Tuesday, May 19, 2009

ಮಗಳಿಗೊಂದು ಬಹಿರಂಗ ಪತ್ರ.


ಗೊಂಬೆ,
ನಾನು ಹೀಗೆ ನಿನಗೆ ಬರಹದ ಮೂಲಕ ಹೇಳುತ್ತಿರುವುದು ಹೊಸದಲ್ಲವಾದ್ದರಿಂದ ನಿನಗೆ ಯಾವ ಆಶ್ಚರ್ಯವೂ ಆಗದೆಂದು ಗೊತ್ತು ನನಗೆ. ನಾವಿಬ್ಬರೂ ಕೆಲವು ವಿಷಯಗಳನ್ನ ಪರಸ್ಪರ ನೇರವಾಗಿ ಹೇಳಿದರೆ ಎಲ್ಲಿ ಆಭಾಸ ಆಗುತ್ತೋ ಅನ್ನೋ ಕಾರಣಕ್ಕೆ ಆಗಾಗ ಹೀಗೆ ಬರೆದು ಹೇಳ್ಕೊಳ್ತೇವೆ ಆಲ್ವಾ? ಆದರೆ ನಾನು ಹೀಗೆ ಬಹಿರಂಗವಾಗಿ ಎಲ್ಲರೂ ಓದುವಂತೆ ಬರೆದಿರುವುದನ್ನು ಕಂಡು ಮುಜುಗರವಾಗ್ತಿದೆಯಾ? ನಾನು ಹೀಗೆ ಬರೆಯೋಕೆ ಕಾರಣ ಇದೆ ಕಂದ. ಓದುತ್ತಾ ಹೋಗು ನಿನಗೆ ಅರ್ಥ ಆಗುತ್ತೆ..
ಇಷ್ಟು ದಿನ ನಿನ್ನ ಅಮ್ಮ ಪೂರ್ತಿ ಅಲ್ಲದಿದ್ದರೂ ಹೆಚ್ಚಿನಂಶ ನಿನ್ನ ಕುರಿತು ನೆಮ್ಮದಿಯಿಂದಾನೆ ಇದ್ದಳು. ಕಾರಣ ನೀನು ಈವರೆಗೆ ಇದ್ದ ವಾತಾವರಣ. ಸ್ಕೂಲು,ಹೈಸ್ಕೂಲು ಮನೆ ಮುಂದಿನ ತೋಟವಿದ್ದಂತೆ, ಅಲ್ಲಿ ಅನಾಹುತ ಅಪಘಾತಗಳ ಸಂಭವ ಇಲ್ಲ ಅಥವಾ ಕಮ್ಮಿ ಅನ್ನೊ ನಿರಾಳತೆ. ಆದರೆ ಇನ್ನು ಮುಂದೆ ನೀನು ಕಾಲೇಜು ಮೆಟ್ಟಿಲು ತುಳಿಯುವಾಕೆ. ಅಲ್ಲಿಗೆ ಮಗು, ಮನೆಯಂಗಳದ ತೋಟ ದಾಟಿ ನಗರದ ಕಾಡಿನೊಳಗೆ ಕಾಲಿಡುತ್ತಿದ್ದೀಯಾ, ಜೋಪಾನ ಅಲ್ಲಿ ಜೀವನಕ್ಕಾಧಾರವಾದ ಅನೇಕ ಥರದ ಹಣ್ಣು , ಹಂಪಲು, ವನಸ್ಪತಿಗಳಿವೆಯಾದರೂ ಕಾಡು ಮೃಗಗಳೂ ಬೇಟೆಗೆ ಹೊಂಚಿ ಕುಳಿತಿರುತ್ತವೆ.. ನಾನು ಹೇಳುತ್ತಿರುವ ಧಾಟಿ ಸ್ವಲ್ಪ ಕ್ಲೀಷೆ ಆಗ್ತಿದೆಯೇನೊ... ಇರು ಸರಳವಾಗಿ ಹೇಳೋ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ನೀನೀಗ ನಿನಗೆ ಹೊಸದು ಎನಿಸುವ ಪ್ರಪಂಚಕ್ಕೆ ಕಾಲಿಡ್ತಿದೀಯಾ. ನಿನ್ನ ಸಂಭ್ರಮ, ದುಗುಡ ಎರಡೂ ಅರ್ಥ ಆಗ್ತವೆ ನನಗೆ. ನಾನೂ ಹಿಂದೆ ನಿನ್ನ ಸ್ಥಿತಿಯನ್ನು ದಾಟಿ ಬಂದವಳೇ ಅಲ್ಲವೇ? ಸಂಭ್ರಮ ಸಹಜ ಹಾಗೆಯೇ ದುಗುಡವೂ. ಭಯ ಬೇಡ ಪುಟ್ಟಾ ನಿನ್ನ ಜೊತೆ ನಾನಿದೀನಿ , ನಿನ್ನ ಅಪ್ಪಾಜಿ ಇದಾರೆ ನಿನ್ನ ಪುಟ್ಟ ಭಾವ ಜೀವದಾಸರೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಲು. ಆದರೆ ಎಲ್ಲವನ್ನೂ ನಾವೇ ಮಾಡಲಾಗುವುದಿಲ್ಲ ಹೌದು ತಾನೆ? ನಿನ್ನನ್ನು, ನಿನ್ನತನವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಈಗ ಸಂಪೂರ್ಣ ನಿನ್ನದೇ. ನೀನು ತಿಳಿದಷ್ಟು ಲೋಕ ಸರಳವಾಗಿಲ್ಲ, ಸುಂದರವೂ ಅಲ್ಲ. ನಾನು ಹೀಗೆ ಹೇಳ್ತಿದೀನಿ ಅಂದ ಮಾತ್ರಕ್ಕೆ ಭಯಾನಕವೂ ಆಗಿಲ್ಲ ಬಿಡು. ಪಿಯುಸಿಯಲ್ಲಿ ನಿನ್ನ ಜೋತೆಗಿರೋರೆಲ್ಲ ನಿನ್ನ ಹಾಗೇನೇ ಒಂದು ಆತಂಕ ಹೊತ್ತೇ ಮೊದಲ ದಿನ ಕ್ಲಾಸಿಗೆ ಹೆಜ್ಜೆ ಇಟ್ಟಿರ್ತಾರೆ. ಮೊದಲಿದ್ದ ಸ್ನೇಹಿತರಿಲ್ಲ ಇಲ್ಲಿ. ಎಲ್ಲರೂ ಎಲ್ಲರಿಗೂ ಹೊಸಬರೇ. ಹೀಗಾಗಿ ಮೊದಲಿನ ವಾತಾವರಣ ಮರೆತು ಹೊಸದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಾಗಬಹುದೇನೋ. ಭಯ ಬೇಡ, ಸ್ನೇಹಮಯಿ ನೀನು, ಬೇಗ ಹೊಸ ಸ್ನೇಹಿತರು ಸಿಗುತ್ತಾರೆ ಬಿಡು. ಆದರೆ ನಕ್ಕು ಮಾತಾಡಿಸಿದವರೆಲ್ಲ ಸ್ನೇಹಿತರಾಗಿಬಿಡೋದಿಲ್ಲ ನೆನಪಿರಲಿ. ಓದು ಈಗ ನಿನಗೆ ಮುಖ್ಯವಾಗಬೇಕು. ಹಾಗಂತ ನಿನ್ನ ನೆಚ್ಚಿನ ಹವ್ಯಾಸಕ್ಕೇನು ನಾನು ಅಡ್ಡಿ ಮಾಡೋಲ್ಲ ಭಯ ಬೇಡ. ಆದರೆ ನಿಮ್ಮಗಳ ಭವಿಷ್ಯ ರೂಪಗೊಳ್ಳ ತೊಡಗುವುದೇ ಹಂತದಲ್ಲಿ. ನಿಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕಾದ ಜವಾಬ್ದಾರಿಯೂ ನಿಮ್ಮದೇ. ನಾವು ತಂದೆ ತಾಯಿಗಳು ನಿಮ್ಮಗಳ ಸದ್ವಿಚಾರಗಳಿಗೆ, ಒಂದು ಹಂತದವರೆಗಿನ ಆರ್ಥಿಕ ನೆರವಿಗೆ, ಒಳ್ಳೆಯ ಭಾವನೆಗಳಿಗೆ ಆಸರೆಯಾಗಿ ನಿಲ್ಲಬಲ್ಲೆವೆ ಹೊರತು ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಬೇಡ ನಮ್ಮಿಂದ. ಅಮ್ಮನ ಮಾತು ಕಠೋರ ಅನಿಸ್ತಿದೆಯಾ ಗೊಂಬೆ? ಇಲ್ಲ ಪುಟ್ಟಾ ಇದೇ ವಾಸ್ತವ. ಈಗಲೇ ನಿನಗೆ ಮತ್ತು ಅಮ್ಮೂಗೆ ವಿಚಾರ ಗೊತ್ತಿದ್ದರೆ ಮುಂದೆ ಭ್ರಮೆಯಲ್ಲಿ ಬದುಕಲಾರಿರಿ.
ಏನ್ ಗೊತ್ತಾ? ಇನ್ನು ಮುಂದೆ ನಿನ್ನ ಜೊತೆ ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ ವರ್ತಿಸಬಹುದು. ಸಿಟ್ಟಿಗೆಳಬೇಡ ನನ್ನ ಮಾತು ಪೂರ್ತಿ ಕೇಳು ಮೊದಲು. ಇಲ್ಲೀವರೆಗೆ ಯಾವತ್ತೂ ನಿನ್ನ ಮತ್ತು ಅಮೋಲನ್ನ ಬೇರೆಯಾಗಿ ನೋಡಿಕೊಂಡಿಲ್ಲ. ಹಾಗಂತ ಅವನು ಹೆಚ್ಚು ನೀನು ಕಡಿಮೆ ಅನ್ನೊ ಭಾವನೆಯಲ್ಲ. ನನಗೆ ನೀವಿಬ್ಬರೂ ಒಂದೇ..
ಆದರೆ ಈಗ ನಿನಗೆ ಅಂತಲೇ ಕೆಲವು ಮಾತುಗಳನ್ನ ಹೇಳಬೇಕಿದೆ, ನಿನಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತೋ ಅರಿಯೆ. ಆದರೂ ನಿನಗೆ ತಿಳಿಯುವಂತೆ ಹೇಳುವ ಪ್ರಯತ್ನ ಮಾಡ್ತೀನಿ. ನೋಡು ಪುಟ್ಟಾ, ಸೃಷ್ಟಿಯಲ್ಲಿ ಹೆಣ್ಣು ಗಂಡುಗಳ ದೇಹ ರಚನೆಯಲ್ಲಿ ಅಗಾಧ ವ್ಯತ್ಯಾಸಗಳಿವೆ. ಆದ್ದರಿಂದಲೇ ಗಂಡು ಮತ್ತು ಹೆಣ್ಣು ಅಂತ ಗುರುತಿಸಲು ಸಾಧ್ಯವಾಗೋದು. ''ಇದೇನು ಅಮ್ಮಾ ಹೀಗೆ ಸಿಲ್ಲಿ ಸಿಲ್ಲಿ ಆಗಿ ಮಾತಾಡ್ತಿದಾಳೆ " ಅನಿಸ್ತಿದೆಯಾ? ಇರು ಒಮ್ಮೆ ನನ್ನ ಮಾತು ಮುಗಿಸಿಬಿಡ್ತೀನಿ, ನಂತರ ನಿನ್ನ ಕಮೆಂಟ್ಸ್ ಎಲ್ಲಾ ಸರೀನಾ? ದೇಹ ರಚನೆ ಬರೀ ಮನುಷ್ಯರಿಗೆ ಮಾತ್ರ ಸೀಮಿತ ಅಲ್ಲ ಅಂತ ಗೊತ್ತು ತಾನೆ? ನಾವು ಹೆಣ್ಣುಮಕ್ಕಳು ಗಂಡಸರ ಸಮಾನರು ಅಂತೆಲ್ಲ ಕೂಗಾಡೊ ಹುಡುಗಿಯರನ್ನ, ಹೆಂಗಸರನ್ನ ಕಂಡು ಒಮ್ಮೊಮ್ಮೆ ಕನಿಕರ ವಾಗುತ್ತೆ. ಯಾಕೆ ಗೊತ್ತಾ? ಅರೆ! ಸಮಾನತೆಗೆ ಯಾರು ಹೋರಾಡಬೇಕು ಹೇಳು? ತಮಗಿಂತ ಇದಿರಿನವರು ಮೇಲ್ ಮಟ್ಟದಲ್ಲಿದಾರೆ ಅಂದು ಕೊಳ್ಳೋರು. ಹೆಣ್ಣು ಗಂಡು ಸಮಾನರಾಗೇ ಇರುವಾಗ ಮೇಲು ಕೀಳು ಅನ್ನೋ ಭಾವನೆ ಯಾಕೆ ಅಲ್ಲವಾ? ಪ್ರಕೃತಿ ಇಬ್ಬರಿಗೂ ಒಂದೊಂದು ಥರದ ಶಕ್ತಿ ಕೊಟ್ಟಿದೆ. ಅದು ಸದುಪಯೋಗ ಅಥವಾ ದುರುಪಯೋಗ ಪಡಿಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ ಅಲ್ಲವೇ? ಆದರೂ ನಾವು ಅಮ್ಮಂದಿರು ನೀವು ಹುಡುಗಿಯರನ್ನ ಹೆಚ್ಚು ಶಿಸ್ತಿನಿಂದ ಅಥವಾ ಒಂದು ಲಿಮಿಟ್ಟಿನಲ್ಲಿರಿ ಎನ್ನುವಂತೆ ಬೆಳೆಸುತ್ತೇವೆ. ಇದರರ್ಥ ಹುಡುಗ ಹೆಚ್ಚು, ಹುಡುಗಿ ಕಮ್ಮಿ ಅಂತ ಅಲ್ಲ ಅದರ ಅರ್ಥ. ಯಾಕೆ ಹಾಗೆ ವರ್ತಿಸ್ತೀವಿ ಗೊತ್ತಾ? ಪ್ರಕೃತಿ ನಮಗಿತ್ತ ವರ ಶಾಪವಾಗದಿರಲಿ ಅಂತ. ಅರ್ಥ ಆಗ್ಲಿಲ್ಲ ಅಲ್ಲಾ? ಮೊದಲ ಬಾರಿ ನಿನ್ನೊಂದಿಗೆ ವಿಷಯ ಮಾತಾಡ್ತಿದೀನಿ. ಸೊ ಎಷ್ಟರ ಮಟ್ಟಿಗೆ ನಿನಗೆ ತಿಳಿಯುವಂತೆ ಹೇಳ್ತಿನೋ...
ನೀನು ಎಷ್ಟೋ ಕತೆಗಳನ್ನ ಓದಿದೀಯಾ, ಧಾರಾವಾಹಿ ಮತ್ತು ಸಿನಿಮಾಗಳನ್ನ ನೋಡ್ತೀಯಾ ಎಲ್ಲ ಕಡೆ ಹೆಚ್ಚಾಗಿ ಏನು ಹೇಳ್ತಾರೆ ಹೇಳು? ಸಮಾಜ ಹೆಣ್ಣು ಗಂಡುಗಳಲ್ಲಿ ಬೇಧ ಭಾವವನ್ನ ತೋರಿಸುತ್ತೆ, ಹೆಣ್ಣನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ, ಅವಳನ್ನು ಹಿಂಸಿಸಲಾಗುತ್ತೆ ಮುಂತಾಗಿ ಅಲ್ಲವೇ? ಹೌದು ಅದೆಲ್ಲ ನಡೀತಿರೋದು ನಿಜಾನೆ. ಅದಕ್ಕೆ ಕಾರಣ ನಮ್ಮ ಅಂಧಾನುಕರಣೆ ಅಥವಾ ಹೆಣ್ಣಿಗೆ ಅನುಕೂಲಕರವಾದ ನಿಯಮವನ್ನ ವಿಪರೀತಗೊಳಿಸಿ ಅದನ್ನು ಮೂಢ ನಂಬಿಕೆಯನ್ನಾಗಿಸಿ ಅವಳ ಮೇಲೆ ದಬ್ಬಾಳಿಕೆ ಮಾಡುವುದು. ಹೇಗೆ ಸ್ವೇಚ್ಛೆಯ ಬದುಕು ತಪ್ಪೋ ಹಾಗೇ ಥರದ ದಬ್ಬಾಳಿಕೆ ಅಥವಾ ಸಂಕೋಲೆಯ ಬದುಕೂ ತಪ್ಪೇ..
ಸೃಷ್ಟಿಯಲ್ಲಿ ಮನುಷ್ಯ ಪ್ರಜ್ಞಾವಂತನಾಗುತ್ತಾ ಬಂದತೆಲ್ಲ ಒಂದು ಸುಂದರ ಬದುಕಿಗಾಗಿ ಕೆಲವು ನಿಯಮಗಳನ್ನ ಹಾಕಿಕೊಂಡ. ಅವೆಲ್ಲ ಅನುಕೂಲಕರ ನಿಯಮಗಳೇ. ಗಂಡು ದೈಹಿಕವಾಗಿ ಹೆಣ್ಣಿಗಿಂತ ಸದೃಢನಾಗಿರುವುದರಿಂದ ಮನೆಯಾಚೆಗಿನ ಕೆಲಸಗಳನ್ನ ಆತ ಮಾಡಬೇಕು (ಆಗೆಲ್ಲ ಈಗಿನಂತೆ ಯಾವ ಉಪಕರಣ ಸಾಧನಗಳೂ ಮನುಷ್ಯನ ಅನುಕೂಲಕ್ಕೆ ಇರ್ಲಿಲ್ವಲ್ಲ ರಾಜಾ, ಇವೆಲ್ಲಾ ಇತ್ತೀಚಿನ ಸಂಶೋಧನೆಗಳು ಅಲ್ಲವೇ?). ಹೆಣ್ಣು ದೈಹಿಕವಾಗಿ ಬಲವಲ್ಲದ ಕಾರಣ ಆಕೆ ಮನೆಯಲ್ಲಿನ ಕೆಲಸಗಳನ್ನ ಮಾಡಬೇಕು ಅನ್ನೋದು ಒಂದು ಒಪ್ಪಂದ ಅಥವಾ ನಿಯಮವಾಗಿ ರೂಪುಗೊಂಡಿತ್ತು. ಇದು ಇಬ್ಬರಿಗೂ ಅನುಕೂಲಕರ ನಿಯಮ ಅಲ್ಲವೇ? ಹಾಗೆಂದ ಮಾತ್ರಕ್ಕೆ ಹೆಣ್ಣು ಹೊರಗೆ ದುಡಿಯಲೇ ಬಾರದು ಎಂಬ ನಿಯಮವೇನೂ ಇಲ್ಲ. ಹಾಗೆಯೇ ಸೃಷ್ಟಿ ಕಾರ್ಯದ ಅಥವಾ ಮಕ್ಕಳನ್ನು ಹೆರುವ ಜವಾಬ್ದಾರಿಯನ್ನ ಪ್ರಕೃತಿಯೇ ಹೆಣ್ಣಿಗೆ ವಹಿಸಿದ್ದು. ಗಂಡಿಗೆ ಬಸಿರಾಗುವ ಅವಕಾಶವೇ ಇಲ್ಲ. ಹೀಗಾಗಿ ಮುಟ್ಟು, ಬಸಿರು, ಬಾಣಂತನ ಎಲ್ಲವುಗಳಿಂದ ಹೆಣ್ಣಿನ ದೇಹ ಸೂಕ್ಷ್ಮವಾಗುವುದು. ಇವುಗಳಿಂದಾಗುವ ತೊಂದರೆಯನ್ನ, ನೋವನ್ನ ಹೆಣ್ಣೇ ಅನುಭವಿಸಬೇಕು. ಅದಕ್ಕೆಂದೇ ಮುಟ್ಟು ಆರಂಭವಾದಾಗಿನಿಂದ ಹೆಣ್ಣುಮಕ್ಕಳನ್ನ ಅಮ್ಮಂದಿರು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಹುಡುಗನಿಗಿಂತ ಹುಡುಗಿಯ ಮೇಲೆ ಹೆಚ್ಚು ಕಟ್ಟಳೆಗಳನ್ನು ಹೇರುವುದು. ಕಟ್ಟಳೆಗಳ ಹಿಂದಿರುವುದು ಕಾಳಜಿ ಕಂದ, ಅನುಮಾನವಲ್ಲ, ಅಪನಂಬಿಕೆಯಲ್ಲ. ಕಾಳಜಿಯೇ ವಿಪರೀತವಾಗಿ ಕಾನೂನು ಎಂಬಂತೆ ಹೆಣ್ಣು ಎಂದರೆ ಹೀಗೇ ಇರಬೇಕು ಅನ್ನುವ ನಿಯಮವಾಗಿಬಿಟ್ಟಿತು ನೋಡು! ಗಂಡು ಹೆಣ್ಣಿನ ಸಮಾಗಮದಿಂದ ಗಂಡಿಗೆ ದೈಹಿಕವಾಗಿ ಯಾವ ವ್ಯತ್ಯಾಸವೂ ಆಗದು. ಆದ್ದರಿಂದಲೇ ಆತ ಸುಲಭವಾಗಿ ತಪ್ಪು ಮಾಡಿಯೂ ತಪ್ಪಿಸಿಕೊಂಡು ಬಿಡಬಲ್ಲ, ಅಥವಾ ಅದು ತಾನಲ್ಲ ಎಂದು ನಿರಾಕರಿಸಿಬಿಡಬಲ್ಲ . (ಈಗಿನ ವಿಜ್ಞಾನದ ಸಹಾಯದಿಂದಾಗಿ ತಪ್ಪಿಸಿಕೊಳ್ಳುವುದು ಮೊದಲಿನಷ್ಟು ಸುಲಭವಲ್ಲ ಬಿಡು ಆದರೆ ಎಲ್ಲ ನಿರ್ಧಾರವಾಗೊವಷ್ಟರಲ್ಲಿ ಗಂಡಿನ ಕೊಡುಗೆಗೆ ಸ್ಕೂಲಿಗೆ ಹೋಗೋ ವಯಸ್ಸಾಗಿರುತ್ತೆ! ) ಆದರೆ ಹೆಣ್ಣು...? ಅಮ್ಮ ಅಂದರೆ ಎಲ್ಲ ಮಜಲುಗಳನ್ನು ದಾಟಿ ಬಂದವಳಲ್ಲವೇ? ಅದಕ್ಕೆ ಪುಟ್ಟಾ ನೀವುಗಳು ಮುಂದೆ ನೋವುಣ್ಣದಿರಲಿ ಅಂತ ಅಮ್ಮ ಸ್ವಲ್ಪ ಸ್ಟ್ರಿಕ್ಟ್ ಆಗ್ತಾಳೆ, ಎಲ್ಲಿಗೆ ಹೊರಟೆ ಅಂತ ಕೇಳ್ತಾಳೆ, ಯಾಕೆ ಅಂತ ಕೇಳ್ತಾಳೆ, ಬೇಡ ಅಂತ ಹೇಳ್ತಾಳೆ. ಕೆಲವೊಮ್ಮೆ ಖಡಾಖಂಡಿತವಾಗಿ ಮಗಳ ಕೆಲವು ಕೋರಿಕೆಗಳನ್ನ ನಿರಾಕರಿಸಿಬಿಡ್ತಾಳೆ.
ಆಗೆಲ್ಲ ಕೋಪಿಸ್ಕೋಬೇಡ ಬಂಗಾರ, ನಿನ್ನ ಅಮ್ಮನ ಎಲ್ಲ ಮಾತುಗಳ, ನಿರಾಕರಣೆಗಳ ಹಿಂದೆ ನಿನ್ನೆಡೆಗಿನ ಅಪಾರ ಪ್ರೀತಿ ಮತ್ತು ಮಗಳು ನೋವುಣ್ಣದಿರಲಿ ಅನ್ನುವ ಕಾಳಜಿ ಇರುತ್ತೆ. ನನ್ನ ಮಗಳು ನೀನು. ನಿನ್ನಲ್ಲಿ ನಾ ಕೊಟ್ಟ ಸಂಸ್ಕಾರ ಇದೆ, ರಕ್ತಗತವಾಗಿ ಬಂದ ಸಂಯಮ ಇದೆ ಅನ್ನುವುದೇ ದೊಡ್ಡ ಧೈರ್ಯ ನನಗೆ. ನೀನು ವಿವೇಚನೆಯುಳ್ಳ ಹುಡುಗಿ ಅಂತ ಗೊತ್ತು. ನಿನ್ನನ್ನು ಅನುಮಾನಿಸಲಾರೆ ನಾನು, ಅಪನಂಬಿಕೆಯಿಂದ ನಿನ್ನನು ನೋಡುವುದಿಲ್ಲ. ಹುಡುಗರೊಡನೆ ಯಾಕೆ ಮಾತು ಅಂತ ಅನ್ನುವುದಿಲ್ಲ. ಹಾಗಂತ ಅತಿಶಯದ ವರ್ತನೆಯನ್ನು ಸಹಿಸಲಾರೆ. . ಜೋಪಾನ ಕಂದ ನಾಗರೀಕ ಕಾಡಿನಲ್ಲಿ ಹಸುವೇಷದ ಹಂದಿಗಳಿವೆ, ಕೋಗಿಲೆಯ ಕಂಠದ ಹದ್ದುಗಳಿವೆ. ಯಾರನ್ನೂ ತಕ್ಷಣಕ್ಕೆ ನಂಬದಿರು. ಹಾಗಂತ ಎಲ್ಲವನ್ನೂ ಅನುಮಾನದಿಂದಲೇ ನೋಡಬೇಕಿಲ್ಲ. ದೇವರು ಕೊಟ್ಟ ವಿವೆಚನೆಯನ್ನ ನಿನ್ನ ಭಾವೋದ್ವೇಗಕ್ಕೆ ಬಲಿ ಕೊಡದಿರು. ಇಂದಿನಿಂದ ನಾ ನಿನ್ನ ಸ್ನೇಹಿತೆ ಕೂಡಾ. ನಿನ್ನ ಅಮ್ಮ ಸದಾ ನಿನ್ನೊಂದಿಗಿದ್ದಾಳೆ ಕೂಸೆ. ಮೊದಲು ನಿನ್ನನ್ನು ನೀನು ಮೆಚ್ಚುವಂತಾಗು, ಜಗ ಹೊಗಳುವುದು ತಾನಾಗಿಯೆ.

19 comments:

Ahalya said...

ಬಹಳ ದಿನಗಳ ನಂತರ ಒಂದು ಪೋಸ್ಟ್ . ಕುತೂಹಲದಿಂದ ಓದಿದೆ . ಯಾಕೋ ಅಪೂರ್ಣ ಅನಿಸಿತು . ಇನ್ನೂ ಏನೋ
ಹೇಳೋದು ಉಳಿದಿದೆ ಅನ್ನೋ ಹಂಗೆ. ಬರಲಿ ಮುಂದಿನ ಕಂತು ..
ನಡುನಡುವೆ ಮಗಳ (ನಿರೀಕ್ಷಿತ) ಪ್ರತಿಕ್ರಿಯೆಗಳಿಗೆ ಪೂರ್ವಭಾವಿ ಉತ್ತರಗಳ ಹಂಗಿಲ್ಲದೆ ..
ನಲ್ಮೆ , ಅಹಲ್ಯಾ

Ahalya said...

ಎಲಾ ಎಲಾ ! ಹೇಳಿದ ತಕ್ಷಣ ಉಳಿದ ಭಾಗ ಪ್ರತ್ಯಕ್ಷ ! ಅಮ್ಮನ ಲಹರಿಯ ಹಿಂದಿನ ಕಾಳಜಿಗೆ ಸಲಾಂ. ಅದಿತಿ ಸಮಚಿತ್ತದಿಂದ ಬಾಳಲಿ , ತನ್ನೊಳಗೆ ಮತ್ತು ಸುತ್ತಲೂ ತನ್ನಿಷ್ಟದ ಹೂಗಳನ್ನು ಅರಳಿಸುವ ಸಾಮರ್ಥ್ಯ ಪಡೆಯಲಿ...

Jayalaxmi said...

ನಿಮ್ಮೆಲ್ಲರ ಹಾರೈಕೆ ಅವಳ ಜೊತೆಗಿರಲಿ ಅಹಲ್ಯಾ. ನಿಮ್ಮ ನಲ್ಮೆಗೆ ಮನಸು ಒದ್ದೆ ಒದ್ದೆ.

Anonymous said...

ಜಯಕ್ಕಾ, ಪತ್ರ ತುಂಬಾ ಚಂದ... ಖುಷಿಯಾಯ್ತು ಓದಿ... ಹೀಗೆ ಬರೆಯುತ್ತಿರಿ.. ನಾವಿದ್ದೇವೆ ಓದೋದಿಕ್ಕೆ...

Avinash Kamath said...

ತುಂಬ ದಿನಗಳ ನಂತರ ಬರೆದಿದ್ದೀರಿ. ಆದರೆ ತುಂಬ ಅರ್ಥಪೂರ್ಣವಾಗಿದೆ ನಿಮ್ಮ ಈ ಲೇಖನ. ಮಕ್ಕಳು- ಅದರಲ್ಲೂ ಮಗಳು- ಕಾಲೇಜಿನ ಮೆಟ್ಟಿಲನ್ನು ಏರಿದಾಗ/ ಮಕ್ಕಳು ಟೀನ್ ಏಜ್ ಗೆ ಕಾಲಿಟ್ಟಾಗ ಪಾಲಕರಲ್ಲಿ ಒಂದು ತುಮುಲ, ದುಗುಡ, ಒಂದು ರೀತಿಯ ಭಯ ಉಂಟಾಗುವುದು ಸಹಜ. ಇಂಥ ಸಮಯದಲ್ಲಿ ಮಕ್ಕಳ ಹಾಗೂ ಪಾಲಕರ ಮಧ್ಯೆ ವಿಚಿತ್ರ ತೆರನಾದ ಒಂದು ಕಂದರ ನಿರ್ಮಿತವಾಗುತ್ತದೆ. ಆ ಕಂದರಕ್ಕೆ ಒಂದು ಸೇತುವೆಯನ್ನು ಕಟ್ಟುವುದು, ಹೊಸದಾದ ಒಂದು ಜಗತ್ತಿಗೆ ಬೆರಗುಗಣ್ಣುಗಳಿಂದ ಕಾಲಿಡುತ್ತಿರುವ ಮಕ್ಕಳಿಗೆ ಮನ ಮುಟ್ಟುವಂತೆ, ಮನಸ್ಸಿಗೆ ತಟ್ಟುವಂತೆ, ಅದಕ್ಕೂ ಮುಖ್ಯವಾಗಿ ಅವರ ಮನ ನೋಯದಂತೆ, ದಾರಿಯನ್ನು ತೋರುವುದು ಪಾಲಕರ ಧರ್ಮವೂ ಹೌದು, ಜವಾಬ್ದಾರಿಯೂ ಹೌದು. ಆದರೆ ಅದು ಅತ್ಯಂತ challenging ಕೆಲಸ. ಆದದ್ದಾಗಲಿ, ಮಕ್ಕಳಿಗೆ ತಾನಾಗಿಯೇ ಎಲ್ಲ ತಿಳಿಯುತ್ತೆ ಎಂಬ ಅಸಡ್ಡೆಯೂ ಪಾಲಕರಲ್ಲಿರುವುದು ಸಹಜ. ಅಥವಾ ಅದು ಅಸಡ್ಡೆ ಆಗಿರದೇ ಒಂದು ತೆರನಾದ ಆಸೆಯೂ ಆಗಿರಬಹುದು. ಒಂದು hope ಆಗಿರಬಹುದು.

ಈ ಲೇಖನದ ಮೂಲಕ ನೀವು ನಿಮ್ಮ ಗೊಂಬೆಗೆ ಏನು ಹೇಳಬಯಸುತ್ತಿದ್ದೀರೋ, ಅದು ಪ್ರತಿಯೊಬ್ಬ ತಾಯಿ ತನ್ನ ಮಗಳಿಗೆ ಹೇಳಬಯಸುವ ಆದರೆ ಹೇಳಲಾಗದೇ ಚಡಪಡಿಸುವಂತಹ ವಿಷಯ. ಒಳ್ಳೆಯ ದಾರಿಯನ್ನು ತೋರಿಸಿದ್ದೀರಿ. ನಿಮ್ಮ ಮಗಳು ಖಂಡಿತ ಆ ದಾರಿಯಲ್ಲಿ ನಡೆಯುತ್ತಾಳೆಂಬ ವಿಶ್ವಾಸ ನನ್ನದು. ಏಕೆಂದರೆ ಅದಿತಿ ಮತ್ತು ಅಮೋಲ್ ನನಗೆ ಗೊತ್ತು. I know them and I believe them. ಒಂದು ದಿನ ನೀವು ಅತ್ಯಂತ ಹೆಮ್ಮೆಯಿಂದ ’ಇವರು ನನ್ನ ಮಕ್ಕಳು’ ಎಂದು ಹೇಳುವಂತಹ ದಿನ ಖಚಿತವಾಗಿಯೇ ಬರುತ್ತೆ..ನೋಡುತ್ತಿರಿ.

Jayalaxmi said...

ನಿಮಗೆ ಯಾವ ಮಕ್ಕಳ ಬಗ್ಗೆ ನಂಬಿಕೆ ಇಲ್ಲ ಹೇಳಿ ಅವಿ? ಎಲ್ಲ ಮಕ್ಕಳಲ್ಲೂ ದೇವರನ್ನ ಕಾಣೊ ನಿಮಗೆ, ಚಿಕ್ಕಂದಿನಿಂದ ನಿಮ್ಮ ಹೆಗಲೇರಿ ಆಡಿದ ನನ್ನ ಮಕ್ಕಳ ಮೇಲೆ ನಂಬಿಕೆ ಇರದಿದ್ದೀತೆ? ನಿಮ್ಮ ನಂಬಿಕೆಯೇ ನನ್ನದೂ ಸಹ. ನಿಮ್ಮ ಈ ಪ್ರೀತಿಯಿಂದಾನೇ ನೀವೆಂದರೆ ಅವರಿಬ್ಬರಿಗೂ ಅಚ್ಚುಮೆಚ್ಚು.

Jayalaxmi said...

ಶಮಾ ನಿಮ್ಮ ಮೆಚ್ಚುಗೆಗೆ ಧನ್ಯವಾದ. ನೀವುಗಳೂ ನಾನು ಮರೆತಿರಬಹುದಾದ ಮಾತುಗಳನ್ನು ಹೇಳಿದಲ್ಲಿ ಈ ಪುಟ್ಟ ಗೌರಮ್ಮಗಳ ಗೊಂದಲಮಯ ವಿಚಾರಗಳಿಗೆ ಒಂದು ಚೆಂದದ ಸೆಲೆ ದೊರಕಬಹುದು. ಏನಂತೀರಾ?

umesh desai said...

ಮೇಡಮ್ ನಿಮ್ಮ ಕಳಕಳಿ ಮೆಚ್ಚಿದೆ.. ಬಹಿರಂಗ ಪತ್ರ ಯಾವ ತಪ್ಪೂ ಇಲ್ಲ ಎಲ್ಲರಿಗೂ ಅನ್ವಯಿಸುವ ವಿಷಯವೇ...
ನಿಜ ನೀವು ಹೇಳಿದಂತೆ ಬರೀ ಹಣ್ಣು ಹಂಪಲ ಇಲ್ಲ ಈ ವನದಲ್ಲಿ ಮೃಗಗಳೂ ಇವೆ.. ಕಾಳಜಿ ಮಾಡಬೇಕಾದದ್ದೇ
ನಾ ನನ್ನ ಮಗಳಿಗೂ ಹೇಳಬಹುದೇನೊ ಆದರೆ ಅವಳೀಗ ಮೂರನೇತ್ತಾ ಆದರೂ ಈಗಲೇ ಹೆಣ್ಣು ಎಂಬ ಭಾವ ಅವಳಲ್ಲಿ
ಮನೆ ಮಾಡಿದೆ ನಾ ನೋಡುತ್ತಿರುವೆ...ಕಾಯುತ್ತಿರುವೆ. ಅಂದಹಾಗೆ ಕೆಟ್ಟ ಕುತೂಹಲ ಆ ಎರಡು ಮಕ್ಕಳಲ್ಲಿ ನಿಮ್ಮ ಮಗಳು
ಯಾರು ..ಹಾಂ ನಿಮ್ಮ ಮಗಳ ಭವಿಷ್ಯ ಯಾವಾಗಲೂ ನಳನಳಿಸಲಿ...!

Jayalaxmi said...

ಇಬ್ಬರೂ ನನ್ನ ಮಕ್ಕಳೆ.ಅವಳಿ ಮಕ್ಕಳು ನನಗೆ.ಕಂದು ಬಣ್ಣದ ಬಟ್ಟೆ ತೊಟ್ಟವಳು ಮಗಳು. ಬೇಡ ಉಮೇಶ್ ಸರ್, ಇಷ್ಟು ಬೇಗ ಮಗಳಿಗೆ ಏನೂ ಹೇಳಬೇಡಿ.ಅರ್ಥ ಆಗುವ ವಯಸ್ಸೂ ಅಲ್ಲ ನಿಮ್ಮ ಮಗಳದು. ಅದರಿಂದ ಪುಟ್ಟ ಜೀವಗಳ ಮುಗ್ಧತೆ ಕಲುಶಿತಗೊಳ್ಳುವ ಸಂಭವ ಹೆಚ್ಚು.

Ittigecement said...

ಜಯಲಕ್ಷ್ಮೀಯವರೆ....

ಇಷ್ಟುದಿನ ಗೂಡಿನಲ್ಲಿದ್ದು ರೆಕ್ಕೆ ಬಲಿತ ಮರಿಗಳಿಗೆ
ಹಾರುವ ಬಯಕೆ ಸಹಜ...

ಮರಿ ಹಕ್ಕಿ ಸುಖವಾಗಿರಲೆಂಬ ಆಶಯ .....
ಎಚ್ಚಿರಿಕೆಯ ಸಂದೇಶ...
ತಪ್ಪು ದಾರಿ ಹಿಡಿಯದಿರಲೆಂಬ ಬಯಕೆ...
ತನ್ನಿಂದ ದೂರವಾದಿತೆಂಬ ಆತಂಕ.....

ಹೆಣ್ಣು ಹಡೆದ ತಾಯಿಯ ಭಾವ ಚಂದವಾಗಿ ಬಿಂಬಿಸಿದ್ದೀರಿ....

ತನ್ನ ಮಗಳನ್ನು ಹಾಸ್ಟೇಲಿನಲ್ಲಿ ಬಿಡುವ...
ನನ್ನಕ್ಕ ನೆನಪಾದಳು....

ಚಂದವಾದ ಬರಹಕ್ಕೆ ಅಭಿನಂದನೆಗಳು....

PARAANJAPE K.N. said...

ಮಕ್ಕಳೆಡೆಗೆ ಅಮ್ಮನಿಗಿರುವ ಕಾಳಜಿಯ ಪ್ರತೀಕ ಈ ಬರಹ.ಚೆನ್ನಾಗಿದೆ. ನನ್ನ ಬ್ಲಾಗಿಗೂ ಒಮ್ಮೆ ಬ೦ದು ಹೋಗಿ.

Roopa said...

ತುಂಬ ಅರ್ಥಪೂರ್ಣವಾಗಿದೆ ನಿಮ್ಮ ಈ ಲೇಖನ/ಪತ್ರ!! ನನ್ನ ತಾಯಿ ನನಗೆ ಹೇಳಿದ ಮಾತುಗಳು ನೆನಪಾದವು.. ಮುಂದೆ ಬಹುಶಃ ನಾನೂ ನನ್ನ ಪುಟ್ಟಿಗೆ ಇವೇ ಮಾತುಗಳನ್ನ repeat ಮಾಡುವೆ:)
ನಿಮ್ಮ ಗೊಂಬೆ ಅದಿತಿಗೆ ನನ್ನ ಹಾರೈಕೆಗಳು!!

Jayalaxmi said...

ನೀವು ಹೇಳಿದ ಎಲ್ಲ ಮಾತುಗಳೂ ನಿಜ ಪ್ರಕಾಶ್.ತಾಯಿಯ ತುಮುಲಗಳಿಗೆ ಹಲವಾರು ಮುಖಗಳು. ಅಕ್ಕನ ಮಗಳ ಓದು ಹೇಗೆ ನಡೀತಿದೆ? ನಿಮ್ಮ ಅಭಿನಂದನೆಗೆ ನನ್ನಿ(ಥ್ಯಾಂಕ್ಸ್‍ನ ಕನ್ನಡ ರೂಪ ನನ್ನಿ.)

Jayalaxmi said...

ನಿಮ್ಮ ಮೆಚ್ಚ್ಗೆಗೆ ಧನ್ಯವಾದ ಪರಾಂಜಪೆಯವರೆ. ಖಂಡಿತ ಭೇಟಿ ಕೊಡುವೆ ನಿಮ್ಮ ಬ್ಲಾಗ್‍ಗೆ.

Jayalaxmi said...

ರೂಪಶ್ರೀ ನಿಮ್ಮ ಹಾರೈಕೆಗಳನ್ನ ನನ್ನ ಪುಟ್ಟಿಗೆ ತಲುಪಿಸಿದೆ.. ನಿಮ್ಮ ಬ್ಲಾಗ್‍ನಲ್ಲಿಯ ಪುಟ್ಟಿಯ ಫೋಟೋಸ್ ಮತ್ತು ಅವಳ ಎಲ್ಲ ಮೊದಲ ದಿನಗಳ ದಿನಾಂಕಗಳ ನೋಡಿ ಮತ್ತೊಮ್ಮೆ ನನ್ನನ್ನು ನಿಮ್ಮಲ್ಲಿ ಕಾಣುತ್ತಿದ್ದೇನೇನೊ ಅನಿಸಿತು. ನಾನೂ ಡೈರಿಯಲ್ಲಿ ಇವನ್ನೆಲ್ಲ ಬರೆದಿಟ್ಟದ್ದು ನೆನಪಾಯ್ತು.. :-) ತಾಯಿ ಸರಪಣಿ ಹೀಗೇ ಮುಂದುವರೆಯುತ್ತಲೇ ಇರುತ್ತದೆ. ನನ್ನಿ.

ಜಲನಯನ said...

ನೀವು..ಮುಕ್ತ ಮುಕ್ತ ದ ಮಂಗಳತ್ತೆ (ಮನೆಯೊಂದು ಮೂರುಬಾಗಿಲು ಮುಖ್ಯಮಂತ್ರಿಯ ಅರ್ಧಾಂಗಿ)....ಅಂದ್ಕೊಂಡಿದೀನಿ.
ನನಗೆ ಮುದ್ದು ಮಕ್ಕಳ ಫೋಟೋ ತಾಯಿಯ ಅಭಿಮಾನ-ವಾತ್ಸಲ್ಯದ ನೋಟ ಮೆಚ್ಚುಗೆಯಾದದ್ದು.
ಚನ್ನಾಗಿ ಈ ಸಂಬಂಧಗಳನ್ನು ಬಿಡಿಸಿದ್ದೀರಿ..ಅಕ್ಷರಗಳ ಮುಖೇನ......ಅಭಿನಂದನೆಗಳು

Jayalaxmi said...

ಜಲನಯನ, ನಿಮ್ಮ ಅಭಿನಂದನೆಗೆ ಪ್ರಣಾಮ.. ಹೌದು ಆಕೆಯೇ ನಾನು.:-) ನಿಮ್ಮ ಹೆಸರು ಗೊತ್ತಾಗ್ಲಿಲ್ಲ..

Anonymous said...

ಜಯಕ್ಕ, ನನ್ನ ಬ್ಲಾಗ್ http://minchulli.wordpress.com ನಲ್ಲಿ ಮೂರು ನಿಮಿಷಗಳಲ್ಲಿ ಓದಿ ಮುಗಿಸಬಹುದಾದ "ಒಲವೆ ನಮ್ಮ ಬದುಕು ಮತ್ತು ಕನಸಿನ ಹೆಣ" ಎಂಬ ಪುಟ್ಟ ಬರಹವೊಂದಿದೆ.. ಓದಿ ಪ್ರತಿಕ್ರಿಯಿಸಿದರೆ ಸಂತೋಷ..
ಶಮ, ನಂದಿಬೆಟ್ಟ

ಜಲನಯನ said...

ಮಂಗಳತ್ತೆ...!!! ಹಹಹ...ಸಾರಿ...ಜಯಲಕ್ಷ್ಮಿ ಮೇಡಂ....ನಾನು...ಜಲನಯನ....
ನಿಮ್ಮ ಪರಿಚಯವಾದ್ದು ನನಗೆ ಬಹಳ ಸಂತೋಷಕರ ಸಂಗತಿ ಏಕೆಂದರೆ ..ನಾನೂ.. ರಂಗ ಮತ್ತು ನಟನೆಗೆ ಒಂದು ರೀತಿಯಲ್ಲಿ ಮಾರುಹೋದವನು...ಮತ್ತು ...ಒಮ್ಮೆ ನನ್ನ ಬೆಲೆಬಾಳುವ ವಸ್ತುವೊಂದನ್ನು ಮಾರಿ (ನನ್ನ ನೌಕರಿ ಸಿಗುವುದಕ್ಕಿಂತ ಕೊಂಚ ಮೊದಲ ದಿನಗಳಲ್ಲಿ) ನಮ್ಮ ಗೆಳೆಯರ ಬಳಗದ ನಾಟಕದ ಸ್ಟೇಜ್ ಗೆ ಖರ್ಚುಮಾಡಿದ್ದೆ...ಬಣ್ಣ ಹಚ್ಚಿ ರಂಗಕ್ಕಿಳಿದು ಖುಷಿಪಟ್ಟಿದ್ದೆ.
ನಿಮ್ಮ ಮಂಗಳತ್ತೆ...ಪಾತ್ರ..ನನಗೆ ಇಷ್ಟವಾಗದ ಪಾತ್ರ.....ಆದರೆ ಅದಕ್ಕೆ ತುಂಬು ಜೀವ ತುಂಬಿ ನಿಮ್ಮ ಪ್ರತಿಭೆಯನ್ನು ಮೆರೆದಿದ್ದೀರ.....ಪರಾಕ್...ಬಹು ಪರಾಕ್....
ನನ್ನ ನಿಜ ನಾಮಧೇಯ....!!!!???? ....ನನ್ನ ಬ್ಲಾಗ್ ಗೆ ಭೇಟಿ ಕೊಡಿ..ಹಾಗೇ...ಹೇಳಲಾಗದು...ಆಯ್ತಾ...!!!??