ದ್ರೌಪದಿಯ ದರುಶನವಾಯ್ತು!
ತಟ್ಟನೆ ತಿರುಗಿದೆ ಮತ್ತೊಮ್ಮೆ ಮಗದೊಮ್ಮೆ
ಇನ್ನೊಮ್ಮೆ ಎದುರಾಗಿತ್ತು ಅದೇ ಸಂಬೋಧನೆ
ಎದುರಿಗೆ ಐಸ್ಕ್ರೀಮಿನಂಥಾ ತಣ್ಣಗಿನ ಸಿಹಿದನಿ
ಮೆಚ್ಚುಗೆಯ ಮಾತದು ಕೊಂಕಿನ ಸೋಂಕಿಲ್ಲ
ನನ್ನೊಳಗಿನ ಅಗ್ನಿಕನ್ಯೆ ನಂದಾದೀಪವಾಗ
ನನ್ನ ನಾಟಕದ ದ್ರೌಪದಿಯ ಪಾತ್ರಕ್ಕೆ ನೀನೆ ಫಿಟ್ಟು
ಹೀಡಂಬಿ ಪಾತ್ರಕ್ಕೆ ಉಮಾಶ್ರಿ ಪರ್ಫೆಕ್ಟು
ಲಲಿತಕ್ಕ ಅಂದು ಹೇಳಿದ್ದು ಅನುರುಣಿಸಿತು ಮನದಿ
ನಿಲುವುಗನ್ನಡಿಯ ಎದುರಿನ ಅಲಂಕೃತ ರೂಪ
ರೂಪಗಳನು ದಾಟಿ ದ್ವಾಪರ ಯುಗದ ರಾಜಕಾರಣ
ದ ಚಾಟಿ ಏಟಿನ್ನು ಅನುಭವಿಸುತಲಿತ್ತು ಕಲಿಯುಗದಲ್ಲಿ
ಉರಿಯ ಉಯ್ಯಾಲೆಯಲ್ಲಿ ಬೆಂದವಳನ್ನು ಬಳಸಿತ್ತು
ಅಂಚಲ್ಲಿನ್ನು ಕೆಂಪು ಉಳಿಸಿಕೊಂಡ ತಣ್ಣಗಿನ ಕೆಂಡ
ದ ಸೀರೆ ಉಟ್ಟವಳು ಮಾತ್ರ ಇನ್ನೂ ಧಗ ಧಗ
ಶಿರದ ಮೇಲಿನ ಗುಗ್ಗಳ ಎದೆಯೊಳಗಿನ ಕಿಚ್ಚು ನೀನು
ನೀನಾಗಿ ನಟಿಸಿಯೇ ಜ್ವಲಿಸಿ ತಪಿಸುವ ನಾನು
ಪಾಂಡವರನ್ನು ಪಣಕ್ಕಿಟ್ಟು ಕೀಚಕರ ಕೊಲ್ಲಬಯಸುತ್ತೇನೆ
ಚೌಪದಿಗಳಂತೆ ವರ್ತಿಸುವ ಪಂಚರೊಡನೆಯ ಬದುಕು
ಸಾವಿರ ಹೆಂಡಿರ ಗಂಡನಿಗಿದ್ದಷ್ಟು ಸುಲಭವೆಲ್ಲಿತ್ತೆ ನಾರಿ ನಿನಗೆ
ತುಳಿದ ಸಪ್ತಪದಿ ಆಸೆಗಳನ್ನರಳಿಸಿತ್ತೇ ಇಲ್ಲಾ ನಿನ್ನ ಕೆರಳಿಸಿತ್ತೆ?
ದ್ರೌಪದಿಯ ಚೌಪದಿ ಸಪ್ತಪದಿಗೇ ಸೀಮಿತವಾಯಿತೆ ಮತ್ತೆ
ನಕ್ಕ ನಗುವಿಗೂ ಸತ್ತ ಮಗುವಿಗೂ ದಿಕ್ಕು ದೆಶೆ ತಪ್ಪಿ ಮಹಾಭಾರತ
ಹೆಣ್ಣೆಂದರೆ ಕರಗುವ ಐಸ್ಕ್ರೀ ಮ್ ಚಪ್ಪರಿಸಬಹುದಾದ ನಾಲಿಗೆ ಸ್ವಾದ!
- ಜಯಲಕ್ಷ್ಮೀ ಪಾಟೀಲ್
(ಫೇಸ್ಬುಕ್ ನ 'ಚೌ ಚೌಪದಿ' ಗುಂಪು ಈ ಪದ್ಯಕ್ಕೆ ಪ್ರೇರಣೆ)
4 comments:
ದ್ರೌಪದಿಯ ಮೂಲಕ ಹೆಣ್ಣುಬಾಳಿನ ವಿಶ್ಲೇಷಣೆ ಮನ ತಟ್ಟುವಂತಿದೆ.
ಧನ್ಯವಾದಗಳುರೀ ಕಾಕಾ.
ಅಬ್ಬಬ್ಬ ಎಂತಹ ಕವಿತೆ ಇದು
"ಚೌಪದಿಗಳಂತೆ ವರ್ತಿಸುವ ಪಂಚರೊಡನೆಯ ಬದುಕು
ಸಾವಿರ ಹೆಂಡಿರ ಗಂಡನಿಗಿದ್ದಷ್ಟು ಸುಲಭವೆಲ್ಲಿತ್ತೆ ನಾರಿ ನಿನಗೆ
ತುಳಿದ ಸಪ್ತಪದಿ ಆಸೆಗಳನ್ನರಳಿಸಿತ್ತೇ ಇಲ್ಲಾ ನಿನ್ನ ಕೆರಳಿಸಿತ್ತೆ?"
ಈ ಸಾಲುಗಳು ಬಹಳ ಕಾಡುತ್ತವೆ , ಈ ಪ್ರಶ್ನೆಗೆ ಎಂದಿಗೂ ಉತ್ತರ ದೊರೆಯದು ಅನ್ಸುತ್ತೆ.
ಧನ್ಯವಾದಗಳು ಬಾಲಣ್ಣ ನಿಮ್ಮ ಪ್ರತಿಕ್ರಿಯೆಗಾಗಿ.
Post a Comment