Wednesday, June 10, 2009

ಪುಟಾಣಿ ಪಾರ್ಟಿ.





'Children's film society' ನಿರ್ಮಾಣದ 'ಪುಟಾಣಿ ಪಾರ್ಟಿ' ನಾನು ಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತು ಸಮರ್ಥ ನಿರ್ದೇಶಕರು. ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರು ಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದ ನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನು ಹೊರಹೊಮ್ಮಿಸಿದ ವ್ಯಕ್ತಿ ಅವರು. ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತು ತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಎಲ್ಲ ಮಕ್ಕಳು ೫ನೆ ತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. ಮೊದಲು ಅವರಿಗೆ ಚಿತ್ರ ಕತೆಯನ್ನು ಮತ್ತು ಅವರವರ ಪಾತ್ರಗಳನ್ನು ವಿವರಿಸಿ,ಮೂರು ದಿನ ಸತತವಾಗಿ ಮಕ್ಕಳಿಗೆ ಹೇಗೆ ಅಭಿನಯಿಸಬೇಕು ಮತ್ತು ಯಾಕೆ ಹಾಗೆ ಅಭಿನಯಿಸಬೇಕು ಅನ್ನುವುದನ್ನು ಹೇಳಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಎಷ್ಟು ಚೆನ್ನಾಗಿ ರಾಮ್ ಸರ್ ತಯಾರು ಮಾಡಿದ್ದರೆಂದರೆ ಕ್ಯಾಮೆರಾದ ಪರಿಚಯವಿದ್ದ ನಾನು ಮತ್ತು ಭವಾನಿ ಕೆಲವೊಮ್ಮೆ ಗೊಂದಲಗೊಳ್ಳುತ್ತಿದ್ದೆವಾದರೂ ಮಕ್ಕಳು ಮಾತ್ರ ಅಂಗಳದಲ್ಲಿ ಲಗೋರಿ ಆಡಿದಷ್ಟೇ ಸಹಜವಾಗಿ ಅಭಿನಯಿಸಿಬಿಡುತ್ತಿದ್ದರು!! ರಂಜಿತಾ ಜಾಧವ್, ಶರತ್,ಗುರುದತ್ತ,ಪವನ,ದೀಪಕ್, ಮಮತಾ,ಮನೋಜ್ ಮುಂತಾದ ಮಕ್ಕಳನ್ನು ಮೊದಲ ಸಲ ನೋಡಿದಾಗ ಅವರುಗಳ ಖದರು ಕಂಡು "ಇದೇನಪ್ಪಾ ಮಕ್ಕಳ ಜೊತೆ ನಾನು -೧೦ ದಿನ ಕಳೆಯಬಲ್ಲೇನಾ?!" ಅನಿಸಿತ್ತು. ಆದರೆ ದಿನ ಕಳೆದಂತೆಲ್ಲ ಮಕ್ಕಳು ಎಷ್ಟು ಹತ್ತಿರದವರಾದರೆಂದರೆ ಇತ್ತೀಚೆಗೆ ನಾನು ಡಬ್ಬಿಂಗ್ಗಿಗೆ ಅಂತ ಧಾರವಾಡಕ್ಕೆ ಹೋದಾಗ ಎಲ್ಲರೂ ಸಂಜೆ ಬಂದು ನನ್ನೊಡನೆ ಎರಡು ಗಂಟೆಗಳ ಕಾಲ ಹರಟೆ ಹೊಡೆಯುತ್ತಾ ಕುಳಿತರು.ನಾನೇ "ಹೊತ್ತಾಗುತ್ತೆ ಹೋಗ್ರೋ ಇನ್ನ ಮನೆಗೆ" ಅಂತ ಬಲವಂತ ಮಾಡಿ ಕಳಿಸಬೇಕಾಯಿತು(ಆಗ ಅವರಿಗೆಲ್ಲ ಪರೀಕ್ಷೆಯ ಸಮಯ ಬೇರೆ!!)

ರಂಜಿತಾ
ಧಾರವಾಡದ ಒಂದು ಅಪ್ಪಟ ಪ್ರತಿಭೆ. ಹುಡುಗಿಗೆ ಎಂಥಾ ಆತ್ಮವಿಶ್ವಾಸ ಮತ್ತು ಅಭಿನಯದ ತುಡಿತವೆಂದರೆ ಇಡೀ ಯುನಿಟ್ಟೆ ( ಚಿತ್ರ ತಂಡ ) ಬೆರಗಾಗುತ್ತಿತ್ತು ಈಕೆ ಅಭಿನಯಿಸುವಾಗ. ರಂಜಿತಾ ಚಿತ್ರದಲ್ಲಿ ನನ್ನ ಮಗಳ ಪಾತ್ರ(ಗೀತಾ) ನಿರ್ವಹಿಸಿದ್ದಾಳೆ. ಒಂದು ಶಾಟ್.. ರಂಜಿತಾ ಸಭಿಕರೆದುರು ನಿಂತು ಊರಲ್ಲಿಯ ಅನಾನುಕೂಲತೆಗಳಿಂದಾಗಿ ಮಕ್ಕಳಿಗಾಗುತ್ತಿರುವ ತೊಂದರೆಗಳನ್ನು ವಿವರಿಸುತ್ತಿರುತ್ತಾಳೆ. ಮೈಲುದ್ದದ ಸಂಭಾಷಣೆ ಅದು. ಸರಾಗವಾಗಿ,ಭಾವಪೂರ್ಣತೆಯಿಂದ ಎಂಥಾ ಅದ್ಭುತವಾಗಿ ಅಭಿನಯಿಸುತ್ತಿದ್ದಾಳೆ ಎಂದು ನಾವೆಲ್ಲ ಬಿಟ್ಟ ಕಣ್ಣಿಂದ ನೋಡುತ್ತಿರುವಾಗಲೇ " ಕಟ್" ಅನ್ನುವ ರಾಮ್ ಸರ್ ಅವರ ಸಿಟ್ಟಿನ ಧ್ವನಿ ಕೇಳಿ ಬೆಚ್ಚಿಬಿದ್ದೆವು! ಅಲ್ಲಿವರೆಗೂ ರಾಮ್ ಸರ್ ಸಿಟ್ಟಲ್ಲಿದ್ದುದನ್ನ ನಾನು ಕಂಡೆ ಇರಲಿಲ್ಲ.. ಅವರ ಕೋಪಕ್ಕೆ ಕಾರಣ ಅಷ್ಟು ಅದ್ಭುತವಾಗಿ ಅಭಿನಯಿಸುತ್ತಿದ್ದ ರಂಜಿತಾಳ ಬಗಲಲ್ಲಿ ಇರಬೇಕಾದ ಚೀಲವೊಂದು ಸಹಾಯಕ ನಿರ್ದೇಶಕರ ಮರೆವಿನಿಂದಾಗಿ ಮಿಸ್ ಆದುದು. ಮತ್ತೆ ಮಗು ಅಷ್ಟುದ್ದದ ಡೈಲಾಗ್ ಅನ್ನು ಅಷ್ಟೆ ತನ್ಮಯತೆಯಿಂದ ಹೇಳಬಲ್ಲುದಾ? ಅನ್ನುವ ಆತಂಕ ಸಿಟ್ಟಿಗೆ ಕಾರಣ . ಆದರೆ ರಂಜಿತಾ ಮೊದಲಿನಷ್ಟೇ ತನ್ಮಯತೆಯಿಂದ ಮತ್ತೆ ಅಭಿನಯಿಸಿದಳು!

ಏಳನೇ
ಕ್ಲಾಸ್ನಲ್ಲಿ ಓದುತ್ತಿರುವ ಶರತ್ ಒಳ್ಳೆ ನುರಿತ ನಟನೇನೋ ಎನ್ನುವಷ್ಟು ಆತ್ಮವಿಶ್ವಾಸದಿಂದ ಅಭಿನಯಿಸಿದ ಹುಡುಗ. ಗುರುದತ್ತ, ಪವನ, ದೀಪಕ್, ಮನೋಜ್ ಮತ್ತು ಮಮತಾ ಕೂಡಾ ಅಷ್ಟೆ , ಒಳ್ಳೆಯ ನಟರು, ವಿನಯವನ್ನು ಮೈಗೂಡಿಸಿಕೊಂಡ ಮಕ್ಕಳು.
ಚಲನಚಿತ್ರ ಕನ್ನಡದ್ದಾದರೂ ನಟವರ್ಗ ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಚಿತ್ರ ತಂಡದ ಉಳಿದೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದ ಬಂದವರು ಎನ್ನುವುದು ವಿಶೇಷತೆ. ೧೮ ದಿನಗಳ ಕಾಲ ಧಾರವಾಡದಲ್ಲಿ ಮಿನಿ ಭಾರತ ನೆಲೆಯೂರಿತ್ತು!! :-)
ತಿಂಗಳೋಪ್ಪತ್ತಿನಲ್ಲಿ ಚಿತ್ರದ ಬಿಡುಗಡೆಯ ನಿರೀಕ್ಷೆ ಇದೆ. ಚಿತ್ರ ನಿರ್ಮಾಣದ ವೇಳೆಯ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮತ್ತೆ ಬರೆಯುತ್ತೇನೆ..

11 comments:

Ittigecement said...

ಜಯಲಕ್ಷ್ಮಿಯವರೆ...

ಫೋಟೊ ಹಾಗೂ...
ನಿಮ್ಮ ಲೇಖನ ವಿವರಣೆ ಕೇಳ್ತಾ ಇದ್ರೆ ಕುತೂಹಲ ಜಾಸ್ತಿ ಆಗ್ತಾ ಇದೆ...

ಕಥಾವಸ್ತೂ ಕೂಡ ಚೆನ್ನಾಗಿದೆ...

ಆ ಮಕ್ಕಳ ಪ್ರತಿಭೆ ಕೇಳಿ ಖುಷಿಯಾಯ್ತು...

ಇನ್ನಷ್ಟು ಘಟನೆ ಕುರಿತು ಬರೆಯಿರಿ...

ನಮಗೆಲ್ಲ ಸಿನೇಮಾ , ಚಿತ್ರಿಕರಣದ ಬಗೆಗೆ ಸಹಜ ಕುತೂಹಲವಿದೆ...

ಪಿ. ಎನ್. ರಾಮಚಂದ್ರರ ಹಾಗೂ ಅವರ ತಂಡದ ಪ್ರಯತ್ನಕ್ಕೆ...
ಯಶಸ್ಸನ್ನು ಕೋರುತ್ತೇವೆ...

parwatisingari said...

photos and the write up is good, aadre, kannadadalli, hege barediri? nanna fonts yellelohoguthe.

Jayalaxmi said...

ನಿಮ್ಮ ಹಾರೈಕೆಯನ್ನು ರಾಮ್ ಸರ್ ಅವರಿಗೆ ತಲುಪಿಸುತ್ತೇನೆ ಪ್ರಕಾಶ್. ನಿಜವಾಗಿಯೂ ಈ ಚಿತ್ರ ಜನಪರ, ಮಕ್ಕಳಪರ ಕಾಳಜಿಯನ್ನು ಹೊಂದಿದಂತಹ ಚಿತ್ರ.

Jayalaxmi said...

ನಿಮ್ಮ ಮೆಚ್ಚುಗೆಗೆ ಧನ್ಯವಾದ ಪಾರ್ವತಿಯವರೆ.

Avinash Kamath said...

ಮೊಟ್ಟ ಮೊದಲು ’ಪುಟಾಣಿ ಪಾರ್ಟಿ’ಯ ಸಮಸ್ತ ತಂಡಕ್ಕೆ ಅಭಿನಂದನೆಗಳು.

ಪಿ. ಎನ್. ರಾಮಚಂದ್ರ ನಿಜಕ್ಕೂ ಒಬ್ಬ ಸಮರ್ಥ ನಿರ್ದೇಶಕರು. ಮಕ್ಕಳಿಂದ ನಟನೆಯನ್ನು extract ಮಾಡುವುದು ಸುಲಭದ ಕೆಲಸವೇನಲ್ಲ. ಆದರೆ ಒಮ್ಮೆ ಮಕ್ಕಳು ತಮ್ಮ inhibitions ಕಳೆದುಕೊಂಡು ನಟನೆಯನ್ನು ಪ್ರಾರಂಭಿಸಿದರೆ, ದೊಡ್ಡ ದೊಡ್ಡ ನಟರಿಗಿಂತ ಚೆನ್ನಾಗಿ ಅಭಿನಯಿಸುತ್ತಾರೆ. ಮಹಾನ್ ನಟ ಚಾರ್ಲಿ ಚಾಪ್ಲಿನ್, ಹಿಂದಿಯ ಮೇರು ನಟ ಮೆಹಮೂದ್ ನಂತಹವರೂ ಕೂಡ ’ಮಕ್ಕಳನ್ನು’ ಗಮನಿಸಿಯೇ ನಟನೆಯನ್ನು ಕಲಿತದ್ದನ್ನು ಒಪ್ಪಿಕೊಳ್ಳುತ್ತಾರೆ.

’ಪುಟಾಣಿ ಪಾರ್ಟಿ’ಯ ಕಥಾವಸ್ತುವನ್ನು CFSI ದ ವೆಬ್ ಸೈಟಿನಲ್ಲಿ ಓದಿದೆ. ಕುತೂಹಲಕರವಾಗಿದೆ. ’ಸುದ್ಧ’ ದಂತಹ ಒಂದು ಒಳ್ಳೆ ಸಿನೇಮಾ ನೀಡಿರುವ ರಾಮಚಂದ್ರ ಅವರು ಇನ್ನೊಮ್ಮೆ ಸಿಕ್ಸರ್ ಬಾರಿಸಲಿದ್ದಾರೆ ಎಂಬ ನಂಬಿಕೆ ಇದೆ.

ನಿಮ್ಮ ಬರವಣಿಗೆಯೂ ಸೊಗಸಾಗಿದೆ. ಚಿತ್ರೀಕರಣದ ವೇಳೆಯಲ್ಲಿ ನಿಮಗಾದ ವಿಶಿಷ್ಟ ಅನುಭವಗಳನ್ನು ಆದಷ್ಟು ಬೇಗ ಹಂಚಿಕೊಳ್ಳಿ.

ಪುಟಾಣಿ ಪಾರ್ಟಿಯ ತಂಡದೆಲ್ಲರಿಗೂ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಅಂದ ಹಾಗೆ ರಾಮಚಂದ್ರ ಅವರಿಗೆ ನಿಮ್ಮ ಹೆಸರನ್ನು ಸಜೆಸ್ಟ್ ಮಾಡಿದ್ದು, ಅವರಿಗೆ ನಿಮ್ಮ ದೂರವಾಣಿ ನಂಬರನ್ನು ಕೊಟ್ಟಿದ್ದು ನಾನೇ ಎಂಬುದನ್ನು ಕೊಂಚ ಗಮನಕ್ಕೆ ತಂದುಕೊಂಡು, ಆದಷ್ಟು ಬೇಗ ಒಂದು ಪಾರ್ಟಿ ಕೊಡುವಂಥವರಾಗಿರಿ :)

Jayalaxmi said...

ಹೌದು ಖಂಡಿತ ನಿಜ, ತಾವು ನನ್ನ ಹೆಸರನ್ನು ರಾಮ್ ಸರ್‍ಗೆ ಹೇಳದಿದ್ದಲ್ಲಿ ಇಂಥ ಒಬ್ಬ ಸಮರ್ಥ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶದಿಂದ ವಂಚಿತಳಾಗುತ್ತಿದ್ದೆ.ಪಾರ್ಟಿ ತಾನೆ? ಕೋಡೋಣ್ವಂತೆ ಅದಕ್ಕೇನು? ಹೇಳಿ ಯಾವಾಗ್ ಬರ್ತೀರಿ ಬೆಂಗಳೂರಿಗೆ?
ನೂರೆಂಟು ಯೋಚಿಸಿ ಬುದ್ದಿಜೀವಿಗಳಂತೆ ’ವರ್ತಿಸುವ’ ನಮಗೆ ಮಕ್ಕಳಂತೆ ಸಹಜ ಅಭಿವ್ಯಕ್ತಿ ಕಷ್ಟ. ಅದಕ್ಕಾಗಿಯೇ ಮಕ್ಕಳನ್ನು ಗಮನಿಸಿ ನಟನೆಯನ್ನು ಸುಧಾರಿಸಿಕೊಂಡಲ್ಲಿ ನಟನೆಯಲ್ಲಿ ಹೆಚ್ಚು ಸಹಜತೆ ತರಬಹುದು ಎನ್ನುವುದು. ಬಹುಶಃ ನೀವೂ ಇದೇ ಥೇಯರಿ ಅಳವಡಿಸಿಕೊಂಡಿದ್ದೀರಿ ನಿಮ್ಮ ಅಭಿನಯದಲ್ಲಿ ಅಲ್ಲವೆ? ಅದರಿಂದಾಗಿಯೇ ನೀವು ಅಂಥ ಉತ್ತಮ ನಟನಾಗಿರುವುದು ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಜಯಲಕ್ಷ್ಮಿ ಮೇಡಮ್,

ನನಗೂ ಆ ಸಿನಿಮಾ ನೋಡುವ ಆಸೆ. ನನಗೇ ಕಲಾತ್ಮಕ ಚಿತ್ರಗಳನ್ನು ನೋಡಲು ಇಷ್ಟ. ಸಿನಿಮಾ ಬಗ್ಗೆ ನೀವು ಹೇಳಿರುವ ವಿಚಾರವನ್ನು ಕೇಳಿದರೇ ನಾನು ನೋಡಬೇಕೆಂಬ ಕುತೂಹಲ ಹೆಚ್ಚಾಗುತ್ತಿದೆ..ಬಂದಾಗ ತಿಳಿಸಿ ಖಂಡಿತ ನೋಡುತ್ತೇನೆ...

Jayalaxmi said...

ಖಂಡಿತ ತಿಳಿಸುತ್ತೇನೆ ಶಿವು ಅವರೆ.

akshata said...

ಹಾಯ್, ಪುಟಾಣಿ ಪಾರ್ಟಿಯ ಬಗ್ಗೆ ಓದು ಬಹಳ ಸಂತೋಷವಾಯಿತು. ನಿಜವಾಗಿಯೂ ಮಕ್ಕಳಿಗೆ ಯಾವ ಕಾಂಶಿಯೆಸ್‌ನೆಸ್ಸೂ ಇರುವುದಿಲ್ಲ ರಿ, ಆದ್ದರಿಂದ ಅವರು ಅಷ್ಟು ನ್ಯಾಚುರಲ್ ಆಗಿ ಅಭಿನಯ ಮಾಡ್ತಾರೆ, ಸ್ವಲ್ಪ ದೊಡ್ಡವರಾದಾಗಲೇ ಕಾಂಶಿಯಸ್‌ನೆಸ್ ಬರುವುದು, ಆಗ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಆಮೆಲೆ ನಿಮ್ಮಂತಹ ಸಮರ್ಥ ಅಭಿನಯ ಬಲ್ಲ ವ್ಯಕ್ತಿ ಅವರೊಂದಿಗಿದ್ದಾಗ ಅವರಿಗ್ಯಾವ ಭಯ ಇದ್ದೀತು, ಅಲ್ಲವೆ? ಚಲನಚಿತ್ರ ಯಾವಾಗ ಬಿಡುಗಡೆಯಾಗುತ್ತಿದೆ ತಿಳಿಸಿ.

Jayalaxmi said...

ನಿಜ ಅಕ್ಷತಾ, ಮಕ್ಕಳು ನಮ್ಮಗಳ ಹಾಗೆ ಇಲ್ಲದ್ದೆಲ್ಲ ತಲೇಲಿ ತುಂಬಿಕೊಂಡು ಅಭಿನಯಿಸೋದಿಲ್ಲ,ಅದಕ್ಕೇ ಅವರು ಚೆನ್ನಾಗಿ ಅಭಿನಯಿಸಲು ಸಾಧ್ಯವಾಗುತ್ತದೇನೋ.. ನಿಮ್ಮ ಪ್ರೀತಿ ದೊಡ್ಡದು ಅಕ್ಷತಾ. ಖಂಡಿತ ಚಿತ್ರ ಬಿಡುಗಡೆಯಾಗುತ್ತಲೇ ನಿಮಗೆ ತಿಳಿಸುವೆ.

Anonymous said...

nija jayakkaa...

ಬುದ್ದಿಜೀವಿಗಳಂತೆ ’ವರ್ತಿಸುವ’ ನಮಗೆ ಮಕ್ಕಳಂತೆ ಸಹಜ ಅಭಿವ್ಯಕ್ತಿ ಕಷ್ಟ.

love,
shama