Friday, March 29, 2013

ಸುದ್ದಿ
ರದ್ದಿಯಾಗುತ್ತಿವೆ ಸುದ್ದಿಗಳು
ಅತ್ಯಾಚಾರವೋ ಅನಾಚಾರವೋ
ಆಚಾರವೋ ಸುವಿಚಾರವೋ
ಮರಣವೋ ಆಮರಣ ಉಪವಾಸವೋ
ಸುದ್ದಿಯಾಗುತ್ತಿವೆ ರದ್ದಿ

ಸಂಬಂಧವ ಹೊತ್ತುತಂದು
ಕಿತ್ತಾಡಲು ಪರದೆ ಮೇಲೆ
ಒಳಗೂ ಹೊರಗೂ ಏಕವಾಗಿ
ಮನೆ ಮನೆಯಲೂ ಕೊಳೆತ ನಾತ
ಸಂಬಂಧಗಳೀಗ ಅನಾಥ

ಅಳು ಆಕ್ರಂದನಕೆ ಕಣ್ಣು ಕಿವಿ ತೆರೆದು
ಕುರುಡಾದ ಜಗ ಕಿವುಡಾಗಿದೆ ಈಗ
ಜನ ಕುರುಡಾದಂತೆಲ್ಲ ಬಟ್ಟ ಬಯಲಲ್ಲೇ
ಚಡ್ಡಿ ಕಳೆವ ಆಟ, ಅಂಗಿಗಾಗಿ ಹುಡುಕಾಟ
ಮಾಧ್ಯಮಗಳಿಗೆ ರಸದೂಟ

ಜಾಗತೀಕರಣದ ವ್ಯಾಕರಣ
ಸಸ್ತಾ ಮಾಲಾಗಿ ಏಳು ಸಮುದ್ರದಾಚೆ
ಯ ಭದ್ರ ಕೋಟೆಯೊಳಗಿನ ರಾಜಕುಮಾರಿ
ಕಂಡವರ ಬೆರಳ ತುದಿ ತಾಕಿ ಬೆತ್ತಲೆ
ಬೆಲೆ ಕಳೆದುಕೊಂಡ ಬದುಕೀಗ ಹಗಲಿನಲ್ಲೇ ಕತ್ತಲೆ

ಬಯಲನೋಯ್ದು ಮನೆಯೊಳಗಿಟ್ಟು
ಛಾವಣಿಯ ಹಾರಿ ಹೊಡೆದು
ಬಯಲಾದೆನೆಂದರೆ ದೆಸೆಗೇಡಿಯಾದೆಯಂತರ್ಥ
ಬಯಲಿನೊಡನೆ ಬಯಲಾಗಲು
ಅಲ್ಲಮನಾಗಬೇಕು

                                            - ಜಯಲಕ್ಷ್ಮೀ ಪಾಟೀಲ್
                                                 23rd Jan 2013.

4 comments:

sunaath said...

‘ಬೆಲೆ ಕಳೆದುಕೊಂಡ ಬದುಕು‘.......ಇಂದಿನ ವಾಸ್ತವ!

Jayalaxmi said...

ನಿಜ ಕಾಕಾ. ಬ್ಲಾಗಿನಲ್ಲೇ ಉತ್ತರಿಸುವ ನಿಮ್ಮ ಈ ಪರಿಪಾಠ ನನಗೆ ಪಾಠ. :) ನನ್ನಿ.

ಸಂಧ್ಯಾ ಶ್ರೀಧರ್ ಭಟ್ said...

ವಾಸ್ತವತೆಯನ್ನು ಅದೆಷ್ಟು ಚೆನ್ನಾಗಿ ಬಿಡಿಸಿದ್ದೀರಿ ಮೇಡಂ... ಮಾಧ್ಯಮಗಳ ಬ್ರೆಕಿಂಗ್ ನ್ಯೂಸ್ ಹಾವಳಿಗಳಲ್ಲಿ , ರಾಜಕೀಯ ವಿನೋದಾವಳಿಗಳಲ್ಲಿ, ಸಹಾಯಹಸ್ತಗಳ ಚಾಚುವಂತಹ ಸುದ್ದಿಗಳು ಸದ್ದೇ ಇಲ್ಲದೆ ರದ್ದಿಯಾಗುತ್ತಿರುವಲ್ಲಿ ನಿಜಕ್ಕೂ ಬದುಕು ಬೆತ್ತಲೆಯೇ ಅನಿಸುತ್ತೆ ... --

Jayalaxmi said...

ಹತಾಶೆ ಸಂಧ್ಯಾ, ಬರೆಯುವುದಲ್ಲದೇ ಬೇರೆನೂ ಮಾಡಲಾಗದ ಆದರೆ ಸಹಿಸಲೂ ಆಗದ ಹತಾಶೆ!