Sunday, March 12, 2017

ಹೋಳಿ ಹುಣ್ಣಿಮೆ










ಇಂದು ಹೋಳಿಹುಣ್ಣಿಮೆ, ನಾಳೆ ಬೂದಿ ಚೆಲ್ಲುವ ದಿನ, ಐದನೇಯ ದಿನ ರಂಗಪಂಚಮಿ. ಆದ್ರೆ ನಾವು ಪುರುಸೂತ್ತುಗೇಡಿಗಳು ಬೂದಿಚೆಲ್ಲುವ ದಿನವೆ ಅಂದ್ರೆ ಕಾಮದಹನದ ಮರುದಿನವೇ ಬಣ್ಣ ಆಡುವ ಮೂಲಕ ರಂಗಪಂಚಮಿಯನ್ನಾಚರಿಸುತ್ತೇವೆ. :)


ಹೋಳಿಹುಣ್ಣಿಮೆ ಎಂದ ತಕ್ಷಣ ನನಗೆ ನನ್ನ ಬಾಲ್ಯದ ದಿನಗಳು ರಂಗುರಂಗೀನಾಗಿ ಕಣ್ಮುಂದೆ ಹಲಗಿ ಬಾರಿಸುತ್ತಾ ಕುಣಿಯತೊಡಗಿತ್ತವೆ. ಡಂಕ್ ನಕ್ಕ್ ನಕದಿಕನಕ್ಕ ಡಂಕ ನಕ್ಕ ನಕದಿಕನಕ್ಕ ಡಂಕ್ ನಕ್ಕ ಡಂಕ್ ನಕ್ಕ್ ಡಂಕ್ ನಕ್ಕ್....
ಸಣ್ಣೋಳಿದ್ದಾಗ ಹೋಳಿಹುಣ್ಣಿಮೆಯ ದಿನಗಳಲ್ಲಿ ನಾನು ನನ್ನ ಸಣ್ಣ ಮಾವಂದಿರ ಬಾಲಂಗೋಸಿ! ಅವರೆಲ್ಲ ಹತ್ತು ಹದಿನೈದು ದಿನ ಮುಂಚೆಯೇ ಕಟಗಿ ಕುಳ್ಳು ಕದಿಯಲು ಪ್ಲಾನ್ ಮಾಡಿಕೊಳ್ಳುತ್ತಾ ಕೆಲಸ ಶುರುವಿಟ್ಟುಕೊಳ್ಳುತ್ತಿದ್ದರು. ಹಲಿಗೆ ಬಾರಿಸುವುದೆಂದರೆ ಆಗ ನನಗದೊಂದು ದೊಡ್ಡ ಆಕರ್ಷಣೆ. ಸಣ್ಣಮಾವ ನನ್ನ ಕೈಗೆ ತನ್ನ ಹಲಗೆ ಸಿಗದಂತೆ ಅದನ್ನು ಬಚ್ಚಿಡುತ್ತಿದ್ದ. ಅದನ್ನು ಹುಡುಕಿ, ಉದ್ದುದಕೆ ಎದೆಗಾನಿಸಿಕೊಂಡು, ಅದರ ಕಡ್ಡಿಗಳನ್ನು ಎರಡೂ ಕೈಗಳಲ್ಲಿ ಹಿಡಿದು ಡಂಕಣಕ ಬಾರಿಸಿದರೆ ಅದೆಂಥಾ ಖುಷಿಯಾಗುತ್ತಿತ್ತು ಅಂತೀರಿ! ಆಹಾ! ನಾಲ್ಕಾರು ಬಡಿತ ಆಗಿರುತ್ತಿತ್ತೋ ಇಲ್ಲವೋ ಅದರ ಸದ್ದಿಗೆ ಎಲ್ಲಿದ್ದರೂ ಓಡಿಬಂದು ನನ್ನ ಬೆನ್ನಿಗೆ ಗುದ್ದುತ್ತಿದ್ದ ಮಾವ! ಯಮ್ಮಾಆಆಆ ಅನ್ನೋ ನನ್ನ ಅರಚುವಿಕೆ ಕೇಳಲಾಗದೆ ನನ್ನಜ್ಜಿ ನನಗೂ ಒಂದು ಹಲಗಿ ತೆಗೆಸಿಕೊಡೋರು. ಆಗ ಮಾವ ನನ್ನನ್ನ ಪುಸಲಾಯಿಸಿ ತನ್ನ ಹಳೆಯ ಹಲಗಿಯನ್ನು ನನಗೆ ಒಗಾಯಿಸಲು ನೋಡುತ್ತಿದ್ದ. ಆಗ ಮತ್ತೆ ನನ್ನ ಸೈರನ್ "ಯಮ್ಮಾಆಆಆಆ ಬೇ, ಉಮಿ ನನ್ನ ಹಲಗಿ ಕಸಗೊಳ್ಳಾಕತ್ಯಾನ..." ‘ಸಾಯಿ ನಿಮ್ಮೌರ ಎಲ್ಲಾಕ್ಕೂ ಯಮ್ಮಾಆಆಆ’ ಎಂದು ಬೈಯುತ್ತಾ ಅಂವಾ ಕಾಲ್ಕೀಳುತ್ತಿದ್ದ ಅಲ್ಲಿಂದ. ಸಣ್ಣ ಮಾವನ ಹೆಸರು ಉಮೇಶ. ಮನೆಯ ಮೊದಲ ಮೊಮ್ಮಗು ನಾನಾದ್ದರಿಂದ ಅಚ್ಚೆ ಹೆಚ್ಚಾಗಿ ಕೊನೆಯ ಚಿಕ್ಕಮ್ಮನನ್ನು ಮತ್ತು ಸಣ್ಣಮಾವಂದಿರಿಬ್ಬರನ್ನೂ ಹೆಸರಿನಿಂದಲೆ ಕರೆಯುವಷ್ಟು ಸದರ. ಈಗಲೂ ಈ ಇಬ್ಬರೂ ಮಾವಂದಿರನ್ನು ಹೆಸರಿನಿಂದಲೇ ಕರೆಯುತ್ತೇನೆ. ಚಿಕ್ಕಮ್ಮನಿಗೆ ಮಾತ್ರ ವಿನಾಯಿತಿ ದೊರೆತಿದೆ ನನ್ನ ಉದ್ಧಟನದಿಂದ. :)


ಶಿವರಾತ್ರಿ ಅಮವಾಸ್ಯೆ ಕಳೀತು ಅನ್ನುತ್ತಲೇ ಎಲ್ಲರ ಮನೆಯಲ್ಲೂ ಕುಳ್ಳು ಕಟ್ಟಿಗೆಗೆಗಳನ್ನು ಬಚಾವ್ ಮಾಡಿಕೊಳ್ಳುವ, ಅಡಗಿಸಿಡುವ ಎಚ್ಚರಿಕೆ ಜಾಗೃತವಾಗಿಬಿಡೋದು. ಆದರೇನು ಮನೆಮನೆಯಲ್ಲೂ ಕಾಮನ ಕಳ್ಳರೇ ತುಂಬಿರುತ್ತಿದ್ದರಿಂದ ಹಿರಿಯರು ಅವುಗಳನ್ನು ಅವಿಸಿಡುವುದು, ಈ ಚೋರರು ತಮ್ಮ ಸ್ನೇಹಿತರಿಗೆಲ್ಲ ಅವುಗಳ ಸುಳಿವು ಕೊಟ್ಟು ಮನೆಯವರಿಂದ ಒದೆ ತಿನ್ನೋದು ಸಾಮಾನ್ಯವಾಗಿದ್ದ ದಿನಗಳವು. :) ಹಗಲು ಬಲು ಸಭ್ಯರಂತೆ, ರಾತ್ರಿ ಕಳ್ಳತನ ಮಾಡಿದ್ದು ತಾವಲ್ಲವೇ ಅಲ್ಲ ಅನ್ನುವಂತೆ ಇದೇ ಮಕ್ಕಳು ಮನೆಮನೆಗೆ ಹೋಗಿ ೫-೫ ಇಲ್ಲಾ ೧೧-೧೧ ಕುಳ್ಳುಕಟ್ಟಿಗೆಗಳನ್ನು ಕಾಡಿ ಬೇಡಿ ವಸೂಲಿ ಮಾಡಲು ಬಂದಾಗ, ತಾವೀಗ ಕೊಟ್ಟರೂ ರಾತ್ರಿಯ ಕಳ್ಳತನ ತಪ್ಪಿದ್ದಲ್ಲ ಎಂದು ಗೊತ್ತಿದ್ದೂ ಎಲ್ಲ ಮನೆಯವರೂ ಕೊಡುತ್ತಿದ್ದರು. ಕೊಡದೆ ಬೈದು ಅಟ್ಟುವ ಮನೆಗಳ ಮುಂದೆ ಈ ಟೋಳಿಯ ಹೊಯ್ಕೊಳ್ಳುವಿಕೆ, ಹಲ್ಕಟ್ ಮಾತುಗಳ ಸುರಿಮಳೆ, ಹಲಗಿ ಬಾರಿಸುವಿಕೆ ಇನ್ನೂ ಜೋರಾಗುತ್ತಿತ್ತು. ಅಷ್ಟೇ ಅಲ್ಲ, ಈ ಗುಂಪು ಅಥವಾ ಟೋಳಿಯಲ್ಲಿ ಒಬ್ಬ ಹುಡುಗ ಹೆಣವಾಗುತ್ತಿದ್ದ, ಇನ್ನೊಬ್ಬ ಹುಡುಗ ಸೀರೆ ಉಟ್ಕೊಂಡು ಹೆಣ್ಣಾಗಿರುತ್ತಿದ್ದ (ರತಿ-ಮನ್ಮಥ). ಆ ಹೆಣ ಕಟ್ಟಿಗೆ ಕೊಡದವರ ಮನೆಯ ಗೇಟನ್ನು ತೆರೆದುಕೊಂಡು ಅಂಗಳಕ್ಕೆ ಹೋಗಿ ಲಕ್ಷಣವಾಗಿ ಕಾಲು ಮಡಚಿಕೊಂಡು ಆ ಮನ್ನೆಯ ಕಟ್ಟೆಯ ಮೇಲೆ ಮಲಗುತ್ತಿತ್ತು. ಸೀರೆ ಉಟ್ಟುಕೊಂಡ ಹುಡುಗ ಹಾಡ್ಯಾಡಿಕೊಂಡು ಅಳುತ್ತಾ, ಸತ್ತ ಗಂಡನನ್ನು ವರ್ಣಿಸುತ್ತಾ ಆ ಮನೆಯವರನ್ನ ಆಡಿಕೊಳ್ಳುತ್ತಾ, ಹೊಯ್ಕೊಳ್ತಾ (ಕೋರಸ್ ಥರಾ ಜೊತೆಗೆ ಬಂದ ಹುಡುಗರೂ ಹಲ್ಲುಕಿಸೀತಾ ಹೊಯ್ಕೊಳ್ಳೋರು) ಗೋಳಾಡುವುದನ್ನು ನೋಡಲಾಗದೆ ಕೀಸರಬ್ಯಾಸರಾಗಿಯಾದರೂ ಆ ಮನೆಯವರು ಹಾಳಾಗಿಹೋಗಿ ಎಂದು ಕನಿಷ್ಟ ೫-೫ ಕುಳ್ಳುಕಟ್ಟಿಗೆ ಕೊಟ್ಟು ಕಳಿಸಬೇಕು. ಗೇಟು ತೆಗೆಯದವರ ಮನೆಯ ಮುಂದೆ ಕಲ್ಲು ಮಣ್ಣಿನ ನೆಲದಲ್ಲೂ ಮಲಗಲು ಹಿಂದೆಮುಂದೆ ನೋಡುತ್ತಿರಲಿಲ್ಲ ಈ ಹುಡುಗರು. ಈ ಎಲ್ಲ ಆಟಕ್ಕೆ ಬಗ್ಗದ ಹಿರಿಯರೂ ಇದ್ದರು. ಅವರೆಲ್ಲ ಇವರ ಯಾವ ಸರ್ಕಸ್ಸಿಗೂ ಜಗ್ಗದೆ ಬಗ್ಗದೆ ಮನೆಯ ಅಗುಳಿ ಜಡಿದುಕೊಂಡು ತಾವು ಮನೆಯಲ್ಲಿಲ್ಲ ಎನ್ನುವಂತೆ ಗಪ್ಚುಪ್ ಇದ್ದುಬಿಡುತ್ತಿದ್ದರು. ಅಂಥವರಿಗಾಗಿ ಹೊರಗೆ ಕಾದೂ ಕಾದೂ ಬಸವಳಿದು, ಅವರಿಗೆ ಸಹರ್ಸ ನಾಮಾರ್ಚನೆ ಮಾಡುತ್ತಾ ಮುಂದಿನ ಮನೆಗೆ ಸಾಗುತ್ತಿದ್ದರು. ಮಜಾ ಅನಿಸೋದು ಅಂದ್ರೆ ಅಷ್ಟೆಲ್ಲ ಹಲ್ಕಟ್ ಮಾತುಗಳನ್ನು ಬಾಯಿಪಾಠ ಮಾಡಿದವರಂತೆ ಒದರುವ ಇದೇ ಹುಡುಗರು ತಮ್ಮ ತಮ್ಮ ಮನೆಯ ಸಾಲು ಬಂದ ತಕ್ಷಣ ಬಲು ಸಭ್ಯರಂತೆ ಸೈಲಂಟ್ ಆಗಿ ಬರೀ ಹಲಗಿ ಬಾರಿಸುತ್ತಾ ಕುಣಿಯೋರು. ಅದನ್ನು ಕಂಡು ಸಧ್ಯ ತಮ್ಮ ಮಗ ಹಾಳಾಗಿಲ್ಲ ಉಡಾಳ ಹುಡುಗರ ಜೊತೆ ಸೇರಿ ಅನ್ನೊ ಸಮಾಧಾನ ಅಮ್ಮಂದಿರದಾದರೆ ಅಪ್ಪಂದಿರು ಮನಸಲ್ಲೇ ಮಕ್ಕಳ ಸೋಗನ್ನು ಕಂಡು ನಗುತ್ತಿದ್ದರೋ ಏನೋ. ಅವರೂ ಇದನ್ನೆಲ್ಲ ಮಾಡಿಯೇ ಅಲ್ವಾ ದೊಡ್ಡೋರಾಗಿದ್ದು! :)
ಕಟ್ಟಿಗೆ ಕುಳ್ಳು ಬಚಾವು ಮಾಡಿಕೊಂಡೆವು ಎಂದು ದೊಡ್ಡವರು ನೆಮ್ಮದಿಯಿಂದ ಇರುವಾಗಲೇ ಈ ಕಳ್ಳಕಾಕರ ಗುಂಪು ಅವರ ಮನೆಯ ಬಿದರಿನ ಗೇಟನ್ನೋ, ಕೊಡ್ಡನ್ನೋ (ಕೊರಡು), ಕಂಪೌಂಡನ್ನೋ (ಆಗೆಲ್ಲ ಕೆಲವರು ಸಿಮೆಂಟಿನ ಕಂಪೌಂಡ್ ಬದಲಾಗಿ ಮನೆಯ ಸುತ್ತ ಕಟ್ಟಿಗೆ ನೆಟ್ಟು, ಮುಳ್ಳುತಂತಿಯ ಬೇಲಿ ಹಾಕಿಕೊಂಡಿರುತ್ತಿದ್ದರು), ಇಲ್ಲಾ ರೊಟ್ಟಿ ಮಾಡಿದ ಮೇಲೆ ಹಿತ್ತಲಲ್ಲಿ ನೆನಸಿಟ್ಟ ರೊಟ್ಟಿ ಕೊಮ್ಮಣ್ಗಿಯನ್ನೋ ಲಪಟಾಯಿಸಿ ಅದನ್ನು ಹುಣ್ಣಿಮೆಯವರೆಗೆ ಅಡಗಿಸಿಟ್ಟು, ಹುಡುಕಿಕೊಂಡು ಬಂದವರೆದುರು ಕದ್ದವರು ತಾವಲ್ಲವೇ ಅಲ್ಲ, ರೆಂಟ್ ಕಾಲನಿಯ (ಬಿಜಾಪುರದ ಕೆ.ಎಚ್.ಬಿ ಕಾಲನಿಯಲ್ಲಿ ನಮ್ಮ ಮನೆ. ಅದರ ಪಕ್ಕದಲ್ಲಿರೋದೇ ರೆಂಟ್ ಕಾಲನಿ) ಹುಡುಗರಿರಬೇಕೆಂದು ಸಾಧಿಸಿ ಸುಭಗರಂತಾಡಿ ಕಾಮನನ್ನು ಸುಡುವಾಗ ಅವೆಲ್ಲವನ್ನೂ ಕುಳ್ಳುಕಟ್ಟಿಗೆಯೊಳಗಡಗಿಸಿ ಇಷ್ಟೆತ್ತರ ಪೇರಿಸಿ ಗೋಪುರ ಮಾಡಿ, ಕಾಮದೇವನ ಪಟ ರಚಿಸಿ, ಪೂಜೆ ಮಾಡಿ ಸುಡೋರು. ಕಾಮಣ್ಣನನ್ನು ಸುಡಲು ಬೆಳಗಿನಿಂದ ಅಂಗಣ ಸಿದ್ಧಗೊಳ್ಳುತ್ತಿತ್ತು. ಆಟದ ಮೈದಾನವಾಗಿದ್ದ ಆ ಜಾಗವನ್ನು ಗುಡಿಸಿ, ನೀರು ಹೊಡೆದು ಸುತ್ತಲೂ ಕಟ್ಟಿಗೆ ಊರಿ ಅವುಗಳಿಗೆ ಪರಪರಿಯ ದಾರ ಕಟ್ಟಿ (ಮನೆಯಲ್ಲಿ ಹಿಟ್ಟಿನ ಸೆರೆ ಮಾಡಿಸಿಕೊಂಡು ಬಂದು ಬಣ್ಣ ಬಣ್ಣದ ತ್ರಿಕೋನಾಕಾರದ ಪರಪರಿಯ ಹಾಳೆಗಳನ್ನು ಕತ್ತರಿಸಿಕೊಂಡು ಅವುಗಳನ್ನ ಸಾಲಾಗಿ ಒಂದಂತರದಲ್ಲಿ ದಾರಕ್ಕೆ ಅಂಟಿಸುವ ಕೆಲಸವೂ ಹುಡುಗರದ್ದೇ. ಈಗಿನಂತೆ ಆಗೆಲ್ಲ ರೆಡಿಮೇಡ್ ಸಿಗುತ್ತಿರಲಿಲ್ಲ.) ಸಿಂಗಾರ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಎಲ್ಲರ ಮನೆಯಲ್ಲೂ ನೈವೇದ್ಯದ ಸಿದ್ಧತೆ. ಮನೆಯಲ್ಲಿ ಮಾಡಿದ ನೈವೇದ್ಯಗಳನ್ನು ಆ ಕಟ್ಟಿಗೆಯ ರಾಶಿಯ ಸುತ್ತಲೂ ಇರಿಸಿ, ಕಾಮಣ್ಣನನ್ನು ಪೂಜಿಸಿ ಬೆಂಕಿ ಇಡಲಾಗುತ್ತಿತ್ತು. ಅದರಲ್ಲೂ ಯಾರ ಓಣಿಯ ಬೆಂಕಿ ಎಷ್ಟೆತ್ತರಕ್ಕೇರಿತ್ತು ಅನ್ನೊ ಕಾಂಪಿಟೇಶನ್! ಆಗ ನೋಡಿ ಗೇಟಿಗೇ ಗೇಟನ್ನೇ ಕದ್ದವರು ನಮ್ಮವರಾ ಇಲ್ಲಾ ಪಕ್ಕದ ಓಣಿಯವರಾ ಅನ್ನೋದು ಗೊತ್ತಾಗ್ತಿದ್ದುದು. ಕಿಚ್ಚಿನ ಎದುರು ತಮ್ಮ ಪೌರುಷವನ್ನು ಮೆರೆಯುತ್ತಾ ನಗುವ ಹುಡುಗರೇ ಆ ಮೂಲಕ ಗೊತ್ತುಮಾಡಿಕೊಡುತ್ತಿದ್ದರು ಆಯಾ ಮನೆಯವರಿಗೆ.
ಕಾಮಣ್ಣನನ್ನು ಸುಡುವ ದಿನದವರೆಗೂ ಮಕ್ಕಳು ಹೊಯ್ಕೊಂಡರೆ ಏನೂ ಅನ್ನದ ಮನೆಯ ಹಿರಿಯರು, ತಾವೂ ಸುಡುವ ಜಾಗಕ್ಕೆ ಬಂದು, ಅರ್ಧ ಸಂಕೋಚ, ಅರ್ಧ ನಾಚಿಕೆಯಿಂದ ಬಾಯಿಗೆ ಕೈಹಚ್ಚಿ ಹೊಯ್ಕೊಳ್ಳುವ ಶಾಸ್ತ್ರ ಮಾಡಿ ಮುಂದಿನ ದಿನಗಳು ಸುಖಕರವಾಗಿರಲಿ ಹೊಯ್ಕೊಳ್ಳುವ ಪ್ರಸಂಗ ಬಾರದಿರಲಿ ಎಂದು ಆಶಿಸುತ್ತಿದ್ದರು. ಅವತ್ತೇ ಲಾಸ್ಟ್ ಮುಂದಿನ ಹೋಳಿಹುಣ್ಣಿಮೆಯವರೆಗೂ ಯಾರೂ ಬಾಯಿಗೆ ಕೈಹಚ್ಚುವಂತಿಲ್ಲ. ಅಕಸ್ಮಾತ್ ಬೇರೆ ದಿನಗಳಲ್ಲಿ ಯಾರ ಮನೆಯಲ್ಲಿಯಲ್ಲಾದ್ರೂ ಹಾಗೆ ಹೊಯ್ಕೊಳ್ಳುವ ಸದ್ದು ಕೇಳಿತೋ ಆ ಮನೆಯಲ್ಲಿ ಏನೋ ಅನಾಹುತ ಘಟಿಸಿದೆ ಅಂತಲೇ ಅರ್ಥ. ಹಾಗಿಲ್ಲದೆ ಮಕ್ಕಳು ಮೋಜಿಗೆ ಬಾಯಿಗೆ ಕೈ ಹಚ್ಚಿದರೂ ಅದು ಅಪಶಕುನ ಎಂದು ಭಾವಿಸಲಾಗುತ್ತೆ ಮತ್ತು ಆ (ದೊಡ್ಡ) ಮಕ್ಕಳಿಗೆ ಒದೆ ಗ್ಯಾರಂಟಿ!


ಹೊಯ್ಕೊಂಡ ಬಾಯಿಗೆ ಹೋಳಗಿ ತುಪ್ಪ!
ಕಾಮಣ್ಣನನ್ನು ಸುಟ್ಟ ಮರುದಿನ ಅದೇ ಕಿಚ್ಚನ್ನು ತಂದು ತಮ್ಮನೆಯ ಒಲೆಯನ್ನು ಉರಿಯುವುದು ನಮ್ಮಲ್ಲಿನ ವಾಡಿಕೆ. ಅದೆಷ್ಟು ಕಟ್ಟಿಗೆ ಜಮಾ ಆಗಿರುತ್ತಿತ್ತು ಅಂದರೆ ರಾತ್ರಿ ಹನ್ನೊಂದು ಹನ್ನೊಂದೂವರೆಗೆಲ್ಲ ಉರಿಯತೊಡಗಿದ ಕಾಮಣ್ಣನ ಕಿಚ್ಚು ಮಾರನೇಯ ದಿನ ಹಗಲು ಹತ್ತಾದರೂ ನಿಗಿನಿಗಿ ಅನ್ನುವಷ್ಟು. ಆದರೆ ಅಷ್ಟರೊಳಗೆ ಎಲ್ಲರೂ ನಸುಕಿನಲ್ಲೇ ಬಂದೂ ಬಂದೂ ಕಿಚ್ಚನ್ನು ತಮ್ಮ ಮನೆಗೆ ಒಯ್ಯುತ್ತಿದ್ದರಾದ್ದರಿಂದ ಬೆಳಗಿನ ಎಂಟರ ವೇಳೆಗೆ ಅಲ್ಲಿ ಬೆಚ್ಚನೆಯ ಬೂದಿ ಮಾತ್ರ ಉಳಿದಿರೋದು. ಈ ಮಾರನೇಯ ದಿನವನ್ನು ಬೂದಿ ಚೆಲ್ಲುವ ದಿನ ಅಂತಾರೆ. ಅಂದು ಮನೆಮನೆಯಲ್ಲೂ ಹೋಳಿಗೆ ಊಟ. ಹೊಯ್ಕೊಂಡ ಬಾಯಿಗೆ ಹೋಳ್ಗಿ ತುಪ್ಪಾ ಅನ್ನೊ ಆದರ. ಯಾವುದೇ ಶುಭಕಾರ್ಯಕ್ಕೂ ಪ್ರಶ್ಯಸ್ತವಾದ ದಿನವದು. ಶಿವರಾತ್ರಿ ಕಳೆದ ಮೇಲೆ ಹೋಳಿಹುಣ್ಣಿಮೆ ಆಗುವವರೆಗೂ ಉತ್ತರ ಕರ್ನಾಟಕದಲ್ಲಿ ಯಾವುದೇ ಶುಭಸಮಾರಂಭಗಳು ನಡೆಯುವುದಿಲ್ಲ. ಬೂದಿ ಚೆಲ್ಲುವ ದಿನದಿಂದ ಮೊದಲ್ಗೊಂಡು ಮತ್ತೆ ಸಮಾರಂಭಗಳ ಸಡಗರ ಶುರುವಾಗುತ್ತದೆ.


ಮೊದಲೆಲ್ಲ ರಂಗಪಂಚಮಿ ದಿನದಂದೇ ಬಣ್ಣ ಆಡುತ್ತಿದ್ದರಂತೆ. ನಾನು ಬಣ್ಣ ಆಡುವ ವೇಳೆಗಾಗಲೆ ಅದು ಬೂದಿಚೆಲ್ಲುವ ದಿನಕ್ಕೆ ಬಂದು ನಿಂತಿತ್ತು ಮತ್ತು ರಂಗಪಂಚಮಿಯ ದಿನ ಶಾಸ್ತ್ರಕ್ಕೆನ್ನುವಂತೆ ಗುಲಾಲ್ ಕೆಲವರ ಹಣೆ ಮತ್ತು ಕೆನ್ನೆಗಳನ್ನಲಂಕರಿಸುತ್ತಿತ್ತು. ಬಣ್ಣ ಆಡೋದು ಅಂದ್ರೆ ಈಗಿನಂತೆ ಪ್ಲಾಸ್ಟಿಕ್ ಕವರಿನಲ್ಲಿ ಬಣ್ಣದ ನೀರನ್ನು ತುಂಬಿಸಿ ಬೀಸಿ ಎಸೆದು ನೋಯಿಸುವುದಾಗಿರಲಿಲ್ಲ ಆಗ. ಆಗೇನಿದ್ದರೂ ಓಣಿಓಣಿಗಳಲ್ಲೂ ಗುಲಾಬಿ, ಹಸಿರು, ಜಾಂಬಳಿ, ಕೆಂಪು ಹಳದಿ ಬಣ್ಣಗಳನ್ನು ತುಂಬಿಸಿದ ಡ್ರಮ್ಮುಗಳ ಸಾಲು. ನಮ್ಮಂಥಾ ಚಿಲ್ಟುಗಳನ್ನು ಸೀದಾ ಅದರಲ್ಲಿ ಮುಳುಗೇಳಿಸಿ ಮನೆಗೆ ಕಳಿಸುತ್ತಿದ್ದರು ದೊಡ್ಡ ಹುಡುಗರು. ಅಲ್ಲೂ ತಮ್ಮ ಮನೆಯ ಪುಟ್ಟ ಮಕ್ಕಳನ್ನು ಅದರಿಂದ ಬಚಾವು ಮಾಡುವ ಕಾಳಜಿ ಹುಡುಗರಿಗೆ. ಬಣ್ಣದ ದಿನ ನಾವೆಲ್ಲ ಹುಡುಗಿಯರು ಹಳೆಯ ಪೆಟ್ಟಿಕೋಟ್ ಮೇಲೆ ಇರುತ್ತಿದ್ದೆವು, ಹುಡುಗರು ಗಂಟಿನಲ್ಲಿರುವ ಹಳೆಯ ಅಂಗಿ ಚೊಣ್ಣ ಪ್ಯಾಂಟುಗಳನ್ನು ಹಿರಿದೆಳೆದುಕೊಂಡು ಹಾಕಿಕೊಳ್ಳುತ್ತಿದ್ದರು. ಈಗಿನಂತೆ ಅಥವಾ ಸಿನಿಮಾದಲ್ಲಿ ತೋರಿಸುವಂತೆ ಹೊಚ್ಚಹೊಸ ಬಿಳಿ ಬಿಳಿ ಬಟ್ಟೆಗಳನ್ನು ಒಂದು ದಿನಕ್ಕೆಲ್ಲ ಹಾಕಿಕೊಂಡು ಕಳಚಿ ಎಸೆಯಲು ನಮಗೇನು ಹುಚ್ಚಾ? :) ಆದ್ರೆ ಆಗಲೂ ಈಗಲೂ ಪುಟ್ಟಹುಡುಗಿಯ ಪೆಟ್ಟಿಕೋಟ್ಸ್ ಮಾತ್ರ ಬಿಳಿಬಿಳಿಯೆ. ಒಮ್ಮೆಯಂತೂ ನನ್ನ ಮಾವಂದಿರೇ ನನ್ನನ್ನ ಕುಳ್ಳರಿಸಿ ಲಕ್ಷಣವಾಗಿ ವಾರ್ನಿಸಿನಿಂದ ನನ್ನ ಮುಖಕ್ಕೆ ಮೀಸೆ ದಾಡಿ ಬರೆದು ನಡುವೆ ಬಣ್ಣಗಳಿಂದ ಉಳಿದ ಮುಖವನ್ನು ತುಂಬಿಸಿ ಮನೆಯೊಳಗೆ ಬಿಟ್ಟಾಗ ನನ್ನಜ್ಜಿಯ ಗದರಿಕೆ ‘ನಿಮ್ಮಾರ್ಯಾಗರ ತಂದು! ಏನದು ಹೆಣ್ಣುಹುಡುಗೀಗೆ ಹಿಂಗ ಮಾಡೀರಿ. ಪಾಪ ಎಳೇ ಚರ್ಮ. ಏನರ ಆತಂದ್ರ ಗತಿ ಏನು?!" ಎನ್ನುತ್ತಾ ಕೊಬ್ಬರಿಯೆಣ್ಣೆಯಿಂದ ನನ್ನ ಮುಖ ಕ್ಲೀನ್ ಮಾಡುವಂತೆ ನನ್ನ ದೊಡ್ಡತ್ತೆಗೆ ಹೇಳಿ ಸ್ವಚ್ಛ ಮಾಡಿಸಿದ್ದರು. ಬಣ್ಣ ಸೋರಿಸಿಕೊಂಡು ಮನೆತುಂಬಾ ಓಡಾಡುವ ನಮ್ಮನ್ನು ‘ನಿಮ್ಮ ಹೆಣಾ ಎತ್ಲಿ. ಏನ್ ಆಡ್ಕೋತೀರಿ ಮನಿ ಹೊರಗs ಆಡ್ಕೋರಿ. ಎಷ್ಟ ಸಲಾ ಅಂತ ನೆಲಾ ವರಸ್ಲಿ ನಾ! ಇನ್ನೊಮ್ಮೆ ಮನ್ಯಾಗ ಕಾಲಿಟ್ರ ಒಬ್ಬೊಬ್ರ ಕಾಲ್ ಮುರೀತೀನಿ’ ಎಂದು ನನ್ನ ಚಿಕ್ಕಮ್ಮ ಬಯ್ಯದೆ ಹೋದರೆ ಬಣ್ಣ ಆಡಿದ ಖುಷಿ ಕಂಪ್ಲೀಟ್ ಆಗ್ತಾನೇ ಇರ್ಲಿಲ್ಲ ಮತ್ತಾಕೆ ಯಾವತ್ತೂ ನಮ್ಮನ್ನ ಈ ವಿಷಯದಲ್ಲಿ ನಿರಾಸೆಗೊಳಿಸಲಿಲ್ಲ! :D :)
ಬಣ್ಣ ಆಡೋದು ಕೇವಲ ಅವರವರ ಓಣಿಗಷ್ಟೇ ಸೀಮಿತವಾಗಿರಲಿಲ್ಲ. ಈ ಓಣಿಯ ಟೋಳಿ ಆ ಓಣಿಗೆ ಹೋಗಿ ಅಲ್ಲಿಯವರಿಗೆ ಬಣ್ಣ ಎರಚಿ ಅವರಿಂದ ಬಣ್ಣ ಎರಚಿಸಿಕೊಳ್ಳದೇ ಓಡಿ ಬರುವುದೂ, ಅಕಸ್ಮಾತ್ ಇನ್ನೊಂದು ಓಣಿಯವರು ಯಾರಾದರೂ ಪಾಪದವರು ಕೈಗೆ ಸಿಕ್ಕರೆ ಅವರನ್ನು ಬಣ್ಣಗಳಿಂದ ಅಂದಗೊಳಿಸಿ ಕಳಿಸುವುದೂ ಒಂದು ಮೋಜು. ಅದಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಎದುರಿನವರೂ ಸಜ್ಜಾಗೇ ಇರುತ್ತಿದ್ದರು. ಸಂಜೆ ನಾಲ್ಕರ ಹೊತ್ತಿಗೆ ಮನೆಗೆ ಮರಳಿ ಉಜ್ಜಿ ಉಜ್ಜಿ ತೊಳೆದುಕೊಂಡರೂ ಹೋಗದೆ ಕಿವಿ, ಕತ್ತು, ಕಣ್ಣ ಕೊನೆ, ಅಂಗೈ, ಕಾಲು, ಬೆನ್ನು ಎನ್ನುತ್ತಾ ಸಂದುಗಳಲ್ಲಿ ಅಲ್ಲಲ್ಲಿ ಉಳಿದೇಬಿಡುವ ಬಣ್ಣ ಸಂಪೂರ್ಣ ಹೋಗಲು ವಾರವೇ ಬೇಕಾಗೋದು.


ಬಸುರಿಯಾಗಿದ್ದಾಗ ನಾನು ಆಡಿದ ಬಣ್ಣವೇ ನಾನಾಡಿದ ಕೊನೆಯ ಅದ್ದೂರಿಯ ಬಣ್ಣ... ಡಾಕ್ಟ್ರು ನನಗೆ ಕಟ್ಟುನಿಟ್ಟಿನ ಬೆಡ್‍ರೆಸ್ಟ್ ಹೇಳಿದ್ದನ್ನೂ ಕಡೆಗಣಿಸಿ ಗುಡ್ಡದಂಥಾ ಹೊಟ್ಟೆಯನ್ನು ಹೊತ್ತುಕೊಂಡೇ ಓಣಿ ತಿರುಗಿ ಬಣ್ಣ ಆಡಿದ್ದೆ. :) ನಂತರದ ದಿನಗಳಲ್ಲಿ ಬೇರೆಯವರು ಬಣ್ಣ ಆಡುವುದನ್ನು ನೋಡುತ್ತಾ ಸಂತಸಪಡುತ್ತಿದ್ದೇನೆ. ಈಗ ಪ್ರತೀ ಹೋಳಿಹುಣ್ಣಿಮೆಯಂದು ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ, ನನ್ನ ಹಳಬರಂತೆ ನಾನೂ ”ಏನೇ ಅನ್ರಿ, ಆಗಿನ ದಿನಗೋಳ ಮಾಜಾನ ಬ್ಯಾರೆ’ ಅನ್ನುತ್ತಾ, ಹೊಯ್ಕೊಳ್ಳೋದು ಅಂದ್ರೆ ಅಸಹ್ಯ ಎಂದು ಭಾವಿಸುವ ಸೊ ಕಾಲ್ಡ್ ಸಫೋಸ್ಟಿಕೇಟೆಡ್ ಮನೆಯ ಜನರಿಗಾಗಿ ಹೋಳಿಗೆಯ ತಯಾರಿಯಲ್ಲಿ ತೊಡಗುತ್ತೇನೆ, ಅವರಿಗೆ ಗೊತ್ತಾಗದಂತೆ ಸಣ್ಣದಾಗಿ ಬಾಯಿಗೆ ಕೈಹಚ್ಚಿ ಹೊಯ್ಕೊಂಡು, ಹೊಯ್ಕೊಳ್ಳುವ ಪ್ರಸಂಗಗಳು ವರ್ಷವಿಡೀ ಯಾವತೂ ಬರದಿರಲಿ ಎಂದು ಕಾಮನನ್ನು ಪ್ರಾರ್ಥಿಸುತ್ತೇನೆ. :)


ಚಿತ್ರಕೃಪೆ: ಗೂಗಲ್‍ನಿಂದ ಮಲಯಾಳಂ ಬ್ಲಾಗ್ ಒಂದರಿಂದ ಹೆಕ್ಕಿಂಡಿದ್ದು.

Thursday, March 9, 2017

ಮೈಲಿಗೆ

"ಈ ಜನ್ಮದಲ್ಲಿ ಒಂದೇ ಒಂದು ಬಾರಿಯಾದ್ರೂ ಸ್ವಲ್ಪ ಹೊತ್ತು ಸುಮ್ನೆ ನಿಮ್ಮ ಕೈ ಹಿಡ್ಕೊಂಡು ಕೂತ್ಕೋಬೇಕು ನಾನು. ನಿಮ್ಮೂರಿಗೆ ಬಂದಾಗ ಅದಕ್ಕೆ ಅವಕಾಶ ಮಾಡಿಕೊಡ್ತೀರಾ ಪ್ಲೀಸ್? ಪ್ಲೀಸ್..."

ಮರಳಿ ತನ್ನೂರಿಗೆ ಹೋಗುತ್ತಿದ್ದವಳನ್ನು ಆ ಹತ್ತು ದಿನದಲ್ಲಿ ಇಪ್ಪತ್ತು ಬಾರಿ ಕೇಳಿದ್ದ ಅವನು ಆರ್ದ್ರತೆ ತುಂಬಿದ ಕಣ್ಣು ದನಿಯಲ್ಲಿ. ಆಕೆ ಮುಗುಳ್ನಗುತ್ತಾ ಸುಮ್ಮನಾಗುತ್ತಿದ್ದಳು, ಕೆಲವೊಮ್ಮೆ ಮೆಲ್ಲಗೆ ಹೂಂ ಎನ್ನುತ್ತಿದ್ದಳು.

ಆಕೆ ಊರಿಗೆ ಹೋಗುವ ದಿನ ಕಳಿಸಲು ಬಂದವನು ಕೇಳಿದ, "ನೆನಪಿದೆಯಲ್ವಾ?" ಮತ್ತದೇ ಕೋರಿಕೆಯ ಕಣ್ಣು.

ಮುಂದೆ ತಾವು ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ ಅನ್ನುವ ಕಳವಳಕ್ಕೀಡಾಗಿ, ಅವನ ಕೋರಿಕೆ ಈಡೇರದೇ ಹೋದರೆ... ಎನಿಸಿ, ಬಸ್ ಬಿಡುವ ಮೊದಲು, "ಹೋಗ್ಬರ್ತೀನಿ" ಎನ್ನುತ್ತಾ ಅವನೆದುರು ನಿಧಾನ ಕೈ ಚಾಚಿದಳು ಸಂಕೋಚವನ್ನು ಅದುಮಿಟ್ಟುಕೊಂಡು.

ಚಾಚಿದ ಕೈ ಸೇರಿದ ಅವನ ಅಂಗೈಯನ್ನು ಮೃದುವಾಗಿ ಒತ್ತಿ, ‘ಇಗೋ, ನಿಮ್ಮಾಸೆ ನೆರವೇರಿಸಿದೆ’ ಎನ್ನುವಂತೆ ನಸುನಗುತ್ತಾ ಅವನತ್ತ ನೋಡಿದಳು ಪ್ರೀತಿಯಿಂದ.

ಅವನ ಮುಖದಲ್ಲಿ ಅಸಹ್ಯದ ಝಳ ಕಂಡು ಕೆನ್ನೆಗೆ ಬಾರಿಸಿಕೊಂಡ ಆಘಾತ! ಥಟ್ಟನೆ ಕೈ ಎಳೆದುಕೊಂಡವಳು, ಮುಖದಲ್ಲಿ ಇಂಗ ಹೊರಟ ನಗೆಯನ್ನು ಬಲವಂತವಾಗಿ ಎಳೆದು ನಿಲ್ಲಿಸಿಕೊಂಡಳು. ಬಸ್ ಚಲಿಸಿ ಅವನು ಕಣ್ಣಿಂದ ದೂರಾಗುತ್ತಿದ್ದಂತೆ ಹಿಡಿದಿಟ್ಟ ಕಣ್ಣೀರು ನಗೆಯನ್ನಳಿಸಿತು.

ಅವನ ತಪ್ಪು ಕಲ್ಪನೆಯಿಂದಾಗಿ ನಿರ್ಮಲ ಪ್ರೀತಿಯೊಂದು ವಿನಾಕಾರಣ ಮೈಲಿಗೆಯ ಪಟ್ಟಿಯಲ್ಲಿ ಸೇರಿಹೋಯಿತು...


- ಜಯಲಕ್ಷ್ಮೀ ಪಾಟೀಲ್

Monday, March 6, 2017

ಹಣತೆ

ಹೊತ್ತೆನವ್ವ ಹಣತೆಯೊಂದ ಕಾರಿರುಳ ಸೆರಗಿನಲಿ
ಬೆಳಕ ಮೀಯಿಸುವೆನೆನುತ ಬಂದ ಸೂರ್ಯ ಮಿಂದು ಹೋದನವ್ವ
ಹಣತೆಯೆಂಬ ಸದರ ಅವಗೆ ತೊರೆದು ಹೋದನವ್ವ ನನ್ನ
ಮಡಿಲು ತುಂಬಿತವ್ವ!


ಚಂದ್ರ ತಾರೆಯರ ನಗರ ತೊರೆದು ಸೂರ್ಯನಗರಿಗೆ ಬಂದು
ಸರ್ವರ ಸಾಕ್ಷಿಯಲಿ ಹಣತೆ ಹೆತ್ತೆನವ್ವ, ಸೂರ್ಯಮರಿಯ ಹೆತ್ತೆನವ್ವ!
ಎಣ್ಣೆಯಿಲ್ಲ ನೀರಿಲ್ಲ ಹಸುಗಂದನ ನೆತ್ತಿಯಲಿ
ಉರಿಸಿ ಉಸಿರ ಮೈ ನೆಣವ ಎಣ್ಣೆಯಾಗಿಸಿದೆನವ್ವ


ಅಟ್ಟಿದನವ್ವ ಸೂರ್ಯ ಬಂದು ಉಟ್ಟ ದಟ್ಟಿಯ ಸೆಳೆದು
ಹೊರಗೆ ಅಟ್ಟಿದರವ್ವ ಜನರು ದೂರವಿಟ್ಟರವ್ವ
ತಮವ ಕಳೆದನೆಂದು ಹೊಗಳಿ ಅಟ್ಟಕ್ಕೇರಿಸಿದರು ರವಿಯ
ಒಡಲ ಕಂದನೊಡನೆ ನಾನು ಮೂಲೆ ಸೇರಿದೆನವ್ವ ಇತ್ತ ಮೂಲೆ ಸೇರಿದೆನವ್ವ!


- ಜಯಲಕ್ಷ್ಮೀ ಪಾಟೀಲ್.

Friday, March 3, 2017

ಹೇಳಿ...

ನಿಮ್ಮನೆಯ ಒಲೆಯಲ್ಲಿ ಬೆಕ್ಕು ಮಲಗಿದ್ದು
ನನ್ನಿಂದ ಎನ್ನುವುದಾದರೆ ಹೇಳಿ
ನಿಮ್ಮೋಣಿಯ ನಾಯಿ ಉಪವಾಸ ಸತ್ತಿದ್ದು
ನನ್ನಿಂದ ಎನ್ನುವುದಾದರೆ ಹೇಳಿ

ನಿಮ್ಮ ಪ್ರತಿಭೆ ಪಾಂಡಿತ್ಯ ವಿದ್ವತ್ತನ್ನು ಕಸಿದು ಮೆರೆದು
ಪದಕಗಳ ಬಾಚಿದವಳು ನಾನಾದರೆ ಹೇಳಿ
ನಿಮ್ಮ ಕಷ್ಟದ ಬೆವರಿಗೆ ನನ್ನ ಹೆಸರ ಫಲಕವನಂಟಿಸಿ
ಸುಖವನ್ನನುಭವಿಸುತ್ತಿರುವವಳು ನಾನಾದರೆ ಹೇಳಿ

ನೀವು ಉಸಿರಾಡುವ ಗಾಳಿ ಕಲುಷಿತಗೊಂಡಿದ್ದು
ನನ್ನಿಂದ ಎನ್ನುವುದಾದರೆ ಹೇಳಿ
ನೀವು ಕುಡಿಯುವ ನೀರು ಕೊಚ್ಚೆಯಾಗಿದ್ದು
ನನ್ನಿಂದ ಎನ್ನುವುದಾದರೆ ಹೇಳಿ

ದೇಶ ಒಂದು ಜಾತಿ ಎರಡು ಎಂಬ ಬೇಧ
ಬಗೆದಿದ್ದವಳು ನಾನಾದರೆ ಹೇಳಿ
ತಾಯಿ ಉಣಿಸಿದ ಹಾಲನು ವಿಷವಾಗಿಸಿಕೊಂಡು
ನಿಮ್ಮನ್ನು ಕೊಂದವಳು ನಾನಾದರೆ ಹೇಳಿ

ನಿಮ್ಮ ಕೊಂಕಿನ ಕೊಕ್ಕೆಗೆ ಸಿಗಿಬೀಳುತ್ತೇನೆ
ನಿಮ್ಮ ನೋಟದಲುಗಿಗೆ ನಲಗುತ್ತೇನೆ
ನಿಮ್ಮ ಹಿತ್ತಾಳೆ ಕಿವಿಯ ಲೋಲಾಕಾಗುತ್ತೇನೆ
ನಿಮ್ಮ ದ್ವೇಷದ ಗಾಣಕ್ಕೆ ಕೊರಳೊಡ್ಡುತ್ತೇನೆ

ನಿಮ್ಮ ಕಲ್ಪನೆಗಳಿಗೆ ಹೊಣೆ ನಾನಲ್ಲ
ನಿಮ್ಮ ಹಿತ್ತಾಳೆ ಕಿವಿ ಸದ್ದೂ ನಾನಲ್ಲ
ನಿಮ್ಮ ನೋಟದ ಮಿತಿಯೂ ನಾನಲ್ಲ
ನೀವಂದುಕೊಂಡಂತೆ ನಾನಿರಬೇಕಿಲ್ಲ

- ಜಯಲಕ್ಷ್ಮೀ ಪಾಟೀಲ್

(25 Feb 2016)