Saturday, November 14, 2015

ಸೀರೆ ಮಡಿಕೆ



ಮಡಿಚಿ ಪೆಟ್ಟಿಗೆಯಲಿ ಮುಚ್ಚಿಟ್ಟ ಸೀರೆ
ಪ್ರತೀ ಮಡಿಕೆಯಲ್ಲೂ ರೇಶಿಮೆಯ ನವುರು
ತುಸು ಒರಟು ಜರಿಯ ಕುಸೂರಿ
ನೂಲುನೂಲಿನಲ್ಲೂ ಬಣ್ಣ ತರಾವರಿ

||ಮಡಿಚಿ ಪೆಟ್ಟಿಗೆಯಲಿ ಮುಚ್ಚಿಟ್ಟ ಸೀರೆ||

ಮಡಿಕೆಯಲ್ಲೂ ಹೊರಳಿ ನರಳಿ
ಕೋನವಾದ ಅಂಚು ನೆರಿಗೆ
ನೇರ ಗೆರೆಗಳನ್ನು ವಕ್ರವಾಗಿಸುವ ಸಂಚು
ಬಿಟ್ಟುಕೊಂಡ ನೂಲು ಜೋಡಿಸಿದ ಪುಟ್ಟ ಗಂಟು

||ಮಡಿಚಿ ಪೆಟ್ಟಿಗೆಯಲಿ ಮುಚ್ಚಿಟ್ಟ ಸೀರೆ||

ನಲಿಯದು ನವಿಲು ನುಡಿಯದ ಒಲವು
ಘಮಿಸದು ಮಾವು ಕೊಳೆಯುವ ನೋವು
ಆಗಸದಗಲ ಎದೆಮಾಳಿಗೆಯಲಿ
ಹೊಳೆಯದೇ ಅಡಗಿ ಕೂತ ಚುಕ್ಕಿಬಳಗ

||ಮಡಿಚಿ ಪೆಟ್ಟಿಗೆಯಲಿ ಮುಚ್ಚಿಟ್ಟ ಸೀರೆ||

ಅಂಚಿನ ಜರಿ ಕುಚ್ಚಿನ ಸರಿ
ಸೆರಗ ಬೆರಗು ಒಡಲ ಕಡಲು
ಬೆರೆತು ಕಲೆತು ಬಣ್ಣ ಬಣ್ಣ
ಹಾಗೂ ಹೀಗೂ ಹೊಂದಿತಣ್ಣ

||ಮಡಿಚಿ ಪೆಟ್ಟಿಗೆಯಲಿ ಮುಚ್ಚಿಟ್ಟ ಸೀರೆ||
ಮುಚ್ಚುಳ ಸರಿದು ಮಡಿಕೆ ಮುರಿದು 
ಸೂಸುತ ಸುರಿಸುತ ಗತದಾಗಂಧ
ಒಪ್ಪದಿಂದ ಸುತ್ತಿ ಸುಳಿದು ಮೈಯಾವರಿಸೆ
ಇಗೋ ಕತೆಕತೆಗಳ ಅನಾವರಣ.

ll if you have an untold story inside you, let it unfold ll





- ಜಯಲಕ್ಷ್ಮೀ ಪಾಟೀಲ್. 
(ಎಪ್ರಿಲ್ ೨೦೧೫)

Thursday, August 27, 2015

ನೀರಿಲ್ಲದ ಆಳ ಬಾವಿ



ನೀರಿಲ್ಲದ ಆಳ ಬಾವಿ
ಗವ್ವೆನ್ನೊ ಕತ್ತಲದ ಗದ್ದಲ ಒಳಗೆ
ಹೊರಗಲ್ಲೆಲ್ಲೂ ಪ್ರಶಾಂತ ಪ್ರಶಾಂತ
ಒಳಹೊರಗನ್ನು ಬೆಸೆವ ಗಾಳಿಯೇ
ಒಳಗೇಕೆ ಅಡಗಿ ಕುಳಿತೆ?
ನಿರ್ವಾತದಲ್ಲೂ ಜೀರುಂಡೆ ಝೇಂಕಾರ!
ಏನಿದು ಹೊರಗೆ ಹಾಹಾಕಾರ?
ಕೇಳಿಸುತ್ತಿಲ್ಲ ಒಳಗಡೆ ಬಲು ಗದ್ದಲ ಇಲ್ಲದಕೆ ನಿಲುಗಡೆ
ಅಗೋ ಅಲ್ಯಾರೋ ನಗುತಿಹರು
ಮೆರವಣಿಗೆ ಜೋರಿತ್ತು ತಕ್ಕ ಶಾಸ್ತಿಯಾಯ್ತು
ನಂಜದನಿಯಲ್ಲಿ ಇನ್ಯಾರೋ ಉಲಿಯುತಿಹರು
ಛೇ ಇದು ಅನ್ಯಾಯ, ಹೀಗಾಗಬಾರದಿತ್ತು...
ಮರುಗುತಿಹವು ಸ್ನೇಹಹೂಗಳು
ದೃಷ್ಟಿಯಾಯಿತು ಕಂದ ನಿವಾಳಿಸುವೆ
ಕೆಟ್ಟ ಕಣ್ಣುಗಳ ಮಾರಿ ನುಂಗಲಿ
ಅಮ್ಮ ಹೃದಯಗಳ ಅಕ್ಕರೆ
ಬಗೆದ ಕೇಡಾವುದು? ತಳವಿಲ್ಲದ ಪ್ರಶ್ನೆಗಳಿಗೆ ಉತ್ತರವಿಲ್ಲ
ತಾಳಮೇಳವಿಲ್ಲದ ಜಗತ್ತು ತಾಳೆ ಹಾಕುತಿದೆ ಇಲ್ಲದಿರುವ ಎಲ್ಲದಕ್ಕೂ
ಕೆದಕಿದರೂ ಸಿಗುತ್ತಿಲ್ಲ ತಪ್ಪುಗಳ ಪಟ್ಟಿ ನಿರ್ವಾತದಾಳಕ್ಕೂ
ವಿತಂಡವಾದಗಳಿಗೆ ಬೇಸತ್ತು ಕನಲಿ ಅರಚಿದವಳ ದನಿ 
ಮಾರ್ದನಿಸುತಿದೆ ನೀರಿಲ್ಲದ ಆಳ ಬಾವಿಯಲ್ಲಿ
ನಿನ್ನ ಕಟ್ಟಿಕೊಂಡವಳು ಕಿವುಡಿಯಾಗಿದ್ದರೆ ಬದುಕಬಲ್ಲಳು ಉಸಿರಿರೊವರೆಗೂ ನಿನ್ನೊಂದಿಗೆ
ಅವಳ ನೆಮ್ಮದಿಗೆ ಕಿವುಡಿರಲಿ ಅವಳಿಗೆ!
ಅದ್ಯಾವ ಅಶ್ವಿನಿ ದೇವತೆ ಅಸ್ತು ಅಂದಿದ್ದು ಅಂದು??
ವರ ಶಾಪವಾಗಿ ತಿರುಗಿ ಇಂದು,
ನೀರಿಲ್ಲದ ಆಳ ಬಾವಿ
ಗವ್ವೆನ್ನೊ ಕತ್ತಲದ ಗದ್ದಲ ಒಳಗೆ
ಹೊರಗಲ್ಲೆಲ್ಲೂ ಪ್ರಶಾಂತ ಪ್ರಶಾಂತ...


- ಜಯಲಕ್ಷ್ಮೀ ಪಾಟೀಲ್ (25th Aug 2015)

Wednesday, August 19, 2015

ನೋ ಸ್ಮೋಕಿಂಗ್



- ಗುಲ್ಜಾರ್.



ಸೇದಿ ಬಿಡು...
ಹೊಂಬಣ್ಣದ ಕಾಡಿನಿಂದ ಹೊಮ್ಮುತಿದೆ ಧೂಪ ಪರಿಪರಿ
ಕಣಕಣವವನೂ ಹೀರುತ್ತಿರುವೆ ಎಲೆ ಎಲೆಯನೂ ಸವರಿ
ಬೆಳಕಿಲ್ಲದ ಕಣ್ಣಲಿದೋ ಹೊಗೆಯಾಡುತ್ತಿದೆ ಮಂದ ಅಲೆ
ಜೊತೆಗೇನಿಲ್ಲದಿದ್ದರೂ ವ್ಯಾಕುಲ ಮನಸಿಗೆ ಗಾಯವಿದು ಆಪ್ತಸೆಲೆ
ಸೇದಿ ಬಿಡು ಒಮ್ಮೆ...


ಜೀವವನ್ನೊಮ್ಮೆ ಸೇದಿ ಬಿಡು, ಜೀವಸೆಲೆಯನ್ನೊಮ್ಮೆ ಸೇದಿ ಊದಿ ಬಿಡು
ಸೇದಿಬಿಡು ಸೇದಿಬಿಡು ಜೀವಸೆಲೆಯಾಗಿರುವ ಅಕ್ಷರಗಳನ್ನೆಲ್ಲ ಒಮ್ಮೆ ಸೇದಿ ಊದಿ ಬಿಡು


ಮಣಭಾರದ ತಲೆ ಭುಜದ ಮೇಲೆ, ಮಣಿಮಣಿಯುವ ಹೆಜ್ಜೆ ನೆಲದ ಮೇಲೆ
ಮಾತುಬಾರದ ಭಾವಗಳದೋ ರಾತ್ರಿಯಿಡೀ ಗಲಾಟೆ ಮೇಲೆ ಮೇಲೆ
ಬಿಗಿದ ತುಟಿಯ ಹಿಂದೆ ಕುದಿಯುತ್ತಿರುವ ಮಾತುಗಳ ಸೇದಿ ಬಿಡು
ತುಟಿಗಂಟಿದ ಈ ರಾತ್ರಿಯ ಊದಿ ಬಿಡು
ಉರಿದ ರಾತ್ರಿಬೂದಿಯ ಈ ತುಟಿಗಳಿಂದಲೇ ಊದಿ ಬಿಡು...


ಅಮಲು ಅದರಿ ಉದರಿ ನೆಲದ ತುಂಬಾ ತುಂಡುಗಳು
ಕುಳಿತು ಆಯುತ್ತಿದ್ದೇವೆ ಕೆಲಸವಿಲ್ಲದ ಬಡಗಿಗಳು
ತುಟಿಯ ಮೇಲೆ ಕುದಿಯುತಿರುವ ಮಾತನ್ನೊಮ್ಮೆ ಸೇದಿ ಊದಿ ಬಿಡು...









- ಜಯಲಕ್ಷ್ಮೀ ಪಾಟೀಲ್ (ಅನುವಾದ)

(ಗುಲ್ಜಾರರ ಅಕ್ಷರಗಳ ಮೇಲಿನ ನನ್ನ ಪ್ರೀತಿಗೆ ಅವರ ಹುಟ್ಟಿದಹಬ್ಬದಂದು)
19-08-2015

Monday, July 6, 2015

ಕೆ.ಎಸ್.ನರಸಿಂಹಸ್ವಾಮಿಯವರ ಕವನ ಮಾತು ಬೇಸರವಾಗಿದೆ (ಉಂಗುರ ಕವನ ಸಂಕಲನದಿಂದ)




ಸಂವಹನಕ್ಕೆಂದು ಮಾತು ಕಲಿತ ಮಾನವ. ಮಾತು ಮಧುರವೆನಿಸಿತು, ಮಾತು ಕೃತಿಗೆ ಅನುಕೂಲವಾಯ್ತು, ಮಾತು ಅಕ್ಷರಕ್ಕೆ ಮೂಲವಾಯ್ತು, ಮಾತು ಹಾಡಾಯಿತು, ಮಾತು ಆಯಾ ನಾಡಿನ ನಾಡಿಯಾಯ್ತು!
ಮುಂದುವರೆದು ಮಾತು ಹೊಟ್ಟೆಯ ಪಾಡಾಯ್ತು, ಮಾತು ವಾದವಾಯ್ತು, ವಾಗ್ವಾದವಾಯ್ತು, ವಿತಂಡವಾದವಾಯ್ತು, ಕಂಡಕಂಡವರನ್ನು ಕಾಡಿಗೆ ಅಟ್ಟುವ ಖಡ್ಗವಾಯ್ತು, ಅಬ್ಬರವಾಯ್ತು, ಗೊಬ್ಬರವಾಯ್ತು... ಮಾತಿಗೆ ಹಂಬಲಿಸಿದ ಮಾನವ ತಿರುಗಿ ಮೌನವನು ಹಂಬಲಿಸುವಂತಾಯ್ತು!
ಮಾತಿನ ಟೊಳ್ಳುತನದ ಕುರಿತು, ಮೌನದ ಘನತೆಯ ಕುರಿತು ಮಾತಿನಲ್ಲೇ ಹೇಳಬೇಕಾದ ಆಭಾಸದ ಘಳಿಗೆ ಇದು. ಕೆ.ಎಸ್.ಎನ್ ಅವರಿಗೇ ಇದು ಅನಿವಾರ್ಯವಾದ ಹೊತ್ತಿನಲ್ಲಿ ನಾ ಹೇಗೆ ಅದಕೆ ಹೊರಗಾಗಬಲ್ಲೆ ಎನ್ನುವ ವಾಸ್ತವ ಎದುರಿಗಿದೆ. ೧೯೪೯ರಲ್ಲಿ ಬಿಡುಗಡೆಯಾದ ಕೆ ಎಸ್ ನರಸಿಂಹಸ್ವಾಮಿಯವರ ಕವನ ಸಂಕಲನ ‘ಉಂಗುರ’ದಲ್ಲಿನ ‘ಮಾತು ಬೇಸರವಾಗಿದೆ’ ಎನ್ನುವ ಈ ಕವನ ಮೌನವನ್ನು ಹಂಬಲಿಸುತ್ತದೆ. ಆ ಮೂಲಕ ಜಗತ್ತಿನ ಸೋಗಲಾಡಿತನವನ್ನು, ಶಬ್ದ ಡಾಂಭಿಕತೆಯನ್ನು, ಶಬ್ದ ಮಾಲಿನ್ಯವನ್ನು ಧಿಕ್ಕರಿಸುತ್ತದೆ!
ಈ ಕವಿತೆ ತಾನಾಗಿಯೇ ಎಲ್ಲವನ್ನೂ ವಿಶದಪಡಿಸುವುದರಿಂದ ಇಲ್ಲಿ ಯಾವುದನ್ನೇ ಆಗಲಿ ಹೆಚ್ಚು ಬಿಡಿಸಿ ಹೇಳುವ ಅವಶ್ಯಕತೆ ಕಾಣುವುದಿಲ್ಲ. ಆದರೂ ಕವಿತೆ ಎನ್ನುವುದು ದಕ್ಕಿದವರಿಗೆ ದಕ್ಕಿದಷ್ಟು,
ಮೊದಲನೆಯ ಸಾಲಿನಲ್ಲೇ ‘ಸಾಕು, ಬಿಡಿ, ಇದನಿಂದಿಲ್ಲಿಗೆ ಮಾತು ಬೇಸರವಾಗಿದೆ’ ಎನ್ನುವಲ್ಲಿ  ಅದೆಷ್ಟು ಅಸಹನೆ ಇದೆಯಂದರೆ, ಅದು ಬರವಣಿಗೆಯಲ್ಲಿನ ಟೊಳ್ಳುತನದ ಬಗ್ಗೆ ಹೇಳುವಾಗ (ಗೋರಿಯಾಗಿವೆ ಗದ್ಯಪದ್ಯಗಳೆಲ್ಲ ಬಳಲುವ ಮಾತಿಗೆ), ತಮ್ಮ ಸ್ವಾರ್ಥಕ್ಕೆ ದೊಡ್ದವರ ಹೆಸರುಗಳನು ಬಳಸಿ ಘೋಷಣೆ ಕೂಗುವ ಮಂದಿಯ ಕಪಟತನದ ಬಗ್ಗೆ ಹೇಳುವಾಗ (ಕದ್ದು ಬಾಳಿದರೇನು? ಗೆದ್ದೇ ಹೊದ್ದು ನಡೆಯುವ ಹಗರಣ! / ಬುದ್ದಗಾಂಧಿಗಳಂಕಿತ ಬರಿ ಮೆರವಣಿಗೆ-ನಿಷ್ಕಾರಣ!), ತನಗೆಲ್ಲವೂ ಗೊತ್ತು, ತಾನೆಲ್ಲವನ್ನೂ ಬಲ್ಲೆ ಎಂಬ ಡಾಂಭಿಕತನದ ಕುರಿತು ಹೇಳುವಾಗ (ಸೇತು ಮೊದಲಾ ಹಿಮಗಿರಿಯೇ ಕೊನೆ ಮಾತುಗಾರರ ಆವುಟ), ಉಪಕರಿಸಿದ್ದು ಉಗುರಗಲವಾದರೂ ಅದರ ಕುರಿತು ಊರಗಲ ಮಾತನಾಡುವ ಮೂಲಕ ಒಣ ಪ್ರತಿಷ್ಠೆಯನ್ನು ಮೆರೆವ ಜನರ ಬಗ್ಗೆ ಹೇಳುವಾಗ (ಕ್ಷಾಮಜೀವಿಯ ಬಾಯ ಬಿಲ್ಲಿನ ಬಾಣತಂತ್ರಗಳಿಲ್ಲಿವೆ), ಈ ಸಾಲು ಹಿನ್ನೆಲೆಯಲ್ಲಿ ಅನುರುಣಿಸುತ್ತಲೇ ಇರುತ್ತದೆ.
ಈ ಜಗದಲ್ಲಿ ಎಲ್ಲವೂ ಅಬ್ಬರವೇ! ಎದೆಯಲ್ಲಿ ಹುಟ್ಟಿ, ಮಿಡಿತವಾಗಿ, ತುಡಿತವಾಗಿ ನರನಾಡಿಗಳಲ್ಲಿ ಜುಳುಜುಳು ಹರಿದು, ಕಣ್ಣಿನನುಸಂಧಾನದಲ್ಲಿ, ಮೆಲು ಮಾತುಗಳಲ್ಲಿ, ಹಿತಸ್ಪರ್ಶದಲ್ಲಿ ಧನ್ಯತೆಯ ಪರಾಕಾಷ್ಟೆ ತಲುಪಬೇಕಾದ ಹೂವಿನಂಥಾ ನಾಜೂಕು ಒಲವು, ಮಡುಗಟ್ಟಿದ ನೋವು ಎಲ್ಲವೂ ಮಾತಿನ ಅಬ್ಬರಕೆ ಸಿಕ್ಕು ತಮ್ಮ ಸ್ನಿಗ್ಧತೆ, ಘನತೆಯನ್ನು ಕಳೆದುಕೊಳ್ಳುತ್ತಿರುವ ನೋವು ಕವಿಯನ್ನು ಕಾಡುತ್ತದೆ. ಹೀಗಾಗಿ ಒಲವು ನೋವುಗಳೆರೆಡೂ ವ್ಯಕ್ತವಾಗುವುದಕ್ಕಿಂತ ಮೌನವೇ ಲೇಸೆಂದು ಹೇಳುತ್ತಿವೆ ಎನ್ನುವಲ್ಲಿ ಮೌನ ಬಯಸುವ ಕವಿ ಇಲ್ಲಿ ಮೌನಕ್ಕೆ ವಿಶಾದದ ಛಾಯೆ ಆವರಿಸಿದ್ದನ್ನು ಸೂಚಿಸುತ್ತಾರೆ.
ಮಾತಿನ ಗದ್ದಲಕ್ಕೆ ಮೌನ ನಾಡು ತೊರೆದು ಕಾಡಿನಲ್ಲಿ ನೆಲೆಸಿದೆ ಎನ್ನುವುದನ್ನು ಅದೆಷ್ಟು ಚಂದದಲ್ಲಿ ಹೇಳಿದ್ದಾರೆಂದರೆ ಮನದಲ್ಲಿ ಒಂದು ಆರ್ದ್ರ ಭಾವ ಮೂಡಿ, ಋಷಿಮುನಿಗಳ ಮಂತ್ರಘೋಷಗಳ ಜೊತೆಗಿನ ರಮ್ಯ ಮೌನ ಮತ್ತು ನಂತರದ ದೀರ್ಘ ತಪಸ್ಸಿನ ದಿವ್ಯ ಮೌನ ಎರಡೂ ಓದಿನ ಮುಖಾಂತರ ಅನುಭೂತಿಗೆ ಎಟಕುತ್ತವೆ! ಈ ಅನುಭೂತಿಯ ಅಸಲು ಲಭ್ಯತೆ ವನ್ಯ ಮೃಗಗಳಿಗೆ ಮತ್ತು ಅಲ್ಲಿಯ ಗಿಡ, ಮರ ಬಳ್ಳಿಗಳಿಗೆ! ನಾವು ಮತ್ತದೇ ಮಾತಿನರಮನೆಯ ಗೋಡೆಗಳಿಗೆ ಡಿಕ್ಕಿ ಹೊಡೆಯುತ್ತಾ, ಅದರ ಸದ್ದಿನ ಅಬ್ಬರಕ್ಕೆ ಬೆನ್ನು ತಟ್ಟಿಕೊಳ್ಳುತ್ತಾ, ಕಿವಿ ಮುಚ್ಚಿಕೊಳ್ಳುತ್ತಾ ನಾಡಿನ ನಾಗರಿಕರೆಂಬ ಹಮ್ಮಿನೊಡನೆಯೇ, ಹಳ್ಳಿಗರೆಂಬ ಹುಂಬತನದೊಡನೆಯೇ ಮೌನದ ತಾಣಕ್ಕಾಗಿ, ಅಲ್ಲಿ ಕಾಣಬಹುದಾದ ದೇವರೆಂಬ ಅದ್ಭುತ ಜ್ಞಾನ ಮತ್ತು ಧನ್ಯತೆಯ ಪ್ರತ್ಯಕ್ಷತೆಗಾಗಿ ಹಂಬಲಿಸುತ್ತಾ ಬದುಕುತ್ತೇವೆ.
‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ಮೌನದ ಆಸ್ವಾದನೆಯೂ ಸಹ! ಮಾತಿನ ಮಿತಿ ಅರಿಯದ ನಾವು ಮೌನದ ಸವಿಯನ್ನು ಸವಿಯುವುದನ್ನು ಮರೆತಂತಾಗಿದ್ದೇವೆ. ಅಥವಾ ಮೌನದ ದಿವ್ಯತೆ ಎಲ್ಲರಿಗೂ ದಕ್ಕುವಂಥದ್ದಲ್ಲವೇನೋ... ಅಥವಾ ಮಾತು ತುಂಬಾ ಸಸ್ತಾದಲ್ಲಿ ದೊರೆಯುವಂತೆ ಮೌನ ದೊರೆಯದು ಅನ್ನುವ ಕಾರಣಕ್ಕೂ ಇರಬಹುದು ಮಾತು ಹೆಚ್ಚು ಹೆಚ್ಚು ಬಳಕೆಯಾಗಿ ಸವಕಲಾಗಿರುವುದು! ಬಡವ ಹಸಿವಿನಿಂದ ಬಳಲಿ ಬಸವಳಿದ ಹೊತ್ತಲ್ಲಿ, ಬಡತನವನ್ನು ಮಾತಿನಲ್ಲಿ ವೈಭವೀಕರಿಸುವ ಮನುಷ್ಯನ ಪೊಳ್ಳುತನ ಹಸಿವನ್ನು ನೀಗಿಸಲಾರದು! ಇನ್ನೊಬ್ಬರನ್ನು ಮೋಸಗೊಳಿಸಲು, ಇನ್ನೊಬ್ಬರೆದುರಿಗೆ ಕೊಚ್ಚಿಕೊಳ್ಳಲು, ಇನ್ನೊಬ್ಬರ ಬದುಕ ಆಡಿಕೊಳ್ಳಲು, ಬಳಕೆಯಾಗುವ ಮಾತೆಂಬ ಈ ಸಸ್ತಾ ಸಾಮಾನು, ಮನಗಳ, ಮನೆ ಮನೆಗಳ, ದೇಶ ದೇಶಗಳ ನೆಮ್ಮದಿಯನ್ನೇ ಹಾಳು ಮಾಡಿಬಿಡಬಲ್ಲಂಥ ಅಕ್ಷರಗಳಲ್ಲೂ ಸುಲಭ ಲಭ್ಯ ನೀಚ ಅಸ್ತ್ರ! ಬಹುಶಃ ‘ಅರಿವೇ ಅರಿ’ ಎನ್ನುವ ಘನ ಅರ್ಥದ ನುಡಿಗಟ್ಟು ಸಸ್ತಾ ಆಗಿದ್ದೂ ಮನುಷ್ಯನಿಗೆ ಮಾತಿನ ಚಟದ ವಿಷಯಕ್ಕೆ ಮಾತ್ರವೇ ಅನಿಸುತ್ತದೆ!
‘ಮಾತು ಬಲ್ಲವ’ ಎನ್ನುವ ಮಾತಿಗೆ ಅದೆಷ್ಟೊಂದು ತೂಕ!! ಹಾಗೆ ಮಾತು ಬಲ್ಲವರ ಮಾತುಗಳು, ಕೃತಿಯ ಹಿನ್ನೆಲೆಯಲ್ಲಿರುತ್ತವೆ, ಕೃತಿಯಾಗುತ್ತವೆ, ಕರ್ತೃವಾಗುತ್ತವೆ! ನಮ್ಮ ನಾಡಿನವರದೇ ಉದಾಹರಣೆಯಾಗಿ ಬುದ್ದ ಬಸವ ಗಾಂಧಿಜೀ ಇದ್ದಾರೆ! ನುಡಿದಂತೆ ನಡೆದವರು, ನುಡಿದು ಪ್ರತ್ಯೇಕ ಮುತ್ತಿನಹಾರವಾದವರು. ಈ ಮುತ್ತಿನಹಾರವಾಗಲು ಸೂತ್ರವಾದುದು ಮೌನ! ಗಾಂಧೀಜಿಯವರಿಗೆ ಬುದ್ದನಿಗೆ ಮಾತಿಗಿರುವ ಮೌಲ್ಯ ಗೊತ್ತಿತ್ತು. ಮೌನದ ಮಹತ್ವ ಗೊತ್ತಿತ್ತು. ಹೀಗಾಗಿಯೇ ಅವರುಗಳು ಮೌನದ ಆಶ್ರಯದಲ್ಲಿ ಮಾತನ್ನು ತೂಕದಿಂದ ಬಳಿಸಿದವರು. ಸಮಾಜದ ಸುಧಾರಣೆಗೆ ಕಾರಣರಾದರು. ಅರಿತು ನುಡಿವ, ನುಡಿದಂತೆ ನಡೆವ ಗುಣ ಪರ್ವತದೆತ್ತರಕ್ಕೇರಿಸುತ್ತದೆ ವ್ಯಕ್ತಿತ್ವವನ್ನು. ಅದಕ್ಕೆಂದೇ ಕೆ.ಎಸ್.ಎನ್ ಅವರು ಈ ಕವನದಲ್ಲಿ ಹೇಳಿರುವುದು, ‘ಬಾನಗಲ ಕಣ್ದೆರೆದು ನೋಡಿರಿ, ಇದ್ದನಿಲ್ಲಿ ಮಹಾತ್ಮನು/ಮೌನ ಪರ್ವತ ಮುಡಿಯೊ ತಪ್ಪಲೊ ಕೃತಿಯ ನಂದನವನಗಳು!’
ಕೆ.ಎಸ್.ನರಸಿಂಹಸ್ವಾಮಿಗಳ ಈ ಕವನದಲ್ಲೂ ಮಲ್ಲಿಗೆ ಘಮಘಮಿಸಿದೆ ಮೌನದ ಘಮಲಾಗಿ. ಕವಿ ಮನಸಿನ ರಮ್ಯತೆಯ ಕುರುಹಾಗಿ. ಮೌನವನ್ನ ಕವಿ ಅದೆಷ್ಟು ಚಂದದಿಂದ ಉದಾಹರಿಸುತ್ತಾರೆಂದರೆ, ಪಾದ ಪೂರ್ತಿ ಒತ್ತಿ ಊರಿ ನಡೆದರೆ ಎಲ್ಲಿ ನಿಶ್ಯಬ್ದಕ್ಕೆ ಭಂಗ ಬರುವುದೋ ಎಂಬ ಎಚ್ಚರಿಕೆಯಿಂದ ಹಿಂಬಡ ಎತ್ತಿ, ಪಾದದ ಮುಂಭಾಗವನ್ನಾಧರಿಸಿ ಮೆಲ್ಲ ಮೆಲ್ಲ ನಡೆವಾಗ ಮೂಡುವ ಚಂದ್ರನಾಕಾರದ ಗುರುತಿನಂತೆ, ಅಂದರೆ ಚಂದಿರನ ಇರುವಿನ ಮೂಲಕ ಅವನು ಹೊಮ್ಮಿಸುವ ಬೆಳಕ ಹಿತದಂತೆ ಮೌನವಿದ್ದು, ಅದಕ್ಕೆ ಸಾಥಿಯಾಗಿ ಕೇಳಿಯೂ ಕೇಳಿಸದಂಥ ಗಾಳಿಯ ಗೆಜ್ಜೆಯಂಥ ಮಧುರ ಸದ್ದಿನಂತೆ ಮಾತು ಭಾಸವಾದಾಗ ಮನದಲ್ಲಿ ಮೂಡುವ ಭಾವ, ಸದ್ದು ಮಾಡದೆ ಪರಿಮಳ ಹರಡುವ ಮಲ್ಲಿಗೆಯ ಘಮ ತಿತ್ತಿ ತುಂಬಿ ಧನ್ಯತೆಯನ್ನನುಭವಿಸಿದಂತೆ, ಮಾತು ಮೌನಗಳೆರೆಡೂ ಮಧುರ ಮಧುರ.
ಸದ್ದೇ ಮಾಡದೆ, ಪ್ರಕಟಗೊಳ್ಳದೆ, ನೆಲ ಮುಗಿಲು ಏಕವಾಗಿ ತನ್ನಿರುವನ್ನು ಎಲ್ಲೆಲ್ಲೂ ಕಾಣಿಸುತ್ತಾ, ನಮ್ಮನ್ನೆಲ್ಲ ಕಾಯುವ ಪರಮಾತ್ಮನೆಂಬ ಅಗೋಚರ ಶಕ್ತಿಯ ಸಶಕ್ತವಾದ ಮೌನ ಭಾಷೆಯ ಮುಂದೆ ನಮ್ಮ ಬಡಬಡ ಬಡಬಡಿಸುವ ಮಾತುಗಳು ತೊದಲುನುಡಿಗಳಾಗಿ ಹಾಸ್ಯಾಸ್ಪದಕ್ಕೊಳಗಾಗುತ್ತವೆ ಎನ್ನುತ್ತಾರೆ ಕೆ.ಎಸ್.ಎನ್! ನಮ್ಮನ್ನು ಇದೆಲ್ಲದರಿಂದ ತಪ್ಪಿಸಿ ಗುರುವಾಗಿ ಕಾಯಬೇಕಾದುದೂ ಆ ಪರಮಾತ್ಮನೆಂಬ ಮಹಾತ್ಮನೇ! ಅವ ಕಾಯಬೇಕೆಂದರೆ ಮೊದಲು ಈ ಕಾಯದೊಳಗಿನ ಮನಸು ಮಾಗಬೇಕು, ನಾವು ಅವನಿಗೆ ಶರಣಾಗಬೇಕು. ಆಗಲೇ ಮೌನದ ಸಿದ್ಧಿ! ಮೌನವೆಂದರೆ ತುಟಿ ಹೊಲೆದುಕೊಂಡಿರುವುದಲ್ಲ, ಮೌನವೆಂದರೆ ಹಿಂಸಿಸುವ ಅಸ್ತ್ರವಲ್ಲ. ಮೌನವೆಂದರೆ ಮಾತಿನೊಳಣ ಧ್ಯಾನ! ಮೌನವೆಂದರೆ ಮಂತ್ರಘೋಷಗಳ ನಡುವೆಯೂ ದಕ್ಕುವಂಥ ಸುಮ್ಮಾನ. ಮೌನ ಬಯಸುವ ಈ ಕವನ ಶುರುವಾಗಿದ್ದು ಸಾಮಾನ್ಯ ಮನುಜನ ಸಾಮಾನ್ಯ ನಡತೆಯಿಂದ. ಸಾಗುತ್ತಾ ಹಂತಹಂತವಾಗಿ ತಲುಪಿದ್ದು ಮಾತ್ರ ಎತ್ತರದ ಆಧ್ಯಾತ್ಮದ ಶಿಖರ! ಇನ್ನೂ ನಾನು ಮಾತಾಡ ಹೋದರೆ ಎತ್ತರದಲ್ಲಿನ ತಪಸ್ಸು ಭಂಗಗೊಂಡೀತು! ವಿರಮಿಸುವೆ...
-      ಜಯಲಕ್ಷ್ಮೀ ಪಾಟೀಲ್.

                                                                                    03-01-2015

(ಕೆ ಎಸ್ ನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ  ಕವಿ ರಾಜೇಂದ್ರ ಪ್ರಸಾದ್ ಬರೆಸಿದ ಲೇಖನವಿದು)

Wednesday, May 13, 2015

ಬದುಕ ಬಯಕೆ

ಮುಳ್ಳಾವುಗೆ ಮೇಲಿನ ಕಸರತ್ತು
ನಾಗನರ್ತನ ಧೀಂ ತನನ
ಬದುಕಿದು ನಾಗಬನ
ನುಲಿಯುತ್ತದೆ ನಲಿಯುತ್ತದೆ 
ನಿಲ್ಲಲು ತವಕಿಸಿ ನೋಯುತ್ತದೆ
ಬುಸುಗುಟ್ಟುವ ಬಿಸಿಲು ಬಯಕೆ 
ಸುಡುತ್ತದೆ ತನುವನ್ನ 
ಮನವದೊ ತಣ್ಣಗೆ ಹಿಮ ಕೊರಡು
ಮೈ ಹಿಮವಾದರೆ ಅಗ್ನಿಸ್ಪರ್ಶ
ಮನಸಿಗಾವ ಸಂಸ್ಕಾರ?

                                    - ೦೬ ಮೇ ೨೦೧೫

ಸಾವಧಾನ!



ಏನಿದು ನೂಕುನುಗ್ಗಲು!
ನಿಧಾನ ನಿಧಾನ ಸಾವಧಾನ
ನನಗೇನಿಲ್ಲ
ಧಾವಂತದಲ್ಲಿ ನಿಮಗೇ ಪೆಟ್ಟಾದೀತು
ಅನ್ನುವ ಅಳುಕು ಮತ್ತೇನಿಲ್ಲ
ನಾನಿಲ್ಲೇ ಇರುತ್ತೇನೆ ಬನ್ನಿ
ನೀನು ನಮ್ಮವಳು ಎನ್ನಿ
ಆಲಂಗಿಸಿ, ಇರಿಯಿರಿ
ಬೆನ್ನಿರಿತಗಳು ಹೊಸತಲ್ಲ
ಅಂತೆಯೇ
ಈಗ ನೋಯುವುದಿಲ್ಲ
ಬನ್ನಿ ನನ್ನವರೇ ಬನ್ನಿ
ನಿಧಾನ ಸಾವಧಾನ


- ೨೮ ಏಪ್ರಿಲ್ ೨೦೧೫

ಸರೋವರ

ಬಗ್ಗಡವನ್ನೆಲ್ಲ ತಳಕೆ ತಳ್ಳಿ ಕಸದಿಂದ ರಸ ಸೋಸಿ 
ಅದರಲ್ಲೊಂದಿಷ್ಟು ಹೂಗಳನ್ನರಳಿಸಿಕೊಂಡು 
ತನ್ನ ಪಾಡಿಗೆ ತಾನಿತ್ತು ಶಾಂತವಾಗಿ ತಿಳಿ ನೀರ ಸರೋವರ
ತರಲೆ ಸುಬ್ಬನೊಬ್ಬನಿಗೆ ತರಂಗಗಳ ನೋಡುವ ಬಯಕೆ
ದಡದಿ ನಿಂತು ಕಲ್ಲೊಂದ ಬೀಸಿದ ಸೂಂಯ್ಯೆಂದು 
ಬುಗುರೆಯ ಚಾಟಿಯ ತೆರೆದಿ ಅಡ್ಡಡ್ಡಲಾಗಿ 
ಶಾಂತತೆ ಕಲಕಿ ಕಲ್ಲು ಕೆದಕುತಿರೆ ತಳದ ಕೆಸರ 
ಅಲೆಅಲೆಯಾಗಿ ದಡ ತಲುಪಿ ಮರಳುತಿದ್ದವು 
ನೋವ ಭಾವಗಳು ಕೊಳದ ಮುಖದಲಿ 
ಬೀಸಿದ ಕಲ್ಲು ಎದೆಗೆ ನಾಟಿ ಮುಲುಗತೊಡಗಿತು ಕೊಳ 
ಬಯಸಿದ್ದು ನೆರವೇರಿ ಕಲ್ಲೆಸೆದವನ ಮುಖ ಕಮಲದಂತರಳಿತ್ತು

                                                               - (ಮಾರ್ಚ್ ೨೦ - ೨೦೧೫)

ಪರೀಕ್ಷಾ ಫಲಿತಾಂಶ ಮತ್ತು ಪಾಲಕರು



ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ಮೇಲೆ ಆ ಕ್ಲಾಸಲ್ಲಿರೊ ಮಕ್ಕಳ ಅಪ್ಪ ಅಮ್ಮಂದಿರು ತಮ್ಮ ಮಕ್ಕಳ ಫಲಿತಾಂಶದ ಆತಂಕ ನೀಗಿಕೊಂಡು, ಕೆಲವರು ಖುಷಿಯಲ್ಲಿ, ಕೆಲವರು ಸಮಾಧಾನದಲ್ಲಿ ಇನ್ನೂ ಕೆಲವರು ನಿರಾಸೆಯಲ್ಲಿದ್ದರೆ ಮಕ್ಕಳಿಗೆ ಅವುಗಳದ್ದೇ ಸಂಭ್ರಮ ತಲ್ಲಣಗಳು... ಇನ್ನು ಉಳಿದೆಲ್ಲ ನಮ್ಮಂಥವರಿಗೆ ನಮ್ಮ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ದಿನದ ನೆನಪು. :)

ಅವತ್ತಿನ ದಿನ ಸಂಜೆಯ ಹೊತ್ತಿಗೆ ನಮ್ಮ ಶಾಲೆಯಲ್ಲಿ ರಿಸಲ್ಟ್ ಪಟ್ಟಿ ಬಂದಿತ್ತು. ನಾನು ಗೆಳತಿಯ ಮನೆಯಲ್ಲಿದ್ದೆ. ನಮ್ಮ ಶಾಲೆಯ ಅಟೆಂಡರ್ ಫಲಿತಾಂಶ ತಿಳಿಸಲು ಚಪ್ಪಲಿಯೂ ಧರಿಸದೆ ನಮ್ಮನೆಗೆ ಓಡೋಡಿ ಬಂದು, ಅಪ್ಪ ಅಮ್ಮಂಗೆ ವಿಷಯ ತಿಳಿಸಿ ಅಲ್ಲಿ ನಾನಿಲ್ಲದ್ದು ನೋಡಿ ಕೇಳಿಕೊಂಡು ನನ್ನ ಗೆಳತಿಯ ಮನೆಗೆ ಧಾವಿಸಿದ್ದರು! ಏದುಸಿರು ಬಿಡುತ್ತಾ, ಕಾಲಿಗೆ ನಟ್ಟಿದ್ದ ಮುಳ್ಳನ್ನು ಹುಡುಕಿಕೊಳ್ಳುತ್ತಲೇ ‘ಬೇ, ಬೇ ರಿಜಲ್ಟ್ ಬಂತು!. ನೀವ್ ಪಾಸಾಗೀರಿ’ ಅಂದ್ರು. ನನಗೆ ಖುಷಿಯಾಗುವ ಬದಲು ಅವರು ನನಗಾಗಿ ಬರಿಗಾಲಲ್ಲಿ ಓಡಿ ಬಂದು ಮುಳ್ಳು ನಡಿಸಿಕೊಂಡಿದ್ದು ಕಂಡು ಅಳು ಬಂದುಬಿಟ್ಟಿತು... ನನ್ನ ಅಳು ಕಂಡು ತಾವು ಓಡಿ ಬರುವಾಗ ಮುಳ್ಳು ಚುಚ್ಚಿಸಿಕೊಂಡಿದ್ದೇ ಅಪರಾಧವಾಯ್ತು ಅನ್ನುವಂತೆ "ಹೇ, ಇಲ್ಲ ತಗೀಬೇ, ಏನಾಗಿಲ್ಲ, ಏನಾಗಿಲ್ಲ, ಅನಸ್ತು ಅಷ್ಟ, ನಟ್ಟಿಲ್ಲ’’ ಎಂದು ಸೀದಾ ನಿಂತುಕೊಂಡಿದ್ದು ನನ್ನ ಜನುಮದಲ್ಲೇ ಮರೆಯಲಾಗದ ಘಟನೆ! (ನನ್ನ ಮರೆವು ಇವರ ಹೆಸರನ್ನು ಕಸಿದುಕೊಂಡಿದೆಯಾದ್ರೂ ಚಹರೆಯನ್ನಲ್ಲ! ಸಣ್ಣಗೆ ಐದಡಿ ಮೇಲೊಂದೆರೆಡು ಇಂಚು ಎತ್ತರವಿದ್ದ, ಸಾದುಗಪ್ಪು ಬಣ್ಣದ ಮುಖದಲ್ಲಿ ಸದಾ ಒಂದು ವಿನಮ್ರತೆಯನ್ನು ಡಿಫಾಲ್ಟ್ ಆಗಿ ಹೊಂದಿದಂಥ ಅಕ್ಕರೆಯುಳ್ಳ ಮನುಷ್ಯ) ಈಗಲೂ ಯೋಚಿಸುತ್ತಿರುತ್ತೇನೆ, ಯಾವ ಶಾಲೆಯ ಜವಾನನಾದ್ರೂ ಹೀಗೆ ವಿದ್ಯಾರ್ಥಿನಿಯೊಬ್ಬಳ ಫಲಿತಾಂಶಕ್ಕಾಗಿ ಈ ಪರಿಯಲ್ಲಿ ಖುಷಿಗೊಂಡಿದ್ದು ಇರೋಕೆ ಸಾಧ್ಯವಾ?!? ಅಂತ... ಈಗ ಗೊತ್ತು ನನಗೆ ಅವರ ಈ ಅಕ್ಕರೆಯ ಹಿಂದೆ ನನ್ನಪ್ಪ ಅವರ ಮನೆಯಲ್ಲಿ ಯಾರನ್ನೋ ಬದುಕುಳಿಸಿದ, ಕೈಯಲ್ಲಿ ಕಾಸಿಲ್ಲದಾಗ ಹೊರಗಿನಿಂದ ಔಷಧಿ ತರಲು ಅಷ್ಟಿಷ್ಟು ಹಣ ಕೊಟ್ಟ ಕಾರಣದ ಕೃತಜ್ಞತಾ ಭಾವ ಇದೆ ಅನ್ನೋದು. ಆದ್ರೂ ಯೋಚಿಸ್ತೀನಿ, ಅದಷ್ಟೇ ಆಗಿದ್ದರೆ, ಅವ್ರು ಅಪ್ಪನಿಗಷ್ಟೇ ಸುದ್ದಿ ಮುಟ್ಟಿಸಿ ಮರಳಬಹುದಿತ್ತಲ್ಲ ತಮ್ಮನೆಗೆ! ಊಂಹೂಂ, ನಮ್ಮೆನೆವರೆಗೂ ಓಡೋಡಿ ಬಂದವರು ಅದೇ ವೇಗದಲ್ಲಿ ನಾನಿದ್ದಲಿಗೇ ಬಂದೂ ವಿಷಯ ತಿಳಿಸಿದ್ದರು. ನನಗೆ ವಿಷಯ ತಿಳಿಸುವಾಗ ಅವರ ಕಣ್ಣಲ್ಲಿದ್ದ ಅಪಾರವಾದ ಸಂತಸ ತಮ್ಮನೆಯ ಕೂಸಿನ ಕುರಿತ ಖುಷಿಗೆ ಸಮವಾಗಿತ್ತು! ಅಷ್ಟು ಅಕ್ಕರೆ ತೋರಿಸುವಂಥದ್ದನ್ನೇನು ಮಾಡಿದ್ದೆ ನಾನು?! ಏನೂ ಇಲ್ಲ. ಎಲ್ಲ ಹೈಸ್ಕೂಲಿನ ಹುಡುಗಿಯರಂತೆ ನಾನೂ ಒಂದಿಷ್ಟು ತರ್ಲೆ ಮಾಡ್ಕೊಂಡು, ಆಡ್ಕೊಂಡು, ಒಂದಿಷ್ಟು ಓದುತ್ತಾ, ಎದುರಿಗೆ ಸಿಕ್ಕಾಗ ಅವರನ್ನು ಮಾತಾಡಿಸುತ್ತಾ ಇದ್ದೆ ಅಷ್ಟೆ. ಅಲ್ಲಿಗೆ ನನದೇನೂ ಹೆಚ್ಚುಗಾರಿಕೆಯಿಲ್ಲ, ಆ ಹೆಚ್ಚುಗಾರಿಕೆ ಏನಿದ್ದರೂ ಅವರ ಮಮತಾಮಯಿ ಮನಸ್ಸಿನದ್ದು. ನಿಸ್ವಾರ್ಥ ಪ್ರೀತಿಯದು! ಇಂಥ ಒಂದಿಷ್ಟು ಜನರ ನಿಸ್ವಾರ್ಥ ಪ್ರೀತಿ ನನ್ನ ಪಾಲಿಗೆ ಜೀವನದಲ್ಲಿ ಆಗಾಗ ದೊರಕುತ್ತಲೇ ಇರುವುದನ್ನ ನೋಡಿದಾಗ ಹೋದ ಜನ್ಮದಲ್ಲೇನೋ ಪುಣ್ಯದ ಕೆಲಸ ಮಾಡಿದ್ದೆ ಅಂತನಿಸುತ್ತೆ ಅಂದುಕೊಳ್ಳುತ್ತೇನೆ. ಆ ಎಲ್ಲ ಮನಸುಗಳೂ ಅವರ ಮನೆಗಳೂ ಯಾವಾಗ್ಲೂ ನೆಮ್ಮದಿಯಿಂದಿರ್ಲಿ ಅನ್ನುವ ಹಾರೈಕೆ ನನ್ನದು..
ನಾನು ಕಲಿತ ಶಾಲೆಯಲ್ಲಿ ಇದ್ದ ಮೂರು ಜನ ಹುಡುಗಿಯರಲ್ಲಿ ನಾನೊಬ್ಬಳು ಪಾಸಾಗಿದ್ದೆ. ಪಾಪ ಅವ್ರು ಮುಳ್ಳು ಚುಚ್ಚಿಸಿಕೊಂಡೂ ಕೇರ್ ಮಾಡದೆ ಓಡಿ ಬರುವಷ್ಟರ ಮಟ್ಟಿಗೆ ರ್ಯಾಂಕ್ ಏನೂ ಬಂದಿರ್ಲಿಲ್ಲ ನಾನು. ರ್ಯಾಂಕ್ ಬಿಡಿ ಡಿಸ್ಟಿಂಕ್ಷನ್ನೂ ಅಲ್ಲ ಅದು, ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ! ಅದೂ ಕಾಟಾಕಾಟಿ ೬೧% !!
ಈ ನಮ್ಮ ಶಾಲೆಯ ಅಟೆಂಡರ್ (ಆಗೆಲ್ಲ ಪ್ಯೂನ್ ಅಂತಿದ್ದುದು ಅಲ್ವಾ?)ರ ಅತಿಪ್ರೀತಿಯ ನೆಕ್ಸ್ಟ್ ವರ್ಶನ್ ನನ್ನಪ್ಪ! ಮಿಠಾಯಿಯವರನ್ನ ಕರೆಸಿ ಮನೆ ಪಕ್ಕದಲ್ಲಿ ಒಲೆ ಹೂಡಿಸಿ ದೊಡ್ಡದೊಂದು ಕಡಾಯಿ (ಬಾಣಲೆ)ಯಲ್ಲಿ ದುಂಡು ದುಂಡನೆಯ ಜಿಲೇಬಿ ಕರಿಸಿ, ಇಡೀ ಊರಿಗೇ ಹಂಚಿದ್ದು ಮತ್ತು ಬೆಂಗಳೂರಿನಿಂದ (ಆಗೆಲ್ಲ ಬೆಂಗಳೂರು ಅಂದರೆ ನಮಗೆಲ್ಲಾ ಫಾರಿನ್ ಇದ್ದಂತೆ!) ತಮ್ಮ ಆರ್ಕಿಯಾಲಾಜಿಸ್ಟ್ ಸ್ನೇಹಿತರಿಗೆ ಹೇಳಿ ಆಕಾಶ ಬಣ್ಣದ, ತುಂಬಾ ಮೃದುವಾದ ದುಪ್ಪಟ್ಟಾವುಳ್ಳ ಚೂಡಿದಾರ್ ಸೆಟ್ ತರಿಸಿದ್ದು! ಅದೂ ಜಸ್ಟ್ ಫಸ್ಟ್ ಕ್ಲಾಸ್ ಪಾಸಿಗೆ! :) ನನ್ನ ಬದುಕಿನ ಅಮೃತ ಘಳಿಗೆಗಳಲ್ಲಿ ನನ್ನ ಎಸ್‍ಎಸ್‍ಎಲ್‍ಸಿ ರಿಸಲ್ಟ್ ಸಹ ಒಂದು!:)

ಎಲ್ಲರೂ ಇಂಥ ಒಂದು ಖುಷಿಯನ್ನ, ಸಂಭ್ರಮದ ಘಳಿಗೆಯನ್ನ ತಮ್ಮ ತಮ್ಮ ಮಕ್ಕಳ ಬದುಕ ಉಡಿಗೆ ಹಾಕಬಹುದಲ್ವಾ? smile emoticon ಜಸ್ಟ್ ಪಾಸೋ, ಸೆಕೆಂಡ್ ಕ್ಲಾಸೋ, ಫಸ್ಟ್ ಕ್ಲಾಸೊ, ಮಗು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಾರ್ಕ್ಸ್ ತೆಗೆದಿರುತ್ತೆ. ಇಲ್ಲಾ ಒಂದೆರೆಡು ವಿಷಯಗಳಲ್ಲಿ ನಪಾಸೂ ಆಗಿರುತ್ತೆ. ಹಾಗಂದ ಮಾತ್ರಕ್ಕೆ ಕಡಿಮೆ ಸಾಮರ್ಥ್ಯ ಅನ್ನೋದು ತಪ್ಪು ಅಥವಾ ಅಪರಾಧ ಅಲ್ಲ ಅಲ್ವಾ...? ಮಗು ಕಮ್ಮಿ ಮಾರ್ಕ್ಸ್ ತೆಗೆದ ಯಾ ಫೇಲ್ ಆದ ಹೊತ್ತಲ್ಲಿ ನಮ್ಮ ಮಕ್ಕಳಿಗೆ ನಾವೇ ಆಸರೆಯಾಗದಿದ್ದಲ್ಲಿ ಹೇಗೆ? ಅವರಿಗೆ ಪ್ಲೀಸ್ ಏನೂ ಅನ್ಬೇಡಿ, ಮಕ್ಕಳಲ್ಲಿ ವಿನಾ ಕಾರಣದ ಗಿಲ್ಟ್ ಹುಟ್ಟೊ ಹಾಗೆ ಮಾಡಬೇಡಿ. ಅವರ ಮಾನಸಿಕ ತಾಕತ್ತು ನೀವಾಗಿ. ಮುಂದಿನ ದಿನಗಳನ್ನು ಆ ತಾಕತ್ತಿನೊಂದಿಗೆ ಮಕ್ಕಳು ಎದುರಿಸಿ ಉತ್ತೀರ್ಣರಾಗುವಂತಾಗಲಿ. ನಿಮ್ಮ ಮಕ್ಕಳ ಜೊತೆಗಿರಿ ಅಂಕಪಟ್ಟಿಯ ಆ ನಂಬರುಗಳೊಂದಿಗಲ್ಲ.
ಟೆನ್ತ್ ಪರೀಕ್ಷೆ ಕಟ್ಟಿದ್ದ ಎಲ್ಲ ಮಕ್ಕಳ ಭವಿಷ್ಯವೂ ಉಜ್ವಲವಾಗಲಿ ಎಂದು ಹಾರೈಸುವೆ. :)
(ನಿನ್ನೆ ರಾತ್ರಿ ಫೇಸ್‍ಬುಕ್‍ನಲ್ಲಿ ಬರೆದ ಬರಹವಿದು)