Wednesday, February 27, 2013

ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ - ಸುಗುಣ ಮಹೇಶ್


ಕುವೈತಿನಲ್ಲಿರುವ ತಂಗಿಯಂತಹ ಗೆಳತಿ, ಸುಗುಣ ಮಹೇಶ್ ನನ್ನ ಕವನ ಸಂಕಲನಕ್ಕೆ ಪ್ರತಿಕ್ತಿಯಿಸಿದ್ದು ಹೀಗೆ.

ಅಕ್ಕ, 
ನಿಮ್ಮ ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ ಈ ಸಾಲುಗಳು ನನಗೇ ಏಕೆ ಹತ್ತಿರ ಎಂದೆನಿಸುವಷ್ಟು ಆಪ್ತವಾದವು.

ಬತ್ತಲಾಗುವುದೆಂದರೆ... ಪ್ರೀತಿಯನ್ನು ಬತ್ತಿ ಹೋಗಿಸುವ ಪರಿ ವಾಹ್.. ಬತ್ತಿದ ಒರತೆಯ ಒಡಲೀಗ ನಿಮ್ಮ ಶವ ಹೂಳುವ ಜಾಗ.. ಅಬ್ಬಾ ಎಂಥಾ ಕಲ್ಪನೆ...

ರೂಪಕ... ಇಲ್ಲಿನ ಎರಡನೇ ರೂಪಕ ಮಲ್ಲಿಗೆಯ ಬಗ್ಗೆ ... ದಿನ ಖರ್ಚಾಗುವುದೆಂದು ಪ್ಯಾಸ್ಟಿಕ್ ಮಲ್ಲಿಗೆ ಕೊಂಡವಳಿಗೆಲ್ಲಿ ತಿಳಿಯುತ್ತೆ ಘಮಿಸುವ ಮಲ್ಲಿಗೆಯ ಪರಿಮಳ ಅಲ್ಲವೇ..? ತುಂಬಾ ಇಷ್ಟವಾಯಿತು..
 
ಹಕ್ಕಿಯ... ಬಗೆಗಿನ ಆಲೋಚನೆ, ಅಲ್ಲಿ ಇಲ್ಲಿ ಕುಳಿತು ದಿನಕಳೆವ ಹಕ್ಕಿಗಳಿಗೆ ಆಕಾಶದತ್ತಲೇ ಚಲನೆ ಭೂಮಿಯತ್ತಲೇ ಗಮನ ಹೊಟ್ಟೆ ತುಂಬಿಸುಕೊಳ್ಳುವುದಕ್ಕೆ. ನಿಜ ಎಷ್ಟು ಸೂಕ್ಷ್ಮವಿರಬೇಕು ಅವುಗಳ ಕಣ್ಣು ಬಾನೆತ್ತರಲ್ಲಿ ಹಾರಾಡಿ ಭೂಮಿಯತ್ತ ಗಮನ ಹರಿಸುವುದು ಅಷ್ಟು ಸಲೀಸೇ... ಸಕ್ಕತ್ ಇಷ್ಟ ಆಯ್ತು ಇಲ್ಲಿ ಮೂಕಪಕ್ಷಿಯ ಜಾಣ್ಮೆ ಚುರುಕುತನ ಹೊಗಳಿದ್ದೀರಿ ಜೊತೆಗೆ ಅವುಗಳಿಗೆ ಸ್ವತಂತ್ರವಾಗಿ ಕೂರಲು ಬಿಡದ ಜನರ ಗಮನ ಸೆಳೆದಿದ್ದೀರಿ.

ಆಸೆಗಳು... ಬೇರುಗಳಾದರೆ ಆಸೆಗಳಿಗೂ ಸುಭದ್ರತೆ ಇರುತ್ತದೆಯಲ್ಲವೇ.. ಇನ್ನೊದೆಡೆ ಎಲೆಗಳಿಗೆ ಬೇರಿನಿಂದಲೇ ಆಹಾರ ಅದರಿಂದಲೇ ಹಸಿರಾಗಿರಲು ಸಾಧ್ಯ ಬೇರು ಬಿಟ್ಟು ನೆಡೆದರೆ ನೀವು ಹೇಳಿದಂತೆ ತಿಪ್ಪಿಗುಂಡೇ ಆಧಾರ... ವಿಭಿನ್ನ ಶೈಲಿಯ ಹೋಲಿಕೆ.. ಕವನಕ್ಕೆ ತಕ್ಕಂಟೆ ಚಿತ್ರ ಸೂಪರ್

ತಾಯಿ ಮತ್ತು ಮಗಳು... ಅಬ್ಬಾ ಎಂಥಾ ಪ್ರಶ್ನೆ .. ಭೂಮಿ ತಾಯಿ ನಮ್ಮೆಲ್ಲಾ ತಪ್ಪುಗಳನ್ನು ಎಷ್ಟು ದಿನ ಸಹಿಸಾಳು ಸಹಿಸಿ ಸಹಿಸಿ ಕೊನೆಗೊಂದು ದಿನ ಭೂಕಂಪವೋ ಯಾವುದೋ ಕೋಪಕ್ಕೆ ಸಿಲುಕುವೆವು.. ಅವಳಲ್ಲಿದ್ದ ಗುಣ ಮಗಳಾದ ಸೀತೆಗೆ ಏಕೆ ಬರಲಿಲ್ಲ.. ಅದೇ ಅರ್ಥವಾಗದ್ದು.. ಜನ ಸೀತೆಯಂತಿರಬೇಕು ಹೆಣ್ಣು, ಎಂದು ಹೋಲಿಸಿದರೆ ಸಿಟ್ಟು ಬರುತ್ತೆ... ಮಾಡಿದ್ದನ್ನೆಲ್ಲ ಒಪ್ಪಿಕೊಂಡು ಕೂರಲಾಗುತ್ತದೆಯೇ.. ಅಮೋಘ ಪ್ರಶ್ನೆ ಅಕ್ಕಾ... ನಮ್ಮ ಮನಸಲ್ಲೂ ಇಂತಹ ಪ್ರಶ್ನೇ ಹುಟ್ಟಿಸುವಂತಹಾ ಕವನ.

ಅರಿಕೆ... ಮುಖವಾಡಗಳಿಗೆ ಹೆಸರು ಕೊಟ್ಟರೂ ನಿಲ್ಲುತ್ತದೆ ಎಂಬ ಖಾತ್ರಿ ಇಲ್ಲ... ಹೆಸರಿಲ್ಲದೆಯೇ ಸಂಬಂಧಗಳು ಭದ್ರವಾಗಿದರೆ ಅವು ಚಿರಕಾಲ ಉಳಿಯುತ್ತವೆ.. ಪುಟ್ಟ ಸಾಲು ಒಳ್ಳೆಯ ಅರ್ಥವನ್ನು ನೀಡುತ್ತದೆ.

 ಕಳಕೊಂಡವಳು - ಯಾರು ಯಾರೋ ಏನೇನೋ ಅನ್ನುತ್ತಾರಂತ ನಮ್ಮ ಆಸೆಗಳನ್ನ ಏಷ್ಟೋ ಕಳೆದುಕೊಂಡಿದ್ದೀವಿ ಅರಿವಾಗುವಷ್ಟರಲ್ಲಿ ಇರುಳುಗಣ್ಣೇ ಸತ್ಯ... ಎಂತಾ ಮಾತು ಅಕ್ಕಾ ಹ್ಯಾಟ್ಸ್ ಆಫ್ ಟು ಯು.. 
 ವಾಸ್ತವದೆಡೆಗೆ-ಸಾಗಲೇ ಬೇಕು ಆದರೆ ವಾಸ್ತವವನ್ನು ಅರಿಯುವುದೇ ಕಷ್ಟ ಈಗಿನ ಕಾಲದಲ್ಲಿ.. ಪುಟಕಿಟ್ಟ ಚಿನ್ನವಾಗುವುದು ಹೇಗೆ ... ಹೆಣ್ಣು ಮತ್ತೊಂದು ಮನೆ ಹೊಕ್ಕರೆ ಅಲ್ಲಿನ ಕಟ್ಟುಪಾಡುಗಳಿಗೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕು ಇನ್ನು ಸೋಗಿನ ಬದುಕು ಎಷ್ಟೋ ಜನರಲ್ಲಿ ರೂಢಿಸಿಕೊಂಡು ಬಂದುಬಿಟ್ಟಿದೆ.
ಮಾತು-ಮೌನ ಇದನ್ನ ಹಿಡಿದೇ ನಾನು ಎಷ್ಟೋ ಆವಿಶ್ಕಾರ ಮಾಡೋಕ್ಕೆ ಹೊರಟಿದ್ದೆ... ಮಾತು ಇಲ್ಲದೇ ಮೌನವಾಗಿ ಜೀವಿಸಲು ಸಾಧ್ಯನಾ ಅಂತಾ... ನಿಮ್ಮ ಮಾತು-ಮೌನ ಕವನ ಓದಿದ ಮೇಲೆ ಮಾತು-ಮೌನ ಎರಡು ಇರಬೇಕು ಕವಿಯಾಗಿ ಮಾತು ಮೈಪುಳಕವಾಗಿ ಮೌನವಿರಬೇಕು ಎಂದೆನಿಸುತ್ತೆ.

ಆದದ್ದೆಲ್ಲಾ - ತದ್ಭವ-ತತ್ಸಮಗಳು ಬೆಚ್ಚಗಿನ ಗೂಡಾಗಿ ಕನಸುಗಳನ್ನೇಕೆ ಗರ್ಭಪಾತ ಮಾಡಿಸುವುದು ಸಲೀಸಾಗಿ ಪ್ರಸವ ಮಾಡಿಸಬಹುದಲ್ಲಾ..:) ಖಂಡಿತಾ ಗರ್ಭಪಾತವಾದಾಗ ಪಿಂಡಗಳನ್ನು ನೋಡಿ ನಿಟ್ಟುಸಿರೊಂದೇ ಸಮಾಧಾನ...

ನನ್ನೊಳು ನೀ- ಅಕ್ಕ ಮಹಾದೇವಿ ಪ್ರೇಮಿಸುವ ಪರಿ ನಮ್ಮಲ್ಲಿ ಹೇಗೆ ಹುಟ್ಟಲು ಸಾಧ್ಯ ಅವಳೊಬ್ಬಳು ಪ್ರೇಮ ತಪಸ್ವಿ... ಆಹಾ..!! ನಿಮ್ಮನ್ನು ನೀವು ಅವಳೊಂದಿಗಿನ ಪ್ರೇಮಕ್ಕೂ ನಿಮ್ಮ ಪ್ರೇಮಕ್ಕೂ ತಾಳೆ ಚೆನ್ನಾಗಿದೆ... ಪ್ರೀತಿ ದೊರಕಿದ ಪರಿ ಚೆಂದ..

ಅವ್ರು ಬಿಟ್ ಇವ್ಯ್ರಾರು- ಎಲ್ಲ ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ನೆನಪಾಯಿತು ಈ ಕವಿತೆ ಓದಿ. ನಾವುಗಳು ಲೌಕಿಕ ಬದುಕಿನಲ್ಲಿ ಆಸೆ-ಆಮಿಷಗಳಲ್ಲಿ ಬದುಕುತ್ತಿದ್ದೇವೆ ಇನ್ನೆಲ್ಲಿ ಆಗುವೆವು ಬುದ್ಧ ಬಸವರಂತೆ.. ತುಂಬ ಚೆನ್ನಾಗಿದೆ ನಿಮ್ಮ ಆಲೋಚನೆ.

ಕಡಲು - ಆಹ್..!! ಸಕ್ಕತ್ ಸಮಜಾಯಿಸಿನೇ ಕೊಟ್ಟೀರಿ ಸಮುದ್ರ ಹೆಣ್ಣುಗಳ ಸಮಾವೇಶವೇ ಸರಿ..!!

ಅನುಭವ್ಸು- ಊರಲ್ಲಿ ಹೋಗೋ ಮಾರಿನ ಮನೆಗೆ ತಂದ್ರಂತೆ ಹಹ ಈ ಗಾದೆ ನೆನಪಾಯಿತು ಈ ಸಾಲುಗಳನ್ನ ಓದಿದ ಮೇಲೆ.

ತಾವು- ಅಬ್ಬಾ.. ಎಷ್ಟು ಜನ ಯಾವ ಯಾವ ರೀತಿ ಯಾರನ್ನು ತಿನ್ನುತ್ತಾರೆ ನೋಡಿ... ಸಿಗರೇಟು, ಹೆಂಡ, ರಾಜ್ಕಾರಣಿ ಎಲ್ಲರೂ ಒಂದಲ್ಲ ಒಂದು ರೀತಿ ಕಬಳಿಸುವವರೇ... 

ಎಲ್ಲವೂ ವಿಭಿನ್ನತೆಯನ್ನು ಮೆರೆದಿದೆ ಅಕ್ಕಾ... ನನಗೆ ತುಂಬಾ ತುಂಬಾ ಇಷ್ಟವಾದ ಕವನಗಳ ಬಗ್ಗೆ ನನಗೆ ಅನ್ನಿಸಿದ್ದನ್ನು ಬರೆದೆ. ನೀವು ಕಳುಹಿಸಿದಾಗಿಂದ ಸುಮಾರು ೩,೪ ಬಾರಿ ಓದಿದ್ದೇನೆ ಎಲ್ಲಾ ಕವನಗಳು ನನಗೆ ಇಷ್ಟವಾದವು.. ಆದರೆ ಒಂದು ಕೋರಿಕೆ ದಯವಿಟ್ಟು ಮರು ಮುದ್ರಣ ಮಾಡಿಸಿ ಹಾಗೆ ಮತ್ತಷ್ಟು  ಕವನಗಳಿಗೆ ಹೊಸ ಪುಸ್ತಕವನ್ನು ಹೊರತನ್ನಿ... 

ನನಗಂತು ಕವನಗಳನ್ನು ಓದಿ ಬಹಳಷ್ಟು ಖುಷಿಯಾಗಿದೆ... ಎಷ್ಟು ಫ್ರೌಢತೆ ಇದೆ ಸಾಲುಗಳಲ್ಲಿ ಅರ್ಥಗರ್ಭಿತವಾಗಿವೆ.ಶುಭವಾಗಲಿ.....
                                                                         - ಪ್ರೀತಿಯಿಂದ,
                                                                               ಸುಗುಣ (22nd nov 2012)

ಸಂಭ್ರಮ

24th feb 2013ರಂದು ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ ಕವನ.



Monday, February 25, 2013

ಹೋರಾಟವೆಂದರೆ...


(ಈ ತಿಂಗಳ ‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು).

ನನ್ನ ಮದುವೆಯಾದ ಹೊಸತು. ಅಂದರೆ ಈಗ ಇಪ್ಪತ್ತು ವರ್ಷದ ಹಿಂದಿನ ಮಾತು. ಪೂನಾದಲ್ಲಿದ್ವಿ. ಮನೆ ಎದುರಿಗೇ ಅಂದರೆ ಕೇವಲ ಅರ್ಧ ಕಿಲೋಮೀಟರಿಗೂ ಕಡಿಮೆ ಅಂತರದಲ್ಲಿ ಇವರು ಸಿವಿಲ್ ಇಂಜಿನೀಯರ್ ಆಗಿ ಕೆಲಸ ಮಾಡುವ ಜಾಗ. ಅವತ್ತೊಂದಿನ ನನ್ನ ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಎಂಟು ಗಂಟೆ. ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಊಟ ಮುಗಿಸಿ ಕೈತೊಳಿಯುತ್ತಿದ್ದರಷ್ಟೇ, ಆಗ ಸಮಯ ೯.೩೦ರ ಆಸುಪಾಸು, ಇವರ ಸೈಟಿನಿಂದ ಒಂದಿಷ್ಟು ಜನ ಓಡುತ್ತಾ ಬಂದು ಮನೆ ಬಾಗಿಲು ತಟ್ಟಿದರು. ಹೊರ ಹೋದ ಇವರು ಒಳಗೆ ಬಂದು ನಿಮಿಷಾರ್ಧದಲ್ಲಿ ಶರ್ಟ್ ಹಾಕ್ಕೊಂಡು ಲುಂಗಿ ಮೇಲೆಯೇ ಹೊರಟು ನಿಂತರು. ಬಾಗ್ಲು ಹಾಕ್ಕೊ, ಈಗ ಬಂದ್ಬಿಡ್ತೀನಿ ಎಂದಷ್ಟೇ ಹೇಳಿ ಹೋದರು. ವಿಷಯ ಏನು ಅಂತ ಗೊತ್ತಾಗದೆ ನನಗೆ ದಿಗಿಲಾಯ್ತು. ರಾತ್ರಿ ಬೇರೆ... ಹನ್ನೊಂದು ಮುಕ್ಕಾಲಿಗೆ ಮನೆಗೆ ಮರಳಿದ ನನ್ನ ಪತಿಯ ಮುಖ ಅಗತ್ಯಕ್ಕಿಂತ ಹೆಚ್ಚು ಗಡುಸಾಗಿತ್ತು. ಏನಾಯ್ತು? ಎಂದು ಕೇಳಿದೆ. ಏನಿಲ್ಲ ಎಂದು ವಿಷಯ ಮರೆ ಮಾಚಲು ನೋಡಿದರು. ನನಗೋ ಇವರ ವಿಷಯಕ್ಕೆ ಸಂಬಂಧಪಟ್ಟಂತೆ ಏನಾದರೂ ನಡೆದಿದೆಯಾ ಸೈಟಲ್ಲಿ ಅನ್ನುವ ಆತಂಕ. ಏನಾಯ್ತು ಎಂದು ಹೇಳಲು ಒತ್ತಾಯ ಮಾಡಿದೆ.  ಆಗ ಹೇಳಿದರು.
   ಸೈಟಿನಲ್ಲಿ ಗಾರೆ ಕೆಲಸ ಮಾಡುವ ಗಂಡಸೊಬ್ಬ ಕುಡಿದು ಬಂದು, ಅವರುಗಳು ಅಲ್ಲೇ ಸೈಟಲ್ಲೇ ವಾಸಿಸಲು ಹಾಕಿಕೊಂಡ ಝೋಪಡಿಗಳೆದುರು ತನ್ನ ಮಗಳ ಜೊತೆ ಆಟವಾಡುತ್ತಿದ್ದ ಪಕ್ಕದ ಝೋಪಡಿಯ ಮಗುವನ್ನು, ತನ್ನ  ಝೋಪಡಿಗೆ ಹೊತ್ತುಕೊಂಡು ಹೋಗಿ ಆ ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದಾನೆ. ನಡೆಯಲಾಗದೆ ತಡವರಿಸುತ್ತಾ, ಅಳುತ್ತಾ ಅವನ ಝೋಪಡಿಯಿಂದ ಹೊರಬಂದ ಮಗುವಿನ ಎರಡೂ ಕಾಲಗುಂಟ ರಕ್ತ ಸೋರುತ್ತಿದೆ!! ಅದನ್ನು ನೋಡಿದ ಅಲ್ಲಿಯ ಉಳಿದೆಲ್ಲ ಕಾರ್ಮಿಕರೂ ಒಟ್ಟಾಗಿ ಅವನನ್ನು ಹಿಡಿದು ನಾಲ್ಕು ಬಿಗಿದು, ಒಂದೆಡೆ ಕೂರಿಸಿ ಇವರನ್ನು ಕರೆಯಲು ಬಂದಿದ್ದರು. ಇದನ್ನು ಕೇಳಿ ತಣ್ಣಗಾದೆ ನಾನು! ಊಹಿಸಲೂ ಆಗದ ವಿಷಯ ನಾನಿರುವ ಜಾಗದಿಂದ ಸ್ವಲ್ಪ ದೂರದಲ್ಲೇ ನಡೆದಿತ್ತು! ಅವಡುಗಚ್ಚಿ ಕೇಳಿದೆ ಇವರನ್ನು, ನೀವು ಹೋಗಿ ಏನು ಮಾಡಿದ್ರಿ? ಪೋಲೀಸ್ ಕಂಪ್ಲೇಂಟ್ ಕೊಟ್ಟ್ರಿ ತಾನೆ?
ಇವ್ರು, ಆ ಮಗು ಅವಸ್ಥೆ ನನ್ನಿಂದ ನೋಡೋಕಾಗ್ಲಿಲ್ಲ, ಪಾಪ ಎಳೇ ಕಂದ... ತಾಯಿ ಮಗು ಇಬ್ರೂ ಒಂದೇ ಸಮ ಅಳ್ತಾ ಇದ್ರು, ಆ ಮಗು ಅಪ್ಪಾನೂ ಸಹ.  ತಲೆಕೆಟ್ಟು, ಆ ರಾಕ್ಷಸನನ್ನ ಕಂಬಕ್ಕೆ ಕಟ್ಟಿಸಿ, ಅಲ್ಲಿದ್ದ ಕಬ್ಬಿಣದ ಸಳಿಯಿಂದ ಸರೀ ಬಾರಿಸಿದೆ. ಬಡ್ಡಿಮಗಾ ಹೇಳ್ತಾನೆ, ಕುಡಿದಿದ್ರಿಂದ ಅವನಿಗೆ ತಾನೇನ್ ಮಾಡ್ತಿದೀನಿ ಅಂತ ಗೊತ್ತಾಗ್ಲಿಲ್ವಂತೆ, ಇನ್ನೊಮ್ಮೆ ಹಾಗೆ ಮಾಡೊಲ್ವಂತೆ, ಬಿಟ್‌ಬಿಡ್ಬೇಕಂತೆ!! ತನ್ನ ಮಗೂನೂ ಆ ಮಗು ಜೊತೆಗೆನೇ ಆಡ್ತಿತ್ತಲ್ಲ, ಅದನ್ನ ಮುಟ್ಟಬಾರ್ದು ಅಂತ ಹೇಗ್ ಗೊತ್ತಾಯ್ತವನಿಗೆ!? ಮನುಷ್ಯರಾ ಇವ್ರೆಲ್ಲ?! ಪ್ರಾಣಿಗಿಂತ ಕಡೆ. ಪೋಲೀಸರಿಗೆ ಫೋನ್ ಮಾಡಿ ಕರೆಸಿ, ಹೇಳಿದೆ, ಇವನನ್ನ ಸುಮ್ನೆ ಬಿಡಬೇಡಿ, ಸರೀ ಒದ್ದು ಬುದ್ದಿ ಕಲಿಸಿ ಅಂತ. ಎಳ್ಕೊಂಡು ಹೋದ್ರು. ನಾನು ಅಲ್ಲಿದ್ದ ಜನರ ಜೊತೆ ಮಗೂನ ಡಾಕ್ಟರ್ ಹತ್ರ ಕಳಿಸಿ ಮನೆಗೆ ಬಂದೆ ಅಂದರು.
  ಇದನ್ನ ಓದಿ ನಿಮ್ಮ ರಕ್ತ ಕುದೀತಿದೆಯಾ? ಇಲ್ಲ ಅಲ್ವಾ? ಇದನ್ನೊಂದು ಜಸ್ಟ್ ಸುದ್ದಿ ಅಥವಾ ವಿಷಯದ ಥರ ಓದಿದಿರಿ ಅಲ್ವಾ? ಯಾಕೆ ನಿಮಗೇನೂ ಅನಿಸ್ಲಿಲ್ಲ ಇದನ್ನ ಓದಿ?! ಏನು? ನಾನನ್ಕೊಂಡಿದ್ದು ಸುಳ್ಳು, ನಿಮ್ಮ ರಕ್ತ ಕುದೀತಿದೆ ಅಂದ್ರಾ? ಹಾಗಾದ್ರೆ ಇಂಥ ಎಷ್ಟೋ ಸುದ್ದಿಗಳನ್ನ ಈಗಾಗ್ಲೇ ಕೇಳಿಯೂ ಯಾಕೆ ಯಾರೂ ಯಾವ ಕ್ರಮಾನೂ ಕೈಗೊಳ್ತಿಲ್ಲ? ನನ್ನನ್ನೂ ಸೇರಿಸಿಯೇ ಈ ಮಾತು ಹೇಳ್ತಿದೀನಿ ನಾನು. ನಮ್ಮನೆ ಮಗೂಗೆ (ಅದು ಹೆಣ್ಣು/ಗಂಡು ಯಾವ ಮಗು ಬೇಕಾದ್ರೂ ಆಗಿರಲಿ), ಹೆಣ್ಣುಮಕ್ಕಳಿಗೆ ಅಥವಾ ನಮಗೆ ಇನ್ನೂ ಹೀಗಾಗಿಲ್ಲ, ಆದಾಗ ನೋಡ್ಕೊಂಡ್ರಾಯ್ತು ಅಂತಾನಾ...? ಹಾಗಲ್ವಾ? ಮತ್ತೆ ಹೇಗೆ..? ದಿನನಿತ್ಯ ಇಂಥ ಸುದ್ದಿಗಳನ್ನ ಪೇಪರಿನಲ್ಲಿ ಓದಿ, ಟೀವಿಲಿ ನೋಡಿ ಮನಸು ಜಿಡ್ಡುಗಟ್ಟಿ ಹೋಗಿದೆಯಾ? ಬೇರೆಯವರ ಸುದ್ದಿ ನಮಗೇಕೆ ಅನ್ನುವ ಮನುಷ್ಯ ಸಹಜ ಸ್ವಭಾವದ ಜೊತೆ ಜೊತೆಗೇ ಇಂಥದ್ದನ್ನ ತಡೆಗಟ್ಟಲು ಏನಾದ್ರೂ ಮಾಡಬೇಕು ಅಂತನಿಸಿದರೂ ಹೇಗೆ ಪರಿಹಾರ ಹುಡ್ಕೋದು ಅಂತ ಗೊತ್ತಗ್ತಿಲ್ಲ ಅಲ್ವಾ?
     ಪ್ರತೀ ಸಲ ಪತ್ರಿಕೆಗಳಲ್ಲಿ, ಟಿವಿಯಲ್ಲಿ ರೇಪಿನಂತಹ ಅಮಾನವೀಯ ಘಟನೆಗಳನ್ನು ಓದಿದಾಗ, ಕೇಳಿದಾಗ ನನ್ನ ರಕ್ತ ಕುದಿಯುತಿತ್ತು. ಆದರೆ ನಡೆದ ಘಟನೆಯ ಕುರಿತು ಏನೂ ಮಾಡಲಾಗದ ನನ್ನ ಅಸಹಾಯಕತೆಯಿಂದ ಅಷ್ಟೇ ಬೇಗ ಕುದಿಯನ್ನು ಕಳೆದುಕೊಳ್ಳುತ್ತಿತ್ತು ಸಹ! ಸುಮ್ಮನಾಗುತ್ತಿದ್ದೆ. ಮತ್ತೆ ಮತ್ತೆ ಸುದ್ದಿ ಓದುತ್ತಿದ್ದೆ, ಕೇಳುತ್ತಿದ್ದೆ ಕುದ್ದು ಕುದ್ದು ಮತ್ತೆ ತಣ್ಣಗಾಗುತ್ತಿದ್ದೆ. ವರ್ಷಾನುವರ್ಷ ಮಾಡಿದ್ದು ಇಷ್ಟೇ! ಈ ಕುದಿಯನ್ನು ಯಾರ ಹತ್ತಿರವಾದರೂ ಹೇಳಿಕೊಂಡಾಗ ಸಿಗುತ್ತಿದ್ದ ಪ್ರತಿಕ್ರಿಯೆ ಹೆಚ್ಚೂಕಡಿಮೆ ಒಂದೇ ಥರ, "ಏss ಸುಮ್ನಿರು, ನಾಟ್ಕ,ಶೂಟಿಂಗು ಅಂತ ಒಬ್ಳೇ ಓಡಾಡ್ತಿರ್ತೀಯ,ಅಂಥವರ್ನೆಲ್ಲ ಎದುರ್ ಹಾಕ್ಕೊಂಡ್ರೆ, ಅವ್ರುಗಳು ಸಮಯ ನೋಡ್ಕೊಂಡ್ ಏನಾದ್ರೂ ಹೆಚ್ಚುಕಡಿಮೆ ಮಾಡಿಬಿಟ್ರೆ ಗತಿ ಏನು!?" ಆ ಹೆಚ್ಚುಕಡಿಮೆ ಅನ್ನೋದು ಸೀದಾ ಸೀದಾ ಹೇಳಬೇಕು ಅಂದ್ರೆ ರೇಪ್ ಮತ್ತು ಮರ್ಡರ್! ಸರಿ, ಹಲ್ಲು ಕಚ್ಚಿಕೊಂಡು, ಬಾಯ್ ಮುಚ್ಕೊಂಡು... ಪತ್ರಿಕೆಯನ್ನು ಓದುವಾಗ ಕ್ರೈಮ್ ಕುರಿತು ಇರುವ ಪುಟ ಬಂದಾಗ ಅದನ್ನೋದುವ ಶಕ್ತಿ ಇಲ್ಲದೇ ಓದಬಾರದ ಪುಟ ಕಣ್ಣೆದುರಿಂದ ಸರಿದುಹೋದರೆ ಸಾಕು ಎಂಬಂತೆ ಮುಗುಚಿ ಮುಂದಿನ ಪುಟಕ್ಕೆ ಧಾವಿಸಿಬಿಡುವುದು! ಹೊರಗೆ ಹೋದಾಗ ಏನಾದರೂ ಹೊಲಸು ಕಣ್ಣೋಟ, ಹೊಲಸು ಮಾತುಗಳು ಎದುರಿಸಬೇಕಾಗಿ ಬಂದಾಗ, ಅದೆಲ್ಲ ನನ್ನ ಕಣ್ಣಿಗೆ ಕಿವಿಗೇ ಬಿದ್ದಿಲ್ಲವೇನೋ ಎಂಬಂತೆ ಇರುಸುಮುರಿಸಿನೊಡನೆಯೇ ಸರಸರ ಹೆಜ್ಜೆ ಹಾಕಿಯೋ ಓಡು ನಡಿಗೆಯಲ್ಲೋ ಅಲ್ಲಿಂದ ಸರಿದು ಹೋಗೋದು. ಥತ್ ನಮ್ಮ ಹೇಡಿತನಕ್ಕಿಷ್ಟು ಬೆಂಕಿ ಹಾಕ!!
 ಅದು ಹೇಡಿತನವಾ...? ಅಸಹಾಯಕತೆಯಾ...?      
ಯಾವ ತಪ್ಪೂ ಮಾಡದೆ, ಕಳ್ಳರಂತೆ ಹೆದರಿ ಹೆದರಿ ಬದುಕುವುದು ಉಸಿರುಗಟ್ಟಿಸುತ್ತದೆ. ಹೆಣ್ಣಿನ ವಿಷಯವಾಗಿ ಅದ್ಯಾಕೆ ಈ ಪರಿಯ ಅಸಹ್ಯ ತುಂಬಿಕೊಂಡಿದೆ ಜಗದಲ್ಲಿ? ಮನುಜರಾಗಿ ಹುಟ್ಟಿದ ಎಲ್ಲ ಗಂಡಸರಿಗೂ ಒಂದು ಕುಟುಂಬವಿರುತ್ತದೆ, ಪ್ರತೀ ಕುಟುಂಬದಲ್ಲೂ ಹೆಣ್ಣುಮಕ್ಕಳಿರುತ್ತಾರೆ. ಆದರೂ ಪರಸ್ತ್ರೀಯನ್ನು ಕಂಡೊಡನೆ ಯಾಕೆ ಪುರುಷನ ಮನಸು ಹಾಗಾಗುತ್ತದೆ? ನಾನಿಲ್ಲಿ ಎಲ್ಲ ಪುರುಷರೂ ಇಂಥ ಮನೋಭಾವದವರೇ ಎಂದು ಹೇಳುತ್ತಿಲ್ಲ. ಸಭ್ಯರು ತುಂಬಾ ಜನರಿದ್ದಾರೆ ಎನ್ನುವುದನ್ನು ಒತ್ತಿ ಹೇಳುತ್ತಾ, ಅವರನ್ನು ಹೊರತುಪಡಿಸಿ ಯಾರೆಲ್ಲ ಹೀಗೆ ಅಸಹ್ಯವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಮಾತ್ರ ಉದ್ದೇಶಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪುರುಷನ ಈ ಚಂಚಲತನಕ್ಕೆ ಆತ ರೇಪೇ ಮಾಡಬೇಕು ಅಂತೇನಿಲ್ಲ, ಒಂದು ಅಸಹ್ಯ ನೋಟ, ಒಂದು ಅಸಹ್ಯ ಮಾತು, ಒಂದು ಅಸಹ್ಯ ಸ್ಪರ್ಶ ಹೆಣ್ಣಿನೆಡೆಗಿರುವ ಅವನ ಮನಸ್ಥಿತಿಯನ್ನು ತೋರಿಸಿ ಕೊಡುತ್ತದೆ. ಹೇಣ್ಣು ಮಾನಸಿಕವಾಗಿ, ದೈಹಿಕವಾಗಿ ತನ್ನ ತಪ್ಪಿಲ್ಲದೇ ಹಿಂಸೆ ಅನುಭವಿಸುತ್ತಾಳೆ. ಗಂಡು ಜೊತೆ ಇದ್ದಾಗೆಲ್ಲ ತಾನು ಯಾವಾಗಲೂ ಎಚ್ಚರದಿಂದಿರಬೇಕೆನ್ನುವುದನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳುತ್ತಾಳೆ. ಅವನ ಈ ಸ್ವಭಾವಕ್ಕೆ ಹೇಸಿಕೊಳ್ಳುತ್ತಾಳೆ. ನಮ್ಮಂತೆಯೇ ಭೂಮಿಗೆ ಬಂದ ಈ ಗಂಡು ಎಂಬ ಇನ್ನೊಂದು ಮನುಜ ಪ್ರಬೇಧದ ಬಗ್ಗೆ ಹೀಗೆ ಹೆಣ್ಣುಗಳು ಅಸಹ್ಯಿಸಿಕೊಳ್ಳುವ ಅನಿವಾರ್ಯ ಯಾಕಾಗುತ್ತದೆ...? ಯಾಕಾಗಬೇಕು?!!
  ದೆಹಲಿ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರ, ಸಾಮೂಹಿಕ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ . ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾಯಿಗಳು ಗುಂಪುಗೂಡಿ ಅಮಾಯಕ ಮಕ್ಕಳನ್ನು, ನಿಶ್ಯಕ್ತರನ್ನು ಕಚ್ಚಿ ಎಳೆದಾಡಿ ಕೊಂದುವಲ್ಲ ಹಾಗೆ! ದೆಹಲಿಯ ಪ್ರಕರಣದ ಸುದ್ದಿ ಗೊತ್ತಾದಾಗ, ವರ್ಷಾನುವರ್ಷ ನನ್ನಲ್ಲಿ ಹತ್ತಿಕೊಂಡ, ಆಕ್ರೋಶ ಅಸಾಯಕತೆಗೆಲ್ಲ ಮಂಗಳ ಹಾಡಿದೆ. ಫೇಸ್ ಬುಕ್ಕಿನ ಅಂತಃಪುರದ ಸಖಿಯರೊಡನೆ (ಅಂತಃಪುರ, ‘facebook' ಎಂಬ ಜಾಲತಾಣದಲ್ಲಿ ನಾನು ನಿರ್ಮಿಸಿದ ಮಹಿಳೆಯರ ಗುಂಪಿನ ಹೆಸರು) ಚರ್ಚಿಸಿದೆ. ಅವರೆಲ್ಲರ ಸಹಕಾರ, ಸಲಹೆ, ಸಹಯೋಗದೊಂದಿಗೆ ಒಂದಿಷ್ಟು ಯೋಜನೆಗಳು ರೂಪುಗೊಂಡಿವೆ. ಯೋಜನೆಗಳು ಬರೀ ಯೋಜನೆಗಳಾಗಿ ಉಳಿಯದೇ ಅವೆಲ್ಲನ್ನೂ ಕಾರ್ಯಗತಗೊಳಿಸತೊಡಗಿದ್ದೇವೆ. ನಾವು ಮಾತಾಡಿದ ತಕ್ಷಣ, ಹೀಗೆ ಬರೆದ ತಕ್ಷಣ ಅಥವಾ ಇನ್ಯಾವುದ್ಯಾವುದೋ ರೀತಿಯಲ್ಲಿ ಹೋರಾಡಿದ ತಕ್ಷಣ ಜಗತ್ತು ಬದಲಾಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ನಾವ್ಯಾರೂ ಇಲ್ಲ, ಆದರೆ ಹಾಂ ಹೌದು, ಜಗತ್ತು ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಆದರೆ ಟೈಮ್ ತೆಗೆದುಕೊಳ್ಳುತ್ತೆ. ಶತಶತಮಾನಗಳಿಂದ ಮಾನವರಲ್ಲಿ ಬೇರುಬಿಟ್ಟ ಕ್ರೌರ್ಯ, ನೀಚತನ, ಹೆದರಿಕೆ, ಅಸಹಾಯಕತೆ ಕಡಿಮೆಯಾಗಲು ಸಾಧ್ಯವಾದರೆ ಇಲ್ಲವಾಗಲು ಒಂದೆರಡು ತಲೆಮಾರುಗಳು ಸರಿದು ಹೋಗಬಹುದು. ಮಹಲು-ಗುಡಿಸಲು ಎನ್ನದೆ ಪ್ರತೀ ಮನೆಯಲ್ಲೂ ಇಂಥ ಹೇಯತನದ ವಿರುದ್ಧ ಹೋರಾಟವಾಗಬೇಕು. ಆದರೆ ಹೇಗೆ? ಇಲ್ಲಿ ಕೆಲವು ಉಪಾಯಗಳಿವೆ, ಅವುಗಳನ್ನು ಅನುಸರಿಸೋಣ. ಪ್ರತಿಯೊಬ್ಬರೂ ನಮ್ಮ ನಮ್ಮ ಮನೆಯ ಜನರನ್ನು ಸುರಕ್ಷಿತವಾಗಿಸಿಕೊಳ್ಳುವ ಮೂಲಕ ಇನ್ನೊಬ್ಬರ ಮನೆಯ ಜನರನ್ನೂ ಸುರಕ್ಷಿತಗೊಳಿಸೋಣ.

೧) ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಬೇರೊಬ್ಬರು ‘ಮುಟ್ಟಬಾರದ ಅಂಗಗಳ’ ಕುರಿತು ಅವರಿಗೆ ಅರ್ಥವಾಗುವ ಹಾಗೆ ಅರಿವು ಮೂಡಿಸುವುದು. ಮತ್ತು ಯಾರಾದರೂ ಹಾಗೆ ಮುಟ್ಟಿದಲ್ಲಿ ತಕ್ಷಣ ಜೋರಾಗಿ ಕೂಗಿಕೊಳ್ಳಲು ಹೇಳಿಕೊಡಬೇಕು, ತಪ್ಪದೇ ಅಪ್ಪ ಅಮ್ಮನ ಹತ್ತಿರ ಹೇಳುವುದು, ಜೊತೆಗೆ  ಅಂಥ ಹೊತ್ತಲ್ಲಿ ಹತ್ತಿರವಿರುವ ಯಾರಾದರೂ ತಮಗಿಂತ ಸ್ವಲ್ಪ ದೊಡ್ಡವರಾದರೂ ಸರಿ, ಅವರಲ್ಲಿ ಹೇಳುವಂತೆ ಮನವರಿಕೆ ಮಾಡಿಕೊಡುವುದು. ಆದರೆ ಎಚ್ಚರ, ನಿಮ್ಮ ವಿವರಣೆಯಿಂದ ಮಕ್ಕಳ ಮನಸು ಅನಾವಶ್ಯಕ ಕುತೂಹಲಕ್ಕೀಡಾಗದಂತೆ ನೋಡಿಕೊಳ್ಳುವುದೂ ಇಷ್ಟೇ ದೊಡ್ಡ ಜವಾಬ್ದಾರಿ. ಅದರ ಕಡೆಯೂ ಗಮನವಿರಲಿ.
೨) ಮಕ್ಕಳಿಗೆ ಹೆಣ್ಣುಗಂಡೆಂಬ ತಾರ್ಯತಮ್ಯವಿಲ್ಲದೇ ವ್ಯಕ್ತಿಯನ್ನು ಗೌರವದಿಂದ ಕಾಣಬೇಕೆನ್ನುವುದು ಮಾತಿನ ಮೂಲಕ, ನಿಮ್ಮ ನಡುವಳಿಕೆಯ ಮೂಲಕ ತೋರಿಸಿಕೊಡುತ್ತಾ, ಅವರು ನಿಮ್ಮನ್ನು ಅನುಸರಿಸುವಂತೆ ಮಾಡಿ.
೩) ಲೈಂಗಿಕತೆಯ ವಿಷಯವಾಗಿ ಹೆಣ್ಣು ಮಗುವಿನ ಬಗ್ಗೆ ಕಾಳಜಿ ತೋರಿಸುವಷ್ಟೇ, ಗಂಡು ಮಗುವಿನ ಬಗ್ಗೆಯೂ ಈ ಕಾಳಜಿ ಇರಬೇಕಾದುದು ಅವಶ್ಯಕ. ಗಂಡು ಬಸಿರಾಗುವುದಿಲ್ಲ, ಹೀಗಾಗಿ ಗಂಡುಮಗು ಸುರಕ್ಷಿತ ಎನ್ನುವ ಕಾರಣಕ್ಕಾಗಿಯೇ ಎಷ್ಟೋ ವಿಷಯಗಳ ಕುರಿತು ಅವರನ್ನು ಸಡಿಲು ಬಿಡುತ್ತೇವೆ. ಇದೇ ಕಾರಣವಾಗಿ ಗಂಡು ಮಗು ತನಗರಿವಿಲ್ಲಂದಂತೆ ಲೈಂಗಿಕ ವಿಷಯಗಳ ಕುರಿತು ಚಿಕ್ಕಂದಿನಿಂದಲೇ ಸಲ್ಲದ ಕುತೂಹಲ ಬೆಳೆಸಿಕೊಂಡಿರುತ್ತೆ. ಒಳ್ಳೆಯ ಪರಿಸರ, ಸ್ನೇಹಿತರು ಸಿಕ್ಕಲ್ಲಿ ಸಭ್ಯ ನಾಗರೀಕರಾಗುತ್ತಾರೆ. ಇಲ್ಲದಿದ್ದಲ್ಲಿ ಇನ್ನೊಬ್ಬರ ಬದುಕು ನಾಶವಾಗಲು ಕಾರಣರಾಗುತ್ತಾರೆ.
೪) ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಅದನ್ನು ಕೂಡಲೇ ಅಕ್ಕಪಕ್ಕದಲ್ಲಿರುವವರ ಗಮನಕ್ಕೆ ಬರುವಂತೆ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಹೇಳಿಕೊಡಬೇಕು, ಜೊತೆಗೆ ತನ್ನ ಗಮನಕ್ಕೆ ಇಂಥ ವಿಷಯ ಬಂದಾಗ, ಕಿರಿಕಿರಿಗೊಳಗಾಗುತ್ತಿರುವ ವ್ಯಕ್ತಿಗೆ ಸಹಾಯ ಮಾಡಲು ಮುಂದಾಗಬೇಕು ಮತ್ತು ಅಲ್ಲಿರುವ ಇತರರನ್ನೂ ಅದರಲ್ಲಿ ಭಾಗಿಯಾಗಲು ವಿನಂತಿಸಬೇಕು ಎನ್ನುವುದನ್ನೂ ಸಹ. ಜೊತೆಗೆ ನಾವೂ ಇದನ್ನೆಲ್ಲ ಪಾಲಿಸಬೇಕು.

ಹೋರಾಟವೆಂದರೆ ಬರೀ ಕೂಗಿಕೊಳ್ಳುವುದಲ್ಲ, ಶಕ್ತಿ ಬಳಸಿ ಗುದ್ದಾಡುವುದಷ್ಟೇ ಅಲ್ಲ, ಹೋರಾಟವೆಂದರೆ ನಮ್ಮ ಮನೆಗಳಲ್ಲಿ ಅತ್ಯಾಚಾರಿಯೊಬ್ಬ ಹುಟ್ಟದಂತೆ ನೋಡಿಕೊಳ್ಳುವುದು, ನಮ್ಮ ಮನೆಯ ಮಕ್ಕಳು ಬಲಿಪಶುಗಳಾಗದಂತೆ ನೋಡಿಕೊಳ್ಳುವುದು.

                                                       -ಜಯಲಕ್ಷ್ಮೀ ಪಾಟೀಲ್.
         




Wednesday, February 13, 2013

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ! « ಅವಧಿ / avadhi

‘ಈ ಹೊತ್ತಿಗೆ’ ಕಾರ್ಯಕ್ರಮದ ಕುರಿತು ಅವಧಿಯಲ್ಲಿ ಸಖಿ ಸಂಧ್ಯಾರಾಣಿ ಬರೆದ ಲೇಖನ.




ಈ ಹೊತ್ತಿಗೆ

- ಎನ್ ಸಂಧ್ಯಾರಾಣಿ

ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ ಸೇರುವುದು, ಒಂದು ಪುಸ್ತಕದ ಬಗ್ಗೆ ಚರ್ಚಿಸುವುದು. ಈ ಯೋಜನೆ ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು, ಸುಮಾರು ಜನರನ್ನು ಇದು ಸೆಳೆದಿತ್ತು. ಈ ಕ್ಲಬ್ಬಿನ ಸದಸ್ಯತ್ವಕ್ಕೆ ಒಂದೇ ಫೀಸ್ ಎಂದರೆ ಆ ಪುಸ್ತಕದ ಒಂದು ಕಾಪಿ ಸದಸ್ಯರ ಕೈಲಿರಬೇಕು, ಒಂದೇ ಕರಾರೆಂದರೆ ಭಾಗವಹಿಸಿದ್ದವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಲೇ ಬೇಕು! ನಮ್ಮ ಬುಕ್ ಕ್ಲಬ್ ಹೆಸರು ’ಈ ಹೊತ್ತಿಗೆ’. ಅವರು ಮೊದಲ ಸಭೆಗೆ ಸೂಚಿಸಿದ್ದ ಪುಸ್ತಕ ಕೆ ವಿ ಅಯ್ಯರ್ ಅವರ ರೂಪದರ್ಶಿ, ಸೇರುವ ಸ್ಥಳ, ಸಮಯದ ಬಗ್ಗೆ ಅವರು ಒಮ್ಮೆ ಫೇಸ್ ಬುಕ್ಕಿನಲ್ಲಿ ಹಾಕಿದ್ದೆಷ್ಟೋ ಅಷ್ಟೆ, ಆಮೇಲೆ ಅವರು ಅದನ್ನು ಮತ್ತೆ ನೆನಪಿಸಿದಂತೆಯೂ ಕಾಣೆ, ಆದರೂ ನಾವೆಲ್ಲರೂ ತಾರೀಖು ಗುರುತು ಹಾಕಿಕೊಂಡು ಮರೆಯದೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯುವ ಮಕ್ಕಳು ಹಾಲ್ ಟಿಕೆಟ್ ಅನ್ನು ಭದ್ರವಾಗಿಟ್ಟುಕೊಂಡು ಬರುವಂತೆ ಪುಸ್ತಕವನ್ನು ಅವಚಿ ಹಿಡಿದು ಕೊಂಡು ಬಂದಿದ್ದೆವು.
ಸೇರಿದ್ದವರೆಲ್ಲಾ ಫೇಸ್ ಬುಕ್ಕಿನಲ್ಲಿ ಪರಿಚಿತರೆ, ಹಾಗಾಗಿ ಹೇಗೋ ಏನೋ ಮಾತಾಡಿದರಾಯಿತು ಎಂದು ಧೈರ್ಯ ತಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದದ್ದು ಜಯಶ್ರೀ ಮತ್ತು ದಿವಾಕರ್ ದಂಪತಿ, ನಮ್ಮ ಈ ಕೂಟಕ್ಕೆ ಥಟ್ ಅಂತ ಸ್ಟಾರ್ ವ್ಯಾಲ್ಯೂ ಬಂದಂತಾಯ್ತು! ಜೊತೆಗೆ ಎಲ್ಲರಿಗೂ ಇನ್ನಿಲ್ಲದ ಟೆನ್ಶನ್! ಇವರೆದುರಲ್ಲಿ ನಾವು ಮಾತಾಡೋದ?!
ಆದರೆ ಅವರಿಬ್ಬರೂ ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋದಂತೆ, ನಾವು ನಮ್ಮ ಹಿಂಜರಿಕೆ ಬಿಟ್ಟು ಮಾತಾಡಲು ಪ್ರಾರಂಭಿಸಿದೆವು. ಕೆ ವಿ ಅಯ್ಯರ್ ಅವರ ಬಗ್ಗೆ ನಾವು ತಿಳಿಯದ ವಿವರಗಳನ್ನು ದಿವಾಕರ್ ಅವರು ತಿಳಿಸುತ್ತಾ ಹೋದರು. ಆಮೇಲೆ ಒಬ್ಬೊಬ್ಬರಾಗಿ ಪುಸ್ತಕದ ಬಗ್ಗೆ ಮಾತಾಡಿದ್ದು, ಚರ್ಚಿಸಿದ್ದು …..
ಪುಸ್ತಕದ ಪ್ರಸ್ತುತತೆ, ಒಂದು ಪುಸ್ತಕವನ್ನು ವರದಿಯಾಗದಂತೆ ಕಥೆಯಾಗಿ ಹೆಣೆಯುವುದಕ್ಕೆ ಬೇಕಾಗುವ ಚಿಕ್ಕ ಚಿಕ್ಕ ವಿವರಗಳು, ಪುಸ್ತಕ ಬರೆದ ಕಾಲ ಮತ್ತು ಆ ಮೂಲಕ ಪುಸ್ತಕದ ಧ್ವನಿ, ಬದಲಾಗುವ ಕಾಲ ಮತ್ತು ಅದರ ಮೇಲೆ ನಿರ್ಧರಿತವಾಗುವ ಪುಸ್ತಕದ ಭಾಷೆ ಮತ್ತು ಭಾವುಕತೆ, ನೈತಿಕತೆ ಮತ್ತು ಅದರ ಮಾನದಂಡಗಳು…. ಏನೆಲ್ಲಾ ಚರ್ಚೆಯಾದವು ಅಲ್ಲಿ… ಅದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾದೀತು, ಅದನ್ನು ನೀವೆಲ್ಲಾ ಅಲ್ಲಿಗೇ ಬಂದು ಸವಿಯಲಿ ಎನ್ನುವ ಆಸೆಯೊಂದಿಗೆ ಲೇಖನವನ್ನು ನಿಲ್ಲಿಸುತ್ತಿದ್ದೇನೆ.

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್ « ಅವಧಿ / avadhi

ಫೆಬ್ರುವರಿ ೯ರಂದು ಅವಧಿಯಲ್ಲಿ ಪ್ರಕಟಗೊಂಡ ಬರಹ.


ನಮ್ಮೂರಾಗ ಕನ್ನಡ ತಾಯಿ ನಲಿದ್ಯಾಡಕತ್ತ್ಯಾಳ

ಜಯಲಕ್ಷ್ಮಿ ಪಾಟೀಲ್

ಬಿಳಿಜ್ವಾಳ ರೊಟ್ಟಿ, ಕರಿ ಎಳ್ಳ್ ಹಚ್ಚಿದ ಕಟಗ್ ಸಜ್ಜಿ ರೊಟ್ಟಿ, ಸಜ್ಜಿಗಡಬ, ಎಣ್ಣಿಗಾಯಿ ಬದನಿಕಾಯ್ ಪಲ್ಯಾ, ಪುಂಡಿಪಲ್ಯಾ, ಕಾಳ ಪಲ್ಯಾ, ಶೇಂಗಾದ್ ಹಿಂಡಿ(ಚಟ್ನಿ), ಕಾರೆಳ್ಳ ಚೆಟ್ನಿ, ಮಸರಾ, ಹುಳಿಬಾನ, ಎಳೀ ಸೌತಿಕಾಯಿ, ಗಜ್ಜರಿ, ಉಳ್ಳಾಗಡ್ಡಿ… ಹುಗ್ಗಿ, ಹೂರಣದ ಹೋಳ್ಗಿ, ಸಜ್ಜಕದ ಹೋಳ್ಗಿ, ಶೇಂಗಾದ ಹೋಳ್ಗಿ, ಹೆರಿತುಪ್ಪ, ಆಹಾ! ನಮ್ಮೂರ ಊಟಾನ ಊಟ!
ಹೌದ್ರೀ ನನಗೊತ್ತು, ನೀವೇನ್ ಅನ್ಕೊಳ್ಳಾಕತ್ತೀರಿ ಅಂತ! ಈ ಹೆಣ್ಮಕ್ಕಳಿಗೆ ಅಡಗಿ ಅಂಚಡಿ ಬಿಟ್ಟ್ರ ಬ್ಯಾರೆ ಏನೂ ಹೊಳಿಯೂದ ಇಲ್ಲೇನು!? ಅಂತ ಮಾರಿ ಗಂಟ್ ಹಾಕ್ಕೊಂಡ್ರಿಲ್ಲೋ? ಏನ್ ಮಾಡೂದ್ ಹೇಳ್ರೆಪಾ, ನಾವು ಹೆಣ್ಮಕ್ಳು ಎಷ್ಟ ಕಲ್ತ್ರೂ, ಎಂಥಾ ದೊಡ್ಡ ನೌಕ್ರಿ ಮಾಡಿದ್ರೂ, ದೇಶಾ ಆಳಿದ್ರೂ ನಮ್ಮ ದಿನಾ, ನಮ್ಮಾತು ಎಲ್ಲಾ ಚಾಲೂ ಆಗೂದೂ ಅಡಗಿ ಮನಿಯಿಂದಾನ ಮತ್ತ ಮುಗ್ಯೂದೂ ಅಡಗಿ ಮನಿಯಿಂದಾನ. ಇಲ್ದಿದ್ರ ನಮಗ ಸಮಾಧಾನನ ಇರೂದಿಲ್ಲ, ನನಗೊತ್ತೈತಿ ಬಿಡ್ರಿ ಹೆಣ್ಮಕಳ್ದ್ ಬರೀ ಇದ ಆತು ಅಂತ ಅನ್ಕೋತ ದೊಡ್ಡಸ್ತಿಕಿ ತೋರಸೊ ನಿಮ್ಮ್ ಬಾಯಾಗೂ ಆಗಲೇ ನೀರ್ ಕಡ್ಯಾಕತ್ತಾವು ಅಂತ ನನಗೊತ್ತೈತಿ. ಈಗ ನಮ್ಮೂರಿಗೆ ಬಂದ ನಾಡಿನ ಮಂದೆಲ್ಲಾ ಸಾಹಿತ್ಯದ ಜೋಡ್ ಇದನ್ನೆಲ್ಲಾ ಬಾಡಸ್ಕೊಂಡು ತಿನ್ನಾಕ ಚಾಲೂ ಮಾಡಿರ್ತಾರ ನೋಡ್ರಿ ಬೇಕಾರ. ಇಲ್ಲಾ, ರುಚಿ ಹತ್ತಿತು ಅಂದ್ರಂತೂ ಉಲ್ಟಾ ಈ ಊಟದ ಜೋಡಿ ಸಾಹಿತ್ಯಾನ ಬಾಡಸ್ಕೋತಾರ! ಜವಾರಿ ಊಟ, ಜವಾರಿ ಬಿಸಲು, ಜವಾರಿ ಧೂಳು, ಜವಾರಿ ಮಂದಿ, ಜವಾರಿ ಕನ್ನಡಾ ಮತ್ತ ಜವಾರಿ ಪ್ರೀತಿ! ಹಿಂಗ್ಯಾಕ ಅಂದ್ರೇನು ನೀವು? ಯಾಕಂದ್ರ ನಾವ್ರೀ, ನಾವ್ ಅಂದ್ರ ಯಾರಂತ ತಿಳ್ಕೊಂಡೀರಿ, ಗಂಡುಮೆಟ್ಟಿದ ನಾಡಿನವ್ರು, ಬಿಜಾಪುರದ ಮಂದಿ, ನಾವು ಹಿಂಗರೆಪಾ!
ಇವತ್ತಿನಿಂದ ಮೂರ್ ದಿನ ನಮ್ಮೂರು ಮತ್ತ ರನ್ನನ್ನ ನೆನಸ್ಕೋತೈತಿ, ಜನ್ನನ್ನ ನೆನಸ್ಕೋತೈತಿ, ಕುಮಾರ ವಾಲ್ಮಿಕಿನ್ನ, ಬಸವಣ್ಣನ್ನ, ಹಳಕಟ್ಟಿಯವ್ರು, ಸತ್ಯಕಾಮರು, ಮಧುರಚೆನ್ನರನ್ನ ಇನ್ನೂ ಯಾರ್ಯಾರೆಲ್ಲಾ ತನ್ನ ಅಂಗಳದಾಗ ಆಡ್ಕೋತ ಬೆಳದು ನಾಡಿಗೇ ದೊಡ್ಡೋರಾದ್ರೋ, ಸೂರ್ಯಾ ಚಂದ್ರಮರ್ಹಾಂಗ ಹಗಲೂರಾತ್ರಿ ಬೆಳಗಾಕತ್ತ್ಯಾರೋ ಅವ್ರನ್ನೆಲ್ಲಾ ನೆನಸ್ಕೋತೈತಿ.
ಉಪ್ಪಲಿ ಬುರ್ಜದಾಗಿರೋ ಯೋಳ್ ಮಕ್ಕಳ ತಾಯಿ, ಎದ್ಯಾಗ ಅಕ್ಷರಾ ಬಿತ್ತಿಗೊಂಡ ಊರಿಗೆ ಬಂದ ನಾಡಿನ ಮಂದಿನ್ನ ನೋಡಿ ಖುಷೀಲೇ ಕೇಕೆ ಹಾಕಿ ನಕ್ಕ್ರ, ಗೋಳಗುಮ್ಮಟಾ ಅದನ್ನ ಜಗತ್ತಿನ ಯೋಳೂ ಅಚ್ಚರಿಗೋಳು ಬೆರಗಾಗೂವಂಗ ಒದರಿ ಹೇಳ್ತೈತಿ. ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ. ಇಷ್ಟ್ ವರ್ಷ ಘನಾಗಂಭೀರದಿಂದ ಅಲಾಗಾಡಧಂಗ ಅಡ್ಡಾಗಿದ್ದ ಮುಲ್ಕ ಮೈದಾನದಾಗಿನ ತೋಪಗೋಳು ಎದ್ದನಿಂತು ಹಾರಿ ಹಾರಿ ಮಂದಿನ್ನ ಎದರ್ಗೊಳ್ತಾವು. ಜೋಡಗುಮ್ಮಟ ಜೋಡಿದೀಪಾಗಿ ಆರ್ತಿ ಮಾಡ್ತೈತಿ, ಊರ್ ಧೂಳು ಗುಲಾಲ್ ಆಕ್ಕೈತಿ, ಇಬ್ರಾಹಿಂ ರೋಜಾ ಬಂದೋರು ತುಸುಹೊತ್ತು ಕುಂತು ದಣಿವಾರಸ್ಕೊಳ್ಳೊ ಚಾವಡಿ ಆಕೈತಿ. 777 ಲಿಂಗೂ ಗುಡಿ ವಚನಾ ಹಾಡ್ತೈತಿ, ಸಿದ್ದೇಶ್ವರ ಗುಡ್ಯಾಗಿನ ನಂದಿಕೋಲು ತಾಳ ಹಾಕ್ಕೊಂಡು ಕುಣದ್ಯಾಡ್ತಾವು, ಭೂತನಾಳ ಕೆರಿ ಬಂದೋರ ಹೊಟ್ಟಿ, ನೆತ್ತಿ, ಕಣ್ಣ ತಂಪ ಮಾಡ್ತತೈತಿ…
ಸೈನಿಕ್ ಸ್ಕೂಲಂತೂ ನಾಳೆ ಮದಮಗಳ ಗತೆ ಸಿಂಗಾರ ಬಂಗಾರ ಮಾಡ್ಕೊಂಡು, ಢವಾಢವಾ ಅನ್ನೂ ಎದ್ಯಾಗ ಸಂಭ್ರಮಾ ತುಂಬ್ಕೊಂಡು ತುದಿಗಾಲ ಮ್ಯಾಲೆ ನಿಂತಿದ್ದನ್ನ ನೆನಸ್ಕೊಂಡ್ರನ ನನಗ, ನಾ ಯಾಕಾರ ಊರಿಗೆ ಹೋಗ್ಲಿಲ್ಲ ಅಂತ ಹಳಾಳ್ಯಾಗಾಕತೈತಿ. ಏನ್ ಮಾಡ್ಲಿ ಹೇಳ್ರೀ, ಈ ಸಂಸಾರನ್ನೂದು ಕೆಲವೊಮ್ಮೆ ಕಾಲಿಗ್ ಕಟ್ಟಿದ್ ಗುಂಡಾಗಿ ನಡದೇನಂದ್ರ ನಡಿಗೂಡಂಗಿಲ್ಲ… ಇಲ್ಲೇ ಕುಂತು ಊರಿಂದ ಬರೂ ಸುದ್ದಿಗೆ ಕಾಯೂದ್ ಬಿಟ್ರ ಬ್ಯಾರೆ ದಾರಿಲ್ಲ ನನಗ. ಅವ್ವ, ಚಿಕ್ಕಮ್ಮ ಇಬ್ರೂ ಸಾಹಿತ್ಯ ಸಮ್ಮೇಳನಕ್ಕ ಹೋಕ್ಕೀವಿ ಅಂತಂದಾರ. ಅಪ್ಪಾ ಅನ್ಕಾ ಹೋಗದ ಬಿಡಂಗಿಲ್ಲ. ಅವ್ರ ಕಣ್ಣೀಲೇನ ನಾನೂ ಸಡಗರಾ ನೋಡಿ ಸಮಾಧಾನ ಮಾಡ್ಕೊಂತೀನಿ. ಅಲ್ದ `ಅವಧಿ’ ಸುದ್ದಾ ಎಲ್ಲಾ ಬಾತ್ಮಿ ಒಪ್ಪಸ್ತೀನಿ ಅಂತ ಹೇಳಿದ ಮ್ಯಾಲಂತೂ ನನ್ನ ಜೀವಕ್ಕ ಇನ್ನಷ್ಟು ಸಮಾಧಾನ ಆಗೇತಿ. ಇವತ್ತ ನಮ್ಮೂರು ಮತ್ತ ಗತವೈಭವಕ್ಕ ಮರಳಿದ್ದು ನೋಡಿ ನನಗ ಬಸವಣ್ಣನ ಈ ವಚನ ನೆನಪಾತು.
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.