Saturday, June 14, 2008

ರಾಧೆ ಎಲ್ಲಿ ? ತಿಳಿದವರು ಹೇಳುವಿರಾ?...

ರಾಧಾ- ಮಾಧವರ ಪ್ರೀತಿ ಅಮರ, ಮಧುರ . ಯಾರಿಗೆ ಗೊತ್ತಿಲ್ಲ ಹೇಳಿ? ನನ್ನನ್ನು ಕಾಡುವ ಪ್ರಶ್ನೆ ಅಂದರೆ ಕೃಷ್ಣನ ಹೆಸರಿನೊಂದಿಗೆ ಅಂಟಿಕೊಂಡ ರಾಧೆ, ಕೃಷ್ಣ ಅವಳನ್ನು ತೊರೆದು ಹೋದ ನಂತರ ಏನಾದಳು?.... ಅವನ ನೆನಪಲ್ಲೇ ಕೊರಗುತ್ತಾ ಒಂಟಿಯಾಗಿದ್ದಾಳೆ?... ಅವಳೂ ಊರು ತೊರೆದಳೆ?... ಮರಳಿ ತನ್ನ ಗಂಡನೊಂದಿಗೆ ಸಂಸಾರ ನಡೆಸಿದಳೆ?....ಅಥವಾ ......... ಇಲ್ಲವಾದಳೆ?!
ಏನಾದಳು ರಾಧೆ ? ಅಷ್ಟೆಲ್ಲ ರಾಧಾ - ಮಾಧವರ ಪವಿತ್ರ ಅಮರ ಪ್ರೀತಿಯನ್ನು ವರ್ಣಿಸಿ ಬರೆದ ಕವಿ ನಂತರ ಯಾಕೆ ಮೌನವಾದ ರಾಧೆಯ ವಿಷಯದಲ್ಲಿ? ಏನಾದಳು ರಾಧೆ? ದಯವಿಟ್ಟು ಅವಳ ಕುರಿತು ಹೆಚ್ಚಿಗೆ ತಿಳಿದಿದ್ದರೆ ನನಗೆ ತಿಳಿಸುವಿರಾ?
ಸಾಕೆ ರಾಧೆಗೆ ಕೃಷ್ಣನ ಹೆಸರಿನೊಟ್ಟಿಗೆ ಅವಳ ಹೆಸರು ಸೇರಿಸಿ ಕರೆದರೆ? ಬೇಡವೆ ಅವನ ಪ್ರೀತಿ ಬದುಕಿಡೀ? ಸಹಿಸುವಳೆ ರಾಧೆ ತನ್ನ ಹೊರತು ಬೇರೆಯವರನ್ನು ಕೃಷ್ಣ ಪ್ರೀತಿಸುವುದನ್ನು ? ಏನಾದಳು ರಾಧೆ? ...
ಶತಶತಮಾನದಿಂದ ಪರ ಪುರುಷ,ಪರ ಸ್ತ್ರೀ ಯನ್ನು ಪ್ರೀತಿಸುವುದು ಅಥವಾ ಮೊಹಿಸುವುದು ಭಾರತೀಯ ಸಂಪ್ರದಾಯದಲ್ಲಿ ನಿಷಿದ್ಧ ಎನ್ನುವಂತೆ ಬಿಂಬಿಸಿಕೊಂಡು ಬರಲಾಗಿದೆಯಲ್ಲವೇ? ಹಾಗಿದ್ದ ಮೇಲೆ ರಾಧಾ ಮಾಧವರ ಪ್ರೀತಿಯನ್ನು ನಮ್ಮ ಭಾರತಿಯ ಸಂಪ್ರದಾಯ ಇಷ್ಟು ಸುಲಭವಾಗಿ ಸ್ವೀಕರಿಸಿದ್ದು ಹೇಗೆ? ಯಾಕಾಗಿ?... ದಯವಿಟ್ಟು....
ಮತ್ತೊಮ್ಮೆ ಕೇಳುವೆ ರಾಧೆ ಎಲ್ಲಿ? ...

Friday, June 6, 2008

ತೋಚುತ್ತಿಲ್ಲ...


ಅಂತರಂಗದಲಿ ಎಷ್ಟೊಂದು ಹೌದು ಅಲ್ಲಗಳ ನಡುವಿನ ಹೋರಾಟ...
ಇವತ್ತಿನ ಮಟ್ಟಿಗೆ ಕಾಡುತ್ತಿರುವ + & - ಥಿಂಕಿಂಗ್ .
1)
ಬಣ್ಣ ಬಣ್ಣದ ಕನಸುಗಳನು
ಕಂದಮ್ಮಗಳನ್ನಾಗಿಸಿ
ಕಾದಿದ್ದೆ ನಾನು
ಗೆಳೆಯನ ಬರುವಿಗಾಗಿ.
ಬಂದ ಗೆಳೆಯ
ಬರಿ ಮೈಯ ಬಣ್ಣದ
ಕಂದಮ್ಮಗಳ ಕಂಡು
ತೊಡಿಸಿದ ಅವಕೆ
ಬಿಳಿ ಅಂಗಿಯನು
ಬೆಚ್ಚಗಿರಲೆಂದು.
೨)
ಬಣ್ಣ ಬಣ್ಣದ ಕನಸುಗಳನು
ಕಂದಮ್ಮಗಳನ್ನಾಗಿಸಿ
ಕಾದಿದ್ದೆ ನಾನು
ಗೆಳೆಯನ ಬರುವಿಗಾಗಿ.
ಬಂದ ಗೆಳೆಯ
ಬಣ್ಣ ಬಣ್ಣದ
ಕಂದಮ್ಮಗಳ ಕಂಡು
ಬಿಳಿ ಬಟ್ಟೆ ಹೊದೆಸಿದ
ಅವಕೆ...
ಈಗ ನೀವೇ ಹೇಳಿ ಈ ಬಿಳಿ ಬಟ್ಟೆ ಅಂಗಿಯೋ , ಶವದ ಮೇಲ್ ಹೊದಿಕೆಯೋ?


Tuesday, May 27, 2008

ನಾನು ಅಂದ್ರೆ...

ನಮಸ್ಕಾರ.
ಹೌದು ಹೇಳಿಕೊಬೇಕೆನಿಸ್ತಿದೆ ,ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು. ಅದಕ್ಕೂ ಮೊದಲು ನನ್ನ ಕುರಿತು ಸ್ವಲ್ಪದರಲ್ಲಿಯೇ ಹೇಳಿ ಮುಗಿಸಲೇ? ನನ್ನ ಅತ್ಮಿಯರೆಲ್ಲರ ಪ್ರಕಾರ ನಾನು ಎಲ್ಲವನ್ನು ವಿಪರೀತ ಮಾಡುತ್ತೇನೆ. ಎಲ್ಲ ಓವರ್ ಓವರ್!! ಅಂದ್ರೆ ಅತೀ ಅತೀ !!!! ನಿಜ. ಸಂಬಂಧಗಳ ಬಗ್ಗೆ ಗೊಂದಲಗಳಿವೆ, ಸಮಾಜದ ವಿಪರೀತಗಳ ಬಗ್ಗೆ ಹೇವರಿಕೆ ಇದೆ, ಮರ್ಯಾದೆಯ ಮುಖವಾಡದ ಕುರಿತು ಅಸಹ್ಯವಿದೆ ಹಾಗೆಯೇ ಮಗುವಿನ ಮುಗ್ಧತೆ ಮುದ ನೀಡುತ್ತೆ, ಕಾಣದ ಭವಿಷ್ಯದ ಬಗ್ಗೆ ಕೌತುಕವಿದೆ, ಪ್ರಕೃತಿಯ ರಮ್ಯತೆ ಮೋಡಿ ಮಾಡುವುದರ ಜೊತೆಗೆ ಅಚ್ಚರಿಗೊಳಿಸುತ್ತೆ, ಮಳೆ, ಸಂಗೀತದ ತಂಪು ಇಂಪು ಇಷ್ಟ, ಗೆಳೆತನ ಇಷ್ಟ. ಮುಗಿಲಿನಲ್ಲಿ ನಾನಾ ಆಕಾರ ತಾಳುವ ಮೋಡಗಳು ತುಂಬಾ ಇಷ್ಟ, ಬಿಳಿ, ಕೆಂಪು, ಕಪ್ಪು ಬಣ್ಣಗಳು ಇಷ್ಟ . ರಂಗಭೂಮಿ, ಟಿ ವಿ ಸಿರಿಯಲ್ಲುಗಳಲ್ಲಿ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟನೆ ಇಷ್ಟ . ಬದುಕಲ್ಲಿ ನಟನೆ ಕಷ್ಟ ಕಷ್ಟ... ಸಾಕಲ್ಲ ನನ್ನ ಬಗ್ಗೆ ಕೊಚ್ಚಿಕೊಂಡಿದ್ದು?... ಮತ್ತೆ ಬರೀತೀನಿ. ಬರಲೇ...