Tuesday, April 29, 2014

ಕೇಳವ್ವ ಕೋಲು ಕೋಲೆ...

ಹುಟ್ಟಿದ ದಿನದಂದು
ಚುಕ್ಕಿ ಚಂದ್ರಮರು ಬಂದು
ಚಿತ್ತಾರ ಬಿಡಿಸೂತ ಮುಗಿಲಿನಲಿ
ಹರಸ್ಯಾರು ಕೇಡಿಲ್ಲದವಗೆ
ಕೇಳವ್ವಾ ಕೋಲು ಕೋಲೆ

ಕರಿಯಾನೆಗೆ ಹೆದರಿ 
ದೊಡ್ಡ ದನಿಗೆ ಹೆದರಿ 
ಮೂಡಿ ಮರೆಯಾಗೂವ 
ಚಾಬೂಕಿಗೆ ಹೆದರಿ 
ಅವ್ವನ ಉಡಿಯೊಳಗೆ 
ಅಡಗಿಕೊಳ್ಳುವ ಪುಟ್ಟ 
ಪೋರನಿವನ್ಯಾರೆ 
ಹೇಳವ್ವಾ ಕೋಲು ಕೋಲೆ

ರನ್ನs ಕಸಿಯಂಗಿ 
ಚಿನ್ನs ರುಂಬಾಲು 
ಮಾಣಿಕ್ಯದ ತಿಲಕವ 
ಧರಿಸಿ ಮೆರೆಯೂತ ಬಂದ 
ದೊರೆಯೀವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನೀಲಿಯರಮನೆಯಿಂದ 
ಮೇಲೆಬಂದವನ್ಯಾರೆ 
ಕೆಂಪುಕೇಸರಿ ಅಂಗಿ 
ತೊಟ್ಟ ಫಿರಂಗಿ 
ಚುರುಕು ನಗೆಯ ಚೋರ 
ಚಲುವನಿವನ್ಯಾರೆ 
ಹೇಳವ್ವಾ ಕೋಲು ಕೋಲೆ 

ನಗುಮುಖದ ಚೆಲುವ 
ಮೂಲೋಕ ಅಲೆವ 
ಒಂದೊಂದೂ ಲೋಕದಲೂ 
ಬಣ್ಣ ಬದಲಿಸುವ 
ಆಟದವ ಇವನ್ಯಾರೆ 
ಹೇಳವ್ವಾ ಕೋಲು ಕೋಲೆ 

ಹತ್ತೂರು ಕರೆದರೂ 
ಓಗೊಡದ ಹಮ್ಮೀರ 
ನಾ ಬಂದು 'ಬಂಗಾರ
ಎಂದು ಕರೆದರೂ ಸಾಕು 
ಎದ್ದು ನಗುವ ಮಾರ 
ಹರಡ್ಯಾನೆ ಹೂನಗುವ 
ಕೇಳವ್ವಾ ಕೋಲು ಕೋಲೆ

4 comments:

sunaath said...

ಕೋಲಾಟವೇ ಕಣ್ಮರೆಯಾದ ಸಂದರ್ಭದಲ್ಲಿ, ನೀವೇ ಕೋಲಾಟದ ಹಾಡು ರಚಿಸಿ, ನನ್ನ ಮನಸ್ಸಿಗೆ ಸಂತೃಪ್ತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

Badarinath Palavalli said...

ನಿಮ್ಮ ಈ ಗೀತೆ ಕೇಳಿ ನಮ್ಮೂರ ಕೋಲಾಟದ ಪದಗಳ ಮೆಮಪು ಗರಿಗೆದರಿತು.

ಹಾಗೇಯೇ, ನಾನು ಅಮ್ಮನ ಸೆರಗಿನೊಳಗಿ ಬಚ್ಚಿಟ್ಟಿಕೊಳ್ಲೂತ್ತಿದ್ದ ನೆನಪೂ ಸಹ.

Jayalaxmi said...

ನಿಮ್ಮ ಅಭಿಪ್ರಾಯ ನನಗೆ ಸದಾ ಮಾರ್ಗದರ್ಶಿ ಮತ್ತು ಪ್ರೋತ್ಸಾಹ. :)ಧನ್ಯವಾದಗಳು ಕಾಕಾ. :)

Jayalaxmi said...

ಬಹುಶಃ ಬಹುತೇಕರ ಬಾಲ್ಯ ಒಂದೇ ರೀತಿಯೇನೋ ಅಲ್ವಾ? ಆ ಸೂರ್ಯನೂ ಇದಕೆ ಹೊರತಲ್ಲ! :) ಧನ್ಯವಾದ ಬದ್ರಿ. :)