ಕಾಯ್ವ ಕೈಯೇ ಕೊಲುವುದಾದರೆ
ಮೊರೆಯಿಡುವುದಿನ್ನಾರಿಗೆ ತಾಯೇ
ಭುವಿ ಅಣುಅಣುವನೂ ಪೊರೆವ ಜೀವಜಲವೇ
ನೀ ಹೀಗೆ ಸ್ಪೋಟಿಸಿದ್ದು ಸರಿಯೇ?!
ಸಿಟ್ಟು ತಾಯಿ ಗಂಗೆ ನಿನ್ನಮೇಲೆನೆಗೆ
ಗೊತ್ತು ಬಿಡೆ ನಗಬೇಡ
ನಿನ್ನ ಸಿಟ್ಟಿನೆದುರು ನನ್ನದು
ಸೊಟ್ಟ ಸೌಟಿನಷ್ಟೆಂದು ಬಲ್ಲೆ ನಾ
ನನ್ನ ಸಿಟ್ಟು ನನಗಷ್ಟೇ ಕುತ್ತು
ನಿನ್ನ ಸಿಟ್ಟಿಗೆ ಜಗ ಒಂದೇ ತುತ್ತು!
ಕಲ್ಲು ಕಾಂಕ್ರೀಟಿನ ಗಟ್ಟಿ ಬಂಗಲೆಗಳನೂ
ಕಾಗದದ ದೋಣಿಯಂತೆ ತೇಲಿಸಿ
ಮಕ್ಕಳಾಟವಾದಿದೆಯಲ್ಲ ಆಗ
ನಿಷ್ಪಾಪಿ ಪ್ರಾಣಿಗಳೂ, ಗಿಡಮರಗಳೂ
ತಡಬಡಿಸಿ ನಿನ್ನ ರಭಸದ ಹರಿಗೋಲಾದವು
ಅಪ್ಪ ಅಮ್ಮಂದಿರ ಜೊತೆಗೆ
ಕೂಸುಕಂದಮ್ಮಗಳೂ ತೇಲಿದವು
ಕಾಣಲಿಲ್ಲವೇನೇ ಗಂಗಾಮಾಯಿ!!?
ಶಿಕ್ಷಿಸುವುದು ಎಂದರೆ ಹೀಗೇನೇ ನನ್ನವ್ವ?!
ನಿನ್ನನ್ನೂ ಕಟ್ಟಿಹಾಕಬಲ್ಲೆವು
ನಾವು ಬಯಸಿದಾಗಲೆಲ್ಲ ನೀ ದೊರೆಯದಿರೆ
ಬಗೆಬಗೆದು ಭಗೀರಥನಂತೆ
ನಿನ್ನ ಹುಡುಕಿ ತರಬಲ್ಲೆವು
ನಮ್ಮ ಅನುಕೂಲಕ್ಕೆ ಸ್ವಚ್ಛತೆಗೆ ಮುಕ್ತಿಗೆ
ನಿನ್ನನ್ನು ಕಕ್ಕಸದ ಕೋಣೆಯಾಗಿಸಬಲ್ಲೆವು
ಎಂಬ ನಮ್ಮ ಅಹಮ್ಮಿಗೆ
ನೀ ಕೊಟ್ಟ ಪೆಟ್ಟೇ ಇದು?!
ಮುನಿಯದಿರು ತಾಯೇ ಕೈ ಮುಗಿವೆ
ಕಣ್ಣಗಲಿಸಿ ಹೆದರಿಸು
ಇದ್ದಲ್ಲಿಯೇ ಅಬ್ಬರಿಸು
ಸಣ್ಣಪುಟ್ಟ ಶಿಕ್ಷೆ ಕೊಡು ಸಾಕು
ಈ ಪುಂಡ ಮಕ್ಕಳನ್ನು ಅಂಕೆಯಲ್ಲಿಡಲು
ಹೀಗೆ ಮೇಲೆ ಕೆಳಗೆ ಏಕವಾಗಿ ಸುರಿಹರಿದು
ಮಕ್ಕಳನೇ ಕಾಗದದ ದೋಣಿಯಾಗಿಸಿ
ಆಟವಾಡುವುದು ತರವೇ….?
ಮುನಿಯದಿರು ತಾಯೇ ಕೈ ಮುಗಿವೆ.
-ಜಯಲಕ್ಷ್ಮೀ ಪಾಟೀಲ್.
(4th August 2013ರಂದು ಸಾಹಿತಿ ಮತ್ತು ಕಲಾವಿದರ ವೇದಿಕೆ ಆಯೋಜಿಸಿದ್ದ ‘ಪ್ರಕೃತಿ ವರವೋ ಅಥವಾ ಶಾಪವೋ?’ ಕಾರ್ಯಕ್ರಮದಲ್ಲಿ ಓದಿದ ಕವನವಿದು.)
8 comments:
ಪ್ರಕೃತಿ ಮುನಿದಾಗ, ಕೈ ಜೋಡಿಸಿ, ಪ್ರಾರ್ಥಿಸುವದನ್ನು ಬಿಟ್ಟು ಬೇರೇನು ಸಾಧ್ಯ? ಹೃದಯವನ್ನು ಮುಟ್ಟುವ ಪ್ರಾರ್ಥನೆಯನ್ನು ರಚಿಸಿದ್ದೀರಿ, ಜಯಲಕ್ಷ್ಮಿಯವರೆ. ನಿಮ್ಮ ಪ್ರಾರ್ಥನೆಯ ಜೊತೆಗೆ ನಾನೂ ಕೈ ಜೋದಿಸುತ್ತಿದ್ದೇನೆ.
ತುಂಬಾ ಚೆನ್ನಾಗಿದೆ... ಪ್ರಕೃತಿ ಮುನಿದರೆ ಎಲ್ಲವೂ ಮುಗಿಯಿತು ಅದರ ಮುಂದೆ ಮನುಷ್ಯ ಏನೇ ಮಾಡಿದರೂ ನಿಲ್ಲುವುದಿಲ್ಲ. ನಿಜಕ್ಕೂ ಮುನಿದವಳನ್ನ ಒಲಿಸಿಕೊಳ್ಳಲೇ ಬೇಕಾಗಿದೆ. ಚೆಂದದ ಸಾಲುಗಳು ಅಕ್ಕಾ ನಿಮ್ಮೊಂದಿಗೆ ನಾವು ಸಹ ಕೈ ಜೋಡಿಸುತ್ತೇವೆ
ಮನ ತಟ್ಟುವಂತಿದೆ, ಪ್ರಕೃತಿಯ ಎದಿರು ವಿಕೃತಿ ಗೆದ್ದೀತೆ..?
praarthane haagene ide...raaga haaki haaDabeku chennaagiratte....
tumbaa chennaagide madam..
ಪ್ರಕೃತಿಯ ಮುಂದೆ ನಾವೇಷ್ಟರವರು ಎನ್ನುವು ಹುಲುಮಾನವ ಅರಿತುಕೊಳ್ಳದೆ ಮೆರೆಯುವುದು ಅನವಾಯಿತಿ. ಆಗೆಲ್ಲ ಮುನಿದ ಪ್ರಕೃತಿ ಸಮತಟ್ಟು ಮಾಡಿಕೊಳ್ಳುವುದು ರೀತಿ!
ಒಳ್ಳೆಯ ಮಾರ್ಮಿಕ ಕವನ. ಭಾಷಾ ಬಳಕೆಯ ಬಗ್ಗೆ ನನ್ನಂತಹ ವಿದ್ಯಾರ್ಥಿಗಳಿಗೆ ಪಾಠ.
Maa... Super...:)
ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.
ತುಂಬಾ ಚೆನ್ನಾಗಿದೆ! ಮನ ಮುಟ್ಟಿತು ನಿಮ್ಮ ಈ ಕವಿತೆ
ನಿನ್ನ ಸಿಟ್ಟಿನೆದುರು ನನ್ನದು
ಸೊಟ್ಟ ಸೌಟಿನಷ್ಟೆಂದು ಬಲ್ಲೆ ನಾ
ನನ್ನ ಸಿಟ್ಟು ನನಗಷ್ಟೇ ಕುತ್ತು
ನಿನ್ನ ಸಿಟ್ಟಿಗೆ ಜಗ ಒಂದೇ ತುತ್ತು!
ಈ ಸಾಲುಗಳಂತೂ ತುಂಬಾ ಇಷ್ಟವಾದವು
ಕಾಯುವವವಳೆ ಮುನಿದರೆ ಬೇಡುವುದು ಯಾರನ್ನ? :(
Post a Comment