ಮೊನ್ನೆ ಶನಿವಾರದ ‘ಮುಗುಳ್ನಗೆ’ಯ ಸಂಗೀತ ಸಂಜೆಯ ಕುರಿತು ರಮೇಶ್ ಗುರುರಾಜ್ ಅವರ ವಿಮರ್ಶಾ ಲೇಖನವಿದು.
ಕಳೆದೆರಡು ವರ್ಷಗಳೂ ರಮೇಶ್ ಸರ್ ಹೀಗೇ ವಿಮರ್ಶೆ ಬರೆಯುವ ಮೂಲಕ ನನ್ನಲ್ಲೊಂದು ರಾಗಗಳ ಜ್ಞಾನದ ಬೆಳಕಿಂಡಿ ತೆರೆದು, ಶಾಸ್ತ್ರೀಯ ಸಂಗೀತ ಕೇಳುವ ಬಗೆಯನ್ನು ಹೇಳಿಕೊಟ್ಟವರು ಮತ್ತು ನಮ್ಮನೆಯ ಕಾರ್ಯಕ್ರಮ ಬರಹಗಳಲ್ಲಿ ದಾಖಲೆಗೊಂಡಿದೆ ಎಂಬ ಧನ್ಯತೆ ಹಾಗೂ ಹೆಮ್ಮೆಯ ಗರಿ ಮೂಡಿಸಿದವರು.
ರಮೇಶ್ ಸರ್, `ಮುಗುಳ್ನಗೆ’ಯ ಸಂಗೀತ ಸಂಜೆಗೆ ನಿಮ್ಮ ಬರಹದ ಈ ಶಾಸ್ತ್ರೀಯ ಚೌಕಟ್ಟಿಲ್ಲದಿದ್ದಲ್ಲಿ ಅದು ಅಪೂರ್ಣವೇ ಸರಿ! ಮತ್ತೊಮ್ಮೆ ಸಂಗೀತ ಸುಧೆಯನ್ನು ಬರಹದ ಮೂಲಕ ಉಣಬಡಿಸಿದ್ದಕ್ಕೆ ನಮ್ಮ ಮನೆಯವರೆಲ್ಲರ ತುಂಬು ಹೃದಯದ ಕೃತಜ್ಞತೆಗಳು. ಧನ್ಯೋಸ್ಮಿ ಧನ್ಯೋಸ್ಮಿ!!
ಆರಂಭಕ್ಕೆ ಜಯಲಕ್ಷ್ಮಿ ಪಾಟೀಲರ ಸೋದರನ ಮಗ ಸಂಕಲ್ಪ್ ಹಾಡಲು ಮೈಕ್ ಮುಂದೆ ಕೂತಿದ್ದ. ಬಹುಷಃ ಇದು warmup ಇರಬಹುದು ಎಂದೆನಿಸಿದ್ದ ನಮಗೆ ಅಚ್ಚರಿ ಕಾದಿತ್ತು. ಸಣ್ಣದಾಗಿ ಹಾಡಿ ಮುಗಿಸಬಹುದು ಎಂದುಕೊಂಡಿದ್ದ ನಮಗೆ ಅವನು ಬಾಗೇಶ್ರೀ ರಾಗದಲ್ಲಿ ಬಂದಿಶ್ ಹಾಡಲಿದ್ದಾನೆ ಎಂದು ತಿಳಿದಾಗ, ಫಟಕ್ಕನೆ ಸೀರಿಯಸ್ ಶ್ರೋತೃವಾಗಿ ಬದಲಾದೆ. ಹಾಡುವ ಮೊದಲು ಈ ಉದಯೋನ್ಮುಖ ಕಲಾವಿದ, ತಾನು ಹಾಡುತ್ತಿರುವ ಬಗ್ಗೆ ವಿವರವಾಗಿ ತಿಳಿಸಿಕೊಟ್ಟ. ಇದು ಶ್ರೋತೃಗಳಿಗೆ ಅನುಕೂಲವಾಯಿತು.
"ಕೌನ ಕರತ ತೋರೆ ಬಿನತಿ ಪೆ...." ಬಂದಿಶ್ ಶುರುವಾಯಿತು ಸ್ವರಗಳ ನಡುವಿನ ಓಡಾಟ, ಅವುಗಳ ಮೇಲಿನ ಹಿಡಿತದ (ಇದಕ್ಕೆ ಚಲನ್ ಮತ್ತು ಪಕಡ್ ಎನ್ನುತ್ತಾರೆ) ಬಗ್ಗೆ ಗಮನ ಕೊಡುತ್ತಿರುವುದು ಸ್ಪಷ್ಟವಾಗಿತ್ತು. ಸ್ವರ ವಿಸ್ತಾರದ ಭಾಗದಲ್ಲಿ ಸ್ವಾರಸ್ಥಾನಗಳು ಸಾಕಷ್ಟು ಸ್ಪಷ್ಟವಾಗಿ ಇತ್ತು. ಇನ್ನೂ ಪುಟ್ಟ ಕಲಾವಿದನಾದ್ದರಿಂದ ಶೃತಿಯ ಮೇಲೆ ಹಿಡಿತ ಬರಬೇಕಿದೆ. ಲಯದ ಜೊತೆ ನಡೆಯುವ ಅಭ್ಯಾಸ ಆಗಬೇಕಿದೆ. ಸಂಕಲ್ಪ್ ಜೊತೆ ಕೇದಾರ ಲಿಂಗ ತಬಲಾ ಸಾಥಿಯಾದರೆ ಹಾರ್ಮೋನಿಯಂ ಸಾಥ್ ನೀಡಿದ್ದು ಗುಂಡಪ್ಪ ಕಲ್ಭಾವಿ.
ನಂತರ, ಸಂಕಲ್ಪ್, ಅಕ್ಕನ ವಚನ "ಅರಿಯದವರೊಡನೆ ಸಂಗವ ಮಾಡಿದರೆ" ಹಾಡಿದ. ಇದರಲ್ಲಿನ ಸಾಲು "ಕರ್ಪೂರ ಗಿರಿಯ ಉರಿಯ ಕೊಂಬಂತೆ', ನನಗಂತೂ ಸಾಕಷ್ಟು ನನ್ನದೇ ಅನುಭವಗಳನ್ನು ಮರಳಿ ನೆನಪಿಗೆ ತಂದುಬಿಟ್ಟಿತ್ತು.
ಇದಾದ ಮೇಲೆ ಬಹು ನಿರೀಕ್ಷಿತ, ಸಿತಾರ್ ವಾದನಕ್ಕೆ ವೇದಿಕೆ ಅಣಿಯಾಯಿತು. ಅದ್ಭುತ ಕಲಾವಿದ ಸಂಜೀವ್ ಕೊರ್ತಿ ತಮ್ಮ ಸಿತಾರಿನೊಂದಿಗೆ ವಿಶಿಷ್ಟ ವಿಭಿನ್ನ ಪ್ರಪಂಚ ಸೃಷ್ಟಿಗೆ ಅಣಿಯಾದರು.
ಪ್ರಾರಂಭಕ್ಕೆ ದೇಸ್ ರಾಗದಲ್ಲಿ ನುಡಿಸಿದ ಖ್ಯಾಲ್ ವಿಶಿಷ್ಟ ಶೈಲಿಯ ಚಿತ್ರ ಕಟ್ಟಿಕೊಟ್ಟಿತ್ತು. ಈ ದೇಸ್ ರಾಗದ ಬಗ್ಗೆ ಸ್ವಲ್ಪ ಹೇಳಬೇಕು. ಬಹುಷಃ ನಮ್ಮೆಲ್ಲರಿಗೂ ದೇಸ್ ರಾಗ ಎಂದ ಕೂಡಲೇ ನೆನಪಾಗುವುದು ದೂರದರ್ಶನದಲ್ಲಿ ಬರುತ್ತಿದ್ದ "ಬಜೇ ಸರ್ಗಮ್ ಹರ್ ತರಫ್ ಸೆ ಗೂಂಜ್ ಬನ್ ಕರ್ ದೇಸ್ ರಾಗ್" ಎಂಬ ಹಾಡು. ಹೌದು ಈ ಸುಂದರ ಕೃತಿ ರಚನೆಯಾದದ್ದು ದೇಸ್ ರಾಗದಲ್ಲಿಯೇ. ಖಮಾಜ್ ಥಾಟಿನ ಮೂಲದಿಂದ ಬಂದದ್ದು ಈ ದೇಸ್ ರಾಗ. ಇದು ಔಢವ-ಸಂಪೂರ್ಣ ರಾಗ. ಅಂದರೆ, ಆರೋಹಣದಲ್ಲಿ ೫ ಸ್ವರಗಳು (೫ ಸ್ವರಗಳಿದ್ದರೆ ಔಢವ ಎನ್ನುತ್ತಾರೆ) ಮತ್ತು ಅವರೋಹಣದಲ್ಲಿ ಎಲ್ಲಾ ೭ ಸ್ವರಗಳು (ಅದಕ್ಕೆ ಸಂಪೂರ್ಣ ಎನ್ನುತ್ತಾರೆ) ಪ್ರಯೋಗವಾಗುತ್ತವೆ.
ದೇಸ್ ರಾಗದ ಆಲಾಪದಲ್ಲಿಯೇ ಅದ್ಭುತವಾದ ಮೀಂಡ್ ಗಳ ಮೂಲಕ ಟ್ರಾನ್ಸ್ ಗೆ ಕರೆದೊಯ್ದ ಸಂಜೀವ ಕೊರ್ತಿ, ರಾಗದ ಆಳಕ್ಕೆ ನಮ್ಮನ್ನು ಕರೆದೊಯ್ದರು. ಸಿತಾರ್ ವಾದನ, ಸ್ವರಗಳು ಹೆಜ್ಜೆಯೊಳಗೊಂದು ಹೆಜ್ಜೆ ಇಟ್ಟು ನಡೆದ ಭಾವವನ್ನು ಕಟ್ಟಿಕೊಟ್ಟಿತ್ತು. ರಾಗದ ವಿಸ್ತಾರ, ಧ್ರುತ್ ಲಯದಲ್ಲಿ ಪ್ರಾರಂಭವಾಯಿತು (ಧ್ರುತ್ ಎಂದರೆ ವೇಗದ ನಡಿಗೆ ಮತ್ತು ವಿಲಂಬಿತ್ ಎಂದರೆ ನಿಧಾನ ನಡಿಗೆ). ಕಣ್ಣು ಮುಚ್ಚಿ ಕೇಳುತ್ತಿದ್ದರೆ, ಸ್ವರ ಗುಚ್ಛದಿಂದ ಸ್ವರ ಗುಚ್ಛಕ್ಕೆ ಚಲನ್, ಜಿಂಕೆಯೊಂದು ತನ್ನ ಗುರಿ ಸೇರಲು ಹಾರಿ ಸಾಗುವ ಚಿತ್ರ ಕಟ್ಟಿಕೊಟ್ಟಿತು. ಇದು ನಾನು ಅಂದು ದೇಸ್ ರಾಗ ಕಂಡುಕೊಂಡ ರೀತಿ.
ನಂತರ ಮೂಡಿಬಂದದ್ದು, ಕೀರವಾಣಿ ರಾಗದ ಪ್ರಸ್ತುತಿ. ಕರ್ನಾಟಕ ಸಂಗೀತದಿಂದ ಹಿಂದೂಸ್ತಾನಿ ಸಂಗೀತಕ್ಕೆ ಪ್ರಯಾಣಿಸಿದ್ದು ಎಂದು ಹೇಳಲಾಗುವ ಈ ರಾಗ ಇತ್ತೀಚಿಗೆ ಅಪರೂಪದ ಪ್ರಯೋಗ ಎಂದೇ ಹೇಳಬಹುದು. ಸಂಜೀವ ಕೊರ್ತಿ ಈ ರಾಗದ framework ತುಂಬಾ ಚೆನ್ನಾಗಿ ಕಟ್ಟಿಕೊಟ್ಟರು. ಈ ರಾಗದೊಳಗಿನ ತೀವ್ರಭಾವ ಚೆನ್ನಾಗಿ ಮೂಡಿಬಂತು. ಪ್ರಸ್ತುತಿಯ ಕೊನೆಯಲ್ಲಿ ತಬಲಾದಲ್ಲಿ ಲಯಕಾರಿ (ಒಂದೇ ತಾಳವನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸುವಿಕೆ) ತುಂಬಾ ವಿಶಿಷ್ಟವೆನಿಸುವ ರೀತಿಯಲ್ಲಿ ಇತ್ತು. ಸ್ವಲ್ಪ ಸಂಕೀರ್ಣ ಎನಿಸಬಹುದಾದ ಲಯಕಾರಿ ಈ ತಬಲಾ ಕಲಾವಿದನ ಕೈಚಳಕದಲ್ಲಿ ಸುಂದರ ಗುಚ್ಚವಾಗಿ ಅರಳಿತ್ತು.
ಇಲ್ಲಿಯವರೆಗೂ ಸಂಜೀವ್ ಕೊರ್ತಿ ಶುದ್ಧ ಶಾಸ್ತ್ರೀಯ ಎನಿಸುವ ಪ್ರಪಂಚ ಕಟ್ಟಿಕೊಟ್ಟರೆ, ಮುಂದೆ ಅವರು ತೆರೆದಿಟ್ಟಿದ್ದು ಇನ್ನೊಂದು ವಿಭಿನ್ನ ಪ್ರಪಂಚ. ಅದು ಧುನ್ ಗಳ ಪ್ರಪಂಚ. ನಾವು ಕನ್ನಡದಲ್ಲಿ ಜನಪದವೆಂದು ಹೇಳುವ, ಉತ್ತರ ಭಾರತದ ಲೋಕ್ ಸಂಗೀತ್ ಅನುಭವ ಕೊಟ್ಟ ಈ ಧುನ್ ಗಳು ವಿಶಿಷ್ಟವಾಗಿತ್ತು.
ನೆರೆದಿದ್ದ ಕಲಾ ರಸಿಕರ ಒತ್ತಾಯದ ಮೇರೆಗೆ ನುಡಿಸಿದ್ದು ಮದನ್ ಮೋಹನ್ ಸಂಗೀತ ನಿರ್ದೇಶನದ ವೋ ಕೌನ್ ಥಿ ಚಿತ್ರದ ಲತಾ ಮಂಗೇಶ್ಕರ್ ಹಾಡಿದ್ದ "ಲಗ್ ಜಾ ಗಲೇ, ಕೆ ಫಿರ್ ಯೇ ಹಸೀನ್ ರಾತ್' ಹೋ ನ ಹೋ...." ನಾವೆಲ್ಲಾ ವರ್ಷಗಳಿಂದ ಕೇಳಿದ್ದ ರಾಗ ಸಂಯೋಜನೆ ಮತ್ತು ಲಯದಿಂದ ಭಿನ್ನವಾಗಿ ಪ್ರಸ್ತುತಗೊಂಡ ಈ ಹಾಡು ಖುಷಿ ಕೊಟ್ಟಿತ್ತು (ಎಲ್ಲೋ ಓದಿದ ನೆನಪು... ಮದನ್ ಮೋಹನ್ ಅವರಿಗೆ ಸಿತಾರ್ ತುಂಬಾ ಇಷ್ಟವಿತ್ತಂತೆ. ಹೀಗಾಗಿ ಸಾಧ್ಯವಿದ್ದಲ್ಲೆಲ್ಲಾ ತಮ್ಮ ರಾಗ ಸಂಯೋಜನೆಯಲ್ಲಿ, ಸಿತಾರ್ ಬಳಸಿಕೊಳ್ಳುತ್ತಿದ್ದರಂತೆ)
ಪ್ರಸ್ತುತಿಯನ್ನು ಚುರುಕುಗೊಳಿಸಿದ್ದು ಕಾಫಿ ರಾಗದ ಛಾಯೆಯಿದ್ದ ಠುಮ್ರಿ. ಸಾಮಾನ್ಯವಾಗಿ, ಹಿಂದೂಸ್ತಾನಿ ಸಂಗೀತದಲ್ಲಿ,ಹೋಳಿ ವರ್ಣನೆಗೆ ಕಾಫಿ ರಾಗ ಬಳಸುವ ಪದ್ಧತಿ ಇದೆ. ಹೀಗಾಗಿ ಇಲ್ಲಿ ಪ್ರಸ್ತುತಪಡಿಸಿದ ಠುಮ್ರಿ ಮತ್ತು ಹೋಳಿ ಛಾಯೆ ವಿಶಿಷ್ಟ ಎನಿಸಿತು.
ಸಂಜೀವ ಕೊರ್ತಿ ತಮ್ಮ ಸಂಗೀತ ಸುಧೆಯ ಕೊನೆಗೆ ತರಾನ ನುಡಿಸಿದರು. ಹಿಂದೂಸ್ತಾನಿ ಸಂಗೀತದ ತರಾನ, ಕರ್ನಾಟಕ ಸಂಗೀತದ ತಿಲ್ಲಾನ ಎರಡೂ ಒಂದೇ ನಾಣ್ಯದ ಮುಖಗಳು. ಯಾವುದೇ ಪದಗಳ ಪ್ರಯೋಗವಿಲ್ಲದೇ, ಬರೀ syllableಗಳ ಮೂಲಕ ಕಟ್ಟಿಕೊಡುವ ಒಂದು ವಿಶಿಷ್ಟ ಪ್ರಕಾರ ಇದು. ಯಮನ್ ರಾಗದಲ್ಲಿ ಪ್ರಸ್ತುತಗೊಂಡ ಈ ತರಾನದಲ್ಲಿ ವಿಶಿಷ್ಟವೆನಿಸಿದ್ದು ಸಿತಾರ್ ಮತ್ತು ತಬಲಾ ನಡುವಿನ ಸವಾಲ್ ಜವಾಬ್.
ಇವರಿಗೆ ತಬಲಾ ಸಾಥ್ ನೀಡಿದ ಕಲಾವಿದ ಅಮಿತ್ ಪಳಗುತ್ತಿರುವ ಕೈ. ತಿಹಾಯಿಗಳು ಸರಾಗವಾಗಿ ಮೂಡಿಬರುತ್ತಿದ್ದವು.
ಇದಿಷ್ಟು ಒಂದು ತೂಕವಾದರೆ, ಅದಕ್ಕೆ ಕಳಶಪ್ರಾಯದಂತೆ ಮೂಡಿಬಂದಿದ್ದು ಸಂಜೀವ ಕೊರ್ತಿಯವರ ಸಹೋದರ ಪ್ರಸನ್ನ ಕೊರ್ತಿಯವರ ಗಾಯನ. ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪ್ರಸನ್ನ ಕೊರ್ತಿ ಮೂಲತಃ ಕಿರಾನಾ ಘರಾನಾದ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡವರು (ಈ ಘರಾನಾಗಳ ಬಗ್ಗೆ ಒಂದು ಲೇಖನವನ್ನೇ ಬರೆಯಬಹುದು. ಅಷ್ಟು ವಿಶಾಲವಾದ ಪ್ರಪಂಚ ಘರಾನಾಗಳದ್ದು).
ಪ್ರಸನ್ನ ಮೊದಲಿಗೆ ಹಾಡಿದ್ದು ಜೋಗ ಜೋಗ್ ರಾಗ. ಅತ್ರೌಲಿ ಘರಾಣೆಯ ಮೆಹಬೂಬ್ ಖಾನ್ ರಚಿಸಿದ್ದೆನ್ನಲಾದ (ಸ್ಪಷ್ಟವಾದ ಸಾಕ್ಷ್ಯಗಳಿಲ್ಲ) ಜೋಗ್ ರಾಗ, ದೇಸ್ ರಾಗದಂತೆ ಖಮಾಜ್ ಥಾಟ್ ಮೂಲದ ರಾಗ. "ಸಾಜನ್ ಮೊರ ಘರ್ ಆಯೇ... ಮನ್ ಅತಿ ಸುಖ್ ಪಾಯೇ...." . ಮೊದಲು ರಾಗದ ಲಕ್ಷಣವನ್ನು ಚೆಂದದಿಂದ ಕಟ್ಟಿಕೊಟ್ಟ ಪ್ರಸನ್ನ ಕೊರ್ತಿ, ನಂತರದಲ್ಲಿ ರಾಗವನ್ನು ಮನ ಮುಟ್ಟುವಂತೆ ಪ್ರಸ್ತುತ ಪಡಿಸಿದರು.
ದಾಸ ಸಾಹಿತ್ಯದ, ಕೊನೆಯೇ ಇಲ್ಲದ ಭಂಡಾರದಲ್ಲಿ, ಎಲೆ ಮರೆಯ ಕಾಯಿಯಂತೆ, ಜನರಿಗೆ ಅಷ್ಟಾಗಿ ಪರಿಚಯವಿಲ್ಲದ ಸುರೇಂದ್ರದಾಸರು ರಚಿಸಿದ ಕೃತಿ "ತಾನೇ ಗೋಕುಲಕೆ ಬಂದ....ಶಿವ ಭವಭಯ ಹರ....". ಕೃಷ್ಣನನ್ನು ನೋಡಲು ಸಾಕ್ಷಾತ್ ಶಿವನೇ ಕೈಲಾಸದಿಂದ ಇಳಿದುಬಂದ ಎನ್ನುವು ಅದ್ಭುತವಾದ ಮತ್ತು ಅತಿ ವಿಶಿಷ್ಟವಾದ ಕಲ್ಪನೆ ಈ ಕೃತಿಯ ವಸ್ತು. ಇದುವರೆಗೂ ನಾನು ಕೇಳಿದ ದಾಸಸಾಹಿತ್ಯಕ್ಕಿಂತ ತುಂಬಾ ವಿಭಿನ್ನವಾದ ಆದರೆ ಅಷ್ಟೇ ಕುತೂಹಲಕಾರಿಯಾದ ರಚನೆ ಇದು. ಕೆಂಭಾವಿಯಲ್ಲಿ ಇವತ್ತಿಗೂ ವಾಸವಾಗಿರುವ ಸುರೇಂದ್ರದಾಸರ ರಚನೆಗಳಲ್ಲಿ ಬರುವ ಅಂಕಿತ "ಕೆಂಭಾವಿ ಭೀಮನೊಡೆಯ".
ಪ್ರಸನ್ನರು ಹಾಡಿದ ಬಸವಣ್ಣನ ವಚನ "ಎನ್ನ ಹೆಳವನ ಮಾಡಯ್ಯ....." ಮೇಲ್ನೋಟಕ್ಕೆ ವಿಚಿತ್ರವೆಂಬಂತೆ ಕಂಡರೂ, ಮನಸ್ಸನ್ನು ಅತ್ತಿತ್ತ ಹೋಗದಂತೆ, ಶಿವನಲ್ಲೇ ನೆಲೆ ನಿಲ್ಲುವಂತೆ ಹೆಳವನ ಮಾಡೆಂಬ ಕೋರಿಕೆ ಒಳಗೊಂಡಿದೆ.
ಪುರಂದರ ದಾಸರ ಕೃತಿಗಳಲ್ಲಿ ಕೃಷ್ಣನ ಲೀಲೆಗಳಿಗೆ ಅದೆಷ್ಟು ಬಣ್ಣಗಳಿವೆಯೋ !! ಅಂಥಾ ಕೃತಿಗಳಲ್ಲೊಂದು "ಆಡಿದನೋಕುಳಿಯ". ಪ್ರಸ್ತುತಿ ಚೆನ್ನಾಗಿತ್ತು. ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು (ಯಾವುದೇ ಹಾಡಿನ ಪ್ರಸ್ತುತಿ ಸಾರ್ಥಕತೆ ಕಾಣುವುದು ಈ ರೀತಿಯ ದೃಶ್ಯಗಳನ್ನು ಕಣ್ಣ ಮುಂದೆ ತಂದಾಗ ಮಾತ್ರ ಎನ್ನುವುದು ನನ್ನ ಅಭಿಪ್ರಾಯ)
ಬಾಜೇ ರೇ ಮುರಲಿಯಾ ಬಾಜೇ..... ಈ ಹಾಡು ಕೃಷ್ಣ ಕೊಳಲು ನೃತ್ಯ ಗೋಪಿಕೆಯರು ಇವುಗಳ ಅವಿನಾಭಾವವನ್ನು ಸುಂದರವಾಗಿ ಬಿಡಿಸಿತ್ತು. "ಮುರಲಿಯಾ" ಎನ್ನುವ ಪದವೊಂದನ್ನೇ ವಿಭಿನ್ನ ಛಾಯೆಗಳಲ್ಲಿ ಪ್ರಸ್ತುತ ಪಡಿಸಿದ್ದು ಸಂತಸದಾಯಕವಾಗಿತ್ತು.
ಸಂಗೀತ ಸಂಜೆಯ ಕೊನೆಗೆ ಈ ವಿಶಿಷ್ಟ ಕಲಾವಿದ ಹಾಡಿದ್ದು ಸಂಪೂರ್ಣ ಆಧ್ಯಾತ್ಮ. ದೇಹ ಮತ್ತು ಆತ್ಮಗಳ ಕುರಿತಾದ, ಅವುಗಳ ಅಸ್ತಿತ್ವದ ಗುರಿಯನ್ನು ಸಾರುವ "ಅಸ್ಥಿಪಂಜರ ದೋಳ್ ಕಣ್ ಮುಚ್ಚಿ ಎಂದು ಆರಂಭವಾಗುವ ಸುರೇಂದ್ರದಾಸರ ಕೃತಿ ಭಾವದ ಮಾಯೆ, ಭಗವಂತನ ಸಾನ್ನಿಧ್ಯಕ್ಕೆ ತಹತಹಿಸುವ ಆತ್ಮ ಇದನ್ನು ಸುಂದರವಾಗಿ ಕಟ್ಟಿ ಕೊಟ್ಟಿತ್ತು. ಆತ್ಮಕ್ಕೆ ಹಕ್ಕಿಯ ರೂಪ ಕೊಟ್ಟಿದ್ದು ವಿಶೇಷ ಎನಿಸಿತ್ತು.
ತಬಲಾ ಸಾಥಿಯಾಗಿ ಅಮಿತ್ ಮತ್ತು ಹಾರ್ಮೋನಿಯಮ್ ಸಾಥಿಯಾಗಿ ರೋಹಿತ್ ಲಯಬದ್ಧವಾಗಿ, ಅಷ್ಟೇ ಚಾಕಚಕ್ಯತೆಯಿಂದ ತಮ್ಮ ಪಾಲನ್ನು ನಿರ್ವಹಿಸಿದರು.
ಒಟ್ಟಾರೆ, ಎಂದಿನಂತೆ ಈ ವರ್ಷದ ಅಂತ್ಯವನ್ನು ಕೂಡ ನಿರಾಳತೆಯತ್ತ ಕೊಂಡೊಯ್ದ ಪಾಟೀಲ್ ದಂಪತಿಗಳ ಪ್ರೀತಿಗೆ, ಗೆಳೆತನಕ್ಕೆ, ಶರಣು...ಶರಣು.