Tuesday, October 20, 2009

ಚಾಚುತ್ತಿವೆ ಕೈಗಳು.

ಬಾವಿಗೆ ಹೋಗಿ
ನೀರು ಸೇದಿ
ಜೋಡುಗೊಡವ ಹೊತ್ತು
ತರುವ ಶ್ರಮವಿಲ್ಲ
ಬಟನ್ ಒತ್ತಿದರೆ ಸಾಕು
ಉಕ್ಕುತ್ತದೆ ಗಂಗಾಜಲ
ಬಾವಿಯಿಂದ, ಸಂಪಿನಿಂದ
ಮನೆಯ ಪ್ರತಿ ಕೋಣೆಯಲ್ಲಿ
ಹೀಗಾಗಿಯೇ ಹುರಿಗಟ್ಟುತ್ತಿಲ್ಲ ಗಂಡಸರ ತೋಳು, ತೊಡೆ
ಹೆಂಗಸರ ಸೊಂಟ ಬಳಕುತ್ತಿಲ್ಲ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
*
ಆಧುನಿಕರು ನಾವು
ಪ್ರಪಂಚವೇ ಯಂತ್ರಮಯ
ನೋಡುವ ನೋಟ, ಆಡುವ ಮಾತು
ಕೇಳುವ ಹಾಡು, ಆಡುವ ಆಟ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
*
ಬರೆವ ಪತ್ರ, ಓದುವ ಸುದ್ದಿ
ಕುಡಿವ ನೀರು, ಮಾಡುವ ಅಡುಗೆ
ಹೆಪ್ಪುಗಟ್ಟುವ ಮೋಡ, ಸುರಿವ ಮಳೆ
ಬೆಳೆವ ಬೆಳೆ, ಕೋಯ್ಲಿನ ಕಲೆ
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ
ಯಾಂತ್ರಿಕವಾಗಿ
*
ಎಲ್ಲ ಎಲ್ಲವೂ ಯಂತ್ರಮಯ
ಇಲ್ಲವಾದರೆ ವ್ಯರ್ಥವಾಗುವುದಿಲ್ಲವೆ ಸಮಯ?
ಯಂತ್ರಗಳ ಒಡೆಯರು ನಾವು
ಆಳುತ್ತಿವೆ ಯಂತ್ರಗಳು
ಚಾಚುತ್ತಿವೆ ಕೈಗಳು
ಯಂತ್ರದೆಡೆಗೆ ಯಾಂತ್ರಿಕವಾಗಿ
***********
[ಮಗನಂತಿರುವ ಪುಟ್ಟ ಗೆಳೆಯನ ಕೋರಿಕೆಯ ಮೇರೆಗೆ ಬರೆದು, ಅವನಿಗೆ ಅಷ್ಟು ಇಷ್ಟವಾಗದೆ, ನನ್ನೊಂದಿಗೇ ಉಳಿದ ಕವನವಿದು. :-) ]

35 comments:

Anonymous said...

nice, I was thinking about this too so, was apt for the mood...when we think about gender equality , we see how the gender roles have become lopsided as well, while we have to snatch equality from the men , we also are losing ground at the home front where some of the beautiful cultural happiness we used to enjoy because our moms were stay at home moms. The duality never ends...perhaps that is progress?

Avinash Kamath said...

ಚೆನ್ನಾಗಿದೆ ಕವಿತೆ.. ಆಧುನೀಕರಣ, ಜಾಗತೀಕರಣ ಆ ಕರಣ ಈ ಕರಣ ಅಂತ ಹೇಳಿ ನಾವು ನಮ್ಮ ಬೇರನ್ನೇ ಮರೆಯುತ್ತಿದ್ದೇವೆ. ತುಂಬ ಚೆನ್ನಾಗಿದೆ ನಿಮ್ಮ ವಿಶ್ಲೇಷಣೆ.

ಅನಂತ said...

ಚೆನ್ನಾಗಿದೆ.. ಇಷ್ಟ ಆಯ್ತು.. :)

umesh desai said...

ಮೇಡಂ ಕವಿತಾದ ಆಶಯ ಚೆನ್ನಾಗಿದೆ ಆದರೆ ಈ ಚಕ್ರವ್ಯೂಹದಲ್ಲಿ ಸಿಕ್ಕು ಒದ್ದಾಡುತ್ತಿರುವ ನಮ್ಮಂತಹ ಆಧುನಿಕ "ಅಭಿಮನ್ಯು" ಗಳಿಗೆ ಮುಕ್ತಿಕೊಡುವ ಜಯದ್ರಥನೂ ಇಲ್ಲ ಇದೇ ಹಳಹಳಿ....!

ಬಿಸಿಲ ಹನಿ said...

ಮಶಿನ್‍ಗಳೊಂದಿಗೇ ಬದುಕುವ ಅನಿವಾರ್ಯತೆಯನ್ನು ಒತ್ತಿ ಹೇಳುವ ನಿಮ್ಮ ಕವನದ ಆಶಯ ತುಂಬಾ ಚನ್ನಾಗಿ ಮೂಡಿಬಂದಿದೆ. ಹಾಗೆಯೇ ಭಾವನೆಗಳಿಲ್ಲದ ಯಂತ್ರಗಳಂತೆ ಈ ಆಧುನಿಕ ಕಾಲದಲ್ಲಿ ನಾವೂ ಬದುಕುತ್ತಿರುವದು ಅನಿವಾರ್ಯವಾದರೂ ದುರಂತ. ಕವನಕ್ಕೆ ಅಭಿನಂಂದನೆಗಳು.

Jayalaxmi said...

hello Anonymous!!! ನೀವು ನಿಮ್ಮ ಹೆಸರನ್ನು ನಮೂದಿಸಿದ್ದರೆ ಸಂತೋಷವಾಗುತ್ತಿತ್ತು ನನಗೆ. ನಿಮ್ಮ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಬರೆದಿದ್ದರೆ ಇನ್ನೂ ಹೆಚ್ಚಿನ ಸಂತೋಷವಾಗುತ್ತಿತ್ತು. :)

Jayalaxmi said...

ಹೌದು ಅವಿನಾಶ್, ನಾವು ಯಂತ್ರಗಳಿಗೆಲ್ಲ ಎಷ್ಟೊಂದು ಒಗ್ಗಿಕೊಂಡಿದ್ದೇವೆ ಅಂದರೆ "ನಮ್ಮ ಬೇರುಗಳಾ? ಹಾಗಂದರೇನು?!! "ಎಂದು ಕೇಳಲು ಕಂಪ್ಯೂಟರಿನತ್ತ ಕೈ ಚಾಚುವಷ್ಟು!

Jayalaxmi said...

ನನ್ನಿ ಅನಂತ್ ಅವರೆ. :)

Jayalaxmi said...

ನೀವು ಹೇಳೂದು ಖರೆ ಅದರೀ ಉಮೇಶ್ ಸರ್.

Jayalaxmi said...

ನನ್ನಿ ಉದಯ್ ಸರ್.ಮನುಷ್ಯರಾದುದಕ್ಕೆ ಕೊನೆಪಕ್ಷ ಭಾವನೆಗಳನ್ನಾದರೂ ಪರಿಶುದ್ಧವಾಗಿ ಅಥವಾ ಯಾಂತ್ರಿಕವಾಗದಂತೆ ಉಳಿಸಿಕೊಳ್ಳುವುದು ಒಳ್ಳೆಯದು. ಭಾವನೆಗಳ ವಿಷಯದಲ್ಲೂ ಆಧುನೀಕರಾಗಲು ಹೊರಟರೆ ಮಾತ್ರ ಅಮ್ಮ ಮಗುವನ್ನು ಮುದ್ದಿಸಲು ಕೈ ಕೊಟ್ಟ ವಿದ್ಯುತ್ಚ್ಛಕ್ತಿಯನ್ನು ಕಾಯುತ್ತಾ ಕೂಡಬೇಕಾದ ಪರಿಸ್ಥಿತಿ ತಲೆದೋರೀತು!!

sunaath said...

ಬದುಕು ಹಾಗು ಭಾವನೆಗಳೆಲ್ಲಾ ಯಂತ್ರಮಯವಾಗಿರೋದನ್ನ ಚೆನ್ನಾಗಿ ಚಿತ್ರಿಸಿದ್ದೀರಿ.

Jayalaxmi said...

ನನ್ನಿ ಸುನಾಥ್ ಸರ್.

Laxman (ಲಕ್ಷ್ಮಣ ಬಿರಾದಾರ) said...

ಜಯಲಕ್ಷ್ಮೀಯವರೆ,
ನಿಮ್ಮ ಮಾತು ಖರೆ ಅದರಿ,
ಕಾಲಚಕ್ರ ತಿರುಗುತ್ತೆ,
ಯಂತ್ರ ಇಲ್ಲದ ಬದಕಿತ್ತು ಆವಾಗ,
ಯಂತ್ರವೇ ಎಲ್ಲದಕ್ಕು ಇವಾಗ,
ಯಂತ್ರವಿದ್ರೂ ಬಿಡಬೇಕಾಗತ್ತ ಮುಂದಕ್ಕ,
ಮತ್ತೆ ಮೋದಲಿನ ಸ್ಟಿತಿಗೆ ಹೋಗಲೆಬೇಕು.
ಇದು ಸೃಷ್ಟಿಯ ನಿಯಮ
ಆದರೂ
ನೀವೆಲ್ಲೋ ನಾವೆಲ್ಲೋ,
ಮುಖ ಪರಿಚಯವಿಲ್ಲಾ ಆದರೂ ಆತ್ಮೀಯರು,
ಅದೂ ಒಂದು ಯಂತ್ರದಿಂದ.
- ಲಕ್ಷ್ಮಣ ಬಿರಾದಾರ

Jayalaxmi said...

ಖರೆ ಲಕ್ಷ್ಮಣ್ ಸರ್ :)ಇಂಥಾ ಅನಿವಾರ್ಯತೆಗಳ ನಮ್ಮನ್ನ ಯಂತ್ರಗಳ ಜೊತಿಗೆ ಭದ್ರ ಬೆಸಗಿ ಹಾಕಿಬಿಟ್ಟಾವ.ಆದ್ರ ಇಷ್ಟೆಲ್ಲ ಯಂತ್ರಗಳು ಇಲ್ದಿರೊ ಹೊತ್ತಿನ್ಯಾಗ ಸಹ ಎಲ್ಲವೂ ವ್ಯವಸ್ಥಿತವಾಗೇ ಇತ್ತು ಅನ್ನೋದೂ ಸೋಜಿಗನ ಅಲ್ಲ?!

ಸೀತಾರಾಮ. ಕೆ. / SITARAM.K said...

NICELY & NEATLY SAID

ಕ್ಷಣ... ಚಿಂತನೆ... said...

ಜಯಲಕ್ಷ್ಮಿ ಮೇಡಮ್, ಕವಿತೆ ಅಂದಿನ-ಇಂದಿನ ದಿನಗಳ ನೋಟವನ್ನು ತೋರಿಸುತ್ತಿದೆ. ಆಧುನಿಕತೆಯ ಅನುಕೂಲ-ಅನಾರೋಗ್ಯವನ್ನು ತುಲನೆ ಮಾಡಿ ಬರೆದಿದ್ದೀರಿ. ಕವಿತೆ ಇಷ್ಟವಾಯಿತು.
ಧನ್ಯವಾದಗಳು.

Jayalaxmi said...

ನಿಮ್ಮ ಮೆಚ್ಚುಗೆಗೆ ನನ್ನಿ ಸೀತಾರಾಮ್ ಸರ್.

Jayalaxmi said...

bhchandru ಸರ್, ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಸಂತೋಷ. ನಿಮ್ಮ ಮೆಚ್ಚುಗೆಗೆ ನನ್ನಿ.

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ ಕವನ. ಕೊನೆಯ ಎರಡು ಸಾಲುಗಳು ಇನ್ನೂ ಇಷ್ಟವಾದವು.

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ ಕವನ. ಕೊನೆಯ ಎರಡು ಸಾಲುಗಳು ಇನ್ನೂ ಇಷ್ಟವಾದವು.

Jayalaxmi said...

ಮೆಚ್ಚುಗೆಗೆ ನನ್ನಿ ತೇಜಸ್ವಿನಿ. ಆ ಎರಡು ಸಾಲುಗಳೇ ಕವನದ ಜೀವಾಲ. ಉಳಿದೆಲ್ಲವೂ ಮೂಳೆ,ಮಾಂಸ,ಖಂಡ. ಅಲ್ಲವೆ? :)

Ittigecement said...

ಜಯಲಕ್ಷ್ಮೀಯವರೆ....

ಆಧಿನಿಕರಣದಿಂದ ಪ್ರಯೋಜನವೊಂದೇ ಅಲ್ಲ..
ಹಾನಿಕರವೂ ಇದೆ...
ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ...

ಇಷ್ಟವಾಯಿತು ನಿಮ್ಮ ಶಬ್ಧಗಳು...
ಅದರ ಭಾವಗಳು...

ಚಂದದ ಕವನಕ್ಕೆ ಅಭಿನಂದನೆಗಳು..

sughosh s. nigale said...

व्हा...व्हा....क्या बात है...

Jayalaxmi said...

ಮೆಚ್ಚುಗೆಗೆ ನನ್ನಿ ಪ್ರಕಾಶ್ ಅವರೆ.

Jayalaxmi said...

शुक्रिया सुघॊष. :)

Anonymous said...

**illa baraha installed illa, adakke englishu**
Chennagide kavithe aadre innondu swalpa bhaasha prayoga maadbahudittu, high school nalli bardidre ok (honest opinion)
nanna andaajina prakaara, nimma kannada haagu knowledge eradu sersidre innu chenagi baribahudu.
Well, yaantrika baduku kelvomme chennagiratte, tumba kashTa aagolla routine life anthashte. aadre innu kooDa naavu, SMS ninda wish maadade personally bheTi maadodu, emails biTTu patra bareyodu, mixi bittu rubbuva kallalli chaTney maadodu maadidre adralli siguva anandane bere. haagankondu dina maadokke shuru maadidre, tumba frustration aagatte, non-working woman gene eega time illa adige maadokke(courtesy TV programs) innu working woman gella gardening inda hididu beLLige neer kaaysokke haNdege soude olle upyogsi andre hege manglatte?

ಜಲನಯನ said...

ಜಯಕ್ಕಾ...ನನಗೆ ನೀರು ಸೇದಿ ಹಾಕಿದ ಗಂಡಸರ ಹುರಿಗಟ್ಟಿದ ತೋಳಿಗಿಂತಾ...
ನೀರ ಹೊರುವ ನೀರೆಯ ಬಳಕುವ ನಡು
ಹುಯ್ದಾಡುವ ಜಡೆ.....ಸರಿಯಾದ ಹೋಲಿಕೆ ಅನಿಸುತ್ತೆ...ಹಹಹ
ಚನ್ನಾಗಿವೆ ಸಾಲುಗಳು...ಯಂತ್ರಕೆ ಚಾಚುವ ಕೈಗಳು

bhadra said...

ಸೊಗಸಾಗಿ ಬರೆದಿದ್ದೀರಿ ಮೇಡಂ! ಓದುತ್ತಿದ್ದಂತೆಯೇ ನನ್ನ ಮನ ಹಳ್ಳಿಯ ನಮ್ಮ ಮನೆಯ ಕಡೆಗೆ ಓಡಿತು :)

minchulli said...

ನಿಜಕ್ಕೂ ಚೆಂದ ಇದೆ ಅಕ್ಕಯ್ಯ... ನಾವು ಆಧುನಿಕತೆಯ ತೆಕ್ಕೆಗೆ ಸಿಕ್ಕಿ ಇನ್ನೂ ಏನೇನಾಗುತ್ತೆವೋ...

Jayalaxmi said...

ನಿಮ್ಮ ನಿರ್ಭಿಡೆಯ ಪ್ರತಿಕ್ರಿಯೆ ಕಂಡು ಸಂತೋಷವಾಯ್ತು ವೀಣಾ..ಥ್ಯಾಂಕ್ಸ್.:)ನೀವು ಹೇಳೋದೂ ನಿಜಾನೇ, ಆದ್ರೆ ಹಾಗಂತ ಸಹಜವಾದುದನ್ನೆಲ್ಲ ತೊರೆಯುತ್ತಾ ಹೋಗಿ, ಬದುಕನ್ನು ಯಂತ್ರದ ಹಿಡಿತಕ್ಕೆ ಕೊಟ್ಟರೆ ಹೇಗೆ ವೀಣಾ?

Jayalaxmi said...

ಆಹಾ ಆಜಾದ್ ಭಾಯ್! ರಸಿಕತನ ಜಾಸ್ತಿಯಾಯ್ತು ಏನ್ ವಿಷಯ ಅತ್ತಿಗೆ ಇಂಡಿಯಾಕ್ಕೇನಾದ್ರು ಬಂದಿದಾರೋ ಹೇಗೆ?:)

Jayalaxmi said...

ಥ್ಯಾಂಕ್ಸ್ ಶ್ರೀನಿವಾಸ್ ಅವರೆ..:)& ಥ್ಯಾಂಕ್ಸ್ ಶಮಾ..:)

Badarinath Palavalli said...

ಮೇಡಂ,
ಯಾಂತ್ರಿಕತೆಯ ಸಪ್ಪೆತನವನ್ನು ಸಮರ್ಥವಾಗಿ ಚಿತ್ರಿಸಿದ್ದೀರಿ. ಕಾಲ ಚಾರ್ಲಿ ಚಾಪ್ಲಿನ್ನನ ’ಮಾಡ್ರನ್ ಟೈಂಸ್’ ಆಗುತ್ತಿದೆ.

ಹೊಸ ಕವನವನ್ನು ಹಾಕಿದ್ದೀನಿ, ನೋಡಿ ಮೇಡಮ್.

www.badari-poems.blogspot.com.

-ಬದರಿನಾಥ ಪಲವಳ್ಳಿ

Jayalaxmi said...

ಥ್ಯಾಂಕ್ಸ್ ಬದರಿನಾಥ್ ಸರ್.:-) ಈಗೊಂದಿಷ್ಟು ದಿನಗಳಿಂದ ನಾನು ಮನೆಗೆಲಸಗಳಲ್ಲಿ ಬ್ಯುಸಿಯಾಗಿದ್ದೆ ಜೊತೆಗೆ ’ಮುಗುಳ್ನಗೆ’(ನಮ್ಮನೆ)ಗೆ ಶಿಫ್ಟ್ ಆಗಿದ್ದರಿಂದ ನೆಟ್ ಕನೆಕ್ಷನ್ನೂ ಇರ್ಲಿಲ್ಲ..:-( ಮೊಬೈಲ್ನಲ್ಲಿ ಬ್ರೌಸ್ ಮಾಡಿದ್ರೆ ಕನ್ನಡ ಫಾಂಟ್ಸ್ ಕಾಣೊಲ್ಲ, ಸೊ ಯಾರ ಬ್ಲಾಗಿಗೂ ಭೇಟಿ ಕೊಡೋಕೆ ಆಗಿರಲೇ ಇಲ್ಲ. ಇಷ್ಟರಲ್ಲೆ ಬ್ನಿಮ್ಮ ಬ್ಲಾಗ್ ನೋಡ್ತೀನಿ.

Jayalaxmi said...

ಧನ್ಯವಾದಗಳು ವಸಂತ್.:-)