ಪಾಟೀಲರ ಮನೆಯಲ್ಲಿ ಸಂಗೀತದ ಅಮೃತಧಾರೆ - ವಿಭಿನ್ನ ಬಣ್ಣ, ವಿಭಿನ್ನ ಶೈಲಿ
by Ramesh Gururajarao on Sunday, December 30, 2012 at 1:44pm ·
ಎಲ್ಲಾ ಕಡೆಗೂ ಕ್ಯಾಲೆಂಡರ್ ವರ್ಷದ ಕೊನೆಯ ದಿನಗಳು. ಆದರೆ ಸಂಗೀತಕ್ಕೆ, ಅದರ ಮಾಧುರ್ಯಕ್ಕೆ ಯಾವ ಕೊನೆಯೂ ಇಲ್ಲ, ಯಾವ ಮೊದಲೂ ಇಲ್ಲ. 29 ಡಿಸೆಂಬರ್ 2012, ಆ ಮಾಧುರ್ಯವನ್ನು ಸವಿಯುವ ಅವಕಾಶ ಮಾಡಿಕೊಟ್ಟಿದ್ದು ಸ್ನೇಹಿತರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಪತಿ ಪಾಟೀಲರು. ಕಳೆದ ವರ್ಷದಂತೆ ಈ ವರ್ಷ ಕೂಡ ಆತ್ಮೀಯ ಆಹ್ವಾನ ಇತ್ತು.
ಸ್ವಲ್ಪ ಸ್ವಲ್ಪ ತುಂತುರು ತುಂತುರು ಮಳೆ ಆರಂಭವಾಗಿತ್ತು, ಆದರೆ ನಿಂತು ಹೋಯ್ತು. ಆದರೇನು, ನಾನು ಜಯಲಕ್ಷ್ಮಿ ಪಾಟೀಲ್ ಮನೆಯೊಳಗೆ ಕಾಲಿಡುವಷ್ಟರಲ್ಲಿ ಆಗಲೇ ಸಂಗೀತ ಧಾರೆ ಹರಿಯುತ್ತಿತ್ತು.
ನಾನು ಬರುವ ಮುಂಚೆ ಈ ಸಂಜೆಯನ್ನು ದೆಹಲಿಯಲ್ಲಿ ಹತ್ಯೆಗೊಳಗಾದ ಯುವತಿಗೆ ಸಮರ್ಪಿಸಿದ್ದು, ಇದಕ್ಕಾಗಿ ಗಿರಿ ದೊಡ್ಡೇರಿ ಶ್ರೀ ರಾಗ ನುಡಿಸಿ ಆ ಜೀವಕ್ಕೆ ಸಮರ್ಪಿಸಿದ್ದರು.
ಗಿರಿ ದೊಡ್ಡೇರಿ ತಮ್ಮ ಬಾನ್ಸುರಿಯಿಂದ (ಬಾನ್ಸ್ ಅಂದ್ರೆ ಬಿದಿರು. ಅದರಿಂದ ಸ್ವರ ಹೊರಡಿಸಬಹುದಾದ್ದರಿಂದ ಅದು ಬಾಂಸ್ ಸುರಿ, ಬಾನ್ಸುರಿ) ಸಾಂಪ್ರದಾಯಿಕವಾಗಿ ಯಮನ್ ರಾಗವನ್ನು ಅಲ್ಲಿದ್ದವರಿಗೆ ಉಣಬಡಿಸಿ, ರಾಗಮಾಲಿಕೆಯತ್ತ ಗೆಳೆಯರನ್ನು ವಾಲಿಸಿಬಿಟ್ಟಿದ್ದರು. ನನ್ನ ಕಿವಿಗೆ ಬಿದ್ದದ್ದು ಮೊದಲಿಗೆ ದರ್ಬಾರಿ ರಾಗ. ಇವತ್ತಿಗೂ Grand old man ಅಂತಲೇ ಕರೆಸಿಕೊಳ್ಳುವ ದರ್ಬಾರಿ ರಾಗ ತುಂಬಾ ಗಂಭೀರವಾದ ರಾಗ. ಈ ರಾಗವನ್ನು, ಕರ್ನಾಟಕ ಸಂಗೀತದಿಂದ ಹಿಂದೂಸ್ತಾನಿ ಸಂಗೀತ ಪದ್ಧತಿಗೆ ತಂದಿದ್ದು ತಾನ್ಸೇನ್ ಎಂಬ ಐತಿಹ್ಯ ಕೂಡ ಉಂಟು. ರಾಜನ ದರ್ಬಾರಿನಲ್ಲಿ ಪ್ರಸ್ತುತ ಪಡಿಸುವ ಆ ರಾಗ ಸಹಜವಾಗಿ ಗಂಭೀರವೇ. ಗಿರಿ ದೊಡ್ಡೇರಿ, ದರ್ಬಾರಿಯಲ್ಲಿ ಸ್ವರದಿಂದ ಸ್ವರಕ್ಕೆ ನಡೆಸುತ್ತಿದ್ದ ಚಲನ್ ಮತ್ತು ಪಕಡ್ ಬಹಳ ಪರಿಣಾಮಕಾರಿಯಾಗಿತ್ತು.
ಅಲ್ಲಿಂದ ಮುಂದೆ ಗಿರಿಯವರ ಪತ್ನಿ ಆಶಾ ದೊಡ್ಡೇರಿ ಭಾವಗೀತೆಗಳನ್ನು ಪ್ರಾರಂಭಿಸಿದರು. ಅವರ ಹಾಡುಗಳನ್ನು ಕೇಳುತ್ತಿದ್ದಾಗ ಫಟ್ಟನೆ ನೆನಪಾದದ್ದು ನಾನು ಚಿಕ್ಕವನಿದ್ದಾಗ ಆಕಾಶವಾಣಿಯ ಮುಖಾಂತರ ಕೇಳುತ್ತಿದ್ದ ಭಾವಗೀತೆಗಳು. ಯಾವುದೇ ಅಬ್ಬರವಿಲ್ಲದೆ, ಬರೀ ಒಂದು ಜೋಡಿ ತಬಲಾ ಮತ್ತು ಒಂದು ಹಾರ್ಮೋನಿಯಂ ಸಾಥಿಯಾಗಿ ಬಂಡ ಹಾಡುಗಳು ಕಿವಿಗೆ ಹಿತವಾಗಿದ್ದವು.
ಮೊದಲು ಅವರು ಹಾಡಿದ್ದು ಎದೆಯ ಬಾಂದಳದಲ್ಲಿ ಎಂದು ಆರಂಭವಾಗುವ ಗೀತೆ. ಮೊದಲ ಗೀತೆಯಾದ್ದರಿಂದ, ಸಾಹಿತ್ಯಿಕವಾಗಿ, ಸಾಂಪ್ರದಾಯಿಕವಾಗಿ ಆಯ್ಕೆ ಸರಿಯಾಗಿತ್ತು. ಯಮನ್ ರಾಗದ ಈ ಗೀತೆ ಎಲ್ಲ ಆಶಾವಾದಗಳ ಒಟ್ಟು ಸಂಗಮದಂತೆ ಇತ್ತು.
ನಂತರ ಬಂದಿದ್ದು ವೆಂಕಟೇಶಮೂರ್ತಿಗಳ ರಚನೆ "ಬಿದಿರ ಕೊಳಲಿನ ಚತುರ ನಿನ್ನ ಅಧರ ಸ್ಪರ್ಶ ನೀಡೆಯ", ಗಿರಿ ನೀಡಿದ ವಿವರಣೆಯಂತೆ ಇದು "ರಾಧೆಯ ರೋಧನ". ಇದರಲ್ಲಿ ನನಗೆ ತುಂಬಾ ಆಪ್ತವಾದ ಸಾಲು "ಸವತಿ ಬಿದಿರೆ ನಮಿಪೆ ಚದುರೆ". ರಾಧೆ, ಹೇಗಾದರೂ ಮಾಡಿ ಕೃಷ್ಣನನ್ನು ಬಿದಿರಿನ ಕೊಳಲಿಂದ ತನ್ನೆಡೆಗೆ ಸೆಳೆದುಕೊಳ್ಳುವ ಎಲ್ಲಾ ಪ್ರಯತ್ನದ ಒಟ್ಟು ರೂಪ ಈ ಗೀತೆ. ಎಲ್ಲೋ ಪು ತಿ ನರಸಿಂಹಾಚಾರ್ಯರ ರಚನೆಗಳ ನೆರಳು ಕಂಡಿತ್ತು. ಆಶಾ ದೊಡ್ಡೇರಿ ಪ್ರಸ್ತುತ ಪಡಿಸಿದ ರೀತಿ ಕೂಡ ಆಪ್ತವಾಗಿತ್ತು.
ಮುಂದಿನ ಗೀತೆ ಡಿ ವಿ ಜಿ ಯವರ ಅಂತಃಪುರ ಗೀತೆಗಳಲ್ಲಿ ಹೆಚ್ಚು ಜನಪ್ರಿಯವಾದ "ಏನೀ ಮಹಾನಂದವೇ ಓ ಭಾಮಿನಿ, ಏನೀ ಸಂಭ್ರಮದಂದವೇ". ಮೈಸೂರು ಅನಂತಸ್ವಾಮಿಗಳ ಸಂಗೀತದಲ್ಲಿ ಪ್ರಸಿದ್ಧವಾದ ಈ ಗೀತೆ ಸೊಗಸಾಗಿ ಪ್ರಸ್ತುತಿಯಾಯಿತು. ಈ ಹಾಡಿನಲ್ಲಿ ಬರುವ "ಕುಕ್ಕುತೆ ಚರಣವ, ಕುಲುಕುತೆ ಕಾಯವ, ಸೊಕ್ಕಿನ ಕುಣಿತವ....." ಸಾಲಿನಲ್ಲಿ ಕುಕ್ಕುತೆ ಮತ್ತು ಸೊಕ್ಕಿನ ಎಂಬ ಪದಗಳನ್ನು ಕೊಚ ಹೆಚ್ಚು ಒತ್ತಿ ಹಾಡಬೇಕಿತ್ತು. ಏಕೆಂದರೆ, ಆ ಪದಗಳ ಅರ್ಥ ಸ್ಪಷ್ಟವಾಗಿ ಹೊಮ್ಮಬೇಕಾದರೆ ಅಷ್ಟರ ಮಟ್ಟಿಗಿನ ಗಮನ ಅಗತ್ಯ. ನಾವೆಲ್ಲಾ ಕೇಳಿದ್ದ ರತ್ನಮಾಲ ಪ್ರಕಾಶ್ ಹಾಡಿದ ಗೀತೆಗಿಂತ ವಿಭಿನ್ನವೆನಿಸಿದ್ದು ಹಾಡಿನ ಕೊನೆಗೆ ಸ್ವರಗಳ ಗುಚ್ಚವನ್ನು ಸೇರಿಸಿದ್ದು. ಹಿತವಾಗಿತ್ತು.
ಮುಂದೆ ಬಂದಿದ್ದು ಭಾವದ ಲೋಕದಿ ದೇವರ ಮಾಡಿ ಎಂಬ ವಚನ. ಅಲ್ಲಮ ಪ್ರಭು ನಾಡಿನ ಪ್ರಸಿದ್ಧ ವಚನಕಾರರಲ್ಲಿ ತುಂಬಾ ದೊಡ್ಡ ಹೆಸರು. ಗುಹೇಶ್ವರ ಅಂಕಿತದಿಂದ, ಅಲ್ಲಮನಿಂದ ಹುಟ್ಟಿಬಂದ ವಚನಗಳು ತುಂಬಾ ಕುತೂಹಲಕಾರಿ ಮತ್ತು ಇವತ್ತಿಗೂ ಪ್ರಸ್ತುತ. ಸಾಹಿತ್ಯ ಸ್ಪಷ್ಟವಾಗಿತ್ತು. ರಾಗ ಸಂಯೋಜನೆ ಕೂಡ ಹಿತವಾಗಿತ್ತು.
ಇನ್ನು ಬಸಂತ್ ರಾಗದ "ಕೇತಕಿಯ ಬನಗಳಲಿ ಸಂಚರಿಸದಿರು...." ಕವನ ಹಾಡಿದ್ದು. ಗೀತೆಯ ಆರಂಭವೇ ನನಗೆ ಮನ್ನಾ ಡೇ ಮತ್ತು ಭೀಮಸೇನ ಜೋಶಿಗಳ "ಕೇತಕಿ ಗುಲಾಬ್ ಜೂಹಿ ಚಂಪಕ್ ಬನ್ ಫೂಲೇ" ಹಾಡನ್ನು ನೆನಪು ತಂದಿತ್ತು. ಬಹುಷಃ ಬಸಂತ್ ರಾಗ ಎರಡೂ ಹಾಡಿಗೆ ಬಳಸಿರುವುದು ಕಾರಣವೇನೋ. ಈ ಕವನದ "ಸರ್ಪಮಂದಿರವಂತೆ ಕಂಪಿನೊಡಲು" ತುಂಬಾ mystic ಆದ ಸಾಲು, ಈ ಸಾಲಿನ ಆಳಕ್ಕೆ ಇಳಿದಷ್ಟೂ ಕಣಜವೇ.
ಕುವೆಂಪುವನ್ನು ಮಲೆನಾಡಿನಿಂದ ಬೇರ್ಪಟ್ಟು ನೋಡುವುದು ಅಪರೂಪವೇ. ಈ ನಿಟ್ಟಿನಲ್ಲಿ ಮಲೆನಾಡ ವೈಭವವನ್ನ್ಜು ಆಶಾ ದೊಡ್ಡೇರಿ ತೆರೆದಿಟ್ಟಿದ್ದು ಕುವೆಂಪು ರಚಿಸಿದ ಸದ್ದಿರದ ಬಸುರೊಡೆಯ ಕವನದಿಂದ. ಈ ಕವನದಲ್ಲಿ ಹಸುವಿನ "ಅಂಬಾ" ಎಂಬ ಸದ್ದು ದನಗಾಹಿಯ ಕೊಳಲನಾದದೊಂದಿಗೆ ಬೆರೆತು ಹೊರಹೊಮ್ಮಲಿ ಎಂಬ ಕವಿಯ ಆಶಯ ತುಂಬಾ ಸುಂದರ. ಅದನ್ನು ಹಾಡಿನ ಮೂಲಕ ನಮ್ಮ ಮುಂದಿಟ್ಟಿದ್ದು ಚೆನ್ನಾಗಿತ್ತು.
ಒಟ್ಟಾರೆ, ಅಬ್ಬರದ ಸಂಗೀತವಿಲ್ಲದೆ ಹಿತವಾದ ಭಾವಗೀತೆಗಳನ್ನು ಕೇಳಿದ, ಆಕಾಶವಾಣಿಯ ನೆನಪನ್ನು ಮರಳಿಸಿದ ಅನುಭವ.
ಗಿರಿ ಮತ್ತು ಆಶಾ ಇಬ್ಬರಿಗೂ ತಬಲಾ ಸಾಥ್ ನೀಡಿದ ಕಲಾವಿದ ಹರ್ಷ ಕುಂದಗೋಳಮಠ. ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡಲು ಆರಂಭಿಸಿರುವ ಹರ್ಷ, ಏಕತಾನತೆಯನ್ನು ತಪ್ಪಿಸಲು ತಾಳದ ಪ್ರಪಂಚ ಸೃಷ್ಟಿ ಮಾಡಿ ನಮ್ಮ ಮುಂದಿಟ್ಟರು. 16 ಮಾತ್ರೆಗಳ ವಿಲಂಬಿತ್ ತೀನ್ ತಾಲ್. ಇದು ಹದಿನಾರು ಮಾತ್ರೆಗಳ ತಾಳವಾದರೂ, ಇದಕ್ಕೆ ತೀನ್ ತಾಲ್ ಎಂದು ಕರೆಯುವುದು, ಇದರಲ್ಲಿ 5, 9 ಮತ್ತು 16 ನೇ ಮಾತ್ರೆಗೆ ತಾಳ ಬೀಳುವುದರಿಂದ. ಆರಂಭದಲ್ಲಿ ತುಂಬಾ ಸರಳವೆನ್ನಿಸಿದರೂ, ಹೋಗುತ್ತಾ ಹೋಗುತ್ತಾ, ಕಠಿಣವಾಗಬಲ್ಲ ತಾಳ ಇದು. ಇದನ್ನು ಹರ್ಷ ನಡೆಸಿಕೊಂಡು ಹೋದ ರೀತಿ ಅದ್ಭುತವಾಗಿತ್ತು, ವಿಲಂಬಿತ್ ನಿಂದ ಆರಂಭವಾದ ಪ್ರಸ್ತುತಿ, ಮಧ್ಯ ಲಯದವರೆಗೂ ಅದ್ಭುತವಾದ ಬಂದಿಶ್ ಕಟ್ಟಿಕೊಟ್ಟಿತು. ನಮ್ಮ ಕುತೂಹಲ ಇನ್ನಷ್ಟು ಹೆಚ್ಚಿಸಲು ರೇಲಾ, ಚಕ್ರಧಾರ್ ಮಾದರಿಯ "ಘೋಡೆ ಕಿ ಚಾಲ್" ಅಂದರೆ ಕುದುರೆಯ ಓಟದ ಲಯವನ್ನು ತೀನ್ ತಾಲ್ ನಲ್ಲಿ ತಂದಿದ್ದು ವಿಭಿನ್ನ ಅನುಭವ ನೀಡಿತ್ತು.
ಇದಿಷ್ಟೆಲ್ಲಾ ಆದ ಮೇಲೆ ತೆರೆದಿದ್ದು, ಗಿರಿ ಅವರ ಬಾನ್ಸುರಿ ಪ್ರಪಂಚದಿಂದ ಸಿನೆಮಾ ಹಾಡುಗಳು. ಟ್ರಾಕ್ ಇಟ್ಟುಕೊಂಡು ಅದರ ಜೊತೆ ಅದ್ಭುತವಾದ ಸಿನೆಮಾ ಹಾಡುಗಳನ್ನು ನುಡಿಸುತ್ತಾ ಹೋದರು. ಈ ಹಾಡುಗಳಿಗೆ ಪರಿಚಯವೇ ಬೇಕಿರಲಿಲ್ಲ. ಹಾಗಾಗಿ ಅದು ತುಂಬಾ ಆತ್ಮೀಯವಾಗಿತ್ತು. ಇಳಯರಾಜ ಸಂಗೀತದ, ಗೀತಾ ಚಿತ್ರದ "ಜೊತೆಯಲಿ ಜೊತೆಜೊತೆಯಲಿ", ಜಿ ಕೆ ವೆಂಕಟೇಶ್ ಸಂಗೀತ ನೀಡಿದ, ಹುಲಿಯ ಹಾಲಿನ ಮೇವು ಚಿತ್ರದ "ಬೆಳದಿಂಗಳಾಗಿ ಬಾ...", ವಿಜಯಭಾಸ್ಕರ್ ಸಂಗೀತ ನಿರ್ದೇಶನದ, ತಾಂತ್ರಿಕವಾಗಿ ವಿನೂತನ ಶೈಲಿ (slow motion) ಅಳವಡಿಸಿದ ನಾಗರಹಾವು ಚಿತ್ರದ "ಬಾರೆ ಬಾರೆ ಚಂದದ ಚೆಲುವಿನ ತಾರೆ", ರಾಜನ್ ನಾಗೇಂದ್ರ ನಿರ್ದೇಶನದ "ಆಸೆಯ ಭಾವ" ಮತ್ತು ನ್ಯಾಯವೇ ದೇವರು ಚಿತ್ರದ "ಆಕಾಶವೇ ಬೀಳಲಿ ಮೇಲೆ", ರೆಹಮಾನ್ ಸಂಗೀತ ನಿರ್ದೇಶನದ, ಮಣಿರತ್ನಂ ಚಿತ್ರ ಬಾಂಬೆ ಹಾಡು "ತೂ ಹಿ ರೇ" (ತಮಿಳಿನಲ್ಲಿ "ಉಯಿರೇ ಉಯಿರೇ ) ಎಲ್ಲವೂ ವಾತಾವರಣಕ್ಕೆ ಇನ್ನಷ್ಟು ಬಣ್ಣ ತಂದಿತ್ತು.
ಈ ಸಂಗೀತ ಸಂಜೆಗೆ ತೆರೆ ಹಾಕಿದ್ದು ಗಿರಿ ದೊಡ್ಡೇರಿ ಪ್ರಸ್ತುತ ಪಡಿಸಿದ ಭೈರವಿ ರಾಗದ ರಚನೆ. ರಾತಿ 9:30 ಆದರೂ ಯಾರಿಗೂ ಎದ್ದು ಹೋಗುವ ಮನಸ್ಸಿರಲಿಲ್ಲ. ಸಂಗೀತದಲ್ಲಿ ಎಲ್ಲರೂ ಮುಳುಗಿದ್ದೆವು. ತೇಲುವ ಉದ್ದೇಶ ಯಾರಿಗೂ ಇರಲಿಲ್ಲ. :)
ಒಟ್ಟಾರೆ, ಸಂಗೀತದ ವಿವಿಧ ಬಣ್ಣಗಳು ಸಂಜೆಗೆ ಚಿತ್ತಾರ ಬರೆದಿದ್ದವು. ಎಲ್ಲರೂ ಹೊರಗೆ ಬರುವಷ್ಟರಲ್ಲಿ ಮನಸ್ಸು ಹಗುರವಾಗಿತ್ತು
ನಂತರ ಹಿತವಾದ ಗೆಳೆತನದ ಸಿಹಿ ತುಂಬಿದ್ದ ಭೋಜನ... ಪಾಟೀಲ್ ದಂಪತಿಗಳ ಆದರಕ್ಕೆ ಆತಿಥ್ಯಕ್ಕೆ ನಮೋನಮಃ... ಇಷ್ಟು ಪ್ರೀತಿ ವಿಶ್ವಾಸ ಗೆಳೆತನ ನಮ್ಮಲ್ಲಿ ಹೀಗೆಯೇ ಇರಲಿ ಎಂಬುದೇ ಎಲ್ಲರ ಆಸೆ.
-ರಮೇಶ್ ಗುರುರಾಜ್ ರಾವ್.
ಈ ಬರಹ ಅವಧಿಯಲ್ಲೂ ಪ್ರಕಟಗೊಂಡಿದೆ.
ರಮೇಶ್ ಗುರುರಾಜ್ ಅವರಿಗೆ ಮತ್ತು ಅವಧಿಗೆ ತುಂಬು ಕೃತಜ್ಞತೆಗಳು. :)
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
4 comments:
ವಿವರಣೆ ಓದಿ ನಮಗೂ ಖುಶಿಯಾಯ್ತು...ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಸುಭಾಷಯಗಳು..
ನಿಮಗೂ ಸಹ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಮಂಗಲಮಯವಾಗಲಿ, ಹರ್ಷದಾಯಕವಾಗಲಿ. ಸಂಗೀತ, ಸಾಹಿತ್ಯದ ಗುಂಗು ಈ ವರ್ಷದಲ್ಲೆಲ್ಲ ಹರಡಲಿ.
Thanks Dinakar. :) nimagoo hosa varshada shubhaashayagaLu.
kaka, nimma e aasheervaada yaavaagloo nam netti myaalirli. :) nimagoo hosa varShada shubhaashayagaLu.
Post a Comment