ಕಳೆದುಕೊಂಡಿದ್ದೇನೆ ನಿಜ ಚಹರೆ
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳು
ಯಾರ್ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು
ತೊಟ್ಟ ಒಳ ಉಡುಪಿನ ಬಣ್ಣ ಅವರವರಿಗಷ್ಟೆ ಗೊತ್ತಿರುವಂತೆ
ಓರಣಗೊಳಿಸುತ್ತಾ ಆಸೆಯಾಗುತ್ತದೆ
ನನ್ನ ಅಸಲು ಚಹರೆಯನ್ನೊಮ್ಮೆ ನೋಡಲು
ಇದಾ? ಇದಲ್ಲ, ಇದೂ ಅಲ್ಲ, ಅದಿರಬಹುದಾ?
ಮತ್ತದೋ ಅದೂ? ಅಲ್ಲ..
ಹಾಂ! ಸಿಕ್ಕಿತು ಇದೋ ಇದು
ಅಸಲುಚಹರೆಯಂತೇ ಕಾಣು...
ಇಲ್ಲ ಇದರಲ್ಲಿ ಸಾಮ್ಯತೆಗಳಿವೆ ಅಷ್ಟೆ...
ಕೊನರುತ್ತಿದೆ ಸಣ್ಣಗೆ ಕಳವಳವೊಂದು..
ಕಳೆದುಕೊಂಡಿರಿವುದೇನು
ಅರಿವಾಗುತ್ತಲೇ ಚಡಪಡಿಕೆ ಹೆಚ್ಚುತ್ತಿದೆ..
ಸ್ವಂತಿಕೆಗಾಗಿ, ನನ್ನತನಕ್ಕಾಗಿ, ಹಂಬಲಿಸತೊಡಗುತ್ತೇನೆ
ಮತ್ತೆ ಹುಡುಕಾಟ..
ಹುಡುಕಾಟದ ಭರದಲ್ಲಿ ಓರಣಗೊಳಿಸಿದ ಮುಖಗಳು
ಒಟ್ಟು ಕಲೆತು ಎಲ್ಲಾ ಗೋಜಲು ಗೋಜಲು
ಆಯಾಸವಾಗುತ್ತಿದೆ...
ಮೈಗೊ..? ಮನಸಿಗೊ..?
ಮನಸಿಗಾದರೆ ಯಾವ ಮುಖದ ಮನಸಿಗೆ ??
ಮತ್ತೆ ಹುಡುಕಾಟ..
ಮಡಿಲೊಂದು ನನ್ನನ್ನು ಪ್ರೀತಿಯಿಂದ ಕರೆಯುತ್ತಿದೆ
`ಬಾ ವಿಶ್ರಮಿಸು ಕ್ಷಣ ಹೊತ್ತು'
ಧಾವಿಸುತ್ತೇನೆ ಆ ಪ್ರೀತಿಯ ಮಡಿಲಿನೆಡೆಗೆ ಮುಖ ನೋಡದೆ
ನೋಡಿದ್ದೇ ಆದರೆ ಮತ್ಯಾವುದೋ ಮುಖವಾಡ
ಧರಿಸಿಬಿಟ್ಟೇನು ಎಂಬ ಭಯ
ಮಡಿಲಿನಲ್ಲಿ ಮಗುವಾಗುತ್ತೇನೆ ನಿಧಾನಕ್ಕೆ
ನನಗೆ ನಾನು ಸಿಕ್ಕಂತಾಗಿ
ನೆಮ್ಮದಿಯ ನಿದ್ರೆಗೆ ಜಾರುತ್ತೇನೆ
ಇನ್ನಿಲ್ಲದಂತೆ ಭದ್ರವಾಗಿ ಅವಚಿಕೊಂಡು ಮಡಿಲನ್ನು...
6 comments:
ತುಂಬಾ ದಿನ ಆಗಿತ್ತು ನಿಮ್ಮ ಬ್ಲಾಗ್ ನೋಡದೆ. ಖುಷಿಯಾಯ್ತು ಅಪ್‌ಡೇಟ್ ನೋಡಿ. ಕವನ ಕೂಡ ಚೆನ್ನಾಗಿದೆ. ಬರಿತೀರಿ. ಓದ್ತಿವಿ
ನೀವು ಬರೆದ ಎಲ್ಲ ಕವನಗಳಲ್ಲಿ, ಈ ಕವನ ನನಗೆ ತುಂಬ ಇಷ್ಟವಾಯ್ತು...
liked it.. keep it up
-sumangala
ಮುಖವಾಡಗಳ ಕವಿತೆ ಚೆನ್ನಾಗಿದೆ ಮೇಡಂ! ಮುಕ್ತದ ಮಂಗಳತ್ತೆಯ ಪಾತ್ರದಲ್ಲಿ ನಿಜಕ್ಕೂ ನಿಮ್ಮನ್ನು ಮೆಚ್ಚಿದ್ದೆ, ನೀವು ಬ್ಲಾಗಿನ ಅಂಗಳದಲ್ಲಿದ್ದೀರಿ ಎಂದು ತಿಳಿದು ಖುಷಿಯಾಯ್ತು.
ಹೇಮ ಪವಾರ್
ಕವನ ಕಟ್ಟಿಕೊಡುವ ಭಾವನೆ ಚೆನ್ನ."ಕಳೆದುಕೊಂಡಿದ್ದೇನೆ ನಿಜ ಚಹರೆ ಮುಖವಾಡಗಳ ರಾಶಿಯಲಿ.....ಅಲ್ಲಿಂದ
"ಇದಾ?ಇದಲ್ಲ.ಇದೂ ಅಲ್ಲ.ಅದಿರಬಹುದು......ಇಲ್ಲಿವರೆಗೂ ಕವನ ಬಿಗಿಯಾಗಿದೆ.
ನಂತ್ರ ಕವನ ಬಿಗಿ ಕಳೆದುಕೊಂಡು ಪೂರ್ತ ವಾಚ್ಯವಾಗಿದೆ.
ಅಕ್ಕಯ್ಯ...ಅದ್ಭುತವಾದ ಕವನ...
ನಿಮ್ಮ ಸರಳ ಸುಂದರ ಭಾಷೆಯ ಕಂಡ್ರೆ ನಂಗೆ ಹೊಟ್ಟೆ ಕಿಚ್ಚು...
Post a Comment