Wednesday, May 13, 2015

ಬದುಕ ಬಯಕೆ

ಮುಳ್ಳಾವುಗೆ ಮೇಲಿನ ಕಸರತ್ತು
ನಾಗನರ್ತನ ಧೀಂ ತನನ
ಬದುಕಿದು ನಾಗಬನ
ನುಲಿಯುತ್ತದೆ ನಲಿಯುತ್ತದೆ 
ನಿಲ್ಲಲು ತವಕಿಸಿ ನೋಯುತ್ತದೆ
ಬುಸುಗುಟ್ಟುವ ಬಿಸಿಲು ಬಯಕೆ 
ಸುಡುತ್ತದೆ ತನುವನ್ನ 
ಮನವದೊ ತಣ್ಣಗೆ ಹಿಮ ಕೊರಡು
ಮೈ ಹಿಮವಾದರೆ ಅಗ್ನಿಸ್ಪರ್ಶ
ಮನಸಿಗಾವ ಸಂಸ್ಕಾರ?

                                    - ೦೬ ಮೇ ೨೦೧೫

ಸಾವಧಾನ!



ಏನಿದು ನೂಕುನುಗ್ಗಲು!
ನಿಧಾನ ನಿಧಾನ ಸಾವಧಾನ
ನನಗೇನಿಲ್ಲ
ಧಾವಂತದಲ್ಲಿ ನಿಮಗೇ ಪೆಟ್ಟಾದೀತು
ಅನ್ನುವ ಅಳುಕು ಮತ್ತೇನಿಲ್ಲ
ನಾನಿಲ್ಲೇ ಇರುತ್ತೇನೆ ಬನ್ನಿ
ನೀನು ನಮ್ಮವಳು ಎನ್ನಿ
ಆಲಂಗಿಸಿ, ಇರಿಯಿರಿ
ಬೆನ್ನಿರಿತಗಳು ಹೊಸತಲ್ಲ
ಅಂತೆಯೇ
ಈಗ ನೋಯುವುದಿಲ್ಲ
ಬನ್ನಿ ನನ್ನವರೇ ಬನ್ನಿ
ನಿಧಾನ ಸಾವಧಾನ


- ೨೮ ಏಪ್ರಿಲ್ ೨೦೧೫

ಸರೋವರ

ಬಗ್ಗಡವನ್ನೆಲ್ಲ ತಳಕೆ ತಳ್ಳಿ ಕಸದಿಂದ ರಸ ಸೋಸಿ 
ಅದರಲ್ಲೊಂದಿಷ್ಟು ಹೂಗಳನ್ನರಳಿಸಿಕೊಂಡು 
ತನ್ನ ಪಾಡಿಗೆ ತಾನಿತ್ತು ಶಾಂತವಾಗಿ ತಿಳಿ ನೀರ ಸರೋವರ
ತರಲೆ ಸುಬ್ಬನೊಬ್ಬನಿಗೆ ತರಂಗಗಳ ನೋಡುವ ಬಯಕೆ
ದಡದಿ ನಿಂತು ಕಲ್ಲೊಂದ ಬೀಸಿದ ಸೂಂಯ್ಯೆಂದು 
ಬುಗುರೆಯ ಚಾಟಿಯ ತೆರೆದಿ ಅಡ್ಡಡ್ಡಲಾಗಿ 
ಶಾಂತತೆ ಕಲಕಿ ಕಲ್ಲು ಕೆದಕುತಿರೆ ತಳದ ಕೆಸರ 
ಅಲೆಅಲೆಯಾಗಿ ದಡ ತಲುಪಿ ಮರಳುತಿದ್ದವು 
ನೋವ ಭಾವಗಳು ಕೊಳದ ಮುಖದಲಿ 
ಬೀಸಿದ ಕಲ್ಲು ಎದೆಗೆ ನಾಟಿ ಮುಲುಗತೊಡಗಿತು ಕೊಳ 
ಬಯಸಿದ್ದು ನೆರವೇರಿ ಕಲ್ಲೆಸೆದವನ ಮುಖ ಕಮಲದಂತರಳಿತ್ತು

                                                               - (ಮಾರ್ಚ್ ೨೦ - ೨೦೧೫)

ಪರೀಕ್ಷಾ ಫಲಿತಾಂಶ ಮತ್ತು ಪಾಲಕರು



ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ಮೇಲೆ ಆ ಕ್ಲಾಸಲ್ಲಿರೊ ಮಕ್ಕಳ ಅಪ್ಪ ಅಮ್ಮಂದಿರು ತಮ್ಮ ಮಕ್ಕಳ ಫಲಿತಾಂಶದ ಆತಂಕ ನೀಗಿಕೊಂಡು, ಕೆಲವರು ಖುಷಿಯಲ್ಲಿ, ಕೆಲವರು ಸಮಾಧಾನದಲ್ಲಿ ಇನ್ನೂ ಕೆಲವರು ನಿರಾಸೆಯಲ್ಲಿದ್ದರೆ ಮಕ್ಕಳಿಗೆ ಅವುಗಳದ್ದೇ ಸಂಭ್ರಮ ತಲ್ಲಣಗಳು... ಇನ್ನು ಉಳಿದೆಲ್ಲ ನಮ್ಮಂಥವರಿಗೆ ನಮ್ಮ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ದಿನದ ನೆನಪು. :)

ಅವತ್ತಿನ ದಿನ ಸಂಜೆಯ ಹೊತ್ತಿಗೆ ನಮ್ಮ ಶಾಲೆಯಲ್ಲಿ ರಿಸಲ್ಟ್ ಪಟ್ಟಿ ಬಂದಿತ್ತು. ನಾನು ಗೆಳತಿಯ ಮನೆಯಲ್ಲಿದ್ದೆ. ನಮ್ಮ ಶಾಲೆಯ ಅಟೆಂಡರ್ ಫಲಿತಾಂಶ ತಿಳಿಸಲು ಚಪ್ಪಲಿಯೂ ಧರಿಸದೆ ನಮ್ಮನೆಗೆ ಓಡೋಡಿ ಬಂದು, ಅಪ್ಪ ಅಮ್ಮಂಗೆ ವಿಷಯ ತಿಳಿಸಿ ಅಲ್ಲಿ ನಾನಿಲ್ಲದ್ದು ನೋಡಿ ಕೇಳಿಕೊಂಡು ನನ್ನ ಗೆಳತಿಯ ಮನೆಗೆ ಧಾವಿಸಿದ್ದರು! ಏದುಸಿರು ಬಿಡುತ್ತಾ, ಕಾಲಿಗೆ ನಟ್ಟಿದ್ದ ಮುಳ್ಳನ್ನು ಹುಡುಕಿಕೊಳ್ಳುತ್ತಲೇ ‘ಬೇ, ಬೇ ರಿಜಲ್ಟ್ ಬಂತು!. ನೀವ್ ಪಾಸಾಗೀರಿ’ ಅಂದ್ರು. ನನಗೆ ಖುಷಿಯಾಗುವ ಬದಲು ಅವರು ನನಗಾಗಿ ಬರಿಗಾಲಲ್ಲಿ ಓಡಿ ಬಂದು ಮುಳ್ಳು ನಡಿಸಿಕೊಂಡಿದ್ದು ಕಂಡು ಅಳು ಬಂದುಬಿಟ್ಟಿತು... ನನ್ನ ಅಳು ಕಂಡು ತಾವು ಓಡಿ ಬರುವಾಗ ಮುಳ್ಳು ಚುಚ್ಚಿಸಿಕೊಂಡಿದ್ದೇ ಅಪರಾಧವಾಯ್ತು ಅನ್ನುವಂತೆ "ಹೇ, ಇಲ್ಲ ತಗೀಬೇ, ಏನಾಗಿಲ್ಲ, ಏನಾಗಿಲ್ಲ, ಅನಸ್ತು ಅಷ್ಟ, ನಟ್ಟಿಲ್ಲ’’ ಎಂದು ಸೀದಾ ನಿಂತುಕೊಂಡಿದ್ದು ನನ್ನ ಜನುಮದಲ್ಲೇ ಮರೆಯಲಾಗದ ಘಟನೆ! (ನನ್ನ ಮರೆವು ಇವರ ಹೆಸರನ್ನು ಕಸಿದುಕೊಂಡಿದೆಯಾದ್ರೂ ಚಹರೆಯನ್ನಲ್ಲ! ಸಣ್ಣಗೆ ಐದಡಿ ಮೇಲೊಂದೆರೆಡು ಇಂಚು ಎತ್ತರವಿದ್ದ, ಸಾದುಗಪ್ಪು ಬಣ್ಣದ ಮುಖದಲ್ಲಿ ಸದಾ ಒಂದು ವಿನಮ್ರತೆಯನ್ನು ಡಿಫಾಲ್ಟ್ ಆಗಿ ಹೊಂದಿದಂಥ ಅಕ್ಕರೆಯುಳ್ಳ ಮನುಷ್ಯ) ಈಗಲೂ ಯೋಚಿಸುತ್ತಿರುತ್ತೇನೆ, ಯಾವ ಶಾಲೆಯ ಜವಾನನಾದ್ರೂ ಹೀಗೆ ವಿದ್ಯಾರ್ಥಿನಿಯೊಬ್ಬಳ ಫಲಿತಾಂಶಕ್ಕಾಗಿ ಈ ಪರಿಯಲ್ಲಿ ಖುಷಿಗೊಂಡಿದ್ದು ಇರೋಕೆ ಸಾಧ್ಯವಾ?!? ಅಂತ... ಈಗ ಗೊತ್ತು ನನಗೆ ಅವರ ಈ ಅಕ್ಕರೆಯ ಹಿಂದೆ ನನ್ನಪ್ಪ ಅವರ ಮನೆಯಲ್ಲಿ ಯಾರನ್ನೋ ಬದುಕುಳಿಸಿದ, ಕೈಯಲ್ಲಿ ಕಾಸಿಲ್ಲದಾಗ ಹೊರಗಿನಿಂದ ಔಷಧಿ ತರಲು ಅಷ್ಟಿಷ್ಟು ಹಣ ಕೊಟ್ಟ ಕಾರಣದ ಕೃತಜ್ಞತಾ ಭಾವ ಇದೆ ಅನ್ನೋದು. ಆದ್ರೂ ಯೋಚಿಸ್ತೀನಿ, ಅದಷ್ಟೇ ಆಗಿದ್ದರೆ, ಅವ್ರು ಅಪ್ಪನಿಗಷ್ಟೇ ಸುದ್ದಿ ಮುಟ್ಟಿಸಿ ಮರಳಬಹುದಿತ್ತಲ್ಲ ತಮ್ಮನೆಗೆ! ಊಂಹೂಂ, ನಮ್ಮೆನೆವರೆಗೂ ಓಡೋಡಿ ಬಂದವರು ಅದೇ ವೇಗದಲ್ಲಿ ನಾನಿದ್ದಲಿಗೇ ಬಂದೂ ವಿಷಯ ತಿಳಿಸಿದ್ದರು. ನನಗೆ ವಿಷಯ ತಿಳಿಸುವಾಗ ಅವರ ಕಣ್ಣಲ್ಲಿದ್ದ ಅಪಾರವಾದ ಸಂತಸ ತಮ್ಮನೆಯ ಕೂಸಿನ ಕುರಿತ ಖುಷಿಗೆ ಸಮವಾಗಿತ್ತು! ಅಷ್ಟು ಅಕ್ಕರೆ ತೋರಿಸುವಂಥದ್ದನ್ನೇನು ಮಾಡಿದ್ದೆ ನಾನು?! ಏನೂ ಇಲ್ಲ. ಎಲ್ಲ ಹೈಸ್ಕೂಲಿನ ಹುಡುಗಿಯರಂತೆ ನಾನೂ ಒಂದಿಷ್ಟು ತರ್ಲೆ ಮಾಡ್ಕೊಂಡು, ಆಡ್ಕೊಂಡು, ಒಂದಿಷ್ಟು ಓದುತ್ತಾ, ಎದುರಿಗೆ ಸಿಕ್ಕಾಗ ಅವರನ್ನು ಮಾತಾಡಿಸುತ್ತಾ ಇದ್ದೆ ಅಷ್ಟೆ. ಅಲ್ಲಿಗೆ ನನದೇನೂ ಹೆಚ್ಚುಗಾರಿಕೆಯಿಲ್ಲ, ಆ ಹೆಚ್ಚುಗಾರಿಕೆ ಏನಿದ್ದರೂ ಅವರ ಮಮತಾಮಯಿ ಮನಸ್ಸಿನದ್ದು. ನಿಸ್ವಾರ್ಥ ಪ್ರೀತಿಯದು! ಇಂಥ ಒಂದಿಷ್ಟು ಜನರ ನಿಸ್ವಾರ್ಥ ಪ್ರೀತಿ ನನ್ನ ಪಾಲಿಗೆ ಜೀವನದಲ್ಲಿ ಆಗಾಗ ದೊರಕುತ್ತಲೇ ಇರುವುದನ್ನ ನೋಡಿದಾಗ ಹೋದ ಜನ್ಮದಲ್ಲೇನೋ ಪುಣ್ಯದ ಕೆಲಸ ಮಾಡಿದ್ದೆ ಅಂತನಿಸುತ್ತೆ ಅಂದುಕೊಳ್ಳುತ್ತೇನೆ. ಆ ಎಲ್ಲ ಮನಸುಗಳೂ ಅವರ ಮನೆಗಳೂ ಯಾವಾಗ್ಲೂ ನೆಮ್ಮದಿಯಿಂದಿರ್ಲಿ ಅನ್ನುವ ಹಾರೈಕೆ ನನ್ನದು..
ನಾನು ಕಲಿತ ಶಾಲೆಯಲ್ಲಿ ಇದ್ದ ಮೂರು ಜನ ಹುಡುಗಿಯರಲ್ಲಿ ನಾನೊಬ್ಬಳು ಪಾಸಾಗಿದ್ದೆ. ಪಾಪ ಅವ್ರು ಮುಳ್ಳು ಚುಚ್ಚಿಸಿಕೊಂಡೂ ಕೇರ್ ಮಾಡದೆ ಓಡಿ ಬರುವಷ್ಟರ ಮಟ್ಟಿಗೆ ರ್ಯಾಂಕ್ ಏನೂ ಬಂದಿರ್ಲಿಲ್ಲ ನಾನು. ರ್ಯಾಂಕ್ ಬಿಡಿ ಡಿಸ್ಟಿಂಕ್ಷನ್ನೂ ಅಲ್ಲ ಅದು, ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ! ಅದೂ ಕಾಟಾಕಾಟಿ ೬೧% !!
ಈ ನಮ್ಮ ಶಾಲೆಯ ಅಟೆಂಡರ್ (ಆಗೆಲ್ಲ ಪ್ಯೂನ್ ಅಂತಿದ್ದುದು ಅಲ್ವಾ?)ರ ಅತಿಪ್ರೀತಿಯ ನೆಕ್ಸ್ಟ್ ವರ್ಶನ್ ನನ್ನಪ್ಪ! ಮಿಠಾಯಿಯವರನ್ನ ಕರೆಸಿ ಮನೆ ಪಕ್ಕದಲ್ಲಿ ಒಲೆ ಹೂಡಿಸಿ ದೊಡ್ಡದೊಂದು ಕಡಾಯಿ (ಬಾಣಲೆ)ಯಲ್ಲಿ ದುಂಡು ದುಂಡನೆಯ ಜಿಲೇಬಿ ಕರಿಸಿ, ಇಡೀ ಊರಿಗೇ ಹಂಚಿದ್ದು ಮತ್ತು ಬೆಂಗಳೂರಿನಿಂದ (ಆಗೆಲ್ಲ ಬೆಂಗಳೂರು ಅಂದರೆ ನಮಗೆಲ್ಲಾ ಫಾರಿನ್ ಇದ್ದಂತೆ!) ತಮ್ಮ ಆರ್ಕಿಯಾಲಾಜಿಸ್ಟ್ ಸ್ನೇಹಿತರಿಗೆ ಹೇಳಿ ಆಕಾಶ ಬಣ್ಣದ, ತುಂಬಾ ಮೃದುವಾದ ದುಪ್ಪಟ್ಟಾವುಳ್ಳ ಚೂಡಿದಾರ್ ಸೆಟ್ ತರಿಸಿದ್ದು! ಅದೂ ಜಸ್ಟ್ ಫಸ್ಟ್ ಕ್ಲಾಸ್ ಪಾಸಿಗೆ! :) ನನ್ನ ಬದುಕಿನ ಅಮೃತ ಘಳಿಗೆಗಳಲ್ಲಿ ನನ್ನ ಎಸ್‍ಎಸ್‍ಎಲ್‍ಸಿ ರಿಸಲ್ಟ್ ಸಹ ಒಂದು!:)

ಎಲ್ಲರೂ ಇಂಥ ಒಂದು ಖುಷಿಯನ್ನ, ಸಂಭ್ರಮದ ಘಳಿಗೆಯನ್ನ ತಮ್ಮ ತಮ್ಮ ಮಕ್ಕಳ ಬದುಕ ಉಡಿಗೆ ಹಾಕಬಹುದಲ್ವಾ? smile emoticon ಜಸ್ಟ್ ಪಾಸೋ, ಸೆಕೆಂಡ್ ಕ್ಲಾಸೋ, ಫಸ್ಟ್ ಕ್ಲಾಸೊ, ಮಗು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಾರ್ಕ್ಸ್ ತೆಗೆದಿರುತ್ತೆ. ಇಲ್ಲಾ ಒಂದೆರೆಡು ವಿಷಯಗಳಲ್ಲಿ ನಪಾಸೂ ಆಗಿರುತ್ತೆ. ಹಾಗಂದ ಮಾತ್ರಕ್ಕೆ ಕಡಿಮೆ ಸಾಮರ್ಥ್ಯ ಅನ್ನೋದು ತಪ್ಪು ಅಥವಾ ಅಪರಾಧ ಅಲ್ಲ ಅಲ್ವಾ...? ಮಗು ಕಮ್ಮಿ ಮಾರ್ಕ್ಸ್ ತೆಗೆದ ಯಾ ಫೇಲ್ ಆದ ಹೊತ್ತಲ್ಲಿ ನಮ್ಮ ಮಕ್ಕಳಿಗೆ ನಾವೇ ಆಸರೆಯಾಗದಿದ್ದಲ್ಲಿ ಹೇಗೆ? ಅವರಿಗೆ ಪ್ಲೀಸ್ ಏನೂ ಅನ್ಬೇಡಿ, ಮಕ್ಕಳಲ್ಲಿ ವಿನಾ ಕಾರಣದ ಗಿಲ್ಟ್ ಹುಟ್ಟೊ ಹಾಗೆ ಮಾಡಬೇಡಿ. ಅವರ ಮಾನಸಿಕ ತಾಕತ್ತು ನೀವಾಗಿ. ಮುಂದಿನ ದಿನಗಳನ್ನು ಆ ತಾಕತ್ತಿನೊಂದಿಗೆ ಮಕ್ಕಳು ಎದುರಿಸಿ ಉತ್ತೀರ್ಣರಾಗುವಂತಾಗಲಿ. ನಿಮ್ಮ ಮಕ್ಕಳ ಜೊತೆಗಿರಿ ಅಂಕಪಟ್ಟಿಯ ಆ ನಂಬರುಗಳೊಂದಿಗಲ್ಲ.
ಟೆನ್ತ್ ಪರೀಕ್ಷೆ ಕಟ್ಟಿದ್ದ ಎಲ್ಲ ಮಕ್ಕಳ ಭವಿಷ್ಯವೂ ಉಜ್ವಲವಾಗಲಿ ಎಂದು ಹಾರೈಸುವೆ. :)
(ನಿನ್ನೆ ರಾತ್ರಿ ಫೇಸ್‍ಬುಕ್‍ನಲ್ಲಿ ಬರೆದ ಬರಹವಿದು)