Wednesday, August 31, 2016

ಮರಳ ಮೇಲೆ ಬರೆದು ನನ್ನ ಹೆಸರ

ಮರಳ ಮೇಲೆ ಬರೆದು ನನ್ನ ಹೆಸರ ಮರಳಿ ಅಳಿಸದಿರು
ನಿಜ ನುಡಿಯುತಿವೆ ಕಣ್ಣುಗಳು ತುಳುಕುತಿರುವ ಪ್ರೀತಿಯ ತಡೆಹಿಡಿಯದಿರು ||ಪ||

ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ
ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||1||


ಎದುರಾದವರೆಲ್ಲ ಅಶ್ವಿನಿದೇವತೆಗಳಲ್ಲ
ಪ್ರೀತಿಯ ನೋವದು ಬಲು ಅಮೂಲ್ಯ ಅನ್ಯರೆದುರು ಅದನು ತೆರೆದಿಡದಿರು ||2||

ಕಂಡಿದ್ದಕ್ಕೆಲ್ಲ ಕತೆ ಕಟ್ಟುವರು ಕಂಡಕಂಡವರೆಲ್ಲ
ಎಲ್ಲರಿಗೂ ಕಾರಣಗಳ ಅರುಹುತ ಅಲೆಯದಿರು ||3||

ಭಾವನೆಗಳ ನಗರಿಯಲಿ ಈಗ ಆಲಿಕಲ್ಲಿನ ಮುಸಲ ಧಾರೆ
ಹೃದಯವ ಗಾಜಿನ ಪೆಟ್ಟಿಗೆಯಲ್ಲಿಟ್ಟು ಪ್ರದರ್ಶನಕ್ಕಿಡದಿರು ||4||

- (ಅನುವಾದ) ಜಯಲಕ್ಷ್ಮೀ ಪಾಟೀಲ್

*

ret par likh ke mera naam mitaayaa naa karo
aankh sach bolati hai pyaar chhupaayaa naa karo

log har baat kaa afasaanaa banaa lete hai
sabako haalaat ki rudaad sunaayaa naa karo

yeh zururi nahi har shakhs masihaa hi ho
pyaar ke zakhm amaanat hai dikhaayaa naa karo

shahar e ehasaas mein patharaav bahut hai mohasin
dil ko shishe ke jharokho mein sajaayaa naa karo

- Unknown Lyricist  



Saturday, August 27, 2016

ಒಲೆ

ಮುರಳಿ ಮೋಹನನ ಮಾತು ಗಾನ ವಾಹ್ವಾ ವಾಹ್ವಾ

ಮಿಂದೇಳುತ್ತಿದ್ದಾರೆ ಗೋಪ ಗೋಪಿಯರೆಲ್ಲ ಹಾಲಿನಲ್ಲಿ

ಅಡುಗೆ ಮನೆಯಲ್ಲಿ ಅವಳ ಕೈಯಲ್ಲಿ ಊದುಗೊಳವೆ

ಮತ್ತೆ ಮತ್ತೆ ಸೆರೆಯುಬ್ಬಿ ಕಣ್ತುಂಬಿ ಬರುತ್ತಿರುವುದು ಉರಿ

ಯದ ಹಸಿಹಸಿ ಕಟ್ಟಿಗೆ, ಮಡಿಲು ತುಂಬಿಕೊಳ್ಳುವ ಬಯಕೆ

ತಟ್ಟಿದ ಬೆರಣಿಯನ್ನೂ ಪುಟುವಿಗೆ ಇಟ್ಟಾಗಿದೆ ಒಲೆಗೆ

ಊಫ್… ಊಫ್… ತಿತ್ತಿ ತುಂಬಿಕೊಳ್ಳುತ್ತಿವೆ ಹೊಗೆಗೆ ಒಳಗೆ

ಹೊರಗೆ ಹೆಣ್ಣಿಗಾಗಿ ಕನಿಕರಿಸುವ ಚರ್ಚೆಗೆ ಅಮಲು

ರನ್ನ ಪಂಪರಾದಿಯಾಗಿ ಇಂದಿನವರೆಗೂ ಹರಿಯಿತದರ ಹೊನಲು

ನಡು ನಡುವೆ ಮಧು’ರ ಮಾತು ಮೆಲು ನಗು ಛೇಡಿಸುವಿಕೆ

ಗೆ ಇಲ್ಲೊಂದು ನಿಡಿದಾದ ನಿಟ್ಟುಸಿರು ಬಿಸಿಗೆ ಹೊತ್ತಬಾರದೆ ಒಲೆ

ಹಾಳಾದ್ದು ಬೆಂಕಿಪೊಟ್ಟಣದ ತುಂಬಾ ಮದ್ದಲ್ಲದ ಮದ್ದು

ತಡ ಮಾಡಿದರೆ ಪ್ರತಿಷ್ಠೆ ಹಾಳಾಗಿ ಬೀಳದಿರುವುದೆ ಗುದ್ದು?

ಪೆಟ್ಟುಂಡ ಮನಸದು ಒಡೆದ ಕಟ್ಟಿಗೆಯಂತೆ ಸಿಬಿರು ಸಿಬಿರು

ಹೊಗೆಗಿಂಡಿಯಿಂದಿಣುಕುವ ಬಿಸಿಲು ಕೋಲಿಗೆ ನೆಟ್ಟ ದಿಟ್ಟಿ

ಸುಟ್ಟ ಕನಸುಗಳ ಸಾಲು ಮೆರವಣಿಗೆಯ ತುದಿಯಲ್ಲಿ ಕಣ್ಣೀರ ಬಿಂದು

ಬಿಂದು ಬಿಂದು ಸೇರಿ ಮಿಂದು ಹೊತ್ತಿಕೊಳ್ಳುತ್ತಲೇ ಇಲ್ಲ ಒಲೆ

ಹಸಿ ಕಟ್ಟಿಗೆ ಹುಸಿ ಮದ್ದು ಇತ್ಯಾದಿ ರವುದಿ ಸಬೂಬು

ಗಳಿಂದ ಇಂಗಲಾರದು ಬದುಕ ಬಯಕೆ ಸಾಕು ಸಹಜ ಕಾತರ

ಹತ್ತದ ಒಲೆಯೀಗ ಅಗ್ನಿ ಪರ್ವತ ಜ್ವಾಲೆ

ಎದ್ದು ನಿಂತು ಒದರಿ ನೆರಿಗೆ ನೇರ ನಡೆದಳು ಬಯಲಿಗೆ

- ಜಯಲಕ್ಷ್ಮೀ ಪಾಟೀಲ್



Thursday, August 18, 2016

ಇಳಿಸಿದಂತೆ ಯಾವುದೋ ಋಣಭಾರವ - ಗುಲ್ಜಾರ್



Din kuch aise gujaarataa hai koyi - Gulzar


ಇಳಿಸಿದಂತೆ ಯಾವುದೋ ಋಣಭಾರವ
ದೂಡುತ್ತಿರುವೆ ನಿತ್ಯವೂ ದಿನವ

ಈ ಮನೆಯಲಿ ಯಾರೋ ಗುರುತಿಸಿದಂತೆ ನನ್ನ
ಕನ್ನಡಿಯ ಕಂಡು ತುಸು ಸಮಾಧಾನ

ಮತ್ತೆ ಯಾರೋ ಎಸೆಯುತಿಹರು ಕಲ್ಲ
ಪಕ್ವಗೊಂಡಿರಬಹುದು ಮರದಲ್ಲಿನ ಫಲ

ನಿನಗ್ಯಾರೋ ಮಾಡಲು ಹೊರಟಂತಿದೆ ಮೋಸ
ಮತ್ತೆ ಕಣ್ಣಲ್ಲಿ ಕಾಣುತಿದೆ ರಕ್ತದ ಹನಿಗಳ ವಾಸ

ಯಾರೋ ನನ್ನನ್ನು ಕರೆಯುತ್ತಿರುವಂಥ ಅನಿಸಿಕೆ
ಆಗಿನಿಂದಲೂ ಇಲ್ಲಿ ಬರೀ ನಿಶ್ಯಬ್ದದ ಆಲಿಕೆ


- ಜಯಲಕ್ಷ್ಮೀ ಪಾಟೀಲ್ (ಅನುವಾದ)

*
- Gulzar

Din kuch aise gujaarataa hai koyi
jaise ehasaan utaarataa hai ko_ii

aa_iinaa dekh ke tasallii hu_ii
ham ko is ghar me.n jaanataa hai ko_ii

pak gayaa hai shazar pe phal shayaad
phir se patthar uchhalataa hai ko_ii

phir nazar me.n lahuu ke chhii.nTe hai.n
tum ko shaayad mughaalataa hai ko_ii

der se guu.Njate.n hai.n sannaaTe
jaise ham ko pukaarataa hai ko_ii

ಔದಾರ್ಯ

ಮೀಸೆಯಲುಗಿಸಿ ಮೂಸುತ್ತಿದ್ದವು ನೊಣಗಳು
ಮಿಕ್ಕಿದನ್ನ ವಡೆ ಚೂರು ಪಾಯಸವಂಟಿದ ಪತ್ರೊಳೆ
ಗುಪ್ಪೆ ಗುಪ್ಪೆಗೂ ತಿಪ್ಪೆಯಲಿ ಗುಂಪಾಗಿ ಮುತ್ತಿಗೆ
ಸದ್ದಿಲ್ಲದಂತೆ ಪಾದಗಳೂರಿ ಪಾಲಿಗೆ ಬಂದ ನಾಯಿ
ಗುಂಪಿಗೆ ಗುಂಪೇ ಹೆದರಿ ಹಾರಿ ಗುಂಯಿಗುಟ್ಟಿದವು
ಹೆದರಿಸದೆ ಕಮಕ್ ಕಿಮಕ್ ಅನ್ನದೆ ಜೊತೆಗೂಡಿದ್ದೇ
ನಾಯಿಯ ಔದಾರ್ಯಕೆ ಹಿಗ್ಗಿ ಕೊಂಡಾಡಿ ಬಾಲ
ಸವರಿ ತಲೆ ಮೇಲೇರಿ ಬೆನ್ನ ಸವಾರಿ ಸೂಪರ್ರುರೀ
ದೊಡ್ಡ ಪಾಲು ದೊಡ್ಡ ಬಾಯಿಗೆ ಮಿಕ್ಕಿ ಉಳಿದರೆ ಸಣ್ಣವರಿಗೆ
ವಿಳಂಬಿಸದೆ ಶ್ವಾನಸ್ವಾಮಿಗಳು ಆಹಾರ ಸೇವಿಸಿ ಸಂತೃಪ್ತಿ
ನಿಂತ ನೆಲೆಯ ವೀಕ್ಷಿಸಿ ಹಾಗೇ ಗಿರ್ರನೆ ಸ್ವಪ್ರದಕ್ಷಿಣೆ ರಿಂಗ್ ರಿಂಗ್
ರೋಡಿಗಿಳಿದು ಬಿಜಯಂಗೈದರು ಘನಗಾಂಭಿರ್ಯದಿಂದ
ಮುರುಕಿರಿದ್ದ ನೊಣಗಳು ಎಗರಿ ಬಿದ್ದವು ಶುಷ್ಕ ತಿಪ್ಪೆಯ ಮೇಲೆ

- ಜಯಲಕ್ಷ್ಮೀ ಪಾಟೀಲ್

Tuesday, August 16, 2016

ಹೆಣ್ಣೆಂದರೆ



ದ್ರೌಪದಿಯ ದರುಶನವಾಯ್ತು!
ತಟ್ಟನೆ ತಿರುಗಿದೆ ಮತ್ತೊಮ್ಮೆ ಮಗದೊಮ್ಮೆ
ಇನ್ನೊಮ್ಮೆ ಎದುರಾಗಿತ್ತು ಅದೇ ಸಂಬೋಧನೆ

ಎದುರಿಗೆ ಐಸ್ಕ್ರೀಮಿನಂಥಾ ತಣ್ಣಗಿನ ಸಿಹಿದನಿ
ಮೆಚ್ಚುಗೆಯ ಮಾತದು ಕೊಂಕಿನ ಸೋಂಕಿಲ್ಲ
ನನ್ನೊಳಗಿನ ಅಗ್ನಿಕನ್ಯೆ ನಂದಾದೀಪವಾಗ

ನನ್ನ ನಾಟಕದ ದ್ರೌಪದಿಯ ಪಾತ್ರಕ್ಕೆ ನೀನೆ ಫಿಟ್ಟು
ಹೀಡಂಬಿ ಪಾತ್ರಕ್ಕೆ ಉಮಾಶ್ರಿ ಪರ್ಫೆಕ್ಟು
ಲಲಿತಕ್ಕ ಅಂದು ಹೇಳಿದ್ದು ಅನುರುಣಿಸಿತು ಮನದಿ

ನಿಲುವುಗನ್ನಡಿಯ ಎದುರಿನ ಅಲಂಕೃತ ರೂಪ
ರೂಪಗಳನು ದಾಟಿ ದ್ವಾಪರ ಯುಗದ ರಾಜಕಾರಣ
ದ ಚಾಟಿ ಏಟಿನ್ನು ಅನುಭವಿಸುತಲಿತ್ತು ಕಲಿಯುಗದಲ್ಲಿ

ಉರಿಯ ಉಯ್ಯಾಲೆಯಲ್ಲಿ ಬೆಂದವಳನ್ನು ಬಳಸಿತ್ತು
ಅಂಚಲ್ಲಿನ್ನು ಕೆಂಪು ಉಳಿಸಿಕೊಂಡ ತಣ್ಣಗಿನ ಕೆಂಡ
ದ ಸೀರೆ ಉಟ್ಟವಳು ಮಾತ್ರ ಇನ್ನೂ ಧಗ ಧಗ

ಶಿರದ ಮೇಲಿನ ಗುಗ್ಗಳ ಎದೆಯೊಳಗಿನ ಕಿಚ್ಚು ನೀನು
ನೀನಾಗಿ ನಟಿಸಿಯೇ ಜ್ವಲಿಸಿ ತಪಿಸುವ ನಾನು
ಪಾಂಡವರನ್ನು ಪಣಕ್ಕಿಟ್ಟು ಕೀಚಕರ ಕೊಲ್ಲಬಯಸುತ್ತೇನೆ

ಚೌಪದಿಗಳಂತೆ ವರ್ತಿಸುವ ಪಂಚರೊಡನೆಯ ಬದುಕು
ಸಾವಿರ ಹೆಂಡಿರ ಗಂಡನಿಗಿದ್ದಷ್ಟು ಸುಲಭವೆಲ್ಲಿತ್ತೆ ನಾರಿ ನಿನಗೆ
ತುಳಿದ ಸಪ್ತಪದಿ ಆಸೆಗಳನ್ನರಳಿಸಿತ್ತೇ ಇಲ್ಲಾ ನಿನ್ನ ಕೆರಳಿಸಿತ್ತೆ?

ದ್ರೌಪದಿಯ ಚೌಪದಿ ಸಪ್ತಪದಿಗೇ ಸೀಮಿತವಾಯಿತೆ ಮತ್ತೆ
ನಕ್ಕ ನಗುವಿಗೂ ಸತ್ತ ಮಗುವಿಗೂ ದಿಕ್ಕು ದೆಶೆ ತಪ್ಪಿ ಮಹಾಭಾರತ
ಹೆಣ್ಣೆಂದರೆ ಕರಗುವ ಐಸ್ಕ್ರೀ ಮ್ ಚಪ್ಪರಿಸಬಹುದಾದ ನಾಲಿಗೆ ಸ್ವಾದ!

- ಜಯಲಕ್ಷ್ಮೀ ಪಾಟೀಲ್
(ಫೇಸ್‌ಬುಕ್‌ ನ 'ಚೌ ಚೌಪದಿ' ಗುಂಪು ಈ ಪದ್ಯಕ್ಕೆ ಪ್ರೇರಣೆ)