Monday, February 25, 2013

ಹೋರಾಟವೆಂದರೆ...


(ಈ ತಿಂಗಳ ‘ಸಿಹಿಗಾಳಿ’ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು).

ನನ್ನ ಮದುವೆಯಾದ ಹೊಸತು. ಅಂದರೆ ಈಗ ಇಪ್ಪತ್ತು ವರ್ಷದ ಹಿಂದಿನ ಮಾತು. ಪೂನಾದಲ್ಲಿದ್ವಿ. ಮನೆ ಎದುರಿಗೇ ಅಂದರೆ ಕೇವಲ ಅರ್ಧ ಕಿಲೋಮೀಟರಿಗೂ ಕಡಿಮೆ ಅಂತರದಲ್ಲಿ ಇವರು ಸಿವಿಲ್ ಇಂಜಿನೀಯರ್ ಆಗಿ ಕೆಲಸ ಮಾಡುವ ಜಾಗ. ಅವತ್ತೊಂದಿನ ನನ್ನ ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಎಂಟು ಗಂಟೆ. ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಊಟ ಮುಗಿಸಿ ಕೈತೊಳಿಯುತ್ತಿದ್ದರಷ್ಟೇ, ಆಗ ಸಮಯ ೯.೩೦ರ ಆಸುಪಾಸು, ಇವರ ಸೈಟಿನಿಂದ ಒಂದಿಷ್ಟು ಜನ ಓಡುತ್ತಾ ಬಂದು ಮನೆ ಬಾಗಿಲು ತಟ್ಟಿದರು. ಹೊರ ಹೋದ ಇವರು ಒಳಗೆ ಬಂದು ನಿಮಿಷಾರ್ಧದಲ್ಲಿ ಶರ್ಟ್ ಹಾಕ್ಕೊಂಡು ಲುಂಗಿ ಮೇಲೆಯೇ ಹೊರಟು ನಿಂತರು. ಬಾಗ್ಲು ಹಾಕ್ಕೊ, ಈಗ ಬಂದ್ಬಿಡ್ತೀನಿ ಎಂದಷ್ಟೇ ಹೇಳಿ ಹೋದರು. ವಿಷಯ ಏನು ಅಂತ ಗೊತ್ತಾಗದೆ ನನಗೆ ದಿಗಿಲಾಯ್ತು. ರಾತ್ರಿ ಬೇರೆ... ಹನ್ನೊಂದು ಮುಕ್ಕಾಲಿಗೆ ಮನೆಗೆ ಮರಳಿದ ನನ್ನ ಪತಿಯ ಮುಖ ಅಗತ್ಯಕ್ಕಿಂತ ಹೆಚ್ಚು ಗಡುಸಾಗಿತ್ತು. ಏನಾಯ್ತು? ಎಂದು ಕೇಳಿದೆ. ಏನಿಲ್ಲ ಎಂದು ವಿಷಯ ಮರೆ ಮಾಚಲು ನೋಡಿದರು. ನನಗೋ ಇವರ ವಿಷಯಕ್ಕೆ ಸಂಬಂಧಪಟ್ಟಂತೆ ಏನಾದರೂ ನಡೆದಿದೆಯಾ ಸೈಟಲ್ಲಿ ಅನ್ನುವ ಆತಂಕ. ಏನಾಯ್ತು ಎಂದು ಹೇಳಲು ಒತ್ತಾಯ ಮಾಡಿದೆ.  ಆಗ ಹೇಳಿದರು.
   ಸೈಟಿನಲ್ಲಿ ಗಾರೆ ಕೆಲಸ ಮಾಡುವ ಗಂಡಸೊಬ್ಬ ಕುಡಿದು ಬಂದು, ಅವರುಗಳು ಅಲ್ಲೇ ಸೈಟಲ್ಲೇ ವಾಸಿಸಲು ಹಾಕಿಕೊಂಡ ಝೋಪಡಿಗಳೆದುರು ತನ್ನ ಮಗಳ ಜೊತೆ ಆಟವಾಡುತ್ತಿದ್ದ ಪಕ್ಕದ ಝೋಪಡಿಯ ಮಗುವನ್ನು, ತನ್ನ  ಝೋಪಡಿಗೆ ಹೊತ್ತುಕೊಂಡು ಹೋಗಿ ಆ ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದಾನೆ. ನಡೆಯಲಾಗದೆ ತಡವರಿಸುತ್ತಾ, ಅಳುತ್ತಾ ಅವನ ಝೋಪಡಿಯಿಂದ ಹೊರಬಂದ ಮಗುವಿನ ಎರಡೂ ಕಾಲಗುಂಟ ರಕ್ತ ಸೋರುತ್ತಿದೆ!! ಅದನ್ನು ನೋಡಿದ ಅಲ್ಲಿಯ ಉಳಿದೆಲ್ಲ ಕಾರ್ಮಿಕರೂ ಒಟ್ಟಾಗಿ ಅವನನ್ನು ಹಿಡಿದು ನಾಲ್ಕು ಬಿಗಿದು, ಒಂದೆಡೆ ಕೂರಿಸಿ ಇವರನ್ನು ಕರೆಯಲು ಬಂದಿದ್ದರು. ಇದನ್ನು ಕೇಳಿ ತಣ್ಣಗಾದೆ ನಾನು! ಊಹಿಸಲೂ ಆಗದ ವಿಷಯ ನಾನಿರುವ ಜಾಗದಿಂದ ಸ್ವಲ್ಪ ದೂರದಲ್ಲೇ ನಡೆದಿತ್ತು! ಅವಡುಗಚ್ಚಿ ಕೇಳಿದೆ ಇವರನ್ನು, ನೀವು ಹೋಗಿ ಏನು ಮಾಡಿದ್ರಿ? ಪೋಲೀಸ್ ಕಂಪ್ಲೇಂಟ್ ಕೊಟ್ಟ್ರಿ ತಾನೆ?
ಇವ್ರು, ಆ ಮಗು ಅವಸ್ಥೆ ನನ್ನಿಂದ ನೋಡೋಕಾಗ್ಲಿಲ್ಲ, ಪಾಪ ಎಳೇ ಕಂದ... ತಾಯಿ ಮಗು ಇಬ್ರೂ ಒಂದೇ ಸಮ ಅಳ್ತಾ ಇದ್ರು, ಆ ಮಗು ಅಪ್ಪಾನೂ ಸಹ.  ತಲೆಕೆಟ್ಟು, ಆ ರಾಕ್ಷಸನನ್ನ ಕಂಬಕ್ಕೆ ಕಟ್ಟಿಸಿ, ಅಲ್ಲಿದ್ದ ಕಬ್ಬಿಣದ ಸಳಿಯಿಂದ ಸರೀ ಬಾರಿಸಿದೆ. ಬಡ್ಡಿಮಗಾ ಹೇಳ್ತಾನೆ, ಕುಡಿದಿದ್ರಿಂದ ಅವನಿಗೆ ತಾನೇನ್ ಮಾಡ್ತಿದೀನಿ ಅಂತ ಗೊತ್ತಾಗ್ಲಿಲ್ವಂತೆ, ಇನ್ನೊಮ್ಮೆ ಹಾಗೆ ಮಾಡೊಲ್ವಂತೆ, ಬಿಟ್‌ಬಿಡ್ಬೇಕಂತೆ!! ತನ್ನ ಮಗೂನೂ ಆ ಮಗು ಜೊತೆಗೆನೇ ಆಡ್ತಿತ್ತಲ್ಲ, ಅದನ್ನ ಮುಟ್ಟಬಾರ್ದು ಅಂತ ಹೇಗ್ ಗೊತ್ತಾಯ್ತವನಿಗೆ!? ಮನುಷ್ಯರಾ ಇವ್ರೆಲ್ಲ?! ಪ್ರಾಣಿಗಿಂತ ಕಡೆ. ಪೋಲೀಸರಿಗೆ ಫೋನ್ ಮಾಡಿ ಕರೆಸಿ, ಹೇಳಿದೆ, ಇವನನ್ನ ಸುಮ್ನೆ ಬಿಡಬೇಡಿ, ಸರೀ ಒದ್ದು ಬುದ್ದಿ ಕಲಿಸಿ ಅಂತ. ಎಳ್ಕೊಂಡು ಹೋದ್ರು. ನಾನು ಅಲ್ಲಿದ್ದ ಜನರ ಜೊತೆ ಮಗೂನ ಡಾಕ್ಟರ್ ಹತ್ರ ಕಳಿಸಿ ಮನೆಗೆ ಬಂದೆ ಅಂದರು.
  ಇದನ್ನ ಓದಿ ನಿಮ್ಮ ರಕ್ತ ಕುದೀತಿದೆಯಾ? ಇಲ್ಲ ಅಲ್ವಾ? ಇದನ್ನೊಂದು ಜಸ್ಟ್ ಸುದ್ದಿ ಅಥವಾ ವಿಷಯದ ಥರ ಓದಿದಿರಿ ಅಲ್ವಾ? ಯಾಕೆ ನಿಮಗೇನೂ ಅನಿಸ್ಲಿಲ್ಲ ಇದನ್ನ ಓದಿ?! ಏನು? ನಾನನ್ಕೊಂಡಿದ್ದು ಸುಳ್ಳು, ನಿಮ್ಮ ರಕ್ತ ಕುದೀತಿದೆ ಅಂದ್ರಾ? ಹಾಗಾದ್ರೆ ಇಂಥ ಎಷ್ಟೋ ಸುದ್ದಿಗಳನ್ನ ಈಗಾಗ್ಲೇ ಕೇಳಿಯೂ ಯಾಕೆ ಯಾರೂ ಯಾವ ಕ್ರಮಾನೂ ಕೈಗೊಳ್ತಿಲ್ಲ? ನನ್ನನ್ನೂ ಸೇರಿಸಿಯೇ ಈ ಮಾತು ಹೇಳ್ತಿದೀನಿ ನಾನು. ನಮ್ಮನೆ ಮಗೂಗೆ (ಅದು ಹೆಣ್ಣು/ಗಂಡು ಯಾವ ಮಗು ಬೇಕಾದ್ರೂ ಆಗಿರಲಿ), ಹೆಣ್ಣುಮಕ್ಕಳಿಗೆ ಅಥವಾ ನಮಗೆ ಇನ್ನೂ ಹೀಗಾಗಿಲ್ಲ, ಆದಾಗ ನೋಡ್ಕೊಂಡ್ರಾಯ್ತು ಅಂತಾನಾ...? ಹಾಗಲ್ವಾ? ಮತ್ತೆ ಹೇಗೆ..? ದಿನನಿತ್ಯ ಇಂಥ ಸುದ್ದಿಗಳನ್ನ ಪೇಪರಿನಲ್ಲಿ ಓದಿ, ಟೀವಿಲಿ ನೋಡಿ ಮನಸು ಜಿಡ್ಡುಗಟ್ಟಿ ಹೋಗಿದೆಯಾ? ಬೇರೆಯವರ ಸುದ್ದಿ ನಮಗೇಕೆ ಅನ್ನುವ ಮನುಷ್ಯ ಸಹಜ ಸ್ವಭಾವದ ಜೊತೆ ಜೊತೆಗೇ ಇಂಥದ್ದನ್ನ ತಡೆಗಟ್ಟಲು ಏನಾದ್ರೂ ಮಾಡಬೇಕು ಅಂತನಿಸಿದರೂ ಹೇಗೆ ಪರಿಹಾರ ಹುಡ್ಕೋದು ಅಂತ ಗೊತ್ತಗ್ತಿಲ್ಲ ಅಲ್ವಾ?
     ಪ್ರತೀ ಸಲ ಪತ್ರಿಕೆಗಳಲ್ಲಿ, ಟಿವಿಯಲ್ಲಿ ರೇಪಿನಂತಹ ಅಮಾನವೀಯ ಘಟನೆಗಳನ್ನು ಓದಿದಾಗ, ಕೇಳಿದಾಗ ನನ್ನ ರಕ್ತ ಕುದಿಯುತಿತ್ತು. ಆದರೆ ನಡೆದ ಘಟನೆಯ ಕುರಿತು ಏನೂ ಮಾಡಲಾಗದ ನನ್ನ ಅಸಹಾಯಕತೆಯಿಂದ ಅಷ್ಟೇ ಬೇಗ ಕುದಿಯನ್ನು ಕಳೆದುಕೊಳ್ಳುತ್ತಿತ್ತು ಸಹ! ಸುಮ್ಮನಾಗುತ್ತಿದ್ದೆ. ಮತ್ತೆ ಮತ್ತೆ ಸುದ್ದಿ ಓದುತ್ತಿದ್ದೆ, ಕೇಳುತ್ತಿದ್ದೆ ಕುದ್ದು ಕುದ್ದು ಮತ್ತೆ ತಣ್ಣಗಾಗುತ್ತಿದ್ದೆ. ವರ್ಷಾನುವರ್ಷ ಮಾಡಿದ್ದು ಇಷ್ಟೇ! ಈ ಕುದಿಯನ್ನು ಯಾರ ಹತ್ತಿರವಾದರೂ ಹೇಳಿಕೊಂಡಾಗ ಸಿಗುತ್ತಿದ್ದ ಪ್ರತಿಕ್ರಿಯೆ ಹೆಚ್ಚೂಕಡಿಮೆ ಒಂದೇ ಥರ, "ಏss ಸುಮ್ನಿರು, ನಾಟ್ಕ,ಶೂಟಿಂಗು ಅಂತ ಒಬ್ಳೇ ಓಡಾಡ್ತಿರ್ತೀಯ,ಅಂಥವರ್ನೆಲ್ಲ ಎದುರ್ ಹಾಕ್ಕೊಂಡ್ರೆ, ಅವ್ರುಗಳು ಸಮಯ ನೋಡ್ಕೊಂಡ್ ಏನಾದ್ರೂ ಹೆಚ್ಚುಕಡಿಮೆ ಮಾಡಿಬಿಟ್ರೆ ಗತಿ ಏನು!?" ಆ ಹೆಚ್ಚುಕಡಿಮೆ ಅನ್ನೋದು ಸೀದಾ ಸೀದಾ ಹೇಳಬೇಕು ಅಂದ್ರೆ ರೇಪ್ ಮತ್ತು ಮರ್ಡರ್! ಸರಿ, ಹಲ್ಲು ಕಚ್ಚಿಕೊಂಡು, ಬಾಯ್ ಮುಚ್ಕೊಂಡು... ಪತ್ರಿಕೆಯನ್ನು ಓದುವಾಗ ಕ್ರೈಮ್ ಕುರಿತು ಇರುವ ಪುಟ ಬಂದಾಗ ಅದನ್ನೋದುವ ಶಕ್ತಿ ಇಲ್ಲದೇ ಓದಬಾರದ ಪುಟ ಕಣ್ಣೆದುರಿಂದ ಸರಿದುಹೋದರೆ ಸಾಕು ಎಂಬಂತೆ ಮುಗುಚಿ ಮುಂದಿನ ಪುಟಕ್ಕೆ ಧಾವಿಸಿಬಿಡುವುದು! ಹೊರಗೆ ಹೋದಾಗ ಏನಾದರೂ ಹೊಲಸು ಕಣ್ಣೋಟ, ಹೊಲಸು ಮಾತುಗಳು ಎದುರಿಸಬೇಕಾಗಿ ಬಂದಾಗ, ಅದೆಲ್ಲ ನನ್ನ ಕಣ್ಣಿಗೆ ಕಿವಿಗೇ ಬಿದ್ದಿಲ್ಲವೇನೋ ಎಂಬಂತೆ ಇರುಸುಮುರಿಸಿನೊಡನೆಯೇ ಸರಸರ ಹೆಜ್ಜೆ ಹಾಕಿಯೋ ಓಡು ನಡಿಗೆಯಲ್ಲೋ ಅಲ್ಲಿಂದ ಸರಿದು ಹೋಗೋದು. ಥತ್ ನಮ್ಮ ಹೇಡಿತನಕ್ಕಿಷ್ಟು ಬೆಂಕಿ ಹಾಕ!!
 ಅದು ಹೇಡಿತನವಾ...? ಅಸಹಾಯಕತೆಯಾ...?      
ಯಾವ ತಪ್ಪೂ ಮಾಡದೆ, ಕಳ್ಳರಂತೆ ಹೆದರಿ ಹೆದರಿ ಬದುಕುವುದು ಉಸಿರುಗಟ್ಟಿಸುತ್ತದೆ. ಹೆಣ್ಣಿನ ವಿಷಯವಾಗಿ ಅದ್ಯಾಕೆ ಈ ಪರಿಯ ಅಸಹ್ಯ ತುಂಬಿಕೊಂಡಿದೆ ಜಗದಲ್ಲಿ? ಮನುಜರಾಗಿ ಹುಟ್ಟಿದ ಎಲ್ಲ ಗಂಡಸರಿಗೂ ಒಂದು ಕುಟುಂಬವಿರುತ್ತದೆ, ಪ್ರತೀ ಕುಟುಂಬದಲ್ಲೂ ಹೆಣ್ಣುಮಕ್ಕಳಿರುತ್ತಾರೆ. ಆದರೂ ಪರಸ್ತ್ರೀಯನ್ನು ಕಂಡೊಡನೆ ಯಾಕೆ ಪುರುಷನ ಮನಸು ಹಾಗಾಗುತ್ತದೆ? ನಾನಿಲ್ಲಿ ಎಲ್ಲ ಪುರುಷರೂ ಇಂಥ ಮನೋಭಾವದವರೇ ಎಂದು ಹೇಳುತ್ತಿಲ್ಲ. ಸಭ್ಯರು ತುಂಬಾ ಜನರಿದ್ದಾರೆ ಎನ್ನುವುದನ್ನು ಒತ್ತಿ ಹೇಳುತ್ತಾ, ಅವರನ್ನು ಹೊರತುಪಡಿಸಿ ಯಾರೆಲ್ಲ ಹೀಗೆ ಅಸಹ್ಯವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಮಾತ್ರ ಉದ್ದೇಶಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪುರುಷನ ಈ ಚಂಚಲತನಕ್ಕೆ ಆತ ರೇಪೇ ಮಾಡಬೇಕು ಅಂತೇನಿಲ್ಲ, ಒಂದು ಅಸಹ್ಯ ನೋಟ, ಒಂದು ಅಸಹ್ಯ ಮಾತು, ಒಂದು ಅಸಹ್ಯ ಸ್ಪರ್ಶ ಹೆಣ್ಣಿನೆಡೆಗಿರುವ ಅವನ ಮನಸ್ಥಿತಿಯನ್ನು ತೋರಿಸಿ ಕೊಡುತ್ತದೆ. ಹೇಣ್ಣು ಮಾನಸಿಕವಾಗಿ, ದೈಹಿಕವಾಗಿ ತನ್ನ ತಪ್ಪಿಲ್ಲದೇ ಹಿಂಸೆ ಅನುಭವಿಸುತ್ತಾಳೆ. ಗಂಡು ಜೊತೆ ಇದ್ದಾಗೆಲ್ಲ ತಾನು ಯಾವಾಗಲೂ ಎಚ್ಚರದಿಂದಿರಬೇಕೆನ್ನುವುದನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳುತ್ತಾಳೆ. ಅವನ ಈ ಸ್ವಭಾವಕ್ಕೆ ಹೇಸಿಕೊಳ್ಳುತ್ತಾಳೆ. ನಮ್ಮಂತೆಯೇ ಭೂಮಿಗೆ ಬಂದ ಈ ಗಂಡು ಎಂಬ ಇನ್ನೊಂದು ಮನುಜ ಪ್ರಬೇಧದ ಬಗ್ಗೆ ಹೀಗೆ ಹೆಣ್ಣುಗಳು ಅಸಹ್ಯಿಸಿಕೊಳ್ಳುವ ಅನಿವಾರ್ಯ ಯಾಕಾಗುತ್ತದೆ...? ಯಾಕಾಗಬೇಕು?!!
  ದೆಹಲಿ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರ, ಸಾಮೂಹಿಕ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಿದೆ . ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾಯಿಗಳು ಗುಂಪುಗೂಡಿ ಅಮಾಯಕ ಮಕ್ಕಳನ್ನು, ನಿಶ್ಯಕ್ತರನ್ನು ಕಚ್ಚಿ ಎಳೆದಾಡಿ ಕೊಂದುವಲ್ಲ ಹಾಗೆ! ದೆಹಲಿಯ ಪ್ರಕರಣದ ಸುದ್ದಿ ಗೊತ್ತಾದಾಗ, ವರ್ಷಾನುವರ್ಷ ನನ್ನಲ್ಲಿ ಹತ್ತಿಕೊಂಡ, ಆಕ್ರೋಶ ಅಸಾಯಕತೆಗೆಲ್ಲ ಮಂಗಳ ಹಾಡಿದೆ. ಫೇಸ್ ಬುಕ್ಕಿನ ಅಂತಃಪುರದ ಸಖಿಯರೊಡನೆ (ಅಂತಃಪುರ, ‘facebook' ಎಂಬ ಜಾಲತಾಣದಲ್ಲಿ ನಾನು ನಿರ್ಮಿಸಿದ ಮಹಿಳೆಯರ ಗುಂಪಿನ ಹೆಸರು) ಚರ್ಚಿಸಿದೆ. ಅವರೆಲ್ಲರ ಸಹಕಾರ, ಸಲಹೆ, ಸಹಯೋಗದೊಂದಿಗೆ ಒಂದಿಷ್ಟು ಯೋಜನೆಗಳು ರೂಪುಗೊಂಡಿವೆ. ಯೋಜನೆಗಳು ಬರೀ ಯೋಜನೆಗಳಾಗಿ ಉಳಿಯದೇ ಅವೆಲ್ಲನ್ನೂ ಕಾರ್ಯಗತಗೊಳಿಸತೊಡಗಿದ್ದೇವೆ. ನಾವು ಮಾತಾಡಿದ ತಕ್ಷಣ, ಹೀಗೆ ಬರೆದ ತಕ್ಷಣ ಅಥವಾ ಇನ್ಯಾವುದ್ಯಾವುದೋ ರೀತಿಯಲ್ಲಿ ಹೋರಾಡಿದ ತಕ್ಷಣ ಜಗತ್ತು ಬದಲಾಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ನಾವ್ಯಾರೂ ಇಲ್ಲ, ಆದರೆ ಹಾಂ ಹೌದು, ಜಗತ್ತು ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಆದರೆ ಟೈಮ್ ತೆಗೆದುಕೊಳ್ಳುತ್ತೆ. ಶತಶತಮಾನಗಳಿಂದ ಮಾನವರಲ್ಲಿ ಬೇರುಬಿಟ್ಟ ಕ್ರೌರ್ಯ, ನೀಚತನ, ಹೆದರಿಕೆ, ಅಸಹಾಯಕತೆ ಕಡಿಮೆಯಾಗಲು ಸಾಧ್ಯವಾದರೆ ಇಲ್ಲವಾಗಲು ಒಂದೆರಡು ತಲೆಮಾರುಗಳು ಸರಿದು ಹೋಗಬಹುದು. ಮಹಲು-ಗುಡಿಸಲು ಎನ್ನದೆ ಪ್ರತೀ ಮನೆಯಲ್ಲೂ ಇಂಥ ಹೇಯತನದ ವಿರುದ್ಧ ಹೋರಾಟವಾಗಬೇಕು. ಆದರೆ ಹೇಗೆ? ಇಲ್ಲಿ ಕೆಲವು ಉಪಾಯಗಳಿವೆ, ಅವುಗಳನ್ನು ಅನುಸರಿಸೋಣ. ಪ್ರತಿಯೊಬ್ಬರೂ ನಮ್ಮ ನಮ್ಮ ಮನೆಯ ಜನರನ್ನು ಸುರಕ್ಷಿತವಾಗಿಸಿಕೊಳ್ಳುವ ಮೂಲಕ ಇನ್ನೊಬ್ಬರ ಮನೆಯ ಜನರನ್ನೂ ಸುರಕ್ಷಿತಗೊಳಿಸೋಣ.

೧) ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಬೇರೊಬ್ಬರು ‘ಮುಟ್ಟಬಾರದ ಅಂಗಗಳ’ ಕುರಿತು ಅವರಿಗೆ ಅರ್ಥವಾಗುವ ಹಾಗೆ ಅರಿವು ಮೂಡಿಸುವುದು. ಮತ್ತು ಯಾರಾದರೂ ಹಾಗೆ ಮುಟ್ಟಿದಲ್ಲಿ ತಕ್ಷಣ ಜೋರಾಗಿ ಕೂಗಿಕೊಳ್ಳಲು ಹೇಳಿಕೊಡಬೇಕು, ತಪ್ಪದೇ ಅಪ್ಪ ಅಮ್ಮನ ಹತ್ತಿರ ಹೇಳುವುದು, ಜೊತೆಗೆ  ಅಂಥ ಹೊತ್ತಲ್ಲಿ ಹತ್ತಿರವಿರುವ ಯಾರಾದರೂ ತಮಗಿಂತ ಸ್ವಲ್ಪ ದೊಡ್ಡವರಾದರೂ ಸರಿ, ಅವರಲ್ಲಿ ಹೇಳುವಂತೆ ಮನವರಿಕೆ ಮಾಡಿಕೊಡುವುದು. ಆದರೆ ಎಚ್ಚರ, ನಿಮ್ಮ ವಿವರಣೆಯಿಂದ ಮಕ್ಕಳ ಮನಸು ಅನಾವಶ್ಯಕ ಕುತೂಹಲಕ್ಕೀಡಾಗದಂತೆ ನೋಡಿಕೊಳ್ಳುವುದೂ ಇಷ್ಟೇ ದೊಡ್ಡ ಜವಾಬ್ದಾರಿ. ಅದರ ಕಡೆಯೂ ಗಮನವಿರಲಿ.
೨) ಮಕ್ಕಳಿಗೆ ಹೆಣ್ಣುಗಂಡೆಂಬ ತಾರ್ಯತಮ್ಯವಿಲ್ಲದೇ ವ್ಯಕ್ತಿಯನ್ನು ಗೌರವದಿಂದ ಕಾಣಬೇಕೆನ್ನುವುದು ಮಾತಿನ ಮೂಲಕ, ನಿಮ್ಮ ನಡುವಳಿಕೆಯ ಮೂಲಕ ತೋರಿಸಿಕೊಡುತ್ತಾ, ಅವರು ನಿಮ್ಮನ್ನು ಅನುಸರಿಸುವಂತೆ ಮಾಡಿ.
೩) ಲೈಂಗಿಕತೆಯ ವಿಷಯವಾಗಿ ಹೆಣ್ಣು ಮಗುವಿನ ಬಗ್ಗೆ ಕಾಳಜಿ ತೋರಿಸುವಷ್ಟೇ, ಗಂಡು ಮಗುವಿನ ಬಗ್ಗೆಯೂ ಈ ಕಾಳಜಿ ಇರಬೇಕಾದುದು ಅವಶ್ಯಕ. ಗಂಡು ಬಸಿರಾಗುವುದಿಲ್ಲ, ಹೀಗಾಗಿ ಗಂಡುಮಗು ಸುರಕ್ಷಿತ ಎನ್ನುವ ಕಾರಣಕ್ಕಾಗಿಯೇ ಎಷ್ಟೋ ವಿಷಯಗಳ ಕುರಿತು ಅವರನ್ನು ಸಡಿಲು ಬಿಡುತ್ತೇವೆ. ಇದೇ ಕಾರಣವಾಗಿ ಗಂಡು ಮಗು ತನಗರಿವಿಲ್ಲಂದಂತೆ ಲೈಂಗಿಕ ವಿಷಯಗಳ ಕುರಿತು ಚಿಕ್ಕಂದಿನಿಂದಲೇ ಸಲ್ಲದ ಕುತೂಹಲ ಬೆಳೆಸಿಕೊಂಡಿರುತ್ತೆ. ಒಳ್ಳೆಯ ಪರಿಸರ, ಸ್ನೇಹಿತರು ಸಿಕ್ಕಲ್ಲಿ ಸಭ್ಯ ನಾಗರೀಕರಾಗುತ್ತಾರೆ. ಇಲ್ಲದಿದ್ದಲ್ಲಿ ಇನ್ನೊಬ್ಬರ ಬದುಕು ನಾಶವಾಗಲು ಕಾರಣರಾಗುತ್ತಾರೆ.
೪) ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ ಅದನ್ನು ಕೂಡಲೇ ಅಕ್ಕಪಕ್ಕದಲ್ಲಿರುವವರ ಗಮನಕ್ಕೆ ಬರುವಂತೆ ಮಾಡುವುದಕ್ಕೆ ಹಿಂಜರಿಯಬಾರದು ಎಂದು ಹೇಳಿಕೊಡಬೇಕು, ಜೊತೆಗೆ ತನ್ನ ಗಮನಕ್ಕೆ ಇಂಥ ವಿಷಯ ಬಂದಾಗ, ಕಿರಿಕಿರಿಗೊಳಗಾಗುತ್ತಿರುವ ವ್ಯಕ್ತಿಗೆ ಸಹಾಯ ಮಾಡಲು ಮುಂದಾಗಬೇಕು ಮತ್ತು ಅಲ್ಲಿರುವ ಇತರರನ್ನೂ ಅದರಲ್ಲಿ ಭಾಗಿಯಾಗಲು ವಿನಂತಿಸಬೇಕು ಎನ್ನುವುದನ್ನೂ ಸಹ. ಜೊತೆಗೆ ನಾವೂ ಇದನ್ನೆಲ್ಲ ಪಾಲಿಸಬೇಕು.

ಹೋರಾಟವೆಂದರೆ ಬರೀ ಕೂಗಿಕೊಳ್ಳುವುದಲ್ಲ, ಶಕ್ತಿ ಬಳಸಿ ಗುದ್ದಾಡುವುದಷ್ಟೇ ಅಲ್ಲ, ಹೋರಾಟವೆಂದರೆ ನಮ್ಮ ಮನೆಗಳಲ್ಲಿ ಅತ್ಯಾಚಾರಿಯೊಬ್ಬ ಹುಟ್ಟದಂತೆ ನೋಡಿಕೊಳ್ಳುವುದು, ನಮ್ಮ ಮನೆಯ ಮಕ್ಕಳು ಬಲಿಪಶುಗಳಾಗದಂತೆ ನೋಡಿಕೊಳ್ಳುವುದು.

                                                       -ಜಯಲಕ್ಷ್ಮೀ ಪಾಟೀಲ್.
         




18 comments:

sunaath said...

ನಿಮ್ಮ ಯೋಜನೆಗಳು ಸರಿಯಾಗಿವೆ. ಇವಲ್ಲದೆ, ಅತ್ಯಾಚಾರವು ನಮ್ಮ ಸಮಾಜದಲ್ಲಿ ಏಕೆ ಹೆಚ್ಚುತ್ತಿದೆ ಎನ್ನುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ. ಅವೆಲ್ಲವನ್ನು ಅಧ್ಯಯನ ಮಾಡಿ, preventive ಉಪಾಯಗಳನ್ನೂ ಸಹ ಯೋಚಿಬೇಕು.

ತೇಜಸ್ವಿನಿ ಹೆಗಡೆ said...

ಹೋರಾಟವೆಂದರೆ ಬರೀ ಕೂಗಿಕೊಳ್ಳುವುದಲ್ಲ, ಶಕ್ತಿ ಬಳಸಿ ಗುದ್ದಾಡುವುದಷ್ಟೇ ಅಲ್ಲ, ಹೋರಾಟವೆಂದರೆ ನಮ್ಮ ಮನೆಗಳಲ್ಲಿ ಅತ್ಯಾಚಾರಿಯೊಬ್ಬ ಹುಟ್ಟದಂತೆ ನೋಡಿಕೊಳ್ಳುವುದು, ನಮ್ಮ ಮನೆಯ ಮಕ್ಕಳು ಬಲಿಪಶುಗಳಾಗದಂತೆ ನೋಡಿಕೊಳ್ಳುವುದು. - 100% True! ಲೇಖನದ ಆಶಯ ತುಂಬಾ ಚೆನ್ನಾಗಿದೆ... ಸ್ಪಷ್ಟವಾಗಿದೆ.

ಮೌನ ವೀಣೆ said...

ಆಶಯ ಚೆನ್ನಾಗಿದೆ. ಈ ಧೂರ್ತತನಕ್ಕೆ ರೋಸಿ ಕೊನೆ ಎಂದೋ ಅನ್ನಿಸಿ ಬಿಟ್ಟಿದೆ.

Badarinath Palavalli said...

ತುಂಬಾ ಆಶಯಪೂರ್ಣ ಲೇಖನ.

ಜಯಪ್ರಕಾಶ್ ಇ said...

ಲೇಖನ ಬಹಳ ಚೆನ್ನಾಗಿದೆ..ಶೀರ್ಷಿಕೆ ಸೂಕ್ತವಾಗಿಲ್ಲ ಅನಿಸುತ್ತಿದೆ.

Jayalaxmi said...

ಸುನಾಥ್ ಕಾಕಾ, ನೀವು ಹೇಳೂದು ಖರೆ.

Jayalaxmi said...

ಥ್ಯಾಂಕ್ಸ್ ತೇಜು. :)

Jayalaxmi said...

ನಿಜ ವೀಣಾ.
ನಾವುಗಳು ಸುಮ್ಮನಿದ್ದಲ್ಲಿ ಆ ದೂರ್ತತನ ಕೊನೆಯಾಗದು.

Jayalaxmi said...

ಥ್ಯಾಂಕ್ಸ್ ಬದ್ರಿ. :)

Jayalaxmi said...

ಜೆಪಿ, ಆಗ ತೋಚಿದ್ದು ಅದೊಂದೆ. ಹೌದು ಶೀರ್ಷಿಕೆಯ ಬಗ್ಗೆ ಹೆಚ್ಚು ಯೋಚಿಸಲು ಹೋಗಿಲ್ಲ ಅನ್ನುವುದೂ ಸತ್ಯ.

Srikanth Manjunath said...

ಬರೆದ ಲೇಖನ ಇನ್ನೂ ಹೇಳರಾದಷ್ಟು ಭಾವಗಳನ್ನು ಹೊರಸೂಸುತ್ತಿದೆ. ಕೆಟ್ಟದನ್ನು ನೋಡಿದಾಗ ಬರಿ ಕೆಟ್ಟದ್ದೇ ಕಾಣುತ್ತದೆ ಎನ್ನುವುದಕ್ಕೆ ದೆಹಲಿ ಘಟನೆಯ ನಂತರ ದಿನ ಪತ್ರಿಕೆಗಳಲ್ಲಿ , ವಾಹಿನಿಗಳಲ್ಲಿ ಬರಿ ಅದೇ ರೀತಿಯ ಘಟನೆಯ ಬಗ್ಗೆ ಹೇಳುತ್ತಾರೆ. ಇದನ್ನು ಹೇಗೆ ಕಡಿಮೆ ಮಾಡಬಹುದು ಇಲ್ಲವೇ ಹೇಗೆ ಒಂದು ಸುಸಂಸ್ಕೃತ ಸಮಾಜವನ್ನು ಹುಟ್ಟುಹಾಕಲು ನಮ್ಮ ಮನೆಯಿಂದಲೇ ಶುರು ಮಾಡುವ ಕೆಲಸಗಳನ್ನು ಹೇಳುವುದಿಲ್ಲ. ನಿಮ್ಮ ಲೇಖನ ಕಣ್ಣು ತೆರೆಸೆವುದೇ ಈ ವಿಭಾಗದಲ್ಲಿ ಏನು ಮಾಡಿದರೆ ಮನದಲ್ಲಿ -ಮನೆಯಲ್ಲಿ ನಡೆಯುವ ಅನಾಹುತಗಳನ್ನೂ ತಪ್ಪಿಸಬಹುದು ಎನ್ನುವುದನ್ನು ಹೇಳಿದ್ದೀರ.
ಸುಂದರ ಲೇಖನ ಇಷ್ಟವಾಯಿತು.

Jayalaxmi said...

ನನ್ನಿ ಶ್ರೀಕಾಂತ್. ಈ ಲೇಖನ ಸಾರ್ಥಕವಾಗುವುದು, ಇದರಲ್ಲಿನ ಮಾತುಗಳನ್ನು ಮನೆ ಮನೆಯಲ್ಲೂ ಅಳವಡಿಕೆಯಾದಾಗ. ಅಲ್ಲವೇ?

ಸಂಧ್ಯಾ ಶ್ರೀಧರ್ ಭಟ್ said...


ಹೋರಾಟವೆಂದರೆ ಬರೀ ಕೂಗಿಕೊಳ್ಳುವುದಲ್ಲ, ಶಕ್ತಿ ಬಳಸಿ ಗುದ್ದಾಡುವುದಷ್ಟೇ ಅಲ್ಲ, ಹೋರಾಟವೆಂದರೆ ನಮ್ಮ ಮನೆಗಳಲ್ಲಿ ಅತ್ಯಾಚಾರಿಯೊಬ್ಬ ಹುಟ್ಟದಂತೆ ನೋಡಿಕೊಳ್ಳುವುದು, ನಮ್ಮ ಮನೆಯ ಮಕ್ಕಳು ಬಲಿಪಶುಗಳಾಗದಂತೆ ನೋಡಿಕೊಳ್ಳುವುದು.
loved this lines..
Hats off to you madam... Arthapoorna lekhana... alvadisikollale bekaaddu...

Jayalaxmi said...

ashTu maaDibiTTalli nanna lEkhana saartaka Sandhya, nanni. :)

akshata said...

ಲೇಖನ ಅದ್ಭುತವಾಗಿದೆ. ನಿಮ್ಮ ವಿಚಾರಗಳನ್ನು ಒಪ್ಪುತ್ತೇನೆ. ಪ್ರತಿಸಲವೂ ಎಲ್ಲೆಂದರಲ್ಲಿ ಹೆಣ್ಣೊಬ್ಬಳ ಮೇಲೆ ಅತ್ಯಾಚಾರವಾದಾಗ ಅನೇಕ ಹುಡುಗ ಹುಡುಗಿಯರು ರಸ್ತೆಗಿಳಿದು ಆ ಕೃತ್ಯವನ್ನು ವಿರೋಧಿಸುತ್ತಾರೆ. ನೀವು ಹೇಳಿದಂತೆ ಅತ್ಯಾಚಾರಿಗಳು ನಮ್ಮ ಮನೆಯಲ್ಲೇ ಬೆಳೆಯದಂತೆ ನೋಡಿಕೊಂಡರೆ ಮೋರ್ಚಾಗಳನ್ನು ತೆಗೆದು ಹೇಯ ಕೃತ್ಯಗಳನ್ನು ವಿರೋಧಿಸಲು ರಸ್ತೆಗಿಳಿಯುವ ಅಗತ್ಯವಿಲ್ಲ. ಹೆಣ್ಣು ಗಂಡು ಅನ್ನುವ ಭೇದಭಾವವಿಲ್ಲದೆ ಇಬ್ಬರನ್ನೂ ಅಷ್ಟೇ ಸೂಕ್ಷಮವಾಗಿ ಬೆಳೆಸಿದರೆ, ಇಬ್ಬರ ಜವಾಬ್ದಾರಿಯನ್ನೂ ಅವರಿಗೆ ಸಕಾಲದಲ್ಲಿ ತಿಳಿಸಿ ಹೇಳಿದರೆ ಇಂತಹ ಕೃತ್ಯಗಳು ಕಡಿಮೆಯಾದವೋ ಏನೋ?

March 14, 2013 at 3:04 PM
Delete

Jayalaxmi said...

ನಿಜ ಅಕ್ಷತಾ, ಅಪ್ಪ ಅಮ್ಮ ಮಕ್ಕಳನ್ನು ಬೆಳೆಸುವುದೆಂದರೆ ಬರೀ ಊಟ, ಬಟ್ಟೆ, ಖರ್ಚು ವೆಚ್ಚ, ಮುದ್ದು ಮಾಡಿದರಷ್ಟೇ ಸಾಲದು,ಸುತ್ತಲ ಪ್ರಪಂಚವನ್ನೂ ಪರಿಚಯಿಸಬೇಕು, ಅವರ ಜವಾಬ್ದಾರಿಗಳ ಅರಿವನ್ನ ಅವರಲ್ಲಿ ಮೂಡಿಸಬೇಕು.
ಪ್ರತಿಕ್ರಿಯೆಗೆ ನನ್ನಿ. :)

ಮನಸು said...

ಹೋರಾಟ ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕು.... ನಿಜ ನಿಮ್ಮ ಆಶಯದಂತೆ ಎಲ್ಲರೂ ನಮ್ಮ ಸುತ್ತಮುತ್ತಲಿನಲ್ಲಿ ಬದಲಾವಣೆ ತಂದರೆ ಖಂಡಿತಾ ಒಂದು ಒಳ್ಳೆಯ ಸಮಾಜವನ್ನು ಸೃಷ್ಟಿಸಬಹುದು

Unknown said...

ನಿಜಾ ಮೆಡಂ...
ಹೇಣ್ಣನ್ನು ಗೌರವಿಸದ ಈ ಸಮಾಜದ ಕಡು ಖಟೋರ ಕೃರಿ ರಾಕ್ಷಸರ ವಿರುದ್ದ ಕಠಿಣ ಕ್ರಮಗಳು ಕೃರ ಶಿಕ್ಷೆಗಳು ಇಲ್ಲದ ಕಾರಣ ಹಿಗೆಲ್ಲ ಆಗುತ್ತಿದೆ ಅಂತ ನನ್ನ ಅನಿಸಿಕೆ...
ಮಾನವರಾಗಿ ಹುಟ್ಟಿದ ಈ ಹೆಯಕೃತ್ಯ ಏಸಗುವ ಕೃರವ್ಯಕ್ತಿಗಳಿಗೆ ಮಾನವರಾಗಿ ಸಹಜ ಸ್ತಿತಿಗೆ ಬರಬೆಕಾದರೆ ಇದಕ್ಕೆ ಘೋರ ಶಿಕ್ಷೆ ಯಾಗಲೆ ಬೇಕು...

~ಕನ್ನಡಿಗ ಪ್ರವೀಣ