Monday, February 22, 2010

ಮಾಣಿ

ಚಿತ್ರದಲ್ಲಿ ಗಾಬರಿಗೊಂಡು ನಿಂತ ವ್ಯಕ್ತಿಯೇ ಜಗದೀಶ್ ರೈ.


ನಾವು ನಾಗರೀಕರೆಂದು ಕರೆಸಿಕೊಳ್ಳುವವರು ಎಂಥಾ ದಪ್ಪ ಚರ್ಮದವರು ಎಂದು ನನಗರಿವಾದುದು ಏಳೆಂಟು ವರ್ಷಗಳ ಹಿಂದೆ. ನಾನು, ನನ್ನ ಪ್ರಪಂಚ ಎನ್ನುವ ಲಿಮಿಟ್ಟಿನಲ್ಲೇ ತುಂಬಾ ಜನ ದಿನ ಕಳೀತಾ ಇರ್ತೀವಿ. ಕ್ಷಣವೋ, ದಿನವೋ ನಮ್ಮ ಬದುಕಿನಲ್ಲಿ ಬಂದು ಹೋಗುವ ಆದರೆ ಮುಖ್ಯವೆನಿಸದ ಎಷ್ಟೋ ಜನರಿರುತ್ತಾರೆ. ಅವರು ನಮಗೆ ಮುಖ್ಯವಲ್ಲ ಅನ್ನುವ ಕಾರಣಕ್ಕಾಗಿಯೇ ನಾವು ಅವರ ಬಗ್ಗೆ ನಿಷ್ಕಾಳಜಿಯಿಂದ ಇರುತ್ತೇವೆ. ಇದು ಮಾನವ ಸಹಜ ಬುದ್ದಿ. ಬೇಕು ಅಂತಲೇ ಏನು ಮಾಡುವುದಲ್ಲ ಅನ್ನುವುದೂ ನಿಜವೇ ಆದರೂ ಒಂಚೂರು ಅಲರ್ಟ್ ಆಗಿದ್ದರೆ ಆ ಕ್ಷಣ, ಗಂಟೆ, ದಿನದ ಲೆಕ್ಕದ ವ್ಯಕ್ತಿಗಳೊಡನೆ ಇನ್ನೂ ಹೆಚ್ಚು ಸೌಹಾರ್ದತೆಯೊಂದಿಗೆ ವ್ಯವಹರಿಸಬಹುದೇನೋ.. ಅದರಿಂದ ವ್ಯಕ್ತಿ ಗೌರವಕ್ಕೂ ಒಂದು ಗೌರವ. ಇದರ ಕುರಿತು ನನ್ನಲ್ಲಿ ಜಾಗೃತಿ ಉಂಟು ಮಾಡಿದ್ದು ಸ್ನೇಹಿತ ಜಗದೀಶ್ ರೈ ಅವರು. ಇದು ಏಳೆಂಟು ವರ್ಷಗಳ ಹಿಂದಿನ ಮಾತು.

ಆಗಿನ್ನೂ ಮುಂಬೈನಲ್ಲೆ ಇದ್ದೆ ನಾನು. 'ಜಗಜ್ಯೋತಿ ಕಲಾವೃಂದ' ತಂಡದ, 'ಒಸರ್' ಹೆಸರಿನ ತುಳು ನಾಟಕದ ರಿಹರ್ಸಲ್ ನಡೀತಾ ಇತ್ತು. ಇದು ನಾನು ಅಭಿನಯಿಸಿದ ಏಕೈಕ ತುಳು ನಾಟಕ. ತುಳು ಬರದ ನಾನು ಈ ನಾಟಕದಲ್ಲಿ ಅಭಿನಯಿಸಲು ಒಪ್ಪಿದ್ದು ನಾನು ನಿರ್ವಹಿಸವ ಪಾತ್ರ ಮೂಕಿ ಮತ್ತು ಆ ನಾಟಕದ ಜೀವಾಳ ಅನ್ನುವ ಕಾರಣಕ್ಕಾಗಿ.:-) ಅಲ್ಲದೆ ಈ ನಾಟಕವನ್ನು ಕನ್ನಡದಲ್ಲಿ ಮುಂಚೆ ಇದೇ ತಂಡದಲ್ಲಿ ಅಭಿನಯಿಸಿದ್ದೆನಾದ್ದರಿಂದ ಬಾರದ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಕಷ್ಟವಿರಲಿಲ್ಲ. ನಮ್ಮ ಹೆಚ್ಚಿನ ರಿಹರ್ಸಲ್ಸ್ಎಲ್ಲಾ ನಡೆಯುತ್ತಿದುದು ಮಾತುಂಗಾದ ಕರ್ನಾಟಕ ಸಂಘದ ಕಿರು ಸಭಾ ಗೃಹದಲ್ಲಿ . ಸಂಘದ ಹತ್ತಿರದಲ್ಲಿ 'ಗಂಗಾ ವಿಹಾರ' ಎನ್ನುವ ಉಪಹಾರ ಗೃಹವೊಂದಿದೆ. ಕಲಾವಿದರಿಂದಲೇ ಅದು ನಡೆಯುತ್ತದೇನೋ ಅನ್ನುವಷ್ಟು ಅಲ್ಲಿನ ಎಲ್ಲ ಕಲಾವಿದರಿಗೂ ಗಂಗಾ ವಿಹಾರ ಪರಿಚಿತ. ಇಡೀ ದಿನ ರಿಹರ್ಸಲ್ ಹಮ್ಮಿಕೊಂಡ ದಿನ ನಮ್ಮೆಲ್ಲರ ಊಟ ಅಲ್ಲೇ ಆಗುತ್ತಿತ್ತು.

ಅಂದೂ ಸಹ ರಿಹರ್ಸಲ್^ನ ಮಧ್ಯಂತರದಲ್ಲಿ ಊಟಕ್ಕೆಂದು ನಾವೆಲ್ಲಾ 'ಒಸರ್'ನಾಟಕದ ತಂಡದವರು ಗಂಗಾ ವಿಹಾರದೆಡೆ ಹೆಜ್ಜೆ ಹಾಕಿದೆವು. ಟೇಬಲ್ ಗಾಗಿ ಸ್ವಲ್ಪ ಹೊತ್ತು ಹೊರಗೆ ಕಾದು, ಎರಡು-ಮೂರು ಟೇಬಲ್ ಖಾಲಿಯಾದದ್ದೇ ರೇಸ್^ಗೆ ಬಿದ್ದವರಂತೆ ಹೋಗಿ ಟೇಬಲ್^ಗಳನ್ನು ಆಕ್ರಮಿಸಿ ಸ್ಥಾಪಿತಗೊಂಡಿದ್ದೂ ಆಯ್ತು, ಊಟ ತರಿಸಿ ಉಂಡಿದ್ದೂ ಆಯ್ತು. ಕೈ ತೊಳೆಯಲು ಎದ್ದು ಸಿಂಕ್ ಹತ್ತಿರ ಹೋಗಬೇಕು, ನನಗೋ ತಿಂದದ್ದು ಹೆಚ್ಚಾಗಿ ಎದ್ದು ಸಿಂಕ್ ಹತ್ತಿರ ಹೋಗಲು ಆಲಸಿತನ. ನೀರಿನ ಗ್ಲಾಸ್ ತೊಗೊಂಡು ತಟ್ಟೆಯಲ್ಲೇ ಕೈ ತೊಳೆಯಲು ಹೊರಟವಳನ್ನು ಜಗದೀಶ್ ತಡೆದು, "ಎದ್ದು ಹೋಗಿ ಸಿಂಕಿನಲ್ಲಿ ಕೈ ತೊಳೆಯಿರಿ" ಎಂದರು ನಯವಾಗಿ.

ನನ್ನೊಳಗಿನ ಆಲಸಿತನ ನನ್ನನ್ನು ಕುರ್ಚಿಯಿಂದ ಏಳಗೊಡುತ್ತಿಲ್ಲ." ಅಯ್ಯೋ ಬೇಜಾರು ಜಗದೀಶ್, ಅಲ್ಲಿವರೆಗೂ ಎದ್ದು ಯಾರ್ಹೋಗ್ತಾರೆ.." ಎನ್ನುತ್ತಾ ತಟ್ಟೆಯಲ್ಲೇ ಕೈ ತೊಳೆಯಲು ಮುಂದಾದವಳನ್ನು ತಡೆದು ಸಿಂಕ್^ನಲ್ಲಿ ಕೈ ತೊಳೆವಂತೆ ಮತ್ತೆ ಹೇಳಿದರು ಜಗದೀಶ್.

ನಾನು " ಇವತ್ತೊಂದಿನ ತಟ್ಟೆಯಲ್ಲೇ ಕೈ ತೊಳ್ಕೊತೀನಿ ಬಿಡಿ ಜಗದೀಶ್, ಏನಾಗೋಲ್ಲ" ಎಂದೆ. ನಾನು ತಟ್ಟೆಯಲ್ಲಿಕೈ ತೊಳೆಯೋದನ್ನ ನೋಡಿ ಅಲ್ಲಿನ ಮ್ಯಾನೇಜರ್ ಬೈಯ್ಯಬಹುದು ಎನ್ನುವ ಕಾಳಜಿಗೆ ಜಗದೀಶ್ ಹಾಗಂತಿದಾರೆ ಅಂತಲೇ ನನ್ನ ಎಣಿಕೆ.

"ಹೇಳಿದ್ದು ಕೇಳಿಸಲಿಲ್ಲವಾ? ಎದ್ದು ಹೋಗಿ ಸಿಂಕಿನಲ್ಲಿ ಕೈ ತೊಳೆದು ಬನ್ನಿ." ಈ ಸಲ ಜಗ್ಗಿ ದನಿ ಗಡುಸಾಗಿತ್ತು. ನನಗೋ ಆಶ್ಚರ್ಯದ ಜೊತೆ ಅವಮಾನ ಕಾಡತೊಡಗಿತು. ಯಾಕೆಂದರೆ ಇಲ್ಲಿಯವರೆಗೆ ಯಾರೂ ನನ್ನನ್ನು ಹೀಗೆ ಗಡಸು ದನಿಯಲ್ಲಿ ಮಾತನಾಡಿಸಿರಲಿಲ್ಲ, ತುಂಬಾ ಸಭ್ಯ ವರ್ತನೆಯ ಜನರಿರುವ ಟೀಮ್ ಅದು. ಅಲ್ಲದೆ ಈ ಜಗದೀಶ್ ಅನ್ನುವ ವ್ಯಕ್ತಿ ಸದಾ ನಗುತ್ತಾ ನಗಿಸುತ್ತಾ ಇದ್ದಂಥವರು. ಅಂಥವರ ಗಡಸು ದನಿಯನ್ನು ನಾನು ನಿರೀಕ್ಷಿಸಿರಲೇಯಿಲ್ಲ. ಗಂಗಾ ವಿಹಾರದಲ್ಲಿ ಗಂಗೊದ್ಭವ ನನ್ನ ಕಣ್ಣಲ್ಲಿ!

ಅದರತ್ತ ಗಮನ ಕೊಡದ ಜಗದೀಶ್ " ಅಷ್ಟು ದೂರದಿಂದ ನೀವು ಊಟ ಮಾಡಲು ಇಲ್ಲಿಯವರೆಗೆ ಬರುತ್ತೀರಿ, ಊಟ ಮಾಡಿದ ಮೇಲೆ ನಿಮಗೆ ಹತ್ತಿರದಲ್ಲೇ ಇರುವ ಸಿಂಕ್ ಹತ್ತಿರ ಹೋಗಿ ಕೈ ತೊಳೆಯಲು ಏನು ಕಷ್ಟ? ನಿಮ್ಮಿಂದಾಗಿ ಪಾಪ ಆ ತಟ್ಟೆ ಎತ್ತುವ ಮಾಣಿಗಳು ಇಡೀ ದಿನ ವಾಸನೆಯ ಬಟ್ಟೆಯಲ್ಲಿ ದಿನ ಕಳೆಯಬೇಕು. ಯಾಕೆ ಅವರೇನು ಕರ್ಮ ಮಾಡಿದ್ದು?"

'ಇಡೀ ದಿನ ವಾಸನೆಯ ಬಟ್ಟೆ?' ಅರ್ಥವಾಗುತ್ತಿಲ್ಲ ಎನ್ನುವ ನೋಟದೊಂದಿಗೆ ಜಗ್ಗಿ ಕಡೆ ನೋಡಿದೆ. ಧುಮ್ಮಿಕ್ಕಲು ಕಾತರಿಸುತ್ತಿದ್ದ ಗಂಗಾ ಮಾತೆ ಇದ್ದಕ್ಕಿಂದಂತೆ ತನ್ನ ವೇಗಕ್ಕೆ ಕಡಿವಾಣ ಹಾಕಿದ್ದಳು ನನಗರಿವಿಲ್ಲದಂತೆ.

"ನೀವು ತಟ್ಟೆಯಲ್ಲಿ ಕೈ ತೊಳೆದು ಎದ್ದು ನಡೆಯುತ್ತೀರಿ ನಿಮ್ಮ ಮನೆಗೆ. ಆ ಪಾಪದ ಜನ, ತಟ್ಟೆ ಎತ್ತುವವರು ಅದನ್ನೆಲ್ಲ ತೆಗೆದುಕೊಂಡು ಹೋಗುವಾಗ ನೀವು ಕೈ ತೊಳೆದ ನೀರು ಅವರ ಮೈ ಮೇಲೆಲ್ಲಾ ಬೀಳುತ್ತದೆ. ಅವರಿಗೇನು ಬದಲಿಸಲು ಮತ್ತೊಂದು ಬಟ್ಟೆ ಇರುತ್ತದಾ? ಇಲ್ಲ, ಅದೇ ಒದ್ದೆ ಮತ್ತು ವಾಸನೆಯ ಬಟ್ಟೆಯಲ್ಲೇ ಇಡೀ ದಿನ ಕಳೆಯಬೇಕು ಅವರು. ಅದೇ ಬಟ್ಟೆಯಲ್ಲಿ ನಿಮ್ಮಟೇಬಲ್ ಮೇಲಿನ ಗ್ಲಾಸು, ತಟ್ಟೆ ತೆಗೆಯಲು ಬಂದಾಗ ಮುಖ ಸಿಂಡರಿಸುತ್ತೀರಿ, ನೀವು ಹೊಸ ಬಟ್ಟೆ ತೊಟ್ಟ ಜನ. ಕೊಳಕು ಅಂತ ಬೈದುಕೊಳ್ಳುತ್ತೀರಿ. ಅವರ ಕಷ್ಟ ನಿಮಗರ್ಥವಾಗುತ್ತದಾ ? ಇಲ್ಲ, ನಿಮಗ್ಯಾಕೆ, ಹೇಗೆ ಅರ್ಥ ಆಗಬೇಕು ಹೇಳಿ? ಆ ಜನರೆಲ್ಲಾ ರಾತ್ರಿ ಹನ್ನೆರಡರವರೆಗೆ ಕೆಲಸ ಮಾಡಿ ಮತ್ತೆ ನಾಲ್ಕಕ್ಕೆ ಎದ್ದು ಕೆಲಸಕ್ಕೆ ನಿಲ್ಲಬೇಕು. ಏಳುವುದು ಹತ್ತು ನಿಮಿಷ ತಡ ಆದಲ್ಲಿ ಅವನ ಮೇಲಿನವ ಕುಂಡೆಯ ಮೇಲೆ ಒದ್ದು ಅವನನ್ನು ಎಬ್ಬಿಸುತ್ತಾನೆ. ಒಂದು ಗಂಟೆಯೊಳಗೆ ತನ್ನ ಸ್ನಾನ , ಬಟ್ಟೆ ತೊಳೆದು ಕೊಳ್ಳುವುದು, ಓದುವ ಮಕ್ಕಳಾದರೆ ಸಮಯ ಸಿಕ್ಕಲ್ಲಿ ಓದಿಕೊಳ್ಳುವುದು ಎಲ್ಲಾ ಆಗಬೇಕು. ಅವರಲ್ಲಿ ಇರುವುದು ತನ್ನ ಯಜಮಾನ ವರ್ಷಕ್ಕೆ ಕೊಡುವ ಒಂದು ಜೊತೆ ಯುನಿಫಾರ್ಮ್ ಮಾತ್ರ. ಅದರಲ್ಲೇ ಇಡೀ ವರ್ಷ ಕಳೆಯಬೇಕು ಅವರು. "

ಉದ್ವೇಗಗೊಂಡಿದ್ದರು ಜಗದೀಶ್. ಹೊಸ ಲೋಕವೊಂದು ಹೀಗೆ ಅಚಾನಕ್ಕಾಗಿ ನನ್ನಿದಿರು ತೆರೆದುಕೊಂಡಿದ್ದರಿಂದ ನನ್ನ ತಪ್ಪಿನ ಅರಿವಿನೊಂದಿಗೆ ಜಗದೀಶರ ಉದ್ವೇಗದ ಕಾರಣ ಸಹ ಹೊಳೆಯಿತು. ನನಗೆ, ಜಗದೀಶ್ ಊರಿಂದ ಇಲ್ಲಿಗೆ (ಮುಂಬೈ) ಬಂದು ಹೋಟೆಲ್ ಮಾಣಿಯಾಗಿ ಕೆಲಸ ಮಾಡುತ್ತಾ ರಾತ್ರಿ ಶಾಲೆಯಲ್ಲಿ ಓದಿದ್ದು ಗೊತ್ತಿತ್ತು. ಹೀಗೆ ಊರಿಂದ (ಹೆಚ್ಚಾಗಿ ಮಂಗಳೂರು-ಉಡುಪಿ ಕಡೆಯಿಂದ) ಮುಂಬೈಗೆ ಬಂದು ಕಲಿಯುವ ಆಸೆಯನ್ನು ಹತ್ತಿಕ್ಕಲಾಗದೆ, ಕೆಲವೊಮ್ಮೆ ಮುಂಬೈನ ಹಿರಿಯ ಕನ್ನಡಿಗರ ಒತ್ತಾಯಕ್ಕೆ ರಾತ್ರಿಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಎಷ್ಟೋ ಕನ್ನಡಿಗರಿದ್ದಾರೆ ಮುಂಬೈನಲ್ಲಿ. ಈಗ ವಿಪ್ರೊ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ರೈ ಸಹ ಅಂಥವರಲ್ಲಿ ಒಬ್ಬರು. ನನಗೆ ಹೀಗೆ ರಾತ್ರಿ ಶಾಲೆಯಲ್ಲಿ ಓದಿ ಬೆಳೆದವರ ಬಗ್ಗೆ 'ಪೇಪರ್ ^ನಲ್ಲಿಯ ಹೆಡ್ ಲೈನ್ ' ಥರದ ಮಾಹಿತಿ ಇತ್ತೇ ವಿನಃ ಹೆಡ್ ಲೈನ್ ಕೆಳಗಿನ ವಿವರ ಓದುವ ಗೋಜಿಗೆ ಹೋಗಿರಲೇ ಇಲ್ಲ!
Sorry ಕೇಳಿದೆ ನನ್ನ ನಡುವಳಿಕೆಗಾಗಿ ಜಗದೀಶರಲ್ಲಿ.

"sorry ಕೇಳುವುದು ಬೇಡ, ಆದರೆ ಇನ್ನು ಮುಂದೆ ಹೋಟೆಲಿನಲ್ಲಿ ತಟ್ಟೆಯಲ್ಲಿ ಕೈ ತೊಳೆಯದಿದ್ದರೆ ಆಯಿತು." ಎಂದಿನ ತಮ್ಮ ಸಹಜ ನಗುವಿನೊಂದಿಗೆ ಹೇಳಿದರು ಜಗದೀಶ್ ರೈ ಎನ್ನುವ Ex-ಹೋಟೆಲ್ ಮಾಣಿ ಮತ್ತು ಈಗಿನ ವಿಪ್ರೊ ಗ್ರೂಪ್ ನಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ನಿರ್ಮಲ ಮನದ ಸ್ನೇಹಿತ .:-)

34 comments:

ಸುಮ said...

ನಿಜ ನಾವು ಒಂಚೂರು ಅಲರ್ಟ್ ಆಗಿದ್ದರೆ ಎಷ್ಟೋ ಜನರ ಅಸಹಾಯಕತೆಗೆ ನೋವಿಗೆ ಕಾರಣರಾಗುವುದು ತಪ್ಪುತ್ತದೆ . ನಮ್ಮ ಒಂದು ಥ್ಯಾಂಕ್ಸ್ ಎಂಬ ಪುಟ್ಟ ಮಾತು ಇಂತಹ ಕ್ಷಣಿಕ ಸಹವರ್ತಿಗಳ ಮುಖದಲ್ಲಿ ನಗು ಅರಳಿಸುತ್ತದೆ.

PARAANJAPE K.N. said...

ನಿಜ, ಜಗದೀಶರು ಹೇಳಿದ ಮಾತು ಎಷ್ಟು ವಾಸ್ತವ ಅಲ್ಲವೇ ? ಚೆನ್ನಾಗಿದೆ ಅನುಭವಜನ್ಯ ಬರಹ. ಯಾಕೆ ಇತ್ತೀಚಿಗೆ ಮ೦ಗಳತ್ತೆ ನಾಪತ್ತೆ? ಮುಕ್ತ ಮುಕ್ತಾ ದಲ್ಲಿ

ಸೀತಾರಾಮ. ಕೆ. / SITARAM.K said...

ಉತ್ತಮ ವಿಷಯ ಹ೦ಚಿಕೊ೦ಡಿದ್ದಿರಾ...
ಶಿಸ್ತು ಅವಶ್ಯ. ಜೊತೆಗೆ ನಾವು ಎನೆ ಮಾಡಲಿ ಇತರರಿಗೆ ತೊ೦ದರೆಯಾಗುವದಾ ಎ೦ದು ಯೋಚಿಸಬೇಕು.
ಪಾಠಕ್ಕೆ ವ೦ದನೆಗಳು.
ನನ್ನ ಬ್ಲೊಗ್-ನಲ್ಲೂ ಈ ವಿಷಯಕ್ಕೆ ಹತ್ತಿರವಾದ೦ತೆ ವಿಷಯವಿದೆ. ಬಿಡುವಾದಾಗ ಓದಿ.
link :
http://nannachutukuhanigavanagalu.blogspot.com/2009/12/blog-post_11.html

sunaath said...

ಹೃದಯಸ್ಪರ್ಶಿ ಲೇಖನ. ಎಲ್ಲರನ್ನೂ ಎಚ್ಚರಿಸುವಂತಿದೆ.

Ittigecement said...

ಜಯಲಕ್ಷ್ಮೀಯವರೆ...

ಮನಕಲಕಿತು..

ನೀವೆನ್ನುವದು ನಿಜ..
ಎಷ್ಟೋ ಬಾರಿ ನಾವು "ಕಣ್ಣು ತೆರೆದು" ನೋಡುವದೇ.. ಇಲ್ಲ..

ತುಂಬಾ ಹೃದಯಸ್ಪರ್ಷಿಯಾಗಿ ಬರೆದಿದ್ದೀರಿ...
ಮನ ತಟ್ಟಿತು...

ನಿಮಗೂ ಜಗದೀಶರಗೂ ನನ್ನ ನಮನಗಳು....

ಸಂದೀಪ್ ಕಾಮತ್ said...

ಛೇ ಬೇಜಾರು:(

Supreeth.K.S said...

ಹೊಟೇಲಲ್ಲಿ ತಟ್ಟೇಲಿ ಕೈತೊಳೆಯಬಾರದು ಎಂದು ಗೊತ್ತಿತ್ತು ಆದರೆ ಅದನ್ನು ಪಾಲಿಸದೇ ಇರುವುದರಿಂದ ಆಗುವ ಪರಿಣಾಂಅ ತಿಳಿದಿರಲಿಲ್ಲ. ಹೃದಯಸ್ಪರ್ಶಿ ಬರಹ...

umesh desai said...

ಭಾಳ ದಿನಾ ಆದಮ್ಯಾಲ ಬರದೀರಿ ಬರಹ ಮನಕಲಕಿತು...

V.R.BHAT said...

ಚೆನ್ನಾಗಿದೆರೀ , ತುಂಬಾ ತಟ್ಟಿತು !

Jayalaxmi said...

ನಿಜ ಸುಮಾ,ದಿನ ನಿತ್ಯದ ಧಾವಂತದಲ್ಲಿ ನಾವು ಸುತ್ತಲಿನ ಜನರನ್ನು ಗಮನಿಸುವುದನ್ನು ಕಡಿಮೆ ಮಾಡಿದ್ದೇವೆ, ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ ಅನಿಸುತ್ತದೆ ಒಮ್ಮೊಮ್ಮೆ.

Jayalaxmi said...

ನಿಜ ಪರಾಂಜಪೆ ಸರ್... ಮುಕ್ತ ಮುಕ್ತದಲ್ಲಿ ಅತಿ ಶೀಘ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವೆ.ಧಾರಾವಾಹಿ ನೋಡ್ತಿದೀರಲ್ವಾ ? ಥ್ಯಾಂಕ್ಸ್.

Jayalaxmi said...

ನಿಮ್ಮ ಬ್ಲಾಗ್ ಓದಿದೆ ಸೀತಾರಾಮ್ ಸರ್. ಹೌದು ನಾ ಬರೆದ ವಿಷಯಕ್ಕೆ ನಿಮ್ಮ ಬರಹದ ವಿಷಯ ಹತ್ತಿರವಿದೆ ಮತ್ತು ಮಹತ್ವದ್ದಾಗಿದೆ. ಪ್ರತಿಕ್ರಿಯೆಗೆ ವಂದನೆ.

Jayalaxmi said...

ಥ್ಯಾಂಕ್ಸ್ ಸುನಾಥ್ ಕಾಕಾ.:-)

Jayalaxmi said...

ಥ್ಯಾಂಕ್ಸ್ ಪ್ರಕಾಶ್. ಹೀಗೆ ’ಕಣ್ಣು ತೆರಸುವ’ ಎಷ್ಟೋ ಘಟನೆಗಳು ಆಗಾಗ ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ.ಆದರೂ ನಮಗೆಲ್ಲ ವಿಪರೀತ ನಟನಾನಿದ್ದೆಯ ಚಟ! ಅಲ್ಲವೆ?:-)

Jayalaxmi said...

ಸಂದೀಪ್, ನೀವು ಬೇಜಾರು ಮಾಡಿಕೊಂಡಿದ್ದು ಮಾಣಿಗಳ ಪರಿಸ್ಥಿತಿಗೆ ತಾನೆ? ಅಥವಾ ಬೋರ್ ಆಯಿತಾ ಲೇಖನ?:-)

Jayalaxmi said...

ಥ್ಯಾಂಕ್ಸ್ ಸುಪ್ರೀತ್.:-)

Jayalaxmi said...

ಥ್ಯಾಂಕ್ಸ್ ಭಟ್ ಅವರೆ.

Rakesh Shettty said...

ಈ ಲೇಖನ ಓದುತಿದ್ದ ಹಾಗೆ ನೆನಪಿನ ಸುರಳಿಗಳು ಬಿಚ್ಚಿಕೊಂಡವು ..Gud One!

Jayalaxmi said...

ಥ್ಯಾಂಕ್ಸ್ ರೀ ಉಮೇಶ್ ಸರ್. ನನ್ನ ಆಲಸಿತನಾನೊ,ಅಥವಾ ಬರಿಯಾಕ ವಿಷಯ ಹೊಳೀದನನೋ ಏನೊ ಸುಮ್ನ ಇದ್ದೆ. ನೀವೆಲ್ಲಾ ಬರ್ಯೂದ್ ನೋಡಿ ನನ್ನ ಕೈಯಿಂದ ಯಾಕ್ ಆಗವಲ್ತು ಅನ್ನೊ ಹಳವಂಡ ಕಾಡ್ತಿತ್ತು. ಮನ್ನೆ ಅವಿನಾಶ್ ಕೂಡ ಮಾತಾಡೂವಾಗ ಈ ವಿಷ್ಯಾ ನೆನಪಿಗೆ ಬಂತು.ಬರ್ದೆ.

Jayalaxmi said...

ಥ್ಯಾಂಕ್ಸ್ ರಾಕೇಶ್.ಬಿಚ್ಚಿಕೊಂಡ ನೆನಪಿನ ಸುರುಳಿ ನಿಮ್ಮ ಬ್ಲಾಗ್‍ನಲ್ಲಿ ಹರಡಿ, ನಮ್ಮನ್ನೂ ತಲುಪಲಿ ಬೇಗ.:-)

minchulli said...

ಅಕ್ಕಯ್ಯ, ನೀವು ಅದೆಲ್ಲಿಂದ ಹೊತ್ತು ತರ್ತೀರೋ ಇಂಥವನ್ನು ? ನಮಗೂ ಇಂಥ ಅನುಭವ ಆಗಿರ್ತಾವೆ . ಆದ್ರೆ ಬರಿಯೋಕೆ ಗೊತ್ತಾಗಂಗಿಲ್ಲ ನೋಡ್ರಿ... ನೀವು ಭಲೇ ಜನ... ಹೊಟ್ಟೆಕಿಚ್ಚು ನಂಗೆ...
ಅಂದ ಹಾಗೆ ಯಾಕೋ ಮಂಗಳತ್ತೆ "ಮುಗುಳ್ನಗು" ಮುಗಿಸಿದ ಮೇಲೆ ಯಾಕೋ ಮುಕ್ತ ಕ್ಕೆ ಮಂಗಳ ಹಾಡಿದಾರಲ್ಲ ಅಂತ ಕೇಳ್ತಾ ಇದ್ದ ನನ್ನ ಹುಡುಗ .....

KMB said...

Chennagide, mana tattitu. Ee bagge holeyale illa. Lekhanadinda kannu teresidiri. Thanks.

akshata said...

ಹೌದಲ್ರಿ ಜಯಾ, ಸಣ್ಣ ವಿಷಯಾನೆ ಆದರೆ ನಾವು ಎಚ್ಚರಿಕೆಯಿಂದಿದ್ದರೆ ಒಬ್ಬರ ಮನಸ್ಸು ನೋಯುವುದನ್ನು ತಡೆಯಬಹುದು ಅಲ್ಲ? ಈ ಘಟನೆ ನನಗೆ ಗೊತ್ತೇಯಿರಲಿಲ್ಲ, ನೀವು ಬರೆದದ್ದು ಒಳ್ಳೆಯದಾಯಿತು ಬಿಡಿ, ನಾನೂ ಇಂತಹ ಒಂದು ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದವಳು ತಕ್ಷಣ ನಿಲ್ಲಿಸಿಬಿಟ್ಟೆ.
ಅಕ್ಷತಾ.

ಸಾಗರದಾಚೆಯ ಇಂಚರ said...

ಜಯಲಕ್ಷ್ಮಿಯವರೆ
ನಿಮ್ಮ ಮಾತು ನಿಜ
ಒಳ್ಳೆಯ ಅನುಭವಪೂರ್ಣ ಬರಹ

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

Jayalaxmi said...

‘ಮುಗುಳ್ನಗೆ’ಯ ಅಂದಚಂದದ ಕಡೆ ಗಮನಕೊಡ್ತಾ ಇದ್ದೀನಿ ಹುಡುಗಿ, ಅದಕ್ಕೆ ಮುಕ್ತ ಮುಕ್ತದಲ್ಲಿ ಕಾಣಿಸಿಕೊಳ್ತಿಲ್ಲ.ಮಂಗಳ ಹಾಡೊ ಪ್ರಶ್ನೆ ಇಲ್ಲವೆ ಇಲ್ಲ ಸಧ್ಯಕ್ಕೆ:-) ಹೇಳು ನಿನ್ನ ಹುಡುಗನಿಗೆ ಹಾಗಂತ.ನೀನು ಮೆಚ್ಚಿಕೊಳ್ಳದೆ ಇನ್ನ್ಯಾರಮ್ಮ ನನ್ನ ಬರಹವನ್ನ ಮೆಚ್ಕೋಬೇಕು? ;-) ಹೇಗಿದ್ದೀಯಾ ಶಮಾ?

Jayalaxmi said...

ಧನ್ಯವಾದ ಕೃಷ್ಣ ಅವರೆ.ನನ್ನ ಕಣ್ಣು ತೆರೆಸುವ ಮೂಲಕ ನಮ್ಮೆಲ್ಲರ ಕಣ್ಣು ತೆರೆಸುವ ಕೆಲಸ ಮಾಡಿದ್ದು ಜಗದೀಶ್ ರೈ.:-)

Jayalaxmi said...

ಖರೆ ಅಕ್ಷತಾ, ನಿಮಗ ಈ ವಿಶ್ಯಾ ಹೇಳೇನಿ ಅನ್ಕೊಂಡಿದ್ದೆ...
ಎಲ್ಲಿ ನನ್ನ ಗುರುದಕ್ಷಿಣೆ?;-)

Jayalaxmi said...

ಧನ್ಯವಾದ ಗುರು ಬಬ್ಬಿಗದ್ದೆಯವರಿಗೆ(ಸಾಗರದಾಚೆಯ ಇಂಚರ).:-)

Avinash Kamath said...

ಹೋಟೆಲ್ ಮಾಣಿಗಳ ಬಗ್ಗೆ ಒಂದು ವಿಶಿಷ್ಟ ಲೇಖನ ಬರೆದಿದ್ದಕ್ಕೆ ಅಭಿನಂದನೆಗಳು. ಈ ಮಾಣಿಗಳು ನಮ್ಮ ದೈನಂದಿನ ಬದುಕಿನ ಅಂಗವಾಗಿರುತ್ತಾರೆ ಆದರೆ ಅವರತ್ತ ನಮ್ಮ ಗಮನವೇ ಇರೋಲ್ಲ.

ಮುಂಬಯಿ ಹೋಟೆಲ್ಲುಗಳಲ್ಲಿ-ಬಾರ್ ಗಳಲ್ಲಿ ಮಾಣಿಗಳಾಗಿ ಕೆಲಸ ಮಾಡುವವರು ಬಹುತೇಕ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಿಂದ ಬಂದವರು. ಇವರ ಲೋಕವೇ ಬಹಳ ವಿಚಿತ್ರ. ಇಲ್ಲಿ ಮಾಣಿಗಳಾಗಿ ದುಡಿದವರು ಜಗದೀಶರಂತೆ, ರಾತ್ರಿ ಶಾಲೆಗಳಲ್ಲಿ ಕಲಿತು ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಹಗಲಿಡೀ ದುಡಿದು ತಮ್ಮದೇ ಪುಟ್ಟ ಹೋಟೇಲೊಂದನ್ನು ಕಟ್ಟಿ, ಮುಗಿಲೆತ್ತರಕ್ಕೆ ಬೆಳೆದ ರಮಾನಾಥ್ ಪಯ್ಯಡೆಯವರಂಥ ಜನರಿದ್ದಾರೆ. ಭೂಗತ ಲೋಕವನ್ನು ಪ್ರವೇಶಿಸಿ ಕತ್ತಲಲ್ಲೆಲ್ಲೋ ಕಳೆದುಹೋದವರೂ ಇದ್ದಾರೆ.
ಒಬ್ಬ ಹೋಟೇಲ್ ಮಾಣಿಯ ಜೊತೆ ನನಗಾದ ಅನುಭವ ಹಂಚಿಕೊಳ್ಳುತ್ತಿದ್ದೇನೆ. ’ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ’ ಎಂಬ ನಾಟಕವನ್ನು ಮಾಡಿಸುತ್ತಿದ್ದಾಗ, ಅದೇ ಗಂಗಾ ವಿಹಾರದಿಂದ ಮಾಣಿಯೊಬ್ಬ ನಮಗೆ ಚಹಾ ತಂದುಕೊಡುತ್ತಿದ್ದ. ನೋಡಲು ಕುಳ್ಳಗೆ-ವಿಚಿತ್ರವಾಗಿದ್ದ. ನಮ್ಮ ನಾಟಕದಲ್ಲಿ ’ವಿದೂಷಕ’ ಎಂಬ ಪಾತ್ರ ಇದೆ. ಒಂದು ದಿನ ಈ ಮಾಣಿಯನ್ನು ನೋಡಿ ನಮ್ಮ ನಿರ್ದೇಶಕರು "ವಿದೂಷಕ ಪಾತ್ರಕ್ಕೆ ನೀನು ಸರಿಹೊಂದುತ್ತೀಯಾ. ಮಾಡ್ತೀಯೇನೋ ಈ ಪಾತ್ರ?" ಅಂತ ಕೇಳಿದ್ರು. ಅದಕ್ಕೆ ಅವನ ಉತ್ರ ಏನಿತ್ತು ಗೊತ್ತಾ- "ಹೋಗ್ರಿರೀ.. ಕೊಡೋದೇ ಆದ್ರೆ ರಾಜ-ಮಹಾರಾಜರ ಪಾತ್ರ ಕೊಡಿ. ವಿದೂಷಕನ ಪಾತ್ರ ಎಲ್ಲ ನಾನ್ ಮಾಡೋಲ್ಲ!!!" :-)

ಜಲನಯನ said...

ಜಯಕ್ಕ ನಾಟಕಗಳ ಸಮಯದ ಘಟನೆಗಳು ನನಗೆ ನನ್ನ ಕಾಲೇಜ್ ದಿನಗಳನ್ನ ನೆನಪಿಸುತ್ತವೆ. ನಾಟಕ ಒಮ್ದು ರೀತಿಯ ಅನುಭವಕ್ಕೆ ಕಾರಣವಾದರೆ ಅದರ ಅಭ್ಯಾಸ ಸಮಯದ ಘಟನೆಗಳು ಹೊಸ ಹೊಸ ವಿಷಯಗಳನ್ನ ಜೀವನ ಪಾಠಗಳನ್ನ ಕಲಿಸುತ್ತವೆ...ನಮ್ಮ ಹಳ್ಳಿಯಲೂ ಹೀಗೇ...ನಮಗೆಲ್ಲಾ ಗೌರವ ಮಿಶ್ರಿತ ಭಯ ತರುವ ಆದರೂ ಆದರ್ಶಪ್ರಾಯರಾದ ಗುರು ಇದ್ದರು (ಎನ್.ಡಿ.ಬಜ್ಜಣ್ಣ ನವರು, ಕೈವಾರ ಮಹಾತ್ಮೆ, ಸೇಡಿನಕಿಡಿ, ಪುಟ್ಟಣ್ಣನವರ ಫಲಿತಾಂಶ ಮುಂತಾದ ಚಿತ್ರಗಳಲ್ಲಿ ಪಾತ್ರ ಮಾಡಿದ್ದರು)...ಅಭ್ಯಾಸದ ಸಮಯದಲ್ಲಿ ತಪ್ಪು ಮಾಡಿದರೆ ಮುಲಾಜಿಲ್ಲದೇ ದೊಡ್ಡವರಾದ್ರೂ ಬೈದೇ ಬಿಡುತ್ತಿದ್ದರು...ಬಾಲ ಕಲಾವಿದರಾದ ನಾವು ಏಟೂ ತಿಂದಿದ್ದೇವೆ....ಧನ್ಯವಾದ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ...

Jayalaxmi said...

:-) ಬಹುಶಃ ಅವರುಗಳ ಕನಸು ಅಷ್ಟು ಎತ್ತರಕ್ಕಿರುವುದರಿಂದಲೇ ಏನೊ ನೀವು ಹೇಳಿದಂತೆ ಅವರಲ್ಲಿ ಕೆಲವರು ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೆ ಇನ್ನೊಂದಿಷ್ಟು ಜನ ಭೂಗತಜಗತ್ತನ್ನು ಪ್ರವೇಶಿಸಿ ರಾಜನಂತೆ ಮೆರೆಯಬಹುದು ಎನ್ನುವ ಭ್ರಮೆಯಬಲೆಯಲ್ಲಿ ಬಿದ್ದು ಹೊರಬರಲಾರದೆ, ಪೋಲೀಸರ ಗುಂಡಿಗೊ, ಇಲ್ಲಾ ತಮ್ಮ ಶತೃಗಳ ಗುಂಡಿಗೆ ಬಲಿಯಾಗಿ ಮುಗ್ಧಜೀವದ ಎತ್ತರದ ಕನಸೊಂದು ಹೆಣವಾಗಿ ಉರುಳಿಬೀಳುತ್ತದೆ...
ಬಿಡುವು ಮಾಡಿಕೊಂಡು ಪ್ರತಿಕ್ರಿಯಿಸಿದಿರಲ್ಲ ಸರ್! ಖುಷಿ ಆಯ್ತು ನಿಮ್ಮ ಬರುವ ಕಂಡು.:-)

Jayalaxmi said...

ಜೀವನ ಪಾಠ ಯಾರಿಂದ ದೊರೆತರೂ ಅದು ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ತುಂಬಾ ಕೆಲಸ ಮಾಡುತ್ತದೆ ಆಝಾದ್ ಭಾಯ್. ಬೈದ್ರು ಅಂತ ಮುಖ ಊದಿಸಿಕೊಂಡು ಎದುರಿನವರ ಮೇಲೆ ಕೆಂಡ ಕಾರುವುದಕ್ಕಿಂತ, ಬೈದವರ ಉದ್ದೇಶ ಒಳ್ಳೆಯದಾಗಿದ್ದಲ್ಲಿ ಅದನ್ನು ನಾವು ಪಾಠದ ರೀತಿಯಲ್ಲಿ ಒಪ್ಪಿಕೊಂಡರೆ ಅಷ್ಟರ ಮಟ್ಟಿಗೆ ಜ್ಞಾನಾರ್ಜನೆ ಆದಂತೆಯೆ ಸರಿ ಅಲ್ಲವೆ?

Unknown said...

ನಾವು (ಜನ) ಸಣ್ಣ ವಿಷ್ಯಗಳ್ನ ಸರಿಯಾಗಿ ಅರ್ಥ ಮಾಡ್ಕೊಂಡ್ರೆ... ಇಂತದ್ದು ಆಗೋದಿಲ್ಲ... ತುಂಬ ಚೆನ್ನಾಗಿದೆ ಮೇಡಂ... ನಿಮ್ಮ ಅನುಭವ ಹೇಳ್ಕೊಂಡಿದ್ದಕ್ಕೆ ಧನ್ಯವಾದಗಳು ... :)