಗೂ ನಮ್ಮ ನಮನ.
ಜಯಲಕ್ಷ್ಮೀ ಪಾಟೀಲ್ ಗೆಳತಿ, ಸಖಿ, ಸೋದರಿ. ಆಕೆಯ ವ್ಯಕ್ತಿತ್ವದಲ್ಲೇ ಒಂದು ಸಂವೇದನೆ ಇದೆ, ಮಿಡಿಯುವ ಗುಣ ಇದೆ, ಆಕೆ ಲೇಖಕಿ, ಕವಿ, ರಂಗಭೂಮಿ ಕಲಾವಿದೆ, ಒಂದು ತಂಡ ಕಟ್ಟಿಕೊಂಡು ನಾಟಕ ಮಾಡುತ್ತಾರೆ, ಸದಾ ಜೀವನ್ಮುಖಿ. ಆದರೆ ಆಕೆಯ ವಿಶೇಷತೆ ಇರುವುದು ಆಕೆಯ ಗ್ರಹಿಕೆಯಲ್ಲಿ, ಅದನ್ನು ಮೆಲು ಮಾತಿನಲ್ಲೇ ಮಂಡಿಸಿ ಅದಕ್ಕೊಂದು ತಾರ್ಕಿಕ ನೆಲೆ ಒದಗಿಸಿಕೊಡುವಲ್ಲಿ. ಜಯಲಕ್ಷ್ಮಿ ಪಾಟೀಲ್ ಗೆ ‘ಅವಧಿ’ಯ ಪರವಾಗಿ ಕೃತಜ್ಞತೆಗಳು.
ಎನ್ ಸಂಧ್ಯಾರಾಣಿ
ಸಂಯೋಜಕಿ, ಅವಧಿ

ಅತಿಥಿ ಸಂಪಾದಕರ

ಸಂಪಾದಕೀಯ

-ಜಯಲಕ್ಷ್ಮೀ ಪಾಟೀಲ್

ನಾವೆಲ್ಲರೂ ಈಗಾಗಲೇ ಬಣ್ಣ ಬಣ್ಣದ ಕನ್ನಡಕಗಳನ್ನು ಕೊಂಡಾಗಿದೆ. ದೌರ್ಜನ್ಯ, ದುಷ್ಟತನ, ನೋವುಗಳನ್ನಂತೂ ನಾವು ಈ ಬಣ್ಣಬಣ್ಣದ ಕನ್ನಡಕಗಳನ್ನು ಹಾಕಿಕೊಂಡು ನೋಡಿದಾಗಲೇ ನಮಗೆ ಸಮಾಧಾನ. ಆಯಾ ಸಮಯಕ್ಕೆ ತಕ್ಕಂಥ ರಾಜಕೀಯ ಕನ್ನಡಕ, ಜಾತೀಯತೆಯ ಕನ್ನಡಕ,
ಪ್ರಾಂತೀಯ ಕನ್ನಡಕ, ಭಾಷಾ ಕನ್ನಡಕ, ಹೆಣ್ಣು ಕನ್ನಡಕ, ಗಂಡು ಕನ್ನಡಕಗಳಿಲ್ಲದೆ ನಮಗೆ ಒಂದು ವಿಷಯವನ್ನು ಕೇವಲ ವಿಷಯವನ್ನಾಗಿಯಷ್ಟೇ ನೋಡಲು, ಅದಕ್ಕೆ ಸ್ಪಂದಿಸಲು ಸಾಧ್ಯವೇ ಇಲ್ಲ! ಈ ಕನ್ನಡಕಗಳಿಂದಾಗಿ ವಿಷಯ ಮಸುಕಾಗಿ ಉಳಿದೆಲ್ಲವೂ ಢಾಳಾಗಿ ಕಾಣಲು ಆರಂಭಿಸುತ್ತದೆ. ಹಾಗಾಗಬಾರದಲ್ಲವೇ?
ಮತ್ತೊಮ್ಮೆ ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಬರ್ಬರ ಘಟನೆ ದೇಶದ ಪ್ರತಿಯೊಬ್ಬ `ಮನುಷ್ಯ’ನನ್ನು ಅಲುಗಾಡಿಸಿಬಿಟ್ಟಿದೆ. ಹೆಣ್ಣುಮಕ್ಕಳೆಲ್ಲ ತಾವು ನಿತ್ಯ ಒಂದು ಆತಂಕ ಹೊತ್ತೇ ಬದುಕುವುದನ್ನು, ಮದ್ದಿಲ್ಲದ ಖಾಯಿಲೆಯೊಂದನ್ನು ವಿಧಿಯಿಲ್ಲದೆ ಅನುಭವಿಸಬೇಕಾದವರಂತೆ ರೂಢಿಸಿಕೊಂಡು, ಮೂರೂ ಹೊತ್ತೂ ಅದನ್ನು ಹೆಗಲೇರಿಸಿಕೊಂಡರೆ ಸಹಜ ಬದುಕು ಬದುಕಲು ಆಗದು ಎಂಬ ಸುಪ್ತಪ್ರಜ್ಞೆಯ ಆಜ್ಞೆಯರಿತು ನಗುನಗುತ್ತ ತಮ್ಮ ದಿನನಿತ್ಯದ ಬದುಕಿನ ಗಾಡಿ ಸಾಗಿಸುತ್ತಿರುವಾಗ, ಆಗಾಗ ಮರುಕಳಿಸುವ ಇಂಥ ಹೀನಕೃತ್ಯಗಳು, ನಮ್ಮ ಮೌನದ ಅಕಾರಣ ಸಕಾರಣಗಳನ್ನು ಏಕಕಾಲಕ್ಕೆ ಹಂಗಿಸುತ್ತವೆ! ರೊಚ್ಚಿಗೆಬ್ಬಿಸುತ್ತವೆ! ರೊಚ್ಚುಗೆದ್ದ ಜನ ಇಂಥವುಗಳ ವಿರುದ್ಧ ದನಿ ಎತ್ತಿದರೋ ಇಲ್ಲವೋ, ಮುಂದೆ ಇಂಥವು ಮರುಕಳಿಸದಂತೆ ಏನ್ನನ್ನಾದರೂ ಕ್ರಮ ಕೈಗೊಳ್ಳಲು ಸರಕಾರವನ್ನು, ಕಾನೂನನ್ನು ಕೋರಿ ನಾಲ್ಕು ಹೆಜ್ಜೆ ಮುಂದಿಟ್ಟರೋ ಇಲ್ಲವೋ ಹಿಂದೆಯೇ ಅಂಥ ದನಿಗಳನ್ನು ಮಟ್ಟ ಹಾಕಲು ಸಕಲ ವ್ಯವಸ್ಥೆಯೂ ಆಗಿಬಿಡುತ್ತದೆ.
ಹೋರಾಟಕ್ಕಿಳಿಯುವವರಿಗಿಂತ ಅದನ್ನು ತಡೆಯುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಾಲ್ಕಾರು ದಿನಗಳಲ್ಲಿ ಹೆಚ್ಚೆಂದರೆ ತಿಂಗಳೊಪ್ಪತ್ತಿನಲ್ಲಿ ಹೋರಾಟದ ಸದ್ದಡಗಿಬಿಡುತ್ತದೆ. ಮತ್ತೆ ಯಥಾಸ್ಥಿತಿ… ನಮ್ಮ ದೇಶ ಬದಲಾಗದು ಎಂಬ ಸ್ಲೋಗನ್ನಿನೊಡನೆ ಮತ್ತೆ ನಾವಾಗಿಯೇ ಉಳಿಸಿಕೊಂಡ ಕೊಚ್ಚೆ ಬದುಕಲ್ಲಿ ಗಂಧದ ಪರಿಮಳದ ಹುಡುಕಾಟ, ಚೆಂದದ ಬದುಕಿಗಾಗಿ ವೃಥಾ ತಿಣುಕಾಟ.
ಹಳ್ಳಿ ದಿಲ್ಲಿ, ಬಡವ ಬಲ್ಲಿದ ಎನ್ನುವ ಭೇದವಿಲ್ಲದಂತೆ ಎಲ್ಲೆಡೆಯೂ ಇಂಥ ಅನಾಚಾರಗಳು ಅನಾದಿ ಕಾಲದಿಂದಲೂ ನಡೆಯುತ್ತಲೇ ಇವೆ. ಈ ಖಾಯಿಲೆಗೆ ಮದ್ದು ಹುಡುಕುವ ಬದಲು, ಖಾಯಿಲೆಯನ್ನು ಹೊಡೆದೋಡಿಸುವ ಬದಲು ನಾವು ಮಾಡುತ್ತಾ ಬಂದಿರುವುದೇನೆಂದರೆ ಹೆಣ್ಣು ತಾನು ಸುರಕ್ಷಿತಳಾಗಿರಬೇಕೆಂದರೆ ಎಷ್ಟೆಲ್ಲ ಸಾಧ್ಯವೋ ಅಷ್ಟೂ ಬೇಡಿಗಳನ್ನು ತೊಟ್ಟು ಬದುಕುವುದನ್ನು ಹೇಳಿಕೊಡುವುದು ಮತ್ತು ರೂಢಿಸುವುದು. ಅಂಥ ಸುರಕ್ಷಿತ ಬೇಡಿಗಳ ನಡುವೆಯೂ ಅತ್ಯಾಚಾರಗಳಾಗುತ್ತವೆ, ಲೈಂಗಿಕ ಕಿರುಕುಳ ಅನವರತ ಮುಂದುವರೆಯುತ್ತದೆ.
ಯಾಕೆ ಹೀಗಾಗುತ್ತದೆ? ಯಾಕೆ ಗಂಡಸರೇ ಹೆಚ್ಚಾತೀ ಹೆಚ್ಚಿನ ಪ್ರಮಾಣದಲ್ಲಿ ಇಂಥ ವಿಕೃತಿಗಿಳಿಯುತ್ತಾರೆ? ಅವರ ದೇಹದಲ್ಲಿ ಅಂಥ ಯಾವ ಹಾರ್ಮೋನ್ ಈ ಪರಿಯ ವಿಕೃತಿಗಳನ್ನು ಪ್ರಚೋದಿಸುತ್ತಿರುತ್ತದೆ?! ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ? ನನಗ್ಯಾಕೋ ಇದು ಬರೀ ಮಾನಸಿಕ ಸಮಸ್ಯೆ, ಅವರು ಬೆಳೆದ ವಾತಾವರಣದ ಹಿನ್ನೆಲೆ, ಅನುಭವಿಸಿದ ಅವಮಾನಗಳ ಪ್ರತಿಕಾರ ಮುಂತಾಗಿ ಅನಿಸುವುದಿಲ್ಲ. ಬದಲಿಗೆ ಹಾರ್ಮೋನ್ ಗಳ ಏರುಪೇರಿನ ಜೊತೆಗೆ ಮನಸಿನ ವಿಕಾರವೂ ಸೇರಿ ಅವರುಗಳು ಈ ಪರಿಯ ಹೇಸಿಗಳಾಗುತ್ತಾರೆ ಅನ್ನಿಸುತ್ತದೆ. ಇಂಥ ವಿಕೃತರ ದೆಸೆಯಿಂದಾಗಿ ಸಭ್ಯ ಗಂಡಸರನ್ನೂ ಒಂದು ಅನುಮಾನದ ಕಿರುಗಣ್ಣಿನಿಂದ ಹೆಣ್ಣುಮಕ್ಕಳು ನೋಡುವಂತಾಗಿರುವುದು ವಿಪಯರ್ಾಸವಾದರೂ ತನ್ನ ಸುರಕ್ಷೆಗಾಗಿ ಅದು ಅನಿವಾರ್ಯ ಎಂಬಷ್ಟು ಹೆಣ್ಣು ಅದಕ್ಕೆ ಒಗ್ಗಿ ಹೋಗಿದ್ದಾಳೆ!!
ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಪ್ರಕರಣ ಕಂಡು, ಗಂಡು ಹೆಣ್ಣೆನ್ನದೇ ತಲ್ಲಣಿಸಿದವರ ಪ್ರತಿಕ್ರಿಯೆಗಳು ಇಂದಿನ `ಅವಧಿ’ಯ ಈ ವಿಶೇಷ ಸಂಚಿಕೆಯಲ್ಲಿವೆ. ಈ ಲೇಖನಗಳನ್ನು ಓದಿದಾಗ ಭಾರತದಲ್ಲಿ ಒಂದಲ್ಲ ಒಂದು ರೀತಿಯಿಂದ ಲೈಂಗಿಕ ಕಿರುಕುಳ ಅನುಭವಿಸದ ಹೆಣ್ಣುಮಕ್ಕಳೇ ಇಲ್ಲವೇನೋ ಎನ್ನುವ ಅನಿಸಿಕೆ ಕೇವಲ ಅನಿಸಿಕೆಯಾಗುಳಿಯುವುದಿಲ್ಲ. ತಮಗಾದ ಕಿರುಕುಳವನ್ನು ಮುಕ್ತವಾಗಿ ಹೇಳಿಕೊಂಡರೆ ಎಲ್ಲಿ ಜಗತ್ತು `ನಿನ್ನದೇ ಏನೋ ತಪ್ಪಿರಬೇಕು, ಅದಕ್ಕೇ ನಿನ್ನ ಜೊತೆ ಹೀಗಾಗಿದೆ ಎಂದುಬಿಡುತ್ತದೋ ಎಂಬ ಭಯದಿಂದ ಇಂಥ ಅಸಹ್ಯಗಳನ್ನು ಹೇಳಿಕೊಳ್ಳಲೂ ಹೆದರುವ ಮನಸ್ಥಿತಿಯಿಂದ ಹೆಣ್ಣುಮಕ್ಕಳು ನಿಧಾನಕ್ಕೆ ಬಿಡುಗಡೆ ಹೊಂದುತ್ತಿದ್ದಾರೆ ಎನ್ನುವುದೊಂದು ಸಮಾಧಾನಕರ ವಿಷಯವಾದರೂ ಒಂದು ಅಳುಕಿನೊಂದಿಗೇ ತಮ್ಮ ಅನುಭವಗಳನ್ನು ನಮ್ಮೆದುರು ಹೇಳಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯವನ್ನೂ ಅಲ್ಲಗಳೆಯಲಾಗದು.
ಇಲ್ಲ ಅಳುಕಬೇಕಿಲ್ಲ. ಗಾಯದ ಆಳ ಗೊತ್ತಾಗದೆ ಅದಕ್ಕೆ ಚಿಕಿತ್ಸೆ ದೊರಕುವುದಾದರೂ ಹೇಗೆ? ನೋವು, ನೋವಿನಿಂದಾಗಿ ಹುಟ್ಟಿದ ಆಕ್ರೋಶ ಸತ್ವಯುತವಾಗಿ ಇಂಥ ವಿಕೃತಿಗಳನ್ನು ಸದೆಬಡೆಯುವಲ್ಲಿ ಸಫಲವಾಗಲಿ, ಸಫಲವಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗದ ಹೊರತು ಕೇಡಿಗಳ ಮನದಲ್ಲಿ ಭಯ ಹುಟ್ಟದು. ಭಯದಿಂದಲಾದರೂ ಅಪರಾಧಗಳು ಕಡಿಮೆಯಾಗಿ ಮುಂದೊಮ್ಮೆ ಇಲ್ಲವಾಗಬಹುದು. ಇಂಥ ಅಪರಾಧಗಳಿಗೆ ಕಾನೂನಿನಲ್ಲಿ ಶಿಕ್ಷೆ ಇನ್ನೂ ಬಲವಾಗಬೇಕು. ಜನ ಎಚ್ಚೆತ್ತುಕೊಂಡು ಎಲ್ಲೇ ಆಗಲಿ, ಯಾರ ಜೊತೆಯೇ ಆಗಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ಕಂಡು ಬಂದರೂ ಒಟ್ಟಾಗಿ ಅಂಥದ್ದನ್ನು ತಡೆಯಬೇಕು. ಮೊದಲಿಗೆ ಕಿರುಕುಳ ಅನುಭವಿಸುವವರು ತಮ್ಮ ಜೊತೆ ಅನುಚಿತವಾದುದು ನಡೆಯುತ್ತಿರುವಾಗ ಪ್ರತಿಭಟಿಸಬೇಕು, ಸುತ್ತಲಿದ್ದವರ ಗಮನ ಸೆಳೆಯಬೇಕು, ಸಹಾಯ ಕೋರಬೇಕು. ಹಸಿದ ಮಗು ಅಳದೆ ತಾಯಿಯೂ ಹಾಲು ಕೊಡಳಂತೆ. ಅಂಥದ್ದರಲ್ಲಿ ನೊಂದವರೇ ಹಿಂದೆ ಸರಿದು ಕುಳಿತರೆ ಸಮಸ್ಯೆ ಬಗೆ ಹರಿದೀತು ಹೇಗೆ…?